samachara
www.samachara.com
‘ವೆರಿ ಫನ್ನಿ’: ಗ್ರಹಣದ ಸುತ್ತ  ಕಾಲ್ಪನಿಕ ಕತೆಗಳು; ನೀವೊಮ್ಮೆ ಓದಿ, ನಕ್ಕುಬಿಡಿ!
COVER STORY

‘ವೆರಿ ಫನ್ನಿ’: ಗ್ರಹಣದ ಸುತ್ತ ಕಾಲ್ಪನಿಕ ಕತೆಗಳು; ನೀವೊಮ್ಮೆ ಓದಿ, ನಕ್ಕುಬಿಡಿ!

ಗ್ರಹಣದ ಬಗ್ಗೆ ಭಾರತದಲ್ಲಷ್ಟೇ ಕಾಲ್ಪನಿಕ ಕತೆಗಳಿಲ್ಲ. ಜಗತ್ತಿನ ಬೇರೆ ಬೇರೆ ಭಾಗದ ಜನರು ತಮ್ಮ ತಮ್ಮದೇ ರೀತಿಯಲ್ಲಿ ಗ್ರಹಣದ ಕುರಿತು ರಸವತ್ತಾದ ಕತೆಗಳನ್ನು ಕಟ್ಟಿದ್ದಾರೆ. ಭಾರತೀಯರಂತೆ ಇಂದಿಗೂ ಆ ಕತೆಗಳನ್ನೇ ನಂಬಿಕೊಂಡಿದ್ದಾರೆ.

Summary

ವಿಜ್ಞಾನದ ಪ್ರಕಾರ ಆಕಾಶ ಕಾಯಗಳ ನೆರಳು ಬೆಳಕಿನಾಟ, ಪುರಾಣಗಳ ಪ್ರಕಾರ ಸೂರ್ಯ ಚಂದ್ರರಿಗೆ ಅತಿಮಾನುಷ ಶಕ್ತಿಗಳ ಕಾಟ. ಇವು ‘ಗ್ರಹಣ’ ಎನ್ನುವ ಖಗೋಳ ವಿದ್ಯಮಾನದ ಸತ್ಯ ಮತ್ತು ಮಿಥ್ಯಗಳು.

ಭಾರತೀಯ ಸಂಸ್ಕೃತಿಯಲ್ಲಿ ಸೂರ್ಯ ಮತ್ತು ಚಂದ್ರ ಗ್ರಹಣಗಳು ತಮ್ಮದೇ ಆದ ಮಾನ್ಯತೆಯನ್ನು ಹೊಂದಿವೆ. ಮಿಥ್ಯೆಯನ್ನೇ ಸತ್ಯವೆಂದು ನಂಬಿಕೊಂಡು ಸಹಸ್ರಮಾನಗಳನ್ನೇ ಕಳೆದಿರುವ ಭಾರತೀಯರಲ್ಲಿ ಇಂದಿಗೂ ಕೂಡ ಗ್ರಹಣ ಸೂತಕದ ಛಾಯೆಯಾಗಿಯೇ ಗೋಚರಿಸುತ್ತದೆ.

ಶಾಲೆ ಕಾಲೇಜು ಪಠ್ಯಪುಸ್ತಕಗಳಲ್ಲಿ ಗ್ರಹಣಗಳ ವೈಜ್ಞಾನಿಕ ವಿಶ್ಲೇಷಣೆಯನ್ನು ಓದಿದ ನಂತರವೂ, ಗ್ರಹಣದ ಸಮಯದಲ್ಲಿ ಊಟ ತಿಂಡಿ ಬಿಟ್ಟು ಮಿಕ್ಕಿರುವ ಆಹಾರ ಪದಾರ್ಥ, ನೀರಿನ ಬಿಂದಿಗೆ, ತೊಟ್ಟಿಗಳಿಗೆ ಗರಿಕೆ ಹಾಕಿ ಬದುಕಿಕೊಂಡೆವು ಎಂದು ನಿಟ್ಟುಸಿರು ಬಿಡುವ ಭಾರತೀಯರ ಸಂಖ್ಯೆ ಇಂದಿಗೂ ಅಗಾಧವಾಗಿಯೇ ಇದೆ. ಇದಕ್ಕೆ ಕಾರಣವಾಗಿರುವುದು ಕ್ರಿಸ್ತ ಪೂರ್ವದಿಂದಲೂ ಬಾಯಿಂದ ಬಾಯಿಗೆ ಸಾಗಿ ಬಂದಿರುವ ಪುರಾಣದ ಪುಣ್ಯಕತೆಗಳು.

