‘ರಿಲಯನ್ಸ್‌ ರಿಟೇಲ್‌’ಗೆ ರತ್ನಗಂಬಳಿ; ಮೋದಿ ಸರಕಾರದ ಹೊಸ ‘ಇ-ಕಾಮರ್ಸ್‌ ಪಾಲಿಸಿ’
COVER STORY

‘ರಿಲಯನ್ಸ್‌ ರಿಟೇಲ್‌’ಗೆ ರತ್ನಗಂಬಳಿ; ಮೋದಿ ಸರಕಾರದ ಹೊಸ ‘ಇ-ಕಾಮರ್ಸ್‌ ಪಾಲಿಸಿ’

ಇ-ಕಾಮರ್ಸ್‌ ಮಾರುಕಟ್ಟೆಗೆ ದಾಗುಂಡಿ ಇಡಲು ಅಂಬಾನಿ ಒಡೆತನದ ‘ರಿಲಯನ್ಸ್‌ ರಿಟೇಲ್‌’ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಕೇಂದ್ರ ಸರಕಾರ ಮೊದಲ ಬಾರಿಗೆ ದೇಶದಲ್ಲಿ ಇ-ಕಾಮರ್ಸ್‌ ಪಾಲಿಸಿ ತರಲು ಹೊರಟಿದೆ. ಮತ್ತದು ಅಂಬಾನಿಗೆ ಲಾಭ ತರುವಂತಿದೆ.

ದೇಶದ ಜನರೆಲ್ಲಾ ‘ಟೈಮ್‌ ಸರಿಯಾಗಿಲ್ಲ’ ಎಂದು ಗೊಣಗುತ್ತಿದ್ದಾರೆ. ಆದರೆ ಮುಖೇಶ್‌ ಅಂಬಾನಿಯ ‘ಟೈಮ್‌’ ಮಾತ್ರ ಸರಿಯಾಗಿದೆ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಬೃಹತ್‌ ಇ-ಕಾಮರ್ಸ್‌ ಮಾರುಕಟ್ಟೆಗೆ ದಾಗುಂಡಿ ಇಡಲು ಅವರ ಒಡೆತನದ ‘ರಿಲಯನ್ಸ್‌ ರಿಟೇಲ್‌’ ಸಿದ್ಧತೆ ನಡೆಸುತ್ತಿದೆ. ಅದೇ ವೇಳೆ, ಕೇಂದ್ರ ಸರಕಾರ ಇದೇ ಮೊದಲ ಬಾರಿಗೆ ದೇಶದಲ್ಲಿ ಇ-ಕಾಮರ್ಸ್‌ ಪಾಲಿಸಿ ತರಲು ಹೊರಟಿದೆ. ಮತ್ತದು ‘ಇಂಡಿಯಾ ಫಸ್ಟ್‌’ ನೀತಿಗೆ ಒತ್ತು ನೀಡುತ್ತಿದ್ದು, ಇದು ಪರೋಕ್ಷವಾಗಿ ರಿಲಯನ್ಸ್‌ ಸಂಸ್ಥೆಗೆ ಕೇಂದ್ರ ಸರಕಾರದ ರತ್ನಗಂಬಳಿಯಾಗುವ ಸಾಧ್ಯತೆ ಇದೆ.

