samachara
www.samachara.com
‘ಎದೆಮುಟ್ಟಿ ನೋಡಿಕೊಳ್ಳಿ’: ನೆಲೆ ನಿಂತ ಹಾವು ಗೊಲ್ಲರು ಊರು ಬಿಡಲು ಕಾರಣ ಯಾರು?
COVER STORY

‘ಎದೆಮುಟ್ಟಿ ನೋಡಿಕೊಳ್ಳಿ’: ನೆಲೆ ನಿಂತ ಹಾವು ಗೊಲ್ಲರು ಊರು ಬಿಡಲು ಕಾರಣ ಯಾರು?

ಶುಕ್ರವಾರದ ಖಗ್ರಾಸ ಚಂದ್ರ ಗ್ರಹಣವೂ ಹಾವುಗೊಲ್ಲರು ಊರು ಬಿಡಲು ಕಾರಣ ಎನ್ನಲಾಗುತ್ತಿದೆ. ಗ್ರಹಣ ಅತ್ಯಂತ ಕೆಟ್ಟ ಗಳಿಗೆ ಎಂದು ಮಾಧ್ಯಮಗಳಲ್ಲಿ ಪಡೆದುಕೊಂಡ ಪ್ರಚಾರವೂ ಗೊಲ್ಲರ ಕಿವಿಗೆ ಬಿದ್ದಿತ್ತು. 

Summary

ಇಡೀ ಜಗತ್ತು ಆಧುನಿಕತೆಯ ಭರಾಟೆಯಲ್ಲಿದೆ. ಅದೇ ವೇಳೆ, ನಂಬಿಕೆಗಳ ಹೆಸರಿನಲ್ಲಿ ಮೌಢ್ಯಗಳೂ ಅಸ್ಥಿತ್ವದಲ್ಲಿವೆ. ಅವು ಕೆಲವೊಮ್ಮೆ ವಿಪರೀತಕ್ಕೆ ಹೋದರೆ, ಚಿಕ್ಕಮಗಳೂರಿನಲ್ಲಿ ಗುರುವಾರ ನಡೆದ ಘಟನೆಗಳು ವರದಿಯಾಗುತ್ತಿವೆ.

ಜಿಲ್ಲೆಯ ಎನ್‌ಆರ್‌ಪುರ ತಾಲೂಕಿನ ಸೀಗುವಾನಿ ಗ್ರಾಮದಲ್ಲಿ ನಡೆದ ಘಟನೆ ಇದು. ಹಾವು ಗೊಲ್ಲರು ಎಂದು ಗುರುತಿಸುವ ಅಲೆಮಾರಿ ಸಮುದಾಯದ ಜನ ಏಕಾಏಕಿ ಊರು ಬಿಟ್ಟು ಹೊರನಡೆಸಿದ್ದಾರೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇತ್ತೀಚಿಗೆ ಸಮುದಾಯದಲ್ಲಿ ಘಟಿಸಿದ ಸಾವುಗಳು ಅವರನ್ನು ವಿಚಲಿತರನ್ನಾಗಿ ಮಾಡಿದ್ದವು. ಅದಕ್ಕೆ ಜ್ಯೋತಿಷಿಯೊಬ್ಬ ‘ಶಾಪ’ದ ನೆಪ ಮುಂದಿಟ್ಟಿದ್ದ. ಆತನ ಮಾತು ನಂಬಿದ ಅಲೆಮಾರಿ ಸಮುದಾಯದ ಜನ ಊರೇ ಬಿಡಲು ನಿರ್ಧರಿಸಿದ್ದಾರೆ ಎಂದು ಈವರೆಗಿನ ವರದಿಗಳು ಹೇಳುತ್ತಿವೆ. ಆದರೆ ಜ್ಯೋತಿಷಿ ಕುರಿತು ಯಾವುದೇ ವರದಿಗಳು ಬೆಳಕು ಚೆಲ್ಲಿಲ್ಲ, ಅಥವಾ ಆತನ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಆದರೂ, ಮೇಲ್ನೋಟಕ್ಕೆ ಅಲೆಮಾರಿ ಸಮುದಾಯ ಮೌಢ್ಯದ ಕಾರಣಕ್ಕೆ ಗುಳೇ ಹೊರಟಿದೆ ಎಂಬ ನಂಬಿಕೆ ಸ್ಥಳೀಯರಲ್ಲಿದೆ.

