samachara
www.samachara.com
ಏನಿದು, ವಾರದ ಆರಂಭದಲ್ಲೇ ವಿವಾದ ಹುಟ್ಟು ಹಾಕಿದ ಅಸ್ಸಾಂನ ರಾಷ್ಟ್ರೀಯ ಪೌರತ್ವ? 
COVER STORY

ಏನಿದು, ವಾರದ ಆರಂಭದಲ್ಲೇ ವಿವಾದ ಹುಟ್ಟು ಹಾಕಿದ ಅಸ್ಸಾಂನ ರಾಷ್ಟ್ರೀಯ ಪೌರತ್ವ? 

ಹಿಂಸೆಗೆ ಒಳಗಾದ ಎಲ್ಲಾ ಧರ್ಮಗಳ ಮತ್ತು ಎಲ್ಲಾ ದೇಶಗಳ ನಿರಾಶ್ರಿತರಿಗೂ ಆಶ್ರಯ ನೀಡಿದ ರಾಷ್ಟ್ರ ಭಾರತ ಎಂದಿದ್ದರು ಸ್ವಾಮಿ ವಿವೇಕಾನಂದರು. ಇದೀಗ ಅದೇ ದೇಶ ತೆಗೆದುಕೊಳ್ಳುವ ತೀರ್ಮಾನ ಅಂದಾಜು 40 ಲಕ್ಷ ಜನರ ಭವಿಷ್ಯ ನಿರ್ಧರಿಸಲಿದೆ.

ಈಶಾನ್ಯ ಭಾರತದ ರಾಜ್ಯ ಅಸ್ಸಾಂ ವಿಶಿಷ್ಟ ಕಾರಣಕ್ಕೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಇಲ್ಲಿನ 3.29 ಕೋಟಿ ಜನರಲ್ಲಿ ಮೂಲ ಭಾರತೀಯರನ್ನು ಆಯ್ಕೆ ಮಾಡಿ ಅವರಿಗೆ ಕೇಂದ್ರ ಸರಕಾರ ಪೌರತ್ವ ನೀಡಲು ಮುಂದಾಗಿದ್ದು, ವಿವಾದದ ಸ್ವರೂಪವನ್ನು ಪಡೆದುಕೊಂಡಿದೆ.

ಅಸ್ಸಾಂನಲ್ಲಿ ನೆಲೆಸಿರುವ ‘ಭಾರತೀಯ ಪೌರತ್ವ ಪಡೆದವರ ಅಂತಿಮ ಕರಡು ಪಟ್ಟಿ’ಯನ್ನು ಸೋಮವಾರ ಪ್ರಕಟಿಸಲಾಗಿದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಎಂದು ಕರೆಯಲ್ಪಡುವ ಈ ಕರಡು ಪಟ್ಟಿಯನ್ನು ರಿಜಿಸ್ಟಾರ್‌ ಜನರಲ್‌ ಆಫ್ ಇಂಡಿಯಾ ಬಿಡುಗಡೆಗೊಳಿಸಿದ್ದು, ಇದರಿಂದ ಸುಮಾರು 40 ಲಕ್ಷ ಜನರನ್ನು ಹೊರಗಿಡಲಾಗಿದೆ.

ಏನಿದು ಭಾರತದ ಪೌರತ್ವ?

1947ರಲ್ಲಿ ಭಾರತ ಇಬ್ಭಾಗವಾಗಿತ್ತು. ಈ ಸಂದರ್ಭ ಪಾಕಿಸ್ತಾನದಂತೆ ಬಾಂಗ್ಲಾದೇಶದಿಂದಲೂ ಭಾರತಕ್ಕೆ ಜನರು ಬಂದು ನೆಲೆಸಿದ್ದರು. ಆ ಸಂದರ್ಭದಲ್ಲಿ ಅಸ್ಸಾಂಗೆ ದೊಡ್ಡ ಸಂಖ್ಯೆಯ ಜನರು ಬಂದರು.

