samachara
www.samachara.com
‘ಪ್ರತ್ಯೇಕತೆ ಕೂಗು’: ಇದು ದೇವೇಗೌಡರೇ ಬರೆದ ಪರ್ಫೆಕ್ಟ್ ಚಿತ್ರಕತೆ!
COVER STORY

‘ಪ್ರತ್ಯೇಕತೆ ಕೂಗು’: ಇದು ದೇವೇಗೌಡರೇ ಬರೆದ ಪರ್ಫೆಕ್ಟ್ ಚಿತ್ರಕತೆ!

ಕಳೆದ ಒಂದು ವಾರದ ಅಂತರದಲ್ಲಿ ಕರ್ನಾಟಕದ ಅಧಿಕಾರ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಬೆಳವಣಿಗೆಗಳು ಅಗತ್ಯಗಳನ್ನು ನೆನಪಿಸಿ, ಅವಕಾಶ ಹುಟ್ಟುಹಾಕಲು ನಡೆದ ಒಂದು ಸಿನೆಮಾ ಕತೆ.

samachara

samachara

ಜನ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಲು ನಾಯಕರನ್ನು ಸೃಷ್ಟಿಸಿಕೊಳ್ಳುತ್ತಾರೆ. ನಾಯಕರಾಗುವುದು, ಜನರನ್ನು ಪ್ರತಿನಿಧಿಸುವುದು ಅವಕಾಶ. ಅಗತ್ಯಗಳೇ ಇಲ್ಲದಿದ್ದರೆ, ಅವಕಾಶಗಳು ಸೃಷ್ಟಿಯಾಗುವುದಿಲ್ಲ...

ಕಳೆದ ಒಂದು ವಾರದ ಅಂತರದಲ್ಲಿ ಕರ್ನಾಟಕದ ಅಧಿಕಾರ ರಾಜಕಾರಣವನ್ನು ಕೇಂದ್ರವಾಗಿಟ್ಟುಕೊಂಡು ನಡೆದ ಬೆಳವಣಿಗೆಗಳು ಅಗತ್ಯಗಳನ್ನು ನೆನಪಿಸಿ, ಅವಕಾಶ ಹುಟ್ಟುಹಾಕಲು ನಡೆದ ಒಂದು ಸಿನೆಮಾ ಕತೆ.

ಉತ್ತರ ಕರ್ನಾಟಕ, ಪ್ರತ್ಯೇಕ ರಾಜ್ಯದ ಕೂಗು, ಒಂದೇ ಕರ್ನಾಟಕ ಎಂಬ ಭಾವುಕ ಪ್ರತಿಕ್ರಿಯೆಗಳು ಹಾಗೂ ವಿಧಾನಸೌಧದಲ್ಲಿ ನಡೆದ ಚಟುವಟಿಕೆಗಳು, ಅವಕಾಶಗಳಿಲ್ಲದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಅಗತ್ಯಗಳನ್ನು ನೆನಪು ಮಾಡಿಕೊಡುವ ಮೂಲಕ ನಾಯಕನನ್ನು ಯಾಂತ್ರಿಕವಾಗಿ ಸೃಷ್ಟಿಸುವ ಚಿತ್ರಕತೆಯಂತೆ ಕಾಣಿಸುತ್ತಿದೆ. ಮತ್ತು, ರಾಜಕೀಯ ಚದುರಂಗದಾಟದಲ್ಲಿ ಇಷ್ಟೊಂದು ಪರ್ಫೆಕ್ಟ್ ಆಗಿರುವ ಚಿತ್ರಕತೆಯನ್ನು ಬರೆಯಲು ಸಾಧ್ಯ ಇರುವುದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಮಾತ್ರ ಎಂಬುದನ್ನೂ ನಿರೂಪಿತವಾಗಿದೆ.

ಕೊನೆಗೂ ದೊಡ್ಡಗೌಡರ ‘ಪ್ರತ್ಯೇಕ ಉತ್ತರ ಕರ್ನಾಟಕ’ ಸಿನಿಮಾ ಅಂದುಕೊಂಡಂತೆ ವಾರದ ಗಡಿಯಲ್ಲಿ ಗೆದ್ದಿದೆ. ಮಗ, ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕಕ್ಕೂ ನಾಯಕ ಎಂದು ಸಾರಿ ಸಾರಿ ಹೇಳಿದೆ.

