ಸಾಂದರ್ಭಿಕ ಚಿತ್ರ.
COVER STORY

ಭವ್ಯ ಭಾರತದ ತುಂಬ ‘ಶೈಕ್ಷಣಿಕ ಸಾಲ’ ಹೊತ್ತು ಅಲೆಯುತ್ತಿದ್ದಾರೆ ನಿರುದ್ಯೋಗಿ ಯುವಜನರು

2013ರ ಮಾರ್ಚ್‌ ತಿಂಗಳ ವೇಳೆಗೆ ದೇಶದ ಸಾರ್ವಜನಿಕ ಬ್ಯಾಂಕ್‌ಗಳು 48,382 ಕೋಟಿ ರುಪಾಯಿಗಳ ಶೈಕ್ಷಣಿಕ ಸಾಲವನ್ನು ನೀಡಿದ್ದವು. ಈ ಮೊತ್ತ 2016ರ ಡಿಸೆಂಬರ್‌ ವೇಳೆಗೆ 72,336 ಕೋಟಿ ರೂಪಾಯಿಗಳನ್ನು ತಲುಪಿತ್ತು.

ಸುನೀಲ್‌; ಮೂಲತಃ ಚಿತ್ರದುರ್ಗ ಸಮೀಪದ ಹಳ್ಳಿಯೊಂದರ ಯುವಕ. ಚಿತ್ರದುರ್ಗ ನಗರದ ಕಾಲೇಜೊಂದರಲ್ಲೇ ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ ಪದವಿಯನ್ನು ಪೂರ್ಣಗೊಳಿಸಿದ್ದರು. ಉನ್ನತ ವಿದ್ಯಾಭ್ಯಾಸ ಮಾಡುವ ಕನಸೇನೋ ಇತ್ತು. ಆದರೆ ಅದಕ್ಕೆ ಮನೆಯ ಆರ್ಥಿಕ ಪರಿಸ್ಥಿತಿ ಪೂರಕವಾಗಿರಲಿಲ್ಲ. ಅವರಿದ್ದ ಹಳ್ಳಿ ಸತತ ಬರದಿಂದ ಬಳಲುತ್ತಿದ್ದ ಭೂ ಪ್ರದೇಶ. ಕೃಷಿಗೆ ನೀರು ದೊರೆಯದ ಕಾರಣ ಸುಮಾರು ಮೂರು ಎಕರೆಯಷ್ಟು ಹೊಲದಲ್ಲೇ ಉತ್ತಮ ಬೆಳೆ ತೆಗೆಯುವ ಆಸೆಯಿಂದ ಸುನೀಲ್‌ ಪೋಷಕರು ಹಿಂದಿದೆಯೇ ಹಲವಾರು ಕೊಳವೆ ಬಾವಿಗಳನ್ನು ತೋಡಿಸಿದ್ದರು. ಆದರೆ ಒಂದರಲ್ಲೂ ಕೂಡ ನೀರು ಸಿಗಲಿಲ್ಲ. ಮೊದಲೇ ಆರ್ಥಿಕವಾಗಿ ಹಿಂದುಳಿದ್ದಿದ್ದ ಕುಟುಂಬ, ಬೋರ್‌ ವೆಲ್‌ ಕೊರೆಸುವ ಸಲುವಾಗಿ ಲಕ್ಷಗಟ್ಟಲೇ ಸಾಲ ಮಾಡಿಕೊಂಡಿತ್ತು.

