samachara
www.samachara.com
ಸ್ಥಳೀಯ ಸಂಸ್ಥೆಗಳ ಹಣಾಹಣಿ: ಚುನಾವಣಾ ಪೂರ್ವ ಮೈತ್ರಿಯಿಂದ ನಿಜಕ್ಕೂ ಲಾಭ ಯಾರಿಗೆ?
COVER STORY

ಸ್ಥಳೀಯ ಸಂಸ್ಥೆಗಳ ಹಣಾಹಣಿ: ಚುನಾವಣಾ ಪೂರ್ವ ಮೈತ್ರಿಯಿಂದ ನಿಜಕ್ಕೂ ಲಾಭ ಯಾರಿಗೆ?

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದರಿಂದ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೇ ಹೆಚ್ಚು ಲಾಭ. ಹೀಗಾಗಿಯೇ ಸದ್ಯ ಮೈತ್ರಿಗೆ ಕಾಂಗ್ರೆಸ್‌ ಹಿಂದೇಟು ಹಾಕುತ್ತಿದೆ.

ಕೊನೆಗೂ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಮುಹೂರ್ತ ನಿಗಧಿಯಾಗಿದೆ. 108 ಸ್ಥಳೀಯ ಸಂಸ್ಥಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಈ ಅಧಿಸೂಚನೆಯ ಬೆನ್ನಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಲೆಕ್ಕಾಚಾರಗಳೂ ಶುರುವಾಗಿವೆ.

ರಾಜ್ಯ ಸರಕಾರದ ಮಟ್ಟದಲ್ಲಿ ಮೈತ್ರಿಯಿಂದ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸ್ಥಳೀಯ ಮಟ್ಟದಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಇನ್ನೂ ತಮ್ಮ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಕಾಂಗ್ರೆಸ್‌ ಇನ್ನೆರೆಡು ದಿನಗಳಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಹೇಳಿದೆ. ಆದರೆ, ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿರುವ ಜೆಡಿಎಸ್‌ಗೆ ಮೈತ್ರಿ ಬಗ್ಗೆ ಹೆಚ್ಚು ಒಲವಿರುವಂತಿದೆ.

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಇನ್ನೂ ನಿರ್ಧಾರಕ್ಕೆ ಬಂದಿಲ್ಲವಾದರೂ ಮೈತ್ರಿಯಾದರೆ ಅದರಿಂದ ಜೆಡಿಎಸ್‌ಗೇ ಲಾಭ ಹೆಚ್ಚು. ಅದರೆ, ಈ ಲಾಭ ಕಾಂಗ್ರೆಸ್‌ಗಿಲ್ಲ. ಒಂದು ವೇಳೆ ಕಾಂಗ್ರೆಸ್ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ಅದು ಕೈ ಪಕ್ಷಕ್ಕೆ ಅನುಕೂಲಕ್ಕಿಂತ ಅನನುಕೂಲವೇ ಹೆಚ್ಚು ಎಂಬ ಮಾತುಗಳು ಕೇಳಿಬಂದಿವೆ.

ಚುನಾವಣೆ ನಡೆದ ಬಳಿಕ ಅಧಿಕಾರಕ್ಕಾಗಿ ಮಾಡಿಕೊಳ್ಳುವ ಹೊಂದಾಣಿಕೆಯ ಮೈತ್ರಿಗೂ, ಚುನಾವಣೆಗೂ ಮುನ್ನವೇ ಮಾಡಿಕೊಳ್ಳುವ ಮೈತ್ರಿಗೂ ಸಾಕಷ್ಟು ವ್ಯತ್ಯಾಸವಿದೆ. ಎಲ್ಲರೂ ಸ್ವತಂತ್ರವಾಗಿ ಚುನಾವಣೆ ಎದುರಿಸಿ ಸ್ಥಳೀಯ ಮಟ್ಟದ ಹೊಂದಾಣಿಕೆಗೆ ಅನುಗುಣವಾಗಿ ಅಧಿಕಾರ ಹಂಚಿಕೊಳ್ಳುವುದು ರೂಢಿ. ಸ್ಥಳೀಯ ರಾಜಕಾರಣ ಎಂಬುದು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣಕ್ಕಿಂತ ಭಿನ್ನವಾದುದು.

