samachara
www.samachara.com
‘ಗ್ರಾಮ ಸ್ವರಾಜ್ಯ’ ಎಂಬ ಗಾಂಧೀಜಿ ಕನಸು ನನಸಾಗಲು ಇನ್ನೆಷ್ಟು ವರ್ಷ ಬೇಕು?
COVER STORY

‘ಗ್ರಾಮ ಸ್ವರಾಜ್ಯ’ ಎಂಬ ಗಾಂಧೀಜಿ ಕನಸು ನನಸಾಗಲು ಇನ್ನೆಷ್ಟು ವರ್ಷ ಬೇಕು?

ಗ್ರಾಮಗಳ ದೇಶ ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಎಂಬುದು ಇನ್ನೂ ಸಂಪೂರ್ಣವಾಗಿ ಸಾಧ್ಯವಾಗಿಲ್ಲ. ಹಳ್ಳಿಗಳಲ್ಲಿ ಸುಸ್ಥಿರ ಉತ್ಪಾದಕತೆಗೆ ಸರಕಾರಗಳು ಮನಸ್ಸು ಮಾಡುತ್ತಿಲ್ಲ.

ಭಾರತಕ್ಕೆ ಸ್ವಾತಂತ್ರ್ಯ ದೊರೆತು 71 ವರ್ಷಗಳು ತುಂಬುವ ಅಂಚಿನ ದಿನವಿದು. ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದರೂ ಭಾರತದಲ್ಲಿ ಗ್ರಾಮೀಣಾಭಿವೃದ್ಧಿ ಎಂಬ ಪರಿಕಲ್ಪನೆ ಪೂರ್ಣ ಪ್ರಮಾಣದಲ್ಲಿ ತನ್ನ ಆಶಯಗಳನ್ನು ಸಾಕಾರಗೊಳಿಸಿಲ್ಲ. ದೇಶದ ಬಹುತೇಕ ಹಳ್ಳಿಗಳ ಸ್ಥಿತಿ ಇಂದಿಗೂ ಶೋಚನೀಯವಾಗಿಯೇ ಇದೆ.

ಹಾಗೆ ನೋಡಿದರೆ ‘ಗ್ರಾಮೀಣಾಭಿವೃದ್ಧಿ’ ಎಂಬುದು ಭಾರತದಲ್ಲಿ ಸ್ವಾತಂತ್ರ್ಯ ಚಳವಳಿ ಸಂದರ್ಭದಲ್ಲಿ ಹುಟ್ಟಿದ ಪರಿಭಾಷೆ. ಆವರೆಗೂ ಗ್ರಾಮ ಭಾರತವೇ ಆಗಿದ್ದ ದೇಶದ ಗ್ರಾಮೀಣ ಪ್ರದೇಶಕ್ಕಾಗಿ ಪ್ರತ್ಯೇಕ ಅಭಿವೃದ್ಧಿಯ ಮಾದರಿಗಳು ಅಗತ್ಯ ಎಂಬ ಆಲೋಚನೆಯೂ ಅಲ್ಲಿಯವರೆಗೆ ಇರಲಿಲ್ಲ. 1927ರಲ್ಲಿ ರಷ್ಯಾಕ್ಕೆ ಹೋಗಿದ್ದ ಜವಾಹರ್‌ ಲಾಲ್‌ ನೆಹರೂ ರಷ್ಯಾದ ಮಾದರಿಯಲ್ಲಿ ಭಾರತದಲ್ಲೂ ಪಂಚವಾರ್ಷಿಕ ಯೋಜನೆಯನ್ನು ಅಳವಡಿಸಿಕೊಳ್ಳುವ ಕನಸನ್ನು ರಷ್ಯಾದಿಂದಲೇ ಹೊತ್ತು ಬಂದಿದ್ದರು.

