samachara
www.samachara.com
ಆಗುಂಬೆಯಲ್ಲಿ ಒಂಟಿ ಸಲಗ ಸೃಷ್ಟಿಸಿದ ‘ಮಾಯಾಲೋಕ’ & ರೊಚ್ಚಿಗೆದ್ದ ಮಲೆನಾಡಿಗರು!
COVER STORY

ಆಗುಂಬೆಯಲ್ಲಿ ಒಂಟಿ ಸಲಗ ಸೃಷ್ಟಿಸಿದ ‘ಮಾಯಾಲೋಕ’ & ರೊಚ್ಚಿಗೆದ್ದ ಮಲೆನಾಡಿಗರು!

ಒಂಟಿ ಸಲಗದ ಇರುವಿಕೆ ಕಾಡನ್ನು ರಕ್ಷಿಸುತ್ತಿದೆ ಎಂಬ ಲಾಜಿಕ್ ಅರಣ್ಯ ಇಲಾಖೆಯದ್ದು. ಇದು ಸತ್ಯವೇ ಆಗಿದ್ದರೆ, ರಾಜ್ಯಾದ್ಯಂತ ಅರಣ್ಯ ಇಲಾಖೆಯನ್ನು ಸಾಕುವ ಬದಲು ಆನೆಗಳನ್ನೇ ಸಾಕಬಹುದಲ್ಲ?

ಇದು ಮಲೆನಾಡಿನ ಅಂಚಿನಲ್ಲಿರುವ ಆಗುಂಬೆಯ ಸುತ್ತಮುತ್ತ ಕಳೆದ ಎರಡು ವರ್ಷಗಳಿಂದ ಜಾರಿಯಲ್ಲಿರುವ ಮಾನವ ಮತ್ತು ಒಂಟಿ ಸಲಗದ ನಡುವಿನ ಸಂಘರ್ಷದ ಕತೆ.

ನಿತ್ಯಹರಿದ್ವರ್ಣ ಕಾಡು, ಅತಿ ಹೆಚ್ಚು ಮಳೆಯನ್ನು ಆಕರ್ಷಿಸುವ ಆಗುಂಬೆ ಕಾಡುಗಳು ಜೀವವೈವಿಧ್ಯಕ್ಕೂ ಹೆಸರುವಾಸಿ. ಇಲ್ಲಿನ ದಟ್ಟ ಕಾಡು, ಪ್ರಾಣಿಗಳ ಜತೆಜತೆಗೇ ಮನುಷ್ಯರು ಬದುಕಲು ಸಾಹಸದ ಪರಿಸರವೊಂದನ್ನು ಸೃಷ್ಟಿಸಿಕೊಂಡಿದ್ದಾರೆ. ಆದರೆ, ಈ ಭಾಗದ ಜನರಿಗೆ ಎರಡು ವರ್ಷಗಳ ಹಿಂದೆ ಒಂಟಿ ಗಂಡಾನೆಯೊಂದು ಮುಖಾಮುಖಿಯಾಗಿದೆ. ಅದು ಕೃಷಿ ತೋಟಗಳಲ್ಲಿ, ಭತ್ತದ ಗದ್ದೆಗಳಲ್ಲಿ ಉಂಟುಮಾಡುತ್ತಿರುವ ಹಾನಿಯಿಂದ ರೋಸತ್ತಿದ್ದಾರೆ. ಪರಿಣಾಮ, ಆಗುಂಬೆ ಎಂಬ ಪುಟ್ಟ ಊರು ಶನಿವಾರ ಪ್ರತಿಭಟನೆಯೊಂದಕ್ಕೆ ಸಾಕ್ಷಿಯಾಗಿದೆ.

ಆಗುಂಬೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಪ್ರತಿಭಟನೆ. ಕಾಡಾನೆ ಸ್ಥಳಾಂತರಿಸಿ ಎಂಬುದು ಅವರ ಬೇಡಿಕೆ!
ಆಗುಂಬೆಯಲ್ಲಿ ಶನಿವಾರ ಬೆಳಗ್ಗೆ ನಡೆದ ಪ್ರತಿಭಟನೆ. ಕಾಡಾನೆ ಸ್ಥಳಾಂತರಿಸಿ ಎಂಬುದು ಅವರ ಬೇಡಿಕೆ!
/ನಮ್ಮೂರ್‌ ಎಕ್ಸ್‌ಪ್ರೆಸ್‌. 