ಚುನಾವಣೆ ಸಂದರ್ಭದಲ್ಲಿ ಪರಸ್ಪರ ದೂಷಿಸಿಕೊಂಡ ಪಕ್ಷಗಳು ವಿಧಾನಸೌಧದಲ್ಲಿ ಒಟ್ಟಾಗಿ ಅಧಿಕಾರ ನಡೆಸುವಂತೆ ಸ್ಥಳೀಯ ಸಂಸ್ಥೆಗಳಲ್ಲೂ ಕೂಡಾ ಅಧಿಕಾರ ಹೊಂದಾಣಿಕೆಗೆ ಅನುಗುಣವಾಗಿ ಚುನಾವಣಾ ನಂತರದ ಮೈತ್ರಿ ನಡೆಯುತ್ತದೆ. ಆದರೆ, ಸ್ಥಳೀಯ ಮಟ್ಟದಲ್ಲಿ ಯಾವ ಪಕ್ಷ, ಯಾವ ಪಕ್ಷದೊಂದಿಗೆ ಕೈ ಜೋಡಿಸಿದರೂ ತಪ್ಪಲ್ಲ ಎಂಬ ರೂಢಿಯಿದೆ. ಹೀಗಾಗಿಯೇ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಜೆಡಿಎಸ್‌ ಬಿಜೆಪಿ ಜತೆಗೆ ಕೈ ಜೋಡಿಸಿದೆ. ಸ್ಥಳೀಯ ಮಟ್ಟದ ರಾಜಕಾರಣದಲ್ಲಿ ಇಂತಹ ಹೊಂದಾಣಿಕೆಗಳು ಅನಿವಾರ್ಯ.

ಚುನಾವಣೆ ನಂತರದ ಫಲಿತಾಂಶದ ಆಧಾರದ ಮೇಲೆ ಅಧಿಕಾರಕ್ಕಾಗಿ ಕೈಜೋಡಿಸುವುದು ಬೇರೆ. ಆದರೆ, ಚುನಾವಣಾ ಪೂರ್ವ ಮೈತ್ರಿಯ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಹಾಗೂ ರಾಜ್ಯಮಟ್ಟದಲ್ಲೂ ಹಲವು ಕಾಂಗ್ರೆಸ್‌ ಮುಖಂಡರಿಗೆ ಸಮ್ಮತಿ ಇಲ್ಲ. ಇದಕ್ಕೆ ಕಾರಣ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್‌ ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದೇ ಹೆಚ್ಚು ಎಂಬ ಲೆಕ್ಕಾಚಾರ.

ಈ ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಳಿಕ ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದ್ದಕ್ಕೆ ಸ್ಥಳೀಯ ಮಟ್ಟದಲ್ಲಿ ಈ ಎರಡೂ ಪಕ್ಷಗಳ ಹಲವು ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಚುನಾವಣಾ ಕಣದಲ್ಲಿ ಪರಸ್ಪರ ಆರೋಪ ಮಾಡಿಕೊಂಡು, ವಿರೋಧ ಕಟ್ಟಿಕೊಂಡು ಚುನಾವಣೆ ಗೆಲ್ಲಿಸಿಕೊಟ್ಟ ಬಳಿಕ ರಾಜ್ಯಮಟ್ಟದ ನಾಯಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಮೈತ್ರಿ ರಾಜಕೀಯ ಮಾಡಿಕೊಳ್ಳುತ್ತಿದ್ದಾರೆ, ಇಂತಹ ಮೈತ್ರಿ ತಳಮಟ್ಟದಲ್ಲಿ ಕೆಲಸ ಮಾಡಿದ ಸಾಮಾನ್ಯ ಕಾರ್ಯಕರ್ತರಿಗೆ ಅಪಮಾನ ಮಾಡಿದಂತೆ ಎಂಬ ಮಾತುಗಳು ಕೇಳಿಬಂದಿದ್ದವು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾಗಿರುವ ಈ ಸಂದರ್ಭದಲ್ಲೀ ಹೆಚ್ಚೂ ಕಡಿಮೆ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳಲು ಪಕ್ಷಗಳು ಮುಂದಾದರೆ ಟಿಕೆಟ್‌ ಹಂಚಿಕೆಯ ವಿಚಾರದಲ್ಲಿ ಹಲವರು ಬಂಡಾಯದ ಬಾವುಟ ಹಾರಿಸುವುದು ಸಾಮಾನ್ಯ. ಎರಡು ಪಕ್ಷಗಳ ಎಲ್ಲಾ ಬಂಡಾಯಗಾರರನ್ನು ಸಮಾಧಾನ ಪಡಿಸುವುದು ಅಷ್ಟು ಸುಲಭವಲ್ಲ. ಹೀಗಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಚುನಾವಣಾ ಪೂರ್ವ ಮೈತ್ರಿಗೆ ಸದ್ಯಕ್ಕೆ ಒಲ್ಲೆ ಎಂದಿವೆ.

