ವಲಸಿಗರ ‘ಅಕ್ರಮ- ಸಕ್ರಮ’ದ ಹಿಂದೆ ರಾಜಕೀಯ ಲೆಕ್ಕಾಚಾರ; ಓಟ್‌ ಬ್ಯಾಂಕ್‌ ಆದರು ಗುಳೆಬಂದವರು
COVER STORY

ವಲಸಿಗರ ‘ಅಕ್ರಮ- ಸಕ್ರಮ’ದ ಹಿಂದೆ ರಾಜಕೀಯ ಲೆಕ್ಕಾಚಾರ; ಓಟ್‌ ಬ್ಯಾಂಕ್‌ ಆದರು ಗುಳೆಬಂದವರು

ರಾಜ್ಯದಲ್ಲಿ ಅಕ್ರಮ ವಲಸಿಗರು ಸ್ಥಳೀಯ ರಾಜಕಾರಣಿಗಳ ಓಟ್‌ ಬ್ಯಾಂಕ್‌ ಆಗುವ ಮೂಲಕ ‘ಸಕ್ರಮ’ಗೊಂಡು ದೇಶದ ಪ್ರಜೆಗಳಾಗಿದ್ದಾರೆ. 

ವಲಸೆ ಸಮಸ್ಯೆ ಈಗ ಕೇವಲ ಜಾಗತಿಕ ಮಟ್ಟದ ಸಮಸ್ಯೆಯಾಗಿ ಉಳಿದಿಲ್ಲ. ರಾಷ್ಟ್ರೀಯ ಮಟ್ಟದಿಂದ ಹಿಡಿದು ರಾಜ್ಯ ಮಟ್ಟದವರೆಗೂ ವಲಸೆ ಸಮಸ್ಯೆ ಈಗ ದೊಡ್ಡದಾಗಿದೆ. ಅಕ್ರಮ ವಲಸೆ ತಡೆಯಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಈಗ ತಲೆಕೆಡಿಸಿಕೊಂಡಿವೆ. ಆದರೆ, ವಲಸಿಗರ ಅಕ್ರಮ – ಸಕ್ರಮದ ಹಿಂದೆ ರಾಜಕೀಯ ಲಾಭದ ಲೆಕ್ಕಾಚಾರಗಳೂ ಕೆಲಸ ಮಾಡಿವೆ.

ಈಗಾಗಲೇ ದೇಶದೊಳಗೆ ಸೇರಿ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಪಡೆದಿರುವ ವಲಸಿಗರು ಈಗ ದೇಶದ ಅಧಿಕೃತ ಪ್ರಜೆಗಳಾಗಿ ಹೋಗಿದ್ದಾರೆ. ಇಂತಹ ವಲಸಿಗರು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಪಡೆದಿರುವುದರ ಹಿಂದೆ ಸ್ಥಳೀಯ ರಾಜಕಾರಣಿಗಳ ಓಟ್‌ ಬ್ಯಾಂಕ್‌ ರಾಜಕಾರಣವೂ ಇದೆ.

ರಾಜಧಾನಿ ಬೆಂಗಳೂರು ಹಾಗೂ ಪಕ್ಕದ ತುಮಕೂರಿನ ಉದಾಹರಣೆಗಳನ್ನೇ ತೆಗೆದುಕೊಂಡರೆ ಕಟ್ಟಡ ನಿರ್ಮಾಣ ಹಾಗೂ ಪ್ಲಾಸ್ಟಿಕ್‌ ಸಾಮಾನುಗಳನ್ನು ಮಾರಾಟ ಮಾಡುವ ಮುಸ್ಲಿಮರನ್ನು ಅಕ್ರಮ ವಲಸಿಗರು ಎಂದು ಗುರುತಿಸಲಾಗುತ್ತಿದೆ. ಆದರೆ, ಈ ಪೈಕಿ ಹಲವರ ಬಳಿ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ಗಳಿವೆ. ಹೀಗಾಗಿ ಇವರು ಅಕ್ರಮ ವಲಸಿಗರಲ್ಲ. ಈ ಪೈಕಿ ಅಲೆಮಾರಿ ಸಮುದಾಯಗಳೂ ಸಾಕಷ್ಟಿವೆ.