ಕಾಡಿನಿಂದ ಹಾವುಗಳನ್ನು ಹಿಡಿದು ತಂದು, ಊರುಗಳಲ್ಲಿ ಪುಂಗಿ ಊದಿ ಹಾವುಗಳನ್ನು ಆಡಿಸಿ, ಹಾವು ಕಡಿತಕ್ಕೆ ಔಷಧಿಯನ್ನು ಮಾರುವುದು ಹಾವುಗೊಲ್ಲ ಸಮುದಾಯದ ಮೂಲ ಕಸುಬು. ಆದರೆ ಅರಣ್ಯ ಕಾಯ್ದೆ ಬಂದ ನಂತರ ಈ ಸಮುದಾಯ ಹಾವಾಡಿಸುವುದನ್ನು ತೊರೆದು ಇತರೆ ಕೆಲಸಗಳನ್ನು ಹುಡುಕಿಕೊಳ್ಳ ಬೇಕಾಯಿತು. ಪರಿಶಿಷ್ಟ ಪಂಗಡಕ್ಕೆ ಸೇರುವ ಹಾವು ಗೊಲ್ಲರು ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದ ನಂತರವೂ ಅಲೆಮಾರಿಗಳಾಗಿಯೇ ಉಳಿದುಕೊಂಡಿದ್ದಾರೆ. ಅವರದ್ದೇ ಆದ ನಿರ್ದಿಷ್ಟ ಸ್ಥಳ ಎಂಬುದಿಲ್ಲ.

ಆದರೆ, ಚಿಕ್ಕಮಗಳೂರು ಜಿಲ್ಲೆಯ ಸೀಗುವಾನಿ ಗ್ರಾಮದಲ್ಲಿ ನೆಲೆ ನಿಂತ ಈ ಸಮುದಾಯದ ಸುಮಾರು ಮೂವತ್ತೈದು ಕುಟುಂಬಗಳು ಹೊಸ ಬದುಕು ಕಟ್ಟಿಕೊಳ್ಳುವ ಪ್ರಯತ್ನದಲ್ಲಿದ್ದವು. 15 ವರ್ಷಗಳ ಹಿಂದೆಯೇ ಬಂದವರು ಸ್ಥಳೀಯ ಜಮೀನ್ದಾರರ ಮನೆಗಳಲ್ಲಿ ಸಿಗುವ ಕೂಲಿ ಕೆಲಸಗಳ ಮೊರೆ ಹೋಗಿದ್ದರು. ಪ್ರಾರಂಭದಲ್ಲಿ ಸಮುದಾಯದ ಮಹಿಳೆಯರು ತಮ್ಮ ಮಕ್ಕಳೊಡನೆ ಚಿಂದಿ ಕಸ ಆಯುವುದು, ಭಿಕ್ಷಾಟನೆ ಮೂಲಕ ಹೊಟ್ಟೆ ಪೊರೆಯುತ್ತಿದ್ದರು. ಆದರೆ ಗ್ರಾಮಸ್ಥರು ಬೈದದ್ದರಿಂದ ಈ ಕಸುಬನ್ನೂ ಬಿಟ್ಟು ಕೂಲಿಯನ್ನೇ ನೆಚ್ಚಿಕೊಂಡಿದ್ದರು.

