samachara
www.samachara.com
‘ಸಂವಿಧಾನ V/S ಮನುಸ್ಮೃತಿ’: ಸುಟ್ಟಿದ್ದರಿಂದ ಸಿಕ್ಕಿದ್ದಾದರೂ ಏನು?
COVER STORY

‘ಸಂವಿಧಾನ V/S ಮನುಸ್ಮೃತಿ’: ಸುಟ್ಟಿದ್ದರಿಂದ ಸಿಕ್ಕಿದ್ದಾದರೂ ಏನು?

ದೆಹಲಿಯ ಜಂತರ್‌ಮಂತರ್‌ನಲ್ಲಿ ಮೀಸಲಾತಿ ವಿರೋಧಿ ಗುಂಪೊಂದು ಸಂವಿಧಾನವನ್ನು ಸುಟ್ಟಿತು. ಪ್ರತಿರೋಧವಾಗಿ ಮೈಸೂರಿನ ಯುವಕರು ಮನುಸ್ಮೃತಿಯ ಜತೆಗೆ ದೇವರ ಫೋಟೋಗಳಿಗೆ ಬೆಂಕಿ ಇಟ್ಟರು. ಇದರಿಂದ ದೊರೆತದ್ದೇನು ಎನ್ನುವುದು ಸಧ್ಯದ ಪ್ರಶ್ನೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಭಾರತೀಯ ಸಂಸತ್ತು ಸಂವಿಧಾನವನ್ನು ತನ್ನ ಕಾನೂನುಗಳನ್ನಾಗಿ ಅಂಗೀಕರಿಸಿದ ದಿನದಿಂದಲೂ ಕೂಡ ದೇಶಾದ್ಯಂತ ಪರ ವಿರೋಧಗಳ ಚರ್ಚೆ ನಡೆಯುತ್ತಲೇ ಬಂದಿದೆ. ಸಂವಿಧಾನದೊಳಗಿನ ಜಾತಿ ಆಧಾರಿತ ಮೀಸಲಾತಿ ಇನ್ನೂ ಹೆಚ್ಚಿನ ವಿರೋಧಗಳನ್ನು ಎದುರಿಸುತ್ತಿದೆ. ಈ ಮೀಸಲಾತಿಗೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿಯಲ್ಲಿ ನಡೆದ ಪ್ರತಿಭಟನೆ ಈಗ ಚರ್ಚೆಗೆ ದಾರಿಯಾಗಿದೆ.

ಶುಕ್ರವಾರ ದೆಹಲಿಯ ಜಂತರ್‌ಮಂತರ್‌ನಲ್ಲಿ ‘ಯೂಥ್‌ ಫಾರ್‌ ಈಕ್ವಾಲಿಟಿ’ ಹೆಸರಿನ ಸಂಘಟನೆಯೊಂದು ಜಾತಿ ಆಧಾರಿತ ಮೀಸಲಾತಿಯನ್ನು ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿತ್ತು. ಈ ವೇಳೆ ಅಂಬೇಡ್ಕರ್‌ ಹಾಗೂ ಸಂವಿಧಾನ ವಿರೋಧಿ ಘೋಷಣೆಗಳನ್ನು ಕೂಗಿದ ಸಂಘಟನೆಯ ಸದಸ್ಯರು, ಸಂವಿಧಾನದ ಪ್ರತಿಗಳನ್ನು ಸುಟ್ಟರು.

2006ರ ಅವಧಿಯಲ್ಲಿ ದೇಶದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಸೇರಿ ಹುಟ್ಟು ಹಾಕಿಕೊಂಡಿದ್ದ ಈ ಸಂಘಟನೆಯ ಮೂಲ ಉದ್ದೇಶವೇ ಜಾತಿ ಆಧಾರಿತ ಮೀಸಲಾತಿಯನ್ನು ಇಲ್ಲವಾಗಿಸುವುದು. ಇದರ ಭಾಗವಾಗಿಯೇ ನಡೆದ ಹೋರಾಟದಲ್ಲಿ ಸಂವಿಧಾನವನ್ನು ಸುಡಲಾಗಿದೆ. ಸಂವಿಧಾನವನ್ನು ಸುಡುವ ವಿಡಿಯೋ ತುಣುಕೊಂದು ದೇಶಾದ್ಯಂತ ವೈರಲ್ ಆಗಿದೆ. ಈ ಸಂಘಟನೆಯ ಸದಸ್ಯರ ವಿರುದ್ಧ ದೂರು ಕೂಡ ದಾಖಲಾಗಿದೆ.

