samachara
www.samachara.com
ಭಾನುವಾರ ಎಂ.ಎಸ್‌. ಧೋನಿ ಭೇಟಿ ಮಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ
COVER STORY

‘ಸಮರ್ಥನೆಗಾಗಿ ಸೆಲೆಬ್ರಿಟಿಗಳು’: ತೆರೆ-ಮುಂದೆ ಸರಕಾರದ ಪ್ರಚಾರ, ಹಿಂದೆ ಬಿಜೆಪಿ ಅಪಪ್ರಚಾರ

ಯಾವುದೇ ಸರಕಾರವಾಗಲೀ, ನಿಯತ್ತಾಗಿ ಕೆಲಸ ಮಾಡಿದಾಗ ಅದರ ಪ್ರತಿಫಲ ಸಿಗಲೇಬೇಕು. ಪ್ರತಿಫಲ ಜನಸಾಮಾನ್ಯರ ಮತದ ರೂಪದಲ್ಲಿ ಇರಬೇಕು. ಆಗಲೇ ಪ್ರಜಾಪ್ರಭುತ್ವ ವ್ಯವಸ್ಥೆ ಚಂದ ಎನಿಸುವುದು...

2019ರ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಕೇಂದ್ರ ಸರಕಾರದ ಕಳೆದ ನಾಲ್ಕು ವರ್ಷಗಳ ‘ಸಾಧನೆ’ಗಳಿಗೆ ಸಮರ್ಥನೆ ಕೊಡಿಸಲು ಬಿಜೆಪಿ ಹೊರಟಿದೆ. ಆಲೋಚನೆಯ ಭಾಗವಾಗಿ, ‘ಸಂಪರ್ಕ್ ಫಾರ್‌ ಸಮರ್ಥನ್‌’ ಅಭಿಯಾನ ಆರಂಭಿಸಿದೆ. ಪಕ್ಷದ ಅಧ್ಯಕ್ಷರೂ ಸೇರಿದಂತೆ ನಾಯಕರು ದೇಶದ ಉದ್ದಗಲವೂ ಸೆಲೆಬ್ರಿಟಿಗಳನ್ನು ಭೇಟಿ ಮಾಡುತ್ತಿದ್ದಾರೆ. ಇದು ಪರದೆ ಮುಂದೆ ನಡೆಯುತ್ತಿರುವ ಒಂದು ಅಂಕ.

ಇನ್ನೊಂದು ಅಂಕದಲ್ಲಿ, ಬಿಜೆಪಿ ನಾಯಕರು, ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಹೆಸರುವಾಸಿಯಾದವರನ್ನು ಭೇಟಿ ಮಾಡಿದ ಬೆನ್ನಲ್ಲೇ, ಅವರೆಲ್ಲಾ ಬಿಜೆಪಿ ಸೇರುತ್ತಾರೆ, ಬಿಜೆಪಿ ಬೆಂಬಲಿಸುತ್ತಿದ್ದಾರೆ ಎಂಬ ಅರ್ಥ ಬರುವ ಮಾಹಿತಿಯನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತಿದೆ. ಇದು ಪ್ರಪಂಚ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ, ನಾಲ್ಕು ವರ್ಷಗಳ ಅಧಿಕಾರ ನಡೆಸಿದ ಪಕ್ಷದ ಅಸಲಿ ಕತೆ.

ಒಂದು ಕಡೆ ತನ್ನ ನೇತೃತ್ವದ ಸರಕಾರದ ಸಾಧನೆಗಳಿಗೆ ‘ಸೆಲೆಬ್ರಿಟಿ ಸಮರ್ಥನೆ’ ಕೊಡಿಸುವ ಪ್ರಯತ್ನ. ಮತ್ತೊಂದು ಕಡೆ, ಮುಂದಿನ ಚುನಾವಣೆಗೆ ಬೆಂಬಲವೂ ಇದೆ ಎಂದು ಬಿಂಬಿಸುವ ಪ್ರಯತ್ನ.

