samachara
www.samachara.com
ಭಾರತದ ನೋಟು, ಚೀನಾದ ಕಂಪನಿ; ಇಲ್ಲಿದೆ ಇಂಡಿಯನ್‌ ಕರೆನ್ಸಿ ಮುದ್ರಣದ ಇತಿಹಾಸ
COVER STORY

ಭಾರತದ ನೋಟು, ಚೀನಾದ ಕಂಪನಿ; ಇಲ್ಲಿದೆ ಇಂಡಿಯನ್‌ ಕರೆನ್ಸಿ ಮುದ್ರಣದ ಇತಿಹಾಸ

ಈಗ ಭಾರತ ತನ್ನ ನೋಟುಗಳನ್ನು ತಾನೇ ಮುದ್ರಿಸಿಕೊಳ್ಳುತ್ತಿದೆ ನಿಜ. ಆದರೆ ಕೆಲವು ವರ್ಷಗಳ ಹಿಂದೆ ಭಾರತದ ನೋಟುಗಳು ಸಂಪೂರ್ಣವಾಗಿ ‘ಮೇಡ್‌ ಇನ್‌ ಇಂಡಿಯಾ’ ಆಗಿರಲಿಲ್ಲ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಭಾರತದ ಕರೆನ್ಸಿ ನೋಟುಗಳು ಚೀನಾದಲ್ಲಿ ಮುದ್ರಣಗೊಳ್ಳುತ್ತಿವೆಯೇ ಎಂಬ ಚರ್ಚೆಯನ್ನು ಆಗಸ್ಟ್‌ 13ರ ಸೋಮವಾರ ಪ್ರಕಟಗೊಂಡ ‘ನ್ಯೂಸ್‌ 18’ ವರದಿ ಇಡೀ ದೇಶದ ತುಂಬಾ ಹುಟ್ಟುಹಾಕಿದೆ. ಈ ವರದಿಗೆ ಮೂಲವಾಗಿರುವುದು ‘ಸೌಥ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ಎಂಬ ಚೀನಾದ ಸುದ್ದಿ ಸಂಸ್ಥೆಯಲ್ಲಿ ಪ್ರಕಟವಾದ ವರದಿ.

“Why other countries are giving China a licence to print money” (ಇತರೆ ದೇಶಗಳು ತಮ್ಮ ಕರೆನ್ಸಿಯನ್ನು ಮುದ್ರಿಸಲು ಚೀನಾಗೇಕೆ ಪರವಾನಗಿ ನೀಡುತ್ತಿವೆ) ಎಂಬ ತಲೆಬರಹದ ಅಡಿಯಲ್ಲಿ ‘ಸೌಥ್‌ ಚೀನಾ ಮಾರ್ನಿಂಗ್‌ ಪೋಸ್ಟ್‌’ ವರದಿ ಪ್ರಕಟಿಸಿತ್ತು. ಈ ವರದಿಯಲ್ಲಿ ಭಾರತ, ಥೈಲ್ಯಾಂಡ್‌, ಬಾಂಗ್ಲಾ ದೇಶ, ಶ್ರೀ ಲಂಕಾ, ಬ್ರೆಜಿಲ್‌, ಪೋಲ್ಯಾಂಡ್‌ ಇತ್ಯಾದಿ ರಾಷ್ಟ್ರಗಳ ಕರೆನ್ಸಿಗಳನ್ನು ಚೀನಾ ಸರಕಾರದ ‘ಚೀನಾ ಬ್ಯಾಂಕ್‌ ನೋಟ್‌ ಪ್ರಿಂಟಿಂಗ್‌ ಅಂಡ್‌ ಮಿಂಟಿಂಗ್‌ ಕಾರ್ಪೊರೇಷನ್‌’ (ಸಿಬಿಪಿಎಂ) ಕಂಪನಿ ಮುದ್ರಿಸಿಕೊಡುತ್ತಿದೆ ಎಂದು ತಿಳಿಸಲಾಗಿತ್ತು.

