samachara
www.samachara.com
‘ರಫೇಲ್ ಅಕಾ ಮೋದಿ ಬೋಫೋರ್ಸ್‌’: ಹಗರಣ ಅರ್ಥಮಾಡಿಕೊಳ್ಳಲು ಮುಂದಿಟ್ಟ ಆ 22 ಅಂಶಗಳು...
COVER STORY

‘ರಫೇಲ್ ಅಕಾ ಮೋದಿ ಬೋಫೋರ್ಸ್‌’: ಹಗರಣ ಅರ್ಥಮಾಡಿಕೊಳ್ಳಲು ಮುಂದಿಟ್ಟ ಆ 22 ಅಂಶಗಳು...

ಈ ಪ್ರಕರಣದ ಸುತ್ತ ಅನುಮಾನ ಹುಟ್ಟಲು ಮತ್ತೊಂದು ಕಾರಣವೂ ಇತ್ತು. ಅದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಫ್ರಾನ್ಸ್‌ ಪ್ರವಾಸ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ನಡೆದಿದೆ ಎನ್ನಲಾದ ಆರೋಪಗಳ ಸುತ್ತ ಹೊಸ ಪ್ರಶ್ನೆಗಳನ್ನು ಎತ್ತಿದ್ದಾರೆ ಮಾಜಿ ಬಿಜೆಪಿ ನಾಯಕರಾದ ಯಶವಂತ್‌ ಸಿನ್ಹಾ, ಅರುಣ್‌ ಶೌರಿ ಮತ್ತು ಖ್ಯಾತ ವಕೀಲ ಪ್ರಶಾಂತ್‌ ಭೂಷಣ್.

ಬುಧವಾರ ದೆಹಲಿ ಪ್ರೆಸ್‌ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಈ ಮೂವರು ‘ರಫೇಲ್‌ ಹಗರಣ’ದ ಒಳಹೊರಗನ್ನು ಬಿಚ್ಚಿಟ್ಟಿದ್ದಾರೆ. ಆದರೆ ಈ ವಿಚಾರ ಗುರುವಾರ ಬಹುತೇಕ ಪತ್ರಿಕೆಗಳಲ್ಲಿ ಅಚ್ಚಾಗದೆ ಉಳಿದು ಹೋಗಿದೆ.

ಈ ಪತ್ರಿಕಾಗೋಷ್ಠಿಗೂ ಮುನ್ನ ಮೂವರು ಹಿರಿತಲೆಗಳು ಜಂಟಿಯಾಗಿ ‘ದಿ ವೈರ್‌’ಗೆ ಸುದೀರ್ಘವಾದ ಲೇಖನವೊಂದನ್ನು ಬರೆದಿದ್ದರು. ಅದರ ಸಂಕ್ಷಿಪ್ತ ಅನುವಾದ ಇಲ್ಲಿದೆ. ರಫೇಲ್ ಡೀಲ್ ಹಾಗೂ ಅದು ನಡೆದು ಬಂದ ಹಾದಿಯನ್ನು ಹಾಗೂ ಮೋದಿ ಸರಕಾರದ ಸುತ್ತ ಎದ್ದಿರುವ ವಿವಾದದ ಮೂಲವನ್ನು ಅರ್ಥಮಾಡಿಕೊಳ್ಳಲು ಮೂವರು ಬರೆದ ಈ ಪತ್ರ ಸಹಾಯ ಮಾಡುತ್ತದೆ.

***

ರಫೇಲ್‌ ಡೀಲ್‌ ವಿಚಾರದಲ್ಲಿ ಸರಕಾರ ವಿವಿಧ ಹಂತಗಳಲ್ಲಿ ನಡೆದುಕೊಂಡ ರೀತಿ ಅನುಮಾನಕ್ಕೆ ಕಾರಣವಾಗಿದೆ. ಮುಖ್ಯವಾಗಿ ಡೀಲ್‌ ಬದಲಾದ ರೀತಿ, ಹೇಳಿಕೆ ಬದಲಿಸುತ್ತಿರುವ ರಕ್ಷಣಾ ಸಚಿವರು, ಸ್ನೇಹಕೂಟದಲ್ಲಿರುವ ಮಾಧ್ಯಮಗಳ ಮೂಲಕ ಬಿತ್ತುತ್ತಿರುವ ಸುಳ್ಳು ಸುದ್ದಿಗಳು, ವಿಷಯಗಳನ್ನು ಮುಚ್ಚಿಡಲು ಸರಕಾರ ನಡೆಸುತ್ತಿರುವ ಯತ್ನ, ಇಲ್ಲದ ಗೌಪ್ಯತೆಯನ್ನು ನೆಪ ಮಾಡುತ್ತಿರುವ ರೀತಿ ಜತೆಗೆ ಸಾರ್ವಜನಿಕ ರಂಗದ ವಿಮಾನ ನಿರ್ಮಾಣದಲ್ಲಿ ಅನುಭವವಿರುವ ಎಚ್ಎಎಲ್‌ ಜಾಗದಲ್ಲಿ ಈ ಕ್ಷೇತ್ರದಲ್ಲಿ ಅನುಭವವೇ ಇಲ್ಲದ ಖಾಸಗಿ ಕಂಪನಿಗೆ ಡೀಲ್‌ ನೀಡಿರುವುದು, ಒಪ್ಪಂದದ ಸುತ್ತ ಅನುಮಾನದ ಹುತ್ತವೇಳಲು ಮುಖ್ಯ ಕಾರಣವಾಗಿದೆ.

ಇದೆಲ್ಲವನ್ನೂ ನೋಡಿದಾಗ ನಮಗೆ ಇಲ್ಲಿ ದೊಡ್ಡ ಹಗರಣ ನಡೆದಿದೆ ಎಂದು ಮನವರಿಕೆಯಾಗಿದೆ. ಇಲ್ಲಿ ಅಧಿಕಾರದ ದುರುಪಯೋಗ ನಡೆದಿದೆ. ಮತ್ತು ಇದು ಸಾಮಾನ್ಯ ಹಗರಣವಲ್ಲ. ದೇಶದ ಭದ್ರತೆಗೆ ಮಾರಕವಾಗಿರುವುದಲ್ಲದೆ, ಈಗಾಗಲೇ ಮೇರೆ ಮೀರಿರುವ ರಕ್ಷಣಾ ವೆಚ್ಚಕ್ಕೆ ಇದು ಮತ್ತಷ್ಟು ಹೊರೆಯಾಗಲಿದೆ.

ಹೀಗಾಗಿ, ಈ ಸಂದರ್ಭದಲ್ಲಿ ನಾವು;

  • ಡೀಲ್‌ನ ವಿವರಗಳನ್ನು ಬಹಿರಂಗಪಡಿಸಲು ಕೋರುತ್ತವೆ. ವಿಶೇಷವಾಗಿ ಪಾವತಿ ಮಾಡಿದ ಹಣದ ವಿವರ ಬಹಿರಂಗಪಡಿಸಿ.
  • ಸರಕಾರವು ಒಪ್ಪಂದಕ್ಕೆ  ಇರುವ ಪ್ರಕ್ರಿಯೆಗಳನ್ನು ಸರಿಯಾದ ಮಾರ್ಗದಲ್ಲಿ ಮುಗಿಸದೆ, ಪಡೆದುಕೊಳ್ಳಬೇಕಾದ ಮಾನ್ಯತೆಗಳನ್ನು ಸರಕಾರಿ ಸಂಸ್ಥೆಗಳಿಂದ ಪಡೆದುಕೊಳ್ಳದೆ ಮುಂದಡಿ ಇಟ್ಟಿದೆ.
  • ಇದೀಗ ಒಪ್ಪಂದವನ್ನು ಗೌಪ್ಯವಾಗಿಡಲು ಸರ್ಕಾರ ಪ್ರಯತ್ನಿಸುತ್ತಿದೆ. ಈ ಸತ್ಯವನ್ನು ಶೋಧಿಸಿ ಮಾಧ್ಯಮಗಳು ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಿದೆ.