ಎನ್‌ಆರ್‌ಸಿ ದಾಖಲೆ ಎನ್ನುವುದು ಅಸ್ಸಾಂಗೆ ಮಾತ್ರ ಸೀಮಿತವಾಗಿದ್ದು, 1951ರಲ್ಲಿ ಮೊದಲ ಬಾರಿಗೆ ಅಂದಿನ ಪೂರ್ವ ಪಾಕಿಸ್ತಾನ (ಬಾಂಗ್ಲಾದೇಶ) ದಿಂದ ವಲಸೆ ಬಂದವರನ್ನು ಗುರುತಿಸುವ ಕೆಲಸ ನಡೆದಿತ್ತು. ನಂತರ 1985ರಲ್ಲಿ ‘ಅಸ್ಸಾಂ ಒಪ್ಪಂದ’ಕ್ಕೆ ಸಹಿ ಹಾಕಲಾಯಿತು. ಅದರ ಪ್ರಕಾರ ಭಾರತದ ಬಾಂಗ್ಲಾದೇಶದಿಂದ ಭಾರತಕ್ಕೆ ಬಂದ ಹಿಂದೂ ಮತ್ತು ಮುಸ್ಲಿಂ ಸಮುದಾಯದವರಿಗೆ ಇಲ್ಲಿನ ಪೌರತ್ವ ಪಡೆದುಕೊಳ್ಳಲು 1971ರ ಮಾರ್ಚ್‌ 24ನ್ನು ಅಂತಿಮ ದಿನಾಂಕವಾಗಿ ನಿಗದಿಗೊಳಿಸಲಾಯಿತು. ಒಂದೊಮ್ಮೆ 1951ರ ಎನ್‌ಆರ್‌ಸಿಯಲ್ಲಿ ಜನರ ಹೆಸರಿದ್ದರೆ ಅಥವಾ ಮಾರ್ಚ್‌ 24, 1971ಕ್ಕೂ ಮೊದಲು ಭಾರತದ ಚುನಾವಣಾ ಗುರುತಿನ ಚೀಟಿ ಅಥವಾ ಅಧಿಕೃತ ಸರಕಾರಿ ದಾಖಲೆಗಳನ್ನು ಪಡೆದುಕೊಂಡಿದ್ದರೆ ಅಂಥಹ ವ್ಯಕ್ತಿಗಳಿಗೆ ಭಾರತದ ಪೌರತ್ವ ಸಿಗಲಿದೆ ಎಂದು ಒಪ್ಪಂದವಾಗಿತ್ತು.

ಗಮನಿಸಬೇಕಾದ ಅಂಶವೆಂದರೆ ಬಾಂಗ್ಲಾ ವಿಮೋಚನಾ ಯುದ್ಧ ಆರಂಭವಾಗಿದ್ದು ಮಾರ್ಚ್‌ 26, 1971ರ ನಂತರ. ಅಸ್ಸಾಂನಲ್ಲಿ ನೆಲೆ ನಿಂತಿರುವ ಈ ಸೋ ಕಾಲ್ಡ್‌ ವಲಸಿಗರು ಈ ಯುದ್ಧದ ಸಂದರ್ಭದಲ್ಲಿ ಬಂದವರು. ಬಾಂಗ್ಲಾದೇಶದಲ್ಲಿ ನಾಗರಿಕ ಯುದ್ಧದ ಹಿಂಸಾಚಾರಗಳನ್ನು ತಾಳಲಾರದೆ ಇವರು ಭಾರತಕ್ಕೆ ಬಂದಿದ್ದರು. ಯುದ್ಧಕ್ಕೂ ಮೊದಲೇ ಒಂದಷ್ಟು ಜನರು ಬಂದಿದ್ದರಾದರೂ ಅವರು ಸಣ್ಣ ಅವಧಿಯಲ್ಲಿ ಸರಕಾರಿ ದಾಖಲೆಗಳನ್ನು ಪಡೆದುಕೊಂಡಿರಲಿಲ್ಲ.

