samachara
www.samachara.com
ಮಾನ್ಸೂನ್‌ ಮಳೆಯ ಜೂಜಾಟ: ಜಲಾಶಯಗಳು ತುಂಬಿವೆ; ಹೆಚ್ಚಿನ ಕಡೆ ಬಿತ್ತನೆಯೇ ಆಗಿಲ್ಲ
/spandanfeatures
COVER STORY

ಮಾನ್ಸೂನ್‌ ಮಳೆಯ ಜೂಜಾಟ: ಜಲಾಶಯಗಳು ತುಂಬಿವೆ; ಹೆಚ್ಚಿನ ಕಡೆ ಬಿತ್ತನೆಯೇ ಆಗಿಲ್ಲ

ಅಬ್ಬರಿಸಿ ಬೊಬ್ಬಿರಿದ ಅವಧಿ ಪೂರ್ವ ಮುಂಗಾರು ಮಳೆ ಕೆರೆ ಕಟ್ಟೆ ಕಾಲುವೆಗಳನ್ನೆಲ್ಲಾ ತುಂಬಿಸಿ, ಸಂತಸ ಮೂಡಿಸಿತು. ಆದರೆ ಈಗ ರೈತರು ಬಿತ್ತನೆ ಮಾಡಬೇಕಾದ ಸಂಧರ್ಭದಲ್ಲಿಯೇ ಕೈಕೊಟ್ಟಿದೆ.

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ಈ ಬಾರಿ ಭಾರತದ ಬಹುಭಾಗಗಳು ಅಗಾಧವಾದ ಮಳೆಯನ್ನು ಪಡೆದಿವೆ. ಕರ್ನಾಟಕವೂ ಕೂಡ ಇದರಿಂದ ಹೊರತೇನಲ್ಲ. ಪಶ್ಚಿಮ ಘಟ್ಟಗಳಲ್ಲಿ ಬಿದ್ದ ಮಳೆ ಕರ್ನಾಟಕದ ಬಹುಪಾಲು ಜಲಾಶಯಗಳನ್ನು ಭರ್ತಿಯಾಗಿಸಿದೆ. ನೀರು ಕಂಡು ಹತ್ತಾರು ವರ್ಷಗಳೇ ಆಗಿದ್ದ ಕರೆಕಟ್ಟೆಗಳೆಲ್ಲಾ ತುಂಬಿ ಕೋಡಿ ಹರಿದಿದೆ. ಇಡೀ ವಾತಾವರಣ ಸಮೃದ್ಧವಾಗಿ ಕಾಣಿಸುತ್ತಿದೆ. ಆದರೆ ಈ ವರ್ಷ ಹಲವಾರು ಬೇಳೆ, ಕಾಳು, ಧಾನ್ಯಗಳ ಇಳುವರಿ ಕಡಿಮೆಯಾಗುತ್ತದೆ ಎಂಬ ಆಂತಕ ದೇಶದೆಲ್ಲೆಡೆ ವ್ಯಕ್ತವಾಗುತ್ತಿದೆ.

