samachara
www.samachara.com
ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ; ಎಲ್ಲಿದೆ ಈ ಸಾಮಾಜಿಕ ಪಿಡುಗಿನ ಮೂಲ?
COVER STORY

ವರದಕ್ಷಿಣೆ ಕಿರುಕುಳಕ್ಕೆ ಮತ್ತೊಂದು ಬಲಿ; ಎಲ್ಲಿದೆ ಈ ಸಾಮಾಜಿಕ ಪಿಡುಗಿನ ಮೂಲ?

ಪ್ರತಿನಿತ್ಯ ಭಾರತದಲ್ಲಿ ವರದಕ್ಷಿಣೆಯ ಕಿರುಕುಳ ತಾಳಲಾರದೇ ಅತ್ಮಹತ್ಯೆಯನ್ನು ಮುಖ ಮಾಡುತ್ತಿರುವ ಮಹಿಳೆಯರ ಸಂಖ್ಯೆ 21. ವರದಕ್ಷಿಣೆಯ ಹೆಸರಿನಲ್ಲಿ ಮಹಿಳೆಯರು ಅನುಭವಿಸುವ ನೋವಿನ ಮೂಲವೇನು?

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

ವರದಕ್ಷಿಣೆಯ ಪಿಡುಗು ಶುಕ್ರವಾರ ತಡರಾತ್ರಿ ಮೈಸೂರಿನ ಮಹಿಳೆಯೊಬ್ಬರನ್ನು ಬಲಿ ಪಡೆದಿದೆ. ಅವರೊಟ್ಟಿಗೆ 2 ವರ್ಷದ ಹಾಲ್ಗೆನ್ನೆಯ ಮಗೂ ಕೂಡ ಬೆಂಕಿಗೆ ಆಹುತಿಯಾಗಿದೆ. 

ಗೌರಮ್ಮ ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಮೂಲದವರು. ಇನ್ನು 24 ವರ್ಷದ ಯುವತಿ, ಮದುವೆಯಾಗಿ ಮೂರು ವರ್ಷಗಳು ಕಳೆದಿದ್ದವು. ಪತಿ ಲೋಹಿತ್‌ ಅಶಿಕ್ಷಿತನೇನೂ ಅಲ್ಲ. ಮಾಲೂರಿನ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಮಕ್ಕಳಿಗೆ ಜ್ಞಾನ ತುಂಬುವ ಕೆಲಸದಲ್ಲಿ ನಿರತನಾಗಿದ್ದ. ಆದಾಗ್ಯೂ ಕೂಡ ಮದುವೆ ಸಂದರ್ಭದಲ್ಲಿ ಸಾಕ್ಷಷ್ಟು ವರದಕ್ಷಿಣೆ ಪಡೆದಿದ್ದ.

ಅವರಿಬ್ಬರಿಗೆ 2 ವರ್ಷದ ನಿಯಾಲ್‌ ಎಂಬ ಮುದ್ದಾದ ಗಂಡು ಮಗುವಿತ್ತು. ಮೈಸೂರಿನ ಮಹದೇವಪುರದಲ್ಲಿ ಈ ಕುಟುಂಬ ಬದುಕು ಸಾಗಿಸುತ್ತಿತ್ತು. ಮದುವೆಯಾಗಿ, ಕಂಕುಳಲ್ಲಿ ಮಗುವನ್ನು ಕೂಡಿಸಿಕೊಂಡು ತುತ್ತುಣಿಸುತ್ತಿದ್ದ ಗೌರಿಗೆ ‘ಸುಶಿಕ್ಷಿತ’ ಗಂಡನಿಂದ ನೆಮ್ಮದಿಯೇನು ದೊರೆತಿರಲ್ಲ. ಧನದಾಹಿ ಪತಿಯಿಂದ ಪ್ರತಿನಿತ್ಯ ನೋವಷ್ಟೇ ದೊರೆಯುತ್ತಿತ್ತು. ತವರಿನಿಂದ ಮತ್ತಷ್ಟು ವರದಕ್ಷಿಣೆಯನ್ನು ತರಬೇಕು ಎನ್ನುವುದು ಪತಿಯ ಬೇಡಿಕೆಯಾಗಿತ್ತು. ಅಷ್ಟೇನೂ ಭದ್ರವಲ್ಲದ ತವರಿನವರಿಂದ ವರದಕ್ಷಿಣೆ ಕೇಳುವುದೂ ಕೂಡ ಗೌರಿಗೆ ನುಂಗಲಾರದ ತುತ್ತಾಗಿತ್ತು.

