samachara
www.samachara.com
‘ಮುಖ್ಯಮಂತ್ರಿ vs ಮಾಧ್ಯಮಗಳು’: ಕುಮಾರಸ್ವಾಮಿ ಆಡಳಿತದಲ್ಲಿ ಪತ್ರಕರ್ತರು ಹಾಗೂ ದಲ್ಲಾಳಿಗಳು!
COVER STORY

‘ಮುಖ್ಯಮಂತ್ರಿ vs ಮಾಧ್ಯಮಗಳು’: ಕುಮಾರಸ್ವಾಮಿ ಆಡಳಿತದಲ್ಲಿ ಪತ್ರಕರ್ತರು ಹಾಗೂ ದಲ್ಲಾಳಿಗಳು!

ತಮ್ಮ ಮುಂದೆ ಟಿವಿ ವಾಹಿನಿಗಳ ಮೈಕ್‌ ಕಂಡಾಗೆಲ್ಲಾ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಯಾವ ಮುಖ್ಯಮಂತ್ರಿಯೂ ಮಾಧ್ಯಮಗಳ ಬಗೆಗೆ ಇಷ್ಟರ ಮಟ್ಟಿಗೆ ಅಸಹನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ ಉದಾಹರಣೆಗಳಿಲ್ಲ.

Team Samachara

“ನಿಮಗೆ ವಿಷಯ ಗೊತ್ತಿಲ್ಲದೆ ಮಾತಾಡಬೇಡಿ. ಪ್ರತಿಯೊಂದರಲ್ಲೂ ತಪ್ಪನ್ನೇ ಕಂಡುಹಿಡಯಲು ಹೊರಟಿದ್ದೀರಿ. ರಾಜ್ಯ ಉದ್ಧಾರ ಆಗಬೇಕಾ, ಹಾಳಾಗಬೇಕಾ ನಿಮಗೆ ಸೇರಿದ್ದು. ನಾನು ಮಾಧ್ಯಮ ಮಿತ್ರರಲ್ಲಿ ಹೇಳಲು ಬಯಸುತ್ತೇನೆ; ಈಗ ಉತ್ತರ ಕರ್ನಾಟಕದ ವಿಚಾರ. ಬೆಂಕಿ ಹಚ್ಚುತ್ತಿರುವವರು ನೀವು. ರಾಜಕಾರಣಿಗಳ ಒಂದು ಟೀಮ್‌ನ ಕೆಲಸ ನಡೆಯುತ್ತಿದೆ. ಅದು ನನಗೆ ಗೊತ್ತಿದೆ. ನಾನು ಏನು ಹೇಳಿಕೆ ಕೊಟ್ಟಿದ್ದೀನಿ? ಚನ್ನಪಟ್ಟಣದಲ್ಲಿ ಕೊಟ್ಟ ಹೇಳಿಕೆ ಏನು? ಶ್ರೀರಾಮುಲು ವಿಧಾನಸಭೆಯಲ್ಲಿ ಹೇಳಿದ ಮಾತನ್ನು ಕೋಟ್ ಮಾಡಿದೆ. ಇವರು ಉತ್ತರ ಕರ್ನಾಟಕ ಮಾಡಿಕೊಂಡು ಅಭಿವೃದ್ಧಿಗೆ ದುಡ್ಡು ಎಲ್ಲಿಂದ ತರುತ್ತಾರೆ ಎಂದು ಪ್ರಶ್ನೆ ಮಾಡಿದೆ. ಅದೇ ನನ್ನ ಅಪರಾಧನಾ? ಒಂದು ವಾರದಿಂದ ನೋಡ್ತಾ ಇದೀನಿ. ದಿನಾ ಅದೇ ಚರ್ಚೆ ಮಾಡುತ್ತಿದ್ದೀರಾ... ನಾನು ನೂರು ಬಾರಿ ಅಖಂಡ ಕರ್ನಾಟಕ ಅಂತ ಹೇಳಿದ್ದೀನಿ. ನೀವು ಮಾಧ್ಯಮ ಮಿತ್ರರು ರಾಜ್ಯವನ್ನು ಹಾಳು ಮಾಡುತ್ತಿದ್ದೀರಾ... ತಪ್ಪು ತಿಳ್ಕೊಬೇಡಿ,’’

