samachara
www.samachara.com
ಇಲಾಖೆ, ನಿಗಮ- ಮಂಡಳಿಗಳ ವಿಕೇಂದ್ರಿಕರಣ: ಅರಸು ಛಾತಿಯನ್ನು ಕುಮಾರಸ್ವಾಮಿ ಪ್ರದರ್ಶಿಸಲಿ
COVER STORY

ಇಲಾಖೆ, ನಿಗಮ- ಮಂಡಳಿಗಳ ವಿಕೇಂದ್ರಿಕರಣ: ಅರಸು ಛಾತಿಯನ್ನು ಕುಮಾರಸ್ವಾಮಿ ಪ್ರದರ್ಶಿಸಲಿ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತು ಇಲ್ಲಿನ ಜನರ ಅನುಕೂಲಕ್ಕೆ ಮೀಸಲಾದ ಇಲಾಖೆಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಯಾಕೆ? 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

Update:

ಉತ್ತರ ಕರ್ನಾಟಕದ ಮುಖಂಡರೊಂದಿಗೆ ಇಂದು ವಿಧಾನಸಭೆಯಲ್ಲಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೆಲವು ಕಚೇರಿಗಳನ್ನು ಸುವರ್ಣ ಸೌಧಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದರು. ಜತೆಗೆ ಉತ್ತರ ಕರ್ನಾಟಕ ಭಾಗದಲ್ಲೇ ಹೆಚ್ಚಿನ ಸಮಯ ಕಳೆಯುತ್ತೇನೆ ಎಂದರು.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇಳಿ ಬರುತ್ತಿದೆ. ಈ ಕೂಗಿನ ಹಿಂದೆ ಕೆಲವು ಲಾಬಿಗಳು ಕೆಲಸ ಮಾಡುತ್ತಿರಬಹುದಾದರೂ, ಆಳದಲ್ಲಿ ಜನರಿಗೆ ಇರುವ ಉದ್ದೇಶ ಉತ್ತರ ಕರ್ನಾಟಕ ಭಾಗ ಅಭಿವೃದ್ಧಿಯಾಗಬೇಕು ಎಂಬುದು ಮಾತ್ರ. ಜತೆಗೆ, ಈ ಭಾಗದ ಮೇಲಾಗುತ್ತಿರುವ ನಿರ್ಲಕ್ಷ್ಯವನ್ನು ತೊಡೆದು ಹಾಕಬೇಕು ಎಂಬುದಷ್ಟೇ ಪ್ರತಿಭಟನೆಯ ಉದ್ದೇಶ.

ಏನಿದು ಉತ್ತರ ಕರ್ನಾಟಕ ಅಭಿವೃದ್ಧಿ? ನಿರ್ಲಕ್ಷ್ಯ ಹೇಗಾಗುತ್ತಿದೆ? ಇದಕ್ಕೆ ಸರಕಾರ ಏನು ಮಾಡಬೇಕು? ಎಂಬ ಪ್ರಶ್ನೆಗಳು ಸಹಜವಾಗಿಯೇ ಉದ್ಭವಿಸುತ್ತವೆ. ಈ ಅಸಮಾನತೆ ನಿವಾರಣೆಗೆ ಹಲವು ಪರಿಹಾರಗಳು ಇವೆ. ಮತ್ತದು ಹೊಸತು ಕೂಡ ಅಲ್ಲ. ದೇಶದ ಬೇರೆ ರಾಜ್ಯಗಳಲ್ಲಿ ಈ ಮಾದರಿಗಳು ಈಗಾಗಲೇ ಅಸ್ತಿತ್ವದಲ್ಲಿವೆ. ಕರ್ನಾಟಕದಲ್ಲಿಯೂ ಈ ಹಿಂದೆ ಈ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿತ್ತು ಎಂಬುದು ಗಮನಾರ್ಹ.