ಸಾಂದರ್ಭಿಕ ಚಿತ್ರ. 
ಸಾಂದರ್ಭಿಕ ಚಿತ್ರ. 

ಈಗ ಇಡೀ ಸಿನೆಮಾದ ಓಪನಿಂಗ್ ಸೀನ್‌ಗೆ ಬನ್ನಿ. ಕೊಪ್ಪಳದಲ್ಲಿ ರೈತ ಸಂಘ ಸಾಲ ಮನ್ನಾಕ್ಕಾಗಿ ಪ್ರತಿಭಟನೆ ನಡೆಸುತ್ತದೆ. ಅಷ್ಟೊತ್ತಿಗಾಗಲೇ ಸಮ್ಮಿಶ್ರ ಸರಕಾರದಲ್ಲಿ ಅಧಿಕಾರಕ್ಕೆ ಬಂದ ಕುಮಾರಸ್ವಾಮಿ, ಪಕ್ಕದಲ್ಲಿ ಡಿಸಿಎಂ ಇಟ್ಟುಕೊಂಡೇ ಸಭೆಗಳನ್ನು ನಡೆಸುವ ಅನಿವಾರ್ಯತೆಯಲ್ಲಿರುತ್ತಾರೆ. ಸಾಲ ಮನ್ನಾ ಎಂಬ ಜೆಡಿಎಸ್ ಪ್ರಣಾಳಿಕೆಯ ಆಶ್ವಾಸನೆಯೇ ಭಾರ ಅಂತ ಅನ್ನಿಸಲು ಶುರುವಾಗಿರುತ್ತದೆ. ಬಜೆಟ್‌ನಲ್ಲಿ 36 ಸಾವಿರ ಕೋಟಿ ಸಾಲ ಮನ್ನಾ ಮಾಡಿದರೂ, ರೈತ ಸಂಘದ ಪ್ರತಿಭಟನೆ ಸರಕಾರಕ್ಕೆ ಇರುಸು ಮುರುಸು ಮಾಡುತ್ತದೆ. ಸಿಎಂ ಕುಮಾರಸ್ವಾಮಿ, “ಈಗ ಪ್ರತಿಭಟನೆ ಮಾಡುತ್ತೀರಿ, ಚುನಾವಣೆ ಸಮಯದಲ್ಲಿ ಈ ಕುಮಾರಸ್ವಾಮಿ ನಿಮಗೆ ನೆನಪಾಗಿರಲಿಲ್ಲ,’’ ಎಂಬರ್ಥದಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ನಂತರ, ಅವರು ಉತ್ತರ ಕರ್ನಾಟಕ ವಿಚಾರವನ್ನು ತೇಲಿ ಬಿಡುತ್ತಾರೆ.

ಹೀಗೆ, ಚಿಕ್ಕ ಸುಳಿವೂ ಸಿಗದಂತೆ ಅಪರೂಪದ ರಾಜಕೀಯ ಸಿನೆಮಾದ ಚಿತ್ರಕತೆ ಆರಂಭವಾಗುತ್ತದೆ. ಉತ್ತರ ಕರ್ನಾಟಕ, ಅದರ ಅಭಿವೃದ್ಧಿ, ಸರಕಾರದ ತಾತ್ಸಾರ ಮನೋಭಾವ, ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಪತ್ರಿಕಾಗೋಷ್ಠಿ, ಮುಖ್ಯಮಂತ್ರಿ ಹೇಳಿಕೆ ವಿರುದ್ಧ ಆಕ್ರೋಶ ಹೀಗೆ ಸರಣಿಯೋಪಾದಿಯಲ್ಲಿ ದೃಶ್ಯಾವಳಿಗಳು ಜರುಗಲು ಶುರುವಾಗುತ್ತವೆ.

