ರಾಜೀವ್ ಗಾಂಧಿ ಸಮ್ಮುಖದಲ್ಲಿ ‘ಅಸ್ಸಾಂ ಒಪ್ಪಂದ 1985’ ವಿನಿಮಯ
COVER STORY

‘ಅಸ್ಸಾಂ ಒಪ್ಪಂದ 1985’: ಹೊಣೆಗೇಡಿ ಮಹಾಂತ ಮತ್ತು ಕಾಂಗ್ರೆಸ್ ತಂದಿಟ್ಟ ವಲಸಿಗರ ಫಜೀತಿ

ಅಧಿಕಾರಕ್ಕೇರಿದ ಪ್ರಫುಲ್ಲ ಕುಮಾರ್ ಮಹಾಂತ ತಾವು ನಡೆದು ಬಂದಿದ್ದ ದಾರಿಯನ್ನೇ ಮರೆತು ಬಿಟ್ಟರು. ಯಾವ ಬಾಂಗ್ಲಾದೇಶ ವಲಸಿಗರ ವಿರುದ್ಧ ಹೋರಾಡಿದ್ದರೋ ಅಧಿಕಾರಕ್ಕೇರಿದ ನಂತರ ಅವರ ಬಗ್ಗೆ ಮೌನ ತಾಳಿದರು.

ಅಸ್ಸಾಂನ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕರಡು ಪಟ್ಟಿ ದೇಶದಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಂಥಹದ್ದೊಂದು ವಿವಾದಿತ ಪಟ್ಟಿಯನ್ನು ಕೇಂದ್ರ ಸರಕಾರ ರಚಿಸಲು ಕಾರಣವಾಗಿದ್ದು 1985ರ ‘ಅಸ್ಸಾಂ ಒಪ್ಪಂದ’. ಅಷ್ಟಕ್ಕೂ ಏನಿದು ‘ಅಸ್ಸಾಂ ಒಪ್ಪಂದ’? ಅದೊಂದು ದೊಡ್ಡ ಕಥೆ.

1970ರ ಅಂತ್ಯದಲ್ಲಿ ಅಸ್ಸಾಂನ ನೆಲದಲ್ಲೊಂದು ಕಂಡು ಕೇಳರಿಯ ವಿದ್ಯಾರ್ಥಿ ಹೋರಾಟ ಆರಂಭವಾಗಿತ್ತು. ಇದಕ್ಕೆ ಕಾರಣವಾಗಿದ್ದು ಇಲ್ಲಿನ ಮಂಗಲ್ದೋಯಿ ಲೋಕಸಭಾ ಕ್ಷೇತ್ರದ ಉಪಚುನಾವಣೆ. ಇಲ್ಲಿನ ಸಂಸದರಾಗಿದ್ದ ಹಿರಾಲಾಲ್‌ ಪಟ್ವಾರಿ ಅಕಾಲಿಕ ಮರಣಕ್ಕೆ ಈಡಾಗಿದ್ದರಿಂದ ಇಲ್ಲಿ ಉಪಚುನಾವಣೆ ನಿಗದಿಯಾಯಿತು. ಈ ಸಂದರ್ಭದಲ್ಲಿ ದೊಡ್ಡ ಮಟ್ಟಕ್ಕೆ ಮತದಾರರ ಸಂಖ್ಯೆ ಏರಿಕೆಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಭಾರೀ ಸಂಖ್ಯೆಯಲ್ಲಿ ಬಾಂಗ್ಲಾದೇಶದಿಂದ ಭಾರತದೊಳ್ಳಕ್ಕೆ ಬಂದಿದ್ದ ವಲಸಿಗರು. ಈ ಎಲ್ಲಾ ಕಾರಣಗಳಿಗೆ ಅವತ್ತು ಮಂಗಲ್ದೋಯಿ ಕ್ಷೇತ್ರ ದೇಶದ ಗಮನವನ್ನು ಸೆಳೆದಿತ್ತು.