ದಿನದಿಂದ ದಿನಕ್ಕೆ ಹೆಚ್ಚತೊಡಗಿದ ವರದಕ್ಷಿಣೆ ಕಿರುಕುಳವನ್ನು ಗೌರಿ ಸಹಿಸದಾದಳು. ವರದಕ್ಷಿಣೆ ಕಿರುಕುಳ ಎನ್ನುವುದು ಕೌಟುಂಬಿಕ ಹಿಂಸೆ ಎನ್ನುವುದನ್ನು ಸಂಪೂರ್ಣವಾಗಿ ಅರಿಯದ ಗೌರಿಗೆ ಈ ಹಿಂಸೆಯಿಂದ ಹೊರಬರಲು ಕಂಡ ಏಕೈಕ ದಾರಿಯೆಂದರೆ ತನ್ನನ್ನು ತಾನು ನಾಶಪಡಿಸಿಕೊಳ್ಳುವುದು.

ಶುಕ್ರವಾರ (ಆಗಸ್ಟ್‌ 4) ತಡರಾತ್ರಿ ಗೌರಿಗೆ ತಾನು ಕಂಡುಕೊಂಡ ದಾರಿಯೇ ಉತ್ತಮವೆನಿಸಿದೆ. ಮೈಸೂರಿನ ಮಹದೇವಪುರದ ತಮ್ಮ ಮನೆಯಲ್ಲಿಯೇ ಬೆಂಕಿಗಾಹುತಿಯಾಗುವ ನಿರ್ಧಾರ ತಳೆದಿದ್ದಾಳೆ. ತಾನು ಸತ್ತರೆ ಮಗುವಿನ ಭವಿಷ್ಯಕ್ಕೆ ಅಡ್ಡಿಯಾಗುತ್ತದೆಂಬ ಕಾರಣಕ್ಕೆ 2 ವರ್ಷದ ಕಂದಮ್ಮನನ್ನೂ ತನ್ನೊಂದಿಗೆ ಕರೆದೊಯ್ಯುವ ನಿರ್ಧಾರಕ್ಕೆ ಬಂದಿದ್ದಾಳೆ. ಪರಿಣಾಮವಾಗಿ ಶನಿವಾರ ಬೆಳಗ್ಗೆ ಮನೆಯೊಳಗೆ 24 ಪ್ರಾಯದ ಗೌರಮ್ಮ ಮತ್ತು ಮುದ್ದಾದ 2 ವರ್ಷದ ನಿಯಾಲ್‌ರ ದೇಹಗಳು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿವೆ.

ಆತ್ಮಹತ್ಯೆಗೆ ಒಳಗಾದ ಮಹಿಳೆ ಗೌರಮ್ಮ.
ಆತ್ಮಹತ್ಯೆಗೆ ಒಳಗಾದ ಮಹಿಳೆ ಗೌರಮ್ಮ.

ಇದು ಕೆ.ಆರ್.ಪೇಟೆಯ ಗೌರಮ್ಮ ಒಬ್ಬರ ಕತೆಯಲ್ಲ. ಭಾರತದ ಬಹುಸಂಖ್ಯಾತ ಮಹಿಳೆಯರ ನಿತ್ಯದ ವ್ಯಥೆ. ಕೆಲವು ಮಹಿಳೆಯರು ಹಿಂಸೆಯ ಮಧ್ಯೆಯೇ ಬದುಕು ಸಾಗಿಸುತ್ತಿದ್ದರೆ, ಗೌರಿಯಂತಹ ಮೃದು ಮನಸ್ಸಿನ ಮಹಿಳೆಯರು ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ದಾರಿಯೇ ಕಾಣದಾದಾಗ ತಮ್ಮನ್ನು ತಾವು ಸಾಯಿಸಿಕೊಳ್ಳುತ್ತಾರೆ. ಇಂತಹ ಅದೆಷ್ಟೋ ಸಂದರ್ಭಗಳಲ್ಲಿ ಇದ್ಯಾವುದರ ಪರಿವೆಯೇ ಇಲ್ಲದ ಹಾಲುಗಲ್ಲದ ಕಂದಮ್ಮಗಳೂ ಕೂಡ ಜಗತ್ತಿನ ವ್ಯವಹಾರಕ್ಕೆ ಬಾರದೆಯೇ ಬದುಕನ್ನು ಕೊನೆಗೊಳಿಸಿಕೊಳ್ಳುತ್ತವೆ.