ಇಡೀ ಸಿನೆಮಾಗೆ ಮಸಾಲೆ ಬೆರೆತಿದ್ದು, ಬಿಜೆಪಿ ನಾಯಕ, ಶಾಸಕ ಶ್ರೀರಾಮುಲು ಹೇಳಿಕೆ. ಅದು, ಪ್ರತ್ಯೇಕ ಉತ್ತರ ಕರ್ನಾಟಕ ಮತ್ತು ಅಖಂಡ ಕರ್ನಾಟಕ ಭಿನ್ನ ನಿಲುವುಗಳನ್ನು ಸ್ಪಷ್ಟವಾಗಿ ವಿಭಾಗಿಸಿತು. ಜನ ಅವರವರ ಭಾವಕ್ಕೆ ಭಕುತಿಗೆ ಪ್ರತಿಕ್ರಿಯೆ ನೀಡಿದರು. ಆರ್‌ಎಸ್‌ಎಸ್‌ನ್ನೂ ಎಳೆದು ತಂದರು.

ಕರ್ನಾಟಕ ಮತ್ತು ಕನ್ನಡದ ವಿಚಾರ ಬಂದಾಗೆಲ್ಲಾ ಬಿಜೆಪಿ ಎಡವುತ್ತಲೇ ಬಂದಿದೆ. ರಾಷ್ಟ್ರೀಯತೆಯನ್ನು ಹಾಗೂ ಧರ್ಮವನ್ನು ರಾಜಕಾರಣಕ್ಕೆ ಒಗ್ಗಿಸಿಕೊಂಡ ಬಿಜೆಪಿಗೆ ಸ್ಥಳೀಯ ಅಸ್ಮಿತೆಗಳನ್ನು ಹೇಗೆ ಎದುರುಗೊಳ್ಳಬೇಕು ಎಂಬುದು ಇವತ್ತಿಗೂ ಗೊಂದಲದ ವಿಚಾರ. ಅದಕ್ಕೆ ಅದರ ಹಿಂದಿರುವ ಆರ್‌ಎಸ್‌ಎಸ್‌ ಸಿದ್ಧಾಂತದ ಮಿತಿಯೂ ಕಾರಣ. ಒಟ್ಟಾರೆ, ಈ ಬಾರಿಯೂ ಬಿಜೆಪಿ, ಶ್ರೀರಾಮುಲು ಹೇಳಿಕೆಯಿಂದಾಗಿ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗಿನಲ್ಲಿ ಲಾಭ ಪಡೆಯಲು ಹೋಗಿ ಆರಂಭದಲ್ಲಿಯೇ ಯಡವಟ್ಟು ಮಾಡಿಕೊಂಡಿತು.

ಇದಕ್ಕೆ ಹೋಲಿಸಿದರೆ ಒಟ್ಟಾರೆ ಪ್ರತ್ಯೇಕ ಉತ್ತರ ಕರ್ನಾಟಕದ ಸುತ್ತಲಿನ ಬೆಳವಣಿಗೆಗಳಲ್ಲಿ ಕಾಂಗ್ರೆಸ್ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿತು. ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿರುವ ಮಾಜಿ ಸಿಎಂ ಸಿದ್ದರಾಮಯ್ಯ, “ಪ್ರತ್ಯೇಕ ಉತ್ತರ ಕರ್ನಾಟಕ ಬೇಡಿಕೆ ಫೂಲಿಶ್,’’ ಎಂದರು. ಉಳಿದವರೂ ಇದೇ ನಿಲುವನ್ನು ತಳೆದರು. ನಿಧಾನವಾಗಿ ಎಚ್ಚೆತ್ತುಕೊಂಡ ಯಡಿಯೂರಪ್ಪ, “ಪ್ರತ್ಯೇಕ ಉತ್ತರ ಕರ್ನಾಟಕದ ಮಾತುಗಳನ್ನು ಯಾರೂ ಆಡಬೇಡಿ,’’ ಎಂದರು. ಅಷ್ಟೊತ್ತಿಗಾಗಲೇ ಕಾಲ ಮಿಂಚಿ ಹೋಗಿತ್ತು.