ಇರುವ ಸಾಲವನ್ನೇ ತೀರಿಸುವ ದಾರಿ ಇಲ್ಲದಿರುವಾಗ ಮಗನ ವಿದ್ಯಾಭ್ಯಾಸಕ್ಕೆಂದು ಸಾಲ ಪಡೆಯುವ ತ್ರಾಣ ಸುನಿಲ್‌ ತಂದೆಗಿರಲಿಲ್ಲ. ತನಗಾಗಿ ತಂದೆ ಸಾಲ ಮಾಡಬೇಕು ಎಂಬ ಮನಸ್ಥಿತಿಯೂ ಕೂಡ ಸುನಿಲ್‌ಗಿರಲಿಲ್ಲ. ಆ ವೇಳೆಯಲ್ಲಿಯೇ ಸ್ನೇಹಿತರಿಂದ ಸುನೀಲ್‌ ವಿದ್ಯಾಭ್ಯಾಸಕ್ಕೆಂದು ಬ್ಯಾಂಕ್‌ಗಳು ನೀಡುವ ಸಾಲದ ಬಗ್ಗೆ ತಿಳಿದಿದ್ದರು. ಸ್ನೇಹಿತರ ಜತೆಗೆ ಶಿಕ್ಷಣ ಸಾಲಕ್ಕಾಗಿ ಹತ್ತಿರದ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಿದ್ದರು. ಸ್ನೇಹಿತರ ಜತೆಗೆ ಸುನೀಲ್‌ಗೂ ಕೂಡ ಶಿಕ್ಷಣ ಸಾಲ ಮಂಜೂರಾಗಿತ್ತು. ಸುನೀಲ್‌ರ ಉನ್ನತ ಶಿಕ್ಷಣದ ಕನಸಾಗುವತ್ತ ಸಾಗಿತ್ತು. ಬೆಂಗಳೂರಿನ ಪ್ರತಿಷ್ಟಿತ ಕಾಲೇಜಿಗೆ ಎಂಸಿಎ ಪದವಿಗೆ ಸೇರ್ಪಡೆಗೊಂಡ ಸುನೀಲ್‌ 3 ವರ್ಷಗಳ ಕಾಲ ಬೆಂಗಳೂರಿನಲ್ಲಿಯೇ ಇದ್ದುಕೊಂಡು ಮಾಸ್ಟರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಇದಕ್ಕಾಗಿ ಸುನಿಲ್‌ ಸುಮಾರು 3.30 ಲಕ್ಷ ಹಣವನ್ನು ಬ್ಯಾಂಕ್‌ನಿಂದ ಸಾಲವಾಗಿ ಪಡೆದಿದ್ದರು.

ವಿದ್ಯಾಭ್ಯಾಸ ಮುಗಿದ ನಂತರ ಸಾಲವನ್ನು ಮರುಪಾವತಿ ಕಂತುಗಳನ್ನು ಆರಂಭಿಸಲು 1 ವರ್ಷ ಅವಕಾಶವಿತ್ತು. ಅಷ್ಟರೊಳಗೆಯೇ ಸುನಿಲ್‌ ಉದ್ಯೋಗ ಹುಡುಕಿಕೊಳ್ಳಬೇಕಿತ್ತು. ಕೆಲದಿನಗಳ ಕಾಲ ತನ್ನ ಹಳ್ಳಿಯಲ್ಲಿ ದಿನ ಸವೆಸಿ ಮತ್ತೆ ಬೆಂಗಳೂರಿಗೆ ಹಿಂತಿರುಗಿದ ಸುನೀಲ್‌ ಉದ್ಯೋಗದ ಭೇಟೆಗೆ ತೊಡಗಿದ್ದರು. ಕೆಲಸಗಳೇನೋ ಇದ್ದವು. ಆದರೆ ಸುನೀಲ್‌ ವಿದ್ಯಾಭ್ಯಾಸಕ್ಕೆಂದು ಮಾಡಿದ ಸಾಲವನ್ನು ತೀರಿಸುವಷ್ಟು ಸಂಬಳ ಎಲ್ಲಿಯೂ ಕೂಡ ದೊರೆಯಲಿಲ್ಲ.