ಒಂದು ಉದಾಹರಣೆ:

ಕಳೆದ ಎರಡು ತಿಂಗಳಗಳಿಂದ ದೇಶದಲ್ಲಿ ‘ಸಂಪರ್ಕ್ ಫಾರ್‌ ಸಮರ್ಥನ್‌’ ಹೆಸರಿನ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ. ಈ ಅಭಿಯಾನದ ಅಂಗವಾಗಿ ಈಗಾಗಲೇ ಹಲವು ಸೆಲೆಬ್ರಿಟಿಗಳನ್ನು ಭೇಟಿ ಮಾಡಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಭಾನುವಾರ ಕ್ರಿಕೆಟಿಗ ಎಂ.ಎಸ್‌. ಧೋನಿ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ವೇಳೆ ಕೇಂದ್ರ ಸರಕಾರ ನಾಲ್ಕು ವರ್ಷಗಳ ಅವಧಿಯಲ್ಲಿ ಜಾರಿಗೆ ತಂದಿರುವ ಯೋಜನೆಗಳು ಹಾಗೂ ಕಾರ್ಯಸಾಧನೆಯ ಕಿರುಹೊತ್ತಿಗೆಯನ್ನು ನೀಡಿ, ಧೋನಿ ಜತೆಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.

ಧೋನಿ ಜತೆಗಿರುವ ಫೋಟೊಗಳನ್ನು ಅಮಿತ್‌ ಶಾ ಟ್ವೀಟ್‌ ಮಾಡಿದ್ದಾರೆ. ಈ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಬೆನ್ನಲ್ಲೇ, ಧೋನಿ ಬಿಜೆಪಿ ಸೇರುತ್ತಾರೆ ಎಂಬ ಸಂದೇಶಗಳು ಹರಿದಾಡುತ್ತಿವೆ. ನೆರೆಯ ಪಾಕಿಸ್ತಾನದಲ್ಲಿ ಕ್ರಿಕೆಟಿಗ ಇಮ್ರಾನ್‌ ಖಾನ್ ಪ್ರಧಾನಿ ಹುದ್ದೆಗೇರುತ್ತಿರುವಾಗ ಧೋನಿ ಕೂಡಾ ರಾಜಕೀಯ ನೆಲೆ ಕಂಡುಕೊಳ್ಳುವ ಹಾದಿಯಲ್ಲಿದ್ದಾರೆ ಎಂಬ ವಿಶ್ಲೇಷಣೆಗಳನ್ನು ಅದರ ಜತೆ ಜೋಡಿಸಲಾಗುತ್ತಿದೆ.

ಬಿಜೆಪಿ ಮುಖಂಡರು ಸೆಲೆಬ್ರಿಟಿಗಳನ್ನು ಭೇಟಿ ಮಾಡಿದ ಹಿಂದೆಯೇ ಹೀಗೆ ಅವರು ಬಿಜೆಪಿ ಸೇರುತ್ತಾರೆ, ಬಿಜೆಪಿ ಬೆಂಬಲಿಸುತ್ತಾರೆ ಎಂಬ ಮಾತುಗಳನ್ನು ಬಿಜೆಪಿ ಹಿಂಬಾಲಕರು ಹರಿಬಿಡುತ್ತಿರುವುದು ಇದೇ ಮೊದಲೇನಲ್ಲ. ಚುನಾವಣೆಗೂ ಮುನ್ನಾ ಬೆಂಗಳೂರಿಗೆ ಬಂದಿದ್ದ ಅಮಿತ್‌ ಶಾ, ಸಂಶೋಧಕ ಡಾ. ಎಂ. ಚಿದಾನಂದಮೂರ್ತಿ ಹಾಗೂ ದಲಿತ ಕವಿ ಡಾ. ಸಿದ್ದಲಿಂಗಯ್ಯ ಅವರ ಮನೆಗಳಿಗೆ ಭೇಟಿ ನೀಡಿದ್ದರು.