ಎಂದು ನಾವು ಒತ್ತಾಯಿಸುತ್ತೇವೆ.

ರಫೇಲ್‌ ಏರ್‌ಕ್ರಾಫ್ಟ್‌ ಖರೀದಿಯೆ ಪ್ರಕ್ರಿಯೆನ್ನು ಅರ್ಥ ಮಾಡಿಕೊಳ್ಳುವುದಾದರೆ;

1. ಮೊದಲಿಗೆ 2007ರಲ್ಲಿ ಭಾರತೀಯ ವಾಯುಸೇನೆಯ ಬೇಡಿಕೆ ಮೇರೆಗೆ ಯುಪಿಎ ಸರಕಾರ 126 ಯುದ್ಧ ವಿಮಾನಗಳ ಖರೀದಿಗೆ ಟೆಂಡರ್‌ ಕರೆದಿತ್ತು. ಇದರಲ್ಲಿ ಆರಂಭಿಕ ಖರೀದಿ, ತಂತ್ರಜ್ಞಾನದ ವರ್ಗಾವಣೆ, ಉತ್ಪಾದನೆಗೆ ಲೈಸೆನ್ಸ್‌ ನೀಡುವುದು ಮೊದಲಾದುದನ್ನು ಸರಕಾರ ತನ್ನ ಬೇಡಿಕೆಯಲ್ಲಿ ಸ್ಪಷ್ಟವಾಗಿ ಹೇಳಿತ್ತು.

2. ಸರಕಾರ ಕರೆದ ಟೆಂಡರ್‌ಗೆ ಆರು ಕಂಪನಿಗಳು ಅರ್ಜಿ ಸಲ್ಲಿಸುತ್ತವೆ. ಇದರಲ್ಲಿ ವಿಮಾನದ ಪ್ರಾಯೋಗಿಕ ಪರೀಕ್ಷೆ, ತಾಂತ್ರಿಕ ವಿವರಗಳ ಪರಿಶೀಲನೆಯ ಬಳಿಕ ಡಸಾಲ್ಟ್‌ ಏವಿಯೇಷನ್‌ನ ರಾಫೇಲ್ ಮತ್ತು ಜಿಎಂಬಿಎಚ್‌ (GmbH) ನ ಯೂರೋಫೈಟರ್‌ ಗಳನ್ನು ನಮ್ಮ ನಿರೀಕ್ಷೆಗೆ ತಕ್ಕಂತಿವೆ ಎಂದು 2011ರಲ್ಲಿ ಏರ್‌ಫೋರ್ಸ್‌ ಹೇಳಿತ್ತು. ಇದರ ಪ್ರಕಾರ 2012ರಲ್ಲಿ ಬಿಡ್‌ ಪ್ರಕ್ರಿಯೆ ನಡೆಯುತ್ತದೆ ಮತ್ತು ಡಸಾಲ್ಟ್‌ ಅತೀ ಕಡಿಮೆ ಮೊತ್ತಕ್ಕೆ ಬಿಡ್‌ ಸಲ್ಲಿಸುತ್ತದೆ.

3. ಮುಂದೆ ಇನ್ನೂ ಕಡಿಮೆ ಬೆಲೆಗಾಗಿ ಡಸಾಲ್ಟ್‌ ಜತೆ ಮಾತುಕತೆ ಪ್ರಕ್ರಿಯೆ ಚಾಲ್ತಿಗೆ ಬರುತ್ತದೆ. 2015ರಲ್ಲಿ ಮಾಧ್ಯಮಗಳು ಮುಂದೆ ಬಂದ ಡಸಾಲ್ಟ್‌ ಸಿಇಒ ಎರಿಕ್‌ ಟ್ರಾಫಿಯರ್‌, ‘ಎಚ್‌ಎಎಲ್‌ ಜತೆಗಿನ ಡೀಲ್‌ಗೆ ತಮಗೆ ಒಪ್ಪಿಗೆಯಾಗಿರುವುದನ್ನೂ, ಸದ್ಯದಲ್ಲೇ ಒಪ್ಪಂದ ಅಂತಿಮ ಹಂತಕ್ಕೆ ಬರಲಿರುವುದಾಗಿ’ ಹೇಳುತ್ತಾರೆ.

4. ಒಪ್ಪಂದಕ್ಕೆ ಕುಳಿತುಕೊಳ್ಳುವ ಮೊದಲು ಒಟ್ಟು ಮೂರು ಉದ್ದೇಶಗಳು ಯುಪಿಎ ಸರಕಾರದ ಮುಂದಿದ್ದವು. ಮೊದಲೆನೆಯದು, ಮಿಗ್‌ 21 ಮತ್ತು ಮಿಗ್‌ 27 ಯುದ್ಧ ವಿಮಾನಗಳು ಹಳೆಯದಾಗಿರುವುದರಿಂದ ಆದಷ್ಟು ಬೇಗ ಹೊಸ ಯುದ್ಧ ವಿಮಾನಗಳು ಬೇಕು. ಭಾರತದ ವಿಮಾನ ಉತ್ಪಾದನಾ ಕ್ಷೇತ್ರ ಪುನರುಜ್ಜೀವನಗೋಳ್ಳಬೇಕು. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನವನ್ನು ದೇಶ ಹೊಂದುವಂತಾಗಬೇಕು. ಇದರ ಜತೆಗೆ ಸ್ವದೇಶಿ ಸಂಸ್ಥೆ ಎಚ್‌ಎಎಲ್‌ ದೇಶದಲ್ಲೇ ಯುದ್ಧ ವಿಮಾನಗಳನ್ನು ತಯಾರಿಸುವ ಮಟ್ಟಕ್ಕೆ ಬೆಳೆಯಬೇಕು ಎಂಬ ಗುರಿ ಹಾಕಿಕೊಂಡಿತ್ತು.

5. 126 ವಿಮಾನಗಳ ಡೀಲ್‌ನಲ್ಲಿ 18 ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡ ಸ್ಥಿತಿಯಲ್ಲೇ ಭಾರತಕ್ಕೆ ಬೇಕು. ಉಳಿದ 108ನ್ನು ಭಾರತದಲ್ಲೇ ‘ಎಚ್‌ಎಎಲ್‌’ ನಿರ್ಮಿಸುವುದು; ಇದಕ್ಕಾಗಿ ತಂತ್ರಜ್ಷಾನ ವರ್ಗಾವಣೆ ಒಪ್ಪಂದ ಮಾಡುಕೊಳ್ಳುವುದು ಭವಿಷ್ಯದ ಯೋಜನೆಗಳಾಗಿತ್ತು. 2007ರಲ್ಲಿ ಬಿಡ್‌ ಕರೆದಾಗ 126 ಯುದ್ಧ ವಿಮಾನಗಳಿಗೆ ಸರಕಾರ 42,000 ಕೋಟಿ ರೂಪಾಯಿ ಅಂದಾಜು ವೆಚ್ಚ ಲೆಕ್ಕಹಾಕಿತ್ತು. ಇದರ ಅಂತಿಮ ಮೊತ್ತ ಎಷ್ಟು ಎಂಬುದು ಸಾರ್ವಜನಿಕವಾಗಿ ಲಭ್ಯವಿಲ್ಲ.