ನೋಡು ನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದುಹೋಯಿತು. ಅನಿವಾರ್ಯವಾಗಿ ಸುನಿಲ್ ಸಿಕ್ಕ ಕೆಲಸವನ್ನು ಒಪ್ಪಿಕೊಂಡರು. ಆದರೆ ಸುತ್ತಲಿನ ಜನರ ಮಧ್ಯೆ ತೀವ್ರ ಮುಜುಗರವನ್ನು ಅನುಭವಿಸಬೇಕಾಯಿತು. ‘ಈ ಕೆಲಸವನ್ನು ಮಾಡಲು ಪಿಯುಸಿ ಓದಿದ್ದರೆ ಸಾಕಾಗುತ್ತಿತ್ತು’ ಎಂಬ ಚುಚ್ಚುನುಡಿಗಳು ಸುನೀಲ್‌ರನ್ನು ಎಡಬಿಡದೆ ಕಾಡತೊಡಗಿದವು. ತನ್ನ ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗವನ್ನೇ ಮಾಡಬೇಕು ಎಂದು ತೀರ್ಮಾನಿಸಿಕೊಂಡ ಸುನೀಲ್‌ ಉನ್ನತ ಹುದ್ದೆಗಳಿಗಾಗಿ ಹುಡುಕಾಡುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಸಿದ್ಧರಾಗತೊಡಗಿದರು.

ಸುನೀಲ್‌ ಎಂಸಿಎ ಪದವಿ ಮುಗಿಸಿ 2018ಕ್ಕೆ 5 ವರ್ಷಗಳೇ ಕಳೆಯುತ್ತ ಬಂದವು. ಇವತ್ತಿಗೂ ಕೂಡ ತಾನು ಪಡೆದ ಸಾಲದಲ್ಲಿ ಒಂದು ರೂಪಾಯಿನ್ನೂ ಕೂಡ ತೀರಿಸಲು ಸುನೀಲ್‌ರಿಂದ ಸಾಧ್ಯವಾಗಿಲ್ಲ. 3.30 ಲಕ್ಷದ ಜತೆಗೆ ಬಡ್ಡಿಯೂ ಸೇರಿ ಇವತ್ತಿಗೆ ಸುನೀಲ್‌ ಬ್ಯಾಂಕ್‌ಗೆ ತೀರಿಸಬೇಕಿರುವ ಶೈಕ್ಷಣಿಕ ಸಾಲದ ಮೊತ್ತ 6 ಲಕ್ಷ ಮೀರಿದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಇದು ಸುನೀಲ್‌ ಒಬ್ಬರ ಕತೆಯಲ್ಲ. ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣ ಪೂರೈಸಿ, ತಕ್ಕದಾದ ಉದ್ಯೋಗ ದೊರೆಯದೆ, ಸಾಲವನ್ನೂ ತೀರಿಸಲಾಗದೇ ಪರದಾಡುತ್ತಿರುವ ಸಹಸ್ರಾರು ಸ್ನಾತಕೋತ್ತರ ಪದವೀಧರರ ವ್ಯಥೆ. ಇದು ಸತ್ಯ ಎನ್ನುವುದನ್ನು ಸದ್ಯದ ಅಂಕಿ ಅಂಶಗಳು ಸ್ಪಷ್ಟ ಪಡಿಸುತ್ತಿವೆ. ವರದಿಗಳ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಸಾಲ ತೆಗೆದುಕೊಳ್ಳುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ವಸೂಲಾಗದ ಶೈಕ್ಷಣಿಕ ಸಾಲದ ಮೊತ್ತ ಏರಿಕೆಯಾಗುತ್ತಿದೆ.

ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುವ ದೃಷ್ಟಿಯಿಂದ 2001ರಲ್ಲಿ ಅಂದಿನ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಶೈಕ್ಷಣಿಕ ಸಾಲವನ್ನು ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದರು. ಅಲ್ಲಿಂದ 2013ರ ಮಾರ್ಚ್‌ ತಿಂಗಳ ವೇಳೆಗೆ ದೇಶದ ಸಾರ್ವಜನಿಕ ಬ್ಯಾಂಕ್‌ಗಳು 48,382 ಕೋಟಿ ರುಪಾಯಿಗಳ ಶೈಕ್ಷಣಿಕ ಸಾಲವನ್ನು ನೀಡಿದ್ದವು. ಈ ಮೊತ್ತ 2016ರ ಡಿಸೆಂಬರ್‌ ವೇಳೆಗೆ 72,336 ಕೋಟಿ ರೂಪಾಯಿಗಳನ್ನು ತಲುಪಿತ್ತು. ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಸುದ್ದಿ ಸಂಸ್ಥೆ ದಾಖಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಿಂದಾಗಿ ಈ ಅಂಕಿ ಅಂಶಗಳು ಬಯಲಾಗಿದ್ದವು.