ಇಲ್ಲಿಯವರೆಗೆ ದೇಶದ ಇ-ಕಾಮರ್ಸ್‌ ವಲಯವನ್ನು ಆಳುತ್ತಾ ಬಂದವರು ಅಮೆಜಾನ್‌, ಫ್ಲಿಪ್‌ಕಾರ್ಟ್‌ ಮತ್ತು ಸ್ನಾಪ್‌ಡೀಲ್‌. ಇದರಲ್ಲಿ ಸ್ನಾಪ್‌ಡೀಲ್‌ ಮುಗ್ಗರಿಸಿದ್ದು ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ದೇಶದ ಶೇಕಡಾ 55-60ರಷ್ಟು ಆನ್‌ಲೈನ್‌ ಮಾರುಕಟ್ಟೆಯನ್ನು ಆಳುತ್ತಿವೆ. ಇದರಲ್ಲಿ ಅಮೆಜಾನ್‌ ಅಮೆರಿಕಾ ಮೂಲದ್ದಾಗಿದ್ದರೆ, ಫ್ಲಿಪ್‌ಕಾರ್ಟ್‌ನ್ನೂ ಇತ್ತೀಚೆಗೆ ಅಮೆರಿಕಾ ಮೂಲದ ವಾಲ್‌ಮಾರ್ಟ್‌ ಖರೀದಿಸಿದೆ.

ಎರಡೂ ಅಮೆರಿಕಾ ಕಂಪನಿಗಳ ನಡುವೆ ಮಾರುಕಟ್ಟೆಯಲ್ಲಿ ಪೈಪೋಟಿ ಜಾರಿಯಲ್ಲಿರುವ ಹೊತ್ತಲ್ಲೇ ಮುಖೇಶ್ ಅಂಬಾನಿಯ ರಂಗ ಪ್ರವೇಶವಾಗಿದೆ. “ಸ್ಮಾರ್ಟ್‌ಫೋನ್‌, ಟಿವಿ, ಫ್ರಿಡ್ಜ್‌ ಮತ್ತು ಏರ್‌ ಕಂಡೀಷನ್‌ಗಳ ಮಾರಾಟಕ್ಕೆ ರಿಲಯನ್ಸ್‌ ಇಳಿಯಲಿದೆ,” ಎಂದು ಕಂಪನಿಯ ಇಬ್ಬರು ಹಿರಿಯ ಅಧಿಕಾರಿಗಳು ಹೇಳಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ‘ರಿಲಯನ್ಸ್‌ ರಿಟೇಲ್‌’ ಹೆಸರಿನಲ್ಲೇ ಇ-ಕಾಮರ್ಸ್‌ ಉದ್ಯಮ ಕಟ್ಟಲು ಮುಖೇಶ್ ಅಂಬಾನಿ ನಿರ್ಧರಿಸಿದ್ದಾರೆ. ಮತ್ತು ಈ ಬಾರಿ ದೇಶದ ಮೂಲೆ ಮೂಲೆ, ಹಳ್ಳಿ ಹಳ್ಳಿಗೂ ಉತ್ಪನ್ನಗಳನ್ನು ತಲುಪಿಸುವ ಯೋಜನೆ ಹಾಕಿಕೊಂಡಿದ್ದಾರೆ.

ಹಾಗೆ ನೋಡಿದರೆ ರಿಲಯನ್ಸ್‌ ಕಡೆಯಿಂದ ಈಗಾಗಲೇ ಎಜಿಯೋ (Ajio.com), ರಿಲಯನ್ಸ್‌ ಟ್ರೆಂಡ್ಸ್‌, ರಿಲಯನ್ಸ್‌ ಮಾರ್ಟ್‌, ರಿಲಯನ್ಸ್‌ ಡಿಜಿಟಲ್‌ ಮೊದಲಾದ ಇ-ಕಾಮರ್ಸ್‌ ತಾಣಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲಾ ಸಣ್ಣ ಪ್ರಮಾಣದ ಮಾರುಕಟ್ಟೆಗಳನ್ನು ಆಕ್ರಮಿಸಿಕೊಂಡಿದ್ದು, ಇದೀಗ ದೇಶದಾದ್ಯಂತ ಇರುವ ಮಾರುಕಟ್ಟೆಯನ್ನು ಕಬಳಿಸಲು ಕಂಪನಿ ಮುಂದಾಗಿದೆ. ಇದಕ್ಕೆ ಬೇಕಾದ ಬೃಹತ್‌ ವೇದಿಕೆಯನ್ನು ಕಂಪನಿ ಸಿದ್ಧಪಡಿಸುತ್ತಿದೆ.