ದೇಶಾದ್ಯಂತ ಸಂವಿಧಾನವನ್ನು ಸುಟ್ಟ ವಿಷಯ ಚರ್ಚೆಗೆ ಬರುತ್ತಿರುವಾಗಲೇ ಕರ್ನಾಟಕದಲ್ಲೂ ಕೂಡ ಹಲವರು ಇದನ್ನು ವಿರೋಧಿಸಿದ್ದಾರೆ. ಮೈಸೂರಿನ ಹಲವಾರು ಯುವಕರು ಏಕಾಏಕಿ ಪ್ರತಿಭಟನೆ ನಡೆಸಿದ್ದಾರೆ. ಭಗವದ್ಗೀತೆ, ಮನುಸ್ಮೃತಿಗಳ ಜತೆಗೆ ರಾಮ, ಕೃಷ್ಣ, ಲಕ್ಷ್ಮಿ, ಸರಸ್ವತಿಯರ ಫೋಟೋಗಳನ್ನೂ ಕೂಡ ಬೆಂಕಿಗೆ ಹಾಕಿ ತಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ಬಲ್ಲಾಳ ವೃತ್ತದಲ್ಲಿ ನಡೆದ ಈ ಘಟನೆ ಈಗ ಸಂವಿಧಾನವನ್ನು ಒಪ್ಪುವವರಲ್ಲಿಯೇ ಪರವಿರೋಧಗಳ ಚರ್ಚೆ ಹುಟ್ಟುಹಾಕಿದೆ. ಪ್ರಾಚೀನ ಗ್ರಂಥಗಳ ಜತೆಗೆ ದೇವರ ಫೋಟೋಗಳನ್ನು ಸುಟ್ಟ ಈ ಕ್ರಮವನ್ನು ಕೆಲವರು ಶ್ಲಾಘಿಸಿದ್ದರೆ, ಇನ್ನೂ ಹಲವರು ಇದು ಪ್ರತಿರೋಧವಲ್ಲ, ಪ್ರತೀಕಾರ ಎಂದಿದ್ದಾರೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಹಾರೋಹಳ್ಳಿ ರವೀಂದ್ರ, ಭಗವದ್ಗೀತೆಯನ್ನು ಸುಟ್ಟಿದ್ದರಲ್ಲಿ ಯಾವ ತಪ್ಪೂ ಕೂಡ ನಮಗೆ ಕಂಡಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. “ನಮಗೆ ಶ್ರೇಷ್ಟವೆನಿಸುವ ಸಂವಿಧಾನವನ್ನು ಅದರ ವಿರೋಧಿಗಳು ಸುಟ್ಟಿದ್ದಾರೆ. ಆದರೆ ಅವರು ಶ್ರೇಷ್ಟ ಎಂದು ಭಾವಿಸುವ ಭಗವದ್ಗೀತೆಯನ್ನು ನಾವು ಸುಟ್ಟಿದ್ದೇವೆ. ಸಮಾನತೆಯನ್ನು ಸಾರುವ ಸಂವಿಧಾನವನ್ನು ಅವರು ಸುಡಬೇಕಾದರೆ ಅಸಮಾನತೆಯನ್ನು ಬೋಧಿಸುವ ಭಗವದ್ಗೀತೆಯನ್ನೇಕೆ ನಾವು ಸುಡಬಾರದು? ಇದನ್ನು ನಾವು ಪರ್ಯಾಯ ಅಥವಾ ಪ್ರತಿರೋಧ ಎಂದು ಏಕೆ ಪರಿಗಣಿಸಬಾರದು?” ಎಂಬ ಪ್ರಶ್ನೆ ರವೀಂದ್ರ ಅವರದ್ದು.

ಸುಟ್ಟರೆ ಭಿನ್ನಾಭಿಪ್ರಾಯಗಳು ನೀಗಬಲ್ಲವೇ?:

ಸಂವಿಧಾನವನ್ನು ಸುಟ್ಟದ್ದಕ್ಕಾಗಿ ಮನುಸ್ಮೃತಿಯನ್ನೋ ಅಥವಾ ಭಗವದ್ಗೀತೆಯನ್ನೋ ಸುಡುವ ಅಗತ್ಯವಿಲ್ಲ ಎನ್ನುತ್ತಾರೆ ಲೇಖಕ ಬಂಜಗೆರೆ ಜಯಪ್ರಕಾಶ್‌. ಇದರಿಂದ ಯಾವ ಉಪಯೋಗವೂ ಇಲ್ಲ ಎನ್ನುವುದು ಅಭಿಪ್ರಾಯ ಅವರದ್ದು.

“ನಮ್ಮ ಅಸಮಾನತೆಗಳನ್ನು, ಭಿನ್ನಭಿಪ್ರಾಯಗಳನ್ನು ವಿವರಿಸಿ ಹೇಳಲು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಕಾಶವಿದೆ. ನಮ್ಮ ನಮ್ಮ ಹಿನ್ನಲೆಗಳಲ್ಲಿ ನಮಗೆ ನಮ್ಮನಮ್ಮದೇ ಆದ ತರ್ಕಗಳಿರುತ್ತವೆ. ಆ ತರ್ಕಗಳನ್ನು ಬಳಸಿ ವಿವರಿಸಬಹುದು. ಈ ಮೂಲಕ ನಾವು ಯಾರಿಗೆ ಅರಿವು ಮೂಡಿಸಲು ಹೊರಟಿದ್ದೇವೆಯೋ ಅವರಿಗೆ ಆ ವಿಷಯಗಳನ್ನು ತಲುಪಿಸಬಹುದು. ಆದರೆ ಹೀಗೆ ಸುಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಸುಡುವುದು ರಚನಾತ್ಮಕ ಕಾರ್ಯಕ್ರಮವೂ ಅಲ್ಲ ಹಾಗೂ ನಮ್ಮ ಸಂಸ್ಕೃತಿಯೂ ಅಲ್ಲ,” ಎನ್ನುವುದು ಜಯಪ್ರಕಾಶ್ ಮಾತು.

“ಮನುಸ್ಮೃತಿ ನಮ್ಮ ಅಧಿಕೃತ ಗ್ರಂಥವಲ್ಲ. ಅದಕ್ಕೆ ಕಾನೂನಿನ ಮಾನ್ಯತೆಯೂ ಕೂಡ ಇಲ್ಲ. ಅದೊಂದು ಪ್ರಾಚೀನ ಸ್ಮೃತಿ. ಯಾವುದೇ ಪ್ರಾಚೀನ ಸ್ಮೃತಿ, ಗ್ರಂಥ, ಶಾಸ್ತ್ರಗಳನ್ನು ಟೀಕೆ ಮಾಡಲು, ಅದರ ಕುರಿತಾದ ಅಭಿಪ್ರಾಯಗಳನ್ನು ಮಂಡಿಸಲು ಸಂವಿಧಾನವೇ ಸ್ವಾತಂತ್ರ ನೀಡಿದೆ. ಮನುಸ್ಮೃತಿ ಎನ್ನುವುದು ಸಮಾನತೆಯ ವಿರೋಧಿಗಳ ಸಂವಿಧಾನ ಎಂದು ಕರೆಸಿಕೊಳ್ಳುತ್ತಿದೆ. ಆದರೆ ಅದನ್ಯಾರೂ ಪಾಲಿಸುತ್ತಿಲ್ಲ. ಸುಟ್ಟವರೂ ಕೂಡ ಪಾಲಿಸುತ್ತಿಲ್ಲ, ಅದೊಂದು ಶ್ರೇಷ್ಟ ಗ್ರಂಥ ಎಂದು ಹೇಳುವವರೂ ಕೂಡ ಪಾಲಿಸುತ್ತಿಲ್ಲ. ಮನು ಇದ್ದಾಗಲೂ ಕೂಡ ಇದು ಪಾಲನೆಯಾಗುತ್ತಿತ್ತೇ ಎನ್ನುವುದಕ್ಕೆ ನನ್ನದೇ ಆದ ಸಂದೇಹಗಳಿವೆ. ಅದೊಂದು ಆಶಯ ಗ್ರಂಥ. ಇದು ಹೀಗಿದ್ದರೆ ಒಳ್ಳೆಯದು ಎಂದು ಹೇಳುತ್ತದೆ. ಆದರೆ ಭಾರತದಂತಹ ವಿಶಾಲ, ಬಹುತ್ವವನ್ನು ಹೊಂದಿದ್ದ ದೇಶದಲ್ಲಿ ಅದನ್ನು ಯತಾವತ್ತಾಗಿ ಅಳವಡಿಸಲು ಯಾರಿಂದಲೂ ಕೂಡ ಸಾಧ್ಯವಾಗಿರಲಿಲ್ಲ. ಆದ್ದರಿಂದ ಮನಸ್ಮೃತಿಯನ್ನು ಸಂವಿಧಾನಕ್ಕೆ ಸಮಾನಾಂತರವಾಗಿ ಹೋಲಿಸಿ ನೋಡುವ ಅಗತ್ಯವಿಲ್ಲ,” ಎನ್ನುತ್ತಾರೆ ಜಯಪ್ರಕಾಶ್.

ಅಂಬೇಡ್ಕರ್‌ ಮುರ್ದಾಬಾದ್‌, ಸಂವಿಧಾನ್‌ ಮುರ್ದಾಬಾದ್‌ ಎಂಬ ಘೋಷಣೆಗಳನ್ನು ಹಾಕಿ ಸಂವಿಧಾನ ಸುಟ್ಟವರ ಆಲೋಚನೆಗಳೇನು ಎನ್ನುವುದು ಮೇಲ್ನೋಟಕ್ಕೇ ತಿಳಿಯುತ್ತದೆ. ಅವರಿಗೆ ಸಂವಿಧಾನ ನೀಡುತ್ತಿರುವ ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಸಮಾನತೆಗಳ ಬಗ್ಗೆ ಸಮಾಧಾನವಿಲ್ಲ. ಅಂಬೇಡ್ಕರ್‌ ಬಗ್ಗೆ ಅವರಿಗೆ ಅಗೌರವವಿದೆ. ಇದರಿಂದ ಅವರು ದೇಶವನ್ನೇ ಅಗೌರವಿಸುತ್ತಿದ್ದಾರೆ. ಸಂವಿಧಾನವನ್ನು ಇಡೀ ದೇಶವೇ ಅನುಸರಿಸುತ್ತಿದೆ ಮತ್ತು ಅದೇ ಪರಮೋಚ್ಛ ಕಾನೂನು ಎಂದು ಅನುಸರಿಸುತ್ತಿಯಾದ್ದರಿಂದ ಅದನ್ನು ಸುಡುವುದು ಕಾನೂನು ವಿರೋಧಿಯಾದ ಕೃತ್ಯ.
- ಬಂಜಗೆರೆ ಜಯಪ್ರಕಾಶ್‌, ಲೇಖಕ

ಕೆಲವು ವ್ಯಕ್ತಿಗಳಿಂದ ನಡೆದ ಇಂತಹ ಘಟನೆಗಳಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎನ್ನುವುದು ಜಯಪ್ರಕಾಶ್‌ ಮಾತು. “ವ್ಯಕ್ತಿಯಾಗಿ ಅಂಬೇಡ್ಕರ್‌ರ ತತ್ವಗಳು, ಸಂವಿಧಾನದ ಬಗೆಗಿನ ವಿರೋಧಗಳನ್ನು ವ್ಯಕ್ತಪಡಿಸಿದರೆ ಅದು ತಪ್ಪಲ್ಲ, ಎಲ್ಲರಿಗೂ ಎಲ್ಲವೂ ಒಪ್ಪಿಗೆಯಾಗಬೇಕು ಎಂದೇನಿಲ್ಲ. ಅವರವರ ಹಿನ್ನೆಲೆ ಮತ್ತು ಅಲೋಚನೆಗಳ ಮೇಲೆ ಅವರ ನಡೆಗಳು ನಿರ್ಧಾರಿತವಾಗಿರುತ್ತವೆ. ಅಂಬೇಡ್ಕರ್‌ ಬಗ್ಗೆ ಏನೇ ಹೇಳಿದರೂ ಕೂಡ ಅವರನ್ನು ಮೆಚ್ಚುವ ಹಾಗೂ ಆರಾಧಿಸುವ ಕೋಟ್ಯಾಂತರ ಜನ ಇದ್ದೇ ಇದ್ದಾರೆ. ಸಂವಿಧಾನದಿಂದಾಗಿಯೇ ನವ ಭಾರತವೊಂದು ಸೃಷ್ಟಿಯಾಗಿದೆ. ಎಲ್ಲವನ್ನೂ ಪ್ರಶ್ನಿಸುವ, ಪ್ರತಿಕ್ರಿಯಿಸುವ, ಪ್ರತಿರೋಧ ಒಡ್ಡುವ ಅವಕಾಶವನ್ನೂ ಕೂಡ ಸಂವಿಧಾನ ನೀಡಿದೆ. ಆದರೆ ಸೂಕ್ತವೆನಿಸುವ ದಾರಿಯನ್ನು ನಾವು ಆರಿಸಿಕೊಳ್ಳಬೇಕಷ್ಟೇ,” ಎನ್ನುತ್ತಾರೆ ಬಂಜಗೆರೆ ಜಯಪ್ರಕಾಶ್.

ಹೀಗೆ ಸಂವಿಧಾನವನ್ನು, ಮನುಸ್ಮೃತಿ, ಭಗವದ್ಗೀತೆಗಳನ್ನು ಸುಡುವ ಕಾರ್ಯಗಳನ್ನು ಹಲವಾರು ಜನ ತಮ್ಮದೇ ಆದ ರೀತಿಯಲ್ಲಿ ಅರ್ಥೈಸಿದ್ದಾರೆ. ಸಂವಿಧಾನ ಸುಟ್ಟದ್ದಕ್ಕೆ ತೀಕ್ಷ್ಣವಾದ ಪ್ರತಿಕ್ರಿಯೆಯ ಅಗತ್ಯವಿತ್ತು ಎಂಬ ವಾದಗಳ ಜತೆಗೆ, ಅದಕ್ಕೆ ಪ್ರತಿರೋಧ ನೀಡಿದ ದಾರಿ ಬೇರೆಯಾಗಬೇಕಿತ್ತು ಎಂಬ ಅಭಿಪ್ರಾಯಗಳೂ ಕೂಡ ವ್ಯಕ್ತವಾಗಿವೆ.

ಭಿನ್ನ ಭಿನ್ನ ನೆಲಗಟ್ಟಿನ ಜನರು ಸಂವಿಧಾನ ಮತ್ತು ಮನುಸ್ಮೃತಿಗಳನ್ನೇನೋ ಸುಟ್ಟಿದ್ದಾಯಿತು. ಆದರೆ ಸಾಧಿಸಿದ್ದೇನು ಎನ್ನುವುದಕ್ಕೆ ಸದ್ಯಕ್ಕಂತೂ ಉತ್ತರವಿಲ್ಲ. ಅದಕ್ಕಿಂತ ಹೆಚ್ಚಾಗಿ ಕ್ರಿಯೆ- ಪ್ರತಿಕ್ರಿಯೆ, ವಿರೋಧ- ಪ್ರತಿರೋಧಗಳ ನಡುವೆ ಚರ್ಚೆಯಾಗಲೇಬೇಕಾದ ದೇಶದ ಗಂಭೀರ ಸಮಸ್ಯೆಗಳು ಹಿನ್ನೆಲೆಗೆ ಸರಿಯುವ ಅಪಾಯವೂ ಇದೆ.