ಇದು ಒಂಟಿ ಸಲಗ:

ಸಾಮಾನ್ಯವಾಗಿ ಆನೆಗಳು ಹಿಂಡಿಂಡಾಗಿ ಇರುತ್ತವೆ. ಮಾತೃ ಪ್ರಧಾನ ಪರಿಸರದಲ್ಲಿ ಆನೆಗಳು ಗುಂಪಾಗಿ ಬದುಕುತ್ತವೆ. ಭದ್ರಾ ಅಭಯಾರಣ್ಯದಿಂದ ಹಿಡಿದು ದುಬಾರೆ ಕಾಡುಗಳವರೆಗೆ, ಬಂಡೀಪುರದಿಂದ ಹಿಡಿದು ಬಿಳಿಗಿರಿರಂಗನ ಬೆಟ್ಟದವರೆಗೆ ಆನೆಗಳ ಇರುವಿಕೆ ರಾಜ್ಯದಲ್ಲಿ ಕಂಡುಬರುತ್ತದೆ. ಆದರೆ ಆಗುಂಬೆ ಕಾಡಿಗೆ ಆನೆ ಎಂಬುದು ಹೊರಗಿನ ಪರಿಸರ ಪ್ರಾಣಿ ಅನ್ನಿಸಿಕೊಳ್ಳುತ್ತದೆ. ಈ ಭಾಗದಲ್ಲಿ ಕಾಳಿಂದ ಸರ್ಪಗಳಿಂದ ಹಿಡಿದು ಅಪರೂಪದ ಕೀಟಗಳವರೆಗೆ ಕಾಣಸಿಗುತ್ತವೆ. ಆದರೆ ಆನೆಗಳು ಈ ಭಾಗದಲ್ಲಿ ಬದುಕಿದ ಉದಾಹರಣೆಗಳು ಇಲ್ಲ.

ಹೀಗಿರುವಾಗ, ಎರಡು ವರ್ಷಗಳ ಹಿಂದೆ ಈ ಅರಣ್ಯ ಭಾಗಕ್ಕೆ ಒಂಟಿ ಸಲಗವೊಂದು ಕಾಲಿಟ್ಟಿತು. ಹಾವುಗಳ ಜತೆ ಸಹಜೀವನ ನಡೆಸುವ ಈ ಭಾಗದ ಜನ ಆನೆ ಕಂಡಾಕ್ಷಣ ಬೆಚ್ಚಿ ಬಿದ್ದರು. ಒಂದೇ ಸಲಗವಾಗಿರುವುದರಿಂದ ಇವತ್ತಲ್ಲ ನಾಳೆ ಹೊರಟು ಹೋಗುತ್ತದೆ ಎಂಬ ವಿಶ್ವಾಸ ಇಟ್ಟುಕೊಂಡರು.

“ಆನೆ ಅಲ್ಲಲ್ಲಿ ಕಾಣಿಸಿಕೊಳ್ಳಲು ಶುರುಮಾಡಿ ಎರಡು ವರ್ಷದ ಮೇಲಾಯಿತು. ಒಂದು ಆನೆ ಎಷ್ಟು ದಿನ ಇರಲು ಸಾಧ್ಯ ಎಂದು ನಾವು ಪ್ರಶ್ನೆ ಹಾಕಿಕೊಂಡಿದ್ದೆವು. ಆದರೆ ಅದು ಅತ್ರಕೋಣೆ, ಕಾರೆಕುಂಬ್ರಿ, ಮಲಂದೂರು, ಹಳ್ಳಿ ಬಿದರಗೋಡು ಮತ್ತಿತರ ಮಜಿರೆ ಹಳ್ಳಿಗಳಲ್ಲಿ ಬೆಳೆ ನಾಶ ಮಾಡಲು ಶುರುಮಾಡಿತು. ಸೊಂಡಲಿನಲ್ಲಿ ದೂಡಿ ಬೆಳೆದ ಅಡಿಕೆ ಮರಗಳನ್ನು ಮುರಿದು ಹಾಕುವುದು, ಭತ್ತದ ಗದ್ದೆಗಳನ್ನು ನುಗ್ಗಿ ಬೆಳೆ ನಾಶ ಮಾಡುವುದು ಮಾಮೂಲಾಯಿತು. ಇದರಿಂದ ಜನ ರೋಸಿ ಹೋಗಿದ್ದಾರೆ,’’ ಎನ್ನುತ್ತಾರೆ ಕೊರೋಡಿ ಕೃಷ್ಣಪ್ಪ.