2013ರ ಮಾರ್ಚ್‌ ಅವಧಿಯಲ್ಲೇ ಶೈಕ್ಷಣಿಕ ಸಾಲದ ಒಟ್ಟು ಮೊತ್ತದಲ್ಲಿ 2,615 ಕೋಟಿ ರೂಪಾಯಿಗಳನ್ನು ಬ್ಯಾಂಕ್‌ಗಳು ವಸೂಲಾಗದ ಸಾಲ ಎಂದು ಘೋಷಿಸಿದ್ದವು. 2016ರ ಡಿಸೆಂಬರ್ ವೇಳೆಗೆ ಈ ಮೊತ್ತ 6,336 ಕೋಟಿ ರೂಪಾಯಿಗಳನ್ನು ತಲುಪಿದೆ. 3 ವರ್ಷಗಳ ಅವಧಿಯಲ್ಲಿ ವಸೂಲಾಗದ ಶೈಕ್ಷಣಿಕ ಸಾಲದ ಪ್ರಮಾಣ ಶೇ.142ರಷ್ಟು ಏರಿಕೆ ಕಂಡಿದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಹಿಂದೆಯೇ ಸಾಲ ಪಡೆದು ತೀರಿಸಲಾಗದೇ ಹೆಣಗುತ್ತಿರುವವರನ್ನು ಕಂಡು ಹೊಸತಲೆಮಾರಿನ ಯುವಜನರೂ ಕೂಡ ಶೈಕ್ಷಣಿಕ ಸಾಲ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. 2015ರಲ್ಲಿ ಶೇ.17ರಷ್ಟು ಅಭಿವೃದ್ಧಿ ದರವನ್ನು ಹೊಂದಿದ್ದ ಶೈಕ್ಷಣಿಕ ಸಾಲ 2017ರ ವೇಳೆಗೆ ಶೇ.15ಕ್ಕೆ ಇಳಿಕೆಯಾಗಿದೆ. ಇದೇ ವೇಳೆ, ಒಟ್ಟಾರೆ ಶೈಕ್ಷಣಿಕ ಸಾಲದ ಮೊತ್ತದಲ್ಲಿ ಶೇ.5.7ರಷ್ಟಿದ್ದ ಎನ್‌ಪಿಎ ಪ್ರಮಾಣ 2017ರ ಅಂತ್ಯಕ್ಕೆ ಶೇ.7.7 ತಲುಪಿದೆ. 2018ರ ಜೂನ್‌ ಅವಧಿಗೆ ಈ ಪ್ರಮಾಣ ಶೇ.9ನ್ನು ತಲುಪಿದೆ.

ದೇಶದಲ್ಲಿ ಒಟ್ಟಾರೆ ಶೈಕ್ಷಣಿಕ ಸಾಲ ಪಡೆದಿರುವವರ ಪೈಕಿ ದಕ್ಷಿಣ ಭಾರತದವರ ಪ್ರಮಾಣವೇ ಶೇ.56ನ್ನು ದಾಟುತ್ತದೆ. ಪೂರ್ವ ಭಾರತದ ರಾಜ್ಯಗಳು ಶೇ.13ರಷ್ಟು ಶೈಕ್ಷಣಿಕ ಸಾಲವನ್ನು ಪಡೆದಿದ್ದರೆ, ಪಶ್ಚಿಮ ಭಾರತದ ರಾಜ್ಯಗಳು ಶೇ.12ರಷ್ಟು ಹಾಗೂ ಮಧ್ಯಭಾರತದ ರಾಜ್ಯಗಳು ಶೇ.10ರಷ್ಟು ಸಾಲವನ್ನು ಪಡೆದಿವೆ. ಈಶಾನ್ಯ ರಾಜ್ಯಗಳು ಪಡೆದಿರುವ ಶೈಕ್ಷಣಿಕ ಸಾಲ ಕೇವಲ ಶೇ.1ರಷ್ಟು ಮಾತ್ರ. ತಮಿಳುನಾಡು ಮತ್ತು ಕೇರಳ ರಾಜ್ಯಗಳು ಶೈಕ್ಷಣಿಕ ಸಾಲ ನೀಡಿದ ರಾಜ್ಯಗಳ ಪೈಕಿ ಮೊದಲನೇ ಸ್ಥಾನದಲ್ಲಿವೆ. ಹೆಚ್ಚು ಸಾಲದ ಮೊತ್ತ ಹಿಂತಿರುಗಿಸಿಕೊಳ್ಳಲು ಸಾಧ್ಯವಾಗದೇ ಇರುವುದೂ ಕೂಡ ಈ ರಾಜ್ಯಗಳಲ್ಲೇ.

