samachara
www.samachara.com
‘ಮತ್ತೊಂದು ಕೊಲೆ, ಮತ್ತೊಮ್ಮೆ ಕಣ್ಣೀರು’: ಮಾಲೂರು ಬಾಲಕಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ...
COVER STORY

‘ಮತ್ತೊಂದು ಕೊಲೆ, ಮತ್ತೊಮ್ಮೆ ಕಣ್ಣೀರು’: ಮಾಲೂರು ಬಾಲಕಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ...

ತನ್ನ ಕೆಲಹೊತ್ತಿನ ಕೆಟ್ಟ ಕಾಮನೆಯಿಂದಾಗಿ ಪುಟ್ಟ ಹುಡುಗಿಯ ಜೀವವನ್ನೇ ತೆಗದು ಕಾಲ್ಕಿತ್ತ ರಂಜಿತ್‌ ಈಗ ಪೊಲೀಸರರ ಅಥಿತಿ. ಅವನೂ ಕೂಡ 25ರ ಪ್ರಾಯದವನೇ. ಆಕೆಯ ಬದುಕಿಗೆ ಬೀಕರ ಕೊನೆ ಹಾಡುವುದರ ಜತೆಗೆ ತನ್ನ ಜೀವನವನ್ನೂ ನಾಶಪಡಿಸಿಕೊಂಡ.

ಆಕೆ ಹತ್ತನೇ ತರಗತಿಯ ವಿದ್ಯಾರ್ಥಿನಿ. ವಯಸ್ಸಿನ್ನೂ 15. ಶಾಲೆ, ಮನೆ, ಆಟ ಪಾಠಗಳಷ್ಟೇ ಅವಳ ಬದುಕಾಗಿತ್ತು. ಇದನ್ನು ಹೊರತುಪಡಿಸಿದ ಹೊರಜಗತ್ತನ್ನು ಆಕೆ ಕಂಡಿರಲಿಲ್ಲ. ಕಾಣಲೂ ಕೂಡ ಸಾಧ್ಯವಾಗಲಿಲ್ಲ.

ಮಾಲೂರಿನ ಬಿಜಿಎಸ್‌ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಬುಧವಾರ ಸಂಜೆ ಪಟ್ಟಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿ, ಅನುಭವಗಳನ್ನೆಲ್ಲಾ ತನ್ನ ಗೆಳತಿಯೊಂದಿಗೆ ಮೆಲುಕು ಹಾಕುತ್ತ ಮನೆಯತ್ತ ಹೊರಟಿದ್ದಳು. ಆಕೆಯ ಮನೆಯಿದ್ದದ್ದು ಪಟ್ಟಣದ ಇಂದಿರಾನಗರದಲ್ಲಿ. ಇಂದಿರಾನಗರವನ್ನು ತಲುಪಲು ಆಕೆ ರೈಲ್ವೇ ಸೇತುವೆಯ ಬದಿಯಲ್ಲಿದ್ದ ಕಾಲುದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಳು. ಈ ಕಾಲುದಾರಿ ದಟ್ಟ ಜನಸಂದಣಿಯಿಂದ ಕೂಗಳತೆಯಲ್ಲಿತ್ತು. ಆದಾಗ್ಯೂ ಕೂಡ ಆಕೆ ತೆಗೆದುಕೊಂಡ ಕಾಲುದಾರಿಯ ಮೂಲಕ ಸಾಗುವ ನಿರ್ಧಾರ ಆಕೆಯ ಬದುಕಿನ ಕೊನೆಯ ನಿರ್ಧಾರವಾಯಿತು.