ಆಗುಂಬೆ ಸಮೀಪದ ಮೇಗರವಳ್ಳಿ ಗ್ರಾಮದ ಕೃಷಿಕರು ಕೃಷ್ಣಪ್ಪ. ರೈತ ಸಂಘದ ನಾಯಕರಾಗಿ ಈ ಭಾಗದಲ್ಲಿ ಹಲವು ಹೋರಾಟಗಳನ್ನು ಸಂಘಟಿಸಿದ ಹಿನ್ನೆಲೆ ಇವರಿಗಿದೆ. ಇವತ್ತು ಆಗುಂಬೆಯಲ್ಲಿ ಸುತ್ತಮುತ್ತಲಿನ ರೈತರನ್ನು ಸೇರಿ, ಒಂಟಿ ಸಲಗದ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

“ಅಂದಿನ ಅರಣ್ಯ ಸಚಿವ ರಮಾನಾಥ ರೈ ತೀರ್ಥಹಳ್ಳಿಗೆ ಬಂದಿದ್ದಾಗ ಎಲ್ಲರೂ ಹೋಗಿ ಮನವಿ ಕೊಟ್ಟಿದ್ದೆವು. ಒಂಟಿ ಸಲಗವನ್ನು ಸ್ಥಳಾಂತರಿಸಿ ಎಂದು ಕೋರಿಕೊಂಡಿದ್ದೆವು. ಅದಕ್ಕೆ ಒಪ್ಪಿದ ಅವರು, ‘ದಂಡು ಕಡಿಯುತ್ತೀವಿ’ ಅಂದಿದ್ದರು. ಅವತ್ತಿನ ಶಾಸಕ ಕಿಮ್ಮನೆ ರತ್ನಾಕರ್ ಕೂಡ ಆಶ್ವಾಸನೆ ನೀಡಿದ್ದರು. ಅವರ ಅವಧಿ ಮುಗಿಯಿತೇ ಹೊರತು, ಆನೆ ಸ್ಥಳಾಂತರ ಆಗಲಿಲ್ಲ,’’ ಎಂದು ವಿಷಾಧ ವ್ಯಕ್ತಪಡಿಸುತ್ತಾರೆ ಕೆರೋಡಿ ಕೃಷ್ಣಪ್ಪ.

ತಜ್ಞರು ಏನಂತಾರೆ?:

ದಟ್ಟ ಅರಣ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಒಂಟಿ ಸಲಗವೊಂದು ಓಡಾಡಿಕೊಂಡಿದೆ ಎಂಬುದೇ ಅವರಿಗೆ ಅಚ್ಚರಿ ಮೂಡಿಸುತ್ತದೆ. ಗುಂಪುಗಳಲ್ಲಿರುವ ಆನೆಗಳು ಹೀಗೆ ಒಬ್ಬಂಟಿಗಳಾಗಿ ವರ್ಷಾನುಗಟ್ಟಲೆ ಹೇಗೆ ಬದುಕಲು ಸಾಧ್ಯ ಎಂಬ ಪ್ರಶ್ನೆಯೂ ಹಲವರಿಗಿದೆ. ಇಂತಹ ಪ್ರಶ್ನೆಗಳ ಜತೆಗೆ ಕೆಲವರು ಆಗುಂಬೆಯಲ್ಲಿ ಕಂಡ ಈ ಸಲಗವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾರೆ.

