samachara
www.samachara.com
‘ವರ್ಷ ಎಂಟು; ಪ್ರಗತಿ 10 ಪರ್ಸೆಂಟು’: ಇದು ಪ್ರಧಾನಿ ಹೆಸರಿನ ವಾಟರ್‌ಶೆಡ್‌ ಯೋಜನೆಯ ಸಾಧನೆ
COVER STORY

‘ವರ್ಷ ಎಂಟು; ಪ್ರಗತಿ 10 ಪರ್ಸೆಂಟು’: ಇದು ಪ್ರಧಾನಿ ಹೆಸರಿನ ವಾಟರ್‌ಶೆಡ್‌ ಯೋಜನೆಯ ಸಾಧನೆ

ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರದಿದ್ದರೆ ಎಂತಹ ಯೋಜನೆಗಳೂ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ವಾಟರ್‌ಶೆಡ್‌ ಯೋಜನೆಯ ಕಾಮಗಾರಿಗಳ ಪ್ರಗತಿಯೇ ಸಾಕ್ಷಿ.

ದೇಶದ ಬೆನ್ನೆಲುಬು ರೈತ ಎಂಬ ಹೊಗಳಿಕೆ ಮಾತು ರೈತನಿಗೆ ಉಪ್ಪಿಗೂ ಬಾರದು, ಸೊಪ್ಪಿಗೂ ಬಾರದು. ರೈತರ ಬೆಳವಣಿಗೆಗಾಗಿ, ಗ್ರಾಮೀಣಾಭಿವೃದ್ಧಿಗಾಗಿ ಇರುವ ಯೋಜನೆಗಳು ಹಳ್ಳ ಹಿಡಿದಿರುವುದನ್ನು ನೋಡಿದರೆ ದೇಶದ ಕಾರ್ಯಾಂಗ ಹಾಗೂ ಶಾಸಕಾಂಗ ನಿಜಕ್ಕೂ ರೈತನ ಬಗ್ಗೆ ಎಷ್ಟರ ಮಟ್ಟಿಗೆ ಕಾಳಜಿ ಹೊಂದಿದೆ ಎಂಬುದು ಗೊತ್ತಾಗುತ್ತದೆ. ಇದಕ್ಕೊಂದು ಉದಾಹರಣೆ ‘ಪ್ರಧಾನಮಂತ್ರಿ ಕೃಷಿ ಸಿಂಚಯೀ ಯೋಜನೆ’ಯಡಿ (ಪಿಎಂಕೆಎಸ್‌ವೈ) ಈವರೆಗೆ ಆಗಿರುವ ‘ಸಾಧನೆ’!

ಜನರ ಸಹಭಾಗಿತ್ವದೊಂದಿಗೆ ದೇಶದ 39 ಕೋಟಿ ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸುವ 50 ಸಾವಿರ ಕೋಟಿ ವೆಚ್ಚದ ಯೋಜನೆ ಇದು. ಆದರೆ ಅನುಷ್ಠಾನಗೊಳಿಸಬೇಕಾದ ಇಲಾಖೆಯ ನಿರಾಸಕ್ತಿಯಿಂದ ಕುಂಟುತ್ತಾ ಸಾಗುತ್ತಿದೆ. ಕೇಂದ್ರದ ಯೋಜನೆಯ ಸಮರ್ಪಕ ಅನುಷ್ಠಾನದಲ್ಲಿ ರಾಜ್ಯಗಳ ಅಧಿಕಾರಿ ವರ್ಗವೂ ಸೋತಿದೆ.