ಹೀಗೆ, ಒಂದು ಕಡೆಗೆ ಬಂದ ಈ ಅಲೆಮಾರಿ ಸಮುದಾಯ ನೆಲೆ ನಿಂತಿದ್ದು ಅರಣ್ಯ ಇಲಾಖೆಯ ಜಾಗದಲ್ಲಿ. ಸ್ಥಳೀಯ ಪಂಚಾಯ್ತಿ ಇವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಚಿಕ್ಕ ಮಟ್ಟದಲ್ಲಿ ಶೌಚಾಯಲ ವ್ಯವಸ್ಥೆ ಮಾಡಿಕೊಟ್ಟಿತ್ತು. ಜತೆಗೆ ಹಾವುಗೊಲ್ಲ ಸಮುದಾಯದ ದೇವರಿಗೆಂದು ಚಿಕ್ಕ ದೇವಸ್ತಾನವನ್ನೂ ಕಟ್ಟಿಸಿಕೊಡಲಾಯಿತು. ಹಾವುಗೊಲ್ಲರೂ ಕೂಡ ನಾಗ ದೇವರ ಪ್ರತಿಷ್ಠಾಪನೆ ಮಾಡಿಕೊಂಡರು. ಇತ್ತೀಚಿನ ದಿನಗಳಲ್ಲಿ ಆಧಾರ್‌ ಕಾರ್ಡ್‌, ರೇಷನ್‌ ಕಾರ್ಡ್‌ನಂತಹ ಸರಕಾರಿ ಸೌಲಭ್ಯಗಳೂ ಕೂಡ ಸಮುದಾಯಕ್ಕೆ ದೊರೆತಿದ್ದವು. ಈ ಸೌಲಭ್ಯಗಳ ಜತೆಗೆ ತಾವು ವಾಸಿಸುತ್ತಿರುವ ಜಾಗದಲ್ಲೇ ಮನೆಗಳನ್ನು ಕಟ್ಟಿಸಿಕೊಡಬೇಕು ಎಂಬ ಬೇಡಿಕೆಯನ್ನು ಹಾವುಗೊಲ್ಲ ಸಮುದಾಯದ ಕುಟುಂಬಗಳು ಮುಂದಿಟ್ಟಿದ್ದವು. ಇನ್ನೇನು ಬದುಕು ಒಂದು ಹಂತಕ್ಕೆ ಬಂತು ಎಂದು ಭಾವಿಸಿದ್ದರು.

“ಹಾವುಗೊಲ್ಲರು ಇದ್ದಿದ್ದು ತಾವೇ ಥಾಟ್‌ಪಾಲ್‌ಗಳಿಂದ ನಿರ್ಮಿಸಿಕೊಂಡಿದ್ದ ಜೋಪಡಿಗಳಲ್ಲಿ. ಸರಿಯಾಗಿ ಗಾಳಿ ಬೆಳಕು ಆಡದ ಆ ಜೋಪಡಿಗಳಲ್ಲಿ ಬೇಸಿಗೆ ಕಾಲದಲ್ಲಿ ಬದುಕುವುದು ಸಾಧ್ಯವೇ ಆಗುತ್ತಿರಲಿಲ್ಲ. ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡುತ್ತಿದ್ದರಿಂದ ಹೊಗೆಯೂ ಕೂಡ ಆಚೆ ಹೋಗುತ್ತಿರಲಿಲ್ಲ. ಗುಡಿಸಲಲ್ಲಿ ಇರುತ್ತಿದ್ದದ್ದೇ ಒಂದು ಕೋಣೆ. ಊಟ, ತಿಂಡಿ ನಿದ್ದೆ ಎಲ್ಲವೂ ಕೂಡ ಅದರಲ್ಲಿಯೇ ಆಗುತ್ತಿತ್ತು. ಸರಿಯಾದ ಶೌಚಾಲಯಗಳಿಲ್ಲದೇ, ಸ್ನಾನದ ಕೋಣೆಗಳಿರಲಿಲ್ಲ. ಜತೆಗೆ ಸಮುದಾಯದ ಜನ ವೈಯಕ್ತಿಕ ಸ್ವಚ್ಚತೆಯ ಕಡೆಗೂ ಗಮನ ಹರಿಸುತ್ತಿರಲಿಲ್ಲ,’’ ಎನ್ನುತ್ತಾರೆ ಇವರನ್ನು ಹತ್ತಿರದಿಂದ ಬಲ್ಲ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ. ಜೆ. ಆಂಟೋನಿ.