ಈ ಅವಧಿಯಲ್ಲಿ ಮಾಧ್ಯಮಗಳೂ ಕೂಡ ಈ ಬೆಳವಣಿಗೆಯನ್ನು ತಮ್ಮದೇ ಮೂಗಿನ ನೇರದಲ್ಲಿ ಅರ್ಥಮಾಡಿಕೊಂಡವು. ಕುಮಾರಸ್ವಾಮಿ ಹಣಿಯಲು ನಿಂತವು. ಕೊನೆಗೆ, ಮುಖ್ಯಮಂತ್ರಿ ಇಡೀ ಬೆಳವಣಿಗೆಗೆ ಮಾಧ್ಯಮಗಳ ಮೇಲೆಯೇ ಗೂಬೆ ಕೂರಿಸಿದರು. ಹೀಗಿದ್ದೂ, ದೊದ್ಡದೇನೋ ನಡೆದು ಹೋಗುತ್ತದೆ, ಉತ್ತರ ಕರ್ನಾಟಕ ಬಂದ್ ಆಗುತ್ತೆ ಎಂಬ ನಿರೀಕ್ಷೆಯಲ್ಲಿದ್ದವು ಮಾಧ್ಯಮಗಳು. ಆದರೆ ಚಿತ್ರಕತೆ ಬರೆದವರು ಬೇರೆಯದೇ ಕ್ಲೈಮ್ಯಾಕ್ಸ್ ರೆಡಿ ಮಾಡಿಕೊಂಡಿದ್ದರು.

ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಿಎಂ ಕುಮಾರಸ್ವಾಮಿ ಹಾಗೂ ಉತ್ತರ ಕರ್ನಾಟಕದ ನಾಯಕರ ಮಾತುಕತೆ. 
ಮಂಗಳವಾರ ವಿಧಾನಸೌಧದಲ್ಲಿ ನಡೆದ ಸಿಎಂ ಕುಮಾರಸ್ವಾಮಿ ಹಾಗೂ ಉತ್ತರ ಕರ್ನಾಟಕದ ನಾಯಕರ ಮಾತುಕತೆ. 
/ಜಿ. ಮೋಹನ್. 

ಇಡೀ ಸಿನೆಮಾದ ಕ್ಲೈಮ್ಯಾಕ್ಸ್‌ ನಡೆದಿದ್ದು ಮಂಗಳವಾರ, ವಿಧಾನಸೌಧದಲ್ಲಿ ಹಾಗೂ ಬೆಳಗಾವಿಯಲ್ಲಿ. ಬೆಳಗ್ಗೆಯೇ ಬಿಜೆಪಿ ರಾಜ್ಯಾಧ್ಯಕ್ಷ ಬೆಳಗಾವಿಗೆ ಹೊರಟು ಹೋದರು. ಅಲ್ಲಿ ಸುವರ್ಣಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಮಠಾಧೀಶರ ಮನವೊಲಿಸುವ ಕೆಲಸ ಮಾಡಲು ನಿಂತರು. ಅಲ್ಲಿ ಮೊದಲ ಬಾರಿಗೆ, ಯಡಿಯೂರಪ್ಪ ಸತ್ಯ ಅರಿತವರಂತೆ ಮಾತನಾಡಿದರು. “ಇದರ ಹಿಂದೆ ದೇವೇಗೌಡರಿದ್ದಾರೆ,’’ ಎಂದರು. “ಮುಖ್ಯಮಂತ್ರಿ ಇಲ್ಲಿಗೆ ಬಂದು ಮನವೊಲಿಸುವ ಕೆಲಸ ಮಾಡಬೇಕು. ಆದರೆ ನಾನು ಬಂದಿದ್ದೀನಿ,’’ ಎಂದು ರಾಜಕೀಯ ಮೈಲೇಜ್ ತೆಗೆದುಕೊಳ್ಳಲು ಪ್ರಯತ್ನಿಸಿದರು.

ಆದರೆ, ಅದೇ ವೇಳೆಗೆ ವಿಧಾನಸೌಧದಲ್ಲಿ ಕುಮಾರಸ್ವಾಮಿ ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟ ಸಮಿತಿ ಮುಖಂಡರನ್ನು ಕೂರಿಸಿಕೊಂಡಿದ್ದರು. “ಹಿಂದಿನವರು ಏನು ಮಾಡಿದ್ದಾರೆ ನನಗೆ ಗೊತ್ತಿಲ್ಲ. ಆದರೆ ಈಗ ಉತ್ತರ ಕರ್ನಾಟಕದ ಸಮಸ್ಯೆಗಳು ನನ್ನ ಗಮನಕ್ಕೆ ಬಂದಿವೆ. ಅವುಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ. ಅದು ನನಗೆ ಸಿಕ್ಕಿರುವ ಅವಕಾಶ,’’ ಎಂದರು.

