samachara
www.samachara.com
ಪ್ರಯೋಜನಕ್ಕೆ ಬಾರದ ಕೈಮಗ್ಗ ಅಭಿವೃದ್ಧಿ ನಿಗಮ: ನೇಕಾರರಲ್ಲ; ನೌಕರರೇ ಫಲಾನುಭವಿಗಳು!
COVER STORY

ಪ್ರಯೋಜನಕ್ಕೆ ಬಾರದ ಕೈಮಗ್ಗ ಅಭಿವೃದ್ಧಿ ನಿಗಮ: ನೇಕಾರರಲ್ಲ; ನೌಕರರೇ ಫಲಾನುಭವಿಗಳು!

ಕರ್ನಾಟಕದ ಕೈ ಮಗ್ಗ ನೇಕಾರರ ಪರವಾಗಿ ಸರಕಾರಕ್ಕೆ ಪತ್ರ ಬರೆದಿರುವ ಗ್ರಾಮಸೇವಾ ಸಂಘ, ಕೈ ಮಗ್ಗ ಅಭಿವೃದ್ಧಿ ನಿಗಮವನ್ನು ನೇಕಾರರಿಗೆ ವಹಿಸಿಕೊಡುವಂತೆ ಆಗ್ರಹಿಸಿದೆ. 

ಸರಕಾರವೊಂದು ಅಸಮರ್ಥತೆ ಪ್ರದರ್ಶನ ಮಾಡಿದಾಗಿ ಮಾತ್ರವೇ ಇಂತಹ ಬೇಡಿಕೆಗಳು ಕೇಳಿಬರುತ್ತವೆ.

ರಾಜ್ಯದ ಉದ್ದಗಲಕ್ಕೂ ಹರಡಿಕೊಂಡಿರುವ ನೇಕಾರರ ಸಮುದಾಯ ಮತ್ತು ಅದರ ಅಭಿವೃದ್ಧಿಗೆ ಸ್ಥಾಪನೆಗೊಂಡಿರುವ ನಿಗಮವೊಂದರ ಹೀನಾಯ ಸ್ಥಿತಿ ಇದು. ಕರಕುಶಲಿಗಳ ಉನ್ನತಿಗಾಗಿ ಕೆಲಸ ಮಾಡಬೇಕಾದ ನಿಗಮದಿಂದ ಕನಿಷ್ಟ ಪ್ರಯೋಜನಾಗುತ್ತಿಲ್ಲ. ಹೀಗಾಗಿ ನಿಗಮವನ್ನು ನಮಗೆ ವಹಿಸಿಕೊಡಿ ಎಂಬ ಬೇಡಿಕೆ ಮುಂದಿಟ್ಟಿದ್ದಾರೆ ನೇಕಾರರ ಪ್ರತಿನಿಧಿಗಳು.

ರಾಜ್ಯದ ಕರಕುಶಲರ್ಮಿಗಳ ಪರವಾಗಿ ಹೋರಾಟ ನಡೆಸಿಕೊಂಡು ಬರುತ್ತಿರುವ ಗ್ರಾಮಸೇವಾ ಸಂಘ ಕರ್ನಾಟಕ ಸರಕಾರಕ್ಕೆ ಕೈ ಮಗ್ಗ ನೇಕಾರರ ಪರವಾಗಿ ಪತ್ರ ಬರೆದಿದೆ. ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮವನ್ನು ನೇಕಾರರ ಜವಾಬ್ದಾರಿಗೇ ವಹಿಸಿಕೊಂಡು ಎಂಬ ಬೇಡಿಕೆಯನ್ನು ಸರಕಾರದ ಮುಂದಿಟ್ಟಿದೆ.