ಸಿದ್ದಲಿಂಗಯ್ಯ ಭೇಟಿ ಮಾಡಿದ್ದ ಅಮಿತ್‌ ಶಾ
ಸಿದ್ದಲಿಂಗಯ್ಯ ಭೇಟಿ ಮಾಡಿದ್ದ ಅಮಿತ್‌ ಶಾ

ಈ ಭೇಟಿ ವೇಳೆ ಸರಕಾರಕ್ಕೆ ಸಲಹೆಗಳನ್ನು ನೀಡಿದ್ದಾಗಿ ಸಿದ್ದಲಿಂಗಯ್ಯ ಹೇಳಿದ್ದರೆ, ಬೆಜೆಪಿ ಹಿಂಬಾಲಕರು ಸಿದ್ದಲಿಂಗಯ್ಯ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು. ಸಿದ್ದಲಿಂಗಯ್ಯ ಅವರನ್ನು ಓಲೈಸುವ ಮೂಲಕ ದಲಿತರ ಓಟನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ತೀರಾ ಸಾಮಾನ್ಯರಿಗೂ ಅರ್ಥವಾಗುವ ರಾಜಕೀಯ ನಡೆಯನ್ನು ಬಿಜೆಪಿ ಇಟ್ಟಿತ್ತು.

ಇತ್ತೀಚೆಗೆ ಬಿಜೆಪಿ ಶಾಸಕ ಬಿ. ಶ್ರೀರಾಮುಲು ಚಿತ್ರನಟ ಸುದೀಪ್‌ ಭೇಟಿಯಾದ ಬಳಿಕ ಸುದೀಪ್‌ ಕೂಡಾ ಬಿಜೆಪಿ ಸೇರುತ್ತಾರೆ ಎಂಬ ಗಾಳಿಸುದ್ದಿ ಹಬ್ಬಿತ್ತು. ಶ್ರೀರಾಮುಲು ‘ಸಂಪರ್ಕ್ ಫಾರ್‌ ಸಮರ್ಥನ್‌’ ಅಭಿಯಾನದ ಅಂಗವಾಗಿಯೇ ಸುದೀಪ್‌ ಅವರನ್ನು ಭೇಟಿ ಮಾಡಿದ್ದರು. ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸುದೀಪ್‌ ಶ್ರೀರಾಮುಲು ಪರವಾಗಿ ಪ್ರಚಾರ ಮಾಡಿದ್ದರು. ಆದರೆ, ಬಿಜೆಪಿ ಸೇರುವ ಬಗ್ಗೆ ಸುದೀಪ್‌ ಯಾವುದೇ ಒಲವು ತೋರಿರಲಿಲ್ಲ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್‌ ಬಿಜೆಪಿ ಸೇರುತ್ತಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ರಾಜಕಾರಣಿಗಳು ಸೆಲೆಬ್ರಿಟಿಗಳನ್ನು ಭೇಟಿಯಾಗುವುದು ಹಾಗೂ ಅದರ ಹಿಂದೆ ಆಯಾ ಸೆಲೆಬ್ರಿಟಿಗಳು ಪಕ್ಷ ಸೇರುತ್ತಾರೆ ಎಂಬ ಗಾಳಿ ಸುದ್ದಿ ಹಬ್ಬುವುದು ಹೊಸದೇನಲ್ಲ. 1984ರ ಚುನಾವಣೆ ಸಂದರ್ಭದಲ್ಲೇ ರಾಜೀವ್‌ ಗಾಂಧಿ ಸೆಲೆಬ್ರಿಟಿಗಳನ್ನು ರಾಜಕಾರಣಕ್ಕೆ ಎಳೆತರುವ ಪ್ರಯತ್ನ ಮಾಡಿದ್ದರು. ಈಗ ಬಿಜೆಪಿ ಆ ತಂತ್ರವನ್ನು ಬಳಸಿಕೊಳ್ಳುತ್ತಿದೆ. ಹಿಂದೆ ಗಾಳಿ ಸುದ್ದಿ ಹಬ್ಬಲು ಹೆಚ್ಚು ಮಾಧ್ಯಮಗಳಿರಲಿಲ್ಲ. ಸಾಮಾಜಿಕ ಜಾಲತಾಣಗಳು ಬಂದಿರುವ ಈ ಹೊತ್ತಿನಲ್ಲಿ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿಯೇ ಹಬ್ಬಬಹುದು.
- ಎಸ್‌. ಮಹದೇವ ಪ್ರಕಾಶ್‌, ರಾಜಕೀಯ ವಿಶ್ಲೇಷಕ