ಹೀಗೆ ಅಸ್ಸಾಂನಲ್ಲಿ ನೆಲೆ ನಿಂತ ಬಾಂಗ್ಲಾ ಮೂಲದ ಈ ಜನರ ವಿರುದ್ಧ ಕಳೆದ ಹಲವು ದಶಕಗಳಿಂದ ಪ್ರತಿಭಟನೆಗಳು ನಡೆಯುತ್ತಾ ಬಂದಿದ್ದವು. ಮತ್ತು ಈ ವಿವಾದಕ್ಕೆ ಕೊನೆ ಹಾಡಲು ಎನ್‌ಆರ್‌ಸಿ ಪಟ್ಟಿ ಸಿದ್ದಪಡಿಸಬೇಕು ಎಂಬ ಬೇಡಿಕೆ ಜನರಿಂದ ಕೇಳಿ ಬಂದಿತ್ತು. ಇದೀಗ ಆ ನಿಟ್ಟಿನಲ್ಲಿ ತಯಾರಾಗಿರುವುದೇ ಭಾರತೀಯ ಪೌರರ ಕರಡು ಪಟ್ಟಿ.

40 ಲಕ್ಷ ಜನರು ನಿರಾಶ್ರಿತರು

ಎನ್‌ಆರ್‌ಸಿ ಪ್ರಕಟಗೊಂಡರೆ ದೊಡ್ಡ ಸಂಖ್ಯೆಯ ಜನರು ನಿರಾಶ್ರಿತರಾಗಲಿದ್ದಾರೆ ಎಂದು ರಾಜಕೀಯ ಪಕ್ಷಗಳೂ ಸೇರಿದಂತೆ ಹಲವರು ಎಚ್ಚರಿಕೆಗಳನ್ನು ನೀಡುತ್ತಾ ಬಂದಿದ್ದರು. ಅವರ ಮಾತಿನಂತೆಯೇ ಈಗ ಪ್ರಕಟಗೊಂಡಿರುವ ಪಟ್ಟಿಯಲ್ಲಿ ಅಂದಾಜು 40 ಲಕ್ಷ ಜನರನ್ನು ಹೊರಗಿಡಲಾಗಿದೆ.

ಭಯ, ಆತಂಕ, ದುಗುಡ... ಜನರ ಕಣ್ಣಲ್ಲಿ ಭವಿಷ್ಯದ ಚಿಂತೆ
ಭಯ, ಆತಂಕ, ದುಗುಡ... ಜನರ ಕಣ್ಣಲ್ಲಿ ಭವಿಷ್ಯದ ಚಿಂತೆ
ಚಿತ್ರ ಕೃಪೆ: ರಾಯ್ಟರ್ಸ್‌

“ಈ ಪಟ್ಟಿ ನೋಡಿ ನಾನು ಅಘಾತಕ್ಕೆ ಒಳಗಾಗಿದ್ದೇನೆ” ಎನ್ನುತ್ತಾರೆ ಆಲ್‌ಇಂಡಿಯಾ ಯುನೈಟೆಡ್‌ ಡೆಮಾಕ್ರಾಟಿಕ್‌ ಫ್ರಂಟ್‌ ಪ್ರಧಾನ ಕಾರ್ಯದರ್ಶಿ ಅಮಿನುಲ್‌ ಇಸ್ಲಾಂ. ‘ಇದು ತೀರಾ ದೊಡ್ಡ ಸಂಖ್ಯೆ. ನಮಗೆ ಶಾಕ್‌ ಆಗಿದೆ’ ಎನ್ನುತ್ತಾರೆ ಅವರು. ಬೆಂಗಾಲಿ ಮೂಲದ ಹಕ್ಕುಗಳಿಗಾಗಿ ಈ ಸಂಘಟನೆ ಹೋರಾಡುತ್ತಾ ಬಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

“ಈ ಪಟ್ಟಿ ತಯಾರಿಕೆ ಬಗ್ಗೆ ನಮಗೆ ಸುಮಾರು ತಕರಾರುಗಳಿದ್ದವು. ಮರುಪರಿಶೀಲನೆ ಪ್ರಕ್ರಿಯೆಯನ್ನು ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ನಡೆಸಲಾಗಿದೆ. ಆದರೆ ಹಲವು ಹಂತಗಳಲ್ಲಿ ರಾಜ್ಯ ಸರಕಾರ ಇದರಲ್ಲಿ ಮೂಗು ತೂರಿಸಿದೆ. ನಾವು ಈ ಬಗ್ಗೆ ಮುಂದೆ ನ್ಯಾಯಾಲಯದ ಮೊರೆ ಹೋಗಲಿದ್ದೇವೆ,” ಎಂದು ಇಸ್ಲಾಂ ತಿಳಿಸಿದ್ದಾರೆ. ಅಲ್ಲಿಯವರೆಗೆ ಶಾಂತಿಯಿಂದ ಇರಿ ಎಂದು ಅವರು ಜನರಿಗೆ ಮನವಿ ಮಾಡಿಕೊಂಡಿದ್ದಾರೆ.