“ಕರ್ನಾಟಕದಲ್ಲಿ ಲಕ್ಷಾಂತರ ಜನ ಕೈಮಗ್ಗ ನೇಕಾರರಿದ್ದಾರೆ. ಎಲ್ಲಾ ನೇಕಾರರು ಈಗ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಹಿಂದೊಮ್ಮೆ ಉತ್ತರ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕಗಳಲ್ಲಿ ದೊಡ್ಡ ಕೈಗಾರಿಕಾ ಉದ್ದಿಮೆಯಾಗಿದ್ದ ಕೈ ಮಗ್ಗಗಳು ಇಂದು ನಾಮಾವಶೇಷವಾಗುವ ಹಂತ ತಲುಪಿವೆ” ಎಂಬ ಆತಂಕವನ್ನು ಗ್ರಾಮಸೇವಾ ಸಂಘ ಪತ್ರದ ಮೂಲಕ ವ್ಯಕ್ತಪಡಿಸಿದೆ.

ನಿಗಮದ ಅಡಿಯಲ್ಲಿನ 6,000 ನೇಕಾರರಿಗೆ ದೊರೆಯುವ ಲಾಭಕ್ಕಿಂತ ನಿಗಮದ ನೌಕರರಿಗೇ ಹೆಚ್ಚು ಸಂಬಳ ದೊರೆಯುತ್ತಿವೆ ಎಂದಿರುವ ಗ್ರಾಮಸೇವಾ ಸಂಘ, ನಿಗಮವನ್ನು ಮುನ್ನಡೆಸಲು ಸರಕಾರ ಅಸಮರ್ಥವಾಗಿದ್ದರೆ ನಿಗಮವನ್ನು ನೇಕಾರಿಗೇ ವಹಿಸಿಕೊಡಿ ಎಂದು ಆಗ್ರಹಿಸಿದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಸಿದ್ಧರಿದ್ದೇವೆ ಎಂಬ ಭರವಸೆಯನ್ನೂ ಕೂಡ ಗ್ರಾಮಸೇವಾ ಸಂಘ ವ್ಯಕ್ತಪಡಿಸಿದ್ದು, ಅಮುಲ್‌ ಸಂಸ್ಥೆಯನ್ನು ಉದಾಹರಣೆಯಾಗಿ ನೀಡಿದೆ.

ಗ್ರಾಮಸೇವಾ ಸಂಘದ ಪತ್ರ.
ಗ್ರಾಮಸೇವಾ ಸಂಘದ ಪತ್ರ.

ಅಮುಲ್‌ ಭಾರತದ ಅತಿದೊಡ್ಡ ಹಾಲು ಉತ್ಪಾದಕರ ಸಹಕಾರ ಸಂಘ. ಇಂದು ದೇಶದ ಅಸಂಖ್ಯಾತ ಮಹಿಳೆಯರ ಬದುಕಿಗೆ ಅಮುಲ್‌ ಸಂಸ್ಥೆ ಭದ್ರತೆ ಒದಗಿಸಿದೆ. ಗ್ರಾಮೀಣ ಭಾಗದ ಜನರಲ್ಲಿ ನೆಮ್ಮದಿಯನ್ನು ಮೂಡಿಸಿದೆ. ಇದೇ ರೀತಿ ನೇಕಾರರೂ ಕೂಡ ತಮ್ಮನ್ನು ತಾವೇ ನಡೆಸಿಕೊಂಡು ಭದ್ರತೆಗಳಿಸಲು ಶಕ್ತರಾಗಿರುವುದಾಗಿ ಗ್ರಾಮಸೇವಾ ಸಂಘ ಪತ್ರದ ಮೂಲಕ ಸರಕಾರಕ್ಕೆ ತಿಳಿಸಿದೆ. ಜತೆಗೆ ಸರಕಾರ ಬೇಜವಾಬ್ದಾರಿತನವನ್ನೂ ಅಲ್ಲಗೆಳೆದಿದೆ.

ಈ ಕುರಿತು ‘ಸಮಾಚಾರ’ದ ಜತೆ ಮಾತನಾಡಿದ ಅಖಿಲ ಕರ್ನಾಟಕ ಕೈ ಮಗ್ಗ ನೇಕಾರರ ಸಂಘದ ಉಪಾಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, “ಕೈಮಗ್ಗ ನೇಕಾರರ ನಿಗಮ ಇಂದು ಸರಿಯಾಗಿ ನಡೆಯುತ್ತಿಲ್ಲ. ಮೊದಲು ನಿಗಮದ ಅಡಿಯಲ್ಲಿ 45,000 ಕೈಮಗ್ಗ ನೇಕಾರರು ಕಾರ್ಯ ನಿರ್ವಹಿಸುತ್ತಿದ್ದರು. ಇಂದು ನಿಗಮದ ಜತೆಗಿರುವ ನೇಕಾರರ ಸಂಖ್ಯೆ 6,000ಕ್ಕೆ ಇಳಿಮುಖಗೊಂಡಿದೆ. ಇರುವ ಇಷ್ಟು ಜನಕ್ಕೆಯೇ ನಿಗಮದಿಂದ ಕೆಲಸ ಒದಗಿಸಲು ಸಾಧ್ಯವಾಗುತ್ತಿಲ್ಲ. ನಿಗಮವನ್ನೇ ನಂಬಿಕೊಂಡಿರುವ ನೇಕಾರರು ಬೀದಿಪಾಲು ಆಗಬಾರದು. ಆದ್ದರಿಂದ ನಿಗಮವನ್ನು ನೇಕಾರರಿಗೇ ವಹಿಸಿಕೊಡಿ, ನಾವೇ ಅದನ್ನು ನಡೆಸಿಕೊಂಡು ಹೋಗುತ್ತೇವೆ ಎಂದು ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ,” ಎಂದರು.

ನಿಗಮದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೈ ಮಗ್ಗ ನೇಕಾರರಿಗೆ ಲಾಭ ದೊರೆಯುತ್ತಿಲ್ಲ ಎಂಬ ಅಭಿಪ್ರಾಯ ಹೊಂದಿರುವ ವಿಠ್ಠಪ್ಪ ಗೋರಂಟ್ಲಿ, ಈ ಪರಿಸ್ಥಿತಿ ಬದಲಾಗಿ ನೇಕಾರರಿಗೆ ನ್ಯಾಯ ದೊರೆಯಬೇಕು ಎನ್ನುವ ಅಭಿಲಾ‍ಷೆಯನ್ನು ವ್ಯಕ್ತಪಡಿಸಿದ್ದಾರೆ.

ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ನೌಕರರ ಸಂಬಳ ಒಂದು ತಿಂಗಳಿಗೆ 2 ಕೋಟಿ ರುಪಾಯಿಗಳನ್ನು ತಲುಪುತ್ತದೆ. ಅದೇ ವೇಳೆ 6,000 ನೇಕಾರರಿಗೆ ಸಿಗುವ ವರಮಾನವೂ2 ಕೋಟಿ ರೂಪಾಯಿಗಳೇ ಆಗಿದೆ. ಶ್ರಮ ಹಾಕಿ ದುಡಿಯುವ ನೇಕಾರರಿಗಿಂತ ಹತ್ತು ಪಟ್ಟು ಹೆಚ್ಚಿನ ಲಾಭವನ್ನುನಿಗಮದ ನೌಕರರು ಪಡೆಯುತ್ತಿದ್ದಾರೆ. ಇದೆಲ್ಲವನ್ನೂ ನಿಲ್ಲಿಸಿ, ಸರಿಯಾದ ರೀತಿಯಲ್ಲಿ ನಿಗಮವನ್ನು ನಡೆಸಬೇಕು ಎನ್ನುವುದು ನಮ್ಮ ಅಹವಾಲು.
ವಿಠ್ಠಪ್ಪ ಗೋರಂಟ್ಲಿ, ಉಪಾಧ್ಯಕ್ಷರು, ಅಖಿಲ ಕರ್ನಾಟಕ ಕೈಮಗ್ಗ ನೇಕಾರರ ಸಂಘ.

ನಿಗಮದ ಜವಾಬ್ದಾರಿ ಸಂಪೂರ್ಣವಾಗಿ ನೇಕಾರರ ಕೈಗೆ ದೊರೆತರೆ ನೇಕಾರರಿಂದಲೇ ನಿಗಮವನ್ನು ಮುನ್ನಡೆಸಲು ಸಾಧ್ಯವಾಗುತ್ತದೆಯೇ ಎಂಬ ಪ್ರಶ್ನೆಗೆ ಖಂಡಿತ ಸಾಧ್ಯವಿದೆ ಎನ್ನುತ್ತಾರೆ ವಿಠ್ಠಪ್ಪ ಗೋರಂಟ್ಲಿ.

“ಉತ್ತರ ಕರ್ನಾಟಕ ಭಾಗದಲ್ಲಿ ಅನೇಕ ನೇಕಾರರ ಸ್ವ ಸಹಾಯ ಸಂಘಗಳು ಲಾಭದಲ್ಲಿ ನಡೆಯುತ್ತಿವೆ. ಕೋಟ್ಯಾಳು, ಸೂಳೆಬಾವಿ ಮುಂತಾದ ಕಡೆಯಲ್ಲಿ ನಡೆಯುತ್ತಿರುವ ಸ್ವಸಹಾಯ ಸಂಘಗಳು ನಮಗೆ ಉದಾಹರಣೆಯಾಗಿ ನಿಲ್ಲುತ್ತವೆ. ಸರಕಾರದ ರಕ್ಷಣೆಯ ಜತೆಗೆ ನೇಕಾರರೇ ಮುಂದೆ ನಿಂತು ನಿಗಮದ ಕೆಲಸವನ್ನು ಮಾಡಿದರೆ ಉತ್ತಮ ಪ್ರತಿಫಲ ದೊರೆಯುತ್ತದೆ,” ಎನ್ನುವುದು ಅವರ ಅಭಿಪ್ರಾಯ.

ಭಾರತದಲ್ಲಿನ ಕೈಮಗ್ಗದ ಇತಿಹಾಸ ನಾಗರಿಕತೆಗಳ ಇತಿಹಾಸದಷ್ಟೇ ಹಳೆಯದು. ಕೃಷಿಯ ನಂತರ ನೇಯ್ಗೆ ಭಾರತದ ಸಾಂಪ್ರದಾಯಿಕ ಕಸುಬುಗಳಲ್ಲಿ ಒಂದಾಗಿತ್ತು. ಕ್ರಿಸ್ತ ಪೂರ್ವ 1500ರಿಂದ ಕ್ರಿಸ್ತ ಶಕ 1500ರವರೆಗಿನ 30 ಶತಮಾನಗಳ ಕಾಲ ಭಾರತದ ಬಟ್ಟೆಗಳ ಉತ್ಪಾದನೆಯಲ್ಲಿ ಏಕಸ್ವಾಮ್ಯ ಸಾಧಿಸಿತ್ತು. 200ಕ್ಕೂ ಹೆಚ್ಚು ತರಹದ ಕೈಮಗ್ಗ ಉತ್ಪಾದನೆಗಳನ್ನು ಜಗತ್ತಿನ ಇತರೆ ದೇಶಗಳಿಗೆ ರಫ್ತು ಮಾಡುತ್ತಿತ್ತು. ಭಾರತದ ನೇಯ್ಗೆ ಕೀರ್ತಿ ಕೆಳಗಿಳಿಯುತ್ತಾ ಸಾಗಿದ್ದು 1498ರಲ್ಲಿ ವಾಸ್ಕೋ ಡಾ ಗಾಮ ಭಾರತಕ್ಕೆ ಬಂದ ನಂತರ.

ಕೈಗಾರಿಕಾ ಕ್ರಾಂತಿ ಭಾರತದ ಕೈಮಗ್ಗ ನೇಕಾರರನ್ನು ಸಂಪೂರ್ಣವಾಗಿ ನೆಲಕಚ್ಚಿಸಿತು. 1854ರಲ್ಲಿ ಕಲ್ಕತ್ತಾದಲ್ಲಿ ಸ್ಥಾಪನೆಗೊಂಡ ಮೊದಲ ಜವಳಿ ಕಾರ್ಖಾನೆ, ಸುತ್ತಲಿನ ನೇಕಾರರನ್ನು ಬೀದಿಗೆ ತಳ್ಳಿತು. ನಂತರದಲ್ಲಿ ಭಾರತದಾದ್ಯಂತ ನೇಕಾರರ ಕೈಮಗ್ಗಗಳ ಜಾಗದಲ್ಲಿ ಯಂತ್ರಗಳು ಬಂದು ಕುಳಿತವು. ಭಾರತದ ಬಟ್ಟೆಗೆ ಬೆಲೆಯೇನೋ ಇತ್ತು. ಆದರೆ ಕೈಮಗ್ಗದಲ್ಲಿ ಬಟ್ಟೆ ನೇಯುವ ಕಾರ್ಮಿಕರು ತಮ್ಮ ಕಸುಬನ್ನು ಕಳೆದುಕೊಂಡರು.

ಇವತ್ತಿಗೂ ಕೂಡ ಪರಿಸ್ಥಿಯೇನು ಬದಲಾಗಿಲ್ಲ. ಹಿಂದೊಮ್ಮೆ ಕೋಟಿಗಳ ಸಂಖ್ಯೆಯಲ್ಲಿದ್ದ ನೇಕಾರರು ಇಂದು ಇಡೀ ಭಾರತದಲ್ಲಿ ಲಕ್ಷಗಳಿಗೆ ಇಳಿದಿದ್ದಾರೆ. ಕೈಮಗ್ಗ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವಾರು ಯೋಜನೆಗಳನ್ನು ತಂದಿವೆಯಾದರೂ ಕೂಡ ದೈತ್ಯ ಬಹುರಾಷ್ಟ್ರೀಯ ಕಂಪನಿಗಳ ಎದುರು ಸೆಣಸುವಷ್ಟು ಸ್ಥೈರ್ಯವನ್ನು ನೇಕಾರರಲ್ಲಿ ಉಳಿಸಿಲ್ಲ.

ಕರ್ನಾಟಕದ್ದೂ ಇದೇ ಪರಿಸ್ಥಿತಿ. ಕೈ ಮಗ್ಗ ನೇಕಾರರ ಅಭಿವೃದ್ಧಿಗಾಗಿ ‘ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ’ವನ್ನು ಕರ್ನಾಟಕ ಸರಕಾರ 1975ರಲ್ಲೇ ಸ್ಥಾಪಿಸಿದೆ. ನಿಗಮದ ಅಡಿಯಲ್ಲಿ ಬರುವ ನೇಕಾರರ ಉತ್ಪನ್ನಗಳನ್ನು ಸರಕಾರ ‘ಪ್ರಿಯದರ್ಶಿನಿ’ ಹೆಸರಿನ ಸರಕಾರಿ ಸ್ವಾಮ್ಯದ ಮಳಿಗೆಗಳಲ್ಲಿ ಮಾರಾಟಕ್ಕಿಟ್ಟು, ನೇಕಾರರಿಗೆ ಉತ್ತಮ ಬೆಲೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊಂದಿದೆ. ಆದರೆ ನಿಗಮದಿಂದೇನು ಲಾಭವಾಗುತ್ತಿಲ್ಲ ಎಂಬ ದೂರು ಕೈಮಗ್ಗ ನೇಕಾರರದ್ದು.

ಇದರ ಜತೆಗೆ ಸರಕಾರ ಕರಕುಶಲ ಉತ್ಪನ್ನಗಳ ಮೇಲೆ ಸರಕು ಮತ್ತು ಸೇವಾ ತೆರಿಗೆಯನ್ನು ವಿಧಿಸಿದೆ. ತಮ್ಮ ಪರಿಶ್ರಮಕ್ಕೆ ನ್ಯಾಯಯುತವಾದ ಲಾಭವನ್ನೇ ಪಡೆಯದಿರುವ ನೇಕಾರರು ಈಗ ತೆರಿಗೆಯನ್ನೂ ಕೂಡ ಕಟ್ಟಬೇಕಾಗಿದೆ. ರಾಜ್ಯ ಸರಕಾರ ಕರ ಉತ್ಪನ್ನಗಳನ್ನು ತೆರಿಗೆ ಮುಕ್ತವಾಗಿಸುವುದರ ಜತೆಗೆ ಕೇಂದ್ರದ ಜತೆಗೆ ಮಾತನಾಡಿ, ಕೈ ಮಗ್ಗ ನೇಕಾರರ ಬೆಂಬಲಕ್ಕೆ ಧಾವಿಸಬೇಕು ಎಂಬ ಬೇಡಿಕೆಯನ್ನು ಗ್ರಾಮಸೇವಾ ಸಂಘ ಸರಕಾರದ ಮುಂದಿಟ್ಟಿದೆ.

ತಮ್ಮ ಬೇಡಿಕೆಯನ್ನು ಸರಕಾರಕ್ಕೆ ತಲುಪಿಸುವ ಸಲುವಾಗಿ ಆಗಸ್ಟ್‌ 7ರ ರಾಷ್ಟ್ರೀಯ ಕೈಮಗ್ಗ ದಿನದಂದು ರಾಜ್ಯದ ಎಲ್ಲಾ ಸಂಘಟನೆಗಳು ಸೇರಿ ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕೈ ಮಗ್ಗದ ಉತ್ಪನ್ನಗಳನ್ನು ಮಾರುವುದರ ಮೂಲಕ ಹೋರಾಟ ನಡೆಸಲು ಗ್ರಾಮಸೇವಾ ಸಂಘ ನಿರ್ಧರಿಸಿದೆ. ಈ ಹೋರಾಟಕ್ಕೆ ಸರಕಾರ ಸ್ಪಂದಿಸದಿದ್ದಲ್ಲಿ ಆಗಸ್ಟ್‌ 9ರಂದು ಹುಬ್ಬಳ್ಳಿಯ ‘ಕರ್ನಾಟಕ ಕೈ ಮಗ್ಗ ನೇಕಾರರ ಅಭಿವೃದ್ಧಿ ನಿಗಮ’ದ ಮುಂದೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ತಿಳಿಸಿದೆ.

ನಿಗಮ ಮಂಡಳಿಗಳು ರಾಜಕೀಯ ಆಕಾಂಕ್ಷಿಗಳಿಗೆ ಲಾಭ ತಂದುಕೊಡುವ ಸ್ಥಾನಗಳಾಗಿ ಬದಲಾಗಿವೆ. ಅವುಗಳ ಮೂಲ ಆಶಯಗಳು ಗಟಾರ ಸೇರಿ ಹಲವು ದಶಕಗಳೇ ಕಳೆದಿವೆ. ಪ್ರಾಮಾಣಿಕ ಕಾಳಜಿ ಎಂಬುದು ಸರಕಾರಕ್ಕೆ ಇದ್ದದ್ದೇ ಆದರೆ, ಮೊದಲು ಇಂತಹ ನಿಗಮಗಳಿಗೆ ಕಾಯಕಲ್ಪ ಕಲ್ಪಿಸಬೇಕಿದೆ. ಇಲ್ಲವಾದರೆ, ಫಲಾನುಭವಿಗಳ ಕೈಗೇ ಕೊಟ್ಟು ಮುನ್ನಡೆಸುವುದು ಸೂಕ್ತ.