ಅಷ್ಟಕ್ಕೆ, ಹೋರಾಟ ಸಮಿತಿಯ ಹೋರಾಟದ ಆವೇಶ ನಿರೀಕ್ಷೆಯಂತೆಯೇ ಕಡಿಮೆಯಾಗಿತ್ತು. ಸಭೆಯ ನಂತರ ಮಾಧ್ಯಮಗಳ ಜತೆ ಮಾತನಾಡಿದ, ಸಮಿತಿಯ ಗೌರವಾಧ್ಯಕ್ಷ ಬಸವರಾಜ ದಿಂಡೂರ, "15 ದಿನಗಳ ಒಳಗಾಗಿ ಸುವರ್ಣ ಸೌಧದಲ್ಲಿ ಸಭೆ ಕರೆಯಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ. ಬೇಡಿಕೆ ಈಡೇರಿಸದಿದ್ದರೆ ನವೆಂಬರ್‌ 1ರಂದು ಪ್ರತ್ಯೇಕ ಧ್ವಜಾರೋಹಣ ಮಾಡುತ್ತೇವೆ,” ಎಂದರು. ಅದು ಯುದ್ಧ ಆರಂಭಕ್ಕೆ ಮುನ್ನವೇ ಕದನ ವಿರಾಮ ಘೋಷಣೆ. ಅಲ್ಲಿಗೆ, ಎದ್ದಿದ್ದ ನಕಾರಾತ್ಮಕ ಅಲೆಯನ್ನು ಸಕಾರಾತ್ಮವಾಗಿ ಬದಲಾಯಿಸಿಕೊಂಡಿದ್ದರು ಕುಮಾರಸ್ವಾಮಿ. ಪ್ರತ್ಯೇಕತೆ ಹೋರಾಟ, ಉತ್ತರ ಕರ್ನಾಟಕ ಬಂದ್‌ ಎಲ್ಲವನ್ನೂ ಒಂದು ತಾತ್ಕಾಲಿಕ ತೆರೆ ಎಳೆಯಲಾಯಿತು.

ಇಷ್ಟಕ್ಕೂ ದೇವೇಗೌಡರು ರಾಜಕೀಯ ಚದುರಂಗದಾಟದಲ್ಲಿ ‘ಪ್ರತ್ಯೇಕತೆ’ ಎಂಬ ಚಿತ್ರಕತೆಯನ್ನು ಬರೆಯುವದೊಡ್ಡ ರಿಸ್ಕ್‌ನ್ನು ಏಕೆ ತೆಗೆದುಕೊಂಡರು? ಅವರ ಇಷ್ಟು ವರ್ಷಗಳ ರಾಜಕೀಯದ ನಂತರವೂ ಜೆಡಿಎಸ್‌ ಉತ್ತರ ಕರ್ನಾಟಕದಲ್ಲಿ ಹೇಳಿಕೊಳ್ಳುವ ಸಾಧನೆ ಮಾಡಲಾಗಿಲ್ಲ. ಪಕ್ಷದ ರಚನೆಗಳಿಲ್ಲ. ಇರುವುದು ಐವರು ಶಾಸಕರಷ್ಟೆ. ಸಮ್ಮಿಶ್ರ ಸರಕಾರದ ಮೂಲಕ ಅಧಿಕಾರಕ್ಕೆ ಬಂದರೂ, ಇಡೀ ಕರ್ನಾಟಕದ ನಾಯಕ ಬಿಂಬಿಸಿಕೊಳ್ಳಲು ಕುಮಾರಸ್ವಾಮಿ ಅವರಿಗೆ ಆಗುತ್ತಿರಲಿಲ್ಲ. ಇಂತಹ ಸಮಯದಲ್ಲಿ, ಇಂತಹದ್ದೇನೋ ಒಂದು ದೊಡ್ಡಮಟ್ಟದ್ದು ನಡೆಯದೇ, ಈ ಸರಕಾರವನ್ನು ಟೇಕ್‌ಆಫ್‌ ಮಾಡುವುದು ಕಷ್ಟವಿತ್ತು, ಅದಕ್ಕಾಗಿಯೇ ಇದೊಂದು ವರ್ತ್‌ ರಿಸ್ಕ್‌ ಅಂತ ದೊಡ್ಡಗೌಡರು ಆಲೋಚನೆ ಮಾಡಿರಲಿಕ್ಕೂ ಸಾಕು.