ಆದರೆ ದೂರದರ್ಶನಕ್ಕೆ 13 ಏಪ್ರಿಲ್ 2015ರಲ್ಲಿ ನೀಡಿದ್ದ ಸಂದರ್ಶನದಲ್ಲಿ ಡೀಲ್‌ ಬಗ್ಗೆ ಮಾತನಾಡಿದ್ದರು ಅಂದಿನ ರಕ್ಷನಾ ಸಚಿವ ಮನೋಹರ್‌ ಪರಿಕ್ಕರ್. ಒಪ್ಪಂದಕ್ಕೆ ಪ್ರಧಾನಿ ನರೆರಂದ್ರ ಮೋದಿ ಸಹಿ ಹಾಕಿದ ನಂತರ ನೀಡಿದ್ದ ಸಂದರ್ಶನ ಇದಾಗಿತ್ತು. ಇದರಲ್ಲಿ ಅವರು 126 ಯುದ್ಧ ವಿಮಾನಗಳಿಗೆ 90,000 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದಿದ್ದರು. ಅಂದರೆ, ಒಂದು ವಿಮಾನಕ್ಕೆ 715 ಕೋಟಿ ರೂಪಾಯಿ ವೆಚ್ಚ ತಗುಲುತ್ತಿತ್ತು.

6. ಬಿಡ್‌ ಕರೆದಾಗ 18 ಯುದ್ಧ ವಿಮಾನಗಳ ಖರೀದಿಗೆ ನಿರ್ಧರಿಸಲಾಗಿತ್ತು. ಈಗ ಮನೋಹರ್‌ ಪರಿಕ್ಕರ್‌ ಹೇಳಿದ ಬಿಡ್‌ನಲ್ಲಿ ಮಾತ್ರ 36 ಯುದ್ಧ ವಿಮಾನಗಳು ಖರೀದಿಗೆ ನಿರ್ಧಾರವಾಗಿತ್ತು. ಬಿಡ್‌ನ ಅಂತಿಮ ಮೊತ್ತ ಸಾರ್ವಜನಿಕವಾಗಿ ಲಭ್ಯವಿಲ್ಲದ ಕಾರಣ ಇದನ್ನು ಹಳೆಯ ಬಿಡ್‌ ಜತೆಗೆ ತುಲನೆ ಮಾಡಲು ಇಲ್ಲಿ ಸಾಧ್ಯವಿಲ್ಲ.

7. ಆದರೆ ಒಂದನ್ನು ಗಮನಿಸಬೇಕು. ಪೂರ್ಣ ಪ್ರಮಾಣದ ವಿಮಾನವನ್ನು ಫ್ರಾನ್ಸ್‌ ನಿರ್ಮಿಸಿ ಕೊಡುವುದಕ್ಕಿಂತ ಭಾರತದಲ್ಲಿ ನಿರ್ಮಾಣವಾಗುವ ವಿಮಾನದ ಖರ್ಚು ಹೆಚ್ಚಿರುತ್ತದೆ. ಕಾರಣ, ಇಲ್ಲಿ ಹೊಸದಾಗಿ ವಿಮಾನ ನಿರ್ಮಾಣಕ್ಕೆ ಬೇಕಾದ ಮೂಲ ಸೌಕರ್ಯವನ್ನು ಹೊಂದಬೇಕಾಗುತ್ತದೆ. ನಿರ್ಮಾಣ ಘಟಕವನ್ನು ನಿರ್ಮಿಸಬೇಕಾಗುತ್ತದೆ. ಹೀಗಿರುವಾಗ ಸಹಜವಾಗಿ ಖರ್ಚು ಜಾಸ್ತಿಯಾಗುತ್ತದೆ. ಜತೆಗೆ ತಂತ್ರಜ್ಞಾನ ವರ್ಗಾವಣೆಗೂ ದೊಡ್ಡ ಮೊತ್ತದ ರಾಯಧನವನ್ನು ಡಸಾಲ್ಟ್‌ ಕೇಳಿಯೇ ಕೇಳುತ್ತದೆ. ಹೀಗಾಗಿ ಫ್ರಾನ್ಸ್‌ನಿಂದ ನೇರವಾಗಿ ಖರೀದಿಸುವ ವಿಮಾನಗಳ ದರ 715 ಕೋಟಿಗಿಂತ ಕಡಿಮೆ ಇದ್ದೇ ಇರುತ್ತದೆ. ಮತ್ತು ಇರಲೇಬೇಕು.

ಈ ಘಟನೆ ಸುತ್ತ ಅನುಮಾನ ಹುಟ್ಟಲು ಮತ್ತೊಂದು ಕಾರಣವೂ ಇತ್ತು. ಅದು ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಫ್ರಾನ್ಸ್‌ ಪ್ರವಾಸ.

ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ಭೇಟಿಯ ಫೈಲ್ ಚಿತ್ರ. 
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಮಾಕ್ರನ್ ಭೇಟಿಯ ಫೈಲ್ ಚಿತ್ರ. 
/ಎಪಿ. 

8. 2015ರ ಏಪ್ರಿಲ್‌ನಲ್ಲಿ ಮೋದಿ ಫ್ರಾನ್ಸ್‌ ಪ್ರವಾಸಕ್ಕೆ ಹೊರಟು ನಿಂತರು. ಇದಕ್ಕೆ ಎರಡು ದಿನ ಮೊದಲು ಮಾಧ್ಯಮಗಳ ಜತೆಗೆ ಮಾತನಾಡಿದ್ದ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌, ‘ರಾಫೇಲ್‌ ಡೀಲ್‌ ಬಗ್ಗೆ ಫ್ರೆಂಚ್‌ ಕಂಪನಿ ಜತೆಗೆ ಚರ್ಚೆ ನಡೆಯುತ್ತಿದೆ. ನಾಯಕರ ಭೇಟಿ ಮತ್ತು ಈ ಡೀಲ್‌ ಬೇರೆ ಬೇರೆ’ ಎಂದು ಹೇಳಿದ್ದರು.

ಇದರ ಅರ್ಥ, ಮಾತುಕತೆಗಳು ಚಾಲ್ತಿಯಲ್ಲಿದ್ದವು. ಇಲ್ಲಿಯವರೆಗೂ ಎಚ್‌ಎಎಲ್‌ ಡೀಲ್‌ನ ಭಾವವೇ ಆಗಿತ್ತು. ಹಳೆಯ ಬಿಡ್‌ ಮೊತ್ತದ ಮೇಲೆ ಈ ಚರ್ಚೆಗಳು ನಡೆಯುತ್ತಿದ್ದವು.

ಆದರೆ ಇದಾಗಿ ಎರಡೇ ದಿನದಲ್ಲಿ ಮೋದಿ ಹೇಳಿಕೆ ಇಲ್ಲಿವರೆಗೆ ನಡೆದು ಬಂದ ದಾರಿಗೆ ವಿರುದ್ಧವಾಗಿತ್ತು. ಫ್ರಾನ್ಸ್‌ ಮತ್ತು ಭಾರತದ ಜತೆ ಹೊಸ ಒಪ್ಪಂದ ನಡೆದಿದೆ ಎಂಬುದನ್ನು ಇದು ಹೇಳುತ್ತಿತ್ತು. ಈ ಸಂದರ್ಭದ ಎರಡೂ ದೇಶಗಳ ಜಂಟಿ ಹೇಳಿಕೆಯಲ್ಲಿ, 18ರ ಬದಲು ಭಾರತ 36 ವಿಮಾನ ಖರೀದಿಸಲು ನಿರ್ಧರಿಸಲಾಗಿದೆ. ನಿಗದಿತ ಕಾಲಮಿತಿಯೊಳಗೆ ವಿಮಾನ ಮತ್ತು ಅದಕ್ಕೆ ಬೇಕಾದ ತಂತ್ರಜ್ಞಾನಗಳು, ಶಸ್ತ್ರಾಸ್ತ್ರಗಳನ್ನು ಪೂರೈಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಹೇಳಲಾಗಿತ್ತು.