ಅಂಕಿ ಅಂಶಗಳು ಏನು ಹೇಳುತ್ತವೆ?:

ವರದಕ್ಷಿಣೆ ಸಾವುಗಳಲ್ಲಿ ಇಡೀ ವಿಶ್ವದಲ್ಲೆ ಭಾರತ ಮೊದಲ ಸ್ಥಾನದಲ್ಲಿದೆ. 2005ರಲ್ಲಿ ಭಾರತದಲ್ಲಿ ವರದಕ್ಷಿಣೆ ಕಿರುಕುಳ ತಾಳಲಾರದೇ 6,787 ಮಹಿಳೆಯರು ಸಾವನ್ನಪ್ಪಿದ್ದರು. 2010ರಲ್ಲಿ 8,391 ಮಹಿಳೆಯರು ತಮ್ಮನ್ನು ತಾವು ನಾಶಗೊಳಿಸಿಕೊಂಡಿದ್ದರು. 2011ಕ್ಕೆ ಈ ಸಂಖ್ಯೆ 8,618ನ್ನು ತಲುಪಿತ್ತು. 2015ರಲ್ಲಿ 7,634 ಮಹಿಳೆಯರು ಮತ್ತು 2016ರಲ್ಲಿ 7,621 ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವು ಪೊಲೀಸ್‌ ಠಾಣೆಗಳಲ್ಲಿ ದಾಖಲಾದ ಪ್ರಕರಣಗಳ ಸಂಖ್ಯೆ.

ಇದನ್ನು ಹೊರತುಪಡಿಸಿ ವರದಕ್ಷಿಣೆ ಕಿರುಕುಳ ಅನುಭವಿಸುವ 20 ಮಹಿಳೆಯರ ಪೈಕಿ ಕನಿಷ್ಟ ಇಬ್ಬರು ಮಹಿಳೆಯರಾದರೂ ಆತ್ಮಹತ್ಯೆ ಕಡೆಗೆ ಮುಖ ಮಾಡುತ್ತಾರೆ ಎಂದು ವರದಿಗಳು ಹೇಳುತ್ತವೆ. 90 ನಿಮಿಷಕ್ಕೊಮ್ಮೆ ಭಾರತದ ಮಹಿಳೆಯೊಬ್ಬಳು ವರದಕ್ಷಿಣೆಯ ಕಾರಣದಿಂದಾಗಿ ಸಾವನ್ನಪ್ಪುತ್ತಿದ್ದಾಳೆ. 2015ರ ವೇಳೆ ಪ್ರತಿನಿತ್ಯ ಸಾಯುವ ಮಹಿಳೆಯರ ಸಂಖ್ಯೆ 12ರಷ್ಟಿತ್ತು. 2016ಕ್ಕೆ ಈ ಸಂಖ್ಯೆ 20ನ್ನು ತಲುಪಿದೆ. 2017ರಲ್ಲಿ ಪ್ರತಿನಿತ್ಯ 21 ಜನ ಮಹಿಳೆಯರು ವರದಕ್ಷಿಣೆಯ ಹಿಂಸೆ ತಾಳಲಾರದೇ ಸಾವನ್ನಪ್ಪುತ್ತಿದ್ದಾರೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಸಾವುಗಳ ಸಂಖ್ಯೆ ಒಂಡೆದೆಯಾದರೆ, ದಿನನಿತ್ಯ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಅಸಂಖ್ಯಾತ ಮಹಿಳೆಯರ ನೋವುಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ವರದಕ್ಷಿಣೆಗಾಗಿ ದೈಹಿಕ ಹಿಂಸೆ ನೀಡುವುದು ಹಿಂದೆ ಸಾಮಾನ್ಯವಾಗಿತ್ತು. ಇತ್ತೀಚಿನ ದಿನಗಳಲ್ಲಿ ವರದಿಯಾದ ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಪತ್ನಿಯ ನಗ್ನ ಚಿತ್ರಗಳನ್ನು ಸೆರೆಹಿಡಿದಿದ್ದ ಗಂಡ, ವರದಕ್ಷಿಣೆ ತಾರದಿದ್ದರೆ ಫೋಟೋಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವುದಾಗಿ ಬೆದರಿಸಿದ್ದ. ಕಳೆದ ತಿಂಗಳಲ್ಲಿ ಇದೇ ವಿಚಾರವಾಗಿ ಬೆಂಗಳೂರಿನ ಮಹಿಳೆಯೊಬ್ಬರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದರು. ಒಂದು ಕಡೆ ವರದಕ್ಷಿಣೆಗಾಗಿ ಗಂಡ ದೈಹಿಕ ಹಿಂಸೆ ನೀಡಿದರೆ ಮತ್ತೊಂದೆಡೆ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದ ಮಹಿಳೆ ಪ್ರಕರಣ ದಾಖಲಿಸಿದ್ದರು.