ಸರಕಾರದ ಈ ತೀರ್ಮಾನವನ್ನು ಮಾನವ ಇತಿಹಾಸದ ಅತೀ ದೊಡ್ಡ ಆಘಾತ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಮಾನವ ಹಕ್ಕುಗಳ ಹೋರಾಟಗಾರ ಸುಹಾಸ್‌ ಚಕ್ಮಾ. “ಈ ಹಿಂದೆ 1960ರಲ್ಲಿ ಭಾರತ ಮೂಲದ 3 ಲಕ್ಷ ಜನರಿಗೆ ಮಯನ್ಮಾರ್‌ನಲ್ಲಿ ಪೌರತ್ವ ನಿರಾಕರಿಸಲಾಗಿತ್ತು. ಇದಿ ಅಮೀನ್‌ 80 ಸಾವಿರ ಭಾರತ ಮೂಲದ ಜನರಿಗೆ ದೇಶದಲ್ಲಿ ಜಾಗ ನೀಡಿರಲಿಲ್ಲ. ಶ್ರೀಲಂಕಾದಲ್ಲಿ 5 ಲಕ್ಷ ಭಾರತ ಮೂಲದ ತಮಿಳರು ನಿರಾಶ್ರಿತರಾಗಿದ್ದರು. ಇದೀಗ ಮಯನ್ಮಾರ್‌ನಿಂದ ಇದೇ ರೀತಿ ಕಳೆದ ಮೂರು ದಶಕದಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಹೊರದಬ್ಬಲಾಗುತ್ತಿದೆ,” ಎನ್ನುತ್ತಾರೆ ಅವರು.

ತಿದ್ದುಪಡಿಗೆ ಅವಕಾಶ

ಆದರೆ ಯಾರೆಲ್ಲಾ ಹೆಸರುಗಳು ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲವೋ ಅವರು ಚಿಂತಿಸಬೇಕಾಗಿಲ್ಲ. ತಿದ್ದುಪಡಿಗೆ ಅವಕಾಶವಿದೆ ಎನ್ನುತ್ತಾರೆ ಕೇಂದ್ರ ಗೃಹಖಾತೆ ಸಚಿವ ರಾಜನಾಥ್ ಸಿಂಗ್. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರ ಸರಕಾರದ ತೀರ್ಮಾನವನ್ನು ಒಡೆದು ಆಳುವ ನೀತಿ ಎಂದು ಕಟು ಶಬ್ದಗಳಲ್ಲಿ ಖಂಡಿಸಿದ ಬೆನ್ನಿಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ. ವಿರೋಧ ಪಕ್ಷಗಳು ಈ ಸಂಬಂಧ ರಾಜ್ಯಸಭೆಯಲ್ಲೂ ಗದ್ದಲ ಎಬ್ಬಿಸಿವೆ. ಆದರೆ ತಣ್ಣಗೆ ಉತ್ತರ ನೀಡಿರುವ ಸಿಂಗ್ “ಒಂದೊಮ್ಮೆ ಅಂತಿಮ ಎನ್‌ಆರ್‌ಸಿ ಪಟ್ಟಿಯಲ್ಲಿಯೂ ನಾಗರೀಕರ ಹೆಸರು ಬರದಿದ್ದರೆ ಅವರು ಅಂತರಾಷ್ಟ್ರೀಯ ನ್ಯಾಯಾಧೀಕರಣ ಮೊರೆ ಹೋಗಬಹುದು,” ಎಂದಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೋನೋವಲ್‌ ಕೂಡ ತಕರಾರುಗಳನ್ನು ಸಲ್ಲಿಸಲು ಸಮಯವಿದೆ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಎನ್ಆರ್‌ಸಿ ಸಂಯೋಜಕ ಪ್ರತೀಕ್‌ ಹಜೇಲಾ, “ತಿದ್ದುಪಡಿಗಳಿಗೆ ಅರ್ಜಿ ಸಲ್ಲಿಸಲು ಆಗಸ್ಟ್‌ 30 ರಿಂದ ಸೆಪ್ಟೆಂಬರ್‌ 28ರವರೆಗೆ ಸಮಯವಿದೆ. ಒಂದೊಮ್ಮೆ ಅವರ ಹೆಸರು ಅಂತಿಮ ಪಟ್ಟಿಯಲ್ಲಿ ಇಲ್ಲದಿದ್ದರೂ ಅವರು ಅಕ್ರಮ ಜನರೆಂದು ಅರ್ಥವಲ್ಲ,” ಎಂದಿದ್ದಾರೆ. “ಇದು ಕೇವಲ ಕರಡು ಅಷ್ಟೇ. ಅವರಿಗೆ ಹಕ್ಕು ಸ್ಥಾಪನೆಗೆ ಸಾಕಷ್ಟು ಅವಕಾಶಗಳನ್ನು ನೀಡಲಾಗುತ್ತದೆ. ಹಾಗಾಗಿ ಭಯಗೊಳ್ಳಲು ಕಾರಣವೇ ಇಲ್ಲ,” ಎನ್ನುತ್ತಾರೆ ಅವರು.