ಆಕೆಯ ಮನೆಯ ಪಕ್ಕದಲ್ಲೇ ಕಟ್ಟಡವೊಂದು ನಿರ್ಮಾಣವಾಗುತ್ತಿತ್ತು. ಆ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿಯಾಗಿ ದುಡಿಯುತ್ತಿದ್ದ 25ರ ಪ್ರಾಯದ ರಂಜಿತ್‌ ರೈಲ್ವೇ ಸೇತುವೆಯ ಪಕ್ಕದ ಕಾಲುದಾರಿಯಲ್ಲಿ ಮನೆಯ ಹಾದಿ ಹಿಡಿದಿದ್ದ ಆಕೆಗೆ ಎದುರಾಗಿದ್ದ. ಆಕೆ ಸಂಧರ್ಭವನ್ನು ಗ್ರಹಿಸುವ ಹೊತ್ತಿಗೆ ಅವಳ ಮೇಲೆರಗಿದ್ದ. ಭಯಭೀತಗೊಂಡ ಪಕ್ಕದಲ್ಲಿದ್ದ ಗೆಳತಿ, ಅಲ್ಲಿಂದ ಓಡಿ ಆಕೆಯ ಮನೆಯವರಿಗೆ ವಿಷಯ ಮುಟ್ಟಿಸಿದ್ದಳು. ಆಕೆಯ ಪೋಷಕರು ಗಾಬರಿಯಿಂದ ಕಾಲುದಾರಿಗೆ ಬರುವ ವೇಳೆಗೆ ಮಗಳು ಪೊದೆಯೊಂದರ ಪಕ್ಕ ಹೆಣವಾಗಿ ಬಿದ್ದಿದ್ದಳು.

ಪೊಲೀಸರ ಅಥಿತಿಯಾಗಿರುವ 25ರ ಪ್ರಾಯದ ರಂಜಿತ್‌.
ಪೊಲೀಸರ ಅಥಿತಿಯಾಗಿರುವ 25ರ ಪ್ರಾಯದ ರಂಜಿತ್‌.

ಅದಾಗತಾನೇ ತನ್ನ ಬದುಕಿನ ಬಗ್ಗೆ ಕನಸುಗಳನ್ನು ಕಟ್ಟಿಕೊಳ್ಳಲು ಆರಂಭಿಸಿದ್ದ 15ರ ಪ್ರಾಯದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲು ಪ್ರಯತ್ನಿಸಿದ್ದ ರಂಜಿತ್‌, ಆಕೆ ಪ್ರತಿರೋಧ ಒಡ್ಡಿದ ಕಾರಣಕ್ಕಾಗಿ ಆಕೆಯ ತಲೆಗೆ ಕಲ್ಲಿನಿಂದ ಹೊಡೆದು ಕೊಂದು, ಅಲ್ಲಿಂದ ಪರಾರಿಯಾಗಿದ್ದ. ರಂಜಿತ್‌ ಈಗ ಪೊಲೀಸರರ ಅಥಿತಿ. ಅವನೂ ಕೂಡ 25ರ ಪ್ರಾಯದವನೇ. ಆಕೆಯ ಬದುಕಿಗೆ ಬೀಕರ ಕೊನೆ ಹಾಡುವುದರ ಜತೆಗೆ ತನ್ನ ಜೀವನವನ್ನೂ ನಾಶಪಡಿಸಿಕೊಂಡ.

ಚಿಕ್ಕ ಪಟ್ಟಣ ಮಾಲೂರನ್ನು ಈ ಘಟನೆ ಎಲ್ಲಿಲ್ಲದಂತೆ ಕಾಡಿದೆ. ದುರ್ಘಟನೆ ನಡೆದ ಮುರುದಿನವೇ ಮಾಲೂರಿನ ಜನರು ಪಟ್ಟಣದಲ್ಲಿ ಬಂದ್‌ ಆಚರಿಸಿದ್ದಾರೆ. ಬಹುಪಾಲು ಜನ ಯಾರ ಒತ್ತಾಯವೂ ಇಲ್ಲದೇ ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಮುಗ್ಧ ಬಾಲೆಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. 6,000ಕ್ಕೂ ಹೆಚ್ಚು ಜನ ಅಣಿನೆರೆದು ಬಾಲಕಿಯ ಪರವಾಗಿ ಘೋಷಣೆ ಹಾಕಿದ್ದಾರೆ. ಆರೋಪಿಗೆ ತಕ್ಕ ಶಿಕ್ಷೆ ನೀಡುವಂತೆ ಒತ್ತಾಯಿಸಿದ್ದಾರೆ. ಬಾಲಕಿಯ ಅನ್ಯಾಯದ ಸಾವಿಗೆ ಕಣ್ಣೀರು ಮಿಡಿದಿದ್ದಾರೆ.