ಪರಿಹಾರ ಒಂದು; ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ರಾಜಧಾನಿ ಸ್ಥಾಪನೆ ಮಾಡುವುದು. ಇದೇನು ಹೊಸ ಐಡಿಯಾ ಏನಲ್ಲ. ಈಗಾಗಲೇ ಮಹಾರಾಷ್ಟ್ರದಲ್ಲಿ ಮುಂಬೈ ನಂತರ ಎರಡನೇ ರಾಜಧಾನಿಯಾಗಿ ನಾಗ್ಪುರ ಅಸ್ತಿತ್ವದಲ್ಲಿದೆ. ಇನ್ನು ಪ್ರಾಕೃತಿಕ ಮಿತಿಗಳ ಕಾರಣಕ್ಕೆ ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಇದೇ ರೀತಿ ಎರಡು ರಾಜಧಾನಿಗಳ ಪರಿಕಲ್ಪನೆಗಳಿವೆ.

ಇದೇ ರೀತಿ, “ಸರ್ಕಾರದ ಪ್ರಮುಖ ಕಚೇರಿಗಳನ್ನು ಬೆಂಗಳೂರಿನಿಂದ ಬೆಳಗಾವಿಯ ಸುವರ್ಣ ಸೌಧಕ್ಕೆ ವರ್ಗಾಯಿಸಿ ಅದನ್ನು ಒಂದು ಶಕ್ತಿಯುತ ಕೇಂದ್ರವನ್ನಾಗಿ ಮಾಡಬೇಕು,” ಎಂದು ಹಲವು ದಿನಗಳ ಹಿಂದೆ ಉತ್ತರ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಢಾದ್ ಒತ್ತಾಯಿಸಿದ್ದರು.

ಆದರೆ ಹೀಗೆ ಸುವರ್ಣಸೌಧಕ್ಕೆ ಕಚೇರಿಗಳನ್ನು ವರ್ಗಾವಣೆ ಮಾಡಲು ಕಾನೂನಿನಲ್ಲಿ ಸ್ವಲ್ಪ ಮಟ್ಟಿಗೆ ಅಡಚಣೆಗಳಿವೆ ಎನ್ನುತ್ತಾರೆ ಹಿರಿಯ ಪತ್ರಕರ್ತ ಸರಜೂ ಕಾಟ್ಕರ್. ಇದರಿಂದ ವಿಧಾನಸೌಧದ ಪಾವಿತ್ರ್ಯಕ್ಕೆ ಧಕ್ಕೆ ಬರುತ್ತದೆ ಎನ್ನುತ್ತಾರೆ ಅವರು. ಇದಕ್ಕೆ ಬದಲಾಗಿ ಅವರು ಒಂದಷ್ಟು ಬೇರೆಯದೇ ಆದ ಪರಿಹಾರಗಳನ್ನು ಮುಂದಿಡುತ್ತಾರೆ.

ಮಹಾರಾಷ್ಟ್ರದ ನಾಗ್ಪುರದಲ್ಲಿ ಪೂರ್ಣ ಪ್ರಮಾಣದ ಅಧಿವೇಶನ ನಡೆಯುತ್ತದೆ. ಅದೇ ರೀತಿ ಇಲ್ಲಿಯೂ 8 ದಿನದ ಅಧಿವೇಶನಕ್ಕೆ ಬದಲಾಗಿ ಪೂರ್ಣ ಪ್ರಮಾಣದ ಅಧಿವೇಶ ನಡೆಸಬೇಕು ಎಂಬುದು ನಮ್ಮ ಬೇಡಿಕೆಯಾಗಿದೆ ಎನ್ನುತ್ತಾರೆ ಅವರು. ಹಾಗೆ ನೋಡಿದರೆ ಸುವರ್ಣ ಸೌಧದಲ್ಲಿ ಸಚಿವರು ಕಾರ್ಯ ನಿರ್ವಹಿಸಲು ಯಾವುದೇ ಅಡ್ಡಿ ಇಲ್ಲ. ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಚಿವರುಗಳು ಪ್ರವಾಸ ಬಂದಾಗ ಇದರಲ್ಲೇ ಸಭೆಗಳನ್ನು ನಡೆಸುವಂತಾಗಬೇಕು. ಹೀಗಾದಾಗ ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸುವರ್ಣ ಸೌಧ ಉಪಯೋಗ ಬರುತ್ತದೆ.