ದೇಶದ ಎಲ್ಲಾ ಕೃಷಿ ಭೂಮಿಗೂ ನೀರು ಒದಗಿಸುವ ಉದ್ದೇಶದ ಪಿಎಂಕೆಎಸ್‌ವೈ ಯೋಜನೆಯಡಿ ಈವರೆಗೆ ಪೂರ್ಣಗೊಂಡಿರುವ ಕಾಮಗಾರಿಗಳು ಶೇಕಡ 10ರಷ್ಟು ಮಾತ್ರ. ಈ ಯೋಜನೆಯನ್ನು ಜಾರಿಗೊಳಿಸಬೇಕಾದ ಜವಾಬ್ದಾರಿ ಕೇಂದ್ರ ಭೂ ಸಂಪನ್ಮೂಲ ಇಲಾಖೆಯದ್ದು (ಡಿಎಲ್‌ಆರ್‌). ಆದರೆ, ಇಲಾಖೆ ಈ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಬದ್ಧತೆ ತೋರಿಲ್ಲ.

2009-10ನೇ ಸಾಲಿನಲ್ಲಿ ಆರಂಭವಾದ ವಾಟರ್‌ಶೆಡ್‌ ಪ್ರಾಜೆಕ್ಟ್‌ನ ಹೆಸರು 2015ರ ಜುಲೈನಲ್ಲಿ ಪಿಎಂಕೆಎಸ್‌ವೈ ಆಗಿ ಬದಲಾಯಿತು. ಪ್ರಧಾನಿ ಮೋದಿ ತಮ್ಮ ಭಾವಚಿತ್ರಗಳ ಜತೆ ಯೋಜನೆಯ ಹೊಸ ಪೋಸ್ಟರ್‌ ಬಿಡುಗಡೆ ಮಾಡಿದರು. ಯೋಜನೆಯ ಹೆಸರು ಬದಲಾಯಿತೇ ಹೊರತು ಯೋಜನೆಯ ಅನುಷ್ಠಾನದ ವೇಗ ಬದಲಾಗಲಿಲ್ಲ. 2015ರವರೆಗೆ ವಾಟರ್‌ಶೆಡ್‌ ಯೋಜನೆಗಾಗಿ ಮಂಜೂರಾಗಿದ್ದ ಒಟ್ಟು ಕಾಮಗಾರಿಗಳ ಸಂಖ್ಯೆ 8,214. ಈ ಪೈಕಿ 2017ರ ಅಕ್ಟೋಬರ್‌ವರೆಗೆ ಪೂರ್ಣಗೊಂಡಿರುವ ಒಟ್ಟು ಕಾಮಗಾರಿಗಳು 849 ಮಾತ್ರ.

ಪೂರ್ಣಗೊಂಡಿರುವ 849 ಕಾಮಗಾರಿಗಳು ಕೂಡಾ ಯೋಜನೆ ಜಾರಿಗೆ ಬಂದ ಆರಂಭದ ಎರಡು ವರ್ಷಗಳಲ್ಲಿ ಮಂಜೂರಾಗಿದ್ದಂಥವು. (2009-10ರ ಸಾಲಿನ 726 ಮತ್ತು 2010-11ರ ಸಾಲಿನ 123 ಕಾಮಗಾರಿಗಳು) ಆರು ವರ್ಷಗಳ ಅವಧಿಯಲ್ಲಿ ಮಂಜೂರಾದ ಒಟ್ಟು 8,214 ಕಾಮಗಾರಿಗಳ ಪೈಕಿ ಕರ್ನಾಟಕಕ್ಕೆ ಮಂಜೂರಾಗಿರುವ ಕಾಮಗಾರಿಗಳು 571. ಈ ಪೈಕಿ ಪೂರ್ಣಗೊಂಡಿರುವ ಕಾಮಗಾರಿಗಳು 125 ಮಾತ್ರ.