ಹಿರಿಯ ರಾಜಕೀಯ ವಿಶ್ಲೇಷಕ ಎಸ್. ಮಹದೇವ್ ಪ್ರಕಾಶ್ ಹೇಳಿದಂತೆ ಸೆಲೆಬ್ರಿಟಿಗಳನ್ನು, ಹೆಸರು ಮಾಡಿದವರನ್ನು ರಾಜಕೀಯಕ್ಕೆ ಕರೆತರುವ ಪ್ರಯತ್ನ ಈ ದೇಶದಲ್ಲಿ ಹಿಂದೆಯೂ ನಡೆದಿದೆ. ಕೆಲವು ಯಶಸ್ವಿಯಾದರೆ, ಕೆಲವು ನೆಲಕಚ್ಚಿವೆ. ಇದೀಗ, ಅದೇ ಹಳೆ ಐಡಿಯಾವನ್ನು ಬಿಜೆಪಿ ಪ್ರಯೋಗಕ್ಕೆ ಇಳಿಸಿದೆ.

‘ಸಂಪರ್ಕ್ ಫಾರ್‌ ಸಮರ್ಥನ್‌’ ಅಭಿಯಾನದಡಿ ಅಮಿತ್‌ ಶಾ ಗಾಯಕಿ ಲತಾ ಮಂಗೇಶ್ಕರ್‌, ಮಾಜಿ ಕ್ರಿಕೆಟಿಗ ಕಪಿಲ್‌ ದೇವ್‌, ನಟಿ ಮಾಧುರಿ ದೀಕ್ಷಿತ್‌, ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ದಲ್ಬೀರ್‌ ಸಿಂಗ್‌ ಸುಹಾಗ್‌ ಮುಂತಾದವರನ್ನು ಭೇಟಿ ಮಾಡಿದ್ದರು. ಈ ಭೇಟಿಗಳ ಸಮಯದಲ್ಲೆಲ್ಲಾ ಆ ಸೆಲೆಬ್ರಿಟಿಗಳು ಬಿಜೆಪಿ ಸೇರುತ್ತಾರೆ ಎಂಬ ಸುಳ್ಳು ಸುದ್ದಿಗಳನ್ನು ವ್ಯವಸ್ಥಿತವಾಗಿ ಹಬ್ಬಿಸಲಾಗುತ್ತ ಬಂದಿದೆ ಎಂಬುದನ್ನು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕಿದೆ.

ಕಪಿಲ್‌ ದೇವ್‌ ಭೇಟಿ
ಕಪಿಲ್‌ ದೇವ್‌ ಭೇಟಿ

ಕೇಂದ್ರ ಸರಕಾರವೊಂದು ನಿಯತ್ತಾಗಿ ಕೆಲಸ ಮಾಡಿದರೆ ಅದಕ್ಕೆ ಪ್ರತಿಫಲ ಸಿಗಲೇಬೇಕಿದೆ. ಆದರೆ, ಸೆಲೆಬ್ರಿಟಿ ಸಮರ್ಥನೆಗಳೇ ನಾಲ್ಕು ವರ್ಷದ ಸಾಧನೆಯಾಗಿ ಮುಖ್ಯವಾಹಿನಿಯಲ್ಲಿ ಬಿಂಬಿತವಾದರೆ, ಅದು ಅಪಾಯಕಾರಿ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತಗಳ ರೂಪದಲ್ಲಿ ನೀಡುವ ಸಮರ್ಥನೆಗಳ ಆಚೆಗೆ ಎಲ್ಲವೂ ನಗಣ್ಯ ಎಂಬುದನ್ನು ಸಂವಿಧಾನವನ್ನು ಒಪ್ಪಿಕೊಂಡ ರಾಜಕೀಯ ಪಕ್ಷಗಳಿಗೆ ಬಿಡಿಸಿ ಹೇಳಬೇಕಾಗಿಲ್ಲ.