ಸ್ವಾತಂತ್ರ್ಯ ಪೂರ್ವದಲ್ಲೇ ಅಂದರೆ 1938ರಲ್ಲೇ ಪಂಚ ವಾರ್ಷಿಕ ಯೋಜನೆ ಜಾರಿಗೊಳಿಸುವ ಪ್ರಸ್ತಾಪವಿತ್ತು. ಆದರೆ, ಅದು ಜಾರಿಗೆ ಬಂದಿದ್ದು 1950ರ ಮಾರ್ಚ್‌ನಲ್ಲಿ. ಮೊದಲ ಪಂಚವಾರ್ಷಿಕ ಯೋಜನೆಯಲ್ಲೇ ಭಾರತದ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆದರೆ, ಪಂಚ ವಾರ್ಷಿಕ ಯೋಜನೆಗಳೊಂದಿಗೆ ವರ್ಷಗಳೂ ಉರುಳಿದವೇ ಹೊರತು ನಿಜವಾಗಿಯೂ ಗ್ರಾಮೀಣಾಭಿವೃದ್ಧಿಯ ಕನಸು ನನಸಾಗಿಲ್ಲ.

ಗ್ರಾಮಗಳನ್ನು ನಿರ್ಲಕ್ಷಿಸಿ ಭಾರತವನ್ನು ನೋಡಲು ಸಾಧ್ಯವಿಲ್ಲ. 2011ರ ಜನಗಣತಿಯ ಪ್ರಕಾರ ದೇಶದ ಒಟ್ಟು ಜನಸಂಖ್ಯೆಯಲ್ಲಿ ಗ್ರಾಮೀಣ ಭಾಗದ ಜನರ ಸಂಖ್ಯೆ ಶೇಕಡ 68.8ರಷ್ಟಿದೆ. ದೇಶದ 80 ಕೋಟಿಗೂ ಹೆಚ್ಚು ಜನ ಗ್ರಾಮೀಣ ಭಾಗದಲ್ಲಿ ಬದುಕುತ್ತಿದ್ದಾರೆ. ಕೃಷಿ, ಹೈನುಗಾರಿಕೆ ಹಾಗೂ ಕೃಷಿ ಕೂಲಿಯನ್ನೇ ಮುಖ್ಯ ಆದಾಯ ಮೂಲವಾಗಿಸಿಕೊಂಡಿರುವ ಬಹುಪಾಲು ಗ್ರಾಮೀಣ ಪ್ರದೇಶದ ಜನರ ಜೀವನ ಇಂದಿಗೂ ಹಸನಾಗಿಲ್ಲ.

ಗ್ರಾಮೀಣಾಭಿವೃದ್ಧಿಗೆಂದೇ ಕೇಂದ್ರ ಸರಕಾರ ಹಾಗೂ ರಾಜ್ಯ ಸರಕಾರಗಳಲ್ಲಿ ಪ್ರತ್ಯೇಕ ಇಲಾಖೆಗಳೇ ಇವೆ. ಪ್ರತಿ ವರ್ಷ ಕೋಟಿ ಕೋಟಿ ಹಣವನ್ನು ಗ್ರಾಮೀಣಾಭಿವೃದ್ಧಿಗೇ ಮೀಸಲಿರಿಸಲಾಗುತ್ತಿದೆ. ರಸ್ತೆ ನಿರ್ಮಾಣ, ಸೇತುವೆ ನಿರ್ಮಾಣ, ಸಮುದಾಯ ಭವನಗಳ ನಿರ್ಮಾಣಗಳನ್ನೇ ಗ್ರಾಮೀಣಾಭಿವೃದ್ಧಿಯ ಮಾದರಿಗಳು ಎಂದು ಭಾವಿಸಿರುವ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸುಸ್ಥಿರ ಅಭಿವೃದ್ಧಿ ಹಾಗೂ ಸಮುದಾಯದ ಸಹಭಾಗಿತ್ವವನ್ನು ಕಡೆಗಣಿಸುತ್ತಲೇ ಬಂದಿದ್ದಾರೆ.