ಚುನಾವಣೆ ಬೆನ್ನಿಗೆ ವಿದ್ಯಾರ್ಥಿಗಳ ಹೋರಾಟ ಆರಂಭವಾಯಿತು. ಮೊತ್ತ ಮೊದಲ ಬಾರಿಗೆ ಜೂನ್ 8, 1979ರಂದು ‘ಅಖಿಲ ಅಸ್ಸಾಂ ವಿದ್ಯಾರ್ಥಿ ಸಂಘಟನೆ’ ಅಸ್ಸಾಂ ರಾಜ್ಯ ಬಂದ್‌ಗೆ ಕರೆ ನೀಡಿತು. ‘ಎಲ್ಲಾ ವಿದೇಶಿಯರನ್ನು ಬಂಧಿಸಬೇಕು, ಅವರಿಗೆ ಆಶ್ರಯ ನೀಡಬಾರದು ಮತ್ತು ಗಡಿಪಾರು ಮಾಡಬೇಕು’ ಎಂದು ವಿದ್ಯಾರ್ಥಿ ಸಂಘಟನೆಗಳಿಂದ ಒತ್ತಡ ಕೇಳಿ ಬಂತು. ಹಾಗೆ ನೋಡಿದರೆ ರಾಜ್ಯದಲ್ಲಿ ದೊಡ್ಡ ಮಟ್ಟಕ್ಕೆ ವಲಸಿಗರಿದ್ದಾರೆ ಎಂಬುದು ಎಲ್ಲರಿಗೂ ತಿಳಿದಿತ್ತು. ಇದರ ವಿರುದ್ಧ ಸಣ್ಣ ಪುಟ್ಟ ಪ್ರತಿಭಟನೆಗಳೂ ನಡೆಯುತ್ತಿದ್ದವು. ಆದರೆ ಇದು ದೊಡ್ಡ ಮಟ್ಟಕ್ಕೆ ಆಸ್ಪೋಟವಾಗಿದ್ದು 1979ರಲ್ಲಿ ಅಷ್ಟೇ.

1979ರ ಈ ಬಂದ್‌ನ ತರುವಾಯ ರಾಜ್ಯದಾದ್ಯಂತ ಪ್ರತಿಭಟನೆಯನ್ನು ಹಬ್ಬಲು ಅಸ್ಸಾಂ ಗಣ ಸಂಗ್ರಾಮ್‌ ಪರಿಷತ್‌ ರಚನೆಯಾಯಿತು. ಇದಾದ ಬೆನ್ನಿಗೆ ಸಮೂಹ ಸನ್ನಿಯಂತೆ ಪ್ರತಿಭಟನೆ, ಬಂದ್‌, ಸರಕಾರಿ ಕಚೇರಿಗಳಿಗೆ ಮುತ್ತಿಗೆ, ಮುಷ್ಕರ ಎಂದೆಲ್ಲಾ ಸಾಂಕೇತಿಕವಾಗಿ ಕಾನೂನನ್ನು ಉಲ್ಲಂಘಿಸುವ ಕಾರ್ಯಕ್ರಮಗಳು ನಡೆಯುತ್ತಾ ಬಂದವು ಎಂದು ತಮ್ಮ ಲೇಖನದಲ್ಲಿ ಬರೆಯುತ್ತಾರೆ ರಾಜಕೀಯ ತಜ್ಞ ಸಂಜೀಬ್ ಬರುವಾ.

ನಿರಂತರ ಪ್ರತಿಭಟನೆಯಿಂದ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿದವು. “ಇದು ರಾಜ್ಯದಲ್ಲಿ ಸ್ಥಿರತೆಯ ಆಡಳಿತಕ್ಕೆ ಅಡಿಪಾಯವಾಗಿದ್ದ ಜನಾಂಗೀಯ ಒಕ್ಕೂಟ ವ್ಯವಸ್ಥೆಯನ್ನೇ ಒಡೆದು ಹಾಕಿತು. ಮತ್ತು ರಾಜ್ಯದಲ್ಲಿ ದೀರ್ಘಕಾಲದ ರಾಜಕೀಯ ಪ್ರಕ್ಷುಬ್ಧತೆಗೆ ವೇದಿಕೆಯಾಯಿತು” ಎನ್ನುತ್ತಾರೆ ಬರುವಾ.