ಉತ್ತರ ಕರ್ನಾಟಕದ ಇಲಾಖೆಗಳಿಗೆ ಬೆಂಗಳೂರಿನಲ್ಲೇನು ಕೆಲಸ?

ಅಧಿವೇಶನದ ಕಥೆ ಹೀಗಾದರೆ, ಇಲಾಖೆಗಳ ವಿನ್ಯಾಸದಲ್ಲೂ ಒಂದಷ್ಟು ಸಮಸ್ಯೆಗಳಿವೆ. ಉದಾಹರಣೆಗೆ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಮತ್ತು ಇಲ್ಲಿನ ಜನರ ಅನುಕೂಲಕ್ಕೆ ಮೀಸಲಾದ ಇಲಾಖೆಗಳು ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಇಲಾಖೆಗಳನ್ನು ಇಲ್ಲಿನ ಯಾವುದಾದರೂ ಒಂದು ನಗರಕ್ಕೆ ವರ್ಗಾವಣೆ ಮಾಡುವುದು ಅತ್ಯುತ್ತಮ ಪರಿಹಾರ ಎಂಬುವುದು ಸರಜೂ ಕಾಟ್ಕರ್‌ ಅಭಿಮತ.

ಮತ್ತಿದು ಹೊಸದೂ ಅಲ್ಲ ಎನ್ನುತ್ತಾರೆ ಅವರು. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಕೃಷ್ಣಾ ಜಲ ನಿರ್ವಹಣಾ ಮಂಡಳಿಯನ್ನು ಬೆಳಗಾವಿಗೆ ವರ್ಗಾಯಿಸಲು ತೀರ್ಮಾನಿಸಿದರು. ಆದರೆ ಇದಕ್ಕೆ ಐಎಎಸ್ ಅಧಿಕಾರಿಗಳ ಲಾಬಿ ಅಡ್ಡಿ ಪಡಿಸಿತ್ತು. ಈ ಸಮಯದಲ್ಲಿ ಸಭೆ ನಡೆಸಿದ ಅರಸು, “ನಿಮ್ಮನ್ನು ಕೇಂದ್ರ ಸರಕಾರ ಕರ್ನಾಟಕದ ಸೇವೆಗಾಗಿ ಕಳುಹಿಸಿದೆ. ಬೆಂಗಳೂರಿನಲ್ಲಿ ಕುಳಿತು ಸೇವೆ ಸಲ್ಲಿಸುವುದಕ್ಕಲ್ಲ. ಒಂದು ವಾರದಲ್ಲಿ ಬೆಳಗಾವಿಯಲ್ಲಿ ರಿಪೋರ್ಟ್ ಮಾಡಿಕೊಳ್ಳಿ. ಇಲ್ಲವಾದರೆ, ನಿಮ್ಮ ಸೇವೆ ಕರ್ನಾಟಕಕ್ಕೆ ಅಗತ್ಯವಿಲ್ಲ ಎಂದು ಕೇಂದ್ರಕ್ಕೆ ಪತ್ರಬರೆಯುತ್ತೇನೆ,’’ ಎಂದು ಹೇಳಿದ್ದರು.