ಹೀಗಂತ ಸೋಮವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಹೀಗೆ, ಮಾಧ್ಯಮಗಳ ವಿರುದ್ಧ ಸ್ವತಃ ರಾಜ್ಯದ ಸಿಎಂ ಮುಗಿಬೀಳುತ್ತಿರುವುದು ಇದೇ ಮೊದಲೇನೂ ಅಲ್ಲ. ಸಮ್ಮಿಶ್ರ ಸರಕಾರದ ರಚನೆಯ ಆರಂಭದಿಂದಲೂ ಕುಮಾರಸ್ವಾಮಿ ಮಾಧ್ಯಮಗಳ ಬಗೆಗಿನ ತಮ್ಮ ಅಸಹನೆಯನ್ನು ಹೊರಹಾಕುತ್ತಲೇ ಬಂದಿದ್ದಾರೆ. ಅದು ದಿಲ್ಲಿ ಇರಲಿ, ಬೆಂಗಳೂರು ಇರಲಿ, ತಮ್ಮ ಮುಂದೆ ಟಿವಿ ವಾಹಿನಿಗಳ ಮೈಕ್‌ ಕಂಡಾಗೆಲ್ಲಾ ಮುಖ್ಯಮಂತ್ರಿ ಕುಮಾರಸ್ವಾಮಿ ಮಾಧ್ಯಮಗಳನ್ನು ತರಾಟೆ ತೆಗೆದುಕೊಂಡಿದ್ದಾರೆ. ಬಹುಶಃ ರಾಜ್ಯದ ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಯೂ ಮಾಧ್ಯಮಗಳ ಬಗೆಗೆ ಇಷ್ಟರ ಮಟ್ಟಿಗೆ ಅಸಹನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ ಉದಾಹರಣೆಗಳಿಲ್ಲ.

ಏನ್ ನಡೀತಿದೆ?:

"ಎಲ್ಲಾ ಸರಿ ಇರುವ ಸರಕಾರಗಳೇ ಅಧಿಕಾರಕ್ಕೆ ಬಂದಾಗ ಆಡಳಿತವನ್ನು ಶುರುಮಾಡಲು ಸಮಯ ಬೇಕಾಗುತ್ತದೆ. ಅಂತಹದ್ದರಲ್ಲಿ ನಮ್ಮದು ಸಮ್ಮಿಶ್ರ ಸರಕಾರ. ಸ್ವಲ್ಪ ದಿನ ತಾಳ್ಮೆಯಿಂದ ಇರಿ,’’ ಎಂದಿದ್ದರು ಕುಮಾರಸ್ವಾಮಿ. ಸಂಪುಟ ಸಹೋದ್ಯೋಗಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಸಿ ಬಂದ ಅವರು ಮಾಧ್ಯಮಗಳ ಜತೆ ಮಾತನಾಡುತ್ತಿದ್ದರು. ಅವತ್ತಿಗಾಗಲೇ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಎರಡು ವಾರಗಳು ಕಳೆದಿದ್ದವು. ಅಷ್ಟೊತ್ತಿಗಾಗಲೇ ಹೊಸ ಸರಕಾರ ‘ಟೇಕ್ ಆಫ್’ ಆಗಿಲ್ಲ ಎಂಬ ಕೂಗು ಎದ್ದಿತ್ತು. ಇದನ್ನು ಪ್ರಸ್ತಾಪಿಸಿದ್ದ ಮುಖ್ಯಮಂತ್ರಿ, ‘ಕಾಲಾವಕಾಶ ಕೊಡಿ’ ಅಂತ ಕೇಳಿದ್ದರು.

Also read: ‘ಮಾಧ್ಯಮಗಳಲ್ಲಿ ಖಾತೆ ಹಂಚಿಕೆ’: ಉಗಿದು ಉಪ್ಪಿನಕಾಯಿ ಹಾಕಿದ ಸಿಎಂ, ಡಿಸಿಎಂ!