1980 ರಿಂದ 82ರ ನಡುವೆ ಸುಮಾರು 23 ಸುತ್ತು ಕೇಂದ್ರ ಸರಕಾರ ಮತ್ತು ಪ್ರತಿಭಟನಾಕಾರರ ಜತೆ ಮಾತುಕತೆಗಳು ನಡೆದವು. ಗಮನಿಸಬೇಕಾದ ಅಂಶವೆಂದರೆ ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೆ ಎಷ್ಟು ಬೆಂಬಲ ಇತ್ತೋ ಅಷ್ಟೇ ವಿರೋಧವೂ ಇತ್ತು. ಇದಕ್ಕೆ ಕಾರಣಗಳೂ ಇದ್ದವು. ಒಂದು, ಅಸ್ಸಾಂನಲ್ಲಿ ವಲಸಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇತ್ತು. ಇನ್ನೊಂದು ಕಡೆ ಇದನ್ನು ಅನುಷ್ಠಾನಗೊಳಿಸಿದರೆ ಆಗುವ ರಾಜಕೀಯ ಹಾನಿಯ ಅರಿವು ಹಲವರಿಗಿತ್ತು. ಅವರು ಪ್ರತಿಭನಟೆಯನ್ನು ವಿರೋಧಿಸುತ್ತಿದ್ದರು.

ಹೀಗಿರಲು ಕೊನೆಗೂ 1982ರಲ್ಲಿ ಕೇಂದ್ರ ಸರಕಾರ ಮತ್ತು ಪ್ರತಿಭಟನಾಕಾರರು ಒಂದು ಒಪ್ಪಂದಕ್ಕೆ ಬಂದರು. ಇದರ ಪ್ರಕಾರ ಯಾರೆಲ್ಲಾ ಭಾರತದ ಗಡಿಯೊಳಕ್ಕೆ 1951ರಿಂದ 1961ರ ನಡುವೆ ಇದ್ದಾರೋ ಅವರಿಗೆಲ್ಲಾ ಪೌರತ್ವ ನೀಡುವುದು ಎಂದು ತೀರ್ಮಾನವಾಯಿತು. ಆದರೆ 1961ರಿಂದ 71ರ ನಡುವೆ ಭಾರತದೊಳಕ್ಕೆ ಪ್ರವೇಶಿಸಿದವರನ್ನು ಏನು ಮಾಡಬೇಕು ಎಂಬ ವಿವಾದಕ್ಕೆ ಸಂಬಂಧಿಸಿದಂತೆ ಸ್ಪಷ್ಟ ತೀರ್ಮಾನ ಹೊರ ಬೀಳಲಿಲ್ಲ. ಮತ್ತು ಇದನ್ನು ಹೇಗೆ ಜಾರಿ ಮಾಡಬೇಕು ಎಂಬ ತೀರ್ಮಾನಕ್ಕೂ ಬರಲಾಗಲಿಲ್ಲ. ಹೀಗಾಗಿ ಒಪ್ಪಂದ ಹಾಗೇ ಉಳಿದು ಬಿಟ್ಟಿತು.

ಅಷ್ಟೊತ್ತಿಗಾಗಲೇ ಪ್ರಫುಲ್ಲ ಕುಮಾರ್‌ ಮಹಾಂತ ನೇತೃತ್ವದಲ್ಲಿ ನಡೆಯುತ್ತಿದ್ದ ಹೋರಾಟಕ್ಕೆ ಭಾರೀ ಜನ ಬೆಂಬಲ ಸಿಕ್ಕಿತ್ತು. ರಾಜಕೀಯವಾಗಿಯೂ ಅಸ್ಸಾಂ ವಿದ್ಯಾರ್ಥಿ ಹೋರಾಟ ಪರಿಣಾಮಗಳನ್ನು ಬೀರಲು ಆರಂಭಿಸಿತ್ತು. 1980ರ ಲೋಕಸಭೆ ಚುನಾವಣೆ ಮತ್ತು 1983ರ ಅಸ್ಸಾಂ ವಿಧಾನಸಭೆ ಚುನಾವಣೆಯಲ್ಲಿ ಇದು ಢಾಳಾಗಿ ಕಾಣಿಸಿತು.

Also read: ಏನಿದು, ವಾರದ ಆರಂಭದಲ್ಲೇ ವಿವಾದ ಹುಟ್ಟು ಹಾಕಿದ ಅಸ್ಸಾಂನ ರಾಷ್ಟ್ರೀಯ ಪೌರತ್ವ? 