ಸಮುದಾಯದ ಪುರುಷರು ದಿನವೊಂದಕ್ಕೆ 500ರಿಂದ 1,000 ರೂಪಾಯಿಗಳನ್ನು ಸಂಪಾದಿಸುತ್ತಿದ್ದರಾದರೂ, ಅದರ ಬಳಕೆಯಲ್ಲಿ ಸಮಸ್ಯೆಗಳಿದ್ದವು. ಸಮುದಾಯದ ಮಕ್ಕಳು, ಹಿರಿಯರ ಆದಿಯಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದರು. 20 ಮಕ್ಕಳನ್ನು ಸ್ಥಳೀಯ ಶಾಲೆಗಳು ಒತ್ತಾಯಪೂರ್ವಕವಾಗಿ ದಾಖಲು ಮಾಡಿಸಲಾಗಿತ್ತು. ಅಲ್ಲಿನ ಬಿಸಿಯೂಟವೇ ಕೆಲವೊಮ್ಮೆ ಅವುಗಳ ಆಹಾರದ ಮೂಲವಾಗಿತ್ತು.

ಸ್ವಚ್ಚತೆ ಮತ್ತು ಅಪೌ‍ಷ್ಠಿಕತೆಗಳ ಒಂದು ಕಡೆಗಾದರೆ, ಸಮುದಾಯದಲ್ಲಿದ್ದ ವ್ಯಸನಗಳೂ ಕೂಡ ಹಾವುಗೊಲ್ಲರನ್ನು ಅನಾರೋಗ್ಯದತ್ತ ದೂಡಿದ್ದವು. ಕೆಲವರು ಕುಡಿತಕ್ಕೆ ದಾಸರಾಗಿದ್ದರೆ, ಕೆಲವರು ಗುಟ್ಕಾಗಳನ್ನು ಅಗಿಯುತ್ತಿದ್ದರು. ಇವೆಲ್ಲವೂ ಕೂಡ ಸಮುದಾಯ ವಯಸ್ಕರರ ದೈಹಿಕ ಆರೋಗ್ಯಕ್ಕೆ ಸಮಸ್ಯೆ ಮಾಡಿತ್ತು ಎನ್ನುತ್ತಾರೆ ಸ್ಥಳೀಯ.

ನಾನಾ ಕಾರಣಗಳಿಗಾಗಿ ಸುಮಾರು 20ಕ್ಕೂ ಹೆಚ್ಚು ಹಾವುಗೊಲ್ಲರು ಮೃತಪಟ್ಟಿದ್ದಾರೆ ಎನ್ನುತ್ತಾರೆ ಆಂಟೋಣಿ. “ಹಾವುಗೊಲ್ಲ ಸಮುದಾಯದವರು ಯಾರಾದರೂ ಸತ್ತರೆ ಅದನ್ನು ಇತರರ ಮುಂದೆ ಬಹಿರಂಗಪಡಿಸುವುದಿಲ್ಲ. ತಾವೇ ರಹಸ್ಯವಾಗಿ ಮೃತ ವ್ಯಕ್ತಿಯ ಅಂತ್ಯಕ್ರಿಯೆಗಳನ್ನು ಮುಗಿಸಿಬಿಡುತ್ತಾರೆ. ಯಾರಾದರೂ ಕೇಳಿದರೆ ಮಾತ್ರ ಸತ್ತವರ ಬಗ್ಗೆ ಹೇಳುತ್ತಾರೆ. ಆದ್ದರಿಂದ ಈವರೆಗೆ ಇಲ್ಲಿ ಸತ್ತವರೆಷ್ಟು ಎಂಬುದರ ಲೆಕ್ಕವೂ ಇಲ್ಲ,” ಎನ್ನುವುದು ಆಂಟೋಣಿಯವರ ಮಾತು.