ಇದು ರಸ್ತೆಯಲ್ಲಿ ಬೀದಿ ಕಾಮುಕನೊಬ್ಬನಿಂದ ನಡೆದ ಕ್ರೂರ ಘಟನೆ. ಇಂತಹದ್ದೇ ಘಟನೆಗಳು ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ಸದ್ದು ಮಾಡಿದ್ದವು. ಕಾಶ್ಮೀರದ ಕತುವಾದ 8 ವರ್ಷದ ಪುಟ್ಟ ಬಾಲಕಿ ಆಸೀಫಾಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಇಡೀ ದೇಶ ಕಣ್ಣೀರು ಹಾಕಿತ್ತು. ಉತ್ತರ ಪ್ರದೇಶದ ಉನ್ನಾವೋನಲ್ಲಿ, ಮತ್ತು ಸುತ್ತಮುತ್ತ ನಡೆದ ಹಲವಾರು ಪ್ರಕರಣಗಳು ಜನತೆಯ ನಿದ್ದೆ ಕೆಡಿಸಿದ್ದವು. ದೆಹಲಿಯಲ್ಲಿ 8 ತಿಂಗಳ ಹಸುಗೂಸಿನ ಮೇಲೆ ಸೋದರ ಮಾವನೇ ಅತ್ಯಾಚಾರವೆಸಗಿದ ಘಟನೆ ಜನರ ಮನಕಲಕಿತ್ತು. ಬಿಹಾರದಲ್ಲಿ 10ನೇ ತರಗತಿ ವಿದ್ಯಾರ್ಥಿನಿಯೋರ್ವಳ ಮೇಲೆ ಶಾಲಾ ಶಿಕ್ಷಕರು ಮತ್ತು ಸಹಪಾಠಿಗಳು ಸೇರಿ ಒಟ್ಟು 18 ಮಂದಿ ಸತತ 7 ತಿಂಗಳುಗಳಿಂದ ಲೈಂಗಿಕ ದೌರ್ಜನ್ಯ ಅನುಭವಿಸಿ, ಕೊನೆಗೆ ತಾಳಲಾರದೇ ತಂದೆಯ ಜತೆ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಳು.

Also read: ಕ್ಷಮಿಸಿ, ಈ ವರದಿಗೆ ತಲೆಬರಹ ಕೊಡಲು ನಮ್ಮಿಂದ ಸಾಧ್ಯವಾಗುತ್ತಿಲ್ಲ :(

ಇಂತಹ ಘಟನೆಗಳ ಬೆನ್ನು ಹತ್ತಿ, ಕಾಮುಕರ ಕುರುಡು ತೃಷೆಗೆ ಬಲಿಯಾಗುತ್ತಿರುವ ಮಕ್ಕಳೆಷ್ಟು ಎಂದು ಹುಡುಕುತ್ತಾ ಸಾಗಿದರೆ ದೊರೆಯುವ ಅಂಕಿ ಅಂಶಗಳು ಭಯವನ್ನು ಹುಟ್ಟಿಸುತ್ತವೆ. ಮಕ್ಕಳ ಮೇಲೆ ಮನೆಯಿಂದ ಹೊರಗೆ ನಡೆಯುವ ದೌರ್ಜನ್ಯಗಳಿಗಿಂತ ಮನೆಯೊಳಗೆಯೇ ನಡೆಯುವ ದೌರ್ಜನ್ಯಗಳ ಸಂಖ್ಯೆಯೇ ಹೆಚ್ಚು ಎನ್ನುವ ಮಾಹಿತಿಗಳು ಚಿಂತನೆ ಹಚ್ಚುತ್ತವೆ. ಅದಕ್ಕಿಂತ ಹೆಚ್ಚಾಗಿ ಮಕ್ಕಳು ಹೆಚ್ಚಾಗಿ ದೌರ್ಜನ್ಯಕ್ಕೆ ಒಳಗಾಗುತ್ತಿರುವುದು ಪೋಷಕರಿಂದಲೇ ಎಂಬ ಅಂಶ ನಮ್ಮನ್ನು ನಾವು ಮರುಪರಿಶೀಲಿಸಿಕೊಳ್ಳಲು ಪ್ರೇರೇಪಿಸುತ್ತವೆ.

