samachara
www.samachara.com
‘ಕಲೈನಾರ್‌ ಕರುಣಾನಿಧಿ’: ಹೋರಾಟ- ರಾಜಕೀಯ- ಬದುಕು- ಉದ್ಯಮಗಳ ಅಪರೂಪದ ಅಧ್ಯಾಯಗಳು
COVER STORY

‘ಕಲೈನಾರ್‌ ಕರುಣಾನಿಧಿ’: ಹೋರಾಟ- ರಾಜಕೀಯ- ಬದುಕು- ಉದ್ಯಮಗಳ ಅಪರೂಪದ ಅಧ್ಯಾಯಗಳು

ಕರುಣಾನಿಧಿ ಬದುಕನ್ನು ಕೊಂಚ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಹಾಗೂ ಅಪರೂಪದ ಮಾಹಿತಿಗಳಿಗಾಗಿ ನೀವು ಪೂರ್ಣ ಓದಲೇಬೇಕಿದೆ. ಬಹುಶಃ ಕನ್ನಡದಲ್ಲಿ ಕರುಣಾನಿಧಿ ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಏಕೈಕ ಲೇಖನ ಸದ್ಯಕ್ಕೆ ಇದೊಂದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದೇಶದ ಕಂಡ ಸುದೀರ್ಘ ರಾಜಕಾರಣಿ ಮುತ್ತುವೇಲು ಕರುಣಾನಿಧಿ ಇನ್ನಿಲ್ಲ. ಚೆನ್ನೈನ ಕಾವೇರಿ ಆಸ್ಪತ್ರೆಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಕೆಲ ದಿನಗಳ ಹಿಂದೆ ದಾಖಲಾಗಿದ್ದರು. ಅವರಿಗೆ 94 ವರ್ಷ ವಯಸ್ಸಾಗಿತ್ತು. ಮೂವರು ಪತ್ನಿಯರು, 6 ಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಸಂಖ್ಯೆಯ ಅಭಿಮಾನಗಳನ್ನು ಅಗಲಿರುವ ಕರುಣಾನಿಧಿ ವ್ಯಕ್ತಿತ್ವ ಕಟ್ಟಿಕೊಡುವುದು ಸುಲಭ ಮಾತಲ್ಲ.

ಸ್ವಾತಂತ್ರ್ಯ ಪೂರ್ವದಿಂದ ಆರಂಭವಾಗುವ ಕರುಣಾನಿಧಿ ಅಧ್ಯಾಯ, ಇತ್ತೀಚಿನ ರಾಜಕಾರಣದವರೆಗೂ ಬೆಳೆದು ಬರುತ್ತದೆ. ಒಂದು ಕಡೆ ದ್ರಾವಿಡ ಚಳವಳಿ, ಹಿಂದಿ ವಿರೋಧಿ ಹೋರಾಟ, ವಿದ್ಯಾರ್ಥಿ ಚಳವಳಿ, ರಾಜಕಾರಣ, ಅಲ್ಲಿ ಹುಟ್ಟುವ ಸ್ನೇಹ, ಮುನಿಸುಗಳು, ಅಧಿಕಾರ ರಾಜಕಾರಣದ ಏಳು ಬೀಳುಗಳು, ಅದರ ನಡುವೆ ಬೆಳೆಯುವ ಕುಟುಂಬ, ಅದರ ಒಳಗಿನ ರಾಜಕೀಯ, ಇವಕ್ಕೆ ಸಮಾನಾಂತರವಾಗಿ ಬೆಳೆದ ಉದ್ಯಮ, ಅವರ ಒಳಸುಳಿಗಳು ಕರುಣಾನಿಧಿ ಎಂಬ ಅಪರೂಪದ ರಾಜಕಾರಣಿಯ ಹಿನ್ನೆಲೆ ಕತೆಯಲ್ಲಿ ಅಧ್ಯಾಯಗಳ ರೂಪದಲ್ಲಿ ಬರುತ್ತವೆ. ಅವುಗಳನ್ನು ‘ಸಮಾಚಾರ’ ಓದುಗರಿಗಾಗಿ ಕಟ್ಟಿಕೊಟ್ಟಿದೆ.

ಲೇಖನ ಕೊಂಚ ಸುದೀರ್ಘ ಅಂತ ಅನ್ನಿಸಿದರೂ, ಕರುಣಾನಿಧಿ ಬದುಕನ್ನು ಕೊಂಚ ಮಟ್ಟಿಗೆ ಅರ್ಥ ಮಾಡಿಕೊಳ್ಳಲು ಹಾಗೂ ಅಪರೂಪದ ಮಾಹಿತಿಗಳಿಗಾಗಿ ನೀವು ಪೂರ್ಣ ಓದಲೇಬೇಕಿದೆ. ಬಹುಶಃ ಕನ್ನಡದ ಅಂತರ್ಜಾಲದಲ್ಲಿ ಕರುಣಾನಿಧಿ ಬದುಕನ್ನು ಸಮಗ್ರವಾಗಿ ಕಟ್ಟಿಕೊಡುವ ಏಕೈಕ ಲೇಖನ ಸದ್ಯಕ್ಕೆ ಇದೊಂದೆ.

***

ಆತ ಎಳೆವೆಯಲ್ಲೇ ಸಾಹಿತ್ಯದ ಒಲವು ಬೆಳೆಸಿಕೊಂಡ ಹುಡುಗ. ಬೆಳೆಯುತ್ತಾ ಸಮಾಜದ ಅವ್ಯವಸ್ಥೆಗಳು ಆತನ ಕಣ್ಣಿಗೆ ರಾಚುತ್ತಿದ್ದವು. ಹೋರಾಟಕ್ಕೆ ಗೆಜ್ಜೆ ಕಟ್ಟಿ ಸಮಾಜವಾದಿ ಚಳುವಳಿ ಸೇರಿಕೊಂಡ. ಆಸಕ್ತಿಯ ಸಾಹಿತ್ಯವನ್ನು ಹೋರಾಟಕ್ಕೆ ಬಳಸಿಕೊಂಡ. ಸಿನಿಮಾಕ್ಕಾಗಿ ಬರೆದ. ಅದು ಆತನನ್ನು ಜನಪ್ರಿಯನನ್ನಾಗಿಸಿತು. ದಕ್ಕಿದ ಹೆಸರು ಸಂಘಟನೆಯಲ್ಲಿ ಆತನಿಗೆ ಸ್ಥಾನಮಾನವನ್ನು ತಂದುಕೊಟ್ಟಿತು. ಹುದ್ದೆಯ ಜೊತೆಗೆ ತನ್ನ ಬುದ್ಧಿ ಶಕ್ತಿ ಪ್ರಯೋಗಿಸಿದ. ಮುಂದೊಂದು ದಿನ ರಾಜ್ಯವೊಂದರ ಮುಖ್ಯಮಂತ್ರಿಯಾದ...

ಅಧಿಕಾರಕ್ಕೇರುತ್ತಿದ್ದಂತೆ ಸಹಜ ದರ್ಪ ದೌಲತ್ತುಗಳು ಮೆತ್ತಿಕೊಂಡವು. ಕುಟಂಬದಲ್ಲೇ ಸಾವಿರಾರು ಕೋಟಿಯ ಕುಳಗಳು ಹುಟ್ಟಿಕೊಂಡರು. ಮಕ್ಕಳು, ಮರಿಮಕ್ಕಳು ರಾಜಕಾರಣಿಗಳಾಗಿ ಆಯಕಟ್ಟಿನ ಹುದ್ದೆ ಸೇರಿಕೊಂಡರು. ಕೊನೆಗೊಂದು ದಿನ ದೊಪ್ಪೆಂದು ಕೆಳಗೆ ಬಿದ್ದ. ಆತ ಮತ್ಯಾರೂ ಆಗಿರಲಿಲ್ಲ; ಮುತ್ತುವೇಲು ಕರುಣಾನಿಧಿ ಅಲಿಯಾಸ್‌ ತಮಿಳಿಗರ ಆರಾಧ್ಯ ದೈವ ಕಲೈನಾರ್‌.

ಬಿಳಿ ಪಂಚೆ, ಬಿಳಿ ಅಂಗಿ ಅದರ ಮೇಲೊಂದು ಸಣ್ಣ ಹಳದಿ ಶಾಲು, ಕಣ್ಣಿಗೊಂದು ಕಪ್ಪು ಕನ್ನಡಕ... ಇವಿಷ್ಟೇ ಕರುಣಾನಿಧಿ ವೇಷಭೂಷಣಗಳು. ಆದರೆ ಆಳಕ್ಕಿಳಿದರೆ ಬಿಳಿ ಅಂಗಿ ಮೇಲಿನ ಕಪ್ಪು ಚುಕ್ಕೆಗಳು, ಆಳದಲ್ಲಿ ಹುದುಗಿದ ರಂಗು ರಂಗಿನ ಬದುಕಿನ ವರ್ಣಗಳು ಕಣ್ಣೆದುರು ತೆರೆದುಕೊಳ್ಳುತ್ತವೆ. ಅವುಗಳ ಕಿರುನೋಟವೇ ಈ ‘ಕಲೈನಾರ್‌ ಕರುಣಾನಿಧಿ’.

ಅದು ಸ್ವಾತಂತ್ರ್ಯ ಪೂರ್ವ ಕಾಲಘಟ್ಟ; 1924ರ ಇಸವಿ. ತಮಿಳುನಾಡಿನ ಪಾಲಿಗೆ ಮಹತ್ವದ ವರ್ಷ. ಇಂದಿನ ಕೇರಳದಲ್ಲಿರುವ ವೈಕೋಮ್‌ನಲ್ಲಿ ಇ. ವಿ. ರಾಮಸ್ವಾಮಿ ಅಲಿಯಾಸ್‌ ಪೆರಿಯಾರ್‌ ಸತ್ಯಾಗ್ರಹ ಕುಳಿತುಕೊಂಡಿದ್ದರು. ಕೆಳಜಾತಿಯ ಜನರಿಗೆ ದೇವಾಲಯ ಪ್ರವೇಶವನ್ನು ನಿರಾಕರಿಸುವುದರ ವಿರುದ್ಧ ಅವರು ಅಹಿಂಸಾತ್ಮಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಅದೇ ವರ್ಷ ಚೆನ್ನೈನಿಂದ 300 ಕಿಲೋಮೀಟರ್‌ ದೂರದಲ್ಲಿರುವ ತಿರುಕ್ಕುವಲೈನಲ್ಲಿ ಜೂನ್‌ 3ರಂದು ಜನಿಸಿದರು ಮುತ್ತುವೇಲು ಕರುಣಾನಿಧಿ. ಸಮುದ್ರ ತೀರದಲ್ಲಿರುವ ಭತ್ತದ ಗದ್ದೆಗಳೇ ಕಾಣಿಸುವ ಸುಂದರ ಊರದು. ಇಲ್ಲಿ ಕರುಣಾನಿಧಿಯವರ ಪೂರ್ವಜರು ದೇವಸ್ಥಾನವನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದರು. ಅಲ್ಲಿ ಅವರ ಕುಟುಂಬದವರು ದೇವಸ್ಥಾನದಲ್ಲಿ ನಾದಸ್ವರ ನುಡಿಸುವ ವೃತ್ತಿ ನಡೆಸುತ್ತಿದ್ದರು. ತುಂಬಾ ಬಡ ಕುಟುಂಬ ಅವರದ್ದು. ಇಸೈ ವೆಲ್ಲಲಾರ್‌ ಎಂದು ಅವರ ಸಮುದಾಯದ ಹೆಸರು.