ಗಾಂಧೀಜಿ ಹೇಳಿದ ಗ್ರಾಮ ಸ್ವರಾಜ್ಯದ ಕನಸನ್ನು ಕೇವಲ ಚರಕ ಸುತ್ತುವುದಕ್ಕಷ್ಟೇ ಸೀಮಿತಗೊಳಿಸಿಕೊಂಡ ಸರಕಾರಿ ಯಂತ್ರ ಗ್ರಾಮಗಳಿಂದ ಉತ್ಪಾದನೆ ಹಾಗೂ ಗ್ರಾಮೀಣ ಜನರ ಪಾಲ್ಗೊಳ್ಳುವಿಕೆಯ ಕಡೆಗೆ ಹೆಚ್ಚು ಗಮನ ಹರಿಸಿಲ್ಲ. ಇದರ ಪರಿಣಾಮವೇ ಗ್ರಾಮೀಣ ಭಾರತವನ್ನು ಬಡ ಭಾರತವಾಗಿ, ಗ್ರಾಮೀಣ ಭಾಗದ ಜನರನ್ನು ಎರಡನೇ ದರ್ಜೆಯ ಜನರಂತೆ ಕಾಣುತ್ತಿರುವುದು.

ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಗ್ರಾಮೀಣ ಭಾರತವನ್ನು ನೋಡಬೇಕಿದ್ದ ಸರಕಾರಗಳು ಅಭಿವೃದ್ಧಿ ಎಂಬುದನ್ನು ವಲಯಗಳಾಗಿ ವಿಂಗಡಿಸಿ, ಆಯಾ ವಲಯಗಳ ಮೇಲಷ್ಟೇ ಗಮನ ಹರಿಸುತ್ತಿರುವುದರಿಂದ ಗ್ರಾಮಗಳ ಸಮಗ್ರ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಹೀಗಾಗಿಯೇ ಭಾರತದ ಬಹುತೇಕ ಗ್ರಾಮೀಣ ಭಾಗ ಇಂದಿಗೂ ‘ಹಿಂದುಳಿದ ಪ್ರದೇಶ’ವೇ ಆಗಿದೆ.

ಗ್ರಾಮಗಳು ಸತ್ತರೆ ಭಾರತವೂ ಸತ್ತಂತೆ. ಗ್ರಾಮಗಳು ಅಭಿವೃದ್ಧಿಯಾಗದ ಹೊರತು ಸಮಗ್ರ ಭಾರತದ ಅಭಿವೃದ್ಧಿ ಸಾಧ್ಯವಿಲ್ಲ.
- ಮಹಾತ್ಮ ಗಾಂಧಿ

“ಸರಕಾರಕ್ಕೆ ಅಭಿವೃದ್ಧಿಯ ಸರಿಯಾದ ಕಲ್ಪನೆಯೂ ಇಲ್ಲ, ಅದರ ಬಗ್ಗೆ ಅರಿವೂ ಇಲ್ಲ. ಅಭಿವೃದ್ಧಿ ಎಂದರೆ ಕೇವಲ ಕಟ್ಟಡ, ರಸ್ತೆ, ಚರಂಡಿ – ಇವಿಷ್ಟಕ್ಕೇ ಸೀಮಿತವಾಗಿ ಯೋಚಿಸುವುದು ಹೆಚ್ಚು. ಅಭಿವೃದ್ಧಿ ಎಂದರೆ ಮಾನವನ ಸಮಗ್ರ ಅಭಿವೃದ್ಧಿ ಎಂಬುದನ್ನು ಸರಕಾರ ಅರಿಯಬೇಕು. ಮನುಷ್ಯನ ಸಾಮರ್ಥ್ಯಗಳನ್ನು ಸದಾಕಾಲ ಬೆಳೆಸಿಕೊಂಡು ಬರುವುದೇ ಅಭಿವೃದ್ಧಿ. ಆ ದಿಕ್ಕಿನಲ್ಲಿ ಸರಕಾರ ಯೋಚನೆ ಮಾಡಬೇಕು” ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ತಜ್ಞ, ಮೈಸೂರಿನ ‘ಗ್ರಾಮ್’ ಸಂಸ್ಥೆಯ ಸಂಸ್ಥಾಪಕ ಡಾ. ಆರ್‌. ಬಾಲಸುಬ್ರಹ್ಮಣ್ಯಂ.

