samachara
www.samachara.com
‘ಇಂಡಿಯಾ ಇಂಕ್’: ಐ ಲವ್ ಇಂಡಸ್ಟ್ರಿಯಲಿಸ್ಟ್‌ ಅಂದೇ ಬಿಟ್ಟರು ಪ್ರಧಾನಿ ಮೋದಿ
COVER STORY

‘ಇಂಡಿಯಾ ಇಂಕ್’: ಐ ಲವ್ ಇಂಡಸ್ಟ್ರಿಯಲಿಸ್ಟ್‌ ಅಂದೇ ಬಿಟ್ಟರು ಪ್ರಧಾನಿ ಮೋದಿ

ಉದ್ಯಮಿಗಳ ಜತೆಗೆ ನಂಟು ಇಟ್ಟುಕೊಳ್ಳುವುದು ಪ್ರಧಾನಿ ಆದಿಯಾಗಿ ರಾಜಕಾರಣಿಗಳಿಗೆ ಹೊಸದಲ್ಲವಾದರೂ, ಈ ಸಂಬಂಧಗಳನ್ನು ನಿರಾಕರಿಸುತ್ತಿದ್ದುದೇ ಜಾಸ್ತಿ. ಕನಿಷ್ಠ ಅವುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ.

‘ಪ್ರೈಮ್‌ ಮಿನಿಸ್ಟರ್‌ ಆಫ್ ರಿಲಯನ್ಸ್‌ ಇಂಡಿಯಾ’ ಎಂಬ ವರದಿಯನ್ನು ‘ಸಮಾಚಾರ’ ಈ ಹಿಂದೆಯೇ ಪ್ರಕಟಿಸಿತ್ತು. ದೇಶದ ಸಿರಿವಂತ ‘ರಿಲಯನ್ಸ್‌’ ಕುಟುಂಬ ಭಾರತದ ಪ್ರಧಾನಿಗಳ ಜತೆ ಇಟ್ಟುಕೊಂಡಿದ್ದ ಆಪ್ತ ಒಡನಾಟದ ಬಗೆಗಿನ ವರದಿಯದು. ಸಂಪ್ರದಾಯದಂತೆ ಇದೇ ರಿಲಯನ್ಸ್‌ ಕುಟುಂಬದ ಅನಿಲ್‌ ಅಂಬಾನಿ ಮತ್ತು ಮುಖೇಶ್‌ ಅಂಬಾನಿ ಹೆಸರು ಪ್ರಧಾನಿ ನರೇಂದ್ರ ಮೋದಿ ಆಪ್ತ ಕೂಟದಲ್ಲಿ ಕೇಳಿ ಬರಲು ಆರಂಭಿಸಿ 4 ವರ್ಷಗಳೇ ಕಳೆದವು. ಈ ಕೂಟದಲ್ಲಿ ಅದಾನಿ ಗ್ರೂಪ್‌ನ ಗೌತಮ್‌ ಅದಾನಿಗೂ ಪ್ರಮುಖ ಸ್ಥಾನವಿತ್ತು.

ಹೀಗೆ ಉದ್ಯಮಿಗಳ ಜತೆಗೆ ನಂಟು ಇಟ್ಟುಕೊಳ್ಳುವುದು ಪ್ರಧಾನಿ ಆದಿಯಾಗಿ ರಾಜಕಾರಣಿಗಳಿಗೆ ಹೊಸದಲ್ಲವಾದರೂ, ಈ ಸಂಬಂಧಗಳನ್ನು ನಿರಾಕರಿಸುತ್ತಿದ್ದುದೇ ಜಾಸ್ತಿ. ಕನಿಷ್ಠ ಅವುಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಒಂದು ಹೆಜ್ಜೆ ಮುಂದೆ ಹೋಗಿ ಉದ್ಯಮಪತಿಗಳ ಜತೆಗಿನ ‘ಸಂಬಂಧ’ವನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ.

ಲಕ್ನೋದಲ್ಲಿ ಭಾನುವಾರ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ‘ಉದ್ಯಮಿಗಳ ಜತೆಗೆ ಗುರುತಿಸಿಕೊಳ್ಳಲು ನನಗೇನು ಭಯವಿಲ್ಲ’ ಎಂದಿದ್ದಾರೆ. ಉದ್ಯಮಿಗಳನ್ನು ಕಳ್ಳರು, ದರೋಡೆಕೋರರು ಎಂದು ಬಿಂಬಿಸುತ್ತಿರುವ ವಿರೋಧ ಪಕ್ಷಗಳ ಮೇಲೆ ಹರಿಹಾಯ್ದ ಅವರು, ಉದ್ಯಮ ಸಮುದಾಯದ ಜತೆಗೆ ಕಾಣಿಸಿಕೊಳ್ಳುವುದಕ್ಕೆ ಮುಜುಗರವೇನಿಲ್ಲ; ಕಾರಣ ತಮ್ಮ ‘ಗುರಿ ಸ್ಪಷ್ಟವಾಗಿದೆ’ ಎಂದಿದ್ದಾರೆ.

“ಉದ್ಯಮಿಗಳ ಜತೆ ನಿಂತುಕೊಳ್ಳಲು ಭಯಪಡುವ ಜನರು ನಾವಲ್ಲ,” ಎಂದಿರುವ ಮೋದಿ, ರೈತರು, ಸರಕಾರಿ ನೌಕರರು, ಬ್ಯಾಂಕರ್‌ಗಳ ರೀತಿ ಉದ್ಯಮಿಗಳು ಕೂಡ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ ಎಂದಿದ್ದಾರೆ. ಜತೆಗೆ ತಮ್ಮ ವಾದಕ್ಕೆ ಮಹಾತ್ಮಾ ಗಾಂಧಿಯನ್ನೂ ಎಳೆದು ತಂದಿದ್ದಾರೆ. ಬಿರ್ಲಾ ಕುಟುಂಬದ ಜತೆಗೆ ಗಾಂಧಿ ಒಡನಾಟ ಇಟ್ಟುಕೊಂಡಿದ್ದರು. ಆದರೆ ಅವರ ಉದ್ಧೇಶ ಶುದ್ಧವಾಗಿತ್ತು ಎನ್ನುವ ಮೂಲಕ ತಮ್ಮ ವ್ಯಕ್ತಿತ್ವವೂ ಅದೇ ರೀತಿಯಾದದ್ದು ಎಂದು ಸಾಧಿಸಿದ್ದಾರೆ.

‘ಸಾರ್ವಜನಿಕವಾಗಿ ಭೇಟಿಯಾಗದೆ, ಪರದೆ ಹಿಂದೆಯೇ ಕಾಣಿಸುಕೊಳ್ಳುವವರಿಗೆ ಮಾತ್ರ ಭಯವಿರುತ್ತದೆ. ಮಾಜಿ ಎಸ್ಪಿ ನಾಯಕ ಅಮರ್‌ ಸಿಂಗ್ ಇಲ್ಲಿ ಕುಳಿತುಕೊಂಡಿದ್ದಾರೆ. ಅವರು ನಿಮಗೆ ಎಲ್ಲಾ ಮಾಹಿತಿಗಳನ್ನು ನೀಡಲಿದ್ದಾರೆ,’ ಎಂದು ನಕ್ಕಿದ್ದಾರೆ. ಇದಕ್ಕೆ ಕುಮಾರ್‌ ಮಂಗಲಂ ಬಿರ್ಲಾ, ಗೌತಮ್‌ ಅದಾನಿ, ಎಸ್ಸೆಲ್‌ ಗ್ರೂಪ್‌ನ ಸುಭಾಷ್‌ ಷಂದ್ರ, ಐಟಿಸಿಯ ಸಂಜೀವ್‌ ಪುರಿ ಸೇರಿದಂತೆ ಹಲವು ಉದ್ಯಮಿಗಳು ಸಾಕ್ಷಿಯಾಗಿದ್ದಾರೆ.

ಇವರನ್ನೆಲ್ಲಾ ಉದ್ಧೇಶಿಸಿ ಮಾತನಾಡಿದ ಭಾರತದ ಪ್ರಧಾನಿ, “ಇದೊಂದು ದಾಖಲೆ ಮುರಿಯುವ ಕಾರ್ಯಕ್ರಮ. ಕಡಿಮೆ ಅವಧಿಯಲ್ಲಿ ಹಳೆಯ ದಿನಗಳ ಬದಲಾಗಿದ್ದು ಉದ್ಯಮಿಗಳ ನಂಬಿಕೆಯನ್ನು ಗಳಿಸಲಾಗಿದೆ. ಯೋಗಿ ಆದಿತ್ಯನಾಥ್ ನಾಯಕತ್ವದಡಿಯಲ್ಲಿ ಹೂಡಿಕೆಯ ವಾತಾವರಣ ಸೃಷ್ಟಿಯಾಗಿರುವುದಕ್ಕೆ ನಾನು ಖುಷಿಯಾಗಿದ್ದೇನೆ,” ಎಂದಿದ್ದಾರೆ. 60 ಸಾವಿರ ಕೋಟಿ ರೂಪಾಯಿ ವೆಚ್ಚದ 81 ಯೋಜನೆಗಳಿಗೆ ಚಾಲನೆ ನೀಡಿ ಪ್ರಧಾನಿ ನರೇಂದ್ರ ಮೋದಿ ಹೀಗೆ ಮಾತನಾಡಿದ್ದಾರೆ.

ಗುಜರಾತ್‌ನಿಂದ ದೆಹಲಿವರೆಗೆ ಉದ್ಯಮಿಗಳ ನಂಟು

ಹಾಗೆ ನೋಡಿದರೆ ಉದ್ಯಮಿಗಳ ಜತೆಗಿನ ಮೋದಿ ಒಡನಾಟ ಆರಂಭವಾಗಿದ್ದು ದೆಹಲಿಯಲ್ಲಲ್ಲ. ಅದಕ್ಕಿಂತ ಮೊದಲು ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗಲೇ ನರೇಂದ್ರ ಮೋದಿ ಕೈಗಾರಿಕೋದ್ಯಮಿಗಳ ಆಪ್ತ ಅಂಗಳಕಕ್ಕೆ ಜಿಗಿದಿದ್ದರು. ಅದಕ್ಕೆಲ್ಲಾ ಕಾರಣವಾಗಿದ್ದು 2003ರ ಫೆಬ್ರವರಿಯಲ್ಲಿ ದೆಹಲಿಯಲ್ಲಿ ಆಯೋಜನೆಯಾಗಿದ್ದ ಸಭೆ.

ಸಿಐಐ 2003ರ ಫೆಬ್ರವರಿಯಲ್ಲಿ ಗುಜರಾತ್ ಮುಖ್ಯಮಂತ್ರಿ ಜತೆ ಭಾರತದ ಉದ್ಯಮಿಗಳ ಸಭೆಯೊಂದನ್ನು ದಿಲ್ಲಿಯಲ್ಲಿ ಆಯೋಜಿಸಿತ್ತು. ರಾಹುಲ್ ಬಜಾಜ್, "2002 ಗುಜರಾತ್ ಪಾಲಿಗೆ ನತದೃಷ್ಟ ವರ್ಷ,'' ಎಂದು ಖಾರವಾದ ಪ್ರತಿಕ್ರಿಯೆ ಮೂಲಕವೇ ಸಭೆಯಲ್ಲಿ ಮಾತು ಶುರು ಮಾಡಿದ್ದರು. ಒಬ್ಬೊಬ್ಬರಾಗಿ ಮಾತನಾಡಿದ ಪ್ರಮುಖ ಉದ್ಯಮಿಗಳು ಗುಜರಾತ್ ರಾಜ್ಯದಲ್ಲಿ ಕೋಮು ಸಾಮರಸ್ಯವನ್ನು ಕಾಪಾಡುವುದು ಹಾಗೂ ಶಾಂತಿಯನ್ನು ಸ್ಥಾಪಿಸುವುದು ಮುಖ್ಯಮಂತ್ರಿಯ ಆದ್ಯ ಕರ್ತವ್ಯವಾಗಬೇಕು ಎಂದು ಪಾಠ ಮಾಡಿದ್ದರು.

ಕೊನೆಗೆ, ಭಾಷಣಕ್ಕೆಂದು ಎದ್ದುನಿಂತ ಮೋದಿ ಮುಖದಲ್ಲಿ ಅತೃಪ್ತಿ, ಸಿಟ್ಟು, ಆಕ್ರೋಶಗಳು ಎದ್ದು ಕಾಣುತ್ತಿದ್ದವು. "ನೀವು ನಕಲಿ ಜಾತ್ಯಾತೀತರು... ಗುಜರಾತ್ ವಿಚಾರದಲ್ಲಿ ನಿಮ್ಮ ಹಿತಾಸಕ್ತಿಗಳೇನು ಹೇಳಿ...'' ಎಂದರು. ಅವತ್ತು ದೇಶದ ಪ್ರಮುಖ ಉದ್ಯಮಪತಿಗಳ ಮುಂದೆ ಅವಮಾನಕ್ಕೆ ಈಡಾದ ಮೋದಿ, ಘಟನೆಯನ್ನು ಮರೆಯಬಹುದು ಎಂದು ಸಿಐಐ ಆಯೋಜಕರು ಅಂದುಕೊಂಡಿದ್ದರು.

ಆದರೆ ಅವರ ಊಹೆ ಸುಳ್ಳಾಗಿಸಿತ್ತು, ಸಭೆ ನಡೆದು ವಾರದೊಳಗೆ ಗುಜರಾತ್ ಮೂಲದ ಉದ್ಯಮಿಗಳಿಂದ ಬಂಡಾಯದ ಬಾವುಟ ಹಾರಿಸಲಾಯಿತು. ಅದಾನಿ ಗ್ರೂಪ್ ಆಫ್ ಕಂಪನಿಗಳ ಗೌತಮ್ ಅದಾನಿ ನೇತೃತ್ವದಲ್ಲಿ ಗುಜರಾತ್ ಮೂಲದ ಔಷಧ ಉದ್ಯಮಿ ಇಂದ್ರಾವರ್ದನ್ ಮೋದಿ, ನಿರ್ಮಾಣ್ ಗ್ರೂಪ್‌ನ ಕಾರ್ಸನ್ ಪಟೇಲ್, ಬಕೇರಿ ಗ್ರೂಪ್ ಆಫ್ ಕಂಪನಿಯ ಅನಿಲ್ ಬಕೇರಿ ಮುಂದಾಳತ್ವದಲ್ಲಿ 'ರಿಸರ್ಜೆಂಟ್ ಗ್ರೂಪ್ ಆಫ್ ಗುಜರಾತ್'(ಆರ್ಜಿಜಿ) ಹೆಸರಿನಲ್ಲಿ ಸಿಐಐಗೆ ಪರ್ಯಾಯ ಕೈಗಾರಿಕೋದ್ಯಮ ಸಂಘವೊಂದನ್ನು ಹುಟ್ಟು ಹಾಕಲಾಗಿತ್ತು.

ಕೊನೆಗೆ ಸಿಐಐ ಮಹಾ ನಿರ್ದೇಶಕ ತರುಣ್ ದಾಸ್ ಕ್ಷಮಾಪಣೆ ಪತ್ರವೊಂದನ್ನು ಮೋದಿಗೆ ನೀಡುವ ಮೂಲಕ ಗುಜರಾತ್ ಸರಕಾರದ ಜತೆ ಸಂಬಂಧವನ್ನು ಪುನರ್ ಸ್ಥಾಪನೆ ಮಾಡಿಕೊಳ್ಳಲು ಉದ್ಯಮಪತಿಗಳು ಮುಂದಾದರು. ಹೀಗೆ, ಮೋದಿ ಉದ್ಯಮಿಗಳ ಸಖ್ಯ ಆರಂಭವಾಗಿತ್ತು.

ಹೀಗಿದ್ದೂ 5 ವರ್ಷಗಳ ಹಿಂದೆ ತಾವು ದೇಶದ ಸೇವಕ ಎಂದು ಮೋದಿ ಹೇಳಿದ್ದರು. ಮತ್ತವರು ಇವತ್ತು ಉದ್ಯಮಿಗಳ ಜತೆಗಿನ ಸಂಬಂಧಕ್ಕೆ ನನಗೆ ಭಯವಿಲ್ಲ ಎನ್ನುತ್ತಿದ್ದಾರೆ. ಹೀಗೆ ಕಳೆದ 67 ವರ್ಷದ ದೇಶದ ರಾಜಕಾರಣದಲ್ಲಿ ಆದ ಕ್ರಮೇಣ ಬದಲಾವಣೆಗಳು ಮೋದಿ ಅವಧಿಯಲ್ಲಿ ವೇಗ ಪಡೆದುಕೊಳ್ಳುತ್ತಿವೆ.