ಚೀನಾ ದೇಶ ಹಲವಾರು ದೇಶಗಳ ಕರೆನ್ಸಿ ನೋಟುಗಳನ್ನು ಅಗಾಧ ಪ್ರಮಾಣದಲ್ಲಿ ಮುದ್ರಿಸುತ್ತಿದ್ದು, ಇದರಿಂದಾಗಿ ಜಾಗತಿಕ ಆರ್ಥಿಕತೆ ಮತ್ತು ಭೂ ರಾಜಕೀಯದಲ್ಲಿ ಬೀಜಿಂಗ್‌ ಹೆಚ್ಚಿನ ಪ್ರಭಾವವನ್ನು ಗಳಿಸಲು ಸಾದ್ಯವಾಗುತ್ತಿದೆ ಎಂದು ವರದಿ ಉಲ್ಲೇಖಿಸಿತ್ತು.

ಸಿಬಿಪಿಎಂ ಅಧ್ಯಕ್ಷ ಲಿಯೂ ಗುಶೇಂಗ್‌ ಹೇಳುವ ಪ್ರಕಾರ ‘ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್‌’ ಮೂಲಕ ಕಂಪನಿಯು ಬೇರೆ ಬೇರೆ ದೇಶಗಳ ಕರೆನ್ಸಿ ನೋಟುಗಳನ್ನು ಮುದ್ರಿಸುವ ಯೋಜನೆಯನ್ನು ಯಶಸ್ವಿಯಾಗಿ ತನ್ನದಾಗಿಸಿಕೊಂಡಿದೆ. 2013ರಲ್ಲಿ ಈ ಬೆಲ್ಟ್ ಅಂಡ್‌ ರೋಡ್‌ ಇನಿಷಿಯೇಟಿವ್‌’ ಯೋಜನೆಯನ್ನು ಬೀಜಿಂಗ್‌ 2013ರಲ್ಲಿ 60 ದೇಶಗಳೊಟ್ಟಿಗೆ ಪ್ರಾರಂಭಿಸಿತ್ತು. ಈ ಯೋಜನೆಯ ಅಡಿಯಲ್ಲಿ ಏಷ್ಯಾ, ಯುರೋಪ್‌ ಮತ್ತು ಆಫ್ರಿಕಾ ಖಂಡದ ದೇಶಗಳೆಲ್ಲಾ ಇದ್ದವು. ‘ಬೆಲ್ಟ್‌ ಅಂಡ್‌ ರೋಡ್‌ ಇನಿಷಿಯೇಟಿವ್‌’ ಮೂಲಕ ಬೃಹತ್‌ ಪ್ರಮಾಣದ ಬಂಡವಾಳ ಹೂಡಿಕೆಯಿಂದ ಮೂಲ ಸೌಕರ್ಯ, ನಿರ್ಮಾಣ ಕಾಮಗಾರಿಗಳನ್ನು ನಡೆಸಿ ಆರ್ಥಿಕ ಪ್ರಗತಿಯನ್ನು ಹೆಚ್ಚಾಗಿಸುವ ಯೋಜನೆಯನ್ನು ಚೀನಾ ಹೊಂದಿತ್ತು.