“ಮನುಷ್ಯನ ದೇಹಕ್ಕೆ ಬೇಕಾಗುವಂಥ ಆಹಾರ, ಆರೋಗ್ಯ, ಪೌಷ್ಟಿಕಾಂಶ, ಶುದ್ಧವಾದ ನೀರು, ಗಾಳಿ ಇವುಗಳು ಸರಿಯಾಗಿ ಪೂರೈಕೆಯಾಗಲು ಏನು ಮಾಡಬೇಕು ಹಾಗೂ ಮನುಷ್ಯನ ಆಲೋಚನೆಗಳನ್ನು ಬೆಳೆಸುವಂಥ ಉತ್ತಮ ಶಿಕ್ಷಣ ನೀಡಲು ಏನು ಮಾಡಬೇಕು ಎಂಬ ಬಗ್ಗೆ ಸರಕಾರಗಳು ಯೋಚಿಸಬೇಕು. ಇವೆಲ್ಲವನ್ನೂ ಹಿಂದಿನಿಂದಲೇ ಮಾಡಿಕೊಂಡು ಬಂದಿದ್ದರೆ ಗ್ರಾಮೀಣ ಪ್ರದೇಶವೂ ಉತ್ಪಾದನೆಗೆ ಹೆಚ್ಚಿನ ಕೊಡುಗೆ ಕೊಡುತ್ತಿತ್ತು” ಎನ್ನುತ್ತಾರೆ ಅವರು.

ಸರಕಾರಗಳು ಗ್ರಾಮೀಣ ಜನರನ್ನು ನೋಡುವ ರೀತಿಯೇ ಬೇರೆ. ಗ್ರಾಮೀಣ ಜನತೆಯನ್ನು ಸರಕಾರ ಭಿಕ್ಷುಕರ ರೀತಿಯಲ್ಲಿ ನೋಡುತ್ತದೆ. ತಾನು ಸದಾ ಕಾಲ ಗ್ರಾಮೀಣ ಜನರಿಗೆ ಸರಕು, ಸೇವೆಯನ್ನು ಕೊಡುತ್ತಿರುತ್ತೇನೆ, ಅವರು ತೆಗೆದುಕೊಳ್ಳಬೇಕು ಎಂಬ ಧೋರಣೆ ಸರಕಾರದಲ್ಲಿದೆ. ನಾವೇನು ಕೊಡುತ್ತೇವೋ ಅದನ್ನು ಪಡೆಯಬೇಕು ಎಂಬ ನಿಲುವು ಸರಕಾರದ್ದು. ಈ ನಿಲುವು ಮೊದಲು ಬದಲಾಗಬೇಕಿದೆ.

ಗ್ರಾಮೀಣ ಪ್ರದೇಶವನ್ನು ಕೇವಲ ಸ್ವೀಕರಿಸುವ ಜಾಗವಾಗಿ ನೋಡದೆ ಈ ಹೊತ್ತಿನ ಆರ್ಥಿಕತೆಯ ಭಾಗೀದಾರರಾಗಿ ನೋಡಬೇಕಾದ ಅನಿವಾರ್ಯವಿದೆ. ಗಾಂಧೀಜಿಯ ಗ್ರಾಮ ಸ್ವರಾಜ್ಯದ ಪರಿಕಲ್ಪನೆ ಕೂಡಾ ಇದೇ.
- ಡಾ. ಆರ್‌. ಬಾಲಸುಬ್ರಹ್ಮಣ್ಯಂ, ‘ಗ್ರಾಮ್’ ಸಂಸ್ಥೆಯ ಸಂಸ್ಥಾಪಕ