ರಾಜ್ಯಮಟ್ಟದ ಮೈತ್ರಿಯಲ್ಲೂ ತೆರೆಮರೆಯ ಹಗ್ಗಜಗ್ಗಾಟ ಇದ್ದೇ ಇರುತ್ತದೆ. ಆದರೆ, ಸ್ಥಳೀಯ ಸಂಸ್ಥೆಗಳ ವಿಚಾರದಲ್ಲಿ ಮೈತ್ರಿ ಅಷ್ಟು ಸುಲಭವಲ್ಲ. ತಮ್ಮ ಪಕ್ಷಕ್ಕಾಗಿ ಕೆಲಸ ಮಾಡುವ ಕಾರ್ಯಕರ್ತರು ಮೈತ್ರಿ ಸಂದರ್ಭದಲ್ಲಿ ನಿರಾಸಕ್ತಿವಹಿಸಬಹುದು. ಸ್ಥಳೀಯ ಮಟ್ಟದಲ್ಲಿ ಒಂದು ಪಕ್ಷದೊಂದಿಗೆ ಗುರುತಿಸಿಕೊಂಡು, ಮತ್ತೊಂದು ಪಕ್ಷದ ಅಭ್ಯರ್ಥಿ ಪರವಾಗಿ ಕೆಲಸ ಮಾಡುವುದು ಹಲವು ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟುಮಾಡಬಹುದು. ಹೀಗಾಗಿ ಮೊದಲು ಸ್ವತಂತ್ರವಾಗಿ ಚುನಾವಣೆ ಎದುರಿಸಿ ಫಲಿತಾಂಶದ ಬಳಿಕ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಳ್ಳುವುದು ಒಳ್ಳೆಯದು ಎಂಬ ಮಾತುಗಳು ಕಾರ್ಯಕರ್ತರಲ್ಲಿವೆ.

“ಚುನಾವಣಾ ಪೂರ್ವ ಮೈತ್ರಿಯಿಂದ ಸ್ಥಳೀಯ ಮಟ್ಟದಲ್ಲಿ ಬೇರೆ ಬೇರೆ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಕಾರ್ಯಕರ್ತರಿಗೆ ಮುಜುಗರ ಉಂಟಾಗುತ್ತದೆ. ತಳಮಟ್ಟದಲ್ಲಿ ಪರಸ್ಪರ ವಿರೋಧಿಗಳಂತೆ ಕೆಲಸ ಮಾಡಿಕೊಂಡಿರುವ ಕಾರ್ಯಕರ್ತರು ಚುನಾವಣೆಯಲ್ಲಿ ಒಂದು ಪಕ್ಷಕ್ಕಾಗಿ ಕೆಲಸ ಮಾಡುವುದು ಕಷ್ಟ. ಹೀಗಾಗಿ ಚುನಾವಣಾ ಪೂರ್ವ ಮೈತ್ರಿಗಿಂತ ಫಲಿತಾಂಶದ ನಂತರ ಅಧಿಕಾರ ಹಂಚಿಕೆಗಾಗಿ ಮೈತ್ರಿ ಹೊಂದಾಣಿಕೆಗೆ ಮುಂದಾಗುವುದು ಸೂಕ್ತ” ಎಂಬುದು ತುಮಕೂರಿನ ಕಾಂಗ್ರೆಸ್‌ ಕಾರ್ಯಕರ್ತ ಭರತ್‌ ಅಭಿಪ್ರಾಯ.

“ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೊದಲೇ ಮೈತ್ರಿ ಮಾಡಿಕೊಂಡರೆ ಕಾರ್ಯಕರ್ತರಲ್ಲಿ ನಿರಾಸಕ್ತಿ ಉಂಟಾಗುತ್ತದೆ. ಹೀಗಾಗಿ ಚುನಾವಣೆಗೂ ಮುನ್ನಾ ಮೈತ್ರಿ ಮಾಡಿಕೊಳ್ಳುವುದಕ್ಕಿಂತ ಚುನಾವಣೆ ಬಳಿಕ ಪರಿಸ್ಥಿತಿ ನೋಡಿಕೊಂಡು ಮೈತ್ರಿಗೆ ಮುಂದಾಗುವುದು ಒಳ್ಳೆಯದು” ಎನ್ನುತ್ತಾರೆ ಚಾಮರಾಜನಗರದ ಜೆಡಿಎಸ್‌ ಕಾರ್ಯಕರ್ತ ಮಲ್ಲು.

ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‌ ಜತೆಗೆ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಂಡರೆ ಅದರಿಂದ ಕಾಂಗ್ರೆಸ್‌ಗೆ ನಷ್ಟವೇ ಹೆಚ್ಚು. ಮೈತ್ರಿಯಿಂದ ಜೆಡಿಎಸ್‌ಗೆ ಅನುಕೂಲವಿದೆ. ಜೆಡಿಎಸ್‌- ಕಾಂಗ್ರೆಸ್‌ ಮೈತ್ರಿಯಾದರೆ ಅದು ಕೆಲವು ಕಡೆ ಬಿಜೆಪಿಗೂ ಲಾಭ ಮಾಡಿಕೊಡಬಹುದು.
- ಎಸ್‌. ಮಹದೇವ ಪ್ರಕಾಶ್‌, ಹಿರಿಯ ರಾಜಕೀಯ ವಿಶ್ಲೇಷಕ

“ದಕ್ಷಿಣ ಕರ್ನಾಟಕದ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್‌ ಪ್ರಾಬಲ್ಯ ಹೆಚ್ಚಾಗಿದೆ. ಉತ್ತರ ಕರ್ನಾಟಕದ ನಗರ, ಪಟ್ಟಣ ಪ್ರದೇಶಗಳಲ್ಲಿ ಜೆಡಿಎಸ್‌ ಪ್ರಭಾವವೇ ಇಲ್ಲ. ಆದರೆ, ಉತ್ತರ ಕರ್ನಾಟಕದ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾಂಗ್ರೆಸ್‌ ಹಿಡಿತ ಹೊಂದಿದೆ. ಒಂದು ವೇಳೆ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ ದಕ್ಷಿಣದಲ್ಲಿ ತಾನು ನೆಲೆ ಕಳೆದುಕೊಳ್ಳುವ ಜತೆಗೆ ಉತ್ತರ ಕರ್ನಾಟಕದಲ್ಲಿ ಜೆಡಿಎಸ್‌ಗೆ ಬುನಾದಿ ಹಾಕಿಕೊಟ್ಟಂತಾಗುತ್ತದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ” ಎನ್ನುತ್ತಾರೆ ಹಿರಿಯ ರಾಜಕೀಯ ವಿಶ್ಲೇಷಕ ಎಸ್‌. ಮಹದೇವ ಪ್ರಕಾಶ್‌.

“ನಗರ, ಪಟ್ಟಣ ಪ್ರದೇಶಗಳಲ್ಲಿ ಎಲ್ಲಾ ವರ್ಗ, ಸಮುದಾಯಗಳ ಜನರೂ ಇರುತ್ತಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಾತಿಯಷ್ಟೇ ಮುಖ್ಯವಾಗುವುದಿಲ್ಲ. ರಾಜ್ಯದ ಬಹುತೇಕ ನಗರ, ಪಟ್ಟಣಗಳಲ್ಲಿ ಮುಸ್ಲಿಮರ ಸಂಖ್ಯೆ ನಿರ್ಣಾಯಕ ಎನ್ನಬಹುದಾದಷ್ಟು ಇದೆ. ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರು ಕಾಂಗ್ರೆಸ್‌ನ ಓಟ್‌ಬ್ಯಾಂಕ್‌. ಕಾಂಗ್ರೆಸ್‌ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ಈ ಓಟ್‌ಬ್ಯಾಂಕ್‌ ಅನ್ನು ಕಳೆದುಕೊಳ್ಳಬೇಕಾಗುತ್ತದೆ” ಎಂಬುದು ಅವರ ವಿಶ್ಲೇಷಣೆ.