ಭಾರತದಲ್ಲಿ ಗ್ರಹಣದ ಸುತ್ತ ಹಲವಾರು ನಂಬಿಕೆಗಳಿವೆ. ಈ ನಂಬಿಕೆಗಳೆಲ್ಲಾ ಪುರಾತನ ಜನರು ಖಗೋಳ ವಿಸ್ಮಯಗಳ ಸುತ್ತ ಕಟ್ಟಿದ ಕಾಲ್ಪನಿಕ ಕತೆಗಳೇ ಆಧಾರವಾಗಿವೆ.

ಈ ರೀತಿಯ ಕಾಲ್ಪನಿಕ ಕತೆಗಳು ಹುಟ್ಟಿರುವುದು ಭಾರತದಲ್ಲಷ್ಟೇ ಅಲ್ಲ. ಇಡೀ ಜಗತ್ತಿನ ಬೇರೆ ಬೇರೆ ಸಮುದಾಯಗಳು ಗ್ರಹಣದ ಸುತ್ತ ತಮ್ಮದೇ ಆದ ಕತೆಗಳನ್ನು ಕಟ್ಟಿವೆ. ಅದೇ ಕತೆಗಳನ್ನೇ ಮುಂದಿನ ಜನಾಂಗಗಳಿಗೂ ಹೇಳುತ್ತಾ ಬಂದಿವೆ. ಕತೆಗಳ ಸುತ್ತ ಪಾಪ, ಪುಣ್ಯ, ಒಳಿತು, ಕೆಡಕುಗಳ ನಂಬಿಕೆ ಬೆಳೆದು ಇಂದಿನ ದಿನಗಳಲ್ಲಿ ಗ್ರಹಣದ ಸುತ್ತಲೂ ದೊಡ್ಡ ಮಾರುಕಟ್ಟೆಯನ್ನೇ ಸೃಷ್ಟಿಸಿವೆ. ಜಗತ್ತಿನಾದ್ಯಂತ ಹುಟ್ಟಿರುವ ಇಂತಹ ಕತೆಗಳಲ್ಲಿ ಪ್ರಮುಖವಾದ ಕತೆಗಳಿಗಿವು.

ಸೂರ್ಯ ಚಂದ್ರರನ್ನು ನುಂಗುತ್ತಾನೆ ರಾಹು:

‘ವೆರಿ ಫನ್ನಿ’: ಗ್ರಹಣದ ಸುತ್ತ  ಕಾಲ್ಪನಿಕ ಕತೆಗಳು; ನೀವೊಮ್ಮೆ ಓದಿ, ನಕ್ಕುಬಿಡಿ!

ಹಿಂದೂ ಪುರಾಣಗಳ ಪ್ರಕಾರ ಗ್ರಹಣಕ್ಕೆ ಕಾರಣವಾಗುವುದು ‘ರಾಹು’ ಎಂಬ ರಾಕ್ಷಸ. ಅಮರತ್ವವನ್ನು ಪಡೆಯುವ ಸಲುವಾಗಿ ದೇವ ದಾನವರು ಕ್ಷೀರ ಸಾಗರವನ್ನು ಕಡೆದು, ಅಮೃತವನ್ನು ಪಡೆದರು. ಆದರೆ ಮೋಸ ಮಾಡಿದ ದೇವ ಸಂಕುಲ, ದಾನವರಿಗೆ ಅಮೃತವನ್ನು ನೀಡದೇ ತಾವೇ ಕುಡಿತು ಅಮರತ್ವವನ್ನು ಪಡೆದರು. ದೇವತೆಗಳ ಈ ಕುತಂತ್ರವನ್ನು ತಿಳಿದ ರಾಹು ಎಂಬ ದಾನವ, ವೇಷ ಮರೆಸಿಕೊಂಡು ದೇವತೆಗಳ ಸಾಲಿನಲ್ಲಿ ಕುಳಿತು ತಾನೂ ಅಮೃತವನ್ನು ಪಡೆದು ಕುಡಿದ.

ಇದನ್ನು ಕಂಡ ಸೂರ್ಯ ಮತ್ತು ಚಂದ್ರರು ವಿಷ್ಣುವಿಗೆ ಮಾಹಿತಿ ಮುಟ್ಟಿಸಿದರು. ಕೋಪಗೊಂಡ ವಿಷ್ಣು, ರಾಹು ಕುಡಿದ ಅಮೃತ ಗಂಟಲಿಂದ ಕೆಳಗಿಳಿಯುವ ಮೊದಲೇ ರಾಹುವಿನ ರುಂಡ ಕತ್ತರಿಸಿದ. ರಾಹುವಿನ ರುಂಡ ಮುಂಡಗಳ ಬೇರ್ಪಟ್ಟು, ಅಮೃತ ಕುಡಿದ ಕಾರಣದಿಂದ ತಲೆ ಅಮರತ್ವ ಸಾಧಿಸಿದರೆ, ದೇಹ ಸಾವನ್ನಪ್ಪಿತು.