ಈ ಹಿಂದೆ ಸುಪ್ರೀಂ ಕೋರ್ಟ್‌ ಜೂನ್‌ 30ರ ಒಳಗೆ ಅಂತಿಮ ಪಟ್ಟಿಯನ್ನು ಪ್ರಕಟಿಸುವಂತೆ ಆದೇಶ ನೀಡಿತ್ತು. ನಂತರ ಗಡುವನ್ನು ಜುಲೈ 30ಕ್ಕೆ ಮುಂದೂಡಿತ್ತು. ಇದೀಗ ಸರಿಯಾಗಿ ಜುಲೈ 30ರಂದು ಕರಡು ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯನ್ನು ಸ್ಥಳೀಯರು ಅಲ್ಲಿನ ಎನ್‌ಆರ್‌ಸಿ ಸೇವಾ ಕೇಂದ್ರಗಳಲ್ಲಿ ಪರಿಶೀಲನೆ ಮಾಡಬಹುದಾಗಿದೆ. ಮೊಬೈಲ್‌ ಎಸ್‌ಎಂಎಸ್‌ ಮೂಲಕವೂ ಹೆಸರು ಪರಿಶೀಲನೆ ಮಾಡುವ ತಂತ್ರಜ್ಞಾನವನ್ನು ಸಿದ್ಧಪಡಿಸಲಾಗಿದೆ.

ಹಿಂಸಾಚಾರ ಭುಗಿಲೇಳುವ ಆತಂಕ, ಅಸ್ಸಾಂ ತುಂಬಾ ಭಿಗಿ ಭದ್ರತೆ
ಹಿಂಸಾಚಾರ ಭುಗಿಲೇಳುವ ಆತಂಕ, ಅಸ್ಸಾಂ ತುಂಬಾ ಭಿಗಿ ಭದ್ರತೆ
ಚಿತ್ರ ಕೃಪೆ: ರಾಯ್ಟರ್ಸ್‌

ಕರಡು ಪಟ್ಟಿ ಬಿಡುಗಡೆ ಬೆನ್ನಲ್ಲೇ ರಾಜ್ಯದಲ್ಲಿ ಹಿಂಸಾಚಾರ ಭುಗಿಲೇಳುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಭಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಸ್ಸಾಂನ ಎಲ್ಲಾ 33 ಜಿಲ್ಲೆಗಳಲ್ಲಿ ಸಿಆರ್‌ಪಿಸಿ ಸೆಕ್ಷನ್‌ 144 ಜಾರಿಗೆ ತರಲಾಗಿದೆ. ಜತೆಗೆ 22 ಸಾವಿರ ಹೆಚ್ಚುವರಿ ಪ್ಯಾರಾಮಿಲಿಟರಿ ಸೈನಿಕರನ್ನು ಅಸ್ಸಾಂಗೆ ಕಳುಹಿಸಲಾಗಿದೆ.