ಇಡೀ ಡೀಲ್, 36 ರಾಫೇಲ್‌ ಯುದ್ಧ ವಿಮಾನಗಳ ಸರಾಸರಿ ಬೆಲೆಯಲ್ಲಿ ಕಡಿಮೆಯಾಗಿದೆ ಎಂಬುದನ್ನು ಸೂಚಿಸುತ್ತಿತ್ತು. ಕಾರಣ ಎಲ್ಲವೂ ಹಾರಾಡುವ ಸ್ಥಿತಿಯಲ್ಲಿ ಭಾರತಕ್ಕೆ ಬರುತ್ತಿದ್ದವು. ಮತ್ತು ಮೇಲೆ ಲೆಕ್ಕ ಹಾಕಿದಂತೆ ಇವುಗಳ ಬೆಲೆ ಕಡಿಮೆಯಾಗಿರಬೇಕಿತ್ತು. ಭಾರತದ ವಾಯು ಸೇನೆ ಪರೀಕ್ಷೆ ಮಾಡಿದ ತಂತ್ರಜ್ಞಾನವನ್ನೇ ನೀಡುವುದಾಗಿ ಹೇಳಿದ್ದರಿಂದ ಒಪ್ಪಂದದ ಸ್ವರೂಪದಲ್ಲಿಯೂ ಯಾವುದೇ ಬದಲಾವಣೆಗಳಿರಲಿಲ್ಲ.

ಹೀಗಿರುವಾಗ ಭಾರತದ ಬೇಡಿಕೆಯ ಮುಂದುವರಿದ ತಂತ್ರಜ್ಞಾನವನ್ನು ಫ್ರಾನ್ಸ್‌ ನೀಡಲಿದೆ, ಇದೇ ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂಬ ನೆಪ ಮುಂದಿಟ್ಟಿತು ಕೇಂದ್ರ ಸರಕಾರ.

ವಿಶೇಷವೆಂದರೆ ಈ ಬಗ್ಗೆ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ಗೆ ಯಾವ ಮಾಹಿತಿಯೂ ಇರಲಿಲ್ಲ. ದೂರದರ್ಶನದ ಸಂದರ್ಶದಲ್ಲಿ ಅವರು, “ಪ್ರಧಾನಿ ನಿರ್ಧಾರ ತೆಗೆದುಕೊಂಡರು. ನಾನದನ್ನು ಬೆಂಬಲಿಸಿದೆ” ಎಂದಷ್ಟೇ ಹೇಳಿಕೆ ನೀಡಿ ನನಗೆ ಇದರ ಯಾವ ಅರಿವೂ ಇಲ್ಲ ಎಂಬುದನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು. ವಿಚಿತ್ರವೆಂದರೆ ಈ ಒಪ್ಪಂದದಲ್ಲಿ 36 ಯುದ್ಧ ವಿಮಾನ ಖರೀದಿ ನಿರ್ಧಾರಕ್ಕೆ ಯಾಕೆ ಬರಲಾಯಿತು ಎಂಬ ವಿವರಗಳಿರಲಿಲ್ಲ. ಜತೆಗೆ ಭಾರತದಲ್ಲಿ ತಯಾರಾಗುವ ವಿಮಾನಗಳು ಎಷ್ಟು ಎಂಬ ಲೆಕ್ಕವೂ ಇಲ್ಲ. ಅಂದರೆ 126ರ ಜಾಗದಲ್ಲಿ ಕೇವಲ 36 ಯುದ್ಧ ವಿಮಾನಗಳ ಖರೀದಿಗೆ ಭಾರತ ನಿರ್ಧರಿಸಿತ್ತು!

ಆಗ ಭಾರತದ ಸರಕಾರ ಏನು ಕಾರಣ ನೀಡಿತು ಎಂದರೆ, ‘ಭಾರತಕ್ಕೆ ತುರ್ತಾಗಿ ವಿಮಾನಗಳು ಬೇಕಾಗಿವೆ. ಮತ್ತು 2 ವರ್ಷದೊಳಗೆ ಈ ವಿಮಾನಗಳು ಭಾರತಕ್ಕೆ ಬರಲಿವೆ’ ಎಂದಿತು. ಆದರೆ, ಇದಾಗಿ 3 ವರ್ಷ ಕಳೆಯಿತು ಮತ್ತು ಒಂದೇ ಒಂದು ರಾಫೇಲ್ ವಿಮಾನವೂ ಭಾರತದಲ್ಲಿ ಹಾರುತ್ತಿಲ್ಲ. ನಂತರ ಸಂಸತ್‌ನಲ್ಲಿ 2009ರಲ್ಲಿ ಮೊದಲ ವಿಮಾನ ಭಾರತ ತಲುಪಲಿದೆ. ಎಲ್ಲಾ ವಿಮಾನಗಳು 2022ರ ಮಧ್ಯ ಭಾಗದಲ್ಲಿ ತಲುಪಲಿವೆ ಎನ್ನಲಾಯಿತು. ಇಲ್ಲೂ ಹಸಿ ಹಸಿ ಸುಳ್ಳು ಹೇಳಲಾಯಿತು.

ಒಂದೊಮ್ಮೆ ಯುಪಿಎ ಅವಧಿಯ ಮೂಲ ಬಿಡ್‌ಗೆ ಒತ್ತು ನೀಡಿದ್ದೇ ಆದಲ್ಲಿ ಎರಡು ವರ್ಷದ ಒಳಗೆ 18 ವಿಮಾನ ಭಾರತಕ್ಕೆ ಬರಬೇಕಾಗಿತ್ತು. ಮೂರು ವರ್ಷದೊಳಗೆ ಭಾರತದಲ್ಲಿ ಉತ್ಪಾದನೆಯನ್ನು ಡಸಾಲ್ಟ್‌ ಆರಂಭಿಸಬೇಕಾಗಿತ್ತು. 2022ರ ಮಧ್ಯ ಭಾಗದಲ್ಲಿ ಎಲ್ಲಾ 126 ವಿಮಾನಗಳು ಭಾರತದ ವಾಯು ಸೇನೆಗೆ ಲಭ್ಯವಾಗಬೇಕಾಗಿತ್ತು.

ಈಗ ಉದ್ಭವಿಸುವ ಪ್ರಶ್ನೆ ಎಂದರೆ,

· ಹಳೆಯ ಡೀಲ್‌ನ್ನು ರದ್ದುಗೊಳಿಸುವಂತೆ ವಾಯು ಸೇನೆ ಸರಕಾರವನ್ನು ಕೇಳಿಕೊಂಡಿತೇ? 126 ವಿಮಾನ ಬೇಕೆಂದಿದ್ದ ಏರ್‌ಫೋರ್ಸ್‌ ಅದಕ್ಕಿಂತ ಕಡಿಮೆ ಸಾಕು ಎಂದು ಹೇಗೆ ತಿರ್ಮಾನಕ್ಕೆ ಬಂತು?

· ಹೊಸ ಡೀಲ್‌ಗೆ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಒಪ್ಪಿಗೆ ನೀಡಿತ್ತಾ?

· ಇದು ಸಂಪೂರ್ಣ ಹೊಸ ಡೀಲ್‌ ಆಗಿರುವಾಗ, ಹೊಸ ಟೆಂಡರ್‌ ಕರೆಯಲಿಲ್ಲ ಯಾಕೆ?