ನಂತರ ಅವರಿದ್ದಷ್ಟು ದಿನ ಕೃಷ್ಣಾ ಜಲ ನಿರ್ವಹಣಾ ಮಂಡಳಿ ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಯಾವಾಗ ದೇವರಾಜ ಅರಸು ಮುಖ್ಯಮಂತ್ರಿ ಸ್ಥಾನದಿಂದ ಇಳಿದರೋ ಮತ್ತೆ ಈ ಐಎಎಸ್ ಅಧಿಕಾರಿಗಳು ಬೆಂಗಳೂರಿಗೆ ಹೊರಟು ಬಂದರು. ಅದಾದ ನಂತರ ಮತ್ಯಾವ ಮುಖ್ಯಮಂತ್ರಿಯೂ ಅಧಿಕಾರಿಗಳ ಲಾಬಿಗೆ ಎದುರಾಗಿ, ಇಲಾಖೆಗಳನ್ನು ವಿಕೇಂದ್ರಿಕರಣಳಿಸುವ ಗಟ್ಟಿ ತೀರ್ಮಾನ ತೆಗೆದುಕೊಳ್ಳಲಿಲ್ಲ.

ಇದೇ ರೀತಿ ಗಡಿ ಅಭಿವೃದ್ಧಿ ಪ್ರಾಧಿಕಾರಿ ಇದೆ. ಇದು ಉತ್ತರ ಕರ್ನಾಟಕ ಭಾಗದಲ್ಲೆ ಹೆಚ್ಚಿನ ಕೆಲಸ ಇರುವ ಇಲಾಖೆ. ಅದರ ಕಚೇರಿಯೂ ಬೆಂಗಳೂರಿನಲ್ಲೇ ಇದೆ. ಇದೀಗ ಧರಂ ಸಿಂಗ್‌ ಕಾಲದಲ್ಲಿ ಶಿಕ್ಷಣ ಇಲಾಖೆಯಲ್ಲಿ ಜಂಟಿ ಆಯುಕ್ತರ ಕಚೇರಿಯನ್ನು ಧಾರವಾಡದಲ್ಲಿ ತೆರೆಯಲಾಗಿದೆ ಎಂಬ ಮಾಹಿತಿ ನೀಡುತ್ತಾರೆ ಸಂಜು ಕಾಟ್ಕರ್‌. ಇದೇ ಮಾದರಿಯನ್ನು ಬೇರೆ ಇಲಾಖೆಗಳು ಅನುಕರಿಸಿದರೆ ಸಹಜವಾಗಿ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ಸಿಗುವಂತಾಗುತ್ತದೆ ಎನ್ನುತ್ತಾರೆ ಸರಜೂ.

ಇದು ಕೇವಲ ಉತ್ತರ ಕರ್ನಾಟಕಕ್ಕೆ ಮಾತ್ರವೇ ಸೀಮಿತವಾದ ವಿಚಾರ ಏನಲ್ಲ. ಮೀನುಗಾರಿಕೆ ಇಲಾಖೆಗೆ ಬೆಂಗಳೂರಿನಲ್ಲಿ ಏನಿದೆ ಕೆಲಸ? ಉತ್ತರ ಕನ್ನಡ ಅಥವಾ ದಕ್ಷಣ ಕನ್ನಡಕ್ಕೆ ಇಲಾಖೆಯನ್ನು ವರ್ಗಾವಣೆ ಮಾಡುವುದು ಎಲ್ಲಾ ಆಯಾಮಗಳಲ್ಲಿಯೂ ಜನರಿಗೆ ಅನುಕೂಲವೇ ಆಗಲಿದೆ.

ಐಎಎಸ್‌ ಅಧಿಕಾರಿಗಳ ಲಾಬಿ:

ವಿಧಾನಸೌಧದಲ್ಲಿ ಅಧಿಕಾರಿಗಳಿಗಾಗಿ ಖರೀದಿಸಿದ ಹೊಸ ಕಾರುಗಳ ಫೈಲ್ ಚಿತ್ರ. 
ವಿಧಾನಸೌಧದಲ್ಲಿ ಅಧಿಕಾರಿಗಳಿಗಾಗಿ ಖರೀದಿಸಿದ ಹೊಸ ಕಾರುಗಳ ಫೈಲ್ ಚಿತ್ರ. 