ಭಾರತದ ನೋಟು, ಚೀನಾದ ಕಂಪನಿ; ಇಲ್ಲಿದೆ ಇಂಡಿಯನ್‌ ಕರೆನ್ಸಿ ಮುದ್ರಣದ ಇತಿಹಾಸ

ಈ ಯೋಜನೆಯ ಅಡಿಯಲ್ಲಿ ಭಾರತ ಕರೆನ್ಸಿ ಮುದ್ರಣವನ್ನು ಚೀನಾ ಮೂಲದ ಕಂಪನಿಗೆ ಒದಗಿಸಿದೆಯೇ ಎಂಬ ಪ್ರಶ್ನೆ ದೇಶಾದ್ಯಂತ ವ್ಯಾಪಕವಾಗಿ ಹರಿದಾಡಲು ಆರಂಭಿಸಿದೆ. ಆದರೆ ಈ ಆರೋಪವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ತಳ್ಳಿ ಹಾಕಿದೆ ಎಂದು ‘ದಿ ಕ್ವಿಂಟ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಸುದ್ದಿಯ ಕುರಿತು ಆತಂಕ ವ್ಯಕ್ತ ಪಡಿಸಿರುವ ಕಾಂಗ್ರೆಸ್‌ ನಾಯಕ ಶಶಿ ತರೂರ್‌, “ಈ ಸುದ್ದಿ ನಿಜವೇ ಆಗಿದ್ದಲ್ಲಿ ಇದು ಭಾರತದ ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟುಮಾಡುತ್ತದೆ,” ಎಂದು ಟ್ವೀಟ್‌ ಮಾಡಿದ್ದಾರೆ.

ಹಾಗೆ ನೋಡಿದರೆ ಇಂದು ಹಲವಾರು ಪುಟ್ಟ ರಾಷ್ಟ್ರಗಳು ತಮ್ಮ ಕರೆನ್ಸಿ ನೋಟುಗಳನ್ನು ಬೇರೆ ದೇಶಗಳ ಕಂಪನಿಗಳಿಂದ ಉತ್ಪಾದನೆ ಮಾಡಿಸುತ್ತವೆ. ಇಡೀ ಜಗತ್ತಿನಲ್ಲಿ ಹರಿದಾಡುತ್ತಿರುವ ನಾನಾ ತರದ ಕರೆನ್ಸಿಗಳ ಶೇ.20ರಷ್ಟು ಭಾಗವನ್ನು ಖಾಸಗಿ ಕಂಪನಿಗಳೇ ಉತ್ಪಾದಿಸುತ್ತವೆ. ಕರೆನ್ಸಿ ನೋಟು ಮುದ್ರಣದಲ್ಲಿ ಸಂಪೂರ್ಣ ಸ್ವಾಯತ್ತತೆಯನ್ನು ಸಾಧಿಸಿರುವುದು ಅಭಿವೃದ್ಧಿ ಹೊಂದಿರುವ, ಆಭಿವೃದ್ಧಿಶೀಲ ಹಂತದಲ್ಲಿರುವ ಹಲವು ರಾಷ್ಟ್ರಗಳಷ್ಟೇ. ಇತ್ತೀಚಿಗೆ ಭಾರತವೂ ಈ ಸಾಲಿಗೆ ಸೇರುವ ಹಂತದಲ್ಲಿದೆ.

ಭಾರತದಲ್ಲಿ ಕರೆನ್ಸಿ ನೋಟುಗಳ ಮುದ್ರಣ:

ವಿಶ್ವದಲ್ಲೇ ಅತಿ ಹೆಚ್ಚು ಕರೆನ್ಸಿ ನೋಟುಗಳನ್ನು ಉತ್ಪಾದಿಸುವ ಮತ್ತು ಬಳಸುವ ಎರಡನೇ ಅತಿ ದೊಡ್ಡ ದೇಶ ಭಾರತ. ಮೊದಲನೇ ಸ್ಥಾನ ಚೀನಾದ್ದು. ತನಗೆ ಅಗತ್ಯವಿರುವ ಎಲ್ಲಾ ನೋಟುಗಳನ್ನು ಭಾರತವೇ ಮುದ್ರಿಸುತ್ತಿದೆ. ಆದರೆ ಇತ್ತೀಚಿನವರೆಗೂ ನೋಟುಗಳ ಮುದ್ರಣಕ್ಕೆ ಅಗತ್ಯವಾದ ವಸ್ತುಗಳಿಗಾಗಿ ಭಾರತ ಇತರೆ ದೇಶಗಳನ್ನು ಅವಲಂಭಿಸಿತ್ತು. ನೋಟಿಗೆ ಬೇಕಾದ ವಾಟರ್‌ ಮಾರ್ಕ್‌ ಹೊಂದಿರುವ ಶೇ.95ರಷ್ಟು ಪೇಪರ್‌ಗಳನ್ನು ಜರ್ಮನಿಯ ಗೈಸೆಕ್‌ ಅಂಡ್ ಡೆವಿರೆಂಟ್‌ ಕಂಪನಿ ಮತ್ತು ಬ್ರಿಟನ್‌ನ ‘ಡೇ ಲಾ ರೇ’ ಮೊದಲಾದ ಕಂಪನಿಗಳಿಂದ ತರಿಸಿಕೊಳ್ಳುತ್ತಿತ್ತು.