ಹೊಸ ಡೀಲ್‌, ಎಚ್‌ಎಎಲ್‌ಗೆ ಗೇಟ್‌ಪಾಸ್‌:

9. ಮಾರ್ಚ್ 2014ರಲ್ಲಿ ವರದಿಯಾದಂತೆ, ಎಚ್‌ಎಎಲ್‌ ಮತ್ತು ಡಸಾಲ್ಟ್‌ ಏವಿಯೇಷನ್‌ ಒಪ್ಪಂದವೊಂದಕ್ಕೆ ಬಂದಿದ್ದವು. ಇದರ ಪ್ರಕಾರ, 108 ವಿಮಾನಗಳ ನಿರ್ಮಾಣದಲ್ಲಿ ಶೇಕಡಾ 70 ಕೆಲಸಗಳನ್ನು ಎಚ್ಎಎಲ್‌ ಪೂರ್ಣಗೊಳಿಸಿದರೆ ಉಳಿದುದ್ದನ್ನು ಡಸಾಲ್ಟ್‌ ಮಾಡುವುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ ಒಪ್ಪಂದದದಲ್ಲಿ ಎಲ್ಲವೂ ಅದಲು ಬದಲಾಗಿತ್ತು. ಡೀಲ್‌ಗೆ ಸಹಿ ಹಾಕುವ ಕೆಲವೇ ದಿನ ಮೊದಲು ಮಾರ್ಚ್‌ 25ರಂದು ‘ಅದಾನಿ ಡಿಫೆನ್ಸ್‌ ಸಿಸ್ಟಮ್ಸ್‌ ಆಂಡ್‌ ಟೆಕ್ನಾಲಜೀಸ್‌ ಲಿ.’ ಮತ್ತು 28 ಮಾರ್ಚ್‌ 2015ರಂದು ‘ರಿಲಯನ್ಸ್‌ ಡಿಫೆನ್ಸ್‌ ಲಿ.’ ಎಂಬ ಕಂಪನಿಗಳು ಹುಟ್ಟಿಕೊಂಡಿದ್ದವು.

10. ಈ ಕಂಪನಿಗಳು ಆರಂಭವಾಗಿ ಕೆಲವೇ ದಿನಕ್ಕೆ 10 ಏಪ್ರಿಲ್ 2015ರಂದು ಮೋದಿ ಹೊಸ ಘೋಷಣೆ ಮಾಡಿದರು. ಅದರ ಪ್ರಕಾರ ಭಾರತ ಪೂರ್ಣ ನಿರ್ಮಾಣವಾದ 36 ವಿಮಾನಗಳನ್ನು ಫ್ರಾನ್ಸ್‌ನಿಂದ ಖರೀದಿಸುವುದು ಎಂಬ ತೀರ್ಮಾನಕ್ಕೆ ಬರಲಾಗಿತ್ತು.

ಮೋದಿ ಘೋಷಣೆಯಲ್ಲಿ, ಈ ಹಿಂದಿನ ಯುಪಿಎ ಸರಕಾರದ ಬಿಡ್‌ ಕಥೆ ಏನಾಯಿತು ಎಂಬ ವಿವರಗಳು ಇರಲಿಲ್ಲ. ಎಚ್‌ಎಎಲ್‌ ಪೂರ್ತಿ ಪ್ರಕ್ರಿಯೆಯಿಂದ ಹೊರಗುಳಿಯಿತು. ತಂತ್ರಜ್ಞಾನದ ವರ್ಗಾವಣೆ ಬಗ್ಗೆ ಇದರಲ್ಲಿ ಯಾವುದೇ ಉಲ್ಲೇಖಗಳಿರಲಿಲ್ಲ. ಸ್ಪಷ್ಟವಾಗಿದ್ದು ಏನೆಂದರೆ ಕಡಿಮೆ ಅವಧಿಯಲ್ಲಿ ಅನಿಲ್‌ ಅಂಬಾನಿ ನೇತೃತ್ವದ ರಿಲಯನ್ಸ್‌ ಡಿಫೆನ್ಸ್‌ ಲಿ. ಗೆ ಸಾವಿರಾರು ಕೋಟಿ ರೂಪಾಯಿ ಲಾಭ ಮಾಡಿಕೊಡಲು ಈ ಒಪ್ಪಂದ ನಡೆದಿತ್ತು. ಗಮನಿಸಬೇಕಾದ ಅಂಶವೆಂದರೆ ಅನಿಲ್‌ ಅಂಬಾನಿ ಮೋದಿ ಜತೆಯಲ್ಲೇ ಫ್ರಾನ್ಸ್‌ ಭೇಟಿಗೆ ತೆರಳಿದ್ದರು.

11. ಔಪಚಾರಿಕ ಒಪ್ಪಂದ ನಡೆದ ನಂತರ, ರಿಲಯನ್ಸ್‌ ಡಿಫೆನ್ಸ್‌ ಲಿ. ಮತ್ತು ಡಸಾಲ್ಟ್‌ ಏವಿಯೇಷೇನ್‌ ಹೊಸ ಉದ್ಯಮ ಆರಂಭಿಸಿದವು. ಇದಕ್ಕೆ ಅನಿಲ್‌ ಅಂಬಾನಿ ಸಿಇಒ. ಇದರಲ್ಲಿ ರಿಲಯನ್ಸ್‌ ಪಾಲು ಶೇಕಡಾ 51 ಮತ್ತು ಡಸಾಲ್ಟ್‌ ಪಾಲು ಶೇಕಡಾ 49. ಈ ಹೊಸ ಒಟ್ಟು ಹೊರ ಗುತ್ತಿಗೆಯ ಮೊತ್ತ 30,000 ಕೋಟಿ ರೂಪಾಯಿಯಲ್ಲಿ ಶೇಕಡಾ 70 ಅಂದರೆ ರೂ. 21,000 ಕೋಟಿಯ ಆರ್ಡರ್‌ ಈ ಕಂಪನಿಗೆ ಸಿಕ್ಕಿತು.

12. ಇಲ್ಲೂ ಒಂದು ಸಣ್ಣ ವ್ಯತ್ಯಾಸ ನಡೆದಿತ್ತು. ಏಪ್ರಿಲ್ 1, 2016ರಂದು ಸರಕಾರ ಜಾರಿಗೆ ತಂದ ಡಿಫೆನ್ಸ್‌ ಅಫ್ಸೆಟ್‌ (ರಕ್ಷಣಾ ಹೊರಗುತ್ತಿಗೆ) ಮಾರ್ಗದರ್ಶಿ ಸೂತ್ರಗಳ ನಿಯಮ 8.6 ರ ಪ್ರಕಾರ, ಎಲ್ಲಾ ಹೊರ ಗುತ್ತಿಗೆಗಳಿಗೆ ಅಕ್ವಸೀಷನ್‌ ಮ್ಯಾನೇಜರ್‌ ಮತ್ತು ರಕ್ಷಣಾ ಸಚಿವರೇ ಒಪ್ಪಿಗೆ ನಡೆಯಬೇಕಿತ್ತು. ಇದೀಗ ಸರಕಾರ ಏನು ಹೇಳುತ್ತಿದೆ ಎಂದರೆ ಡಸಾಲ್ಟ್‌ ತನಗೆ ಬೇಕಾದ ಜೋಡಿ ಕಂಪನಿಯನ್ನು ತಾನೇ ಹುಡುಕಿಕೊಂಡಿದೆ ಎಂದು. ಇದು ಸರಕಾರದ ನಿಯಮಕ್ಕೆ ವಿರುದ್ಧವಾಗಿದೆ.

ಈಗ ಸರಕಾರ ಎಚ್‌ಎಎಲ್‌ನ್ನು ಇದರಿಂದ ಯಾಕೆ ಹೊರಗಿಡಲಾಯಿತು ಎಂಬುದನ್ನು ವಿವರಿಸಬೇಕಿದೆ. ಹೊರಗುತ್ತಿಗೆ ತೆಗೆದುಕೊಳ್ಳಲು ರಿಲಯನ್ಸ್‌ ಡಿಫೆನ್ಸ್‌ ಲಿ. ಬಳಿಯಲ್ಲಿ ಯಾವ ಅನುಭವ, ಮೂಲ ಸೌಕರ್ಯ ಮತ್ತು ಆರ್ಥಿಕ ಶಕ್ತಿ ಇದೆ? ಅಷ್ಟೊಂದು ಅನುಭವ ಇರುವ ಡಸಾಲ್ಟ್‌, ವಿಮಾನ ತಯಾರಿಕೆಯಲ್ಲಿ ಅನುಭವವೇ ಇಲ್ಲದ ಕಂಪನಿಯನ್ನು ಆಯ್ಕೆ ಮಾಡಿಕೊಂಡಿತೇ?

ಇಷ್ಟೆಲ್ಲಾ ನಡೆಯುವಾಗ, ಒಂದು ವರ್ಷ ಹಳೆಯ ರಿಲಯನ್ಸ್‌ ಡಿಫೆನ್ಸ್‌ ಕಂಪನಿ 8 ಸಾವಿರ ಕೋಟಿ ಸಾಲವನ್ನು ಹೊಂದಿತ್ತು. ಮತ್ತು 1,300 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ತೋರಿಸಿತ್ತು. ವಿಷಯ ಏನೆಂದರೆ ಅನಿಲ್‌ ಅಂಬಾನಿಯವರ ಎಲ್ಲಾ ಕಂಪನಿಗಳೂ ಭಾರೀ ಪ್ರಮಾಣದ ಸಾಲವನ್ನು ಎದುರಿಸುತ್ತಿದ್ದವು. ಜತೆಗೆ ತನಗೆ ಸಿಕ್ಕಿದ ಪ್ರಾಜೆಕ್ಟ್‌ಗಳನ್ನು ಪೂರ್ಣಗೊಳಿಸಲು ಎಡವುತ್ತಿತ್ತು.

13. ರಿಲಯನ್ಸ್‌ ಡಿಫೆನ್ಸ್‌ಗಾಗಲೀ ಅಥವಾ ಇತರ ರಿಲಯನ್ಸ್‌ನ ಯಾವುದೇ ಸಂಸ್ಥೆಗಳಿಗಾಗಲೀ ವಿಮಾನಕ್ಕೆ ಸಂಬಂಧಿಸಿದ ಅಥವಾ ರಕ್ಷಣೆಗೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸಿದ ಅನುಭವವಿಲ್ಲ. ಈ ಹಿಂದೆ ನೌಕಾಪಡೆಗೆ ಅಫ್‌ಶೋರ್‌ ಪ್ಯಾಟ್ರೋಲ್‌ ವೆಸೆಲ್ಸ್‌ಗಳನ್ನು ನಿರ್ಮಿಸುವ ಗುತ್ತಿಗೆಯನ್ನು ಇದೇ ಅನಿಲ್‌ ಅಂಬಾನಿಯ ‘ಪಿಪವಾವ್‌ ಶಿಪ್‌ಯಾರ್ಡ್‌’ ಪಡೆದುಕೊಂಡು ಅದನ್ನು ಇನ್ನೂ ಪೂರ್ಣಗೊಳಿಸಿಲ್ಲ. ಇದೀಗ ನೌಕಾಪಡೆಯ ಕಾರ್ಯಾಚರಣೆಗೇ ಹೊಡೆತ ನೀಡುತ್ತಿದೆ. ಇದಕ್ಕೆ ತದ್ವಿರುದ್ಧವಾಗಿ ಎಚ್‌ಎಎಲ್‌ಗೆ ವಿಮಾನ ನಿರ್ಮಾಣದಲ್ಲಿ 60 ವರ್ಷಗಳ ಅನುಭವವಿದೆ. ಅಲ್ಲದೆ 2014ರವ ವರಗೆ ಇದೇ ಡಸಾಲ್ಟ್‌ ಜತೆಗೆ ಕೆಲಸ ಹಂಚಿಕೊಳ್ಳುವ ಒಪ್ಪಂದಕ್ಕೆ ಎಚ್‌ಎಎಲ್‌ ಬಂದಿತ್ತು. 25 ಮಾರ್ಚ್‌ 2015ರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲೂ ಇದೇ ಮಾತನ್ನು ಡಸಾಲ್ಟ್‌ ಸಿಇಒ ಪುನರುಚ್ಛರಿಸಿದ್ದರು. ಹೀಗಿದ್ದೂ ಎಚ್ಎಎಲ್‌ನ್ನು ಹೊರದಬ್ಬಲಾಯಿತು, ನಂಬಿಕಸ್ಥನಲ್ಲದ ಅನಿಲ್‌ ಅಂಬಾನಿಗೆ ಹೊಸ ಗುತ್ತಿಗೆ ನೀಡಲಾಯಿತು!

ಬೆಂಗಳೂರಿನ ಎಚ್‌ಎಎಲ್ ಲೋಗೊ. 
ಬೆಂಗಳೂರಿನ ಎಚ್‌ಎಎಲ್ ಲೋಗೊ. 

ಯುದ್ಧ ವಿಮಾನದ ದರದಲ್ಲಿ ಗೌಪ್ಯತೆ:

14. ಈ ಕಥೆಗಳು ಒಂದು ಕಡೆಗಾದರೆ ಇನ್ನೊಂದು ಕಡೆ ಭಾರತ ಸರಕಾರ ಯುದ್ಧ ವಿಮಾನಗಳ ಖರೀದಿ ಮೊತ್ತ ಬಹಿರಂಗಪಡಿಸುವಂತಿಲ್ಲ ಎಂದು ವಾದಿಸುತ್ತಿದೆ. ಫ್ರಾನ್ಸ್‌ ಸರಕಾರದ ಜತೆಗಾದ ಗೌಪ್ಯತೆಯ ಒಪ್ಪಂದದಿಂದ ಈ ರೀತಿ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಪೊಳ್ಳು ವಾದ ಮಂಡಿಸುತ್ತಿದೆ. ಇದು ಆಧಾರ ರಹಿತವಾಗಿದೆ.

15. 18 ನವೆಂಬರ್ 2016ರಲ್ಲಿ ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ರಕ್ಷಣಾ ಖಾತೆ ರಾಜ್ಯ ಸಚಿವರೇ ಉತ್ತರ ನೀಡಿ, ‘23.09.2016ರಂದ ಭಾರತ ಪ್ರಾನ್ಸ್‌ 36 ರಾಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಒಪ್ಪಂದ ಮಾಡಿಕೊಂಡಿವೆ. ಇದರಲ್ಲಿ ಒಂದು ಯುದ್ಧ ವಿಮಾನದ ಬೆಲೆ 670 ಕೋಟಿ ಮತ್ತು ಎಲ್ಲಾ ವಿಮಾನಗಳು ಏಪ್ರಿಲ್ 2022ಕ್ಕೂ ಮೊದಲು ಭಾರತ ತಲುಪಲಿವೆ,’ ಎಂದಿದ್ದರು.

ಈ ಉತ್ತರವನ್ನೇ ನೋಡುವುದಾದರೆ, ಇಲ್ಲಿ ಸರಕಾರ ವಿಮಾನದ ಬೆಲೆಯನ್ನು ಬಹಿರಂಗ ಪಡಿಸಿತ್ತು ಮತ್ತು ಅದರ ಬೆಲೆಯನ್ನೂ ಹೇಳಿತ್ತು. ಮತ್ತು ಒಂದು ವಿಮಾನದ ಬೆಲೆ 670 ಕೋಟಿಯಲ್ಲಿ ಅವುಗಳ ಸರ್ವಿಸ್‌, ಶಸ್ತ್ರಾಸ್ತ್ರಗಳು ಮತ್ತು ಇತರ ಉಪಕರಣಗಳೂ ಸೇರಿವೆ ಎಂದಿತ್ತು.

16. ಇನ್ನೊಂದು ಕಡೆ ಈ ಹಿಂದಿನ ಸರಕಾರಗಳ ಅವಧಿಯಲ್ಲಿ ರಕ್ಷಣಾ ಉಪಕರಣಗಳನ್ನು ಖರೀದಿ ಮಾಡಿದಾಗ, ಅವುಗಳ ಬೆಲೆಯನ್ನು ಸಂಸತ್ತು ಮತ್ತು ಜನರ ಮುಂದೆ ಇಡಲಾಗಿತ್ತು. ಉದಾಹರಣಗೆ ಮಿರಾಜ್‌ ವಿಮಾನವನ್ನು ಮೇಲ್ದರ್ಜೆಗೇರಿಸುವ ವಿವರವನ್ನು 26 ಮಾರ್ಚ್‌ 2012ರಲ್ಲಿ ನೀಡಲಾಗಿತ್ತು.

17. ಇದರಾಚೆಗೆ ಭಾರತ ಮತ್ತು ಫ್ರಾನ್ಸ್‌ ನಡುವೆ ನಡೆದ ಒಪ್ಪಂದದಲ್ಲಿ ಯುದ್ಧ ವಿಮಾನದ ತಾಂತ್ರಿಕ ವಿವರಗಳನ್ನು ಮತ್ತು ಕಾರ್ಯಾಚರಣೆ ಸಾಮರ್ಥ್ಯವನ್ನು ಬಹಿರಂಗಪಡಿಸುವಂತಿಲ್ಲ ಎಂದಷ್ಟೇ ಹೇಳಲಾಗಿತ್ತು. ಎಲ್ಲಿಯೂ ಬೆಲೆಯನ್ನು ಬಹಿರಂಗಪಡಿಸಬಾರದು ಎಂದು ಹೇಳಿಲ್ಲ. ಇದಲ್ಲದೆ ಫ್ರಾನ್ಸ್‌ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ‘ಇಂಡಿಯಾ ಟುಡೇ’ಗೆ ಮಾರ್ಚ್‌ನಲ್ಲಿ ನೀಡಿದ ಸಂದರ್ಶನದಲ್ಲಿ ವಿಮಾನದ ಬೆಲೆಯನ್ನು ಬಹಿರಂಗಪಡಿಸುವ ನಿರ್ಧಾರ ಭಾರತ ಸರಕಾರಕ್ಕೆ ಬಿಟ್ಟದ್ದು ಎಂದಿದ್ದರು.

18. ಇನ್ನೂ ಆಳಕ್ಕಿಳಿದರೆ, ಸಾಮಾನ್ಯವಾಗಿ ಪ್ರತಿ ವಿಮಾನದ ಖರೀದಿಯ ವಿವರಗಳು, ಅದರಲ್ಲಿರುವ ವಿಶೇಷತೆಗಳನ್ನು ಭಾರತೀಯ ಸರಕಾರವೇ ಅಧಿಕೃತವಾಗಿ ದಾಖಲೆ ರೂಪದಲ್ಲಿ ಮುದ್ರಿಸುವ ಪರಿಪಾಠವನ್ನು ಇಟ್ಟುಕೊಂಡು ಬಂದಿದೆ.

19. ಈ ಒಪ್ಪಂದದಲ್ಲಿಯೂ 36 ವಿಮಾನಗಳ ಬೆಲೆಯನ್ನು ಡಸಾಲ್ಟ್‌ ಮತ್ತು ರಿಲಯನ್ಸ್‌ ಡಿಫೆನ್ಸ್‌ನ ಪತ್ರಿಕಾ ಪ್ರಕಟಣೆಯಲ್ಲಿ ಮತ್ತು 2016ರಲ್ಲಿ ಡಸಾಲ್ಟ್‌ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಬಹಿರಂಗಪಡಿಸಲಾಗಿತ್ತು. ಈ ಎರಡೂ ಪತ್ರಿಕಾ ಹೇಳಿಕೆಗಳು, 36 ಯುದ್ಧ ವಿಮಾನಗಳ ಖರೀದಿಯ ಡೀಲ್‌ನ ಮೊತ್ತ 60,000 ಸಾವಿರ ಕೋಟಿ ಎಂದು ಹೇಳುತ್ತಿದ್ದವು.

ಅಸಲಿಗೆ ಸರಕಾರ ಮುಜುಗರಕ್ಕೀಡಾಗಿದ್ದೇ ಇಲ್ಲಿ. ಕಾರಣ ಇಲ್ಲಿ ಒಂದು ವಿಮಾನದ ಬೆಲೆ 1,660 ಕೋಟಿ ರೂಪಾಯಿಯಾಗಿತ್ತು. ಮೊದಲಿಗೆ 126 ವಿಮಾನಗಳ ಖರೀದಿಗೆ ಮಾಡಿದ ಒಪ್ಪಂದದ ಸಂದರ್ಭದಲ್ಲಿನ ವಿಮಾನದ ಬೆಲೆಗಿಂತ ಇದು ದುಪ್ಪಟ್ಟಲ್ಲ ಅದಕ್ಕಿಂತಲೂ ಹೆಚ್ಚಾಗಿತ್ತು. ಸರಕಾರವೇ 18 ನವೆಂಬರ್ 2016ರಲ್ಲಿ ಲೋಕಸಭೆಯ್ಲಲಿ ಹೇಳಿದ ಪ್ರತಿ ವಿಮಾನದ ಬೆಲೆಗಿಂತಲೂ 1,000 ಕೋಟಿ ರುಪಾಯಿ ಹೆಚ್ಚಾಗಿತ್ತು.

20. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಯುಪಿಎ ಅವಧಿಯಲ್ಲಿ ಮಾಡಿಕೊಳ್ಳಲು ಹೊರಟಿದ್ದ ಒಪ್ಪಂದದಲ್ಲಿ, ವಿಮಾನದ ಬೆಲೆ, ಅದಕ್ಕೆ ಬೇಕಾದ ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿಗಳ ಬೆಲೆ, 2 ವರ್ಷಗಳ ವಾರಂಟಿ, ಭಾರತದಲ್ಲಿ ಉತ್ಪಾದನೆ ಮಾಡಲು ಲೈಸನ್ಸ್‌ ಮತ್ತು ತಂತ್ರಜ್ಞಾನ ವರ್ಗಾವಣೆಗೆ ಇಲ್ಲಿನ ಸಿಬ್ಬಂದಿಗಳಿಗೆ ಬೇಕಾದ ಆರಂಭಿಕ ತರಬೇತಿಯ ಖರ್ಚು ಎಲ್ಲವೂ ಸೇರಿತ್ತು. ಆದರೆ ಸರಕಾರ ಇದನ್ನು ಸಮರ್ಥಿಸಿಕೊಳ್ಳುತ್ತಾ, ಮೊದಲ ಬಿಡ್‌ ಕರೆದಾಗ ವಾಯುಸೇನೆ ಅನುಮೋದಿಸಿದ್ದ ರಚನೆಯ ಏರ್‌ಕ್ರಾಫ್ಟ್‌ ಮತ್ತು ಶಸ್ತ್ರಾಸ್ತ್ರಗಳನ್ನೇ ತರಲಾಗುವುದು ಎಂದು ಸುಳ್ಳು ಹೇಳಿತ್ತು.

21. ಇದಲ್ಲದೆ, ಫೆಬ್ರವರಿ 19, 2015ರಲ್ಲಿ ಪಿಟಿಐಗೆ ಹೇಳಿಕೆ ನೀಡಿದ್ದ ಡಸಾಲ್ಟ್‌ ಸಿಇಒ, ಬಿಡ್‌ನ ಮೊದಲ ದಿನ ನಾವು ಅತೀ ಕಡಿಮೆ ಬೆಲೆಗೆ ಬಿಡ್‌ ಮಾಡಿದ್ದೆವು. ಅಲ್ಲಿಂದವೂ ನಾವು ಒಂದೇ ಬೆಲೆಯನ್ನು ಹೇಳುತ್ತಾ ಬಂದಿದ್ದೇವೆ. ಮೊದಲ ಬಿಡ್‌ಗೆ ನಾವು ಮುಂದಿಟ್ಟ ಬೆಲೆಗೆ ಇಂದಿಗೂ ಬದ್ಧವಾಗಿದ್ದೇವೆ ಎಂದಿದ್ದರು. ಸರಕಾರದ ಹೇಳಿಕೆಗೂ ಇದಕ್ಕೂ ವ್ಯತ್ಯಾಸವಿತ್ತು.

22. ಅಂತಿಮವಾಗಿ ಗೌಪ್ಯತೆ ನೆಪ ಮುಂದಿಟ್ಟು ಬೆಲೆ ಮತ್ತು ರಾಫೇಲ್‌ ಕಾಂಟ್ರಾಕ್ಟ್‌ನ ವಿವರಗಳನ್ನು ಬಹಿರಂಗ ಪಡಿಸಲು ನಿರಾಕರಿಸಿತು ಕೇಂದ್ರ ಸರಕಾರ. ಈ ಹಿಂದಿನ ರಾಜೀವ್‌ ಗಾಂಧಿ ಸರಕಾರವೂ ಇದೇ ರೀತಿ ಬೋಫೋರ್ಸ್‌ ಕಾಂಟ್ರಾಕ್ಟ್‌ ವಿವರ ಬಹಿರಂಗಪಡಿಸಲು ನಿರಾಕರಿಸಿತ್ತು. ಅದೇ ಪರಿಸ್ಥಿತಿ ಈಗಲೂ ಇದೆ.

ಇದಲ್ಲದೆ ಸರಕಾರದ ನಡೆ ಹೇಗಿದೆ ಎಂದರೆ, ಜನರ ದುಡ್ಡನ್ನು ನಾವು ಯಾವುದಕ್ಕೆ, ಹೇಗೆ ಬೇಕಾದರೂ ಖರ್ಚು ಮಾಡುತ್ತೇವೆ. ಮತ್ತು ಈ ಸಂಬಂಧ ವಿದೇಶಿ ಸರಕಾರಗಳ ಜತೆ ಗೌಪ್ಯ ಒಪ್ಪಂದ ಮಾಡಿಕೊಂಡು ಇದರ ವಿವರಗಳನ್ನು ಸಂಸತ್ತು ಮತ್ತು ಜನರಿಂದ ಮುಚ್ಚಿಡುತ್ತೇವೆ ಎಂಬುದಾಗಿದೆ. ಇದು ಪ್ರಜಾಪ್ರಭುತ್ವದಲ್ಲಿನ ಮೂಲ ಕಲ್ಪನೆಗಳಾದ ಪಾರದರ್ಶಕತೆ ಮತ್ತು ಉತ್ತರಾದಾಯಿತ್ವದ ಸ್ಪಷ್ಟ ಉಲ್ಲಂಘನೆಯಾಗಿದೆ.

ಇಲ್ಲಿರುವ ಪ್ರಶ್ನೆ ಎಂದರೆ,

· ವಿದೇಶ ಸರಕಾರವೊಂದರ ಜತೆಗಿನ ಒಪ್ಪಂದ ದೇಶದ ಸಂಸತ್ತನ್ನು ಈ ಮೂಲಕ ಇಲ್ಲಿನ ಜನರನ್ನು ಮೀರಬಹುದೇ?

· ದೇಶದ ಕಾನೂನುಗಳಾದ ಆರ್‌ಟಿಐ, ಸಿಎಜಿ ಕಾಯ್ದೆಗಳನ್ನು ಮೀರಿ ವಿದೇಶಿ ಸರಕಾರವೊಂದರ ಜತೆ ಒಪ್ಪಂದ ಮಾಡಿಕೊಳ್ಳಬಹುದೇ?

· ಒಂದೊಮ್ಮೆ ಈ ವಿವರಗಳು ಈ ಮಟ್ಟಿಗೆ ಗೌಪ್ಯವಾಗಿರುವುದಾದರೆ, ಕೆಲವು ಮಾಧ್ಯಮ ಸಂಸ್ಥೆಗಳು ಈ ವಿವರಗಳನ್ನು ನಾವು ಪರಿಶೀಲನೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿವೆ. ಸರಕಾರದ ಮೂಲಗಳಿಗೇ ಸಿಗದಿರುವ ಮಾಹಿತಿಗಳು ಇವರಿಗೆ ಹೇಗೆ ಸಿಗಲು ಸಾಧ್ಯ?

ಅಂತಿಮ ಫಲಿತಾಂಶ

ಒಟ್ಟಾರೆ 126 ವಿಮಾನ ಖರೀದಿಯ ಬೆಳವಣಿಗೆಯನ್ನು ಕೈ ಬಿಟ್ಟು ಹೊಸ ಒಪ್ಪಂದಕ್ಕೆ ಬಂದಿರುವುದರಲ್ಲಿ ಸರಕಾರಿ ಕಚೇರಿ ದುರುಪಯೋಗ ನಡೆದಿದೆ. ಈ ಮೂಲಕ,

  • ರಾಷ್ಟ್ರೀಯ ಭದ್ರತೆಗೆ ಅಪಾಯ ಒದಗಿದೆ
  • ರಾಷ್ಟ್ರೀಯ ಖಜಾನೆಗೆ ಅಗಾಧ ಹೆಚ್ಚುವರಿ ಹೊರೆ ಹೊರಿಸಲಾಗಿದೆ
  • ವಿಮಾನ ಉತ್ಪಾದನೆಯಲ್ಲಿ ದಶಕಗಳ ಕಾಲ ಅನುಭವವಿರುವ ದೇಶಿಯ ಸಂಸ್ಥೆ ಎಚ್ಎಎಲ್‌ನ್ನು ಯೋಜನೆಯಿಂದ ಹೊರಗಿಡಲಾಗಿದೆ.
  • ವಿಮಾನ ನಿರ್ಮಾಣ ಕ್ಷೇತ್ರ ಮತ್ತು ರಕ್ಷಣಾ ಸಲಕರಣೆಗಳ ತಯಾರಿಕೆಯಲ್ಲಿ ಯಾವುದೇ ಅನುಭವವಿಲ್ಲದಿರುವ ಖಾಸಗಿ ಕಂಪನಿಗೆ ಭಾರೀ ಹಣಕಾಸಿನ ಲಾಭ ಮಾಡಿಕೊಡಲಾಗಿದೆ.

ಒಟ್ಟಾರೆ ಇಡೀ ವ್ಯವಹಾರವು ಕ್ರಿಮಿನಲ್ ಅಪರಾಧವಾಗಿದ್ದು, ಸಾರ್ವಜನಿಕ ಕಚೇರಿ ದುರ್ಬಳಕೆಯ ಮೂಲಕ ರಾಷ್ಟ್ರೀಯ ಹಿತಾಸಕ್ತಿಯನ್ನು ಕಡೆಗಣಿಸಿ ಕೇವಲ ರಾಷ್ಟ್ರೀಯ ಭದ್ರತೆಯ ವೆಚ್ಚದಲ್ಲಿ ಖಾಸಗಿ ಕಂಪನಿಗಳನ್ನು ಸಮೃದ್ಧಗೊಳಿಸುವುದು ಮಾತ್ರವಾಗಿದೆ.

ನಮ್ಮ ದೇಶದ ರಕ್ಷಣೆಯ ಜವಾಬ್ದಾರಿ, ಭ್ರಷ್ಟಾಚಾರವನ್ನು ತಡೆಗಟ್ಟುವ ಹೊಣೆ ಹೊತ್ತ ಸಂಸತ್ತು, ಇತರ ಸಂಸ್ಥೆಗಳು ಮತ್ತು ಮಾಧ್ಯಮಗಳು ಮೂಲ ಯೋಜನೆಯನ್ನು ಹೇಗೆ ಕೈ ಬಿಡಲಾಯಿತು ಎಂಬ ಸತ್ಯವನ್ನು ಈ ಸಂದರ್ಭದಲ್ಲಿ ಜನರ ಮುಂದಿಡಬೇಕಾಗಿದೆ.

ಮೂಲ: ದಿವೈರ್‌; ಯಶವಂತ್‌ ಸಿನ್ಹಾ, ಪ್ರಶಾಂತ್‌ ಭೂಷಣ್ ಮತ್ತು ಅರುಣ್‌ ಶೌರಿ.