ಅದಾದ ನಂತರ ಜನತಾ ದರ್ಶನ, ಜಿಲ್ಲೆಗಳ ಭೇಟಿ ಸಮಯದಲ್ಲಿ ಕುಮಾರಸ್ವಾಮಿ ಮಾಧ್ಯಮಗಳನ್ನು ಹತ್ತಿರ ಬಿಟ್ಟುಕೊಂಡಿದ್ದರು. ಅವರ ಆಡಳಿತಾವಧಿಯ ಕ್ಷಣಕ್ಷಣದ ಮಾಹಿತಿಗಳಿಗೂ ಕೊರತೆ ಏನಿರಲಿಲ್ಲ. ಹೀಗಿರುವಾಗ ‘ವಿಧಾನಸೌಧಕ್ಕೆ ಮಾಧ್ಯಮಗಳ ನಿಷೇಧ’ ಎಂಬ ಸುದ್ದಿ ಹೊರಬಿತ್ತು. ಈ ಸಮಯದಲ್ಲಿ ಕುಮಾರಸ್ವಾಮಿ ನೀಡಿದ ಪ್ರತಿಕ್ರಿಯೆ ಗಮನ ಸೆಳೆಯುವಂತಿದೆ.

“ವಿಧಾನಸೌಧಕ್ಕೆ ಮಾಧ್ಯಮಗಳನ್ನು ನಿಷೇಧಿಸುವ ಪ್ರಸ್ತಾಪ ಇಲ್ಲ. ಆದರೆ ದಲ್ಲಾಳಿಗಳಿಂದ ಕೆಲಸ ಹಾಳಾಗುತ್ತಿದೆ. ಅವರನ್ನು ನಿಯಂತ್ರಿಸುವುದಕ್ಕಾಗಿ ಕ್ರಮ ಕೈಗೊಳ್ಳುತ್ತಿದ್ದೇವೆ,’’ ಎಂದು ಹೇಳಿದರು. ಪರೋಕ್ಷವಾಗಿ ವಿಧಾನಸೌಧಕ್ಕೆ ಬರುವ ಪತ್ರಕರ್ತರಲ್ಲಿ ಕೆಲವರು ದಲ್ಲಾಳಿಗಳ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಖುದ್ದು ಮುಖ್ಯಮಂತ್ರಿ ಹರಿಹಾಯ್ದರು. ವಿಚಾರ, ಇನ್ನಷ್ಟು ಆಳಕ್ಕಿಳಿದು ಚರ್ಚೆ ನಡೆಯಬೇಕಿತ್ತು; ವಿಧಾನಸೌಧಕ್ಕೆ ಬರುವ ದಲ್ಲಾಳಿಗಳು ಯಾರು? ಅವರಿಗೂ ಪತ್ರಕರ್ತರಿಗೂ ಏನು ಸಂಬಂಧ? ಅವರ ನಿಯಂತ್ರಣಕ್ಕೂ, ಮಾಧ್ಯಮಗಳ ನಿಯಂತ್ರಣಕ್ಕೂ ಏನು ಸಂಬಂಧ? ಹೀಗೆ ಪ್ರಶ್ನೆಗಳ ಸುತ್ತ ಪ್ರತಿಕ್ರಿಯೆಗಳು ಏಳುವ ಮುನ್ನವೇ ಕುಮಾರಸ್ವಾಮಿ ಪ್ರತಿಕ್ರಿಯೆ ಎಲ್ಲವನ್ನೂ ತಣ್ಣಗಾಗಿಸಿತು.

ಉತ್ತರ ಕರ್ನಾಟಕದ ಕಿಚ್ಚು:

ಅದಾದ ನಂತರ ಉತ್ತರ ಕರ್ನಾಟಕದ ವಿಚಾರ ಬಂದಾಗ, ಚನ್ನಪಟ್ಟಣದಲ್ಲಿ ಅವರು ಆಡಿದ ಮಾತು ಮತ್ತು ಅದಕ್ಕೂ ಮೊದಲು ನೀಡಿದ ಹೇಳಿಕೆಗಳು ಹೊಸ ಕಿಚ್ಚು ಹೊತ್ತಿಸಿದವು.