ಜುಲೈ ತಿಂಗಳಲ್ಲಿ ಸೋಮವಾರಪೇಟೆಯಲ್ಲಿ ಪೊಲೀಸ್‌ ಪೇದೆಯೊಬ್ಬ ಮನೆಯವರ ಜತೆ ಕೂಡಿಕೊಂಡು ವರದಕ್ಷಿಣೆ ತರದ ಹೆಂಡತಿಯ ಗುಪ್ತಾಂಗಗಳಿಗೆ ಚಾಕುವಿನಿಂದ ಘಾಸಿಗೊಳಿಸಿ, ಖಾರದಪುಡಿ ಎರಚಿದ್ದಲ್ಲದೇ ವಿಷವನ್ನೂ ಕುಡಿಸಲು ಪ್ರಯತ್ನಿಸಿದ್ದ. ಫೆಬ್ರವರಿ ತಿಂಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಗಂಡನೊಬ್ಬ ಹೆಂಡತಿ ವರದಕ್ಷಿಣೆಯನ್ನು ತರದಿದ್ದಕ್ಕಾಗಿ ಆಕೆಗೇ ತಿಳಿಯದಂತೆ ಅವಳ ಕಿಡ್ನಿ ಮಾರಿದ್ದ. ಇವು ಬೆಳಕಿಗೆ ಬಂದ ಪ್ರಕರಣಗಳು. ಹೊರಜಗತ್ತಿಗೆ ತಿಳಿಯದ, ಮನೆಯ ಗೋಡೆಗಳ ಮಧ್ಯೆಯೇ ನಡೆಯುತ್ತಿರುವ ವರದಕ್ಷಿಣೆ ಕಿರುಕುಳಗಳಿಗೆ ಅಂಕುಶವೇ ಇಲ್ಲದಂತಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ದೇಶದಲ್ಲಿ ಕೌಟುಂಬಿಕ ಹಿಂಸೆ ಹೆಸರಿನಲ್ಲಿ ದಾಖಲಾದ ಪ್ರಕರಣಗಳ ಪೈಕಿ ಶೇ.93.7 ರಲ್ಲಷ್ಟೇ ವಿಚಾರಣೆ ನಡೆಯುತ್ತದೆ. ಉಳಿದ ಶೇ.6.3 ಮಹಿಳೆಯರ ನೋವುಗಳಿಗೆ ಬೆಲೆಯೇ ಇಲ್ಲ. ಶಿಕ್ಷೆ ದೊರೆಯುವುದು ಕೇವಲ ಶೇ.34.7 ಪ್ರಕರಣಗಳಲ್ಲಷ್ಟೇ. ಉಳಿದ ಆರೋಪಿಗಳು ಆರಾಮವಾಗಿ ಸುತ್ತಾಡಿಕೊಂಡಿದ್ದಾರೆ. ಸುಪ್ರಿಂ ಕೋರ್ಟ್ ಕೂಡ ಈ ಕಾಯ್ದೆಗಳಡಿಯಲ್ಲಿ ಸುಳ್ಳು ಮೊಕದ್ದಮೆಗಳ ಸಂಖ್ಯೆ ಹೆಚ್ಚಾಗಿದ್ದು, ಏಕಾಏಕಿ ಆರೋಪಿಗಳನ್ನು ಬಂಧಿಸುವಂತಿಲ್ಲ ಎಂದಿದೆ. ಈ ಅಂಶವೂ ಕೂಡ ಮಹಿಳೆಯರು ಪೊಲೀಸ್‌ ಠಾಣೆ ಮೆಟ್ಟಿಲೇರದೆ ಹಿಂದುಳಿಯುವಂತೆ ಮಾಡಿದೆ.