ಮುಂದೆ 1984ರಲ್ಲಿ ಕೇಂದ್ರದಲ್ಲಿ ರಾಜೀವ್‌ ಗಾಂಧಿ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಮಾತುಕತೆಗಳು ಚಾಲ್ತಿಗೆ ಬಂದವು. 34ರ ಹರೆಯದ ವಿದ್ಯಾರ್ಥಿ ನಾಯಕ ಮಹಾಂತ ಮುಂದೆ ಮಂಡಿಯೂರಿದ ಕೇಂದ್ರ ಸರಕಾರ ಅನಿವಾರ್ಯವಾಗಿ ಒಪ್ಪಂದಕ್ಕೆ ಒಪ್ಪಿಕೊಂಡಿತು. ಹೀಗೆ ಆಗಸ್ಟ್‌ 15, 1985ರಂದು ‘ಅಸ್ಸಾಂ ಒಪ್ಪಂದ’ಕ್ಕೆ ಸಹಿ ಬಿತ್ತು. ಸ್ವತಃ ರಾಜೀವ್‌ ಗಾಂಧಿ ಸಮ್ಮುಖದಲ್ಲಿ ಕೇಂದ್ರ ಗೃಹ ಖಾತೆ ಸಚಿವ ಎಸ್‌.ಬಿ. ಚವಾಣ್ ಮತ್ತು ಅಸ್ಸಾಂ ಗಣ ಪರಿಷದ್‌ ನಾಯಕ ಪ್ರಫುಲ್ಲ ಕುಮಾರ್ ಮಹಾಂತ ಒಪ್ಪಂದಕ್ಕೆ ಸಹಿ ಹಾಕಿದರು.

ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಸಮ್ಮುಖದಲ್ಲಿ ‘ಅಸ್ಸಾಂ ಒಪ್ಪಂದ 1985’ಕ್ಕೆ ಸಹಿ ಹಾಕುತ್ತಿರುವ ಕೇಂದ್ರ ಗೃಹ ಸಚಿವ ಎಸ್‌.ಬಿ. ಚವಾಣ್ ಮತ್ತು ಅಸ್ಸಾಂ ಗಣ ಪರಿಷದ್‌ ನಾಯಕ ಪ್ರಫುಲ್ಲ ಕುಮಾರ್‌ ಮಹಾಂತ
ಅಂದಿನ ಪ್ರಧಾನಿ ರಾಜೀವ್‌ ಗಾಂಧಿ ಸಮ್ಮುಖದಲ್ಲಿ ‘ಅಸ್ಸಾಂ ಒಪ್ಪಂದ 1985’ಕ್ಕೆ ಸಹಿ ಹಾಕುತ್ತಿರುವ ಕೇಂದ್ರ ಗೃಹ ಸಚಿವ ಎಸ್‌.ಬಿ. ಚವಾಣ್ ಮತ್ತು ಅಸ್ಸಾಂ ಗಣ ಪರಿಷದ್‌ ನಾಯಕ ಪ್ರಫುಲ್ಲ ಕುಮಾರ್‌ ಮಹಾಂತ
ಚಿತ್ರ ಕೃಪೆ: ಇಂಡಿಯನ್‌ ಎಕ್ಸ್‌ಪ್ರೆಸ್‌

ಒಪ್ಪಂದದಲ್ಲಿ ಏನಿತ್ತು?