ವಾಟರ್‌ಶೆಡ್‌ ಯೋಜನೆಯ ಈ ‘ಸಾಧನೆ’ಯನ್ನು ಬಿಚ್ಚಿಟ್ಟಿರುವುದು ಗ್ರಾಮೀಣಾಭಿವೃದ್ಧಿಯ ಸಂಸತ್‌ ಸ್ಥಾಯಿ ಸಮಿತಿಯ ವರದಿ. ತಮಿಳುನಾಡಿನ ಸಂಸದ ಡಾ.ಪಿ. ವೇಣುಗೋಪಾಲ್‌ ಅಧ್ಯಕ್ಷತೆಯ ಸಂಸತ್‌ ಸ್ಥಾಯಿ ಸಮಿತಿ ಈ ತಿಂಗಳ 13ರಂದು ಲೋಕಸಭೆಗೆ ತನ್ನ ವರದಿ ಸಲ್ಲಿಸಿದೆ. 2017ರ ಜುಲೈನಲ್ಲಿ ಈ ಸ್ಥಾಯಿ ಸಮಿತಿ ಪಿಎಂಕೆಎಸ್‌ವೈ ಯೋಜನೆಯ ಅನುಷ್ಠಾನದ ಬಗ್ಗೆ ಕೇಂದ್ರ ಭೂ ಸಂಪನ್ಮೂಲ ಇಲಾಖೆಯಿಂದ ಮಾಹಿತಿ ಕೇಳಿತ್ತು. 2017ರ ಅಕ್ಟೋಬರ್‌ 23ರವರೆಗೆ ಆಗಿರುವ ಕಾರ್ಯಸಾಧನೆಯ ವರದಿಯನ್ನು ಇಲಾಖೆ ಈ ಸಮಿತಿಗೆ ನೀಡಿದೆ.

2017ರ ಅಕ್ಟೋಬರ್‌ 23ರವರೆಗೆ ಆಗಿರುವ ಕಾರ್ಯಸಾಧನೆ
2017ರ ಅಕ್ಟೋಬರ್‌ 23ರವರೆಗೆ ಆಗಿರುವ ಕಾರ್ಯಸಾಧನೆ

2017ರ ಆರಂಭದಲ್ಲಿ ಕೇಂದ್ರ ಭೂ ಸಂಪನ್ಮೂಲ ಇಲಾಖೆಯ ವಾಟರ್‌ಶೆಡ್‌ ಯೋಜನೆಯ ಉಪ ಮಹಾ ನಿರ್ದೇಶಕರು ಯೋಜನೆಯ ಅನುಷ್ಠಾನದ ಬಗ್ಗೆ ರಾಜ್ಯಗಳಿಗೆ ಪತ್ರ ಬರೆದಿದ್ದರು. ಗೋವಾ ಹೊರತು ಪಡಿಸಿ ದೇಶದ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದ ಉಪ ಮಹಾ ನಿರ್ದೇಶಕರು ಮಂಜೂರಾಗಿ ಬಾಕಿ ಇರುವ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಪೂರ್ಣಗೊಳಿಸುವಂತೆ ತಿಳಿಸಿದ್ದರು.

ಆದರೆ, ಅದಕ್ಕೂ ಹಿಂದೆ ಆಯಾ ವರ್ಷದಲ್ಲಿ ಮಂಜೂರಾಗಿರುವ ಕಾಮಗಾರಿಗಳನ್ನು ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸುವಲ್ಲಿ ಅಧಿಕಾರಿ ವರ್ಷ ವಿಫಲವಾಗಿದೆ. ಯೋಜನೆ ಅನುಷ್ಠಾನಕ್ಕೆ ಅಧಿಕಾರಿಗಳ ನಿರುತ್ಸಾಹದ ಬಗ್ಗೆ ಸಂಸತ್‌ ಸ್ಥಾಯಿ ಸಮಿತಿ ಅಸಮಾಧಾನ ವ್ಯಕ್ತಪಡಿಸಿದೆ. ಈ ಯೋಜನೆಯ ಒಟ್ಟು 8,214 ಕಾಮಗಾರಿಗಳ ಪೈಕಿ 2017ರ ಏಪ್ರಿಲ್‌ ನಂತರ 11 ರಾಜ್ಯಗಳಲ್ಲಿ 849 ಕಾಮಗಾರಿಗಳು ಪೂರ್ಣಗೊಂಡಿವೆ.