ಇದರ ಜತೆಗೆ, ಏನೇ ನಡೆದರೂ ಅದಕ್ಕೆ ದೇವರು ಕಾರಣ ಎಂಬ ನಂಬಿಕೆ ಸಮುದಾಯದಲ್ಲಿತ್ತು. “ಇತ್ತೀಚೆಗೆ ಸಮುದಾಯದ ವ್ಯಕ್ತಿಯೊಬ್ಬ ಪಾರ್ಶ್ವವಾಯು ಕಾರಣದಿಂದಾಗಿ ಸಾವನ್ನಪ್ಪಿದ್ದ. ಆತನಿಗೆ ಕುಡಿಯವ ಚಟ ಇತ್ತು. ಕೆಲಸಕ್ಕೂ ಹೋಗದೆ ಸರಿಯಾದ ಆಹಾರವೂ ಇಲ್ಲದೇ ಮೃತಪಟ್ಟಿದ್ದ. ಮತ್ತೊಬ್ಬ ವ್ಯಕ್ತಿಗೆ ಕುಡಿತದ ಕಾರಣದಿಂದಾಗಿ ಕಿಡ್ನಿ ಸಮಸ್ಯೆ ಉಂಟಾಗಿತ್ತು. ಮಣಿಪಾಲ್‌ ಆಸ್ಪತ್ರೆಗೆ ಆತನನ್ನು ಕೊಂಡೊಯ್ಯಲಾಗಿತ್ತು. ಆದರೆ ವೈದ್ಯರು ಆತ ಬದುಕುಳಿಯುವುದಿಲ್ಲ ಎಂದಿದದ್ದರು. ಆ ವ್ಯಕ್ತಿ ಸೀಗುವಾನಿಗೆ ಹಿಂತಿರುಗಿದ ಬಳಿಕ ರಕ್ತ ವಾಂತಿ ಮಾಡಿಕೊಂಡಿದ್ದ. ಕಣ್ಣೆದುರಿನ ಸಾವುಗಳಿಗೆ ಪರಿಹಾರ ಕೋರಿ ಜ್ಯೋತಿಷಿಯನ್ನು ಸಂಪರ್ಕಿಸಿದ್ದರು,’’ ಎನ್ನುತ್ತಾರೆ ಆಂಟೋನಿ.

"ಜ್ಯೋತಿಷಿ ನಿಮಗೆ ಕಂಟಕವಿದೆ. ಶುಕ್ರವಾರದ ಗ್ರಹಣ ಮುಗಿಯುವುದರೊಳಗೆ ಇನ್ನೂ ಹಲವಾರು ಜನ ಸಾಯಲಿದ್ದೀರಿ,” ಎಂದು ಭವಿಷ್ಯ ನುಡಿದಿದ್ದ ಎಂದು ವರದಿಯಾಗಿದೆ.

ಒಟ್ಟಾರೆ, ಮೊದಲೇ ಭಯ ಮತ್ತು ಅಂಜಿಕೆಗಳಲ್ಲಿಯೇ ಬದುಕು ನೂಕುವ ಅಲೆಮಾರಿ ಸಮುದಾಯ ಊರು ತೊರೆಯುವ ತೀರ್ಮಾನಕ್ಕೆ ಗುರುವಾರ ಬಂದಿದೆ.

ಹಾವುಗೊಲ್ಲರು ಒಂಟಿಯಾಗಿ ಬಿಟ್ಟು ಹೋದ ಜಾನುವಾರು.
ಹಾವುಗೊಲ್ಲರು ಒಂಟಿಯಾಗಿ ಬಿಟ್ಟು ಹೋದ ಜಾನುವಾರು.

ಹಾವುಗೊಲ್ಲರು ಗ್ರಾಮಕ್ಕೆ ಬಂದ ನಂತರ ಇಬ್ಬರು ಜಿಲ್ಲಾಧಿಕಾರಿಗಳು ಬದಲಾಗಿದ್ದಾರೆ. ಇಲ್ಲಿನ ಸ್ಥಳೀಯ ಶಾಸಕರೊಮ್ಮೆ ವಿಧಾನಸಭೆಯಲ್ಲೂ ಇವರ ಕುರಿತು ಚರ್ಚೆ ನಡೆಸಿದ್ದಾರೆ. ಇತ್ತೀಚಿಗಷ್ಟೇ ಜಿಲ್ಲಾಧಿಕಾರಿಗಳು ಬಂದು, ಸಂಕಷ್ಟ ಕೇಳುವ ಕೆಲಸ ಮಾಡಿದ್ದರು. ಕನಿಷ್ಟ ಆಶ್ರಯ ಮನೆಗಳನ್ನು ನೀಡಿ ಎಂದು ಬೇಡಿಕೆ ಮುಂದಿಟ್ಟಿದ್ದರು.