Also read: ‘ಶೇಮ್ ಶೇಮ್’: ವಿಶ್ವದಲ್ಲಿಯೇ ಭಾರತ ನಂ. 1; ಆದರೆ ಹೆಮ್ಮೆ ಪಡೋಕೆ ಇಲ್ಲಿ ಕಾರಣಗಳಿಲ್ಲ!

ಅಂಕಿ ಅಂಶಗಳು ಹೇಳುವ ಪ್ರಕಾರ, ಅತಿ ಹೆಚ್ಚು ಶೋಷಣೆಗೆ ಒಳಗಾಗುವ ಮಕ್ಕಳು 5ರಿಂದ 11 ವರ್ಷ ಒಳಗಿನವರು. ಯುನಿಸಿಫ್‌ನ ಮಾಹಿತಿ ಹೇಳುವಂತೆ ದೇಶದ ಶೇ.69ರಷ್ಟು ಮಕ್ಕಳು ದೌರ್ಜನ್ಯಕ್ಕೆ ಒಳಗಾಗಿದ್ದಾರೆ. ಹೀಗೆ ದೌರ್ಜನ್ಯಕ್ಕೆ ಒಳಗಾದವರ ಪೈಕಿ ಬಾಲಕ ಮತ್ತು ಬಾಲಕಿಯರ ಸಂಖ್ಯೆ ಸಮನಾಗಿಯೇ ಇದೆ. ಶೇ.54.68ರಷ್ಟು ಬಾಲಕರು ಕುಟುಂಬದವರಿಂದಲೇ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. 3ರಲ್ಲಿ 2 ಮಕ್ಕಳ ಮೇಲೆ ದೌರ್ಜನ್ಯ ನಡೆಯುವುದು ಸಾಮಾನ್ಯ ಸಂಗತಿ ಎಂಬಂತಾಗಿದೆ.

ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗುವ ಮಕ್ಕಳ ಪೈಕಿ ಶೇ.88.6ರಷ್ಟು ಮಕ್ಕಳು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ಇದರಲ್ಲಿ ಶೇ.83ರಷ್ಟು ಮಕ್ಕಳು ಪೋಷಕರಿಂದಲೇ ಕಿರುಕುಳ ಅನುಭವಿಸುತ್ತಿದ್ದಾರೆ. ಶೇ.48.4ರಷ್ಟು ಬಾಲಕಿಯರು ತಾವು ಹುಡುಗರಾಗಿ ಹುಟ್ಟಬೇಕಿತ್ತು ಎಂಬ ಭಾವನೆಯನ್ನು ಹೊಂದಿದ್ದಾರೆ. ಬಹುಪಾಲು ಮಕ್ಕಳಿಗೆ ತಮ್ಮ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಹೊರಗೆಡವುವುದಕ್ಕೆ ಸಾಧ್ಯವಾಗುತ್ತಿಲ್ಲ.