2009-10ನೇ ಸಾಲಿನಿಂದ 2014-15ರವರೆಗೆ ಮಂಜೂರಾದ ಕಾಮಗಾರಿಗಳ ಸಂಖ್ಯೆ
2009-10ನೇ ಸಾಲಿನಿಂದ 2014-15ರವರೆಗೆ ಮಂಜೂರಾದ ಕಾಮಗಾರಿಗಳ ಸಂಖ್ಯೆ

ದೇಶದ ಒಟ್ಟು ಕೃಷಿ ಭೂಮಿಯ ಪೈಕಿ ನೀರಾವರಿಗೆ ಒಳಪಟ್ಟಿರುವ ಜಮೀನು ಶೇಕಡ 35ರಷ್ಟು ಮಾತ್ರ. ಹೀಗಾಗಿ ಬಹುತೇಕ ಭಾರತೀಯ ರೈತರು ಕೃಷಿಗಾಗಿ ಮಳೆಯನ್ನೇ ನೆಚ್ಚಿಕೊಳ್ಳುವುದು ಅನಿವಾರ್ಯವಾಗಿದೆ. ಈ ಪರಿಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ 50,740 ಕೋಟಿ ರೂಪಾಯಿ ವೆಚ್ಚದಲ್ಲಿ 8,214 ಕಾಮಗಾರಿಗಳ ಗುರಿಯ ಪಿಎಂಕೆಎಸ್‌ವೈ ಯೋಜನೆ ಜಾರಿಗೆಯಲ್ಲಿದೆ.

ಕೇಂದ್ರ ಸರಕಾರದ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯಗಳ ಅಧಿಕಾರಿಗಳು ಆಸಕ್ತಿ ತೋರದಿರುವುದು ಇಂತಹ ಯೋಜನೆಗಳ ವೈಫಲ್ಯಕ್ಕೆ ಕಾರಣ. ವಾಟರ್‌ಶೆಡ್‌ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳು ಬದ್ಧತೆ ತೋರಬೇಕು. ಇಲ್ಲವಾದರೆ ಅಂತರ್ಜಲ ಕೊರತೆಯ ಸಮಸ್ಯೆ ಇನ್ನಷ್ಟು ತೀವ್ರವಾಗುತ್ತದೆ.
- ಕುರುಬೂರು ಶಾಂತಕುಮಾರ್, ರಾಜ್ಯಾಧ್ಯಕ್ಷ, ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಸ್ಥಳೀಯರ ಶ್ರಮ ಬಳಸಿಕೊಂಡು ಚೆಕ್‌ ಡ್ಯಾಂ ನಿರ್ಮಾಣ, ಅಂತರ್ಜಲ ಮರುಪೂರಣ ಕಾಮಗಾರಿಗಳು, ಕೃಷಿ ಹೊಂಡಗಳ ನಿರ್ಮಾಣ ಹಾಗೂ ಹನಿ ನೀರಾವರಿ ಅಳವಡಿಕೆಯ ಯೋಜನೆ ಇದಾಗಿದೆ. ಕಿರು ನೀರಾವರಿ, ಅಂತರ್ಜಲ ಮರುಪೂರಣ, ಮಣ್ಣಿನ ಸವಕಳಿ ತಡೆಯುವ ಜತೆಗೆ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸುವುದೂ ಕೂಡಾ ಈ ಯೋಜನೆಯ ಭಾಗವಾಗಿದೆ.