ಇದಲ್ಲದೆ ಬೇಕಾದಷ್ಟು ಅಕಾಡೆಮಿಗಳಿವೆ. ಅವುಗಳನ್ನು ಕೂಡ ಬೆಂಗಳೂರಿನಲ್ಲೇ ಇಡಲಾಗಿದೆ. ಇದರಲ್ಲಿ ನಾಟಕ ಅಕಾಡೆಮಿ, ಮೊದಲಾದ ಕೆಲವನ್ನು ಒಡೆದು ಈ ಭಾಗಕ್ಕೆ ಹಾಕಬಹುದಲ್ಲವೇ ಎಂದು ಪ್ರಶ್ನಿಸುತ್ತಾರೆ ಕಾಟ್ಕರ್‌.

“ಅಧಿಕಾರಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಹೀಗೆ ಮಾಡಲಾಗಿದೆ. ಇಲ್ಲಿನ ಕೆಲವು ಸಭೆಗಳಿಗೂ ಕಾಟಾಚಾರಕ್ಕೆ ಅಧಿಕಾರಿಗಳು ಒಂದು ದಿನ ಬಂದು ಹೋಗುತ್ತಾರೆ. ಇಲ್ಲಿ ಬಂದು ನಿಂತು ಸಮಸ್ಯೆಗಳನ್ನು ಕೇಳಲು ಅವರು ಸಿದ್ಧವಿಲ್ಲ,” ಎಂಬುದು ಅವರ ದೂರು.

ಈ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಇಲಾಖೆಗಳು ಇಲ್ಲೇ ಬೇಕು ಎಂಬುದು ಜನರ ಒತ್ತಾವಾಗಿದೆ. ‘ಎಲ್ಲವನ್ನೂ ಬೆಂಗಳೂರು ಎಂದರೆ ಆಗುವುದಿಲ್ಲ. ಕನಿಷ್ಠ ಅದರ ಕಚೇರಿಗಳನ್ನು ಈ ಭಾಗದ ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಬಿಜಾಪುರ ಎಲ್ಲಾದರೂ ಮಾಡಿ’ ಎನ್ನುತ್ತಾರೆ ಅವರು. “ಐಎಎಸ್ ಅಧಿಕಾರಿಗಳು ಬೆಂಗಳೂರನ್ನು ಬಿಟ್ಟು ಬರಲು ಒಪ್ಪುವುದಿಲ್ಲ. ಇದು ಐಎಎಸ್‌ ಅಧಿಕಾರಿಗಳದ್ದೇ ಹುನ್ನಾರ,” ಎಂಬುದು ಕಾಟ್ಕರ್‌ ಹೇಳಿಕೆ.

ಇದರ ಜತೆಗೆ ಸಾಫ್ಟ್‌ವೇರ್‌ ಕಂಪನಿಯಂಥ ಸಂಸ್ಥೆಗಳು ಬಂದಾಗ ಅದಕ್ಕೆ ನೀರು, ಭೂಮಿ, ವಿದ್ಯುತ್‌ನ್ನು ಸರಕಾರ ನೀಡಬೇಕಾಗುತ್ತದೆ. ಯಾರೆಲ್ಲಾ ಅರ್ಜಿ ಸಕ್ಲಿಸುತ್ತಾರೋ ಸರಕಾರ ಹುಬ್ಬಳ್ಳಿ, ಧಾರವಾಡ, ಬೆಳಗಾವಿಗೆ ಹೋಗಿ ಆಗ ಮಾತ್ರ ನಾವು ಲೈಸನ್ಸ್‌ ಸಬ್ಸಿಡಿ ನೀಡುತ್ತೇವೆ ಎನ್ನಬೇಕು. ಇದರಿಂದ ಬೆಂಗಳೂರಿನ ಒತ್ತಡನೂ ಕಡಿಮೆಯಾಗುತ್ತದೆ. ಇದರಿಂದ ಈ ಭಾಗವೂ ಅಭಿವೃದ್ಧಿಯಾಗುತ್ತದೆ ಎನ್ನುತ್ತಾರೆ ಅವರು.