ಸರಕಾರಿ ಅಂಕಿ ಅಂಶಗಳು ಹೇಳುವಂತೆ ದೇಶದಲ್ಲಿ ಪ್ರತಿ 1 ಗಂಟೆಯ ಅವಧಿಯೊಳಗೆ 4 ಜನ ಮಕ್ಕಳು ದೌರ್ಜನ್ಯಕ್ಕೆ ತುತ್ತಾಗುತ್ತಿದ್ದಾರೆ. ಎನ್‌ಸಿಆರ್‌ಬಿ ನೀಡುವ ಮಾಹಿತಿ ಪ್ರಕಾರ 2016ರಲ್ಲಿ ದೇಶಾದ್ಯಂತ 1,06,958 ಮಕ್ಕಳ ಮೇಲಿನ ದೌರ್ಜನ್ಯದ ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 36,022 ಪ್ರಕರಣಗಳು ಪೋಕ್ಸೋ ಕಾಯಿದೆಯ ಅಡಿಯಲ್ಲಿ ದಾಖಲಾಗಿದ್ದವು.

2007ರಲ್ಲಿ ಭಾರತದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಡೆಸಿದ ಸಮೀಕ್ಷೆ, ದೇಶದಲ್ಲಿನ ಶೇ.53ರಷ್ಟು ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದಿತ್ತು. ಈ ವರದಿಯ ಪ್ರಕಾರ, ದೇಶದಲ್ಲಿನ 18ರ ವಯಸ್ಸಿನೊಳಗಿನ 15 ಕೋಟಿ ಬಾಲಕಿಯರು ಮತ್ತು 7.3 ಕೋಟಿ ಬಾಲಕರು ಸಂಭೋಗ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರು.

ದಾಖಲಾಗುತ್ತಿರುವ ಮಕ್ಕಳ ದೌರ್ಜನ್ಯದ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರುತ್ತಿವೆ. 2014ರಲ್ಲಿ ಪ್ರಕರಣಗಳು 83,423 ದಾಖಲಾಗಿದ್ದರೆ, 2015ರಲ್ಲಿ ಈ ಪ್ರಕರಣಗಳ ಸಂಖ್ಯೆ 94,172ಕ್ಕೆ ಏರಿಕೆಯಾಗಿತ್ತು. 2016ರಲ್ಲಿ 1,06,958 ಪ್ರಕರಣಗಳು ದಾಖಲಾಗಿದ್ದವು. ಬಹುಪಾಲು ಸಮಯದಲ್ಲಿ ಮಕ್ಕಳಿಗೆ ಪರಿಚಯವಿರುವವರು, ಪೋಷಕರು ಅಥವಾ ಶಾಲಾ ಶಿಕ್ಷಕರಿಂದಲೇ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ.

ಇದೊಂದು ಹೊಸಜಗತ್ತಿಗೆ ಕಾಣಿಸುವ ದೌರ್ಜನ್ಯವಾದರೆ ಹೆಚ್ಚುತ್ತಿರುವ ತಂತ್ರಜ್ಞಾನವೂ ಕೂಡ ಮಕ್ಕಳ ಮೇಲಿನ ದೌರ್ಜನ್ಯದ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಹೆಚ್ಚು ಹೆಚ್ಚು ತಂತ್ರಜ್ಞಾನಕ್ಕೆ ತೆರೆದುಕೊಂಡಿರುವ ರಾಷ್ಟ್ರಗಳಲ್ಲಿ ಮಕ್ಕಳ ಮೇಲಿನ ದೌರ್ಜನ್ಯವೂ ಹೆಚ್ಚುತ್ತಿವೆ. ಮಕ್ಕಳ ಗುಪ್ತಾಂಗಗಳನ್ನು ವೀಡಿಯೋ ಮಾಡುವುದು ಅಥವಾ ಒತ್ತಾಯದಿಂದ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿ, ಅದರ ವೀಡಿಯೋವನ್ನು ಜಾಲತಾಣಗಳಲ್ಲಿ ಹರಿಬಿಡುವ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತ ಸರಕಾರ ನೀಡುವ ಮಾಹಿತಿ ಪ್ರಕಾರ, ದೇಶದಲ್ಲಿ ತಂತ್ರಜ್ಞಾನದ ಹಿನ್ನಲೆಯಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತಾಗಿ ನಿರ್ದಿಷ್ಟ ಅಂಕಿ ಅಂಶಗಳಿಲ್ಲ. ಭಯ ಹಾಗೂ ಅವಮಾನವಾಗುವ ಕಾರಣದಿಂದ ಈ ಪ್ರಕರಣಗಳು ಬೆಳಕಿಗೆ ಬರುವುದಿಲ್ಲ. ಆದ್ಯಾಗೂ ಕೂಡ 2015ರಲ್ಲಿ ಇಂತಹ 96 ಪ್ರಕರಣಗಳು ವರದಿಯಾಗಿದ್ದವು.