ಭಾರತದ ನೋಟು ಮುದ್ರಣಕ್ಕಾಗಿ ಸುಮಾರು 22,000 ಮೆಟ್ರಿಕ್‌ ಟನ್‌ ಪೇಪರ್‌ಗಳನ್ನು ಬಳಸುತ್ತಿದ್ದು, ನೋಟು ಮುದ್ರಣದ ಒಟ್ಟಾರೆ ಖರ್ಚಿನ ಶೇ.40ರಷ್ಟನ್ನು ಕೇವಲ ಪೇಪರ್‌ಗಾಗಿ ಖರ್ಚು ಮಾಡುತ್ತಿತ್ತು. 2015-16ನೇ ಸಾಲಿನ ಕೊನೆಗೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ನೊಟುಗಳಿಗೆಂದೇ 3,421 ಕೋಟಿ ರೂಪಾಯಿಗಳನ್ನು ವ್ಯಯಿಸಿತ್ತು. ಈ ವಿಪರೀತ ಖರ್ಚಿನ ಕಾರಣಕ್ಕಾಗಿಯೇ ನೋಟು ಮುದ್ರಣಕ್ಕೆ ಅಗತ್ಯವಿರುವ ಪೇಪರ್‌ ಇಂಕ್‌ ಇತ್ಯಾದಿ ವಸ್ತುಗಳನ್ನೆಲ್ಲಾ ‘ಮೇಕ್‌ ಇನ್‌ ಇಂಡಿಯಾ’ ಯೋಜನೆಯೊಳಗೆ ಸೇರಿಸಿಕೊಳ್ಳಲಾಯಿತು.

ಸದ್ಯ ಮುದ್ರಣಗೊಳ್ಳುತ್ತಿರುವ 500 ಮತ್ತು 2,000 ರೂಪಾಯಿಗಳ ಎಲ್ಲಾ ನೋಟುಗಳು ಸಂಪೂರ್ಣವಾಗಿ ‘ಮೇಡ್‌ ಇನ್‌ ಇಂಡಿಯಾ' ಎನ್ನಲಾಗುತ್ತಿದೆ. ಭಾರತದಲ್ಲಿ ನೋಟುಗಳ ಮುದ್ರಣ ಆರಂಭಗೊಂಡ ಕಾಲದಿಂದ ತನ್ನ ನೋಟುಗಳನ್ನು ಸಂಪೂರ್ಣವಾಗಿ ತಾನೇ ಮುದ್ರಿಸಿಕೊಳ್ಳುವಂತಾಗಲು ಭಾರತ ಸುಮಾರು 9 ದಶಕಗಳ ಕಾಲವನ್ನು ತೆಗೆದುಕೊಂಡಿದೆ.