ಬಿಜೆಪಿ ಕೇವಲ ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನಷ್ಟೇ ಭೇಟಿ ಮಾಡುತ್ತಿಲ್ಲ, ಬೂತ್‌ ಮಟ್ಟದಲ್ಲೂ ಪ್ರಮುಖರ ಅಭಿಪ್ರಾಯ ಪಡೆಯುವ ಕೆಲಸ ನಡೆಯುತ್ತಿದೆ ಎನ್ನುತ್ತಾರೆ ಬಿಜೆಪಿ ಮುಖಂಡರು. ‘ಸಂಪರ್ಕ್‌ ಫಾರ್‌ ಸಮರ್ಥನ್‌’ ಅಭಿಯಾನದ ಬಗ್ಗೆ ‘ಸಮಾಚಾರ’ದೊಂದಿಗೆ ಮಾತನಾಡಿದ ಬಿಜೆಪಿ ಮುಖಂಡ ಎಂ.ಬಿ. ಭಾನುಪ್ರಕಾಶ್, “ಇದು ಸರಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡುವ ಕಾರ್ಯಕ್ರಮ” ಎಂದರು.

“ರಾಷ್ಟ್ರೀಯಮಟ್ಟದ ಮುಖಂಡರು ದೊಡ್ಡ ದೊಡ್ಡ ಸೆಲೆಬ್ರಿಟಿಗಳನ್ನು ಭೇಟಿ ಮಾಡಿದಾಗ ಅದು ಸುದ್ದಿಯಾಗುತ್ತದೆ. ಆದರೆ, ನಾವು ಬೂತ್‌ ಮಟ್ಟದಲ್ಲೂ ಈ ಅಭಿಯಾನ ನಡೆಸುತ್ತಿದ್ದೇವೆ. ಯಾವುದೇ ಪಕ್ಷ, ಜಾತಿ, ಧರ್ಮದ ಗೆರೆ ಹಾಕಿಕೊಳ್ಳದೆ ಸಮಾಜದ ಪ್ರಮುಖರನ್ನು ಭೇಟಿಯಾಗಿ ಸರಕಾರದ ಸಾಧನೆಗಳನ್ನು ಅವರಿಗೆ ಹೇಳುವ ಜತೆಗೆ ಅವರಿಂದ ಅಭಿಪ್ರಾಯಗಳನ್ನೂ ಪಡೆಯುತ್ತಿದ್ದೇವೆ” ಎನ್ನುತ್ತಾರೆ ಅವರು.

ಸರಕಾರದ ಸಾಧನೆಗಳನ್ನು ಸಮಾಜದ ಪ್ರಮುಖರಿಗೆ ಮನವರಿಕೆ ಮಾಡಿಕೊಡುವುದು ಈ ಅಭಿಯಾನದ ಉದ್ದೇಶ. ಜತೆಗೆ ಆಡಳಿತ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಅವರಿಂದ ಸಲಹೆ, ಅಭಿಪ್ರಾಯಗಳನ್ನೂ ಪಡೆಯುತ್ತಿದ್ದೇವೆ.
- ಎಂ.ಬಿ. ಭಾನುಪ್ರಕಾಶ್, ಬಿಜೆಪಿ ಮುಖಂಡ
ಮಾಧುರಿ ದೀಕ್ಷಿತ್‌ ಭೇಟಿ
ಮಾಧುರಿ ದೀಕ್ಷಿತ್‌ ಭೇಟಿ