“ಮನುಷ್ಯರು ಸಂಘಜೀವಿಗಳು. ಆದರೂ ಕೆಲವೊಮ್ಮೆ ಒಬ್ಬಂಟಿಯಾಗಿ ಕೆಲವರು ಬದುಕಿ ಬಿಡುತ್ತಾರೆ. ಅದೇ ರೀತಿ ಆನೆಗಳೂ ಕೂಡ. ಅಲ್ಲಿಯೂ ಕೆಲವೊಮ್ಮೆ ಒಂಟಿ ಸಲಗ ಅಥವಾ ಹೆಣ್ಣಾನೆಯೊಂದು ಒಬ್ಬಂಟಿಯಾಗಿ ಬದುಕುವ ಉದಾಹರಣೆಗಳಿವೆ,’’ ಎನ್ನುತ್ತಾರೆ ಪ್ರಜ್ಞಾ ಚೌಟ.

ದುಬಾರೆಯ ಕಾಡಿನೊಳಗೆ ಕಳೆದ ಒಂದೂವರೆ ದಶಕದಿಂದ ಆನೆಗಳ ಕುರಿತು ಅಧ್ಯಯನ ನಡೆಸುತ್ತಿರುವ ಪ್ರಜ್ಞಾ ‘ಆನೆಮನೆ’ ಎಂಬ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದಾರೆ. ‘ಸಮಾಚಾರ’ದ ಜತೆ ಮಾತನಾಡಿದ ಅವರು, “ಆಗುಂಬೆಯಲ್ಲಿ ಒಂಟಿ ಸಲಗ ಓಡಾಡುತ್ತಿದೆ ಎಂಬ ಮಾಹಿತಿ ಹಿಂದೆಯೇ ಸಿಕ್ಕಿತ್ತು. ಒಂದೇ ಆನೆ ಓಡಾಡಿಕೊಂಡಿದೆ ಎಂಬುದರಲ್ಲಿ ಅಚ್ಚರಿ ಪಡುವಂತದ್ದು ಏನೂ ಅಲ್ಲ. ಆದರೆ, ಅದರಿಂದ ಸಮಸ್ಯೆಯಾಗುತ್ತಿದೆ ಎಂದರೆ ಸ್ಥಳಾಂತರಿಸಬಹುದು. ಮೊದಲು ಅದು ಬಂದಿದ್ದು ಎಲ್ಲಿಂದ ಎಂಬುದನ್ನು ಕಂಡುಕೊಳ್ಳಬೇಕು,’’ ಎಂದರು.

ಆಗುಂಬೆ ಕಾಡಿನಲ್ಲಿ ಕಾಳಿಂಗ ಸರ್ಪಗಳ ಕುರಿತು ಅಧ್ಯಯನ ನಡೆಸಿದ ಉರಗ ತಜ್ಞ, ಕಾಳಿಂಗ ಫೌಂಡೇಶನ್‌ನ ಗೌರಿ ಶಂಕರ್ ಕೂಡ ಹೆಚ್ಚು ಕಡಿಮೆ ಇದೇ ಮಾತುಗಳನ್ನು ಆಡುತ್ತಾರೆ.

“ನಾನು ನೋಡಿದ ಹಾಗೆ ಈ ಭಾಗದ ಜನ ಪ್ರಾಣಿಗಳ ಜತೆ ಸಹಜೀವನಕ್ಕೆ ಹೊಂದಿಕೊಂಡಿದ್ದಾರೆ. ಹಾವುಗಳ ಜತೆ, ನಾನಾ ಪ್ರಾಣಿ ಪಕ್ಷಿಗಳ ಜತೆಯಲ್ಲಿ ಅವರು ಬದುಕುವುದು ರೂಢಿಸಿಕೊಂಡಿದ್ದಾರೆ. ಆದರೆ ಆನೆ ಅವರಿಗೆ ಹೊಸತು. ಅದೇ ಬಂಡೀಪುರದಂತಹ ಪ್ರದೇಶಗಳಲ್ಲಿ ಜನ ವಾಸನೆಯಿಂದಲೇ ಆನೆಗಳ ಇರುವಿಕೆಯನ್ನು ಗುರುತಿಸುತ್ತಾರೆ. ಮಲೆನಾಡಿಗರಿಗೆ ಆನೆ ಹೊಸ ಪ್ರಪಂಚ. ಅದನ್ನು ಎದುರುಗೊಳ್ಳುವುದು ಅವರಿಗೆ ಕಷ್ಟವಾಗಿರಬಹುದು,’’ ಎನ್ನುತ್ತಾರೆ ಗೌರಿ.

ಅರಣ್ಯ ಇಲಾಖೆ ಏನನ್ನುತ್ತೆ?:

ಆಗುಂಬೆಯ ಕಾಡಿನಲ್ಲಿ ಜಂಟಿ ಸಲಗದ ಇರುವಿಕೆಯನ್ನು ಶಿವಮೊಗ್ಗದ ಅರಣ್ಯ ಇಲಾಖೆ ಪರೋಕ್ಷವಾಗಿ ಬೆಂಬಲಿಸುತ್ತಿದೆಯೇ ಎಂಬ ಅನುಮಾನ ಮೂಡುತ್ತದೆ. ಅದಕ್ಕೆ ಕೆಳಗಿನ ಪ್ರತಿಕ್ರಿಯೆ ಕಾರಣ.

‘ಸಮಾಚಾರ’ದ ಜತೆ ಮಾತನಾಡಿದ ಜಿಲ್ಲೆಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು, “ಒಂಟಿ ಸಲಗ ಇದೆ. ಆದರೆ ಅದರಿಂದ ಯಾರಿಗೂ ಈವರೆಗೆ ಸಮಸ್ಯೆಯಾಗಿಲ್ಲ. ಬೆಳೆ ನಾಶ ಆದರೆ ಪರಿಹಾರ ಕೊಡುತ್ತಿದ್ದೇವೆ. ಒಂದು ಬಾಳೆ ಗಿಡ ಹೋದರೆ 160 ರೂಪಾಯಿ, ಅಡಿಗೆ ಸಸಿಗೆ 400 ರೂಪಾಯಿ ಕೊಟ್ಟಿದ್ದೇವೆ. ಭತ್ತದ ಗದ್ದೆಗಾದರೆ ಪ್ರತ್ಯೇಕ ಪರಿಹಾರ ಇದೆ. ಇಷ್ಟಕ್ಕೂ ಒಂಟಿ ಆನೆ ಇದ್ದರೆ ಕಾಡಿಗೆ ಒಳ್ಳೆಯದೇ ಅಲ್ಲವೇ?,’’ ಎಂದವರು ಪ್ರಶ್ನಿಸಿದರು.

ಅವರ ಪ್ರಕಾರ, ಒಂಟಿ ಸಲಗದ ಇರುವಿಕೆಯೇ ಅರಣ್ಯ ಕಳ್ಳರಿಗೆ ಭಯ ಮೂಡಿಸುತ್ತಂತೆ. ಇದರಿಂದ ಕಳ್ಳ ಕಾರರ ಕಾಟ ಇಲ್ಲದೆ ಕಾಡು ಸುರಕ್ಷಿತವಾಗುತ್ತದೆ ಎಂಬ ಲಾಜಿಕ್ ಅವರದ್ದು. ಇದು ಸತ್ಯವೇ ಆಗಿದ್ದರೆ, ಅರಣ್ಯ ಇಲಾಖೆಯನ್ನು ಸಾಕುವ ಬದಲು ಆನೆಗಳನ್ನೇ ಸಾಕಬಹುದಲ್ಲ? ಎಂಬ ಪ್ರಶ್ನೆಗೆ ಅವರ ಬಳಿ ಉತ್ತರ ಇರಲಿಲ್ಲ.