ಭಾರತದಲ್ಲಿ ಮೊದಲ ರೂಪಾಯಿಯ ನೋಟು ಚಲಾವಣೆಗೆ ಬಂದಿದ್ದು 1862ರಲ್ಲಿ. ಆಗಿನ ಬ್ರಿಟಿಷ್‌ ಸರಕಾರ ಇಂಗ್ಲೆಂಡ್‌ ಮೂಲದ ‘ಥಾಮಸ್‌ ಡೇ ಲಾ ರೇ’ ಎಂಬ ಕಂಪನಿಯಿಂದ ಭಾರತಕ್ಕೆ ಅಗತ್ಯವಿದ್ದ ಕರೆನ್ಸಿ ನೋಟುಗಳನ್ನು ಮುದ್ರಣ ಮಾಡಿಸಿ ಭಾರತಕ್ಕೆ ತರಿಸಿಕೊಳ್ಳುತ್ತಿತ್ತು. ಭಾರತದ ಕರೆನ್ಸಿ ನೋಟುಗಳನ್ನು ಮುದ್ರಿಸುವ ಮುಂಚೆ ಈ ಕಂಪನಿ ಪ್ಲೇಯಿಂಗ್‌ ಕಾರ್ಡ್‌, ಪೋಸ್ಟೇಜ್‌ ಸ್ಟಾಂಪ್‌ಗಳನ್ನು ಉತ್ಪಾದಿಸುತ್ತಿತ್ತು. ಇಂದು 200 ವರ್ಷಗಳಷ್ಟು ಹಳೆಯದಾಗಿರುವ ಈ ಕಂಪನಿ ಜಗತ್ತಿನ ಅತಿದೊಡ್ಡ ನೋಟು ಮುದ್ರಣ ಕಂಪನಿಯಾಗಿ ಬೆಳೆದುನಿಂತಿದೆ.

1920ರ ವೇಳೆಗೆ ಬ್ರಿಟಿಷರು ಭಾರತದಲ್ಲಿಯೇ ನೋಟುಗಳನ್ನು ಉತ್ಪಾದಿಸುವ ತೀರ್ಮಾನಕ್ಕೆ ಬಂದಿದ್ದರು. ಈ ಕೆಲಸ ಕಾರ್ಯಗತವಾಗಿದ್ದು 1926ರಲ್ಲಿ. ಮೊದಲ ಬಾರಿಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಭಾರತದ ಮೊದಲ ನೋಟು ಮುದ್ರಣ ಕೇಂದ್ರ ಸ್ಥಾಪನೆಗೊಂಡಿತ್ತು. ಮೊದಲಿಗೆ 5 ರೂಪಾಯಿ ಮೌಲ್ಯದ ನೋಟುಗಳನ್ನು ಮುದ್ರಿಸಲಾಯಿತು. ತದ ನಂತರ 100 ರೂಪಾಯಿ, 1,000 ರೂಪಾಯಿ ಮತ್ತು 10,000 ರೂಪಾಯಿ ಮೌಲ್ಯದ ನೋಟುಗಳ ಮುದ್ರಣಕ್ಕೂ ಕೂಡ ಚಾಲನೆ ನೀಡಲಾಯಿತು. 1947ರಲ್ಲಿ ಭಾರತಕ್ಕೆ ಸ್ವತಂತ್ರ ದೊರೆತ ನಂತರವೂ ಕೂಡ ದೇಶದಲ್ಲಿದ್ದದ್ದು ಇದೊಂದೇ ನೋಟು ಮುದ್ರಣ ಕೇಂದ್ರ.

ಭಾರತದ ಮೊದಲ ನೋಟು ಮುದ್ರಣ ಕೇಂದ್ರದ ಸಂಗ್ರಹ ಚಿತ್ರ
ಭಾರತದ ಮೊದಲ ನೋಟು ಮುದ್ರಣ ಕೇಂದ್ರದ ಸಂಗ್ರಹ ಚಿತ್ರ

ಭಾರತ ಸ್ವಾತಂತ್ರ್ಯ ಗಳಿಸಿ ಸ್ವತಂತ್ರವಾಗಿ ಆರ್ಥಿಕತೆಯನ್ನು ಕಟ್ಟುಕೊಳ್ಳುವಂತಾದಾಗ ಕರೆನ್ಸಿ ನೋಟುಗಳ ಅಗತ್ಯವೂ ಕೂಡ ಹೆಚ್ಚಾಯಿತು. ಅದಕ್ಕಾಗಿ 1975ರಲ್ಲಿ ಮಧ್ಯ ಪ್ರದೇಶದ ಡೇವಾಸ್‌ ಪ್ರದೇಶದಲ್ಲಿ ದೇಶನ 2ನೇ ನೋಟು ಮುದ್ರಣ ಕೇಂದ್ರವನ್ನು ಸ್ಥಾಪಿಸಲಾಯಿತು. ನೋಟು ಮುದ್ರಣದಲ್ಲಿ ಇನ್ನೂ ಹೆಚ್ಚಿನ ಸುರಕ್ಷತೆ ವಹಿಸಲು ಅಗತ್ಯವಾದ ಎಲ್ಲಾ ಸೌಕರ್ಯಗಳನ್ನೂ ಕೂಡ ಈ ಮುದ್ರಣ ಕೇಂದ್ರ ಹೊಂದಿತ್ತು. 1997ರವರೆಗೆ ಭಾರತಕ್ಕೆ ಅಗತ್ಯವಿದ್ದ ಎಲ್ಲಾ ಕರೆನ್ಸಿ ನೋಟುಗಳನ್ನು ಈ ಎರಡು ಮುದ್ರಣ ಕೇಂದ್ರಗಳೇ ಮುದ್ರಿಸುತ್ತಿದ್ದವು.

ಅಭಿವೃದ್ಧಿಶೀಲ ರಾಷ್ಟ್ರವಾಗಿ ಜನಸಂಖ್ಯೆಯಲ್ಲೂ ಕೂಡ ಅಪರಿಮಿತ ಬೆಳವಣಿಗೆಯನ್ನು ಕಂಡ ಭಾರತಕ್ಕೆ ನೋಟುಗಳ ಅಗತ್ಯವೂ ಕೂಡ ಹೆಚ್ಚಾಯಿತು. ಅರ್ಥಿಕತೆಯೂ ಕೂಡ ಬೆಳೆಯುತ್ತಾ ಸಾಗಿದ್ದರಿಂದ ಇಡೀ ದೇಶಕ್ಕೆ ಅಗತ್ಯವಿದ್ದ ನೊಟುಗಳನ್ನೆಲ್ಲಾ ಮುದ್ರಿಸುವಲ್ಲಿ ದೇಶದ 2 ಮುದ್ರಣ ಕೇಂದ್ರಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಭಾರತಕ್ಕೆ ಬೇಕಿದ್ದ 3.6 ಬಿಲಿಯನ್‌ ನೋಟುಗಳ ಮುದ್ರಣದ ಕೆಲಸವನ್ನು ಅಮೆರಿಕಾ, ಕೆನಡಾ ಮತ್ತು ಯುರೋಪಿನ ಕಂಪನಿಗಳಿಗೆ ವಹಿಸುವ ತೀರ್ಮಾನಕ್ಕೆ ಬಂದಿತ್ತು. ಈ ಕಂಪನಿಗಳು ಸುಮಾರು 1 ಲಕ್ಷ ಕೋಟಿ ಮೌಲ್ಯದ ಕರೆನ್ಸಿ ನೋಟುಗಳನ್ನು ಮುದ್ರಿಸಿಕೊಟ್ಟಿದ್ದವು.

ಸರಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದ್ದವು. ಇದಕ್ಕಾಗಿ ಸರಿಸುಮಾರು 95 ಮಿಲಿಯನ್‌ ಡಾಲರ್‌ಗಳನ್ನು ಹಣವನ್ನು ಭಾರತ ಖರ್ಚು ಮಾಡಬೇಕಿತ್ತಲ್ಲದೇ ದೇಶದ ಭದ್ರತೆಗೆ ಧಕ್ಕೆ ಬರುವ ಸಂಭವವನ್ನು ಹಲವರು ಮುಂದಿಟ್ಟಿದ್ದರು. ತೀವ್ರ ಟೀಕೆಗಳ ನಂತರ ಸರಕಾರ ಈ ನಿರ್ಧಾರವನ್ನು ಕೈಬಿಟ್ಟಿತ್ತು.