ನಾನು ದೇಹವನ್ನು ಕಳೆದುಕೊಳ್ಳಲು ಸೂರ್ಯ ಚಂದ್ರರೇ ಕಾರಣ ಎಂದು ಅರಿತ ರಾಹು ಇಂದಿಗೂ ಅವರಿಬ್ಬರ ಮೇಲೆ ದ್ವೇಷ ಸಾಧಿಸುತ್ತಿದ್ದಾನೆ. ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಅಗಾಗ ಸೂರ್ಯ ಚಂದ್ರರನ್ನು ನುಂಗುತ್ತಾನೆ. ಆದರೆ ರಾಹುಗೆ ಇರುವುದು ತಲೆ ಮಾತ್ರ. ಬಾಯಿಂದ ಸೂರ್ಯ ಚಂದ್ರರನ್ನು ನುಂಗಿದರೂ ಕೂಡ ಗಂಟಲಿನಿಂದ ಅವರಿಬ್ಬರೂ ಹೊರಗೆ ಬರುತ್ತಾರೆ. ಇದೇ ‘ಗ್ರಹಣ’.

ಬೆಂಕಿಯ ನಾಯಿ:

‘ವೆರಿ ಫನ್ನಿ’: ಗ್ರಹಣದ ಸುತ್ತ  ಕಾಲ್ಪನಿಕ ಕತೆಗಳು; ನೀವೊಮ್ಮೆ ಓದಿ, ನಕ್ಕುಬಿಡಿ!

ಕೊರಿಯನ್ನರ ಪ್ರಕಾರ ಗ್ರಹಣಕ್ಕೆ ಕಾರಣವಾಗುವುದು ‘ಬುಲ್‌-ಗೇ’ ಹೆಸರಿನ ಬೆಂಕಿಯ ನಾಯಿ. ಕೊರಿಯಾದ ‘ಹಂಗುಗುಯಿ-ಸಿಯೋಲ್ವೋ’ ಎಂಬ ಜಾನಪದಗಳ ನಂಬಿಕೆ ಪ್ರಕಾರ ಹಲವಾರು ಸ್ವರ್ಗಗಳು ಅಸ್ತಿತ್ವದಲ್ಲಿವೆ. ಅದರಲ್ಲಿ ಕತ್ತಲ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ದೊರೆ ಕತ್ತಲನ್ನು ಹೋಗಲಾಡಿಸುವ ಸಲುವಾಗಿ ಸೂರ್ಯ ಚಂದ್ರರನ್ನು ಹಿಡಿದು ತರಲು ಬುಲ್‌-ಗೇ ಎಂಬ ಬೆಂಕಿಯ ನಾಯಿಯನ್ನು ಕಳುಹಿಸುತ್ತಾನೆ.

ರಾಜನ ಆಜ್ಞೆ ದೊರೆತಾಗಲೆಲ್ಲಾ ಬುಲ್‌-ಗೇ ಸೂರ್ಯ ಚಂದ್ರರನ್ನು ಬಾಯಿಯಲ್ಲಿ ಕಚ್ಚಿಕೊಂಡು ಹೋಗಲು ಬರುತ್ತದೆ. ಆದರೆ ಸೂರ್ಯ ಉರಿಯುವ ಬೆಂಕಿಯಾಗಿರುವುದರಿಂದ ಅದರ ಬಾಯಿ ಸುಟ್ಟು ಸೂರ್ಯನನ್ನು ಅಲ್ಲಿಯೇ ಬಿಟ್ಟು ಹೋಗುತ್ತದೆ. ಚಂದ್ರ ತುಂಬಾ ತಂಪಾಗಿರುವುದರಿಂದ ನಾಯಿಯ ಬಾಯಿ ಮರಗಟ್ಟಿ ಚಂದ್ರನನ್ನೂ ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಬರೇ ಕೈಯಲ್ಲಿ ಹಿಂದಿರುಗಿದ ಬುಲ್‌-ಗೇ ಮೇಲೆ ಕೋಪಗೊಳ್ಳುವ ರಾಜ ಮತ್ತೊಂದು ಬೆಂಕಿಯ ನಾಯಿಯನ್ನು ಕಳುಹಿಸುತ್ತಾನೆ. ಆದರೆ ಯಾವ ನಾಯಿಯೂ ಇದುವರೆಗೆ ಸೂರ್ಯ ಚಂದ್ರರನ್ನು ಹಿಡಿದು ತಂದಿಲ್ಲ.