ಹಿಂದೆ, 20-20 ಸರಕಾರದ ಸಮಯದಲ್ಲಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧಕ್ಕೆ ಚಾಲನೆ ನೀಡಿದ್ದು ಕುಮಾರಸ್ವಾಮಿ. ಅವರು ತಮ್ಮ ಜನಪ್ರಿಯ ಗ್ರಾಮ ವಾಸ್ತವ್ಯವವನ್ನು ಆರಂಭಿಸಿದ್ದು ಉತ್ತರ ಕರ್ನಾಟಕದ ಅಥಣಿಯಿಂದ. ಉತ್ತರ ಕರ್ನಾಟಕದಲ್ಲಿ ಪಕ್ಷದ ಬಲವಿಲ್ಲದಿದ್ದರೂ, ಕುಮಾರಸ್ವಾಮಿ ನಾಯಕರಾಗಿ ಹೆಸರುಗಳಿಸಿದ್ದರು. ಆದರೆ ಅವರೇ ಇವತ್ತು ಉತ್ತರ ಕರ್ನಾಟಕದ ಕುರಿತು ನೀಡಿದ ಹೇಳಿಕೆ ಅನೇಕರಿಗೆ ಅಚ್ಚರಿ ಮೂಡಿಸಿದೆ. ಮತ್ತು ಅದನ್ನು ಬಿಂಬಿಸುತ್ತಿರುವುದು ಮಾಧ್ಯಮಗಳ ಹೊಣೆಗಾರಿಕೆ ಕೂಡ.

“ಹಿಂದೆ ಹೇಳಿಕೆ, ಪ್ರತಿಕ್ರಿಯೆಗಳಿಗೆ ಎರಡೆರಡು ದಿನಗಳ ಕಾಲಾವಕಾಶ ಬೇಕಾಗುತ್ತಿತ್ತು. ಇವತ್ತು ಮುಖ್ಯಮಂತ್ರಿ ಹೇಳಿಕೆ ನೀಡಿದರೆ ಅದು ನಾಳೆ ದಿನ ಪ್ರಕಟವಾಗುತ್ತಿತ್ತು. ಅದಕ್ಕೆ ಪ್ರತಿಕ್ರಿಯೆ ನೀಡಿದರೆ ಅದರ ನಾಡಿದ್ದು ಪ್ರಕಟವಾಗುತ್ತಿತ್ತು. ಆದರೆ ಸುದ್ದಿವಾಹಿನಿಗಳು ಹಾಗೂ ಸಾಮಾಜಿಕ ಜಾಲತಾಣಗಳು ಬಂದ ನಂತರ ಅಂದಿನ ಸುದ್ದಿ ಅಂದಿಗೆ ಎಂಬಂತಾಗಿದೆ. ಹೀಗಾಗಿ ಹೇಳಿಕೆಗಳಿಗೆ ಎಲ್ಲಿಲ್ಲದ ತೀವ್ರತೆ ಬಂದಿದೆ,’’ ಎನ್ನುತ್ತಾರೆ ಉತ್ತರ ಕರ್ನಾಟಕ ಮೂಲದ ಹಿರಿಯ ಪತ್ರಕರ್ತ ಸರ್ಜೂ ಕಾಟ್ಕರ್.

“ಉತ್ತರ ಕರ್ನಾಟಕದ ಕುರಿತು ಕುಮಾರಸ್ವಾಮಿ ಹೇಳಿಕೆ ಅಚ್ಚರಿ ಮೂಡಿಸುತ್ತಿದೆ. ಹಿಂದೆ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಮಾತನಾಡಿದ ಕೆಲವೇ ಮುಖ್ಯಮಂತ್ರಿಗಳಲ್ಲಿ ಅವರೂ ಒಬ್ಬರಾಗಿದ್ದರು. ಅವರಿಂದ ಇಂತಹ ಹೇಳಿಕೆ ನಿರೀಕ್ಷೆ ಮಾಡಿರಲಿಲ್ಲ,’’ ಎಂದರು ಕಾಟ್ಕರ್. ‘ಸಮಾಚಾರ’ದ ಜತೆ ಮಾತನಾಡಿದ ಅವರು, “ಮಾಧ್ಯಮಗಳಲ್ಲಿ ಮುಖ್ಯಮಂತ್ರಿ ಹೇಳಿಕೆಗೆ ಮಹತ್ವದ ಸ್ಥಾನ ಇದೆ. ಅಂತವರ ಹೇಳಿಕೆಯಲ್ಲಿ ಯಡವಟ್ಟುಗಳಿದ್ದರೆ ಇವತ್ತಿಗೆ ಭಾರಿ ಪರಿಣಾಮವೇ ಬೀರುತ್ತದೆ. ಹೀಗಾಗಿ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡಬೇಕಾಗುತ್ತದೆ,’’ ಎಂಬ ಕಿವಿಮಾತನ್ನೂ ಹೇಳಿದರು.

ಆದರೆ, ಮೇ ತಿಂಗಳಿಂದ ಆರಂಭವಾದ ಸಮ್ಮಿಶ್ರ ಆಡಳಿತದಲ್ಲಿ ಕುಮಾರಸ್ವಾಮಿ ಹೇಳಿಕೆಗಳು, ಮಾಧ್ಯಮಗಳ ವಿರುದ್ಧದ ಅವರ ಅಸಹನೆ ಹೊಸ ಎತ್ತರವನ್ನು ತಲುಪಿದಂತಿದೆ. ಎಚ್ಚರಿಕೆ ನಡೆಗಳ ಜಾಗವನ್ನು ಆವೇಶ, ಆಕ್ರೋಶಗಳು ಪಡೆದುಕೊಂಡಿವೆ. ಅದು ಸೋಮವಾರದ ಪ್ರತಿಕ್ರಿಯೆಯಲ್ಲಿಯೂ ವ್ಯಕ್ತವಾಗಿದೆ. ಮೇಲಿನ ಹೇಳಿಕೆ ನಂತರ ಪತ್ರಕರ್ತರು ಪ್ರಶ್ನೆಯನ್ನು ಎಸೆಯುತ್ತಿದ್ದಂತೆ ಕುಮಾರಸ್ವಾಮಿ ಒಳಗಿನ ಅಸಹನೆ ಸ್ಫೋಟಿಸಿದೆ. ಸಾಕ್ಷಿ ಕೆಳಗಿನ ವಿಡಿಯೋದಲ್ಲಿದೆ.

ಮಾಧ್ಯಮಗಳ ಮಾಲೀಕರೂ ಆಗಿರುವ ಒಬ್ಬ ಮುಖ್ಯಮಂತ್ರಿ ತನ್ನದೇ ರಾಜ್ಯದ ಮಾಧ್ಯಮಗಳ ಬಗೆಗೆ ಯಾಕಿಷ್ಟು ಅಸಮಾಧಾನ ಇಟ್ಟುಕೊಂಡಿದ್ದಾರೆ? ಪ್ರಶ್ನೆಗಳು ಯಾಕೆ ಅವರಲ್ಲಿ ಆಕ್ರೋಶ ಹುಟ್ಟುಹಾಕುತ್ತಿದೆ? ಇದು ಮೆಲ್ನೋಟಕ್ಕೆ ಆಡಳಿತದಲ್ಲಿರುವವರು ಮಾಧ್ಯಮಗಳ ಬಗೆಗೆ ಹೊಂದಿರು ನಿಲುವು ಅಂತ ಅನ್ನಿಸುತ್ತಿದೆ. ಆದರೆ ಆಳದಲ್ಲಿ ಇದನ್ನು ಮೀರಿದ ಸತ್ಯಗಳಿರಬಹುದು ಎಂಬುದನ್ನು ನಡೆಯುತ್ತಿರುವ ಬೆಳವಣಿಗೆಗಳು ಹೇಳುತ್ತಿವೆ.