ಗುಜರಾತ್‌, ಬಿಹಾರ, ಜಾರ್ಖಂಡ್‌, ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ ಈ ಬಾರಿ ಇಳುವರಿ ಕಡಿಮೆಯಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಮಳೆ ಬೀಳದಿದ್ದರೆ ಬೇಳೆ ಕಾಳುಗಳು, ಕಡಲೆಕಾಯಿ, ಹತ್ತಿ, ಧಾನ್ಯಗಳು ಮತ್ತು ಭತ್ತದ ಇಳುವರಿ ಕುಸಿಯಲಿದೆ ಎಂದು ರೈತರು, ಸರಕಾರಿ ಅಧಿಕಾರಿಗಳು ಹಾಗೂ ಕೃಷಿ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಬಿಹಾರದ ಸರಕಾರಿ ಅಧಿಕಾರಿಗಳು ಹೇಳುವಂತೆ ಅಕಾಲಿಕ ಮಳೆಯ ಕಾರಣದಿಂದಾಗಿ ಭತ್ತ ಮತ್ತು ಮುಸುಕಿನ ಜೋಳದ ಇಳುವರಿ ಕುಂಠಿತಗೊಳ್ಳಲಿದೆ. ಮಹಾರಾಷ್ಟ್ರದಲ್ಲಿ ಸೋಯಾ ಬೀನ್‌ ಬೆಳೆ ಹೂವು ಬಿಡುವ ಹಂತದಲ್ಲಿದ್ದು, ಮಳೆಯಾಗದ ಕಾರಣ ರೈತರು ಚಿಂತೆಗೀಡಾಗಿದ್ದಾರೆ. ಗುಜರಾತ್‌ ರಾಜ್ಯದಲ್ಲಿ ಹತ್ತಿ ಮತ್ತು ಕಡೆಲೆಕಾಯಿಗಳ ಬಿತ್ತನೆಯಾಗಿದ್ದು, ಬಾರದ ಮಳೆ ದೀರ್ಘ ವಿರಾಮ ತೆಗೆದುಕೊಂಡಿರುವ ಕಾರಣಕ್ಕಾಗಿ ಫಸಲು ಕೈಸೇರದಿರುವ ಭಯದಲ್ಲಿದ್ದಾರೆ ಎಂದು ‘ದಿ ಎಕನಾಮಿಕ್ಸ್‌ ಟೈಮ್‌’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕರ್ನಾಟಕದ ಹಲವು ಭಾಗಗಳು ಧಾನ್ಯ, ಎಣ್ಣೆ ಕಾಳುಗಳು ಮತ್ತು ಬೇಳೆಗಳ ಉತ್ಪಾದನೆಗೆ ಹೆಸರಾಗಿವೆ. ಆದರೆ ಮುಂಗಾರು ಮಳೆ ಕೈಕೊಟ್ಟಿರುವ ಕಾರಣದಿಂದಾಗಿ ಹಲವಾರು ಭಾಗಗಳಲ್ಲಿನ್ನೂ ಬಿತ್ತನೆಯಾಗಿಲ್ಲ. ಮುಂಗಾರು ಮಳೆಯಲ್ಲಿ ಶೇ.10ರಷ್ಟು ಕೊರೆತೆಯನ್ನು ಕರ್ನಾಟಕ ಎದುರಿಸುತ್ತಿದ್ದು, ನಿರೀಕ್ಷಿತ ಫಸಲು ಕೈಸೇರುವುದು ಸಂದೇಹಾಸ್ಪದವಾಗಿದೆ.

ಬಿಹಾರ ಶೇ.16ರಷ್ಟು ಮುಂಗಾರು ಮಳೆಯ ಕೊರತೆಯನ್ನು ಎದುರಿಸುತ್ತಿದ್ದು, ರೈತರು ಬಿತ್ತನೆ ಮಾಡದೇ ಮಳೆಗಾಗಿ ಕಾಯುತ್ತಿದ್ದಾರೆ. ಗುಜರಾತ್‌ನಲ್ಲೂ ಕೂಡ ಇಂತಹದ್ದೇ ಪರಿಸ್ಥಿತಿ. ಹತ್ತಿ ಮತ್ತು ಕಡಲೆಕಾಯಿ ಬಿತ್ತನೆಗಾಗಿ ಕಾದು ಕುಳಿತಿರುವ ರೈತರ ಜತೆ ಮಳೆ ಆಟವಾಡುತ್ತಿದೆ. ಕೇವಲ ಕೊಳವೆ ಭಾವಿ ಮತ್ತು ಬಾವಿಗಳಿರುವ ರೈತರು ಮಾತ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/downtoearth