ಮಕ್ಕಳ ಹಕ್ಕುಗಳ ಕುರಿತು ಕಾರ್ಯ ನಿರ್ವಹಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಶಶಿಕಾಂತ್ ಹೇಳುವಂತೆ ಎಷ್ಟೋ ಜನ ಪೋಷಕರಿಗೆ ಮಕ್ಕಳ ಹಕ್ಕುಗಳ ಕುರಿತಾದ ಕನಿಷ್ಟ ಜ್ಞಾನವಿಲ್ಲ. ಇದರಿಂದಾಗಿಯೇ ದೌರ್ಜನ್ಯಗಳು ನಡೆಯುತ್ತಿರುವ ಸಾಧ್ಯತೆಗಳು ದಟ್ಟವಾಗಿವೆ.

“ಪೋಷಕರಿಗೆ ತಮ್ಮ ಮಕ್ಕಳಿಗೆ ಹೊಡೆಯುವುದು ತಪ್ಪು ಎಂಬ ಕಲ್ಪನೆಯೂ ಕೂಡ ಇಲ್ಲ. ಇಂತಹ ಚಿಕ್ಕ ಚಿಕ್ಕ ವಿಷಯಗಳೇ ತಿಳಿಯದ ತಂದೆ ತಾಯಿಗಳಿಗೆ ಪೋಕ್ಸೋಗಳಂತಹ ದೊಡ್ಡ ಕಾಯ್ದೆಗಳ ಅರಿವು ಇರುವುದಕ್ಕೆ ಸಾಧ್ಯವೇ ಇಲ್ಲ. ಈ ಕನಿಷ್ಟ ಮಟ್ಟದ ಜ್ಞಾನವೂ ಇಲ್ಲದ ಕಾರಣ ಮಕ್ಕಳ ಮೇಲಿನ ದೌರ್ಜನ್ಯಗಳು ಸಂಭವಿಸುತ್ತಲೇ ಇವೆ. ಈ ಕುರಿತು ಅರಿವು ಮೂಡಿಸಬೇಕಿರುವುದು ನಮ್ಮ ಮುಂದಿನ ದಾರಿ,” ಎನ್ನುವುದು ಅವರ ಮಾತು.

‘ಸಮಾಚಾರ’ದ ಜತೆ ಮಾತನಾಡಿದ ಪೊಲೀಸ್‌ ಅಧಿಕಾರಿಯೋರ್ವರು, ಮಕ್ಕಳ ಮೇಲಿನ ದೌರ್ಜನ್ಯಗಳಿಗೆ ಹೊಸ ತರಹದ್ದೇ ಆಯಾಮ ಒದಗಿಸಿದರು . ಬಹುಪಾಲು ಸಂಧರ್ಭಗಳಲ್ಲಿ ದೌರ್ಜನ್ಯ ನಡೆಸಿದವರ ವಯಸ್ಸು ಮತ್ತು ಮಗುವಿನ ವಯಸ್ಸಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಇಂತಹ ಘಟನೆಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದರ ಬಗ್ಗೆಯೇ ಗೊಂದಲವಿದೆ ಎಂದರು.

“ಇತ್ತೀಚಿಗೆ ವರದಿಯಾದ ಮಗುವಿನ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ ದೌರ್ಜನ್ಯಕ್ಕೆ ಒಳಗಾದ ಬಾಲಕಿಗೆ 12ರ ಪ್ರಾಯ. ಆದರೆ ದೌರ್ಜನ್ಯ ಎಸಗಿದ ವ್ಯಕ್ತಿ 60ರ ಪ್ರಾಯದ ವೃದ್ಧ. ಬಹುಪಾಲು ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅರೋಪಿಗಳ ವಯಸ್ಸಿಗೂ, ಸಂತ್ರಸ್ಥರ ವಯಸ್ಸಿಗೂ ಅಗಾಧವಾದ ಅಂತರವಿರುತ್ತದೆ. ಈ ವಿದ್ಯಮಾನಗಳು ಸಾಮಾಜಿಕ ಸಂರಚನೆಯಲ್ಲಿಯೇ ದೋಷವಿರುವಂತೆ ಸೂಚಿಸುತ್ತವೆ. ಅಂತರ್ಜಾಲದಲ್ಲಿ ದೊರೆಯುವ ನೀಲಿಚಿತ್ರಗಳೂ ಕೂಡ ಮಕ್ಕಳ ಮೇಲೆ ದೌರ್ಜನ್ಯಕ್ಕೆ ಮುಂದಾಗಲು ಕಾರಣವಿರಬಹುದು,” ಎನ್ನುವ ಅಭಿಪ್ರಾಯ ಪೊಲೀಸ್‌ ಅಧಿಕಾರಿಯದ್ದು.

ಮಕ್ಕಳು ಮಹಿಳೆಯರಿಗಿಂತ ದುರ್ಬಲರು ಮತ್ತು ಭಯವನ್ನು ಹೊಂದಿರುವವರು ಎನ್ನುವ ಕಾರಣವೇ ದೌರ್ಜನ್ಯ ನಡೆಸಲು ದಾರಿಯಾಗಿ ಕಂಡಿರುವ ಸಾಧ್ಯತೆಗಳೂ ಕೂಡ ಹೆಚ್ಚಾಗಿವೆ. ಮಕ್ಕಳಿಗೆ ಬಲ ತುಂಬಲು ಹಲವಾರು ಕಾನೂನುಗಳೇನೋ ಇವೆ. ಆದರೆ ಪ್ರತಿಫಲ ಮಾತ್ರ ದೊರೆಯುತ್ತಿಲ್ಲ.

ಇವೆಲ್ಲಾ ಸಂಭವನೀಯತೆಗಳ ಜತೆಗೆ ತಡೆಗಟ್ಟುವಿಕೆಯ ಬಗ್ಗೆಯೂ ಕೂಡ ಅಗತ್ಯವಾಗಿ ಗಮನ ಹರಿಸುವ ತುರ್ತಿದೆ. ಮಕ್ಕಳ ಹಕ್ಕುಗಳ ಬಗ್ಗೆ ಪರಿಣಾಮಕಾರಿಯಾಗಿ ಹೇಗೆ ಹಿರಿಯರಿಗೆ ಅರಿವು ಮೂಡಿಸಬೇಕು, ಕಾನೂನುಗಳನ್ನು ಗಟ್ಟಿಗೊಳಿಸಬೇಕು ಅಥವಾ ಸಾಮಾಜಿಕ ಸಂರಚನೆಯನ್ನೇ ಬದಲಾಯಿಸಬೇಕು ಎನ್ನುವುದೆಲ್ಲ ಸದ್ಯ ಪ್ರಶ್ನೆಗಳಾಗಿಯೇ ಉಳಿದಿವೆ. ಶೀಘ್ರವಾಗಿ ಉತ್ತರ ಹುಡುಕಿಕೊಳ್ಳದ ಹೊರತು, ಮಾಲೂರಿನ ಬಾಲಕಿಯಂತಹ ಹಲವಾರು ಮಕ್ಕಳ ಅನ್ಯಾಯದ ಸಾವಿಗೆ ಮೂಂದೆಯೂ ಕಣ್ಣೀರಾಕಬೇಕಾಗುತ್ತದೆಯೇ ಹೊರತು ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ.