ಭಾರತದಲ್ಲಿ ಉನ್ನತ ಶಿಕ್ಷಣ: ಮುಕ್ಕಾಲು ಪಾಲು ಖಾಸಗಿ, ಕಾಲು ಭಾಗ ಸರಕಾರಿ
COVER STORY

ಭಾರತದಲ್ಲಿ ಉನ್ನತ ಶಿಕ್ಷಣ: ಮುಕ್ಕಾಲು ಪಾಲು ಖಾಸಗಿ, ಕಾಲು ಭಾಗ ಸರಕಾರಿ

ಇದು ಶಿಕ್ಷಣದ ಕುರಿತು ಅಧ್ಯಯನ ನಡೆಸುವವರ ಗಮನಕ್ಕೆ. ದೇಶ ಸಾಗುತ್ತಿರುವ ಹಾದಿಯಲ್ಲಿ ಶಿಕ್ಷಣ ವ್ಯವಸ್ಥೆ ಸಾಗುತ್ತಿರುವ ಪರಿಯನ್ನು ಇಂಚಿಂಚಾಗಿ ಇಲ್ಲಿ ಬಿಚ್ಚಿಡಲಾಗಿದೆ. 

Summary

ದೇಶದ ಕೃಷಿ, ಕೈಗಾರಿಕೆ, ಸೇವಾ ವಲಯಗಳು ಖಾಸಗೀಕರಣಕ್ಕೆ ಒಳಪಟ್ಟು ದಶಕಗಳು ಕಳೆಯುತ್ತಿವೆ; ಜತೆಗೆ, ಶಿಕ್ಷಣ ಕ್ಷೇತ್ರ ಕೂಡ. ಇಲ್ಲಿ ನಡೆಯುತ್ತಿರುವ ಖಾಸಗಿ ಆಕ್ರಮಣವನ್ನು ನೋಡಿದರೆ, ಭವಿಷ್ಯದ ಬಗ್ಗೆ ಭಯ ಮೂಡಿಸುತ್ತಿದೆ. ಸದ್ಯ ದೇಶದಲ್ಲಿ ಯುವ ಜನತೆಗೆ ಜ್ಞಾನ ನೀಡುತ್ತಿರುವ ದೇಶದ ಶೇ.75ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಖಾಸಗಿ ಸಂಸ್ಥೆಗಳ ಒಡೆತನದಲ್ಲಿವೆ. ಹೀಗೆ, ಮುಕ್ಕಾಲು ಪಾಲು ಉನ್ನತ ಶಿಕ್ಷಣ ಸಂಸ್ಥೆಗಳು ಖಾಸಗಿಯವರದ್ದು ಎಂದು ಹೇಳಿದ್ದು ಬೇರೆ ಯಾರೂ ಅಲ್ಲ; ಬದಲಿಗೆ ಸರಕಾರವೇ ತನ್ನ ಒಡೆತನದಲ್ಲಿ ಕೇವಲ ಕಾಲು ಭಾಗದ ಶಿಕ್ಷಣ ಸಂಸ್ಥೆಗಳಿವೆ ಎಂದಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರತಿ ವರ್ಷ ದೇಶದ ಉನ್ನತ ಶಿಕ್ಷಣದ ಕುರಿತು ವರದಿಯನ್ನು ಪ್ರಕಟಿಸುತ್ತದೆ. ದೇಶದಲ್ಲಿನ ಕಾಲೇಜುಗಳು, ವಿದ್ಯಾರ್ಥಿಗಳ ಪ್ರಮಾಣ, ಶಿಕ್ಷಣದ ಗುಣಮಟ್ಟ ಎಲ್ಲವನ್ನೂ ಕೂಡ ಸಮೀಕ್ಷೆ ಮೂಲಕ ಮೌಲ್ಯಮಾಪನ ಮಾಡಿ, ವರದಿ ಬಿಡುಗಡೆಗೊಳಿಸುತ್ತದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ 2017-18ನೇ ಸಾಲಿನ ‘ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆ’ಯ ವರದಿಯನ್ನು ಬಿಡುಗಡೆಗೊಳಿಸಿದ್ದಾರೆ. ಹಲವಾರು ಆಶ್ಚರ್ಯಕರ ಸಂಗತಿಗಳನ್ನು ಹೊಂದಿರುವ ಈ ವರದಿಯಲ್ಲಿ ಹೆಚ್ಚು ಚಿಂತನೆಗೆ ಹಚ್ಚುವ ವಿಷಯವೆಂದರೆ ಶಿಕ್ಷಣ ಕ್ಷೇತ್ರದಲ್ಲಿ ನಡೆದ ಖಾಸಗೀಕರಣ.

ಎಐಎಸ್‌ಎಚ್‌ಇ ವರದಿಯ ಮುಖಪುಟ.
ಎಐಎಸ್‌ಎಚ್‌ಇ ವರದಿಯ ಮುಖಪುಟ.

ವರದಿ ಹೇಳುವಂತೆ, ದೇಶದಲ್ಲಿ ಒಟ್ಟು 903 ವಿಶ್ವವಿದ್ಯಾಯಲಗಳಿವೆ. ಈ 903 ವಿಶ್ವವಿದ್ಯಾಲಯಗಳ ಪೈಕಿ ಸಮೀಕ್ಷೆಯಲ್ಲಿ ಪಾಲ್ಗೊಂಡ ವಿವಿಗಳ ಸಂಖ್ಯೆ 882. ಈ 882 ವಿವಿಗಳ ಪೈಕಿ 285 ವಿಶ್ವವಿದ್ಯಾಲಯಗಳ ಅಡಿಯಲ್ಲಿ ಹಲವು ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ.

ಇರುವ 903 ವಿಶ್ವವಿದ್ಯಾನಿಲಯಗಳ ಪೈಕಿ 560 ವಿವಿಗಳು ಸಾರ್ವಜನಿಕ ಬಂಡವಾಳದಲ್ಲಿ ನಡೆಯುತ್ತಿವೆ. ಈ ಕಾಲೇಜುಗಳ ಪೈಕಿ 343 ವಿಶ್ವ ವಿದ್ಯಾಲಯಗಳು ಖಾಸಗಿ ಸಂಸ್ಥೆಗಳು.

285 ವಿಶ್ವ ವಿದ್ಯಾಲಯಗಳ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾಲೇಜುಗಳ ಸಂಖ್ಯೆ 39,050. ಕಾಲೇಜುಗಳ ಅಡಳಿತದ ದೃಷ್ಟಿಯಿಂದ ನೋಡುವುದಾದರೆ ಶೇ.78ರಷ್ಟು ಕಾಲೇಜುಗಳು ಖಾಸಗಿ ಕಾಲೇಜುಗಳಾಗಿವೆ. ಈ ಕಾಲೇಜುಗಳಲ್ಲಿ ದೇಶದ ಶೇ.67.3ರಷ್ಟು ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಈ ಕಾಲೇಜುಗಳನ್ನು 2 ವರ್ಗಗಳಾಗಿ ವಿಗಂಡಿಸಿದ್ದು, ಅನುದಾನಿತವಲ್ಲದ ಖಾಸಗಿ ಕಾಲೇಜುಗಳು( 64.7%) ಒಟ್ಟು ಶೇ.46.7ರಷ್ಟು ವಿದ್ಯಾರ್ಥಿಗಳಿಗೂ, ಖಾಸಗಿ ಅನುದಾನಿತ ಕಾಲೇಜುಗಳು (13.3%) ದೇಶದ ಶೇ.20.6ರಷ್ಟು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿವೆ.

ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಟ್ಟು ಕಾಲೇಜುಗಳ ಪೈಕಿ ಶೇ.22ರಷ್ಟು ಮಾತ್ರ ಸರಕಾರಿ ಕಾಲೇಜುಗಳಾಗಿದ್ದು, ದೇಶದ ಶೇ.32.7ರಷ್ಟು ವಿದ್ಯಾರ್ಥಿಗಳು ಈ ಕಾಲೇಜುಗಳಲ್ಲಿ ಓದುತ್ತಿದ್ದಾರೆ.

ಕಳೆದ ವರ್ಷ ದೇಶಾದ್ಯಂತ ಒಟ್ಟು 1,147 ಕಾಲೇಜುಗಳು ಸ್ಥಾಪನೆಗೊಂಡಿವೆ. ಈ ಕಾಲೇಜುಗಳ ಪೈಕಿ 941 ಅಂದರೆ ಶೇ.82ರಷ್ಟು ಕಾಲೇಜುಗಳು ಖಾಸಗಿಯಾಗಿವೆ. ಇವುಗಳಲ್ಲಿ 834 ಅನುದಾನಿತವಲ್ಲದ ಖಾಸಗಿ ಕಾಲೇಜುಗಳು ಮತ್ತು 107 ಖಾಸಗಿ ಅನುದಾನಿತ ಕಾಲೇಜುಗಳಾಗಿವೆ.

ದೇಶದಲ್ಲಿರುವ ಸ್ವಾಯತ್ತ ಕಾಲೇಜುಗಳ ಸಂಖ್ಯೆ 10,011. ಇವುಗಳ ಪೈಕಿ ಶೇ.66.04 ರಷ್ಟು ಕಾಲೇಜುಗಳು ಖಾಸಗಿ ವ್ಯಕ್ತಿಗಳಿಗೆ ಸೇರಿವೆ. ಶೇ.9.43 ಕಾಲೇಜುಗಳು ಖಾಸಗಿ ಅನುದಾನಿತ ಕಾಲೇಜುಗಳಾಗಿವೆ. ಉಳಿದಿರುವ ಶೇ.24.53 ಅಂದರೆ 2,456 ಸ್ವಾಯತ್ತ ಕಾಲೇಜುಗಳಷ್ಟೇ ಸರಕಾರಿ ಸ್ವಾಮ್ಯದಲ್ಲಿವೆ. ಇಲ್ಲಿಯೂ ಕೂಡ ಶೇ. 75.47ರಷ್ಟು ಕಾಲೇಜುಗಳು ಖಾಸಗಿ ಸ್ವಾಮ್ಯಕ್ಕೆ ಒಳಪಟ್ಟಿವೆ. ಶಿಕ್ಷಣ ವ್ಯವಸ್ಥೆ ಯಾವ ಹಂತಕ್ಕೆ ಖಾಸಗೀಕರಣಗೊಂಡಿದೆ ಎನ್ನುವುದಕ್ಕೆ ಈ ಕಾಲೇಜುಗಳ ಲೆಕ್ಕಾಚಾರವೇ ಸ್ಪಷ್ಟ ಉದಾಹರಣೆಯಾಗಿ ನಿಲ್ಲುತ್ತದೆ.

ಖಾಸಗೀಕರಣದತ್ತ ಸಾಗುತ್ತಿದೆ ಭಾರತದ ಶಿಕ್ಷಣ:

ಭಾರತದಲ್ಲಿ ಉನ್ನತ ಶಿಕ್ಷಣ: ಮುಕ್ಕಾಲು ಪಾಲು ಖಾಸಗಿ, ಕಾಲು ಭಾಗ ಸರಕಾರಿ

ಅಖಿಲ ಭಾರತ ಉನ್ನತ ಶಿಕ್ಷಣ ಸಮೀಕ್ಷೆಯ 2013-14ನೇ ಸಾಲಿನ ವರದಿಯ ಪ್ರಕಾರ ದೇಶದಲ್ಲಿ 723 ವಿಶ್ವವಿದ್ಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದು, ಅವುಗಳಲ್ಲಿ 702 ವಿಶ್ವವಿದ್ಯಾಲಯಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದವು. ಅವುಗಳ ಪೈಕಿ ಶೇ.32ರಷ್ಟು, ಅಂದರೆ 219 ವಿವಿಗಳು ಖಾಸಗಿ ವ್ಯಕ್ತಿಗಳಿಗೆ ಸೇರಿದ್ದವು. 2018ರ ವೇಳೆಗೆ ಒಟ್ಟು ವಿಶ್ವ ವಿದ್ಯಾಲಯಗಳ ಸಂಖ್ಯೆ 903ಕ್ಕೆ ಏರಿಕೆಯಾಗಿದ್ದು, ಖಾಸಗಿ ವಿವಿಗಳ ಪ್ರಮಾಣ ಶೇ.38ಕ್ಕೆ ಏರಿಕೆಯಾಗಿದೆ.

2013-14ರಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯಗಳ ಸಂಖ್ಯೆ 42 ಇತ್ತು. 2018ರ ವೇಳೆಗೆ ಈ ಸಂಖ್ಯೆ 45 ಆಗಿದೆ. 2014ರಲ್ಲಿ ರಾಜ್ಯ ಸರಕಾರದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಿಶ್ವವಿದ್ಯಾಲಯಗಳು 309 ಆಗಿತ್ತು, ಈಗ ಈ ವಿವಿಗಳ ಸಂಖ್ಯೆ 351 ಆಗಿದೆ. ಸರಕಾರಿ ಹಾಗೂ ಸರಕಾರಿ ಅನುದಾನಿತ ಕಾಲೇಜುಗಳು 47ರಿಂದ 43ಕ್ಕೆ ಕುಸಿತ ಕಂಡಿವೆ. ಬಾರಿ ಹೆಚ್ಚಳ ಕಂಡುಬಂದಿರುವುದು ಖಾಸಗಿ ವಿವಿಗಳ ಸಂಖ್ಯೆಯಲ್ಲಿ. 2014ರಲ್ಲಿ 153 ಇದ್ದ ಖಾಸಗಿ ವಿವಿಗಳು 2018ಕ್ಕೆ 262ಕ್ಕೆ ಏರಿಕೆಯಾಗಿವೆ. ಇತರೆ ವಿವಿಗಳ ಸಂಖ್ಯೆ 68ರಿಂದ 101ಕ್ಕೆ ಏರಿಕೆಯಾಗಿದೆ.

ಕಾಲೇಜುಗಳ ಸಂಖ್ಯೆಯಲ್ಲೂ ಸಹ ಖಾಸಗಿ ಕಾಲೇಜುಗಳೇ ಅಭಿವೃದ್ಧಿ ಕಾಣುತ್ತಿವೆ. 2013-14ನೇ ಸಾಲಿನಲ್ಲಿ 36,634 ಇದ್ದ ಕಾಲೇಜುಗಳ ಸಂಖ್ಯೆ 39,050ಕ್ಕೆ ತಲುಪಿದೆ. 2014ರಲ್ಲಿ ಶೇ.75ರಷ್ಟಿದ್ದ ಖಾಸಗಿ ಕಾಲೇಜುಗಳು (ಶೇ.60ರಷ್ಟು ಖಾಸಗಿ ಹಾಗೂ ಶೇ.15ರಷ್ಟು ಖಾಸಗಿ ಅನುದಾನಿತ) 2018ರ ವೇಳೆಗೆ ಶೇ.78ನ್ನು ತಲುಪಿವೆ. ಇದೇ ವೇಳೆ ಸರಕಾರಿ ವಿವಿಗಳ ಸಂಖ್ಯೆ ಶೇ.25ರಿಂದ ಶೇ.22ಕ್ಕೆ ಕುಸಿತ ಕಂಡಿದೆ.

ಒಂದೆಡೆ ಖಾಸಗಿ ಕಾಲೇಜುಗಳು ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ, ಮತ್ತೊಂದೆಡೆ ಸರಕಾರಿ ಕಾಲೇಜುಗಳು ದಿನದಿಂದ ದಿನಕ್ಕೆ ಸೊರಗುತ್ತಿವೆ. ವಿದ್ಯಾರ್ಥಿಗಳ ದಾಖಲಾತಿ ಸಂಖ್ಯೆಯಲ್ಲೂ ಕೂಡ ಇದೇ ಬದಲಾವಣೆ ಕಾಣಿಸುತ್ತಿದೆ. 2013-14ರಲ್ಲಿ ಕಾಲೇಜುಗಳಿಗೆ ದಾಖಲಾಗಿದ್ದ ವಿದ್ಯಾರ್ಥಿಗಳ ಪ್ರಮಾಣದಲ್ಲಿ ಶೇ.65ರಷ್ಟು ಪಾಲನ್ನು ಖಾಸಗಿ ಸಂಸ್ಥೆಗಳು ಹೊಂದಿದ್ದವು. ಉಳಿದ ಶೇ.35ರಷ್ಟು ವಿದ್ಯಾರ್ಥಿಗಳು ಸರಕಾರಿ ಕಾಲೇಜುಗಳಿಗೆ ದಾಖಲಾಗಿದ್ದರು. 2017-18ರ ವೇಳೆಗೆ ಖಾಸಗಿ ಕಾಲೇಜುಗಳಿಗೆ ದಾಖಲಾಗಿರುವ ವಿದ್ಯಾರ್ಥಿಗಳ ಪ್ರಮಾಣ ಶೇ. 67.3ಕ್ಕೆ ಏರಿಕೆಯಾಗಿದೆ. ಸರಕಾರಿ ಕಾಲೇಜುಗಳು 32.7ರಷ್ಟು ದಾಖಲಾತಿಯನ್ನು ಹೊಂದುವ ಮೂಲಕ ತಮ್ಮ ಮಾನ್ಯತೆಯನ್ನು ಕಳೆದುಕೊಳ್ಳುತ್ತಿವೆ.

ಏಕೆ ಕುಸಿಯುತ್ತಿವೆ ಸರಕಾರಿ ಕಾಲೇಜುಗಳು?:

ಸಾಮಾಜಿಕ ಕಾರ್ಯಕರ್ತ ಡಾ.ವಾಸು ಹೇಳುವಂತೆ, “ಹಲವು ವರ್ಷಗಳಿಂದ ಸರಕಾರಿ ಶಾಲೆಗಳಲ್ಲಿದ್ದ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಓಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಬಜೆಟ್‌ ಮಂಡನೆಯ ವೇಳೆ ಪ್ರಸ್ತಾಪಿಸಿದ 28,000 ಸರಕಾರಿ ಶಾಲೆಗಳ ಮುಚ್ಚುವಿಕೆಯು ಇದರ ಭಾಗವಾಗಿಯೇ ಗೋಚರಿಸುತ್ತದೆ. ಈಗ ಈ ಪ್ರಕ್ರಿಯೆ ಉನ್ನತ ಶಿಕ್ಷಣದ ಹಂತಕ್ಕೂ ನಿಧಾನವಾಗಿ ಕಾಲಿಡುತ್ತಿದೆ. ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಮಟ್ಟದಲ್ಲಿ ಈ ಕಾರ್ಯ ಜೋರಾಗಿಯೇ ನಡೆಯುತ್ತಿದ್ದು, ವಿಶ್ವ ವಿದ್ಯಾಲಯಗಳ ಹಂತದಲ್ಲಿ ಇನ್ನೂ ನಿಧಾನಗತಿಯಲ್ಲಿದೆ.”

ಇತ್ತೀಚಿಗಷ್ಟೇ ಚಿತ್ರದುರ್ಗದ ಒಂದು ಸರಕಾರಿ ಕಾಲೇಜಿಗೆ ಭೇಟಿ ನೀಡಿದ್ದೆ. ಆ ಕಾಲೇಜಿಗೆ ತನ್ನದೇ ಆದ ಸ್ವಂತ ಕಟ್ಟಡವಿಲ್ಲ. ಅಲ್ಲಿರುವ ಸೌಲಭ್ಯಗಳೂ ಕೂಡ ಅಷ್ಟಕಷ್ಟೇ. ಉತ್ತಮ ಗುಣಮಟ್ಟದ ಶಿಕ್ಷಣವೂ ದೊರೆಯುತ್ತಿಲ್ಲ. ದೇಶದ ಹಲವಾರು ಕಾಲೇಜುಗಳು ಇಂತಹದ್ದೇ ಪರಿಸ್ಥಿತಿಯಲ್ಲಿವೆ. ಸರಕಾರಿ ಕಾಲೇಜುಗಳಿಗೆ ನೀಡುತ್ತಿರುವ ಅನುದಾನವನ್ನು ಕಡಿಮೆಗೊಳಿಸಲು ಬೇರೆ ಬೇರೆ ದಾರಿಗಳನ್ನ ಕೂಡ ಹುಡುಕಿಕೊಳ್ಳಲಾಗಿದೆ. ಕಡಿಮೆ ಗುಣಮಟ್ಟದ ಶಿಕ್ಷಣದ ಕಾರಣದಿಂದಾಗಿ ಪೋಷಕರು ಅನಿವಾರ್ಯವಾಗಿ ಖಾಸಗಿ ಕಾಲೇಜುಗಳತ್ತ ಮುಖ ಮಾಡುತ್ತಿದ್ದಾರೆ. ಈ ಕಳಪೆ ಗುಣಮಟ್ಟದ ಶಿಕ್ಷಣ ಕೂಡ ಶಿಕ್ಷಣದ ಖಾಸಗೀಕರಣಕ್ಕೆ ಹಿಂಬಾಗಿಲ ದಾರಿಯಾಗಿದೆ. 
– ಡಾ. ವಾಸು, ಸಾಮಾಜಿಕ ಕಾರ್ಯಕರ್ತ.

ವಿದ್ಯಾರ್ಥಿಗಳೂ ಕೂಡ ಏಕೆ ಖಾಸಗಿ ಕಾಲೇಜು, ವಿವಿಗಳತ್ತ ಮುಖ ಮಾಡುತ್ತಿದ್ದಾರೆ ಎನ್ನುವುದಕ್ಕೆ ನಮ್ಮ ಬೆಂಗಳೂರು ವಿಶ್ವವಿದ್ಯಾಲಯವೇ ಸಾಕ್ಷಿಯಾಗಿ ನಿಲ್ಲುತ್ತದೆ ಎನ್ನುತ್ತಾರೆ ವಾಸು. “ಬೆಂಗಳೂರು ವಿವಿಯ ಕೆಲವು ವಿಭಾಗಗಳಲ್ಲಿ ಖಾಯಂ ಪ್ರಾಧ್ಯಾಪಕರಿಲ್ಲ. ಸೋಷಿಯಲ್‌ ವರ್ಕ್‌ ಮತ್ತು ಮಹಿಳಾ ವಿಭಾಗಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಬೇರೆ ಯಾವುದೋ ಕೋರ್ಸ್‌ ಮಾಡಿ ಬಂದಿರುವ ಒಬ್ಬರನ್ನು ಖಾಯಂ ಪ್ರಾಧ್ಯಾಪಕರನ್ನಾಗಿ ನೇಮಿಸಿಕೊಳ್ಳಲಾಗಿದೆ. ಉಳಿದವರೆಲ್ಲರೂ ಅತಿಥಿ ಉಪನ್ಯಾಸಕರು. ಇಂತಹದ್ದೇ ಪರಿಸ್ಥಿತಿ ಎಲ್ಲಾ ಸರಕಾರಿ ಕಾಲೇಜು ಮತ್ತು ವಿವಿಗಳಲ್ಲಿದೆ. ಸರಿಯಾದ ಬೋಧಕ ಸಿಬ್ಬಂದಿಯಿಲ್ಲ, ಪ್ರಯೋಗಾಲಯ, ಗ್ರಂಥಾಲಯಗಳಿಲ್ಲ. ಇದರಿಂದಾಗಿ ಕಾಲೇಜುಗಳ ಗುಣಮಟ್ಟ ಕುಸಿಯುತ್ತಿದೆ. ಪರಿಣಾಮವಾಗಿ ಖಾಸಗಿ ಕಾಲೇಜುಗಳ ಮಾನ್ಯತೆ ಹೆಚ್ಚಾಗುತ್ತಿದೆ.” ಎನ್ನುತ್ತಾರೆ ವಾಸು.

ಖಾಸಗಿ ಮತ್ತು ಸರಕಾರಿ ಕಾಲೇಜುಗಳ ಸಂಖ್ಯೆ ಮತ್ತು ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳ ಪ್ರಮಾಣವನ್ನು ತಾಳೆ ಹಾಕಿ ನೋಡುವುದಾದರೆ ಇಂದಿಗೂ ಕೂಡ ಸರಕಾರಿ ಕಾಲೇಜುಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. 2017-18ನೇ ಸಾಲಿನಲ್ಲಿ ದೇಶಾದ್ಯಂತ ಉನ್ನತ ಶಿಕ್ಷಣ ಪಡೆಯುತ್ತಿರುವ 18 ರಿಂದ 23 ವಯಸ್ಸಿನ ಯುವಜನರ ಸಂಖ್ಯೆ 3.66 ಕೋಟಿ. ಶಿಕ್ಷಣ ಕ್ಷೇತ್ರದಲ್ಲಿರುವ ಒಟ್ಟು ಶೇಕಡಾ 78ರಷ್ಟು ಖಾಸಗಿ ಕಾಲೇಜುಗಳಲ್ಲಿ ಒಟ್ಟು 2.46 ಕೋಟಿ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದ್ರೆ, ಕೇವಲ ಶೇಕಡಾ 22ರಷ್ಟಿರುವ ಸರ್ಕಾರಿ ಕಾಲೇಜುಗಳಲ್ಲಿ ಬರೋಬ್ಬರಿ 1.20 ಕೋಟಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇದು ಕಡಿಮೆ ಸಂಖ್ಯೆಯ ಸರ್ಕಾರಿ ಕಾಲೇಜುಗಳಲ್ಲಿ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಎನ್ನುವುದಕ್ಕೆ ಉದಾಹರಣೆ. ಇದು ಸಹ ಸರ್ಕಾರಿ ಕಾಲೇಜುಗಳ ಶಿಕ್ಷಣದ ಗುಣಮಟ್ಟ ಕುಸಿಯಲು ಒಂದು ಕಾರಣ.

ಈ 1.20 ಕೋಟಿ ವಿದ್ಯಾರ್ಥಿಗಳ ಪೈಕಿ ಬಹುಪಾಲು ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಸೇರಿದವರು. ಖಾಸಗಿ ಕಾಲೇಜುಗಳ ಶುಲ್ಕ ಭರಿಸಲಾಗದೇ, ಸರಕಾರಿ ಕಾಲೇಜುಗಳ ಮೊರೆ ಹೋಗಿದ್ದಾರೆ. ಒಂದು ವೇಳೆ ಸರಕಾರಿ ಶಿಕ್ಷಣ ಸಂಸ್ಥೆಗಳ ಸ್ಥಾನವನ್ನೆಲ್ಲಾ ಖಾಸಗಿ ಕಾಲೇಜುಗಳೇ ಆಕ್ರಮಿಸಿಕೊಂಡರೆ ಈ ವಿದ್ಯಾರ್ಥಿಗಳು ಶಿಕ್ಷಣದಿಂದಲೇ ದೂರ ಉಳಿಯುವ ಸಾಧ್ಯತೆಗಳು ನಿಚ್ಚಳವಾಗಿವೆ.

ಸರಕಾರಗಳೇಕೆ ಖಾಸಗಿ ಸಂಸ್ಥೆಗಳಿಗೆ ಮಣೆ ಹಾಕುತ್ತಿವೆ?:

ಖಾಸಗೀಕರಣ ಎನ್ನುವುದು ಭಾರತ ಮಾತ್ರವಲ್ಲ, ಇಡೀ ವಿಶ್ವದಲ್ಲಿಯೇ ನಡೆಯುತ್ತಿರುವ ಅಂತರರಾಷ್ಟ್ರೀಯ ಪಿತೂರಿ ಎನ್ನುತ್ತಾರೆ ಶಿಕ್ಷಣ ತಜ್ಞ ನಿರಂಜನ್‌ ಅರಾಧ್ಯ. “ಖಾಸಗೀಕರಣ ಮತ್ತು ಜಾಗತೀಕರಣದ ಭಾಗವಾಗಿ ಖಾಸಗಿ ಒಡೆತನದ ಬಗ್ಗೆ ವ್ಯವಸ್ಥಿತವಾದ ಪ್ರಚಾರ ನಡೆಯುತ್ತಿದೆ. ಸರಕಾರಿ ಸ್ವಾಮ್ಯದಲ್ಲಿರುವುದು ಎಲ್ಲವೂ ಕೂಡ ಕನಿಷ್ಟ. ಕಳಪೆ ಗುಣಮಟ್ಟದ ಸೌಲಭ್ಯಗಳನ್ನು ಸರಕಾರಿ ಒಡೆತನದ ಸಂಸ್ಥೆಗಳು ಹೊಂದಿರುತ್ತವೆ ಎಂಬ ಭಾವನೆಯನ್ನು ಬಿತ್ತಲಾಗುತ್ತಿದೆ. ಜತೆಗೆ ಖಾಸಗಿ ಸಂಸ್ಥೆಗಳೇ ಶ್ರೇಷ್ಟ ಎಂಬ ಮನಸ್ಥಿತಿಯನ್ನು ಜಾಗತಿಕ ಮಟ್ಟದಲ್ಲಿ ಹುಟ್ಟುಹಾಕಲಾಗುತ್ತಿದೆ. ಇದರ ಹಿಂದಿನ ಉದ್ದೇಶ ಲಾಭವಷ್ಟೇ,” ಎನ್ನುವುದು ನಿರಂಜನ್‌ ಅರಾಧ್ಯರ ಅಭಿಪ್ರಾಯ.

ಇಂದು ಆರೋಗ್ಯ, ಶಿಕ್ಷಣ ಸೇರಿದಂತೆ ಎಲ್ಲಾ ಮೂಲಭೂತ ಸೇವೆಗಳನ್ನು ಖಾಸಗಿ ವ್ಯಕ್ತಿಗಳಿಗೆ ಒಪ್ಪಿಸಿದರೆ ಹೆಚ್ಚಿನ ಲಾಭ ದೊರೆಯುತ್ತದೆ ಎನ್ನುವುದು ಅಧಿಕಾರದಲ್ಲಿರುವವರಿಗೆ ಮನದಟ್ಟಾಗಿದೆ. ಉತ್ಪಾದನಾ ವಲಯಕ್ಕಿಂತ ಸೇವಾ ವಲಯದಲ್ಲಿ ಸಿಗುವ ಲಾಭ ಹೆಚ್ಚು. ಆದ್ದರಿಂದ ಹೆಚ್ಚು ಹೆಚ್ಚು ಖಾಸಗೀಕರಣಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಶಿಕ್ಷಣ ಎನ್ನುವುದು ಕೇವಲ ಉದ್ಯೋಗಕ್ಕೆ ಮಾತ್ರವಲ್ಲ, ಅದು ದೇಶದ ಒಳಿತಿಗೆ ದಾರಿಯಾಗುತ್ತದೆ. ಆದರೆ ಸರಕಾರಗಳು ಇದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ.
- ನಿರಂಜನ್‌ ಅರಾಧ್ಯ, ಶಿಕ್ಷಣ ತಜ್ಞರು.

ಶಿಕ್ಷಣ ಕ್ಷೇತ್ರದಲ್ಲಿ ಖಾಸಗೀಕರಣದ ಆಕ್ರಮಣ ಹೀಗೆ ಮುಂದುವರಿದರೆ, ಮೊದಲು ದೇಶದ ಎಸ್‌ಸಿ/ಎಸ್‌ಟಿ ಸೇರಿದಂತೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವ ವರ್ಗಗಳು ಹೊಡೆತ ತಿನ್ನುತ್ತವೆ. ಇಡೀ ದೇಶ ಖಾಸಗೀಕರಣಗೊಂಡರೆ ಲಾಭ ಮುಖ್ಯವಾಗುತ್ತದೆಯೇ ಹೊರತು ದೇಶದ ಒಳಿತಲ್ಲ. ಇದನ್ನು ಅರಿತಿದ್ದರೂ ಕೂಡ ಆಳುವ ಸರಕಾರಗಳು ಇದರತ್ತ ದಿವ್ಯ ನಿರ್ಲಕ್ಷ್ಯ ವಹಿಸಿವೆ, ಜಾಣ ಕುರುಡನ್ನು ಪ್ರದರ್ಶಿಸುತ್ತಿವೆ. ಇರುವ ಅಲ್ಪ ಪ್ರಮಾಣದ ಸರಕಾರಿ ಸ್ವಾಯತ್ತತೆಯನ್ನೂ ಕೂಡ ಕಡೆಗಣಿಸಿ, ಖಾಸಗಿ ವ್ಯಕ್ತಿಗಳಿಗೆ ರತ್ನಗಂಬಳಿ ಹಾಸುವ ಪ್ರಕ್ರಿಯೆ ಕೊನೆಗೊಳ್ಳುವ ಯಾವ ಸೂಚನೆಯೂ ಸದ್ಯಕ್ಕಿಲ್ಲ.