ಭಾರತದಲ್ಲಿ ಒಟ್ಟು 864 ವಿಶ್ವವಿದ್ಯಾಲಯಗಳು, 40,026 ಕಾಲೇಜುಗಳು ಮತ್ತು 11,669 ಸ್ವಾಯತ್ತ ವಿದ್ಯಾ ಸಂಸ್ಥೆಗಳಿವೆ. ಇವುಗಳ ಪೈಕಿ ಶೇ.78ರಷ್ಟು ಭಾಗವನ್ನು ಖಾಸಗಿ ಒಡೆತನಕ್ಕೆ ಸೇರಿವೆ. ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಿತಿಮೀರಿದ ಶುಲ್ಕವೂ ಕೂಡ ಶೈಕ್ಷಣಿಕ ಸಾಲ ಪಡೆಯಲು ಮುಖ್ಯ ಕಾರಣಗಳಲ್ಲೊಂದು ಎನ್ನಲಾಗಿದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

‘ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಹೇಳುವಂತೆ, ಈ ಮಟ್ಟದಲ್ಲಿ ಶೈಕ್ಷಣಿಕ ಸಾಲ ವಸೂಲಾಗದಿರಲು ಕಾರಣವಾಗಿರುವುದು ಸರ್ಕಾರದ ನೀತಿಗಳು. ಪ್ರಮುಖವಾಗಿ ಅಂಧ್ರ ಪ್ರದೇಶ, ಕರ್ನಾಟಕ ಮತ್ತು ತಮಿಳುನಾಡುಗಳಲ್ಲಿ ಉದ್ಯೋಗಗಳ ಲಭ್ಯತೆಗೆ ತಕ್ಕಂತೆ ಕಾಲೇಜುಗಳನ್ನು ತೆರೆಯುವುದರ ಬದಲು ಮನಬಂದಂತೆ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ಮಾಡಿಕೊಟ್ಟಿರುವುದೇ ಇದಕ್ಕೆ ಕಾರಣ. ಇದರಲ್ಲಿ ಸಾಲ ಪಡೆದವರ ತಪ್ಪೇನೂ ಇಲ್ಲ, ಉದ್ಯೋಗದ ಕನಸನ್ನೊತ್ತು ಶೈಕ್ಷಣಿಕ ಸಾಲ ಪಡೆದವರಿಗೆ ಉದ್ಯೋಗವೇ ಇಲ್ಲವಾಗಿರುವಾಗ ಸಾಲವನ್ನು ಮರುಪಾವತಿ ಮಾಡಿ ಎಂದು ಕೇಳುವುದೂ ಕೂಡ ಅಸಾಧ್ಯ.