ಕಾಕತಾಳಿಯವೋ ಉದ್ದೇಶಪೂರ್ವಕವೋ ಗೊತ್ತಿಲ್ಲ; ರಿಲಯನ್ಸ್‌ ರಿಟೇಲ್‌ ಆರಂಭಕ್ಕೂ ಮುನ್ನ ಕೇಂದ್ರ ಸರಕಾರ ಇ-ಕಾಮರ್ಸ್‌ ಪಾಲಿಸಿ ತರಲು ಹೊರಟಿದೆ. ಇದರ ಕರಡು ಕೂಡ ಸಿದ್ಧವಾಗಿದೆ. ಆನ್‌ಲೈನ್‌ ಮಾರುಕಟ್ಟೆಯ ಮೇಲೆ ‘ಸರಕಾರದ ನಿಯಂತ್ರಣ’ ಸಾಧಿಸಲು ಕಾನೂನುಗಳನ್ನು ರೂಪಿಸಲಾಗುತ್ತಿದೆ.

ಕರಡು ನೀತಿಯ ಅತ್ಯಂತ ಪ್ರಮುಖ ಅಂಶವೆಂದರೆ, ಯಾವುದೇ ಕಂಪನಿ ತನ್ನ ಅಧೀನ ಕಂಪನಿ ಅಥವಾ ಸಂಬಂಧವಿರುವ ಕಂಪನಿಯ ಮೂಲಕ ಭಾರಿ ಪ್ರಮಾಣದಲ್ಲಿ ಉತ್ಪನ್ನಗಳನ್ನು ಖರೀದಿಸಿ, ಮಾರುಕಟ್ಟೆಯಲ್ಲಿ ದರಗಳ ಮೇಲೆ ಪ್ರಭಾವ ಬೀರುವುದನ್ನು ನಿಷೇಧಿಸಲಾಗಿದೆ. ಇದರಿಂದ ದರ ಸಮರಕ್ಕೆ ಒಂದು ಹಂತಕ್ಕೆ ಕಡಿವಾಣ ಬೀಳಲಿದೆ.

ಇನ್ನೊಂದು ಕಡೆ ಭಾರತೀಯ ಮೂಲದ ಆನ್‌ಲೈನ್‌ ಕಂಪನಿಗಳಿಗೆ ಶೇ.100ರಷ್ಟು ದೇಶೀಯವಾಗಿ ಉತ್ಪಾದಿಸಿದ ಉತ್ಪನ್ನಗಳನ್ನು ದಾಸ್ತಾನು ಇಟ್ಟುಕೊಳ್ಳಲು ಅವಕಾಶ ನೀಡಬೇಕು ಎಂದು ಇದರಲ್ಲಿ ಹೇಳಲಾಗಿದೆ. ಈ ರಿಯಾಯಿತಿ ವಿದೇಶಿ ಮೂಲದ ಇ-ಕಾಮರ್ಸ್‌ ಕಂಪನಿಗಳಾದ ಅಮೆಜಾನ್‌ ಮತ್ತು ವಿದೇಶಿ ಹೂಡಿಕೆಯ ಪ್ರಾಬಲ್ಯ ಹೊಂದಿರುವ ಫ್ಲಿಪ್‌ಕಾರ್ಟ್‌ಗೆ ಸಿಗಲಾರದು. ಇದು ಬರಲಿರುವ ರಿಲಯನ್ಸ್‌ ರಿಟೇಲ್‌ಗೆ ಮಾತ್ರವೇ ಅತ್ಯುತ್ತಮ ಅವಕಾಶವನ್ನು ಒದಗಿಸಿದಂತಾಗುತ್ತದೆ.