ಅಲೆಮಾರಿ ಸಮುದಾಯಗಳು ಹಾಗೂ ಬೇರೆ ರಾಜ್ಯಗಳಿಂದ ಕೆಲಸ ಹಾಗೂ ವ್ಯಾಪಾರದ ಕಾರಣಕ್ಕೆ ರಾಜ್ಯಕ್ಕೆ ಬಂದಿರುವವರನ್ನೂ ಅಕ್ರಮ ವಲಸಿಗರು ಎಂದು ಸ್ಥಳೀಯರು ಗುರುತಿಸುವುದು ಸಾಮಾನ್ಯವಾಗಿದೆ. ಆದರೆ, ಕಟ್ಟಡ ನಿರ್ಮಾಣ ಕೆಲಸಕ್ಕೆ ಬರುವ ವಲಸಿಗರ ಪೈಕಿ ಬಹುತೇಕರು ಬಿಹಾರ, ಪಶ್ಚಿಮ ಬಂಗಾಳಗಳಿಂದ ಬರುವವರು. ಈ ಜನ ಅಕ್ರಮ ವಲಸಿಗರಲ್ಲ.

ಬೆಂಗಳೂರು ಹಾಗೂ ತುಮಕೂರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಕ್ರಮ ಬಾಂಗ್ಲಾದೇಶಿ ವಲಸಿಗರಿದ್ದಾರೆ ಎಂಬ ಮಾತುಗಳಿವೆ. ರಾಜ್ಯಸಭಾ ಚುನಾವಣೆಗೂ ಮುನ್ನಾ ತುಮಕೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಅಕ್ರಮ ವಲಸಿಗರಿದ್ದಾರೆ ಎಂಬ ಆರೋಪಗಳಿದ್ದವು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಈ ಹಿಂದೆ ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ರಾಜ್ಯದಲ್ಲಿ 40 ಸಾವಿರ ಅಕ್ರಮ ಬಾಂಗ್ಲಾ ವಲಸಿಗರಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ರಾಜ್ಯದಲ್ಲಿ ಸಾವಿರದಷ್ಟು ಅಕ್ರಮ ವಲಸಿಗರಿಲ್ಲ ಎಂದು ಈ ಹಿಂದೆ ಗೃಹ ಸಚಿವರಾಗಿದ್ದ ರಾಮಲಿಂಗಾ ರೆಡ್ಡಿ ಹೇಳಿದ್ದರು.

ಅಕ್ರಮ ವಲಸಿಗರಿಗೆ ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ಗಳನ್ನು ಮಾಡಿಸಿ ಕೊಡುವುದರ ಹಿಂದೆ ಸ್ಥಳೀಯ ಪ್ರಭಾವಿ ರಾಜಕಾರಣಿಗಳ ಹಿತಾಸಕ್ತಿಯೂ ಇದೆ ಎಂಬ ಮಾತುಗಳಿವೆ. ಸಾವಿರ ಸಾವಿರ ಸಂಖ್ಯೆಯಲ್ಲಿ ಓಟುಗಳಾಗಿ ಕಾಣುವ ವಲಸಿಗರನ್ನು ಬಿಟ್ಟುಕೊಡಲು ರಾಜಕಾರಣಿಗಳಿಗೆ ಮನಸ್ಸಿಲ್ಲ. ಹೀಗಾಗಿ ಈ ಅಕ್ರಮ- ಸಕ್ರಮದ ಉಸ್ತುವಾರಿ ಸ್ಥಳೀಯ ರಾಜಕಾರಣಿಗಳ ನೆರಳಲ್ಲೇ ನಡೆದಿದೆ, ನಡೆಯುತ್ತಿದೆ ಎಂಬ ಆರೋಪಗಳಿವೆ.

“ಚುನಾವಣೆಗೂ ಮುನ್ನಾ ಮತದಾರರ ಪಟ್ಟಿಯಲ್ಲಿ ಬೇರೆ ತಾಲ್ಲೂಕುಗಳ ಮುಸ್ಲಿಮರ ಹೆಸರುಗಳನ್ನು ಅಕ್ರಮವಾಗಿ ಸೇರಿಸಲಾಗಿದೆ ಎಂದು ಪ್ರತಿಭಟನೆ ಮಾಡಿದ್ದೆವು. ಆದರೆ, ತುಮಕೂರಿನಲ್ಲಿ 20-30 ಸಾವಿರದಷ್ಟು ಪ್ರಮಾಣದಲ್ಲಿ ಬಾಂಗ್ಲಾ ವಲಸಿಗರಿಲ್ಲ. ಇದ್ದರೆ ಎರಡು ಮೂರು ಸಾವಿರ ಇರಬಹುದು. ಆದರೆ, ಈಗ ಬಹುತೇಕರ ಬಳಿ ಆಧಾರ್‌ ಕಾರ್ಡ್‌ಗಳಿವೆ. ಈಗ ಅವರನ್ನು ವಲಸಿಗರು ಎಂದು ಗುರುತಿಸುವುದು ಕಷ್ಟ” ಎನ್ನುತ್ತಾರೆ ತುಮಕೂರು ನಗರದ ಶಾಸಕ ಜ್ಯೋತಿ ಗಣೇಶ್‌.