ಸದ್ಯ ಕೊನೆಯಲ್ಲಿ ನಿಂತು ನೋಡಿದರೆ, ಉತ್ತರ ಕರ್ನಾಟಕದ ಭಾಗ ಜನ ಸಿಎಂ ಕುಮಾರಸ್ವಾಮಿ ಮೂಲಕವೇ ತಮ್ಮ ಭವಿಷ್ಯವನ್ನು ನೋಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರ ಆಚೆಗೂ ಒಂದಷ್ಟು ಲಾಭಗಳಾಗಿವೆ. ಪ್ರಮಾಣವಚನದಿಂದ ಹಿಡಿದು, ಸಂಪುಟ ರಚನೆವರೆಗೆ ಬೆಂಬಿಡದ ಡಿಸಿಎಂ ಜಿ. ಪರಮೇಶ್ವರ್ ಒಟ್ಟಾರೆ ಬೆಳವಣಿಗೆಯಲ್ಲಿ ಸ್ಥಾನಪಲ್ಲಟಕ್ಕೆ ಒಳಗಾಗಿದ್ದಾರೆ. ಈ ಏನಿದ್ದರೂ, ಸಿಎಂ ಕುಮಾರಸ್ವಾಮಿ ಅಷ್ಟೆ ಅಂತಾಗಿದೆ. ಸಾಲ ಮನ್ನಾ ಬೇಡಿಕೆ, ಸಮ್ಮಿಶ್ರ ಸರಕಾರದ ಗೊಂದಲಗಳು ಇಡೀ ಬೆಳವಣಿಯಿಂದಾಗಿ ಹಿಂದಕ್ಕೆ ಸರಿದಿವೆ. ಕರ್ನಾಟಕ, ಸಿಎಂ ಕುಮಾರಸ್ವಾಮಿ ಎಲ್ಲಿಲ್ಲದ ಪ್ರಚಾರ ಪಡೆದುಕೊಳ್ಳುವ ಮೂಲಕ ಅಖಂಡ ಕರ್ನಾಟಕದ ಆಡಳಿತವನ್ನು ಹೊಸ ಮಾದರಿಯಲ್ಲಿ ಆರಂಭಿಸಿದ್ದಾರೆ. ಬೆಳಗಾವಿವರೆಗೆ ಹೋದರೂ, ಯಡಿಯೂರಪ್ಪ ಬರಿಗೈಲಿ ಹಿಂದುರಿಗಿದ್ದಾರೆ. ಅಂತರ ಕಾಯ್ದುಕೊಂಡ ಕಾಂಗ್ರೆಸ್ ಲಾಭವೂ ಇಲ್ಲದ, ನಷ್ಟವನ್ನೂ ಮಾಡಿಕೊಳ್ಳದೆ ವಿವಾದವನ್ನು ದಾಟಿಕೊಂಡಿದೆ.

ಬುಧವಾರ, ರಾಜ್ಯದ ಪ್ರಮುಖ ಪತ್ರಿಕೆಯಲ್ಲಿ, ‘ಅಭಿವೃದ್ಧಿಯ ಕರೆ; ಸೈ ಎಂದ ದೊರೆ’ ಎಂಬ ತಲೆಬರಹವನ್ನು ನೋಡಿದ ದೇವೇಗೌಡರು ಪದ್ಮನಾಭವನಗರದಲ್ಲಿ ಮಾರ್ಮಿಕವಾಗಿ ನಕ್ಕಿರಬಹುದು.