ಪ್ರತಿಹಳ್ಳಿಯಲ್ಲೂ ಉತ್ಪಾದನೆ ಮಾಡುವ ಸಾಮರ್ಥ್ಯ ಹೆಚ್ಚಿಸುವ ಕಡೆಗೆ ಸರಕಾರಗಳು ಗಮನ ಹರಿಸಬೇಕಿದೆ. ಗ್ರಾಮೀಣಾಭಿವೃದ್ಧಿಯನ್ನು ಒಳಗೊಂಡ ಸಮಗ್ರ ಅಭಿವೃದ್ಧಿಯ ಯೋಜನೆಗಳನ್ನು ಸರಕಾರ ಜಾರಿಗೆ ತರಬೇಕು. ಇಡೀ ಹಳ್ಳಿ, ಇಡೀ ತಾಲ್ಲೂಕು, ಇಡೀ ಜಿಲ್ಲೆಯ ಅಭಿವೃದ್ಧಿಯ ಮಾದರಿಗಳ ಕಡೆಗೆ ಸರಕಾರ ಒತ್ತುಕೊಡಬೇಕು. ಗ್ರಾಮೀಣ ಜನರು ಉತ್ಪಾದಕರೂ ಕೂಡಾ. ಆದರೆ, ಗ್ರಾಮೀಣ ಭಾರತವನ್ನು ಗುಲಾಮ ಭಾರತವಾಗಿಯೇ ನೋಡುತ್ತಾ ಬರಲಾಗುತ್ತಿದೆ.

ಇಷ್ಟು ವರ್ಷಗಳ ಕಾಲ ದೇಶವನ್ನು ಆಳುತ್ತಾ ಬರುತ್ತಿರುವ ಸರಕಾರಗಳು ಗ್ರಾಮೀಣ ಭಾರತವನ್ನು ಕೇವಲ ಪಡೆದುಕೊಳ್ಳುವ ಜಾಗಗಳು ಎಂಬಂತೆ ನೋಡುತ್ತಿವೆಯೇ ಹೊರತು ಅವು ಕೂಡಾ ಉತ್ಪಾದಕತೆಯ ದೊಡ್ಡ ಸಾಮರ್ಥ್ಯವನ್ನು ಹೊಂದಿವೆ ಎಂಬ ಕಡೆಗೆ ಗಮನ ಹರಿಸಿಲ್ಲ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ಪಾದಕತೆ ಸಾಧ್ಯವಾಗುವ ಕಡೆಗಳಲ್ಲಿ ಗ್ರಾಮೀಣ ಜನರಿಗೆ ತರಬೇತಿ, ಪ್ರೋತ್ಸಾಹ ನೀಡುವ ಕೆಲಸವನ್ನು ಸರಕಾರಗಳು ಮಾಡಬೇಕಿದೆ.

ಕೃಷಿಯ ಜತೆಗೂ ಗ್ರಾಮೀಣ ಭಾರತದಲ್ಲಿ ಸುಸ್ಥಿರ ಉತ್ಪಾದಕತೆಯ ಉತ್ತೇಜನಕ್ಕೆ ಸರಕಾರಗಳು ಮನಸ್ಸು ಮಾಡಬೇಕಿದೆ. ದೇಶದ ಅರ್ಥವ್ಯವಸ್ಥೆಯಲ್ಲಿ ತಮ್ಮ ಸಹಭಾಗಿತ್ವವೂ ಇದೆ ಎಂಬುದನ್ನು ಗ್ರಾಮೀಣ ಜನರೂ ಅರಿತು ಜೀವನ ಮಟ್ಟ ಸುಧಾರಣೆಗೆಯ ಕಡೆಗೆ ಗಮನ ಹರಿಸಬೇಕು. ಇಲ್ಲವಾದರೆ ರಸ್ತೆ ನಿರ್ಮಾಣ, ಚರಂಡಿ ನಿರ್ಮಾಣಗಳೇ ಗ್ರಾಮೀಣಾಭಿವೃದ್ಧಿ ಎಂದು ಸರಕಾರಗಳು ಬೊಬ್ಬೆ ಹೊಡೆಯುವುದು ಮುಂದುವರಿಯುತ್ತಲೇ ಇರುತ್ತದೆ.