ತುಮಕೂರು ನಗರದ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳು ಸೇರಿವೆ ಹಾಗೂ ವಲಸಿಗರ ಸಂಖ್ಯೆ ತುಮಕೂರಿನಲ್ಲಿ ಹೆಚ್ಚಾಗಿದೆ ಎಂದು ಆರೋಪಿಸಿ ಜ್ಯೋತಿ ಗಣೇಶ್‌ ಈ ಹಿಂದೆ ಪ್ರತಿಭಟನೆಗಳನ್ನು ನಡೆಸಿದ್ದರು. “ಆಧಾರ್‌ ಕಾರ್ಡ್‌ಗಳನ್ನು ಪಡೆದಿರುವ ವಲಸಿಗರನ್ನು ಅಕ್ರಮ ನಿವಾಸಿಗಳು ಎಂದು ಹೇಳಲು ಆಗುವುದಿಲ್ಲ. ಇರುವ ಅಕ್ರಮ ವಲಸಿಗರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕಾದ್ದು ಪೊಲೀಸರ ಕೆಲಸ. ತುಮಕೂರಿನಲ್ಲಿ ಇಷ್ಟೇ ಸಂಖ್ಯೆಯ ವಲಸಿಗರು ಇದ್ದಾರೆ ಎಂಬ ಅಂಕಿಸಂಖ್ಯೆ ನನಗೂ ಗೊತ್ತಿಲ್ಲ” ಎಂದು ಅವರು ಹೇಳಿದರು.

ತುಮಕೂರಿನಲ್ಲಿ ಭಾರೀ ಸಂಖ್ಯೆಯಲ್ಲಿ ಬಾಂಗ್ಲಾ ವಲಸಿಗರಿದ್ದಾರೆ ಎಂಬ ಮಾತು ನಿಜವೇ ಎಂಬ ಬಗ್ಗೆ ‘ಸಮಾಚಾರ’ ತುಮಕೂರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಗೋಪಿನಾಥ್‌ ಅವರನ್ನು ಮಾತನಾಡಿಸಿದಾಗ ಅದೆಲ್ಲವೂ ಊಹಾಪೋಹವಷ್ಟೇ ಎಂಬ ಉತ್ತರ ಬಂತು.

ಅಕ್ರಮ ವಲಸಿಗರ ಬಗ್ಗೆ ಸತ್ಯಕ್ಕಿಂತ ಊಹಾಪೋಹಗಳೇ ಹೆಚ್ಚಾಗಿವೆ. ನಮಗೆ ತಿಳಿದಂತೆ ತುಮಕೂರಿನಲ್ಲಿ ಅಕ್ರಮ ವಲಸಿಗರಿಲ್ಲ.
-ದಿವ್ಯಾ ಗೋಪಿನಾಥ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ತುಮಕೂರು

“ತುಮಕೂರಿನಲ್ಲಿ 20-30 ಸಾವಿರದಷ್ಟು ಅಕ್ರಮ ವಲಸಿಗರು ಇದ್ದಾರೆ ಎಂಬ ಮಾತುಗಳು ಕೇವಲ ಊಹಾಪೋಪ. ಚುನಾವಣೆಗೂ ಮುನ್ನಾ ಇಂತಹ ಆರೋಪಗಳನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಜಿಲ್ಲಾಡಳಿತ ಈ ಬಗ್ಗೆ ಪರಿಶೀಲನೆಗೆ ತಂಡಗಳನ್ನು ರಚಿಸಿತ್ತು. ತುಮಕೂರಿನ ಮನೆ ಮನೆಗಳಿಗೆ ತೆರಳಿ ಅಧಿಕಾರಿಗಳು ಮತದಾರರ ಪಟ್ಟಿ ಪರೀಕ್ಷಿಸಿದ್ದಾರೆ. ಆ ವೇಳೆ ಯಾವುದೇ ವಲಸಿಗರು ಇದ್ದ ಮಾಹಿತಿ ಸಿಕ್ಕಿಲ್ಲ. ಉತ್ತರ ಭಾರತದಿಂದ ಬಂದಿರುವ ಕಟ್ಟಡ ಕಾರ್ಮಿಕರನ್ನೇ ಕೆಲವು ಸ್ಥಳೀಯರು ವಲಸಿಗರು ಎಂಬ ಸುದ್ದಿ ಹಬ್ಬಿಸಿದ್ದಾರೆ” ಎನ್ನುತ್ತಾರೆ ದಿವ್ಯಾ ಗೋಪಿನಾಥ್‌.

ತುಮಕೂರಿನಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬುದನ್ನು ಸ್ಥಳೀಯರು ಕೂಡಾ ಒಪ್ಪುವುದಿಲ್ಲ. “20-30 ಸಾವಿರದಷ್ಟು ಅಕ್ರಮ ವಲಸಿಗರು ಇದ್ದರೆ ಅವರು ಎಷ್ಟು ದಿನ ಒಳಗೇ ಅಡಗಿರಲು ಸಾಧ್ಯ. ಯಾವುದೇ ಮುಸ್ಲಿಂ ಬಡಾವಣೆಗಳಲ್ಲಿ ಸುತ್ತಾಡಿದರೂ ಅಕ್ರಮ ವಲಸಿಗರು ಎಂಬುವರ ಮುಖಗಳು ಕಾಣುವುದಿಲ್ಲ. ಕಟ್ಟಡ ನಿರ್ಮಾಣ ಕೆಲಸಕ್ಕೆ ಬಂದಿರುವ ಉತ್ತರ ಕರ್ನಾಟಕದವರನ್ನೇ ಅಕ್ರಮ ವಲಸಿಗರು ಎನ್ನುವುದು ತಪ್ಪು. ಅವರ ಸಂಖ್ಯೆಯೂ ಸಾವಿರದಷ್ಟು ಇಲ್ಲ” ಎನ್ನುತ್ತಾರೆ ತುಮಕೂರಿನ ಸ್ಥಳೀಯರೊಬ್ಬರು.

ತುಮಕೂರು ಮಾತ್ರವಲ್ಲ, ಮೈಸೂರು, ದಕ್ಷಿಣ ಕನ್ನಡ, ಉಡುಪಿ ಭಾಗದಲ್ಲೂ ದೊಡ್ಡ ಸಂಖ್ಯೆಯಲ್ಲಿ ಅಕ್ರಮ ವಲಸಿಗರಿದ್ದಾರೆ ಎಂಬ ಊಹಾಪೋಹಗಳಿವೆ. ಆದರೆ, ಇದಕ್ಕೆ ಅಧಿಕೃತ ಆಧಾರವಂತೂ ಇಲ್ಲ. ಇನ್ನು ಬೆಂಗಳೂರಿನ ಬೆಳ್ಳಂದೂರು ಸುತ್ತಮುತ್ತ ಚದುರಿರುವ ಅಕ್ರಮ ವಲಸಿಗರೆಂದು ಹೇಳಲಾಗುವ ಹಲವರ ಬಳಿ ಮತದಾರರ ಗುರುತಿನ ಚೀಟಿಗಳಿವೆ. ಈ ಗುರುತಿನ ಚೀಟಿಗಳನ್ನು ಮಾಡಿಸಿಕೊಡುವುದರ ಹಿಂದೆ ಸ್ಥಳೀಯ ಶಾಸಕರ ಹಿತಾಸಕ್ತಿ ಇದೆ ಎಂಬ ಆರೋಪಗಳಿವೆ.

ಸ್ಥಳೀಯರು ಅಕ್ರಮ ವಲಸಿಗರು ಎಂದು ಗುರುತಿಸುವ ಹಲವರ ಬಳಿ ಇಂದು ಮತದಾರರ ಗುರುತಿನ ಚೀಟಿ ಹಾಗೂ ಆಧಾರ್‌ ಕಾರ್ಡ್‌ಗಳಿವೆ. ಇವನ್ನು ಮಾಡಿಸಿಕೊಡುವ ಮೂಲಕ ಒಂದಷ್ಟು ಓಟ್‌ ಬ್ಯಾಂಕ್‌ ಸೃಷ್ಟಿಸಿಕೊಳ್ಳುವ ಲಾಭದ ಲೆಕ್ಕಾಚಾರ ರಾಜಕಾರಣಿಗಳದ್ದು. ರಾಜಕಾರಣಿಗಳ ರಾಜಕೀಯ ಲಾಭದ ಕಾರಣಕ್ಕೆ ಅದೆಷ್ಟೋ ವಲಸಿಗರಿಗೆ ಅಕ್ರಮ- ಸಕ್ರಮದ ಭಾಗ್ಯ ಸಿಕ್ಕಿದೆ. ಈ ಮೂಲಕ ಅಕ್ರಮ ವಲಸಿಗರು ಸಕ್ರಮಗೊಂಡು ಭಾರತದ ಪ್ರಜೆಗಳಾಗಿ ಅಧಿಕೃತ ದಾಖಲೆಗಳಲ್ಲೂ ಸೇರಿಹೋಗಿದ್ದಾರೆ. ಇವರನ್ನು ಈಗ ವಲಸಿಗರು ಎಂದು ಗುರುತಿಸುವುದು ಕೂಡಾ ಸುಲಭವಲ್ಲ.