ಒಟ್ಟು ಯೋಜನೆಗಳ ಪೈಕಿ 1,774 ಕಾಮಗಾರಿಗಳ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿಲ್ಲ ಎಂದು ಕೇಂದ್ರ ಭೂ ಸಂಪನ್ಮೂಲ ಇಲಾಖೆ ಹೇಳಿದೆ. 2017ರ ಸೆಪ್ಟೆಂಬರ್‌ನಲ್ಲಿ ಸ್ಥಾಯಿ ಸಮಿತಿಗೆ ಮತ್ತೊಂದು ವರದಿ ಸಲ್ಲಿಸಿದ್ದ ಇಲಾಖೆಯು ಪಿಎಂಕೆಎಸ್‌ವೈ ಯೋಜನೆಯ ಒಟ್ಟು ಕಾಮಗಾರಿಗಳ ಪೈಕಿ 1,257 ಕಾಮಗಾರಿಗಳ ಡಿಪಿಆರ್‌ ತಯಾರಿ ಪ್ರಕ್ರಿಯೆಯೇ ಆರಂಭವಾಗಿಲ್ಲ ಎಂದು ತಿಳಿಸಿದೆ.

‘ವರ್ಷ ಎಂಟು; ಪ್ರಗತಿ 10 ಪರ್ಸೆಂಟು’: ಇದು ಪ್ರಧಾನಿ ಹೆಸರಿನ ವಾಟರ್‌ಶೆಡ್‌ ಯೋಜನೆಯ ಸಾಧನೆ
‘ವರ್ಷ ಎಂಟು; ಪ್ರಗತಿ 10 ಪರ್ಸೆಂಟು’: ಇದು ಪ್ರಧಾನಿ ಹೆಸರಿನ ವಾಟರ್‌ಶೆಡ್‌ ಯೋಜನೆಯ ಸಾಧನೆ
‘ವರ್ಷ ಎಂಟು; ಪ್ರಗತಿ 10 ಪರ್ಸೆಂಟು’: ಇದು ಪ್ರಧಾನಿ ಹೆಸರಿನ ವಾಟರ್‌ಶೆಡ್‌ ಯೋಜನೆಯ ಸಾಧನೆ

ನೀರಾವರಿಗೆಂದು 13,000 ಕೋಟಿ ರೂಪಾಯಿ ವ್ಯಯಿಸಿದ್ದರೂ ದೇಶದಲ್ಲಿ ಪ್ರಮುಖ 5 ಕಾಮಗಾರಿಗಳೂ ಮುಕ್ತಾಯದ ಹಂತಕ್ಕೆ ಬಂದಿಲ್ಲ ಎಂದು ಇತ್ತೀಚೆಗೆ ಸಿಎಜಿ ವರದಿ ಕೂಡಾ ಹೇಳಿತ್ತು. ಪ್ರಮುಖ ನೀರಾವರಿ ಯೋಜನೆಗಳ ಅನುಷ್ಠಾನದ ವಿಳಂಬಕ್ಕೆ ಸೂಕ್ತ ನಿಗಾ ವಹಿಸದಿರುವುದು ಹಾಗೂ ಅನುಷ್ಠಾನ ಪ್ರಾಧಿಕಾರಗಳ ನಿರಾಸಕ್ತಿಯೇ ಕಾರಣ ಎಂದು ಸಿಎಜಿ ವರದಿ ತಿಳಿಸಿತ್ತು.

ಈ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿ ವರ್ಗ ಎಂಟು ವರ್ಷವಾದರೂ ಕೇವಲ ಶೇಕಡ 10ರಷ್ಟು ಕಾರ್ಯಸಾಧನೆ ತೋರಿದ್ದರೆ, ಇವರನ್ನು ಪ್ರಶ್ನಿಸಿ ಕಾಮಗಾರಿ ಪೂರ್ಣಗೊಳಿಸುವ ಇಚ್ಛಾಶಕ್ತಿಯನ್ನು ಜನಪ್ರತಿನಿಧಿಗಳೂ ತೋರಿಲ್ಲ. ಇಂತಹ ಕಾರ್ಯಾಂಗ ಮತ್ತು ಶಾಸಕಾಂಗವನ್ನು ಹೊಂದಿರುವ ದೇಶದಲ್ಲಿ ಮತ್ತೊಂದು ಮಹಾಚುನಾವಣೆ ಸಮೀಪದಲ್ಲಿದೆ.