ಈ ಒಪ್ಪಂದದ ಪ್ರಕಾರ ಜನವರಿ 1, 1966 ಕ್ಕೂ ಮೊದಲು ರಾಜ್ಯಕ್ಕೆ ಬಂದವರಿಗೆ ಪೌರತ್ವ ನೀಡುವುದು. 1966ರ ಜನವರಿ 1ರ ನಂತರ ಮಾರ್ಚ್‌ 24, 1971ರ (ಬಾಂಗ್ಲಾ ವಿಮೋಚನಾ ಯುದ್ಧ ಆರಂಭವಾಗುವುದಕ್ಕೆ ಎರಡು ದಿನ ಮೊದಲು) ವರೆಗೆ ದೇಶ ಪ್ರವೇಶಿಸಿದವರಿಗೆ 10 ವರ್ಷಗಳ ಕಾಲ ಪೌರತ್ವ ನಿರಾಕರಿಸುವುದು ಎಂದು ತೀರ್ಮಾನವಾಯಿತು. ಇವರನ್ನು ವಿದೇಶಿಯರ ಕಾಯ್ದೆ 1946 ಮತ್ತು ವಿದೇಶಿಯರ (ನ್ಯಾಯಾಧಿಕರಣ) ಆದೇಶ 1964ರ ಅನ್ವಯ  ಗುರುತಿಸಿ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಬೇಕು ಮತ್ತು ಅವರು 10 ವರ್ಷಗಳ ಕಾಲ ಪೌರತ್ವ ಇಲ್ಲದೆ ಇರಬೇಕು ಎಂದು ಒಪ್ಪಂದದಲ್ಲಿ ಉಲ್ಲೇಖಿಸಲಾಗಿತ್ತು.

ಕೊನೆಯದಾಗಿ 1971ರ ಮಾರ್ಚ್‌ 24ರ ನಂತರ ಬಂದವರನ್ನು ಗಡಿಪಾರು ಮಾಡಬೇಕು ಎಂದು ಒಪ್ಪಂದದಲ್ಲಿ ಸ್ಪಷ್ಟವಾಗಿ ಬರೆಯಲಾಗಿತ್ತು. ಇವರ ಹೆಸರುಗಳನ್ನು ಗುರುತಿಸಿ ಮತದಾರರ ಪಟ್ಟಿಯಿಂದ ತೆಗೆದು ಹಾಕಿ ನಂತರ ಗಡಿಪಾರು ಮಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒಪ್ಪಂದ ಹೇಳುತ್ತಿತ್ತು. ಈ ಒಪ್ಪಂದದೊಂದಿಗೆ ಪ್ರತಿಭಟನೆ ಕೊನೆಯಾಯಿತು.

ಒಪ್ಪಂದಕ್ಕೆ ಸಹಿ ಹಾಕುತ್ತಿದ್ದಂತೆ ರಾಜ್ಯದ ವಿಧಾನಸಭೆಯನ್ನು ವಿಸರ್ಜನೆ ಮಾಡಲಾಯಿತು ಮತ್ತು ಹೊಸ ಮತದಾರರ ಪಟ್ಟಿಯ ಅನ್ವಯ ಡಿಸೆಂಬರ್‌ 1985ರಲ್ಲಿ ವಿಧಾನಸಭೆ ಚುನಾವಣೆಗೆ ನಿಗದಿಯಾಯಿತು.

ಪ್ರತಿಭಟನೆ ಕೊನೆಗೊಂಡಾಗ ನಿರುದ್ಯೋಗಿಯಾದ ಪ್ರಫುಲ್ಲ ಕುಮಾರ್ ಮಹಾಂತ ಅಸ್ಸಾಂ ಗಣ ಪರಿಷದ್‌ (ಎಜಿಪಿ) ಹುಟ್ಟುಹಾಕಿದರು. ಪಕ್ಷ ನೋಂದಣಿಯಾಗದ ಹಿನ್ನೆಲೆಯಲ್ಲಿ 1985ರ ಚುನಾವಣೆಯಲ್ಲಿ ಮಹಾಂತ ಅಭ್ಯರ್ಥಿಗಳು ಸ್ವತಂತ್ರವಾಗೇ ಸ್ಪರ್ಧಿಸಿದರು. ಫಲಿತಾಂಶ ಬಂದಾಗ 126ರಲ್ಲಿ 67 ಸ್ಥಾನಗಳಲ್ಲಿ ಎಜಿಪಿ ಅಭ್ಯರ್ಥಿಗಳು ಶಾಸಕರಾಗಿದ್ದರು. ದೇಶದ ರಾಜಕಾರಣದಲ್ಲೇ ಅಭೂತಪೂರ್ವ ರೀತಿಯಲ್ಲಿ ತಮ್ಮ 34ನೇ ವಯಸ್ಸಿಗೆ ಪ್ರಫುಲ್ಲ ಕುಮಾರ್ ಮಹಾಂತ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾದರು. ಅವತ್ತು ಪ್ರಮಾಣ ವಚನ ಸ್ವೀಕರಿಸಿದ ಹಲವು ಸಚಿವರು ನೇರವಾಗಿ ಕಾಲೇಜುಗಳ ಹಾಸ್ಟೆಲ್‌ನಿಂದ ಎದ್ದು ಬಂದಿದ್ದರು.