ಬಡತನ ಹಾಸು ಹೊದ್ದು ಮಲಗಿರುವಾಗ ಕರುಣಾನಿಧಿ ತಂದೆ ಮುತ್ತುವೇಲು ಹಾಡುಗಳನ್ನು ಹೇಳುವುದು, ಗಿಡಮೂಲಿಕೆ ಮದ್ದುಗಳನ್ನು ಹಳ್ಳಿಗರಿಗೆ ನೀಡುತ್ತಿದ್ದರು. ಇದರಿಂದ ಒಂದಷ್ಟು ಸಂಪಾದನೆ ನಡೆಯುತ್ತಿತ್ತು. ಇಬ್ಬರು ಹುಡುಗಿಯರ ನಂತರ ಹುಟ್ಟಿದ ಕಾರಣಕ್ಕೆ ಕರುಣಾನಿಧಿ ಅವರಿಗೆ ಹೆಚ್ಚಿನ ಪ್ರಾಧಾನ್ಯತೆ ಮನೆಯಲ್ಲಿ ಸಿಕ್ಕಿತ್ತು.

ಪುಟ್ಟ ಕರುಣಾನಿಧಿಗೆ ಪೌರಾಣಿಕ ಕಥೆಗಳು, ಇತರ ಕತೆಗಳು ಮತ್ತು ಸಂಗೀತವನ್ನು ತಂದೆ ಪರಿಚಯಿಸಿದರು. ಶಾಲೆ ಮೆಟ್ಟಿಲು ಹತ್ತಿದ ಕರುಣಾನಿಧಿಗೆ ಕಲೆಯ ರುಚಿ ಹತ್ತಿತು. ಶಾಲೆಯಲ್ಲಿ ನಾಟಕ, ಹಾಡು ಹೇಳುವುದರಲ್ಲಿ ಮುಂಚೂಣಿಯಲ್ಲಿದ್ದರು. ಹೀಗಿರುವಾಗ 14ನೇ ವಯಸ್ಸಿಗೆ ರಾಜಕೀಯ ಪಕ್ಷ ಸೇರುವ ತುಡಿತ ಪ್ರೌಢ ವಯಸ್ಸಿಗೆ ಬಂದಿದ್ದ ಕರುಣಾನಿಧಿಯಲ್ಲಿ ಕಾಣಿಸಿಕೊಂಡಿತು. ಅದಕ್ಕೆ ಕಾರಣವಾಗಿದ್ದು ‘ಜಸ್ಟೀಸ್‌ ಪಾರ್ಟಿ’ಯ ಅಳಗಿರಿಸ್ವಾಮಿ. ಅವರ ಮೋಡಿಯ ಮಾತನ್ನು ಕೇಳುತ್ತಲೇ ಮಾರು ಹೋದ ಕರುಣಾನಿಧಿ ವಯಸ್ಸಲ್ಲದ ವಯಸ್ಸಿನಲ್ಲಿ ಸಾಮಾಜಿಕ ಚಳುವಳಿಗೆ ಧುಮುಕಿದ್ದರು.

ಎಳೆ ವಯಸ್ಸಿನಲ್ಲಿ ಕರುಣಾನಿಧಿ. 
ಎಳೆ ವಯಸ್ಸಿನಲ್ಲಿ ಕರುಣಾನಿಧಿ. 

ಅಷ್ಟೊತ್ತಿಗೆ ತಮಿಳುನಾಡಿನಲ್ಲಿ ‘ಆತ್ಮ ಗೌರವ’ದ ದೊಡ್ಡ ಹೋರಾಟವೇ ಆರಂಭವಾಗಿತ್ತು. ಜಾತಿ ವ್ಯವಸ್ಥೆಯ ಸಮಾಜದಲ್ಲಿ ಕೆಳವರ್ಗಗಳ ಜನರಿಗೆ ಹೆಚ್ಚಿನ ಹಕ್ಕುಗಳನ್ನು ಮತ್ತು ಗೌರವಯುತ ಜೀವನವನ್ನು ನೀಡುವ ಉದ್ದೇಶದೊಂದಿಗೆ ಈ ಹೋರಾಟ 1921ರಲ್ಲಿ ಆರಂಭವಾಗಿತ್ತು. ಎಸ್‌. ರಾಮನಾಥನ್‌ ಇದನ್ನು ಹುಟ್ಟು ಹಾಕಿದ್ದರು. ಈ ಹೋರಾಟಕ್ಕೆ 1925ರಲ್ಲಿ ಪೆರಿಯಾರ್‌ ಸೇರ್ಪಡೆಯಾಗುವುದರೊಂದಿಗೆ ಇದು ಮತ್ತಷ್ಟು ತೀವ್ರಗೊಂಡಿತು.

ಕಾಂಗ್ರೆಸ್‌ ಪಕ್ಷದಲ್ಲಿದ್ದ ಪೆರಿಯಾರ್‌, ‘ನಿಮ್ಮ ಪಕ್ಷ ಕೇವಲ ಬ್ರಾಹ್ಮಣರ ತತ್ವಕ್ಕೆ ಮಾತ್ರ ಬೆಲೆ ನೀಡುತ್ತದೆ’ ಎಂದು ಜರೆದು ಹೊರಬಂದು ಚಳವಳಿಗೆ ಧುಮಿಕಿದ್ದರು. ವಿದೇಶಗಳನ್ನೆಲ್ಲಾ ಸುತ್ತಿ ಬಂದಿದ್ದ ಪೆರಿಯಾರ್‌ 1939ರಲ್ಲಿ ಜಸ್ಟೀಸ್‌ ಪಕ್ಷದ ಅಧ್ಯಕ್ಷರಾದರು. ಸರಿಯಾದ ಸಮಯಕ್ಕೆ ಇದೇ ಪಕ್ಷದಿಂದ ಪ್ರಭಾವಿತರಾಗಿ ತಾವೂ ಚಳವಳಿಯ ಅಂಗಳಕ್ಕೆ ಬಂದಿದ್ದರು ಕರುಣಾನಿಧಿ.

ಹೋರಾಟದಿಂದ ಪ್ರಭಾವಿತರಾದ ಕರುಣಾನಿಧಿ ತಮ್ಮ ಓರಗೆಯ ವಿದ್ಯಾರ್ಥಿಗಳನ್ನೇ ಕಟ್ಟಿಕೊಂಡು ಸಂಘಟನೆಯೊಂದನ್ನು ಹುಟ್ಟುಹಾಕಿದರು. ಅದೇ ಮುಂದೆ ‘ಆಲ್‌ ಸ್ಟುಡೆಂಟ್ಸ್‌ ಕ್ಲಬ್‌’ ಹೆಸರಿನಿಂದ ಗುರುತಿಸಿಕೊಂಡಿತು. ಇದು ‘ದ್ರಾವಿಡ ಚಳವಳಿ’ಯ ಮೊತ್ತ ಮೊದಲ ವಿದ್ಯಾರ್ಥಿ ಘಟಕವಾಯಿತು. ತಮಿಳುನಾಡಿನ ಜನರ ಮೇಲೆ ಹಿಂದಿ ಹೇರಿಕೆಯನ್ನು ವಿರೋಧಿಸುವುದು, ಮಹಿಳೆಯರ ಹಕ್ಕುಗಳಿಗೆ ಪ್ರಾಧಾನ್ಯತೆ ನೀಡುವುದು, ಕೆಳ ಜಾತಿಗಳ ಮೇಲಿನ ಬ್ರಾಹ್ಮಣ ಸಮುದಾಯದ ದಬ್ಬಾಳಿಕೆಯನ್ನು ವಿರೋಧಿಸುವುದು ದ್ರಾವಿಡ ಚಳವಳಿಯ ಮುಖ್ಯ ಉದ್ಧೇಶವಾಗಿತ್ತು. 14ರ ಯುವಕ ಕರುಣಾನಿಧಿ ಅರ್ಧಕ್ಕೆ ಶಾಲೆ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಈ ಚಳುವಳಿಗೆ ಧುಮಿಕಿದರು.

ಮುಂದೆ ‘ಜಸ್ಟೀಸ್‌ ಪಾರ್ಟಿ’ಯ ಹೆಸರನ್ನು ಪೆರಿಯಾರ್‌ ‘ದ್ರಾವಿಡ ಕಳಗಂ’ ಎಂದು ಬದಲಾಯಿಸಿದರು. ಇದೇ ಪಕ್ಷದಲ್ಲಿ ಒಡಕು ಮೂಡಿ 1949ರಲ್ಲಿ ಹೊಸ ಪಕ್ಷ ಸ್ಥಾಪನೆಯಾಯಿತು. ಅದರ ಹೆಸರೇ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ).

ಡಿಎಂಕೆಯ ರೋಚಕ ಅಧ್ಯಾಯ:

ತಮಿಳುನಾಡಿನ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಸಿ. ಕೆ. ಅಣ್ಣಾದೊರೈ ಈ ಪಕ್ಷ ಸ್ಥಾಪಿಸಿದ್ದರು. ಇದರ ಸ್ಥಾಪಕ ಸದಸ್ಯರಾಗಿದ್ದರು ಕರುಣಾನಿಧಿ. ತಮ್ಮ ವಿದ್ಯಾರ್ಥಿ ದೆಸೆಯಲ್ಲಿ ಕರುಣಾನಿಧಿ ಕೈ ಬರಹದ ಪತ್ರಿಕೆ ‘ಮನವರ್ ನೇಸನ್‌’ ಹೊರ ತರುತ್ತಿದ್ದರು. ತಮ್ಮ ಪರಿಣಾಮಕಾರಿ ಬರವಣಿಗೆಯನ್ನು ಬಳಸಿಕೊಂಡು ಈ ಪತ್ರಿಕೆ ಮೂಲಕ ಅವರು ವಿದ್ಯಾರ್ಥಿಗಳನ್ನು ಸಂಘಟಿಸುತ್ತಿದ್ದರು. ಈ ಅನುಭವದ ಮೇಲೆ ಅವರಿಲ್ಲಿ ಡಿಎಂಕೆಯ ಅಧಿಕೃತ ಮುಖವಾಣಿ ‘ಮುರಸೋಳಿ’ ಹೊಣೆ ಕೈಗೆತ್ತಿಕೊಂಡರು.

ಪತ್ರಿಕೆ, ಪಕ್ಷಕ್ಕಾಗಿ ಬರೆಯುವುದಲ್ಲದೆ ಜೀವನೋಪಾಯಕ್ಕಾಗಿಯೂ ಕರುಣಾನಿಧಿ ಲೇಖನಿ ಹಿಡಿಯುತ್ತಿದ್ದರು. ಸಿನಿಮಾಗಳಿಗೆ ಬರೆಯಲು ಆರಂಭಿಸಿದರು. ಹಾಗೆ ಅವರು ಚಿತ್ರಕಥೆ ಮತ್ತು ಸಂಭಾಷಣೆ ಬರೆದ ಪರಾಶಕ್ತಿ ಸಿನಿಮಾ 1952ರಲ್ಲಿ ಬಿಡುಗಡೆಯಾಯಿತು. ಅದೇ ಹೆಸರಿನ ನಾಟಕದ ಚಲನಚಿತ್ರ ಅವತರಣಿಕೆ ಇದಾಗಿತ್ತು. ಈ ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಸೂಪರ್‌ ಸ್ಟಾರ್‌ ಶಿವಾಜಿ ಗಣೇಶನ್‌ ಪಾದಾರ್ಪಣೆ ಮಾಡಿದ್ದರು. ಚಲಚಿತ್ರದ ಸಂಭಾಷಣೆಗಳ ಉದ್ದಕ್ಕೂ ತಮ್ಮ ನೆಚ್ಚಿನ ಸಮಾಜವಾದಿ ಸಿದ್ಧಾಂತ, ತಮಿಳು ಆತ್ಮಗೌರವದ ಮಾತುಗಳನ್ನು ತುರುಕಿದ್ದರು ಕರುಣಾನಿಧಿ. ಸಿನಿಮಾ ಸೂಪರ್‌ ಹಿಟ್‌ ಆಯಿತು. ಜತೆಗೆ ಜನರನ್ನು ತಲುಪಲು ಹೊಸ ಪರಿಣಾಮಕಾರಿ ಮಾಧ್ಯಮವೊಂದನ್ನು ಡಿಎಂಕೆ ಕಂಡುಕೊಂಡಿತು.