ಮಧ್ಯ ಪ್ರದೇಶದಲ್ಲಿ ಈ ವರ್ಷ ಕಳೆದ ವರ್ಷಕ್ಕಿಂತಲೂ ಶೇ.11ರಷ್ಟು ಹೆಚ್ಚು ಸೋಯಾ ಬೀನ್‌ ಬಿತ್ತನೆಯಾಗಿದೆ. ಈಗ ಹೂವು ಬಿಡುವ ಸಮಯವಾಗಿದ್ದು, 10-12 ದಿನಗಳಿಂದ ರಾಜ್ಯದ್ಯಂತ ಮಳೆಯಾಗಿಲ್ಲ. ಹೀಗಾಗಿ ಸೋಯಾ ಬೀನ್‌ ಇಳುವರಿ ಕೂಡ ಕಡಿಮೆಯಾಗುವ ಆತಂಕ ಮೂಡಿದೆ.

ಮಳೆ ಬಿದ್ದರೂ ಬೆಳೆ ಏಕಿಲ್ಲ?:

ಎಷ್ಟು ಪ್ರಮಾಣದ ಮಳೆ ಬಿತ್ತು ಎನ್ನುವುದಕ್ಕಿಂತ ಯಾವ ಸಮಯದಲ್ಲಿ ಮಳೆ ಬಿತ್ತು ಎನ್ನುವುದು ಮುಖ್ಯವಾದ ಸಂಗತಿ ಎನ್ನುತ್ತಾರೆ ಯುವ ರೈತರಿಗೆ ಸುಸ್ಥಿರ ಕೃಷಿ ತರಭೇತಿ ನೀಡಿ ಕೃಷಿಯತ್ತ ತಿರುಗುವಂತೆ ಮಾಡುತ್ತಿರುವ ರಮೇಶ್‌ ಚೀಮಾಚನಹಳ್ಳಿ.

ಅವಧಿ ಪೂರ್ವ ಮುಂಗಾರು ಮಳೆ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿದೆ. ಆದರೆ ನೀರಿದ್ದ ಮಾತ್ರಕ್ಕೆ ಕೃಷಿ ಸಾಧ್ಯವಿಲ್ಲ. ಕೃಷಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಮಳೆ ಅತ್ಯಗತ್ಯ.
ರಮೇಶ್‌ ಚೀಮಾಚನಹಳ್ಳಿ, ಸುಸ್ಥಿರ ಕೃಷಿ ತರಬೇತುದಾರರು.

ಕರ್ನಾಟಕದಲ್ಲಿ ಬಿತ್ತನೆ ನಡೆಯುವುದು ಆರಿದ್ರಾ ನಕ್ಷತ್ರದ ಸಂಧರ್ಭದಲ್ಲಿ. ಜೂನ್‌ ಮತ್ತು ಜುಲೈ ಸಂಧರ್ಭದಲ್ಲಿ ಬೀಳುವ ಮಳೆಯನ್ನು ಆರಿದ್ರಾ ಎಂದು ಕರೆಯಲಾಗುತ್ತದೆ. ಕರ್ನಾಟಕದಲ್ಲಿ ಬಿತ್ತನೆ ಮಾಡಲು ಇದೇ ಸೂಕ್ತವಾದ ಸಮಯ. ಇದು ಮುಂಗಾರು ಮಳೆಯ ಕಾಲವೂ ಹೌದು. ಆದರೆ ರಾಜ್ಯದಲ್ಲಿ ಮುಂಗಾರು ಮಳೆ ಜೂನ್‌ ತಿಂಗಳಿಗಿಂತಲೂ ಮುಂಚೆ ಅಬ್ಬರಿಸಿ, ಕೆರೆ, ಕಟ್ಟೆ, ಕಾಲುವೆಗಳನ್ನೆಲ್ಲಾ ತುಂಬಿಸಿ ಮಾಯವಾಗಿದೆ. “ಆರಿದ್ರಾ ಮಳೆ, ಚಿಕ್ಕ ಹಸ್ತ ಮಳೆ, ದೊಡ್ಡ ಹಸ್ತ ಮಳೆಗಳೆಲ್ಲವೂ ಕೈಕೊಟ್ಟಿವೆ. ಇವನ್ನೇ ನಂಬಿಕೊಂಡು ಜೂನ್‌ ಜುಲೈನಲ್ಲಿ ಬಿತ್ತನೆ ಮಾಡಬೇಕೆಂದು ಕಾದು ಕುಳಿತ ರೈತರು ಈಗ ಮಳೆ ಕಾಣದೇ ಕಂಗಾಲಾಗಿದ್ದಾರೆ. ಬದಲಾದ ವಾತಾವರಣವೇ ಅಕಾಲಿಕ ಮಳೆಗೆ ಕಾರಣ,” ಎನ್ನುತ್ತಾರೆ ರಮೇಶ್.

ಮಳೆ ಸರಿಯಾದ ಸಂಧರ್ಭಕ್ಕೆ ಬಂದಿದ್ದರೆ ರೈತರು ಈಗಾಗಲೇ ಬಿತ್ತನೆ ಕಾರ್ಯವನ್ನೆಲ್ಲಾ ಮುಗಿಸಿ, ಮೊದಲ ಕಳೆ ಕೀಳುವ ದಾವಂತದಲ್ಲಿ ಇರಬೇಕಾಗಿತ್ತು. ಆದರೆ ಇನ್ನು ಬಿತ್ತನೆ ಕಾರ್ಯವೇ ನಡೆದಿಲ್ಲ.

ಮುಂಚೆಯೇ ಬಿತ್ತನೆ ಮಾಡಲು ಸಾಧ್ಯವಿಲ್ಲವೇಕೆ?:

ಇಡೀ ರಾಜ್ಯದಲ್ಲಿ ಪೂರ್ವ ಮುಂಗಾರು ಅಬ್ಬರಿಸಿ, ಇಡೀ ರೈತ ಸಮೂಹದಲ್ಲಿ ಸಂತಸವನ್ನು ತಂದಿತ್ತು. ಕೆರೆ ಕಟ್ಡೆಗಳೆಲ್ಲಾ ತುಂಬಿದ್ದರಿಂದ ಈ ಬಾರಿ ಉತ್ತಮ ಫಸಲು ದೊರೆಯುವ ನಿರೀಕ್ಷೆಯಲ್ಲಿ ರೈತರಿದ್ದರು. ಆದರೆ ಬಿತ್ತನೆಯೇ ಅಗಿಲ್ಲ. ಇದನ್ನು ಕಂಡಾಗ ಆಗಲೇ ಏಕೆ ಬಿತ್ತನೆ ಮಾಡಲಿಲ್ಲ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಜೂನ್‌ ತಿಂಗಳಿಗಿಂತ ಮುಂಚೆಯೇ ಬಿತ್ತನೆ ಮಾಡಿದರೆ ದೀಪಾವಳಿ ಹಬ್ಬಕ್ಕಿಂತಲೂ ಮುಂಚೆಯೇ ಪೈರುಗಳು ತೆನೆಹೊತ್ತು ನಿಲ್ಲುತ್ತವೆ. ಆದರೆ ಅದು ಸ್ವಾತಿ ಮಳೆಯ ಸಂಧರ್ಭ. ಈ ಸಮಯದಲ್ಲಿ ಸೋನೆ ಮಳೆ ಬೀಳುತ್ತಿರುತ್ತದೆ. ಸೈಕ್ಲೋನ್‌ ಸಂಭವವೂ ಇರುತ್ತದೆ. ಇಡೀ ಹೊಲ ಗದ್ದೆ ತೋಟಗಳು ಫಸಲನ್ನು ಹೊತ್ತು ನಿಂತ ಸಂಧರ್ಭದಲ್ಲಿ ಮಳೆ ಬಿದ್ದರೆ ಇಡೀ ಫಸಲು ನಾಶವಾಗುತ್ತದೆ. ಕುಯ್ಲಿಗೆ ಬಂದದಲ್ಲೆಲ್ಲವೂ ನೀರನಲ್ಲಿ ಮಿಂದೆದ್ದು ನಾಶವಾಗುತ್ತದೆ. ಆದ್ದರಿಂದ ಮುಂಚೆಯೇ ಬಿತ್ತನೆ ಮಾಡುವುದೂ ಕೂಡ ಅಸಾಧ್ಯ.

ಜಲಾಶಯಗಳಲ್ಲಿ ನೀರಿದೆಯಲ್ಲವೇ?:

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/youtube

ಅವಧಿ ಪೂರ್ವ ಮುಂಗಾರಿನ ಕಾರಣದಿಂದಾಗಿ ಎಲ್ಲಾ ಕೆರೆ ಕಟ್ಟೆಗಳು ಕೋಡಿ ಬಿದ್ದಿದ್ದು, ಭರಪೂರ ನೀರಿದ್ದಾಗಲೂ ಸಹ ಮಳೆಯನ್ನೇ ಏಕೆ ಆಶ್ರಯಿಸಿ ಕೂರಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆದರೆ ಕೆಲವು ಬೆಳೆಗಳು ಕೆರೆ ಕಟ್ಟೆಗಳ ನೀರಿಗಿಂತ ಮಳೆಯನ್ನೇ ಆಸ್ರಯಿಸಿ ನಿಂತಿವೆ. ದಕ್ಷಿಣ ಕರ್ನಾಟದಲ್ಲಿ ದಿನನಿತ್ಯ ಬಳಕೆಯಾಗುವ ರಾಗಿ ಮಳೆಯನ್ನೇ ಆಶ್ರಿಯಿಸಿರುವ ಬೆಳೆ. ಹೆಚ್ಚಾಗಿ ಒಣ ಪ್ರದೇಶದಲ್ಲೇ ಬೆಳೆಯುವ ರಾಗಿಗೆ ಮಳೆಯೇ ಆಸರೆ. ರಾಗಿಯನ್ನು ಹೊರತುಪಡಿಸಿ ಮುಸುಕಿನ ಜೋಳ, ತೊಗರಿ ಸೇರಿದಂತೆ ಹಲವಾರು ಬೇಳೆ ಕಾಳುಗಳೂ ಕೂಡ ತೋಟಗಾರಿಕಾ ಕೃಷಿಗಳಲ್ಲದ ಕಾರಣ ಮಳೆಯನ್ನು ಆಶ್ರಿಯಿಸಿವೆ.

ಇದು ಒಂದೆಡೆಯಾದರೆ ನೀರಾವರಿಯಿರುವ ಭೂಮಿಯೆಷ್ಟು ಎನ್ನುವುದು ಮತ್ತೊಂದು ಪ್ರಶ್ನೆ. ಭಾರತ ಮತ್ತು ಕರ್ನಾಟಕಗಳ ಸಂಧರ್ಭದಲ್ಲಿ ನೀರಾವರಿ ಹೊಂದಿರುವ ಕೃಷಿ ಭೂಮಿಗಿಂತ, ಮಳೆ ಆಶ್ರಿತ ಒಣ ಭೂಮಿಯೇ ಹೆಚ್ಚು. ದೇಶದಲ್ಲಿನ ಕೃಷಿ ಭೂಮಿಯ ಪೈಕಿ 58 ಮಿಲಿಯನ್‌ ಹೆಕ್ಟೇರ್‌ ಪ್ರದೇಶ, ಅಂದರೆ ಶೇ.35ರಷ್ಟು ಕೃಷಿ ಭೂಮಿ ಮಾತ್ರವೇ ನೀರಾವರಿಯನ್ನು ಹೊಂದಿದೆ. ಉಳಿದ ಶೇ.65ರಷ್ಟು (160 ಮಿಲಿಯನ್‌ ಹೆಕ್ಟೇರ್‌) ಕೃಷಿ ಭೂಮಿ ಮಳೆ ಆಧಾರಿತವಾಗಿದೆ. ಕೆರೆ ಕಟ್ಟೆಗಳಲ್ಲಿ ನೀರು ತುಂಬಿದರೆ ಈ ಭೂಮಿಗೇನೂ ಲಾಭವಿಲ್ಲ.

ಜಲಾಶಯಗಳಿಂದ ನೀರಾವರಿ ಸೌಲಭ್ಯ ಹೊಂದಿರುವ ಕೃಷಿ ಭೂಮಿಗಳಿಗೆ, ಕೊಳವೆ ಬಾವಿ, ಭಾವಿಗಳ ಮೂಲಕ ನೀರು ಪಡೆಯುತ್ತಿರುವ ಕೃಷಿ ಭೂಮಿಗಳಿಗೂ ಕೂಡ ಮಳೆ ಅಗತ್ಯ ಇದ್ದೇ ಇದೆ. ಗಿಡಗಳು ಬೆಳೆಯಲು ತಂಪು ಹವೆ ಅತ್ಯಗತ್ಯವಾಗಿದೆ. “ನೀರಾವರಿಯ ಮೂಲಕ ನೀರುಣಿಸುವುದರಿಂದ ಭೂಮಿಯನ್ನು ತಂಪು ಮಾಡಬಹುದು, ಆದರೆ ಇಡೀ ವಾತಾವರಣದಲ್ಲಿ ತೇವಾಂಶ ತುಂಬಲು ಸಾಧ್ಯವಾಗುವುದಿಲ್ಲ. ಗಿಡಗಳ ಬೆಳೆವಣಿಗೆಗೆ ಮಣ್ಣು ತಂಪಾಗಿರುವುದು ಎಷ್ಟು ಮುಖ್ಯವೂ, ವಾತಾವರಣ ತಂಪಾಗಿರುವುದೂ ಕೂಡ ಅಷ್ಟೇ ಮುಖ್ಯ,” ಎನ್ನುತ್ತಾರೆ ರಮೇಶ್‌ ಚೀಮಾಚನಹಳ್ಳಿ.

ಭಾರತದ ಮಾನ್ಸೂನ್‌ ಮಳೆ ದೇಶದ ಕೃಷಿಕರ ಜತೆ ಜೂಜಾಟ ಆಡುತ್ತದೆ ಎಂಬ ಮಾತು ತುಂಬಾ ಹಳೆಯದು. ಆದರೆ ಇಂದಿಗೂ ಸಹ ವಾಸ್ತವವೆನಿಸುತ್ತದೆ. ವರ್ಷದ ಪ್ರಾರಂಭದಲ್ಲಿ ಬಿದ್ದ ಧಾರಾಕಾರ ಮಳೆ ರೈತರಲ್ಲಿ ಸಂತಸ ಮೂಡಿಸಿತು ಎನ್ನುವುದೇನೋ ನಿಜ. ಆದರೆ ಮುಂಗಾರು ಕಳೆಯುವ ಮೊದಲೇ ರೈತರ ಮೊಗದಲ್ಲಿ ಚಿಂತೆಯ ಗೆರೆಗಳನ್ನು ಮೂಡಿದೆ. ಜಲಾಶಯಗಳಲ್ಲಿ ನೀರಿದ್ದರೂ ಮಳೆ ಬೀಳದೆ ಬಿತ್ತನೆಯೂ ಕೂಡ ನಡೆಯದಿರುವ ಕಾರಣದಿಂದ ರೈತರು ಚಿಂತೆಗೀಡಾಗಿದ್ದಾರೆ.