ಏನು ಹೇಳುತ್ತದೆ ವರದಕ್ಷಿಣೆ ಕಾನೂನು?:

ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಎರಡೂ ಕೂಡ ಅಪರಾಧ ಎಂಬ ಕಾನೂನು 1961ರಿಂದಲೇ ಜಾರಿಗೆ ಬಂದಿದೆ. ಹೀಗಿದ್ದೂ ಈ ಪಿಡುಗು ಅವ್ಯಾಹತವಾಗಿ ನಡೆಯುತ್ತಿದೆ. ಈ ವರದಕ್ಷಿಣೆಯಿಂದಾಗಿಯೇ ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕೊಲೆಗಳು ಕೂಡ ನಡೆಯುತ್ತಿವೆ. 1961ರಲ್ಲಿಯೇ ‘ವರದಕ್ಷಿಣೆ ನಿಷೇಧ ಅಧಿನಿಯಮ’ ಜಾರಿಗೆ ತರಲಾಗಿದ್ದರೂ, ಈವರೆಗೆ ವರದಕ್ಷಿಣೆ ಪಿಡುಗು ನಿಯಂತ್ರಣ ಸಾಧ್ಯವಾಗಿಲ್ಲ.

ವರದಕ್ಷಿಣೆ ಪಿಡುಗು ತೊಲಗಬೇಕು ಎಂದರೆ ಮೊದಲು ಆಡಳಿತ ಸ್ಥಾನಗಳಲ್ಲಿರುವ ಜನರು ಸಾಮಾನ್ಯ ಜನರಿಗೆ ಮಾದರಿಯಾಗಿ ನಿಲ್ಲಬೇಕು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ಕೆ. ನೀಲಾ.

ಕಾನೂನುಗಳನ್ನು ತರುವ ಶಾಸಕರು, ಸಂಸದರು ಮೊದಲು ವರದಕ್ಷಿಣೆ ತೆಗೆದುಕೊಳ್ಳುವುದನ್ನು ಅದ್ದೂರಿಯಾಗಿ ಮದುವೆ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು. ನಂತರದಲ್ಲಿ ಅಧಿಕಾರಿ ವರ್ಗ ಈ ಕಾರ್ಯಕ್ಕೆ ಮುಂದಾಗಬೇಕು. ಆದರೆ ಇವರಲ್ಲಿ ಬಹುಪಾಲು ಮಂದಿಗೆ ಕಾನೂನುಗಳು ಬೇಕಾಗಿಲ್ಲ. ರಾಜಕಾರಣಿಯೊಬ್ಬ ಇತ್ತೀಚೆಗೆ ಕೋಟಿ ಕೋಟಿ ಖರ್ಚು ಮಾಡಿ, ಮಗಳ ಮೈತುಂಬಾ ಒಡವೆಗಳನ್ನು ಹೇರಿ ಮದುವೆ ಮಾಡಿದ ಉದಾಹರಣೆ ನಮ್ಮ ಮುಂದಿದೆ. ಅವರೆಲ್ಲರೂ ಈ ಕಾನೂನಿನ ವಿರುದ್ಧ ನಿಂತಿದ್ದಾರೆ. ಇನ್ನು ಸಾಮಾನ್ಯ ಜನರಿಂದ ಕಾನೂನುಗಳ ಪಾಲನೆಯನ್ನು ನಿರೀಕ್ಷಿಸಲು ಹೇಗೆ ಸಾಧ್ಯ?
-ಕೆ. ನೀಲಾ, ಸಾಮಾಜಿಕ ಕಾರ್ಯಕರ್ತರು