ಕಾಂಗ್ರೆಸ್‌ ಒಂದು ವೇಳೆ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಂಡರೆ ದಕ್ಷಿಣ ಕರ್ನಾಟಕದಲ್ಲಿ ಹೆಚ್ಚಿನ ಸೀಟುಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಬೇಕಾಗುತ್ತದೆ. ಇದರಿಂದ ಕಾಂಗ್ರೆಸ್‌ನಲ್ಲಿ ಮುನ್ನೆಲೆಗೆ ಬರುತ್ತಿರುವ ಸ್ಥಳೀಯ ಮುಖಂಡರು ಟಿಕೆಟ್‌ ಕೈ ತಪ್ಪಿದ ಸಿಟ್ಟಿನಲ್ಲಿ ಸ್ವತಂತ್ರವಾಗಿ ಚುನಾವಣೆ ಸ್ಪರ್ಧಿಸಲು ಮುಂದಾಗಬಹುದು. ಇಲ್ಲವೇ ಗೆಲ್ಲುವ ಸಾಮರ್ಥ್ಯವಿರುವ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಬಿಜೆಪಿ ಸೆಳೆಯಬಹುದು. ಇಂತಹ ಕಡೆಗಳಲ್ಲಿ ಬಿಜೆಪಿ ಗೆದ್ದರೆ ಅದಕ್ಕೆ ಕಾಂಗ್ರೆಸ್‌ನ ಮೈತ್ರಿ ನಿರ್ಧಾರವೇ ಕಾರಣವಾಗಲಿದೆ. ಹೀಗಾಗಿ ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳುವ ಗೋಜಿಗೆ ಹೋಗದು.

ಮೇಲು ನೋಟಕ್ಕೆ ಮೈತ್ರಿ ಒಲ್ಲೆ ಎನ್ನುತ್ತಿರುವ ಜೆಡಿಎಸ್‌ ಕಾಂಗ್ರೆಸ್‌ ಮೈತ್ರಿ ಮಾತುಕತೆಗೆ ಮುಂದಾದರೆ ಬೇಡ ಎನ್ನುವ ಸಾಧ್ಯತೆ ಕಡಿಮೆ. ಏಕೆಂದರೆ ಕಾಂಗ್ರೆಸ್‌ ಜತೆಗಿನ ಮೈತ್ರಿಯಿಂದ ಜೆಡಿಎಸ್‌ಗೆ ನಷ್ಟಕ್ಕಿಂತ ಲಾಭವೇ ಹೆಚ್ಚು. ಚುನಾವಣಾ ಮೈತ್ರಿ ವೇಳೆ ದಕ್ಷಿಣ ಕರ್ನಾಟಕದ ಭಾಗಗಳ ಹಿಡಿತವನ್ನು ಜೆಡಿಎಸ್‌ ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂಬ ಮಾತುಗಳಿವೆ. ಅದೇ ರೀತಿ ಉತ್ತರ ಕರ್ನಾಟಕದಲ್ಲಿ ಕೆಲವು ಭಾಗಗಳಲ್ಲಿ ಕಾಂಗ್ರೆಸ್‌ ಬದಲಿಗೆ ಜೆಡಿಎಸ್‌ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆಯಾದರೆ ಉತ್ತರ ಕರ್ನಾಟಕದ ನಗರ, ಪಟ್ಟಣ ಪ್ರದೇಶಗಳಲ್ಲಿ ಜೆಡಿಎಸ್‌ ನೆಲೆ ಕಂಡುಕೊಳ್ಳಲು ಕಾಂಗ್ರೆಸ್ಸೇ ಅನುಕೂಲ ಮಾಡಿಕೊಟ್ಟಂತಾಗುತ್ತದೆ.

ಯಾವುದೇ ನಿಟ್ಟಿನಿಂದ ನೋಡಿದರೂ ಜೆಡಿಎಸ್‌ ಜತೆಗಿನ ಚುನಾವಣಾ ಪೂರ್ವ ಮೈತ್ರಿ ಕಾಂಗ್ರೆಸ್‌ಗೆ ಲಾಭದಾಯಕವಲ್ಲ. ಒಂದು ವೇಳೆ ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡರೆ ರಾಜ್ಯದ ನಗರ, ಪಟ್ಟಣ ಪ್ರದೇಶಗಳಲ್ಲಿ ಕಾಂಗ್ರೆಸ್‌ ತನ್ನ ಹಿಡಿತವನ್ನು ತಕ್ಕಮಟ್ಟಿಗೆ ಕಳೆದುಕೊಳ್ಳಲಿದೆ. ಹೀಗಾಗಿ ಜೆಡಿಎಸ್‌ ಒಂದು ಹೆಜ್ಜೆ ಮುಂದೆ ಬಂದು ಮೈತ್ರಿಯ ಮಾತನ್ನಾಡಿದರೂ ಕಾಂಗ್ರೆಸ್‌ ಅದಕ್ಕೆ ಸಮ್ಮತಿಸುವ ಸಾಧ್ಯತೆ ಬಹಳ ಕಡಿಮೆ.