samachara
www.samachara.com
‘ದಸರಾ ಏರ್‌ಪೋರ್ಟ್‌’: ಮೈಸೂರು ವಿಮಾನ ನಿಲ್ದಾಣ ಎಂಬ ಹಗಲುಗನಸು
COVER STORY

‘ದಸರಾ ಏರ್‌ಪೋರ್ಟ್‌’: ಮೈಸೂರು ವಿಮಾನ ನಿಲ್ದಾಣ ಎಂಬ ಹಗಲುಗನಸು

ಇಚ್ಛಾಶಕ್ತಿ ಇಲ್ಲದೇ ಇದ್ದರೆ ಬಸ್‌ ನಿಲ್ದಾಣವಷ್ಟೇ ಅಲ್ಲ ವಿಮಾನ ನಿಲ್ದಾಣವೂ ಅಭಿವೃದ್ಧಿ ಕಾಣುವುದಿಲ್ಲ. ಈ ಮಾತಿಗೊಂದು ತಾಜಾ ಉದಾಹರಣೆ ಮೈಸೂರು ವಿಮಾನ ನಿಲ್ದಾಣ.

ದಯಾನಂದ

ದಯಾನಂದ

ಮೈಸೂರು ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಇತ್ತ ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಯ ಪ್ರಸ್ತಾವ ದಾಖಲೆಗಳಲ್ಲಷ್ಟೇ ಉಳಿದಿದ್ದರೆ ಅತ್ತ ನೆರೆಯ ರಾಜ್ಯ ಕೇರಳದ ಕಣ್ಣೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸೇವೆಗೆ ಮುಕ್ತವಾಗಲು ಸಜ್ಜಾಗಿದೆ. ಆದರೆ, ಮೈಸೂರು ವಿಮಾನ ನಿಲ್ದಾಣ ಸರಕಾರಕ್ಕೆ ನೆನಪಿಗೆ ಬರುವುದು ದಸರಾ ಸಂದರ್ಭದಲ್ಲಿ ಮಾತ್ರ.

ಕರ್ನಾಟಕದ ಸಾಂಸ್ಕೃತಿಕ ನಗರಿ ಎನಿಸಿರುವ ಮೈಸೂರಿನಲ್ಲಿ 1940ರಲ್ಲೇ ಆರಂಭವಾದ ವಿಮಾನ ನಿಲ್ದಾಣ ಸುಮಾರು 8 ದಶಕಗಳಾದರೂ ಸುಧಾರಣೆ ಕಂಡಿಲ್ಲ. ಮೈಸೂರು ರಾಜರ ಕಾಲದಲ್ಲಿ ಆರಂಭಗೊಂಡ ಈ ವಿಮಾನ ನಿಲ್ದಾಣ ನಂತರ ಭಾರತೀಯ ವಾಯುಸೇನೆಯ ತರಬೇತಿ ನಿಲ್ದಾಣವಾಗಿ ಹಾಗೂ ವಿಶೇಷ ವಿಮಾನಗಳ ನಿಲ್ದಾಣವಾಗಷ್ಟೇ ಬಳಕೆಯಾಗುತ್ತಿತ್ತು. 1960ರಿಂದೀಚೆಗೆ ಈ ವಿಮಾನ ನಿಲ್ದಾಣವನ್ನು ಪ್ರಯಾಣಿಕರ ಸೇವೆಗಾಗಿ ಮುಕ್ತಗೊಳಿಸಲಾಗಿದೆ.

ಮೈಸೂರು- ನಂಜನಗೂಡು ರಸ್ತೆಯ ಮಂಡಕಳ್ಳಿ ಬಳಿ ಇರುವ ಈ ವಿಮಾನ ನಿಲ್ದಾಣ ಬಹುಪಾಲು ಮೈಸೂರಿಗರಿಗೆ ಇದ್ದೂ ಇಲ್ಲದಂತಿದೆ. ಮೈಸೂರಿನ ಬಹುತೇಕರು ವಿಮಾನಯಾನಕ್ಕೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಸದ್ಯ ಪ್ರತಿದಿನ ಚೆನ್ನೈನಿಂದ ಹಾಗೂ ನಿಯಮಿತವಾಗಿ ಹೈದರಾಬಾದ್‌ನಿಂದ ಮೈಸೂರಿಗೆ ವಿಮಾನ ಸೇವೆ ಲಭ್ಯವಿದೆ. ಆದರೆ, ಇದರಿಂದ ಸ್ಥಳೀಯರಿಗೆ ಹೆಚ್ಚೇನೂ ಉಪಯೋಗವಿಲ್ಲ.

“ಮೈಸೂರಿನಲ್ಲಿ ವಿಮಾನ ನಿಲ್ದಾಣ ಇದ್ದರೂ ಮೈಸೂರಿನ ಬಹುತೇಕರಿಗೆ ಇಲ್ಲಿ ವಿಮಾನ ನಿಲ್ದಾಣ ಇದೆ ಎಂಬುದೇ ಮರೆತು ಹೋಗಿದೆ. ಮೈಸೂರಿನ ವಿಮಾನ ನಿಲ್ದಾಣಕ್ಕೆ ಸರಿಯಾದ ಬಸ್‌ ಸಂಪರ್ಕವೂ ಮೈಸೂರು ನಗರದಿಂದ ಇಲ್ಲ. ವಿಮಾನ ನಿಲ್ದಾಣ ಗಿಡಗಂಟೆಗಳು ಬೆಳೆದುಕೊಂಡು ಪಾಳು ಸುರಿಯುತ್ತಿದೆ. ವಿಮಾನ ನಿಲ್ದಾಣ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕಿಂತಲೂ ಕಡೆಯಾಗಿದೆ” ಎನ್ನುತ್ತಾರೆ ಮೈಸೂರಿನ ನಾಗೇಶ್‌.

“ಪ್ರೇಕ್ಷಣೀಯ ತಾಣವಾಗಿರುವ ಮೈಸೂರಿನ ವಿಮಾನ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿದರೆ ಇನ್ನಷ್ಟು ಪ್ರವಾಸಿಗರನ್ನು ಆಕರ್ಷಿಸಬಹುದು. ಆದರೆ, ಯಾವ ಸರಕಾರಗಳೂ ಅದಕ್ಕೆ ಮನಸ್ಸು ಮಾಡುತ್ತಿಲ್ಲ. ಈ ಹಿಂದಿನ ಸರಕಾರದಲ್ಲಿ ಮೈಸೂರಿನವರೇ ಮುಖ್ಯಮಂತ್ರಿಯಾಗಿದ್ದರೂ ಈ ವಿಮಾನ ನಿಲ್ದಾಣ ಸುಧಾರಿಸಲು ಗಮನ ಹರಿಸಲಿಲ್ಲ” ಎಂಬ ದೂರು ಅವರದ್ದು.

ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸದ್ಯ ಸಣ್ಣ ಗಾತ್ರದ ಲಘು ವಿಮಾನಗಳಷ್ಟೇ ಸಂಚಾರ ನಡೆಸಲು ಸಾಧ್ಯ. ದೊಡ್ಡ ವಿಮಾನಗಳ ಸಂಚಾರಕ್ಕೆ ಬೇಕಾದಷ್ಟು ದೊಡ್ಡ ರನ್‌ವೇ ಕೂಡಾ ಇಲ್ಲಿಲ್ಲ. ಇಂಧನ ತುಂಬಿಸಿಕೊಳ್ಳಲು ಫ್ಯೂಲ್‌ ಸ್ಟೇಷನ್ ಕೂಡಾ ಇಲ್ಲಿಲ್ಲ. ಹೀಗಾಗಿ ಬರುವ ಲಘು ವಿಮಾನಗಳೂ ಕೂಡಾ ಅಂದು ಬಂದು ಅಂದೇ ಹೋಗಬೇಕಾದ ಸ್ಥಿತಿ ಇದೆ.

ಟ್ರೂಜೆಟ್‌ ಹಾಗೂ ಏರ್ ಒಡಿಶಾ ವೈಮಾನಿಕ ಸಂಸ್ಥೆಗಳು ಸದ್ಯ ಉಡಾನ್‌ ಯೋಜನೆಯಡಿ ಮೈಸೂರಿಗೆ ವಿಮಾನ ಸೇವೆ ಒದಗಿಸುತ್ತಿವೆ. ವಿಮಾನ ಮೇಲ್ದರ್ಜೆಗೇರಿಸಲು ಸುಮಾರು 280 ಎಕರೆ ಜಾಗ ಬೇಕು ಎಂಬ ಪ್ರಸ್ತಾವವಿದೆ. ಇತ್ತೀಚೆಗೆ ಈ ಬಗ್ಗೆ ಮೈಸೂರಿನಲ್ಲಿ ಸಭೆ ನಡೆಸಿರುವ ಸಂಸದ ಪ್ರತಾಪ್‌ ಸಿಂಹ ಮತ್ತು ಸಚಿವ ಜಿ.ಟಿ. ದೇವೇಗೌಡ ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಮುಗಿಸುವಂತೆ ಅಧಿಕಾರಿಗಳಿಗೆ ಸೂಚನೆಯನ್ನೇನೋ ನೀಡಿದ್ದಾರೆ. ಆದರೆ, ಈ ಪ್ರಕ್ರಿಯೆಗಳೆಲ್ಲಾ ಮುಗಿದು ವಿಮಾನ ನಿಲ್ದಾಣ ಸುಧಾರಣೆ ಕಾಣುವುದು ಯಾವ ಕಾಲಕ್ಕೋ ಗೊತ್ತಿಲ್ಲ.

ಎಲ್ಲವೂ ಅಂದುಕೊಂಡತೆ ಆದರೆ ಇನ್ನೆರಡು ವರ್ಷಗಳಲ್ಲಿ ಮೈಸೂರು ವಿಮಾನ ನಿಲ್ದಾಣ ಮೇಲ್ದರ್ಜೆಗೇರಲಿದೆ. ವಿಮಾನ ನಿಲ್ದಾಣ ಅಭಿವೃದ್ಧಿಯಾದರೆ ವಿಮಾನಗಳ ಸಂಚಾರ ಕೂಡಾ ಹೆಚ್ಚುತ್ತದೆ. ಈ ಮೂಲಕ ಮೈಸೂರಿನಲ್ಲಿ ಉದ್ಯಮ ಅಭಿವೃದ್ಧಿಯಾಗುತ್ತದೆ. 
- ನಾರಾಯಣಗೌಡ, ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿ ಸದಸ್ಯ

ವಿಮಾನ ನಿಲ್ದಾಣ ಇನ್ನೆರೆಡು ವರ್ಷಗಳಲ್ಲಿ ಅಭಿವೃದ್ಧಿ ಕಾಣುತ್ತದೆ ಎಂಬ ಭರವಸೆ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿಯಿಂದ ಬರುತ್ತಿದೆ. ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿಯ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಮೈಸೂರು ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿ ಸದಸ್ಯ ನಾರಾಯಣಗೌಡ, ಕಾಲಮಿತಿಯಲ್ಲಿ ಕೆಲಸ ಪೂರ್ಣಗೊಳಿಸುವ ಮಾತನಾಡಿದರು.

“ರನ್ ವೇ ವಿಸ್ತೀರ್ಣಕ್ಕಾಗಿ 280 ಎಕರೆ ಜಮೀನು ಬೇಕಿದೆ. ಭೂಸ್ವಾಧೀನ ಪ್ರಕ್ರಿಯೆಯನ್ನು ಆದಷ್ಟು ಬೇಗ ಮುಗಿಸುವಂತೆ ಎಐಎಡಿಬಿ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಸೂಚನೆ ನೀಡಿದ್ದಾರೆ. 15 ದಿನಗಳಲ್ಲಿ ಈ ಕೆಲಸ ಆರಂಭವಾಗುವ ವಿಶ್ವಾಸವಿದೆ. ಭೂಮಿ ಸಿಕ್ಕ ಬಳಿಕ ಎರಡು ವರ್ಷಗಳೊಳಗೆ ವಿಮಾನ ನಿಲ್ದಾಣ ಮೇಲ್ದರ್ಜೆಗೇರಲಿದೆ” ಎನ್ನುತ್ತಾರೆ ಅವರು.

ಭೂಸ್ವಾಧೀನಕ್ಕೆ ಕೆಲವು ಇಲ್ಲಿನ ಗ್ರಾಮಸ್ಥರು ಒಪ್ಪಿಲ್ಲ ಎಂಬ ಮಾತುಗಳೂ ಕೂಡಾ ಇವೆ. ಆದರೆ, ಒಂದಕ್ಕೆ ಮೂರು ಪಟ್ಟು ಹೆಚ್ಚಿನ ಪರಿಹಾರ ಕೊಟ್ಟು ಭೂಸ್ವಾಧೀನ ಪ್ರಕ್ರಿಯೆ ಮುಗಿಸಲು ಸಚಿವ ಜಿ.ಟಿ. ದೇವೇಗೌಡ ಸೂಚನೆ ನೀಡಿದ್ದಾರೆ ಎಂಬ ಮಾತು ನಾರಾಯಣಗೌಡ ಅವರದ್ದು.

“ಮಣಿವಣ್ಣನ್‌ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಸಂಧರ್ಭದಲ್ಲಿ ವಿಮಾನ ನಿಲ್ದಾಣ ಭೂಸ್ವಾಧೀನಕ್ಕೆ ಪ್ರತಿ ಎಕರೆಗೆ 40 ಲಕ್ಷ ರೂಪಾಯಿ ಪರಿಹಾರ ನಿಗದಿಪಡಿಸಿದ್ದರು. ಈ ಮೊತ್ತವನ್ನು ಮೂರು ಪಟ್ಟು ಹೆಚ್ಚಿಸುವಂತೆ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಅದರಂತೆ ಪ್ರತಿ ಎಕರೆಗೆ 1.2 ಕೋಟಿ ಪರಿಹಾರ ಸಿಗುತ್ತದೆ. ಹೀಗಾಗಿ ಭೂಮಿ ಬಿಟ್ಟುಕೊಡಲು ಬಹುತೇಕ ರೈತರು ಒಪ್ಪಿದ್ದಾರೆ. ಉಡಾನ್‌ ಯೋಜನೆ ಹಾಗೂ ಕೇಂದ್ರದ ನಿಧಿಯಿಂದ ಸದ್ಯ 800 ಕೋಟಿ ರೂಪಾಯಿ ಹಣ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಮೀಸಲಾಗಿದೆ. ಹೀಗಾಗಿ ಸಂಪನ್ಮೂಲದ ಸಮಸ್ಯೆಯೂ ಎದುರಾಗದು” ಎನ್ನುತ್ತಾರೆ ಅವರು.

ವಿಮಾನ ನಿಲ್ದಾಣ ಅಭಿವೃದ್ಧಿ ಮಂಡಳಿ ಇನ್ನೆರಡು ವರ್ಷಗಳಲ್ಲಿ ನಿಲ್ದಾಣ ಅಭಿವೃದ್ಧಿಯ ಹಗಲುಗನಸು ತೋರಿಸುತ್ತಿದೆ. ಆದರೆ, ಭೂಸ್ವಾಧೀನ ಪ್ರಕ್ರಿಯೆಗೆ ಇನ್ನೂ ಚಾಲನೆಯೇ ಸಿಕ್ಕಿಲ್ಲ. ಎಲ್ಲಾ ಪ್ರಕ್ರಿಯೆಗಳೂ ಪೂರ್ಣಗೊಂಡು ವಿಮಾನ ನಿಲ್ದಾಣ ಸುಸಜ್ಜಿತವಾಗುವ ಹೊತ್ತಿಗೆ ಮೈಸೂರಿನ ಜನ ತಮ್ಮೂರಲ್ಲೊಂದು ವಿಮಾನ ನಿಲ್ದಾಣ ಇತ್ತು ಎಂಬುದನ್ನೇ ಮರೆತಿರುತ್ತಾರೋ ಏನೋ.

ಇರುವ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ‘ಪ್ರಸ್ತಾವ’ವನ್ನು ನಮ್ಮ ರಾಜ್ಯ ಸರಕಾರ ಈಗ ಮಾಡುತ್ತಿದ್ದರೆ ಕೇರಳದಲ್ಲಿ ಗುಡ್ಡದ ನೆತ್ತಿ ಸಮ ಮಾಡಿ ಆ ರಾಜ್ಯದ ನಾಲ್ಕನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಇಚ್ಛಾಶಕ್ತಿ ಇಲ್ಲದಿದ್ದರೆ ಬಸ್‌ ನಿಲ್ದಾಣವಷ್ಟೇ ಅಲ್ಲ ವಿಮಾನ ನಿಲ್ದಾಣವೂ ಅಭಿವೃದ್ಧಿ ಕಾಣುವುದಿಲ್ಲ ಎಂಬುದಕ್ಕೆ ಮೈಸೂರಿನ ವಿಮಾನ ನಿಲ್ದಾಣ ಒಂದು ತಾಜಾ ಉದಾಹರಣೆ.