ಕಾಯ್ದೆಯನ್ನು ಸರಿಯಾಗಿ ಅನುಷ್ಟಾನಕ್ಕೆ ತಂದರೆ ವರದಕ್ಷಿಣೆ ನಿಲ್ಲುತ್ತದೆ ಎಂದೇನೂ ಭರವಸೆಯಿಲ್ಲ. ಆದರೆ ವರದಕ್ಷಿಣೆ ಕೊಡುವವರು ಮತ್ತು ತೆಗೆದುಕೊಳ್ಳುವವರಲ್ಲಿ ಭಯವಂತೂ ಜಾಗೃತವಾಗುತ್ತದೆ. ಜತೆಗೆ ವರದಕ್ಷಿಣೆ ಎನ್ನುವುದು ತೆರೆಮರೆಯ ಕೆಲಸ. ವರದಕ್ಷಿಣೆ ಪಡೆದ ಹೆಚ್ಚಿನ ಸಾಕ್ಷಿಗಳು ದೊರೆಯುವುದು ಯಾರಾದರೂ ಮಹಿಳೆ ಕಿರುಕುಳ ತಾಳಲಾರದೇ ಪತ್ರ ಬರೆದಿಟ್ಟು ಸತ್ತಾಗಲಷ್ಟೇ.

ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಸಾಕ್ಷಿಗಳಿಲ್ಲದೇ ಎನೂ ನಡೆಯುವುದಿಲ್ಲ. ವರದಕ್ಷಿಣೆಯ ಬೆನ್ನು ಹತ್ತಿ ಸಾಗುವುದೂ ಕೂಡ ಕಷ್ಟ. ಇದಕ್ಕೆ ಸುಲಭವಾದ ದಾರಿ ಎಂದರೆ ಅದ್ಧೂರಿ ಮದುವೆಗಳಿಗೆ ತಡೆಯೊಡ್ಡುವುದು ಎನ್ನುತ್ತಾರೆ ಕೆ ನೀಲಾ. “ಅದ್ದೂರಿ ಮದುವೆಗಳು ನಿಂತರೆ ಅದ್ದೂರಿಯಾಗಿ ಮದುವೆ ಮಾಡುವ ಕನಸು ಕಟ್ಟಿಕೊಂಡವರೆಲ್ಲಾ ಸುಮ್ಮನಾಗುತ್ತಾರೆ. ವಧುವಿನ ಮೈಗೆಲ್ಲಾ ಬಂಗಾರ ಹಾಕಿ ಕಳುಹಿಸುವುದು ತಪ್ಪುತ್ತದೆ. ಉಡುಗೊರೆಯ ರೂಪದಲ್ಲಿ ತರಹೇವಾರಿ ಸರಕು ಸರಂಜಾಮುಗಳು ಹೋಗುವುದು ತಪ್ಪುತ್ತದೆ,” ಎಂಬ ಅಭಿಪ್ರಾಯ ಅವರದ್ದು.

ಒಟ್ಟಾರೆ ವರದಕ್ಷಿಣೆ ಎನ್ನುವುದಕ್ಕೆ ಕೇವಲ ಅತಿಯಾದ ಅಸೆಯಷ್ಟೇ ಕಾರಣವಾಗಿಲ್ಲ. ಇದರ ಹಿಂದೆ ಪುರುಷ ಪ್ರಧಾನ್ಯತೆ ಕೂಡಾ ಕೆಲಸ ಮಾಡುತ್ತಿದೆ. ಜತೆಗೇ ಬಂಡವಾಳ ಶಾಹಿಗಳ ಧೋರಣೆಗಳಿವೆ. ಕೊಳ್ಳುಬಾಕ ಸಂಸ್ಕೃತಿ ಇದೆ. ಆಡಳಿತ ಮತ್ತು ಅಧಿಕಾರಿ ವರ್ಗಗಳ ಉಡಾಳತನವೂ ಕಾರ್ಯ ನಿರ್ವಹಿಸುತ್ತಿದೆ. ಇದೆಲ್ಲದರಿಂದ ಸಮಾಜ ಮುಕ್ತವಾಗುವವರೆಗೂ ಪ್ರತಿನಿತ್ಯ ಗೌರಮ್ಮನಂತಹ ಯುವತಿಯರ ಸಾವು ತಪ್ಪದು.