ನಂತರದಲ್ಲಿ ಅಗತ್ಯವಿದ್ದ ಕರೆನ್ಸಿ ನೋಟುಗಳ ಮುದ್ರಣಕ್ಕಾಗಿ ಭಾರತ 1999ರಲ್ಲಿ ಮೈಸೂರಿನಲ್ಲಿ ನೋಟು ಮುದ್ರಣ ಕೇಂದ್ರವನ್ನು ತೆರೆಯಿತು. ಮರು ವರ್ಷವೇ ಪಶ್ಚಿಮ ಬಂಗಾಳದ ಸಾಲ್ಬೋನಿಯಲ್ಲಿ ಮತ್ತೊಂದು ನೋಟು ಮುದ್ರಣ ಕೇಂದ್ರವನ್ನು ತೆರೆಯಲಾಯಿತು. ನೋಟು ಮುದ್ರಣವೇನೋ ಭಾರತದಲ್ಲೇ ಆಗುತ್ತಿತ್ತು. ಆದರೆ ಅಗತ್ಯವಿದ್ದ ಪೇಪರ್‌ ಮಾತ್ರ ಬ್ರಿಟನ್‌, ಜಪಾನ್‌ ಮತ್ತು ಜರ್ಮನಿಗಳಿಂದ ಬರುತ್ತಿತ್ತು. ಮಧ್ಯ ಪ್ರದೇಶದ ಹೊಶಂಗಾಬಾದ್‌ನಲ್ಲಿ 1968ರಲ್ಲೇ ಸ್ಥಾಪನೆಯಾಗಿದ್ದ ಸೆಕ್ಯುರಿಟಿ ಪೇಪರ್‌ ಮಿಲ್‌ನಲ್ಲಿ ಉತ್ಪಾದಿಸಲಾಗುತ್ತಿದ್ದ 2,800 ಮೆಟ್ರಿಕ್‌ ಟನ್‌ ಪೇಪರ್‌, ಭಾರತದ ಕರೆನ್ಸಿ ಮುದ್ರಣಕ್ಕೆ ಅಗತ್ಯವಿದ್ದ ಸ್ವಲ್ಪ ಪ್ರಮಾಣದ ಪೇಪರ್‌ಗಳನ್ನೂ ಕೂಡ ಉತ್ಪಾದಿಸುವಲ್ಲಿ ಅಶಕ್ತವಾಗಿತ್ತು.

ಕೇವಲ ಮೂರು ವರ್ಷಗಳ ಹಿಂದೆಯಷ್ಟೇ ಭಾರತದಲ್ಲಿ ಕರೆನ್ಸಿ ನೋಟಿನ ಪೇಪರ್‌ ತಯಾರಿಕಾ ಘಟಕ ತೆರೆಯಲಾಗಿದೆ. 2015ರಲ್ಲಿ ಹೊಶಂಗಾಬಾದ್‌ನ ಪೇಪರ್‌ ಉತ್ಪಾದನಾ ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವುದರ ಜತೆಗೆ ಮೈಸೂರಿನಲ್ಲಿ ಎರಡನೇ ಪೇಪರ್‌ ಉತ್ಪಾದನಾ ಕಾರ್ಖಾನೆಯನ್ನು ಸ್ಥಾಪಿಸಲಾಗಿದೆ. ಮೈಸೂರಿನ ಈ ಮಿಲ್‌ ವರ್ಷಕ್ಕೆ 12,000 ಮೆಟ್ರಿಕ್‌ ಟನ್‌ ಕರೆನ್ಸಿ ಪೇಪರ್‌ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಈ ಘಟಕದಿಂದಾಗಿ ಕರೆನ್ಸಿ ಪೇಪರ್‌ಗೆಂದು ವ್ಯಯಿಸುತ್ತಿದ್ದ ಮೊತ್ತದಲ್ಲಿ ಸುಮಾರು 1,500 ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ.