samachara
www.samachara.com
ಗದ್ದೆಗಿಳಿಯಲಿದ್ದಾರೆ ಸಿಎಂ ಕುಮಾರಸ್ವಾಮಿ: ಪ್ರಚಾರಕ್ಕಿಂತ ಪರಿಣಾಮ ಮುಖ್ಯ...
COVER STORY

ಗದ್ದೆಗಿಳಿಯಲಿದ್ದಾರೆ ಸಿಎಂ ಕುಮಾರಸ್ವಾಮಿ: ಪ್ರಚಾರಕ್ಕಿಂತ ಪರಿಣಾಮ ಮುಖ್ಯ...

ಹಿಂದೆ ಜನಪ್ರಿಯ ಕಾರ್ಯಗಳಿಂದಲೇ ಜನಮನ್ನಣೆ ಗಳಿಸಿದ ಕುಮಾರಸ್ವಾಮಿ ಈಗ ಮತ್ತೊಂದು ಕಾರ್ಯಕ್ಕೆ ಮುಂದಾಗಿದ್ದಾರೆ. ಗದ್ದೆಗಿಳಿದು ಪೈರು ನೆಡಲು ಸಿದ್ಧರಾಗಿದ್ದಾರೆ. ಆದರೆ ನೆಟ್ಟ ಪೈರು ಬೆಳೆ ಬರುತ್ತಾ? 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾಗ ಗ್ರಾಮ ವಾಸ್ತವ್ಯ, ಜನತಾ ದರ್ಶನಗಳಂತಹ ವಿನೂತನ ಕಾರ್ಯಗಳಿಂದಲೇ ಹೆಸರು ಪಡೆದವರು. ಸಾಮಾನ್ಯ ನಾಗರಿಕರ ಅಹವಾಲುಗಳನ್ನು ಆಲಿಸಿ, ಗ್ರಾಮಗಳ ಗಲ್ಲಿಗಳಲ್ಲಿ ವಾಸ್ತವ್ಯ ಹೂಡಿ ಜನಪ್ರಿಯತೆ ಗಳಿಸಿದರು. ಅದೇ ಹಾಳೆ ಹಾದಿಯನ್ನು ಅವರು ಈ ಬಾರಿಯೂ ಹಿಡಿದ ಹಾಗಿದೆ. 

ಆಗಸ್ಟ್‌ 11ರ ಶನಿವಾರ ಬೆಳಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ ಗ್ರಾಮದ ಬಳಿಯ ಗದ್ದೆಗಳಲ್ಲಿ ಕುಮಾರಸ್ವಾಮಿ ಪೈರು ನಾಟಿ ಮಾಡಲಿದ್ದಾರೆ. ಸುಮಾರು 2 ಗಂಟೆಗಳ ಕಾಲ ಇದಕ್ಕಾಗಿ ಮೀಸಲಿಟ್ಟಿರುವ ಕುಮಾರಸ್ವಾಮಿ ಜತೆ 50 ಜನ ಪುರುಷರು ಮತ್ತು ಮಹಿಳೆಯರು ನಾಟಿ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಇವರ ಜತೆಗೆ 25 ಜತೆ ಎತ್ತುಗಳೂ ಕೂಡ ಸಾತ್‌ ನೀಡಲಿವೆ.

ಈ ಕಾರ್ಯಕ್ಕೆ ಸ್ಪೂರ್ಥಿಯಾಗಿರುವುದು ಡಾ. ರಾಜ್‌ಕುಮಾರ್‌ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರದ ರಾಜೀವ ಪಾತ್ರ ಎಂದೂ ಕೂಡ ಹೇಳಲಾಗಿದೆ. ತಮ್ಮ ಈ ಕಾರ್ಯದ ಮೂಲಕ ರೈತರಿಗೆ ಸ್ಪೂರ್ತಿ ತುಂಬಿದಂತಾಗುತ್ತದೆ ಎಂದು ಕುಮಾರಸ್ವಾಮಿ ಚಿಂತಿಸಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ನಾಳೆ ಕುಮಾರಸ್ವಾಮಿಯವರು ಚುಂಚನಕಟ್ಟೆ ಕಾವೇರಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ತೆರಳಲಿದ್ದು, ಈ ಕಾರ್ಯಕ್ರಮದ ಜತೆಗೆ ಮಾರ್ಗ ಮಧ್ಯದಲ್ಲೇ ಇರುವ ಈ ಗದ್ದೆಗಳಲ್ಲಿ ಪೈರು ನಾಟಿ ಮಾಡಲಿದ್ದಾರೆ.

ಜನಪ್ರಿಯ ಮುಖ್ಯಮಂತ್ರಿ?:

ಬಿಜೆಪಿ ಜತೆ ಮೈತ್ರಿ ಸರಕಾರ ರಚಿಸಿ 20-20 ಆಡಳಿತಕ್ಕೆ ಮುಂದಾದ ಕುಮಾರಸ್ವಾಮಿ, ನೇರವಾಗಿ ಜನರ ಸಮಸ್ಯೆಗಳಿಗೇ ಕಿವಿಯಾಗುವತ್ತ ಚಿಂತಿಸಿದ್ದರು. ಇದಕ್ಕೆ ಅವರಿಟ್ಟ ಹೆಸರು ‘ಜನತಾ ದರ್ಶನ’. ದೇಶದಲ್ಲಿ ಮೊದಲ ಭಾರಿಗೆ ದೇಶದ ಜನಗಳ ಅಹವಾಲುಗಳಿಗೆ ನೇರವಾಗಿ ಕಿವಿಯೊಡ್ಡಿದ ಕೀರ್ತಿಯೂ ಕೂಡ ಅವರದ್ದೇ.

ಜತನಾ ದರ್ಶನದ ಭಾಗವಾಗಿ ಪ್ರತಿನಿತ್ಯ ಕುಮಾರಸ್ವಾಮಿ ಮನೆಯಿಂದ ಹೊರಡುವ ಮುಂಚೆ ತಮ್ಮ ನಿವಾಸದ ಬಳಿಯೇ ಹಲವಾರು ಶ್ರೀ ಸಾಮಾನ್ಯರನ್ನು ಭೇಟಿಯಾಗಿ ಆವರ ಕಷ್ಟಗಳನ್ನು ಆಲಿಸಲು ಮುಂದಾದರು. ಕೆಲವರಿಗೆ ಸ್ಥಳದಲ್ಲಿಯೇ ಪರಿಹಾರ ಸಿಕ್ಕರೆ, ಹಲವರಿಗೆ ನಿಮ್ಮ ಸಮಸ್ಯೆಗಳು ಬೇಗನೇ ಪರಿಹಾರವಾಗುತ್ತವೆ ಎಂಬ ಆಶ್ವಾಸನೆ ದೊರೆಯುತ್ತಿತ್ತು. ಅಂಗವಿಕಲರು, ವೃದ್ಧರು, ಮಕ್ಕಳಾದಿಯಾಗಿ ಅನೇಕ ಜನ ತಮ್ಮ ಸಮಸ್ಯೆಗಳಿಗೆ ಪರಿಹಾರವನ್ನೂ ಕೂಡ ಮುಖ್ಯಮಂತ್ರಿಗಳ ಭೇಟಿಯಿಂದ ಪಡೆದುಕೊಂಡಿದ್ದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ (ಸಾಂದರ್ಭಿಕ ಚಿತ್ರ)
ಜನತಾ ದರ್ಶನ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ (ಸಾಂದರ್ಭಿಕ ಚಿತ್ರ)

ಈಗ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿ ತಾನು ‘ಸಾಂದರ್ಭಿಕ ಶಿಶು’ ಎಂದು ಹೇಳುತ್ತಲೇ ಕುಮಾರಸ್ವಾಮಿ, ಹಿಂದೆ ಅಗಾಧ ಜನಮನ್ನಣೆ ದೊರಕಿಸಿಕೊಟ್ಟ ‘ಜನತಾ ದರ್ಶನ’ವನ್ನು ಆರಂಭಿಸಿದ್ದರು. ಮುಖ್ಯಮಂತ್ರಿ ಸ್ಥಾನದ ಜತೆಗೆ ಹಲವಾರು ಖಾತೆಗಳನ್ನು ಯಾರಿಗೂ ನೀಡದೆ ತಮ್ಮ ಹೆಗಲಿಗೇ ಹೇರಿಕೊಂಡು ಆಡಳಿತ ನಡೆಸುವುದರ ಜತೆಗೆ ಜನಗಳ ಅಹವಾಲುಗಳನ್ನು ಕೇಳುವುದು ಕುಮಾರಸ್ವಾಮಿಯವರಿಗೆ ಹೊರೆಯಾಗಿಯೇ ಕಂಡಿತ್ತು. ಆದಾಗ್ಯೂ ಸಹ ಹಲವಾರು ಜನರಿಗೆ ಪರಿಹಾರಗಳನ್ನು ನೀಡಿದ್ದಾರೆ. ಆದರೆ ಅದನ್ನು ನಿಯಮಿತವಾಗಿ ಅವರು ಮಾಡುತ್ತಿಲ್ಲ.

ಆಡಳಿತಾತ್ಮಕ ದೃಷ್ಟಿಯಿಂದ ನೋಡುವುದಾದರೆ ‘ಜನತಾ ದರ್ಶನ’ ಉತ್ತಮವಾದ ಯೋಜನೆಯೇ. ಆದರೆ ಒಬ್ಬ ವ್ಯಕ್ತಿ ತನ್ನ ಆಡಳಿತ ಕಾರ್ಯಗಳ ಜತೆ ಪ್ರತಿನಿತ್ಯ ಅದೆಷ್ಟು ಜನರ ಕಷ್ಟ ನಷ್ಟಗಳಿಗೆ ನೇರ ಪರಿಹಾರ ಸೂಚಿಸಲಾದೀತು ಎಂಬ ಪ್ರಶ್ನೆ ಕುಮಾರಸ್ವಾಮಿ ಮೊದಲ ಬಾರಿ ಮುಖ್ಯ ಮಂತ್ರಿಯಾಗಿದ್ದ ಸಂಧರ್ಭದಲ್ಲೇ ಕೇಳಿಬಂದಿತ್ತು. ಈ ಬಾರಿ ಮುಖ್ಯಮಂತ್ರಿಗಳೇ ಜನತಾ ದರ್ಶನ ಎನ್ನುವುದು ಹಿಂಸೆ ಎಂಬ ಅಭಿಪ್ರಾಯವನ್ನು ಹೊರಹಾಕಿದ್ದರು. ಒಬ್ಬ ವ್ಯಕ್ತಿ ಎಷ್ಟು ಕೆಲಸ ಮಾಡಲು ಸಾದ್ಯ ಎಂದು ನೋಡುವಾಗ ಅವರ ಮಾತು ಸತ್ಯ ಎಂದೇ ಅನಿಸುತ್ತದೆ.

ಈಗ ಕುಮಾರಸ್ವಾಮಿ ತಮ್ಮೊಬ್ಬರ ಕೈಲಿ ಸಾಧ್ಯವಾಗದ ಜನತಾ ದರ್ಶನವನ್ನು ಜಿಲ್ಲಾಧಿಕಾರಿಗಳ ಹೆಗಲಿಗೆ ವರ್ಗಾಯಿಸಿದ್ದಾರೆ. ವಾರದ ಒಂದು ದಿನವನ್ನು ಜಿಲ್ಲಾಧಿಕಾರಿಗಳು ಜಿಲ್ಲೆಯ ಜನರ ಕುಂದು ಕೊರತೆಗಳನ್ನು ಅಲಿಸಿ, ಪರಿಹರಿಸುವಲ್ಲಿಯೇ ಕಳೆಯಬೇಕು ಎಂಬ ಖಡಕ್‌ ಸೂಚನೆ ನೀಡಿದ್ದಾರೆ. ವೀಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲಾಧಿಕಾರಿಗಳ ಜನತಾ ದರ್ಶನದ ಮಾಹಿತಿ ಪಡೆಯುವುದರ ಜತೆಗೆ ಸರಿಯಾಗಿ ಅಹವಾಲುಗಳತ್ತ ಗಮನ ಕೊಡದಿದ್ದರೆ ಕ್ರಮ ಕೈಗೊಳ್ಳುವುದಾಗಿಯೂ ಕೂಡ ಕುಮಾರಸ್ವಾಮಿ ತಿಳಿಸಿದ್ದಾರೆ. ಈಗ ದೊಡ್ಡದೊಂದು ಹೊರೆಯಂತಾಗಿದ್ದ ಜನತಾ ದರ್ಶನವನ್ನು 30 ಜನ ಜಿಲ್ಲಾಧಿಕಾರಿಗಳ ಹೆಗಲಿಗೇರಿಸಿ ಕುಮಾರಸ್ವಾಮಿ ಸ್ವಲ್ಪ ನಿಟ್ಟುಸಿರಿಟ್ಟಿದ್ದಾರೆ.

ಕುಮಾರಸ್ವಾಮಿಯವರಿಗೆ ಜನತಾ ದರ್ಶನದ ನಂತರ ಅತಿಯಾದ ಜನಪ್ರಿಯತೆ ದೊರಕಿಸಿಕೊಟ್ಟ ಮತ್ತೊಂದು ಯೋಜನೆ ‘ಗ್ರಾಮ ವಾಸ್ತವ್ಯ’. ಇದನ್ನು ಪರಿಚಯಿಸಿದವರೂ ಕೂಡ ಕುಮಾರಸ್ವಾಮಿಯವರೇ. ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದಾಗ ಜನರ ಜತೆಗೇ ಇದ್ದು ಅವರ ಕುಂದುಕೊರತೆಗಳನ್ನು ಮನಗಾಣಬೇಕು ಎಂಬ ಯೋಚನೆಯಿಂದ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಆರಂಭಿಸಿದ್ದರು. 2008ರ ವೇಳೆಗೆ ಕುಮಾರಸ್ವಾಮಿಗೆ ಹೃದಯದ ಶಸ್ತ್ರ ಚಿಕಿತ್ಸೆಯಾಗಿತ್ತು. ಆದರೂ ಕೂಡ ಹೆಚ್ಚಿನ ದಿನಗಳ ವಿಶ್ರಾಂತಿ ತೆಗೆದುಕೊಳ್ಳದೇ ಗ್ರಾಮ ವಾಸ್ತವ್ಯ ಮುಂದುವರೆಸಿದ್ದರು.

ಗ್ರಾಮ ವಾಸ್ತವ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ (ಸಾಂದರ್ಭಿಕ ಚಿತ್ರ)
ಗ್ರಾಮ ವಾಸ್ತವ್ಯದಲ್ಲಿ ಎಚ್‌.ಡಿ. ಕುಮಾರಸ್ವಾಮಿ (ಸಾಂದರ್ಭಿಕ ಚಿತ್ರ)

ಉತ್ತರ ಕರ್ನಾಟಕ, ಮಲೆನಾಡು ಭಾಗ, ಮೈಸೂರು ಕರ್ನಾಟಕದ ಭಾಗಗಳಲ್ಲೆಲ್ಲಾ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ನಡೆಸಿದ್ದರು. ಆದರೆ ಕುಮಾರಸ್ವಾಮಿ ವಾಸ್ತವ್ಯ ಹೂಡಿದ ಹಲವು ಹಳ್ಳಿಗಳ ಜನರ ಕೊರತೆಗಳೆಲ್ಲ ನೀಗಲಿಲ್ಲ. ಮೈಸೂರಿನ ಮೇದರ್ ಬ್ಲಾಕ್‌ನಲ್ಲಿನ ಲಕ್ಷಮ್ಮ ಎನ್ನುವವರ ಮನೆಯಲ್ಲಿ ತಂಗಿದ್ದ ಕುಮಾರಸ್ವಾಮಿ, ಲಕ್ಷ್ಮಮ್ಮ ಸೇರಿದಂತೆ ಸುತ್ತಲಿನ 140 ಕುಟುಂಬಗಳಿಗೆ ಮನೆ ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದರು. ಈ ಭರವಸೆಯ ಮಾತುಗಳಿಗೆ ಈಗಾಗಲೇ 11 ವರ್ಷ ಸಂದಿದೆ. ಅದರೂ ಕೂಡ ಲಕ್ಷ್ಮಮ್ಮರ ಗುಡಿಸಲಿದ್ದ ಜಾಗದಲ್ಲಿ ಕುಮಾರಸ್ವಾಮಿಯವರ ಭರವಸೆಯ ಮನೆ ಮಾತ್ರ ನಿರ್ಮಾಣವಾಗಿಲ್ಲ. ಇಂತಹ ಹಲವಾರು ಉದಾಹರಣೆಗಳು ರಾಜ್ಯದಲ್ಲಿವೆ.

ಅಂದು ರಾಜ್ಯದ ದಿನಪತ್ರಿಕೆ ‘ವಿಜಯ ಕರ್ನಾಟಕ’ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡಿದ ಹಳ್ಳಿಗಳ ರಿಯಾಲಿಟಿ ಚೆಕ್ ನಡೆಸಿತ್ತು. ಸಿಎಂ ಬಂದು ಮಲಗೆದ್ದು ಹೋಗುತ್ತಿದ್ದಂತೆ ಅಧಿಕಾರಿಗಳು ಮನೆಗೆ ಅಳವಡಿಸಿದ್ದ ಕಮೋಡು ಸಹಿತ ವಸ್ತುಗಳನ್ನು ಹೊತ್ತೊಯ್ದ ಕತೆಯನ್ನು ಇದು ತೆರೆದಿಟ್ಟಿತ್ತು. ಇದಕ್ಕೆ ಕುಮಾರಸ್ವಾಮಿ ಸುಮಾರು 6 ಪುಟಗಳ ಪ್ರತ್ಯುತ್ತರವನ್ನು ನೀಡಿದ್ದರು.

ಸಾರಾಂಶ ಇಷ್ಟೆ, ಜನಪ್ರಿಯ ಕಾರ್ಯಕ್ರಮಗಳು ಹೊರನೋಟಕ್ಕೆ ಬೀರುವ ಪ್ರಭಾವ ಬೇರೆ, ವಾಸ್ತವದಲ್ಲಿ ತಳಮಟ್ಟದಲ್ಲಿ ಅವುಗಳ ಪರಿಣಾಮ ಬೇರೆ. ಅದು ಜನತಾ ದರ್ಶನ ಇರಲಿ, ಗ್ರಾಮ ವಾಸ್ತವ್ಯ ಇರಲಿ, ಪ್ರಚಾರ ಪಡೆದುಕೊಂಡರು ಪರಿಣಾಮ ಬೀರಿಲ್ಲ ಎಂಬುದು ಈಗಾಗಲೇ ರುಜುವಾತಾಗಿದೆ. ಹೀಗಿರುವಾಗ ಪೈರು ನಾಟಿ ಮಾಡುವುದರಿಂದ ಕುಮಾರಸ್ವಾಮಿ ಏನು ಸಂದೇಶ ನೀಡಲು ಹೊರಟಿದ್ದಾರೆ ಎಂಬ ಪ್ರಶ್ನೆ ಸಹಜವಾಗಿಯೇ ಎದುರಾಗುತ್ತದೆ.

ಮುಖ್ಯಮಂತ್ರಿಯಾದ ನಂತರ ಹಲವಾರು ಹೊಸ ಚಿಂತನೆಗಳ ಮೂಲಕ ಜನಮನ್ನಣೆ ಗಳಿಸುವತ್ತ ನಿರತರಾಗಿರುವ ಕುಮಾರಸ್ವಾಮಿ, ರೈತರನ್ನೇ ತಮ್ಮ ಕೇಂದ್ರವಾಗಿರಿಸಿಕೊಂಡಿದ್ದಾರೆ. ಇದರ ಭಾಗವಾಗಿ ರಾಜ್ಯದಲ್ಲಿ ಇಸ್ರೇಲ್‌ ಕೃಷಿ ಮಾದರಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಉತ್ಸುಕತೆ ತೋರಿಸಿದ್ದಾರೆ. ನಂತರ ಪಕ್ಕದ ಆಂಧ್ರ ಪ್ರದೇಶ ಅಳವಡಿಸಿಕೊಂಡಿರುವ ಶೂನ್ಯ ಬಂಡವಾಳ ಕೃಷಿಯ ಬಗ್ಗೆ ಅಜೀಂ ಪ್ರೇಮ್‌ಜಿ ಜತೆ ಮಾತುಕತೆ ನಡೆಸಿದ್ದರು. ಈಗ ಇವೆಲ್ಲವಕ್ಕಿಂತ ಒಂದು ಹೆಜ್ಜೆ ಮುಂದೆ ಸಾಗಿ ತಾವೇ ನೇರವಾಗಿ ರೈತರ ಗದ್ದೆಗಿಳಿದು ಭತ್ತ ನಾಟಿ ಮಾಡುವ ಕಾರ್ಯಕ್ಕೆ ಸಮಯ ಗೊತ್ತುಮಾಡಿದ್ದಾರೆ.

ಜನಪ್ರಿಯತೆ ಅಷ್ಟೇ ಇದರ ಹಿಂದಿನ ಮೂಲ ಉದ್ದೇಶ ಎನ್ನುತ್ತಾರೆ ಮಂಡ್ಯ ಜಿಲ್ಲೆಯ ಸ್ಥಳೀಯ ಪತ್ರಕರ್ತ ಎಂ.ಬಿ. ನಾಗಣ್ಣ ಗೌಡ. ಇವೆಲ್ಲವೂ ಜನರನ್ನು ಸೆಳೆಯುವ ಸುಲಭ ಮಾರ್ಗಗಳು ಎನ್ನುವುದು ಅವರ ಅಭಿಪ್ರಾಯ.

“ರಾಜಕಾರಣ ಪ್ರಾರಂಭ ಮಾಡಿದಂದಿನಿಂದಲೂ ಕೂಡ ಇವರು ಇಂತಹ ಕಾರ್ಯಗಳನ್ನು ನಡೆಸುತ್ತಲೇ ಬಂದಿದ್ದಾರೆ. ಪಂಚೆ ಉಡುವುದು, ಕಚ್ಚೆ ಕಟ್ಟುವುದು ಇತ್ಯಾದಿಗಳ ಮೂಲಕ ಸ್ಥಳೀಯರ ಭಾವನೆಗಳನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಚುನಾವಣೆಗಳ ಸಂಧರ್ಭದಲ್ಲಿ ಎಷ್ಟು ಕೆಲಸ ಮಾಡಿದ್ದರು ಎನ್ನುವುದಕ್ಕಿಂತ, ಎಷ್ಟು ಮದುವೆಗಳಿಗೆ ಬಂದಿದ್ದರು, ಎಷ್ಟು ತಿಥಿ ಕಾರ್ಯಕ್ರಮಗಳಲ್ಲಿ ಹಾಜಾರಾಗಿದ್ದರು, ಎಷ್ಟು ಜನರ ಮನೆಗಳಲ್ಲಿ ತಂಗಿದ್ದರು ಎನ್ನುವುದು ಹೆಚ್ಚಿನ ಪ್ರಭಾವ ಬೀರುತ್ತದೆ. ಕೆಲಸ ಮಾಡಿದಿದ್ದರೂ ಕೂಡ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಸ್ಥಳೀಯರ ಓಟುಗಳು ಗಟ್ಟಿಯಾಗುತ್ತವೆ,” ಎನ್ನುತ್ತಾರೆ ನಾಗಣ್ಣ ಗೌಡ.

ಮೊದಲ ಬಾರಿಗೆ ಯುವ ಮುಖ್ಯಮಂತ್ರಿ ನಡೆಸಿದ ಇಂತಹ ಕಾರ್ಯಕ್ರಮಗಳು ಸಹಜವಾಗಿಯೇ ಆಕರ್ಷಣೆಯ ಕೇಂದ್ರಬಿಂದುವಾಗಿದ್ದವು. ಆದರೆ ನಾಗಣ್ಣ ಗೌಡರಂತವರು ಇವತ್ತು ವ್ಯಕ್ತಪಡಿಸುವ ವಿಚಾರಗಳ ಹಿನ್ನೆಲೆಯಲ್ಲಿ ನೋಡಿದರೆ, ಜನಪ್ರಿಯ ಕಾರ್ಯಕ್ರಮಗಳಿಗೆ ಮೊದಲಿದ್ದ ಆಕರ್ಷಣೆಗಳು ಕಡಿಮೆಯಾಗಿವೆ. ಹೀಗಾಗಿ, ರೈತರ ಜತೆ ಕೃಷಿಗೆ ಇಳಿಯುವ ಹೊತ್ತಿಗೇ, ಕೃಷಿಯ ವಿಚಾರದಲ್ಲಿ ಗಂಭೀರ ಕ್ರಮಗಳನ್ನೂ ಜನ ನಿರೀಕ್ಷೆ ಮಾಡುತ್ತಾರೆ ಎಂಬುದನ್ನು ಸಿಎಂ ಕುಮಾರಸ್ವಾಮಿ ಮನಗಾಣಬೇಕಿದೆ.

ಮುಖ್ಯಮಂತ್ರಿಯೊಬ್ಬರು ನಮ್ಮ ಜತೆ ನಾಟಿ ಮಾಡುತ್ತಾರೆ ಎನ್ನುವುದು ರೈತರಿಗೆ ಸಂತಸ ನೀಡುವ ಸಂಗತಿ. ಅದನ್ನು ರೈತರು ಮಾನಸಿಕವಾಗಿ ಅನುಭವಿಸಿ ಖುಷಿ ಪಡುತ್ತಾರೆ. ಲಕ್ಷಾಂತರ ಜನ ರೈತರ ಮೇಲೆ ಈ ಕಾರ್ಯಗಳು ಏಕಕಾಲಕ್ಕೆ ಪ್ರಭಾವ ಬೀರುತ್ತವೆ. ಇದು ಅವರಿಗೆಲ್ಲಾ ಚನ್ನಾಗಿ ತಿಳಿದಿದೆ. ಆದ್ದರಿಂದ ದೇವೇಗೌಡರಾಗಲಿ, ಕುಮಾರಸ್ವಾಮಿಯಾಗಲಿ ಇಂತ ಕಾರ್ಯಕ್ರಮಗಳಿಗೆ ತಪ್ಪದೇ ಬರುತ್ತಾರೆ. 
– ಎಂ.ಬಿ. ನಾಗೇಗೌಡ, ಪತ್ರಕರ್ತ.