ಪರ್ಯಾಯ ‘ರಾಜಧಾನಿ’

ಉತ್ತರ ಕರ್ನಾಟಕ ಪ್ರತ್ಯೇಕ ಆಗಬೇಕು ಎಂಬುದು ನಮ್ಮ ಉದ್ದೇಶವಲ್ಲ. ಆದರೆ ಈ ಭಾಗ ಅಭಿವೃದ್ಧಿಯಾಗಬೇಕು ಎಂಬುದಷ್ಟೇ ನಮ್ಮ ಬೇಡಿಕೆ ಎನ್ನುವ ಅಭಿಪ್ರಾಯ ಹಲವು ಹೋರಾಟಗಾರರಲ್ಲಿದೆ.

ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಹುಬ್ಬಳ್ಳಿಯ ವಕೀಲ ಸಿಬಿಎಲ್‌ ಹೆಗಡೆ. “ಇಷ್ಟೆಲ್ಲಾ ಒದ್ದಾಟ ಮಾಡಿ ಏಕೀಕರಣ ಮಾಡಿದ್ದು ಹಾಳಾಗಬಾರದು. ಇದಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಎರಡನೇ ರಾಜಧಾನಿ ಮಾಡುವುದು, ಇಲಾಖೆಗಳನ್ನು ಶಿಓಫ್ಟ್‌ ಮಾಡುವುದು ಅತ್ಯುತ್ತಮ ದಾರಿ,” ಎನ್ನುತ್ತಾರೆ ಅವರು. ಒಂದೇ ರಾಜ್ಯ ವಿವಿಧ ವಿಭಾಗಗಳ ಮೂಲಕ ಕಾರ್ಯನಿರ್ವಹಿಸಿದಾಗ ಪ್ರತಿಯೊಂದು ಕೆಲಸಕ್ಕೂ ಬೆಂಗಳೂರಿಗೆ ಹೋಗುವುದು ತಪ್ಪುತ್ತದೆ ಎನ್ನುತ್ತಾರೆ ಹೆಗಡೆ.

ರಾಜ್ಯದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಈ ಎಲ್ಲಾ ಮಾತುಗಳನ್ನು ಗಮಿನಿಸಬೇಕಿದೆ. ನಮಗೆ ಮತ ನೀಡಿಲ್ಲ ಎಂಬ ಭಾವನಾತ್ಮಕ ಹೇಳಿಕೆಗಳ ಆಚೆಗೆ ಈ ಅಸಮಾನತೆ ತೊಡೆಯಲು ಇರುವ ಅವಕಾಶಗಳತ್ತ ಚಿತ್ತ ಹರಿಸಬೇಕಿದೆ. ಅದಕ್ಕಿಂತ ಹೆಚ್ಚಾಗಿ ಐಎಎಸ್ ಲಾಬಿಗಳಿಗೆ ಮಣಿಯದೆ ದೇವರಾಜು ಅರಸು ಅಂದು ತೋರಿದ ಛಾತಿಯನ್ನು ಇವತ್ತು ಕುಮಾರಸ್ವಾಮಿ ತೋರಿಸಬೇಕಿದೆ. ಅಗತ್ಯ ಇಲಾಖೆ, ನಿಗಮ, ಮಂಡಳಿಗಳನ್ನು ಉತ್ತರ ಕರ್ನಾಟಕಕ್ಕೆ ವರ್ಗಾಯಿಸುವ ತೀರ್ಮಾನವನ್ನು ಅವರು ತೆಗೆದುಕೊಳ್ಳಬೇಕಿದೆ.