ನಿರಾಶ್ರಿತರು ಮತ್ತು ಭಾರತ

ಟಿಬೇಟ್‌ನಂಥ ಸಂಬಂಧವೇ ಇಲ್ಲದ ದೇಶದಿಂದ ಬಂದ ಸುಮಾರು 1.5 ಲಕ್ಷ ಜನರಿಗೆ ಆಶ್ರಯ ನೀಡಿದ ದೇಶ ಭಾರತ. ಜಾಗತಿಕ ಮಟ್ಟದಲ್ಲಿ ನಿರಾಶ್ರಿತರಿಗೆ ಆಶ್ರಯ ನೀಡಿದ ದೊಡ್ಡ ಉದಾಹರಣೆಯೆ ಭಾರತದ ಮುಂದಿದೆ. ಅದು ಪಾಕಿಸ್ತಾನದಿಂದ ಬರುವ ಹಿಂದೂಗಳಿರಲಿ, ಅಫ್ಘಾನಿಸ್ತಾನದ ಮುಸ್ಲಿಂರು, ಶ್ರೀಲಂಕಾದ ತಮಿಳರು ಮತ್ತು ಪೂರ್ವ ಭಾರತದ ದೇಶಗಳಲ್ಲಿ ನೆಲೆಸಿರುವ ಅಸಂಖ್ಯಾತ ಬಾಂಗ್ಲಾದೇಶಿಯರಿಗೆ ಭಾರತ ಆಶ್ರಯದಾತ ದೇಶವಾಗಿದೆ.

ಆಶ್ರಯ ನೀಡುವ ಗುಣ ಭಾರತದ ಮಣ್ಣಿನಲ್ಲಿಯೇ ಇದೆ. ಇದನ್ನು ಉಲ್ಲೇಖಿಸಿಯೇ 11 ಸೆಪ್ಟೆಂಬರ್‌ 1893ರ ಚಿಕಾಗೋ ಭಾಷಣದಲ್ಲಿ ಸ್ವಾಮಿ ವಿವೇಕಾನಂದರು “ಪ್ರಪಂಚಕ್ಕೆ ಸಹಿಷ್ಣುತೆ ಮತ್ತು ಎಲ್ಲರನ್ನೂ ಒಪ್ಪಿಕೊಳ್ಳುವ ಗುಣವನ್ನು ಕಲಿಸಿದ ಧರ್ಮಕ್ಕೆ ಸೇರಿದವನು ನಾನು ಎಂಬುದಕ್ಕೆ ಹೆಮ್ಮೆಪಡುತ್ತೇನೆ. ಹಿಂಸೆಗೆ ಒಳಗಾದ ಎಲ್ಲಾ ಧರ್ಮಗಳ ಮತ್ತು ಎಲ್ಲಾ ದೇಶಗಳ ನಿರಾಶ್ರಿತರಿಗೂ ಆಶ್ರಯ ನೀಡಿದ ರಾಷ್ಟ್ರಕ್ಕೆ ಸೇರಿದವನು ನಾನು ಎಂಬುದಕ್ಕೆ ಹೆಮ್ಮೆಯಿದೆ,” ಎಂದಿದ್ದರು.

ಇದೇ ವಿವೇಕಾನಂದರ ಹೆಸರನ್ನು ಪ್ರಧಾನಿ ನರೇಂದ್ರ ಮೋದಿ ಆಗಾಗಾ ಪ್ರಸ್ತಾಪಿಸುತ್ತಿರುತ್ತಾರೆ. ಮತ್ತು ಹಿಂದೂ ಧರ್ಮದ ಬಗ್ಗೆ ಭಾಷಣಗಳನ್ನು ಮಾಡುತ್ತಾರೆ. ಅದೇ ಪ್ರಧಾನಿಗಳು ತೆಗೆದುಕೊಳ್ಳಲಿರುವ ತೀರ್ಮಾನದ ಮೇಲೆ ಈ ಅಂದಾಜು 40 ಲಕ್ಷ ಜನರ ಭವಿಷ್ಯ ನಿಂತಿದೆ ಎಂಬುದನ್ನು ಈ ಸಮಯದಲ್ಲಿ ನೆನಪಿಸಿಕೊಳ್ಳಲೇಬೇಕಿದೆ.