ಸೆಲೆಬ್ರಿಟಿಗಳ ಭೇಟಿ ಮೂಲಕ ಪಕ್ಷದ ಪರವಾಗಿ ಒಂದಷ್ಟು ಪ್ರಚಾರ ಸಿಗುತ್ತದೆ ಎಂಬ ಲೆಕ್ಕಾಚಾರ ಎಲ್ಲಾ ಪಕ್ಷಗಳಲ್ಲೂ ಇದ್ದಿದ್ದೇ. ಕಂಪೆನಿಗಳು ತಮ್ಮ ವಸ್ತುಗಳ ಪ್ರಚಾರಕ್ಕೆ ಸೆಲೆಬ್ರಿಟಿಗಳನ್ನು ಬಳಸುವುದು ಕೂಡಾ ಅವರ ಮೂಲಕ ಹೆಚ್ಚು ಜನರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದಲೇ. ಪ್ರಚಾರದ ಜತೆಗೆ ಜನರ ಮೇಲೆ ಪ್ರಭಾವ ಬೀರುವ ಶಕ್ತಿಯೂ ಸೆಲೆಬ್ರಿಟಿಗಳಿಗೆ ಇರುವುದರಿಂದ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಸೆಲೆಬ್ರಿಟಿಗಳ ಓಲೈಕೆಗೆ ಮುಂದಾಗುವುದು ಸಹಜ. ಆದರೆ, ಭೇಟಿಯ ಬೆನ್ನಿಗೇ ಅವರು ಪಕ್ಷ ಸೇರಲಿದ್ದಾರೆ ಎಂಬ ಸುಳ್ಳು ಸುದ್ದಿ ಹಬ್ಬಿಸುವ ಖಯಾಲಿ ಹೆಚ್ಚಾಗಿದೆ.

ಜನರಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗುತ್ತಿರುವಂತೆಲ್ಲಾ ಸುಳ್ಳು ಸುದ್ದಿಗಳ ಸುಗ್ಗಿಯೇ ಶುರುವಾಗಿದೆ. ಜನರ ಮೇಲೆ ಪ್ರಭಾವ ಬೀರುವ ವ್ಯಕ್ತಿಗಳ ಭೇಟಿ ಹಾಗೂ ಇಂತಹ ಸುಳ್ಳು ಸುದ್ದಿಗಳ ಮೂಲಕ ಜನರನ್ನು ಯಾಮಾರಿಸಬಹುದು ಎಂದು ರಾಜಕಾರಣಿಗಳು ಭಾವಿಸಿರುವಂತಿದೆ. ನಮ್ಮ ಜನ ಎಲ್ಲಿಯವರೆಗೂ ಸೆಲೆಬ್ರಿಟಿಗಳ ಬಗ್ಗೆ ಅತಿಯಾದ ಆದರ ತೋರುತ್ತಿರುತ್ತಾರೋ ಅಲ್ಲಿಯವರೆಗೂ ಹೀಗೆ ಮರುಳು ಮಾಡುವ ರಾಜಕೀಯವೂ ಇದ್ದೇ ಇರುತ್ತದೆ.

ಬೆಳಿಗ್ಗೆ ಎದ್ದು ಹಲ್ಲುಜ್ಜುವ ಪೇಸ್ಟ್‌ನಿಂದ ಹಿಡಿದು ರಾತ್ರಿ ಮಲಗುವ ಹಾಸಿಗೆವರೆಗೂ ಮಾರಾಟ ಮಾಡಲು ಜಾಹೀರಾತು ಅವಲಂಬಿಸಿರುವುದು ಸೆಲೆಬ್ರಿಟಿಗಳನ್ನೇ. ಸೆಲೆಬ್ರಿಟಿಗಳ ಮೂಲಕ ಕಂಪೆನಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವಂತೆ ರಾಜಕೀಯ ಪಕ್ಷಗಳೂ ತಮ್ಮ ಸಾಧನೆಯನ್ನು ಮಾರಾಟ ಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ತಲುಪಿರುವುದು ದೇಶದ ರಾಜಕೀಯ ವರ್ತಮಾನದ ವ್ಯಂಗ್ಯದಂತೆ ಕಾಣುತ್ತಿದೆ.