ನಾಯಿಕೊಡೆಯಂತೆ ತಲೆ ಎತ್ತುತ್ತಿರುವ ವಿದ್ಯಾ ಸಂಸ್ಥೆಗಳ ಜತೆಗೆ ಹಣಕ್ಕೆ ಸರ್ಟಿಫಿಕೇಟ್‌ಗಳನ್ನು ಮಾರುವ ಕಾಲೇಜುಗಳ ಸಂಖ್ಯೆಯೂ ಕೂಡ ಹೆಚ್ಚಾಗಿವೆ. ಶ್ರಮ ಪಟ್ಟು ಓದಿದ ವಿದ್ಯಾರ್ಥಿಗಳಿಗೆ ಉದ್ಯೋಗ ಎನ್ನುವುದು ಮರೀಚಿಕೆಯಾಗುತ್ತಿದೆ. ಉದ್ಯೋಗಗಳ ಕೊರತೆ ಇರುವ ಸಂಧರ್ಭದಲ್ಲೇ ಇರುವ ಉದ್ಯೋಗಗಳೂ ಕೂಡ ಕಾಣೆಯಾಗುತ್ತಿವೆ. ಪದವಿ, ಸ್ನಾತಕೋತ್ತರ ಪದವಿ ಪಡೆದು 15,000 ಕಡಿಮೆ ಸಂಬಳ ಪಡೆಯುತ್ತಿರುವ ಯುವಜನರಲ್ಲಿ ಈ ಸಂಬಳಕ್ಕೇಕೆ ಹಲವಾರು ವರ್ಷಗಳನ್ನು ಮೀಸಲಿಟ್ಟು, ದುಡ್ಡು ಖರ್ಚು ಮಾಡಿ ಓದಬೇಕಿತ್ತು ಎಂಬ ಭಾವ ಬಲಿಯುತ್ತಿದೆ. ಸಾಲ ಮಾಡಿ ಓದಿದವರಲ್ಲಂತು ಈ ಭಾವನೆ ಗಟ್ಟಿಯಾಗಿಯೇ ಬೇರೂರಿದೆ. ಬದುಕು ಮಾಡುವುದಕ್ಕೇ ಕಷ್ಟವಾಗಿರುವ ಸಂಧರ್ಭ ಇದು.

ಬ್ಯಾಂಕ್‌ಗಳು ನೀಡಿದ ಶಿಕ್ಷಣ ಸಾಲದ ಎಲ್ಲಾ ಮೊತ್ತವನ್ನೂ ಹಿಂತಿರುಗಿಸಿಕೊಳ್ಳಲು ಸಾಧ್ಯವಾಗದೇ ‘ವಸೂಲಾಗದ ಹಣ’ ಎಂದು ಘೋಷಿಸುತ್ತಿರುವ ಮಾಹಿತಿಯನ್ನು ತಿಳಿದಿರುವ ಸುನೀಲ್‌, ನನ್ನ ಸಾಲವೂ ಕೂಡ ಹೀಗೆಯೇ ಘೋಷಣೆಯಾಗಬಹುದೇ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. 6 ಲಕ್ಷ ರುಪಾಯಿಗಳು ನನಗೆ ಅತಿದೊಡ್ಡ ಮೊತ್ತ ಎನ್ನುವ ಸುನೀಲ್‌ ಹೇಳುವಂತೆ ಮನೆಯನ್ನು ನಿಭಾಯಿಸುವುದರ ಜತೆಗೆ ಈ ಮೊತ್ತದ ಸಾಲ ತೀರಿಸಲು ಅವರಿಗೆ ಕಡಿಮೆಯೆಂದರೂ 10 ವರ್ಷಗಳು ಬೇಕು. ಆ ವೇಳೆಗೆ 6 ಲಕ್ಷವಿರುವ ಸಾಲದ ಮೊತ್ತ ಅದರ ದುಪ್ಪಟ್ಟಾಗುತ್ತದೆ. ಸಾಲ ಪಡೆದು ಓದಿದ್ದಕ್ಕಿಂತ ಸುಮ್ಮನಿದ್ದಿದ್ದರೇ ಚಂದವಿತ್ತೇನೋ ಎಂಬ ಬೇಸರದ ಮಾತು ಸುನೀಲ್‌ರಿಂದ ವ್ಯಕ್ತವಾಗುತ್ತವೆ.

ಸುನೀಲ್‌ರಂತಹ ಯುವಜನರು ತಮ್ಮ ಸಾಲವೂ ಕೂಡ ವಸೂಲಾಗದ ಸಾಲ ಎಂದು ಘೋಷಣೆಯಾಗಲಿ ಎಂದು ಬಯಸುವುದರಲ್ಲಿ ಯಾವ ತಪ್ಪೂ ಇಲ್ಲ ಅಲ್ವಾ?