ತಮಿಳು ಚಿತ್ರರಂಗಕ್ಕೆ ತಿರುವು ನೀಡಿದ ಈ ಚಿತ್ರದ ಹಾಸ್ಯ ಭರಿತ, ಮೊನಚು ಸಂಭಾಷಣೆಗಳು ಕರುಣಾನಿಧಿಗೆ ಹೆಸರು ತಂದುಕೊಟ್ಟವು. ಸಿನಿಮಾವಲ್ಲದೆ ಐತಿಹಾಸಿಕ ಮತ್ತು ಪ್ರಗತಿಪರ ಲೇಖನಗಳ ಬರೆವಣಿಗೆಯನ್ನೂ ಕರುಣಾನಿಧಿ ಇಷ್ಟಪಡುತ್ತಿದ್ದರು. ಒಟ್ಟು 77 ಸಿನಿಮಾಗಳಿಗೆ ಮತ್ತು 2 ಲಕ್ಷಕ್ಕೂ ಅಧಿಕ ಪುಟಗಳ ಸಾಹಿತ್ಯ ಕೃಷಿಯನ್ನು ಅವರು ಮಾಡಿದ್ದರು. ಹೀಗೆ ಬರಹಗಾರರಾಗಿದ್ದ ಕರುಣಾನಿಧಿ ಅದೊಂದು ದಿನ ಜೈಲು ಸೇರಿದರು.

ಕಲ್ಲುಕುಡಿಯಲ್ಲಿ 1953 ರಲ್ಲಿ ದಾಲ್ಮಿಯಾ ಗ್ರೂಪ್‌ ಸಿಮೆಂಟ್‌ ಕಾರ್ಖಾನೆ ಆರಂಭಕ್ಕೆ ಹೊರಟಿತ್ತು. ಈ ಸಂದರ್ಭದಲ್ಲಿ ಊರಿನ ಹೆಸರನ್ನೇ ‘ದಾಲ್ಮಿಯಪುರಂ’ ಎಂದು ಕಂಪನಿ ಬದಲಾಯಿಸಿತು. ಇದು ಡಿಎಂಕೆ ನಾಯಕರಿಗೆ ರುಚಿಸಲಿಲ್ಲ. ಇದರ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯಿತು. ಇದರಲ್ಲಿ ಪೊಲೀಸರ ಗುಂಡಿಗೆ ಇಬ್ಬರು ಅಸುನೀಗಿದರೆ ಚಳುವಳಿಯಲ್ಲಿ ಪಾಲ್ಗೊಂಡಿದ್ದ ಮುತ್ತುವೇಲು ಕರುಣಾನಿಧಿ ಬಂಧಿತರಾದರು.

ಜೈಲಿನಿಂದ ಹೊರ ಬಂದ ಕರುಣಾನಿಧಿ ತಮ್ಮ ಬರವಣಿಗೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಅಸ್ಪೃಷ್ಯತೆ ವಿರೋಧಿ, ಜಮೀನ್ದಾರಿ ಪದ್ಧತಿಯ ನಿರ್ಮೂಲನೆಯನ್ನು ಬೆಂಬಲಿಸುವ, ವಿಧವಾ ವಿವಾಹಕ್ಕೆ ಪ್ರೊತ್ಸಾಹ ನೀಡುವಂತ ಕಾಲಕ್ಕಿಂತ ಮುಂದಿದ್ದ ಕ್ರಾಂತಿಕಾರಿ ಕಥೆಗಳನ್ನು ಸಿನಿಮಾಗಳಿಗೆ ಬರೆಯುತ್ತಿದ್ದರು. ಇದಕ್ಕೆ ಹಿಂದೂಗಳಲ್ಲಿದ್ದ ಬ್ರಾಹ್ಮಣ ಸಮಾಜದಿಂದ ಭಾರೀ ವಿರೋಧ ವ್ಯಕ್ತವಾಯಿತು. ಇದಕ್ಕೆ ತಲೆ ಕೆಡಿಸಿಕೊಳ್ಳದ ಕರುಣಾನಿಧಿಯ ಪೆನ್ನು ಹಾಳೆಗಳ ಮೇಲೆ ಸರಾಗವಾಗಿ ಓಡುತ್ತಿತ್ತು.

ಹೀಗಿರುವಾಗ ಅವರಿಗೆ ವಿಪರೀತ ಜನಪ್ರಿಯತೆಯನ್ನು ತಂದು ಕೊಟ್ಟಿತು ಸೇಲಂನಲ್ಲಿದ್ದ ಮಾಡರ್ನ್‌ ಥಿಯೇಟರ್‌. ಅಲ್ಲಿ ಅವರಿಗೆ ಒಬ್ಬರು ಹೊಸ ಗೆಳೆಯರು ಸಿಕ್ಕಿದರು. ಅವರು ಮತ್ಯಾರು ಅಲ್ಲ 10 ವರ್ಷಗಳ ಕಾಲ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದ ಎಂ. ಜಿ. ರಾಮಚಂದ್ರನ್‌. ವಿಚಿತ್ರವೆಂದರೆ ಇದೇ ಸ್ಟುಡಿಯೋದಿಂದಲೇ ಜಯರಾಮ್ ಜಯಲಲಿತಾ ಕೂಡ ಬಂದಿದ್ದರು. ಮತ್ತು ಈ ಮೂವರ ಹೊಸ ಕಾಂಬಿನೇಷನ್‌ ತಮಿಳು ರಾಜಕೀಯ ಚರಿತ್ರೆಯನ್ನೇ ಬದಲಿಸಿ ಹಾಕಿತು...

ಕರುಣಾನಿಧಿ, ಎಂಜಿಆರ್ ಹಾಗೂ ಜಯಲಲಿತಾ ಒಂದೇ ಫ್ರೇಮಿನಲ್ಲಿ...
ಕರುಣಾನಿಧಿ, ಎಂಜಿಆರ್ ಹಾಗೂ ಜಯಲಲಿತಾ ಒಂದೇ ಫ್ರೇಮಿನಲ್ಲಿ...

ತಮಿಳುನಾಡು ಸಿನಿಮಾ ಲೋಕದಲ್ಲಿ ಮಹತ್ತರ ಬದಲಾವಣೆಗಳು ನಡೆಯುತ್ತಿರುವ ಹೊತ್ತಲ್ಲೇ ರಾಜಕಾರಣದಲ್ಲಿಯೂ ಬದಲಾವಣೆಗಳು ಘಟಿಸಲು ಆರಂಭಿಸಿದವು. 1957ರಲ್ಲಿ ಮೊದಲ ಬಾರಿಗೆ ಡಿಎಂಕೆ ಚುನಾವಣೆಗೆ ಧುಮುಕಿತು. ಎಂಟ್ರಿಯಲ್ಲೇ 13 ಸ್ಥಾನಗಳನ್ನು ಡಿಎಂಕೆ ಪಡೆದುಕೊಂಡಿತು. ಕುಲಿತಲೈನಿಂದ ಕರುಣಾನಿಧಿಯೂ ಮೊದಲ ಚುನಾವಣೆಯಲ್ಲೇ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದರು. ಆಗ ಅವರಿಗೆ ಕೇವಲ 33 ವರ್ಷ ವಯಸ್ಸು. ಇಲ್ಲಿಂದ ಆರಂಭವಾಯಿತು ಕರುಣಾನಿಧಿ ರಾಜಕಾರಣದ ನಾಗಾಲೋಟ. ಈ ನಾಗಾಲೋಟದ ಮೊದಲ ಹೊಡೆತ ಬಿದ್ದಿದ್ದು ಕಾಂಗ್ರೆಸ್‌ಗೆ.

1957ರ ಹೊತ್ತಿಗೆ ತಮಿಳುನಾಡಿನಲ್ಲಿ 205 ವಿಧಾನಸಭಾ ಕ್ಷೇತ್ರಗಳಲ್ಲಿ 151ರಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಸುಸ್ಥಿತಿಯಲ್ಲಿತ್ತು. ಅವತ್ತಿಗಿನ್ನೂ ಕೆ. ಕಾಮರಾಜ್‌ ತಮಿಳುನಾಡು ಮುಖ್ಯಮಂತ್ರಿ. ಹೀಗಿರುವಾಗ ಡಿಎಂಕೆ ಭವಿಷ್ಯದ ಬಗ್ಗೆ ಯಾರಿಗೂ ದೊಡ್ಡ ನಿರೀಕ್ಷೆಗಳೇನೂ ಇರಲಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕರುಣಾನಿಧಿ 1961ರಲ್ಲಿ ಡಿಎಂಕೆ ಪಕ್ಷದ ಖಜಾಂಚಿಯಾದರು.

1962ರಲ್ಲಿ ಮತ್ತೆ ಚುನಾವಣೆ ಬಂತು. ಅದೇ ಕಾಮರಾಜ್‌ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬಂತು. 139 ಸ್ಥಾನಗಳು ಕಾಂಗ್ರೆಸ್ ಪಾಲಾದರೆ ಸಿ.ಎನ್. ಅಣ್ಣಾದೊರೈ ನೇತೃತ್ವದ ಡಿಎಂಕೆ ಕೇವಲ 50 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಿತು. ಒಂದೇ ಬದಲಾವಣೆ ಎಂದರೆ ಡಿಎಂಕೆ ಈ ಬಾರಿ ವಿರೋಧ ಪಕ್ಷವಾಗಿತ್ತು. ಮತ್ತು ಉಪ ವಿರೋಧ ಪಕ್ಷದ ನಾಯಕನ ಸ್ಥಾನ ಕರುಣಾನಿಧಿಯವರಿಗೆ ಒಲಿದು ಬಂತು.

ಮುಂದಿನ 5 ವರ್ಷಗಳಲ್ಲಿ ರಾಜ್ಯ ರಾಜಕಾರಣದ ಪರಿಸ್ಥಿತಿ ಬುಡಮೇಲಾಯಿತು. ಮತ್ತು ಇದರ ಹಿಂದೆ ಕರುಣಾನಿಧಿ ಕೈಚಳಕ ಕೆಲಸ ಮಾಡಿತ್ತು.

1957 ಮತ್ತು 1962ರಲ್ಲಿ ಚುನಾವಣೆ ಸೋತ ನಂತರ ರಾಜ್ಯದಲ್ಲಿ ಅಧಿಕಾರಕ್ಕೇರಲು ದ್ರಾವಿಡ ಸಿದ್ಧಾಂತ ಒಂದೇ ಸಾಕಾಗುವುದಿಲ್ಲ ಎಂದು ಕರುಣಾನಿಧಿ ಮತ್ತು ಅಣ್ಣಾದೊರೈ ಇಬ್ಬರಿಗೂ ಅರ್ಥವಾಗಿತ್ತು. 1967ರಲ್ಲಿ ಅಧಿಕಾರಕ್ಕೇರಲು ಹಣಬೇಕು ಎಂದು ಇಬ್ಬರೂ ನಿರ್ಧರಿಸಿದರು. ಆದರೆ ಹಣ ಒಟ್ಟು ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಅಣ್ಣಾದೊರೈ ಬಳಿ ಉತ್ತರವಿರಲಿಲ್ಲ. ಅಂದು ಡಿಎಂಕೆ ಆರ್ಥಿಕ ವಿಭಾಗದ ಉಸ್ತುವಾರಿ ಹೊತ್ತಿದ್ದ ಕರುಣಾನಿಧಿ ಅಂದಿಗೆ 10 ಲಕ್ಷ ರೂಪಾಯಿ ಸಂಗ್ರಹಿಸುತ್ತೇನೆ ಎಂದು ಪಕ್ಷದ ನಾಯಕ ಅಣ್ಣಾದೊರೈಗೆ ಭರವಸೆ ನೀಡಿದರು. ಹೀಗಿದ್ದೂ ಇಷ್ಟು ದೊಡ್ಡ ಮೊತ್ತವನ್ನು ಸಂಗ್ರಹಿಸಲು ಸಾಧ್ಯವಿಲ್ಲ ಎಂದು ನಂಬಿದ್ದರು ಅಣ್ಣಾದೊರೈ. ಕರುಣಾನಿಧಿ ಸುಮ್ಮನೆ ಕೂರಲಿಲ್ಲ. ಅಣ್ಣಾ ನಿರೀಕ್ಷೆ ಮೀರಿ ಹಣ ಒಟ್ಟು ಹಾಕಿದರು; ಲೆಕ್ಕ ಹಾಕಿದಾಗ ಈ ಮೊತ್ತ 11 ಲಕ್ಷವಾಗಿತ್ತು. ಹಣ ನೋಡಿ ಉಬ್ಬಿ ಹೋದ ಅಣ್ಣಾದೊರೈ ಮದ್ರಾಸ್‌ನಲ್ಲಿ ನಡೆದ ಸಮಾವೇಶದಲ್ಲಿ ‘ಪತಿನೂರು ಲಚ್ಚಮ್‌’ (ಮಿಸ್ಟರ್‌ ಹನ್ನೊಂದು ಲಕ್ಷ) ಎಂದು ಕರುಣಾನಿಧಿಯವರನ್ನು ಅಡ್ಡನಾಮದಿಂದ ಹೊಗಳಿದರು.

ಅಲ್ಲಿಗೆ ಕರುಣಾನಿಧಿಯವರ ಎಲ್ಲಾ ಸಾಮರ್ಥ್ಯಗಳ ಪ್ರದರ್ಶನವಾಗಿತ್ತು. ವಿದ್ಯಾರ್ಥಿ ದೆಸೆಯಲ್ಲಿ ಸಂಘಟನಾ ಸಾಮರ್ಥ್ಯ, ಬರವಣಿಗೆಗಳ ಮೂಲಕ ನಾಯಕತ್ವ ಗುಣ, ಇದೀಗ ಆರ್ಥಿಕ ಶಕ್ತಿ... ಹೀಗೆ ನಾಯಕನೊಬ್ಬನಿಗೆ ಬೇಕಾದ ಎಲ್ಲಾ ಅಗತ್ಯಗಳನ್ನು ಹೊಂದಿದ್ದರು ಕರುಣಾನಿಧಿ.

11 ಲಕ್ಷ ರೂಪಾಯಿ ಹಣದ ಥೈಲಿ ಕೈಯಲ್ಲಿ ಇಟ್ಟುಕೊಂಡು ಡಿಎಂಕೆ 1967ರ ಚುನಾವಣೆ ಎದುರಿಸಿತು. ನಿರೀಕ್ಷೆಯಂತೆ ಕರುಣಾನಿಧಿ ಮತ್ತು ಅಣ್ಣಾದೊರೈ ಲೆಕ್ಕಾಚಾರ ಫಲಿಸಿತು. 234 ಸದಸ್ಯ ಬಲದ ವಿಧಾನಸಭೆಯಲ್ಲಿ ಡಿಎಂಕೆ ನೇತೃತ್ವದ 7 ಪಕ್ಷಗಳ ಒಕ್ಕೂಟ 179 ಸ್ಥಾನಗಳನ್ನು ಗೆದ್ದುಕೊಂಡರೆ, ಡಿಎಂಕೆ ಏಕಾಂಗಿಯಾಗಿ 137 ಸ್ಥಾನಗಳಲ್ಲಿ ಅಭೂತಪೂರ್ವ ಜಯ ದಾಖಲಿಸಿತು. ಇಡೀ ದೇಶದಲ್ಲಿ ಮೊದಲ ಬಾರಿಗೆ ಕಾಂಗ್ರೇಸೇತರ ಸ್ವತಂತ್ರ ಸರಕಾರ ರಾಜ್ಯವೊಂದರಲ್ಲಿ ಅಸ್ತಿತ್ವಕ್ಕೆ ಬಂತು. ಸಿ. ಕೆ. ಅಣ್ಣಾದೊರೈ ತಮಿಳುನಾಡಿನ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿಯಾದರು. ಕರುಣಾನಿಧಿ ಲೋಕೋಪಯೋಗಿ ಖಾತೆಯ ಹೊಣೆ ಹೊತ್ತುಕೊಂಡರು.

ಫೈಲ್ ಚಿತ್ರ. 
ಫೈಲ್ ಚಿತ್ರ. 

ಅಧಿಕಾರಕ್ಕೇರಿದ ಅಣ್ಣಾದೊರೈ ಕೇವಲ ಎರಡು ವರ್ಷದಲ್ಲೇ ಕ್ಯಾನ್ಸರ್‌ನಿಂದ ತೀರಿಕೊಂಡರು. ಆಗ ಮುಖ್ಯಮಂತ್ರಿ ಗಾದಿಗೆ ಟವೆಲ್‌ ಎಸೆದರು ಕರುಣಾನಿಧಿ. ಆಗ ಅವರ ಸಹಾಯಕ್ಕೆ ಬಂದವರೇ ತಮ್ಮ ಸಿನಿಮಾ ರಂಗದ ಗೆಳೆಯ ಎಂ. ಜಿ. ರಾಮಚಂದ್ರನ್‌.

ಪಕ್ಷದ ಸದಸ್ಯರಾಗಿದ್ದ ಎಂಜಿಆರ್‌ ಜನಪ್ರಿಯತೆಯ ಬೆಂಬಲದೊಂದಿಗೆ ಪಕ್ಷದಲ್ಲಿದ್ದ ಹಲವು ಹಿರಿಯ ನಾಯಕರನ್ನು ಹಿಂದಿಕ್ಕಿ ಮುಖ್ಯಮಂತ್ರಿ ಗಾದಿಗೆ ಏರಿದರು ಕರುಣಾನಿಧಿ. ಆಗ ಅವರಿಗೆ ಕೇವಲ 45 ವರ್ಷ. ಅತೀ ಕಿರಿಯ ವಯಸ್ಸಿಗೆ ಸಿಎಂ ಕುರ್ಚಿ ಏರಿ ಕರುಣಾನಿಧಿ ದೇಶದಾದ್ಯಂತ ಸದ್ದು ಮಾಡಿದರು.

ತಮ್ಮ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಕರುಣಾನಿಧಿ 1971ರ ಚುನಾವಣೆ ಎದುರಿಸಿದರು. ಎದುರಿಗೆ ಕಾಂಗ್ರೆಸ್‌ನ ಜನಪ್ರಿಯ, ಅನುಭವಿ ಕಾಮರಾಜ್‌ ನಿಂತಿದ್ದರೂ, ಡಿಎಂಕೆ ನೇತೃತ್ವದ 5 ಪಕ್ಷಗಳ ಒಕ್ಕೂಟ 234ರಲ್ಲಿ ಬರೋಬ್ಬರಿ 205 ಸ್ಥಾನ ಗೆದ್ದಿಕೊಂಡಿತು. ಸ್ವತಃ ಡಿಎಂಕೆ ಈ ಚುನಾವಣೆಯಲ್ಲಿ ಗೆದ್ದ ಸ್ಥಾನಗಳೇ 187. ಈ ಗೆಲುವು ಕರುಣಾನಿಧಿಯವರಲ್ಲಿ ಕೆಲವು ಬದಲಾವಣೆಗಳನ್ನು ತಂದಿತು. ಸಣ್ಣ ಅಹಂಕಾರ, ಸ್ವಾರ್ಥ ಬಂದು ತಲೆ ಮೇಲೇ ಏರಿತ್ತು. ಈ ಸಂದರ್ಭ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದ ಕರುಣಾನಿಧಿ ತಪ್ಪೊಂದನ್ನು ಎಸಗಿದರು. ಆ ತಪ್ಪು ಅವರ ಜೀವಮಾನವನ್ನೇ ಅಲ್ಲಾಡಿಸಿಬಿಟ್ಟಿತು.

1971ರಲ್ಲಿ ಚುನಾವಣೆ ಗೆದ್ದು ಆಕಾಶದಲ್ಲಿ ತೇಲಾಡುತ್ತಿದ್ದ ಕರುಣಾನಿಧಿ ಮುಂದೆ ಕ್ಯಾಬಿನೆಟ್‌ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಟ್ಟರು ಎಂಜಿಆರ್‌. ಇದಕ್ಕೆ ಕರುಣಾನಿಧಿ ಒಪ್ಪಲಿಲ್ಲ. ಅವತ್ತು ಪಕ್ಷ ಬಿಟ್ಟು ಹೊಸ ಪಕ್ಷ ಕಟ್ಟುವ ಬೆದರಿಕೆ ಹಾಕಿದರು ಎಂಜಿಆರ್. ಇದಕ್ಕೆ ಕರುಣಾನಿಧಿ ಸೊಪ್ಪು ಹಾಕಲಿಲ್ಲ. “ಯಾವುದೇ ತ್ಯಾಗಗಳನ್ನು ಮಾಡದೆ, ಪಕ್ಷಕ್ಕೊಂದು ವ್ಯವಸ್ಥಿತ ರೂಪವೇ ಇಲ್ಲದೆ ಅವರು ಏನೂ ಸಾಧಿಸಲು ಸಾಧ್ಯವಿಲ್ಲ,” ಎಂದು ಬಿಟ್ಟರು ಕರುಣಾನಿಧಿ.

ಅದು ಕರುಣಾನಿಧಿ ಮಾಡಿದ ಅತೀ ದೊಡ್ಡ ತಪ್ಪಾಗಿತ್ತು.

ಕರುಣಾನಿಧಿನ ಜತೆಗಿನ ಮುನಿಸಿನಿಂದ ಎಂ.ಜಿ.ರಾಮಚಂದ್ರನ್‌ ಡಿಎಂಕೆ ಪಕ್ಷ ತೊರೆದು ಹೊಸ ಪಕ್ಷ ಹುಟ್ಟುಹಾಕಿದರು. ಅದಕ್ಕೆ ‘ಆಲ್‌ ಇಂಡಿಯಾ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)‘ ಎಂದು ಹೆಸರಿಟ್ಟರು. ಅಷ್ಟೊತ್ತಿಗೆ ಎಂಜಿಆರ್‌ ತಮ್ಮ ಜನಪ್ರಿಯ ಸಿನಿಮಾಗಳ ಮೂಲಕ ತಮಿಳುನಾಡಿನ ಜನರ ಮನ ಮನೆಗಳನ್ನು ತಲುಪಿಯಾಗಿತ್ತು. ಜನರ ಎದೆ ಗೂಡಲ್ಲಿ ದೇವರಿಗೂ ಎಂಜಿಆರ್‌ಗೂ ಒಂದೇ ಸ್ಥಾನ ಮೀಸಲಾಗಿತ್ತು. ಆದರೆ ಇದನ್ನು ಕರುಣಾನಿಧಿ ಗಣನೆಗೆ ತೆಗೆದುಕೊಂಡಿರಲಿಲ್ಲ.

ನಾಟಕೀಯ ಹೀರೋ ರೀತಿಯ ಮತ್ತಷ್ಟು ಪಾತ್ರಗಳಲ್ಲಿ ನಟಿಸಿದ ಎಂಜಿಆರ್ ತಮ್ಮ ವರ್ಚಸ್ಸನ್ನು ಮತ್ತಷ್ಟು ವಿಸ್ತರಿಸಿಕೊಂಡು ‘ದಂತಕಥೆ’ಯ ಇಮೇಜನ್ನು ಪಡೆದರು. ಅದನ್ನೇ ಮುಂದಿಟ್ಟುಕೊಂಡು ಮೊದಲ ಬಾರಿಗೆ 1977ರಲ್ಲಿ ಚುನಾವಣೆ ಎದುರಿಸಿದರು.

ದುಶ್ಯಾಸನ ಕರುಣಾನಿಧಿ:

ಚುನಾವಣೆ ಸಮೀಪಿಸಿದಾಗ ಕರುಣಾನಿಧಿಗೆ ತಮ್ಮ ತಪ್ಪಿನ ಅರಿವಾಗಿತ್ತು. ಎವರೆಸ್ಟ್‌ ಎತ್ತರದಲ್ಲಿದ್ದ ತನಗೆ ಮೊದಲ ಸೋಲು ಕಟ್ಟಿಟ್ಟ ಬುತ್ತಿ ಎಂದು ಅವರಿಗೆ ಅರ್ಥವಾಯಿತು. ಮೂರು ಪಕ್ಷಗಳ ಮೈತ್ರಿಕೂಟ ರಚಿಸಿದ ಎಂಜಿಆರ್‌ 1977ರ ಚುನಾವಣೆಯಲ್ಲಿ 144 ಸ್ಥಾನಗಳನ್ನು ಗೆದ್ದುಕೊಂಡರು. ಇದರಲ್ಲಿ ಎಐಎಡಿಎಂಕೆ ಒಂದೇ 130 ಸ್ಥಾನಗಳನ್ನುನ ಗೆದ್ದು ಸ್ವತಂತ್ರವಾಗಿ ಅಧಿಕಾರಕ್ಕೆ ಬಂದಿತ್ತು. ಸೋಲು ಅನುಭವಿಸಿದ ಕರುಣಾನಿಧಿಯ ಡಿಎಂಕೆ ಕೇವಲ 48 ಸ್ಥಾನಗಳನ್ನಷ್ಟೇ ಗೆದ್ದುಕೊಂಡಿತು.

ಈ ತಪ್ಪು ಅಲ್ಲಿಗೇ ನಿಲ್ಲಲಿಲ್ಲ. ಎಂಜಿಆರ್ ಸಾಯುವವರೆಗೂ ಕರುಣಾನಿಧಿಗೆ ಗೆಲುವೆಂಬುದು ಮರೀಚಿಕೆಯಾಯಿತು. 1980 ಮತ್ತು 84ರ ಚುನಾವಣೆಯಲ್ಲಿ ಹೀನಾಯ ಸೋಲನುಭವಿಸಿತು ಡಿಎಂಕೆ. ಕೊನೆಗೆ ಕರುಣಾನಿಧಿ ಉಸಿರು ಬಿಡಲು ಅವಕಾಶ ಸಿಕ್ಕಿದ್ದು 1987ರಲ್ಲಿ ಎಂಜಿಆರ್ ಸತ್ತಾಗಲೇ.

ಎಂಜಿಆರ್‌ ನಿಧನದ ಬೆನ್ನಿಗೆ ಎಐಎಡಿಎಂಕೆ ಇಬ್ಭಾಗವಾಯಿತು. ಅಮೆರಿಕಾದಲ್ಲಿ ಎಂಜಿಆರ್ ಕಿಡ್ನಿ ಚಿಕಿತ್ಸೆಗೆ ದಾಖಲಾಗುತ್ತಿದ್ದಂತೆ ಪತ್ನಿ ಜಾನಕಿ ರಾಮಚಂದ್ರನ್‌ ಮತ್ತು ಜೆ. ಜಯಲಲಿತಾ ನಡುವೆ ಉತ್ತಾರಾಧಿಕಾರದ ಕಿಡಿ ಹತ್ತಿಕೊಂಡಿತು. ಇದರಲ್ಲಿ ಸಿಗರೇಟು ಹತ್ತಿಸಿಕೊಂಡ ಕರುಣಾನಿಧಿ 1989ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರು.

ಅವತ್ತಿಗೆ ಜಯಲಲಿತಾ ಎಐಎಡಿಎಂಕೆ ಪಕ್ಷವನ್ನು ತಮ್ಮ ಕಪಿಮುಷ್ಠಿಯಲ್ಲಿ ಹಿಡಿದುಕೊಂಡಿದ್ದರು. ಹೀಗಿದ್ದೂ ಮತ್ತೆ ಎಡವಿದರು ಕರುಣಾನಿಧಿ. ವೈದಿಕತ್ವದ ವಿರುದ್ಧ ಹೋರಾಡುತ್ತಾ ಬಂದ ಕರುಣಾನಿಧಿ “ದ್ರಾವಿಡ ಜೀವನ ಶೈಲಿ ಬಗ್ಗೆ ಏನೂ ಗೊತ್ತಿಲ್ಲದ ಬ್ರಾಹ್ಮಣ ಮಹಿಳೆ ದ್ರಾವಿಡ ನಾಡಿನಲ್ಲಿ ನಂಗೆ ಹೇಗೆ ಬೆದರಿಕೆ ಹಾಕಲು ಸಾಧ್ಯ?” ಎಂದು ಬಿಟ್ಟರು. ಅವರ ಎಣಿಕೆ ತಪ್ಪಾಗಿತ್ತು. ಮತ್ತು ಅದಕ್ಕೆ ಅವರು ಎಸಗಿದ ಒಂದು ತಪ್ಪು ಕೂಡ ಕಾರಣವಾಗಿತ್ತು.

ಕರುಣಾನಿಧಿ ರೌಡಿ ಎನ್ನಿಸಿಕೊಳ್ಳಲು ಕಾರಣವಾದ ಜಯಲಲಿತಾ ಮೇಲಿನ ಹಲ್ಲೆ ಸಮಯದ ಅಪರೂಪದ ಚಿತ್ರ. ವಿವರ ಕೆಳಗೆ ಇದೆ. 
ಕರುಣಾನಿಧಿ ರೌಡಿ ಎನ್ನಿಸಿಕೊಳ್ಳಲು ಕಾರಣವಾದ ಜಯಲಲಿತಾ ಮೇಲಿನ ಹಲ್ಲೆ ಸಮಯದ ಅಪರೂಪದ ಚಿತ್ರ. ವಿವರ ಕೆಳಗೆ ಇದೆ. 
ಇಂಡಿಯನ್ ಎಕ್ಸ್‌ಪ್ರೆಸ್‌. 

1989ರಲ್ಲಿ ಚುನಾವಣೆ ಗೆದ್ದ ಕರುಣಾನಿಧಿ ಎಂಜಿಆರ್ ಇಲ್ಲದ ತಮಿಳುನಾಡಿಗೆ ನಾನೇ ರಾಜ ಎಂದುಕೊಂಡರು. ಅದು ಅವರು ಮಾಡಿದ ಮೊದಲ ತಪ್ಪಾಗಿತ್ತು. 1989 ಮಾರ್ಚ್‌ 25ರಂದು ತಮಿಳುನಾಡು ವಿಧಾನಸಬೆಯಲ್ಲಿ ನಡೆದ ನಾಟಕೀಯ ಬೆಳವಣಿಗೆ ಇದಕ್ಕೆಲ್ಲಾ ಮುನ್ನುಡಿಯಾಯಿತು.

ಹಣಕಾಸು ಸಚಿವರಾಗಿದ್ದ ಎಂ. ಕರುಣಾನಿಧಿ ಬಜೆಟ್‌ ಓದಲು ಆರಂಭಿಸುತ್ತಿದ್ದ ಕಾಂಗ್ರೆಸ್ ಶಾಸಕಿ ಕುಮಾರಿ ಆನಂದನ್‌, ‘ಪೊಲೀಸರು ಜಯಲಲಿತಾರಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ದೊಡ್ಡ ಧ್ವನಿಯಲ್ಲಿ ಕೂಗಲು ಆರಂಭಿಸಿದರು. ಈ ಸಂದರ್ಭ ಮಧ್ಯ ಪ್ರವೇಶಿಸಿ ಜಯಲಲಿತಾ, ‘ಮುಖ್ಯಮಂತ್ರಿ ಪೊಲೀಸರನ್ನು ಬಳಸಿಕೊಂಡು ನನ್ನ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಅವರು ನನ್ನ ಫೋನ್‌ ಟ್ಯಾಪ್‌ ಮಾಡಿದ್ದಾರೆ. ಇದನ್ನು ಸದನದಲ್ಲಿ ಚರ್ಚೆಗೆ ಎತ್ತಿಕೊಳ್ಳಬೇಕು’ ಎಂದು ಗುಡಗಿದರು.

ಗದ್ದಲ ಜೋರಾಯಿತು. “ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಜನರಿಗೆ ಬಜೆಟ್‌ ಮಂಡಿಸಲು ಅವಕಾಶ ನೀಡುವುದಿಲ್ಲ,” ಎಂದು ಮೈಕ್ರೋಫೋನ್‌ ಎತ್ತಿಕೊಂಡು ಕಿರುಚಿದರು ಜಯಲಲಿತಾ. “ಸರಕಾರದ ಮುಖ್ಯಸ್ಥ ಬ್ರಷ್ಟಾಚಾರಿ” ಎಂದು ಮತ್ತೊಮ್ಮೆ ಗುಡುಗಿದರು. ಇದಕ್ಕೆ ಪ್ರತಿಕ್ರಿಯಿಸಿದ ಕರುಣಾನಿಧಿ ಅಸಂಸದೀಯ ಪದ ಪ್ರಯೋಗ ಮಾಡಿದರು. ಇದರಿಂದ ಇನ್ನಷ್ಟು ಸಿಟ್ಟಿಗೆದ್ದರು ಜಯಲಲಿತಾ. ಇಡೀ ಶಾಸನಸಭೆ ರಣರಂಗವಾಯಿತು. ಕರುಣಾನಿಧಿ ನಿಂತಲ್ಲಿಯೇ ಕುಸಿದರು.

ಸ್ಪೀಕರ್‌ ಕಲಾಪವನ್ನು ಮುಂದೂಡುತ್ತಿದ್ದಂತೆ ಜಯಲಲಿತಾ ಹೊರ ಬರುತ್ತಿದ್ದರು. ಆಗ ಡಿಎಂಕೆ ಸಚಿವ ದುರೈ ಮುರುಗನ್‌ ಅವರ ಸೀರೆ ಹಿಡಿದೆಳೆದರು. ಈಗ ಅನ್ಯಾಯವಾಗಿ ದುಶ್ಯಾಸನನಾಗುವ ಸರದಿ ಕರುಣಾನಿಧಿಯವರದಾಗಿತ್ತು. ಹೊರ ಬಂದ ಜಯಲಲಿತಾ, ‘ಕಲಾಪದಲ್ಲಿ ಮಹಿಳೆಯೊಬ್ಬರು ಗೌರವಯುತವಾಗಿ ಪಾಲ್ಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗುವವರೆಗೆ ಸದನದೊಳಕ್ಕೆ ಕಾಲಿಡುವುದಿಲ್ಲ’ ಎಂದು ಶಪಥ ಮಾಡಿದರು. ಅವತ್ತು ಮಾಧ್ಯಮಗಳ ಕಣ್ಣಲ್ಲಿ ಕರುಣಾನಿಧಿ ರೌಡಿಯಾದರು.

1991ರಲ್ಲಿ ಕೇಂದ್ರ ಸರಕಾರ ಕರುಣಾನಿಧಿ ಸರಕಾರವನ್ನು ವಜಾ ಮಾಡಿತು. ನಂತರ ನಡೆದ ಚುನಾವಣೆಯಲ್ಲಿ ಧೂಳಿನಿಂದ ಮೇಲೆದ್ದು ಬಂದ ಜಯಲಲಿತತಾ ಕರುಣಾನಿಧಿಗೆ ಮರ್ಮಾಘಾತ ನೀಡಿದರು. 224ರಲ್ಲಿ ಎಐಎಡಿಎಂಕೆ ಮೈತ್ರಿಕೂಟ 225 ಸ್ಥಾನಗಳನ್ನು ಗೆದ್ದರೆ ಡಿಎಂಕೆ ಸಿಂಗಲ್‌ ನಂಬರ್‌ಗೆ ಜಾರಿತ್ತು. ಮೈತ್ರಿಕೂಟ 7 ಸ್ಥಾನ ಗೆದ್ದರೆ, ಡಿಎಂಕೆ ಕೇವಲ 2 ಸ್ಥಾನಗಳನ್ನು ಗೆದ್ದು ತನ್ನ ಇತಿಹಾಸದ ಹೀನಾಯ ಸೋಲು ದಾಖಲಿಸಿತ್ತು. ಹೀಗೆ ಮಾಡರ್ನ್‌ ಥಿಯೇಟರ್‌ ಸ್ಟುಡಿಯೋದ ಮತ್ತೊಂದು ಪ್ರತಿಭೆ ಕರುಣಾನಿಧಿಯವರಿಗೆ ಮಗ್ಗಲು ಮುಳ್ಳಾಯಿತು.

ಜಯಲಲಿತಾ ಹಿಡಿತ ತಮಿಳುನಾಡಿನಲ್ಲಿ ಎಷ್ಟು ಬಲವಾಯಿತು ಎಂದರೆ ಆಕೆಯ ಆಗಮನದ ನಂತರ ಕೇವಲ 1996 ಮತ್ತು 2006 ರಲ್ಲಿ ಮಾತ್ರ ಡಿಎಂಕೆ ಅಧಿಕಾರಕ್ಕೆ ಬಂತು. ಉಳಿದೆಲ್ಲಾ ಅವಧಿಯಲ್ಲಿ ‘ಅಮ್ಮಾ’ ಮುಖ್ಯಮಂತ್ರಿ ಕುರ್ಚಿಯಲ್ಲಿ ಅಕ್ಷರಶಃ ಮೆರೆದಾಡಿದರು.

ಈ ಅವಧಿಯಲ್ಲಿ ಕರುಣಾನಿಧಿ ಮತ್ತು ಜಯಲಲಿತಾ ನಡುವಿನ ರಾಜಕೀಯ ಹೋರಾಟ ಅತ್ಯಂತ ಕೀಳು ಮಟ್ಟಕ್ಕೆ ಇಳಿಯಿತು. ಪರಸ್ಪರ ಕೇಸು ದಾಖಲಿಸುವುದು ನಿರಂತರ ನಡೆಯಿತು. ಹೀಗಿದ್ದೂ ಇಬ್ಬರೂ ಜೈಲಿಗೆ ಹೋಗದೆ ಹಲವು ವರ್ಷಗಳ ಕಾಲ ಆಟವಾಡುತ್ತಲೇ ಬಂದರು. ಇದಕ್ಕೆ ದೆಹಲಿ ರಾಜಕಾರಣದ ಮೇಲೆ ಎರಡೂ ಪಕ್ಷಗಳಿಗೆ ಇದ್ದ ಡಿಡಿತ ಕಾರಣವಾಗಿತ್ತು. ಆ ಹಿಡಿತದ ಮೂಲಕವೇ ಕರುಣಾನಿಧಿ ಕುಟುಂಬ ದೊಡ್ಡದೊಂದು ಉದ್ಯಮ ಸಾಮ್ರಾಜ್ಯವನ್ನು ಕಟ್ಟಿತು.

ಸನ್‌ ಟಿವಿ ನೆಟ್ವರ್ಕ್‌ ಮಾಧ್ಯಮ ಸಾಮ್ರಾಜ್ಯದ ಹುಟ್ಟು, 2ಜಿ ಹಗರಣ ಆರಂಭವಾಗಿದ್ದು ಇಲ್ಲಿಂದಲೇ. ಅದರದ್ದೇ ಒಂದು ಪ್ರತ್ಯೇಕ ಕತೆ.

ಕುಟುಂಬ ಮತ್ತು ಉದ್ಯಮ:

ಕರುಣಾನಿಧಿ ಕುಟುಂಬ. 
ಕರುಣಾನಿಧಿ ಕುಟುಂಬ. 

ಅಧಿಕಾರ ಮನುಷ್ಯನನ್ನು ಯಾವ ಸ್ವರೂಪಕ್ಕೆ ಬದಲಾಯಿಸಬಹುದು ಎಂಬುದಕ್ಕೆ ಅನ್ವರ್ಥ ನಾಮದಂತಿದ್ದವರು ಕರುಣಾನಿಧಿ. ಒಂದು ಕಡೆ ಅಧಿಕಾರದ ಮದ, ಇನ್ನೊಂದು ಆರಂಭವಾದ ಭ್ರಷ್ಟಾಚಾರಗಳು, ಅವರೊಳಗಿನ ನೈಜ ಸಮಾಜವಾದಿಯನ್ನು ಬೆತ್ತಲುಗೊಳಿಸಿತ್ತು; ಕುಟುಂಬದಲ್ಲಿ ಉದ್ಯಮಿಗಳ ಜನನಕ್ಕೆ ನಾಂದಿ ಹಾಡಿತು. ಕಾನೂನು ಪ್ರಕಾರ ನೈತಿಕ, ಒಮ್ಮೆಮ್ಮೆ ಅನೈತಿಕ ಮಾರ್ಗದಲ್ಲಿ ನಡೆಸಿದ ವ್ಯವಹಾರಗಳು ದೇಶದ ಉದ್ಯಮ ವಲಯದಲ್ಲಿ ಕರುಣಾನಿಧಿ ಕುಟುಂಬದ ಸದಸ್ಯರು ಜಾಗ ಪಡೆಯಲು ಕಾರಣವಾಯಿತು. ಆ ಉದ್ಯಮದ ಸ್ವರೂಪಗಳೂ ವಿಚಿತ್ರವಾಗಿದ್ದವು. ಅದಕ್ಕೆ ಕನ್ನಡಿ ಹಿಡಿಯುವ ಘಟನೆಗೆ 2007ರ ಬೇಸಿಗೆ ಸಾಕ್ಷಿಯಾಯಿತು.

ಅವತ್ತು 2007, ಮೇ 11. ಚೆನ್ನೈಗೆ ನೆಹರೂ ಕುಟುಂಬದ ನಾಲ್ಕನೇ ತಲೆಮಾರಿನ ಕುಡಿ ರಾಹುಲ್‌ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಹೊರಟಿದ್ದರು. 1957ರಲ್ಲಿ ನೆಹರೂ ಕಾಲದಲ್ಲೇ ಚುನಾವಣೆಗೆ ಸ್ಪರ್ಧಿಸಿದ್ದ ಕರುಣಾನಿಧಿ ಇಂದು ತಮಿಳುನಾಡು ಮುಖ್ಯಮಂತ್ರಿಯಾಗಿ ರಾಜಕೀಯ ಜೀವನದಲ್ಲಿ ಸಕ್ರಿಯ 50 ವರ್ಷಗಳನ್ನು ಕಳೆದಿದ್ದರೆ, ಅವರ ಕಾರ್ಯಕ್ರಮಕ್ಕೆ ನಾಲ್ಕನೇ ತಲೆಮಾರಿನ ನೆಹರೂ ವಂಶದ ಕುಡಿಯೊಬ್ಬರು ಬಂದಿದ್ದರು!

ಚೆನ್ನೈನಲ್ಲಿ ನಡೆದ ಸರಳ ಸಮಾರಂಭ ಅದು. ಸುಮಾರು 10 ಸಾವಿರಕ್ಕೂ ಅಧಿಕ ಡಿಎಂಕೆ ಕಾರ್ಯಕರ್ತರು ನೆರೆದಿದ್ದರು. ಪಕ್ಕಕ್ಕೆ ಸೊನಿಯಾ ಗಾಂಧಿಯವರನ್ನು ಕರೆದ ಕರುಣಾನಿಧಿ ಮೆಲ್ಲಗೆ “ದಯಾನನ್ನು ಕೈಬಿಡಲೇಬೇಕು” ಎಂದರು. ನಸುನಕ್ಕ ಸೋನಿಯಾ, “ಹೆದರಬೇಡಿ. ನಿಮ್ಮ ಇಷ್ಟವನ್ನು ಇಡೇರಿಸುತ್ತೇವೆ” ಎಂದು ಭರವಸೆ ನೀಡಿದರು.

ಅವತ್ತಿಗೆ 41 ವರ್ಷದ ದಯಾನಿಧಿ ಮಾರನ್‌ ಎಂಬ ಮಾಜಿ ರಾಜಕಾರಣಿ ಮುರಸೋಳಿ ಮಾರನ್‌ ಪುತ್ರ ದೆಹಲಿ ರಾಜಕಾರಣದಲ್ಲಿ ಡಿಎಂಕೆಯ ಪ್ರತಿನಿಧಿ ಎಂಬಂತಾಗಿದ್ದರು. ಆಕರ್ಷಕ ಇಂಗ್ಲೀಷ್‌ ಮಾತನಾಡುತ್ತಾ, ಹಳೆ ತಮಿಳು ರಾಜಕಾರಣಿಗಳ ಚಹರೆ ಕಳಚಿಕೊಳ್ಳುವಂತಹ ಬಟ್ಟೆ ತೊಡುತ್ತಿದ್ದ ಅವರು ಮೂರು ವರ್ಷಗಳ ಕಾಲ ಕೇಂದ್ರ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಅವರಿಗೆ ಇಂಥಹದ್ದೊಂದು ಹುದ್ದೆಯನ್ನು ಕರುಣಾನಿಧಿಯೇ ಹೇಳಿ ಕೊಡಿಸಿದ್ದರು. ಆದರೆ ಅದು ಕುಟುಂಬದೊಳಗೆ ಜಗಳ ಹೊತ್ತಿಸಿತ್ತು.

ದಯಾನಿಧಿ ತಮ್ಮ ಕಲಾನಿಧಿ ಮಾರನ್‌ ಅದಾಗಲೇ ದೇಶದಲ್ಲಿ ಅತೀ ದೊಡ್ಡ ಟಿವಿ ನೆಟ್ವರ್ಕ್‌ ‘ಸನ್‌ ಟಿವಿ’ಯನ್ನು ರಾಜಕಾರಣದ ಬಲದಿಂದ ಹುಟ್ಟುಹಾಕಿದ್ದರು. 2006ರಲ್ಲಿ ಆತ ತನ್ನ ಕಂಪನಿಯನ್ನು ಶೇರು ಮಾರುಕಟ್ಟೆಗೆ ಪರಿಚಯಿಸುವ ಮುನ್ನ ಅದರಲ್ಲಿದ್ದ ಕರುಣಾನಿಧಿ ಕುಟುಂಬದ ಹೆಚ್ಚಿನ ಪಾಲಿನ ಶೇರುಗಳನ್ನು ಖರೀದಿಸಿ ಅವರ ಮಕ್ಕಳನ್ನು ಮೀರಿ ಬೆಳೆಯುವ ಸೂಚನೆಗಳನ್ನು ನೀಡಿದ್ದರು. ಇದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.

ಇದಲ್ಲದೆ ಮಾರನ್‌ ಬ್ರದರ್ಸ್‌ಗೆ ಹೊಡೆತ ನೀಡಲು ಕರುಣಾನಿಧಿ ತೀರ್ಮಾನಿಸಿದ್ದರ ಹಿಂದೆ ಮತ್ತೊಂದು ಕಾರಣವೂ ಇತ್ತು. ತಮ್ಮ ಒಡೆತನಕ್ಕೆ ಸೇರಿದ ‘ದಿನಕರನ್‌’ ಪತ್ರಿಕೆಯಲ್ಲಿ ‘ಕರುಣಾನಿಧಿಯವರ ಉತ್ತರಾಧಿಕಾರಿ ಯಾರು?’ ಎಂಬ ಪೋಲ್‌ನ್ನು 2007 ಮೇ 9ರಂದು ಪ್ರಕಟಿಸಲಾಗಿತ್ತು. ಇದಕ್ಕೆ ಉತ್ತರಿಸಿದ ಶೇಕಡಾ 70 ರಷ್ಟು ಜನರ ಸ್ಟಾಲಿನ್‌ ಹೆಸರು ಹೇಳಿದ್ದರು. ದೊಡ್ಡ ಮಗ ಅಳಗಿರಿಗೆ ಕೇವಲ ಶೇಕಡಾ 2ರಷ್ಟು ಜನರಷ್ಟೇ ಮತ ಹಾಕಿದ್ದರು. ಈ ವರದಿ ಪ್ರಕಟವಾಗುತ್ತಿದ್ದಂತೆ ಕ್ರುದ್ಧರಾದ ಅಳಗಿರಿ ಬೆಂಬಲಿಗರು ಅವರ ಭದ್ರಕೋಟೆ ಮಧುರೈನ ದಿನಕರನ್‌ ಪತ್ರಿಕಾ ಕಚೇರಿಗೆ ನುಗ್ಗಿ ಬೆಂಕಿ ಇಟ್ಟರು. ಪೆಟ್ರೋಲ್‌ ಬಾಂಬ್‌ಗಳನ್ನು ಎಸೆದರು. ಪರಿಣಾಮ ಇಬ್ಬರು ಪತ್ರಕರ್ತರು ಮತ್ತು ಭದ್ರತಾ ಸಿಬ್ಬಂದಿಯೊಬ್ಬರು ಸಜೀವ ದಹನವಾದರು.

ಕರುಣಾನಿಧಿ ಕುಟುಂಬದೊಳಗಿನ ವೈಷಮ್ಯದ ಕಥೆಯನ್ನು ಈ ಘಟನೆ ಸಾರಿ ಹೇಳಿತು. ಮುಂದಿನ ಬೆಳವಣಿಗೆಯಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ಕರೆದು ದಯಾನಿಧಿ ಮಾರನ್‌ ರಾಜೀನಾಮೆ ನೀಡುವಂತೆ ಮಾಡಿದರು ಕರುಣಾನಿಧಿ. ರಾಜಕೀಯದಾಚೆಗೆ ಸನ್‌ ಟಿವಿ ನೆಟ್ವರ್ಕ್‌ಗೆ ಸಡ್ಡು ಹೊಡೆದ ಕರುಣಾನಿಧಿ, ‘ಕಲೈನಾರ್‌ ಟಿವಿ’ ಹುಟ್ಟುಹಾಕಿದರು. ಕಲೈನಾರ್‌ ಅವರಿಗೆ ಅಭಿಮಾನಿಗಳು ಇಟ್ಟ ಪ್ರೀತಿಯ ಹೆಸರಾಗಿತ್ತು. ತಮಿಳುನಾಡಿನಲ್ಲಿದ್ದ ಸನ್‌ಟಿವಿಯ ಕೇಬಲ್‌ ನೆಟ್ವರ್ಕ್‌ ಏಕಸ್ವಾಮ್ಯಕ್ಕೆ ತಿಲಾಂಜಲಿ ನೀಡಲು ನಿರ್ಧರಿಸಿದ ಕರುಣಾನಿಧಿ ‘ಅರಸು ಟಿವಿ ಕೇಬಲ್‌ ನೆಟ್ವರ್ಕ್‌’ ಹೆಸರಿನಲ್ಲಿ ಸರಕಾರಿ ಸ್ವಾಮ್ಯದ ಕೇಬಲ್‌ ಸಂಸ್ಥೆ ಸ್ಥಾಪಿಸಿದರು. ಅದಕ್ಕಾಗಿ ದಕ್ಷ ಐಎಎಸ್‌ ಅಧಿಕಾರಿಯನ್ನು ನೇಮಿಸಿ ಪ್ರಕ್ರಿಯೆನ್ನು ಚುರುಕುಗೊಳಿಸಿದರು. ಇದು ತಮಿಳುನಾಡಿನ ಬೀದಿಗಳಲ್ಲಿ ಕೇಬಲ್‌ ಮಾಫಿಯಾದ ಹೊಡೆದಾಟಗಳಿಗೆ ನಾಂದಿ ಹಾಡಿತ್ತು.

ಆದರೆ ಕೊನೆಗೊಂದು ದಿನ ಎಲ್ಲಾ ಸರಿಯಾಯಿತು ಎನ್ನುವಂತೆ ಎಲ್ಲರೂ ಫೋಟೋಗೆ ಪೋಸ್‌ ನೀಡಿದರು. ಇದರ ಹಿಂದೆ ಇದ್ದವರು ಸ್ಟಾಲಿನ್‌ ಮತ್ತು ಕರುಣಾನಿಧಿ ಪುತ್ರಿ ಸೆಲ್ವಿ. ಮುಂದೆ ನೀರಾ ರಾಡಿಯಾ ಟೇಪ್‌ ಬಿಡುಗಡೆಯಾದಾಗ ಈ ಅಸಲಿ ಫೋಟೋ ಫೋಸ್‌ ಹಿಂದಿನ ರಹಸ್ಯ ಬಯಲಾಯಿತು. ಸುಮಾರು 600 ಕೋಟಿ ರೂಪಾಯಿಗಳನ್ನು ಕರುಣಾನಿಧಿ ಎರಡನೇ ಪತ್ನಿ ದಯಾಳು ಅಮ್ಮಾಳ್‌ಗೆ ಮಾರನ್‌ ಬ್ರದರ್ಸ್‌ ನೀಡಿರುವುದು ಬಹಿರಂಗವಾಯಿತು. ಹಣ ಇಡೀ ಕುಟುಂಬವನ್ನು ಮತ್ತೆ ಒಂದು ಮಾಡಿತ್ತು. ಇದು ಕರುಣಾನಿಧಿ ಕುಟುಂಬದೊಳಗಿನ ಉದ್ಯಮ, ಅವುಗಳ ಮೇಲಿನ ಹಿಡಿತಕ್ಕೆ ನಡೆಯುತ್ತಿದ್ದ ಹೋರಾಟದ ಆಧ್ಯಾಯಗಳು.

ಆರೋಪಗಳು ಕರುಣಾನಿಧಿ ರಾಜಕೀಯ ಬದುಕಿನ ಉದ್ದಕ್ಕೂ ಬೆನ್ನು ಬಿಡಲಿಲ್ಲ. ಪುತ್ರ ಅಳಗಿರಿ ವಿರುದ್ಧ ಸ್ವತಃ ಡಿಎಂಕೆಯ ಸಚಿವರನ್ನು ಕೊಲೆ ಮಾಡಿದ ಆರೋಪ ಕೇಳಿ ಬಂತು. ಪುತ್ರಿ ಕನಿಮೋಳಿ ಮತ್ತು ಪಕ್ಷದ ಎ. ರಾಜಾ 2ಜಿ ಹಗರಣದಲ್ಲಿ ಜೈಲು ಸೇರಬೇಕಾಯಿತು. ಮಾರನ್‌ ಬ್ರದರ್ಸ್‌ ವಿರುದ್ಧ ಇಂದಿಗೂ ‘ಟೆಲಿಫೋನ್‌ ಎಕ್ಸ್‌ಚೇಂಜ್‌ ಹಗರಣ’ದಂಥ ತನಿಖೆಗಳು ನಡೆಯುತ್ತಿದೆ.

ಇವೆಲ್ಲದರ ಆಚೆಗೂ ಹಲವು ಬಾರಿ ಅವರು ವಿವಾದಕ್ಕೆ ಗುರಿಯಾದರು. ರಾಮಸೇತು ವಿಚಾರದಲ್ಲಿ, ‘ಯಾರು ಈ ರಾಮ, ಅವನು ಯಾವ ಇಂಜಿನಿಯರಿಂಗ್‌ ಕಾಲೇಜಿನಿಂದ ಪದವಿ ಪಡೆದಿದ್ದ?’ ಎಂಬ ಕರುಣಾನಿಧಿ ಪ್ರಶ್ನೆ ದೊಡ್ಡ ವಿವಾದವನ್ನೇ ಹುಟ್ಟುಹಾಕಿತ್ತು. ಇದಲ್ಲದೆ ರಾಜೀವ್‌ ಗಾಂಧಿ ಹತ್ಯೆಯ ತನಿಖೆ ನಡೆಸುತ್ತಿದ್ದ ‘ಜೈನ್‌ ಆಯೋಗ’ ತನ್ನ ಮಧ್ಯಂತರ ವರದಿಯಲ್ಲಿ ರಾಜೀವ್‌ ಗಾಂಧಿ ಹಂತಕರಿಗೆ ಡಿಎಂಕೆ ಆಶ್ರಯ ನೀಡಿತ್ತು ಎಂದು ಹೇಳಿತ್ತು. ಇದೇ ವೇಳೆ ಎನ್‌ಡಿವಿಗೆ ನೀಡಿದ ಸಂದರ್ಶನದಲ್ಲಿ, ‘ಎಲ್‌ಟಿಟಿ ಸಂಘಟನೆಯ ನಾಯಕ ಪ್ರಭಾಕರನ್‌ ನನ್ನ ಉತ್ತಮ ಸ್ನೇಹಿತ’ ಎಂದು ಹೇಳಿ ಕರುಣಾನಿಧಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದರು.

ಇದೇ ರೀತಿ ಮಗ ಸ್ಟಾಲಿನ್ ವಿಚಾರದಲ್ಲಿ ಕರುಣಾನಿಧಿ ನಡೆದುಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಯಿತು. ‘ಸ್ವಜನ ಪಕ್ಷಪಾತ’ ಮಾಡುತ್ತಿದ್ದಾರೆ ಎಂಬ ಆರೋಪ ಅವರ ವಿರುದ್ಧ ಎಂದಿಗಿಂತ ತೀವ್ರವಾಗಿ ಕೇಳಿ ಬಂತು. ಇಷ್ಟೆಲ್ಲಾ ಬೆಳವಣಿಗೆಗಳ ಮಧ್ಯೆ ಅತೀ ದೊಡ್ಡ ಕಳಂಕ ಎಂಬಂತೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ 2001ರಲ್ಲಿ ಕರುಣಾನಿಧಿ ಜೈಲಿಗೂ ಹೋಗಿ ಬಂದರು.

ವೈಯಕ್ತಿಕ ಬದುಕು:

ಕರುಣಾನಿಧಿ ಹಾಗೂ ಎರಡನೇ ಪತ್ನಿ ದಯಾಳ್ ಅಮ್ಮಾಳ್. 
ಕರುಣಾನಿಧಿ ಹಾಗೂ ಎರಡನೇ ಪತ್ನಿ ದಯಾಳ್ ಅಮ್ಮಾಳ್. 

ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಗೋಜಲುಗಳಿದ್ದರೂ ಅವರು ವೈಯಕ್ತಿಕ ಜೀವನ್ನು ಶಿಸ್ತಾಗಿ ನಿಭಾಯಿಸುತ್ತಿದ್ದರು. ಅಳಗಿರಿ ವಿಚಾರ ಬಿಟ್ಟರೆ ಮೂರು ಪತ್ನಿಯರ ಆರು ಮಕ್ಕಳ ನಡುವೆ ಬೇರಾವ ವಿವಾದವೂ ಬರದಂತೆ ನೋಡಿಕೊಂಡರು.

ಮೊದಲ ಪತ್ನಿ ಪದ್ಮಾವತಿ ಸಾವಿಗೀಡಾದ ಬಳಿಕ ಅವರು ದಯಾಳು ಅಮ್ಮಾಳ್‌ರನ್ನು ಮದುವೆಯಾದರು. ಇವರಿಗೆ ಹುಟ್ಟಿದದವರೇ ಅಳಗಿರಿ ಮತ್ತು ಇಂದಿನ ಡಿಎಂಕೆ ಕಾರ್ಯಾಧ್ಯಕ್ಷ ಎಂ. ಕೆ. ಸ್ಟಾಲಿನ್‌. ರಷ್ಯಾದ ಕ್ರಾಂತಿಕಾರಿ ಸ್ಟಾಲಿನ್‌ ನಿಧನರಾದ 5 ದಿನದ ನಂತರ ಮಗ ಹುಟ್ಟಿದ್ದರಿಂದ ಆತನಿಗೆ ಸ್ಟಾಲಿನ್‌ ಎಂದು ಹೆಸರಿಡಲಾಗಿತ್ತು. ಮುಂದೆ ಇವರಿಬ್ಬರಲ್ಲಿ ಕಲಹ ಹುಟ್ಟಿಕೊಂಡಾಗ ಅಳಗಿರಯನ್ನು ಪಕ್ಷದಿಂದಲೇ ಕರುಣಾನಿಧಿ ಹೊರಹಾಕಬೇಕಾಯಿತು.

ದಯಾಳು ಅಮ್ಮಾಳ್ ಜತೆ ನಾಲ್ಕು ಮಕ್ಕಳನ್ನು ಪಡೆದ ಕರುಣಾನಿಧಿ ಮತ್ತೆ ಮೂರನೇ ಮದುವೆಯಾದರು. ಆಕೆಯೇ ರಾಜಾಥಿ ಅಮ್ಮಾಳ್‌. ಈಕೆಗೆ ಹುಟ್ಟಿದ ಮಗಳು ಕನಿಮೋಳಿ. ಹೀಗೆ ಒಟ್ಟು ಆರು ಮಕ್ಕಳನ್ನು ಕರುಣಾನಿಧಿ ಪಡೆದಿದ್ದರು.

ಅವರ ವೈಯಕ್ತಿಕ ಜೀವನ ವಿಚಿತ್ರವಾಗಿತ್ತು. ಜೀವನದಲ್ಲಿ ಸಮಯವನ್ನು ಕಟ್ಟಿನಿಟ್ಟಾಗಿ ಪಾಲಿಸುತ್ತಿದ್ದ ಕರುಣಾನಿಧಿ ಇಬ್ಬರು ಹೆಂಡತಿಯರನ್ನು ಬೇರೆ ಬೇರೆ ಅವಧಿಯಲ್ಲಿ ಸಂಧಿಸುತ್ತಿದ್ದರು. ಒಂದು ಸೂತ್ರಕ್ಕೆ ಕಟ್ಟು ಬಿದ್ದಂತೆ ಅವರಿಬ್ಬರನ್ನೂ ಹೊಂದಿಸಿಕೊಂಡು ಹೋಗುತ್ತಿದ್ದರು.

ಚೆನ್ನೈನ ಗೋಪಾಲಪುರಂ ಮತ್ತು ಸಿಐಟಿ ಕಾಲೋನಿ ಎಂಬ ಎರಡು ಪ್ರದೇಶಗಳಲ್ಲಿ ಅವರಿಗೆ ಮನೆ ಇತ್ತು. ಇವೆರಡರ ನಡುವಿನ ಅಂತರ ಕೇವಲ 2 ಕಿಲೋಮೀಟರ್‌. ಈ ಎರಡು ಸ್ಥಳಗಳ ಮಧ್ಯೆ ದಿನಕ್ಕೆರಡು ಬಾರಿ ಪ್ರಯಾಣಿಸುತ್ತಿದ್ದ ಕರುಣಾನಿಧಿ, ತಮ್ಮ ವಿರಾಮ ಮತ್ತು ಆಹಾರವನ್ನು ಇಬ್ಬರು ಹೆಂಡಿರ ಜತೆಯೂ ಸಮಾನವಾಗಿ ಹಂಚಿಕೊಳ್ಳುತ್ತಿದ್ದರು. ದಯಾಳು ಅಮ್ಮಾಳ್ ಜತೆ ಗೋಪಾಲಪುರಂ ನಿವಾಸದಲ್ಲಿ ಅವರು ಬೆಳಗ್ಗಿನ ಉಪಹಾರ ಮತ್ತು ಸಂಜೆಯ ಟೀ ಸೇವಿಸುತ್ತಿದ್ದರು. ರಾತ್ರಿಯನ್ನು ಕಳೆಯಲು ಸಿಐಟಿ ಕಾಲೊನಿಯಲ್ಲಿರುವ ರಾಜಾಥಿ ಅಮ್ಮಾಳ್ ಮನೆಗೆ ಹೋಗುತ್ತಿದ್ದರು. ಅಲ್ಲೇ ಅವರು ಮಧ್ಯಾಹ್ನದ ಉಟ ಮತ್ತು ರಾತ್ರಿಯ ಊಟ ಸವಿಯುತ್ತಿದ್ದರು.

ಪ್ರತಿದಿನ ಬೆಳಗ್ಗೆ 4.30ಕ್ಕೆ ಸಿಐಟಿ ಕಾಲೊನಿ ನಿವಾಸದಲ್ಲಿ ಏಳುವ ಅಭ್ಯಾಸ ಇಟ್ಟುಕೊಂಡಿದ್ದರು. ಎದ್ದು ನೇರವಾಗಿ ಗೋಪಾಲಪುರಂ ನಿವಾಸಕ್ಕೆ ಬರುತ್ತಿದ್ದರು. ಅಲ್ಲಿ ಉಪಹಾರ ನಂತರ ಒಂದಷ್ಟು ಜನರ ಭೇಟಿ. ಆಮೇಲೆ ಅಲ್ಲಿಂದ ಮುಖ್ಯಮಂತ್ರಿಯಾಗಿದ್ದಾಗ ಸಚಿವಾಲಯಕ್ಕೆ ತೆರಳುತ್ತಿದ್ದರು. ಮಧ್ಯಾಹ್ನದ ಊಟಕ್ಕೆ ಮತ್ತೆ ಸಿಐಟಿ ಕಾಲೊನಿಗೆ ವಾಪಾಸಾಗುತ್ತಿದ್ದರು. ಅಲ್ಲೇ ಸ್ವಲ್ಪ ಹೊತ್ತು ವಿರಾಮ ತೆಗೆದುಕೊಂಡು ನಂತರ ಗೋಪಾಲರಪುರಂ ನಿವಾಸದಲ್ಲಿ ಚಹಾ ಸೇವನೆಗೆ ಮತ್ತು ಒಂದಷ್ಟು ಜನರ ಭೇಟಿಗೆ ತೆರಳುತ್ತಿದ್ದರು. ಅಲ್ಲಿಂದ ಮತ್ತೆ ಸಚಿವಾಲಯ, ಆಮೇಲೆ ಡಿಎಂಕೆ ಕೇಂದ್ರ ಕಚೇರಿ. ಅಲ್ಲಿ 7.30ರ ಹೊತ್ತಿಗೆ ಪಕ್ಷದ ನಾಯಕರ ಜತೆ ಟಿವಿ ನೋಡಿ ಮತ್ತೆ ಸಿಐಟಿ ಕಾಲನಿಗೆ ರಾತ್ರಿಯ ಊಟಕ್ಕೆ ವಾಪಾಸಾಗುತ್ತಿದ್ದರು. ವಿಚಿತ್ರವೆಂದರೆ ಕರುಣಾನಿಧಿಯ ಇಬ್ಬರು ಪತ್ನಿಯರು ಎಂದಿಗೂ ಮುಖಾಮುಖಿಯಾಗಿಲ್ಲ. ಅವರ ನಡುವೆ ಒಂದೇ ಒಂದು ಪದವೂ ಸಂಭಾ‍ಷಣೆಗಳು ನಡೆದಿಲ್ಲ ಎಂದು ವರದಿಗಳು ಹೇಳುತ್ತವೆ.

ಈ ಹಂತದಲ್ಲಿ ಕರುಣಾನಿಧಿ ಬೆಳೆದು ಬಂದಿದ್ದನ್ನು ತಿರುಗಿ ನೋಡಿದರೆ ಎಲ್ಲಾ ಹಂತದಲ್ಲೂ ಅವರು ವ್ಯವಸ್ಥಿತವಾಗಿ ಹಿಡಿತ ಸಾಧಿಸಿದ್ದು ಕಾಣಿಸುತ್ತದೆ. ಓರ್ವ ಸ್ಕ್ರಿಪ್ಟ್‌ ರೈಟರ್‌ ಆಗಿ ಬೆಳೆದು ಬಂದ ಕರುಣಾನಿಧಿ ಅಕ್ಷರಶಃ ಸುಮಾರು ಆರು ದಶಕಗಳ ಕಾಲ ತಮಿಳುನಾಡು ರಾಜಕೀಯ ಚರಿತ್ರೆಯನ್ನು ಬರೆದರು. ಅವರು ಮಂಗಳವಾರ 6.10ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಈ ಮೂಲಕ ದೇಶದ ರಾಜಕಾರಣದ ಅಪರೂಪದ ಸುದೀರ್ಘ ಅಧ್ಯಾಯವೊಂದು ಅಂತ್ಯವಾಗಿದೆ.

ಮಾಹಿತಿ ಮೂಲ: ಕ್ಯಾರವಾನ್