ಇದರಾಚೆಗೆ ಶೇ.49 ಮೀರದಂತೆ ವಿದೇಶಿ ಹೂಡಿಕೆ ಹೊಂದಿರುವ ಇ-ಕಾಮರ್ಸ್‌ ಕಂಪನಿಗಳಲ್ಲಿ ಭಾರತೀಯ ಮೂಲದ ಸ್ಥಾಪಕರಿಗೆ ಹೆಚ್ಚಿನ ಹಕ್ಕು, ಅಧಿಕಾರ ಒದಗಿಸುವಂತೆಯೂ ಕರಡು ನೀತಿಯಲ್ಲಿ ಶಿಫಾರಸ್ಸು ಮಾಡಲಾಗಿದೆ. ಇ-ಕಾಮರ್ಸ್‌ ವಲಯದಲ್ಲಿ ಅಹವಾಲುಗಳು, ವಿದೇಶಿ ಹೂಡಿಕೆ ಕುರಿತ ವಿವಾದಗಳನ್ನು ನಿರ್ವಹಿಸಲು ಜಾರಿ ನಿರ್ದೇಶನಾಲಯದಲ್ಲಿ ಪ್ರತ್ಯೇಕ ವಿಭಾಗ ತೆರೆಯುವುದೂ ಇದರಲ್ಲಿ ಸೇರಿದೆ. ಇ-ಕಾಮರ್ಸ್‌ ಕಂಪನಿಗಳು ಘೋಷಿಸುವ ಭಾರಿ ದರ ಕಡಿತಗಳಿಗೆ ನಿರ್ದಿಷ್ಟ ಗರಿಷ್ಠ ಅವಧಿಯನ್ನು ನಿಗದಿಪಡಿಸಬೇಕು. ಇದರಿಂದ ಮಾರುಕಟ್ಟೆಯಲ್ಲಿ ದರ ನಿಯಂತ್ರಣ ಸಾಧ್ಯ ಎಂದು ಕರಡು ನೀತಿಯಲ್ಲಿ ಸಲಹೆ ನೀಡಲಾಗಿದೆ.

ಒಟ್ಟಾರೆ ಪಾಲಿಸಿಯಲ್ಲಿ ಇಂಡಿಯಾ ಫಸ್ಟ್‌ ನೀತಿಗೆ ಒತ್ತು ನೀಡಲಾಗಿದೆ. ಮೇಲ್ನೋಟಕ್ಕೆ ಇದು ದೇಶೀಯ ಹೂಡಿಕೆ ಮತ್ತು ‘ಮೇಕ್‌ ಇನ್ ಇಂಡಿಯಾ’ವನ್ನು ಉತ್ತೇಜಿಸುವ ಪ್ರಕ್ರಿಯೆಯಂತೆ ಕಾಣುತ್ತಿದ್ದರೂ ಆಳದಲ್ಲಿ ಅಂಬಾನಿ ಕುಟುಂಬದ ಉದ್ಯಮ ‘ಅಜೆಂಡಾ’ ಕೆಲಸ ಮಾಡುತ್ತಿವೆ. ಅಂದಹಾಗೆ, ಪ್ರಧಾನಿ ಮೋದಿ ಸರಕಾರ ‘ಸೂಟ್ ಬೂಟ್’ ಸರಕಾರ ಎಂದು ಮೊದಲಿಕೆಗೆ ಗುರಿಯಾಗಿತ್ತು. ಇತ್ತೀಚೆಗೆ ಸ್ವತಃ ಪ್ರಧಾನಿ, ಉದ್ಯಮಿಗಳ ಜತೆಗಿನ ತಮ್ಮ ಒಡನಾಟವನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ ಕೂಡ. ಈ ಹಿನ್ನೆಲೆಯಲ್ಲಿ, ದೇಶದಲ್ಲಿ ಮೊದಲ ಬಾರಿಗೆ ಬರಲಿರುವ ಇ- ಕಾಮರ್ಸ್‌ ಪಾಲಿಸಿ, ಒಂದು ಕುಟುಂಬಕ್ಕೆ ನೆರವಾಗುತ್ತದೆ ಎಂದು ಹೇಳಲು ಕಾರಣಗಳೂ ಇವೆ.