“ಜನ ಪ್ರತಿಭಟನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂತು. ಆದರೆ ಈ ಬಾರಿ ಶಾಸಕರು (ಆರಗ ಜ್ಞಾನೇಂದ್ರ) ಅದಕ್ಕೆ ಬೆಂಬಲ ನೀಡುತ್ತಿಲ್ಲ. ಡಿಸಿಎಫ್‌ ಕೂಡ ಹೊಸಬರು. ಅವರಿಗೆ ಈ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಹಿಂದೆ, ಆನೆ ಹಿಡಿಯಬೇಕು ಎಂದು ಹೊರಟೆವು. ಆದರೆ ವಿಪರೀತ ಮಳೆ ಕಾರಣಕ್ಕೆ ಆಗಿರಲಿಲ್ಲ. ಈ ಬಾರಿ ಮೇಲಾಧಿಕಾರಿಗಳು ಹಾಗೂ ಇಲಾಖೆ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ನೋಡಬೇಕು,’’ ಎಂದರು ಅಧಿಕಾರಿ.

ಒಂದು ಕಡೆ ಮಾನವ ಮತ್ತು ಪ್ರಾಣಿ ಪ್ರಪಂಚದ ನಡುವೆ ಜಾರಿಯಲ್ಲಿರುವ ಸಂಘರ್ಷದಂತೆ ಕಾಣಿಸುವ ಈ ವೃತ್ತಾಂತ ಕೇವಲ ಆನೆ ಕಾಟಕ್ಕೆ ಮಾತ್ರವೇ ಸೀಮಿತವಾಗಿಲ್ಲ.

“ಈ ಬಾರಿ ಮಳೆಯಿಂದಾಗಿ ಅಡಿಕೆ ತೋಟಕ್ಕೆ ಕೊಳೆ ರೋಗ ಬಂದಿದೆ. ಫಸಲು ಕೈಕೊಟ್ಟಿದೆ. ರೈತರ ಸಂಕಷ್ಟದಲ್ಲಿದ್ದಾರೆ. ಇದರ ನಡುವೆ ಆನೆ ಸಮಸ್ಯೆಯ ಬಗ್ಗೆ ಅರಣ್ಯ ಇಲಾಖೆಯ ತಾತ್ಸಾರ ಸಿಟ್ಟಿಗೆಬ್ಬಿಸಿದೆ,’’ ಎನ್ನುತ್ತಾರೆ ಕೃಷ್ಣಪ್ಪ.

ಇದರ ಜತೆಗೆ ಕಾಡಾನೆಯ ದಾಳಿ ನಡೆದಿದೆ ಎಂದು ಅರ್ಧ ರಾತ್ರಿಯಲ್ಲಿ ತೋಟ ನೋಡಲು ಹೋದ ಕೃಷಿಕರೊಬ್ಬರು ಇತ್ತೀಚೆಗೆ ಇಲ್ಲಿ ಸಾವನ್ನಪ್ಪಿದ್ದಾರೆ. ಒಂದು ಕಡೆ ಕೃಷಿ ಬಿಕ್ಕಟ್ಟುಗಳು, ಮತ್ತೊಂದು ಕಡೆ ಕಷ್ಟಪಟ್ಟು ಬೆಳೆಸುವ ತೋಟದ ನಾಶ, ಕೃಷಿಕರೊಬ್ಬರ ಸಾವು, ಹೀಗೆ ನಾನಾ ಕಾರಣಗಳು ಒಂದಾಗಿ, ಮಳೆಯ ನಡುವೆಯೂ ಬೆಂಕಿ ಹಾಕಿ ಒಂಟಿ ಸಲಗದ ವಿರುದ್ಧದ ಪ್ರತಿಭಟನೆಗೆ ಕಾರಣವಾಗಿದೆ.

ಹೀಗಾಗಿಯೇ ಇದು ಕೇವಲ ಒಂದು ಕಾಡಾನೆ ವಿರುದ್ಧ ನಡೆದ ಪ್ರತಿಭಟನೆ ಅಲ್ಲ; ಬದಲಿಗೆ ಮಳೆಕಾಡಿನ ಜನರಲ್ಲಿ ಮಡವುಗಟ್ಟಿದ ಆಕ್ರೋಶದ ಸ್ಫೋಟ ಅಷ್ಟೆ. ಈ ಬಗ್ಗೆ ಪ್ರತಿಕ್ರಿಯೆಗೆ ಅರಣ್ಯ ಸಚಿವ ಆರ್. ಶಂಕರ್‌ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತಾದರೂ ಕರೆಯನ್ನು ಸ್ವೀಕರಿಸಲಿಲ್ಲ.