ಹೀಗೆ ಅಧಿಕಾರಕ್ಕೇರಿದ ಮಹಾಂತ ತಾವು ನಡೆದು ಬಂದಿದ್ದ ದಾರಿಯನ್ನೇ ಮರೆತು ಬಿಟ್ಟರು. ಯಾವ ಬಾಂಗ್ಲಾದೇಶ ವಲಸಿಗರ ವಿರುದ್ಧ ಹೋರಾಡಿದ್ದರೋ ಅಧಿಕಾರಕ್ಕೇರಿದ ನಂತರ ಅವರ ಬಗ್ಗೆ ಮೌನ ತಾಳಿದರು. 1996ರಲ್ಲಿ ಅವರು ಮತ್ತೆ ಅಧಿಕಾರಕ್ಕೇರಿದರೂ ಈ ಬಗ್ಗೆ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಒಪ್ಪಂದದಲ್ಲಿ ಹೇಳಿದ್ದ ಯಾವ ಅಂಶಗಳೂ 33 ವರ್ಷಗಳ ಕಾಲ ಅನುಷ್ಠಾನಕ್ಕೆ ಬರಲೇ ಇಲ್ಲ.

ಅವತ್ತು ಅಧಿಕಾರಕ್ಕೇರಿ ಹೊಣೆಗೇಡಿತನ ಮೆರೆದಿದ್ದ ಇದೇ ಎಜಿಪಿ ಪಕ್ಷದ ನಾಯಕರಾದ ಸರ್ಬಾನಂದ ಸೋನೋವಾಲ್‌ ಇವತ್ತು ಬಿಜೆಪಿಗೆ ಬಂದು ಸದ್ಯ ಅಸ್ಸಾಂ ಮುಖ್ಯಮಂತ್ರಿಯಾಗಿದ್ದಾರೆ. ಎಜಿಪಿಯ ಸಂಸ್ಥಾಪರಾಗಿದ್ದ ಚಂದ್ರಮೋಹನ್‌ ಪಟೋರಿ ಮತ್ತು ಮತ್ತೋರ್ವ ನಾಯಕ ಹಿತೇನ್‌ ಗೋಸ್ವಾಮಿಯೂ ಬಿಜೆಪಿಯಲ್ಲಿದ್ದಾರೆ. ಅಂದು ವಿದ್ಯಾರ್ಥಿ ಸಂಘಟನೆ ಕಟ್ಟಿ ಮುಖ್ಯಮಂತ್ರಿಯಾಗಿದ್ದ ಮಹಾಂತ ತಮ್ಮದೇ ಎಜಿಪಿ ಪಕ್ಷವನ್ನು ಬಿಜೆಪಿಗೆ ಅಡವಿಟ್ಟಿದ್ದಾರೆ. ಇದೀಗ 33 ವರ್ಷ ಸುಮ್ಮನಿದ್ದು ಎನ್‌ಆರ್‌ಸಿ ಪಟ್ಟಿ ಸಿದ್ದಪಡಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿ ಅವರೂ ಪಾಲುದಾರರಾಗಿದ್ದಾರೆ. ಒಂದೊಮ್ಮೆ ಮಹಾಂತ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿ ಕಾಂಗ್ರೆಸ್‌ ಪಕ್ಷ ಅಂದೇ ಎಚ್ಚೆತ್ತಿದ್ದರೆ ಇವತ್ತು 40,07,707 ಸೋಕಾಲ್ಡ್‌ ವಲಸಿಗರು ನಿರಾಶ್ರಿತರಾಗುವ ಸ್ಥಿತಿಯೂ ಒದಗಿ ಬರುತ್ತಿರಲಿಲ್ಲ.

ಪೂರಕ ಮಾಹಿತಿ: ಇಂಡಿಯನ್‌ ಎಕ್ಸ್‌ಪ್ರೆಸ್‌