ಆದರೆ ಇವತ್ತು ಅವೆಲ್ಲವನ್ನೂ ಮೀರಿ ಅಲೆಮಾರಿಗಳ ಮೂವತ್ತೈದು ಕುಟುಂಬ ಮತ್ತೆ ಊರೂರು ಅಲೆಯುವ ತೀರ್ಮಾನ ತೆಗೆದುಕೊಂಡಿದೆ. ಪರಿಣಾಮ ಸೀಗುವಾನಿ ಗ್ರಾಮದಲ್ಲಿ ಗೊಲ್ಲರ ಹಟ್ಟಿಗಳು ಖಾಲಿ ಖಾಲಿಯಾಗಿವೆ.

ಹಾವುಗೊಲ್ಲರು ಗುಡಿಸಲು ಹಾಕಿಕೊಂಡಿದ್ದ ಜಾಗ.
ಹಾವುಗೊಲ್ಲರು ಗುಡಿಸಲು ಹಾಕಿಕೊಂಡಿದ್ದ ಜಾಗ.

ಇವೆಲ್ಲದರ ನಡುವೆ ಶುಕ್ರವಾರದ ಖಗ್ರಾಸ ಚಂದ್ರ ಗ್ರಹಣವೂ ಹಾವುಗೊಲ್ಲರು ಊರು ಬಿಡಲು ಕಾರಣ ಎನ್ನಲಾಗುತ್ತಿದೆ. ಗ್ರಹಣ ಅತ್ಯಂತ ಕೆಟ್ಟ ಗಳಿಗೆ ಎಂದು ಮಾಧ್ಯಮಗಳಲ್ಲಿ ಪಡೆದುಕೊಂಡ ಪ್ರಚಾರವೂ ಗೊಲ್ಲರ ಕಿವಿಗೆ ಬಿದ್ದಿದೆ. ಹೀಗಾಗಿ ಗ್ರಹಣಕ್ಕೆ ಒಂದು ದಿನ ಮೊದಲು ಊರು ಖಾಲಿ ಮಾಡುವ ತೀರ್ಮಾನಕ್ಕೆ ಅವರು ಬಂದರು ಎನ್ನುತ್ತಿದ್ದಾರೆ ಊರಿನವರು. ಹಾಗಾದರೆ, ಒಂದೆಡೆ ನೆಲೆ ನಿಂತವರು ಮತ್ತೆ ಅಲೆಮಾರಿಗಳಾಗಲು ಕಾರಣ ಯಾರು? ಕೇವಲ ಜ್ಯೋತಿಷಿ ಮಾತ್ರವೇ? ಗ್ರಹಣವನ್ನೂ ಮಾರ್ಕೆಟ್ ಮಾಡುವ ಭರಾಟೆಯಲ್ಲಿ ಮುಖ್ಯವಾಹಿನಿಯ ಎಸಿ ರೂಮುಗಳಲ್ಲಿ ಕುಳಿತು ಮೌಢ್ಯ ಭಿತ್ತುವ ಆತ್ಮವಂಚಕರ ಪಾಲೂ ಇದರಲ್ಲಿ ಇಲ್ಲವಾ? ಪ್ರಶ್ನೆ ಕೇಳುವಷ್ಟು ಸಮುದಾಯ ಶಕ್ತವಾಗಿಲ್ಲ. ಅವರು ಅಷ್ಟು ಶಕ್ತಿವಂತರಾಗಿದ್ದರೆ ಊರು ಬಿಡುತ್ತಲೇ ಇರಲಿಲ್ಲ. ಗ್ರಹಣ ಮುಗಿಸಿ, ದರ್ಬೆ ಹಾಕಿದ ನೀರಿನಲ್ಲಿ ಮುಖ್ಯವಾಹಿನಿ ಮಿಂದೇಳುವ ಹೊತ್ತಿಗೆ ಅಲೆಮಾರಿಗಳು ಹೊಸ ಊರಿನಲ್ಲಿ ನೆಲೆ ಕಂಡುಕೊಳ್ಳಲಿ ಎಂಬುದು ಆಶಯ ಅಷ್ಟೆ.