ದೇವರು ನೀಡುವ ಎಚ್ಚರಿಕೆ:

‘ವೆರಿ ಫನ್ನಿ’: ಗ್ರಹಣದ ಸುತ್ತ  ಕಾಲ್ಪನಿಕ ಕತೆಗಳು; ನೀವೊಮ್ಮೆ ಓದಿ, ನಕ್ಕುಬಿಡಿ!

ರೋಮನ್‌ ಜನರ ನಂಬಿಕೆಯ ಪ್ರಕಾರ ಗ್ರಹಣ ಎನ್ನುವುದು ಮಾನವರಿಗೆ ದೇವರು ನೀಡುವ ಎಚ್ಚರಿಕೆಯ ಗಂಟೆ. ಭೂಮಿಯ ಮೇಲೆ ಮನುಷ್ಯರು ಮಾಡುವ ಪಾಪ ಹೆಚ್ಚಾದಾಗಲೆಲ್ಲಾ ದೇವರು ಗ್ರಹಣವನ್ನು ನಡೆಸುತ್ತಾನೆ. ನೀವು ಮಾಡುತ್ತಿರುವ ಪಾಪಗಳ ಸಂಖ್ಯೆ ಹೆಚ್ಚಾಗಿದೆ ಎಂದು ಎಚ್ಚರಿಕೆ ನೀಡುತ್ತಾನೆ. ಗ್ರಹಣ ಸಂಭವಿಸಿತು ಎಂದರೆ ಮನುಷ್ಯರು ಎಚ್ಚೆತ್ತುಕೊಂಡು ನಡೆಯಬೇಕು ಎಂದರ್ಥ. ಪಾಪ ಮಾಡುವುದನ್ನು ಬಿಟ್ಟು ಸದ್ಬುದ್ಧಿಯಿಂದ ನಡೆಯಬೇಕು. ಇದು ಮಿಥ್ಯೆಯಾದರೂ ಕೂಡ ಜನತೆಯನ್ನು ಸರಿ ದಾರಿಗೆ ತರುವ ಮಾರ್ಗವಾಗಿಯೂ ಬಳಕೆಯಾಗುತ್ತದೆ.

ಸೂರ್ಯ ಚಂದ್ರರ ಹೊಡೆದಾಟ:

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
/Luumanfo

ಇದು ಆಫ್ರಿಕಾ ಖಂಡದ ಟೊಗೊ ಮತ್ತು ಬೆನಿನ್‌ ಎಂಬ ಸಮುದಾಯಗಳ ಜನರ ನಂಬಿಕೆ. ಇವರ ಪ್ರಕಾರ ಸೂರ್ಯ ಚಂದ್ರ ಪರಸ್ಪರ ಜಗಳ ಗುದ್ದಾಡುವುದೇ ಗ್ರಹಣ. ತಮ್ಮೊಳಗಿ ದ್ವೇಷ, ವೈಷಮ್ಯಗಳ ಕಾರಣದಿಂದಾಗಿ ಸೂರ್ಯ ಚಂದ್ರ ಜಿದ್ದಾಜಿದ್ದಿಗೆ ಬೀಳುತ್ತಾರೆ. ಘೋರವಾಗಿ ಬಡಿದಾಡಿಕೊಳ್ಳುತ್ತಾರೆ. ನಂತರ ಸಮಾಧಾನಗೊಂಡು ಶಾಂತಗೊಳ್ಳುತ್ತಾರೆ. ಜತೆಗೆ ಜಗತ್ತಿನ ಜನತೆಗೆ ಶಾಂತಿ ಮತ್ತು ಸಾಮರಸ್ಯದಿಂದ ಬಾಳಬೇಕು ಎಂಬ ಸಂದೇಶವನ್ನೂ ಕೂಡ ಇಂತಹ ಕಾಲ್ಪನಿಕ ಕತೆಯ ಮೂಲಕ ನೀಡುತ್ತಾರೆ.

ಅಣ್ಣ ತಂಗಿಯರ ಮುನಿಸು:

ಇದು ಗ್ರಹಣದ ಬಗೆಗಿನ ಕೆನಡಾ, ಗ್ರೀನ್‌ ಲ್ಯಾಂಡ್‌ ಮತ್ತು ಅಲಾಸ್ಕಾಗಳಲ್ಲಿನ ಇನುಯಿಟ್‌ ಎಂಬ ಸಮುದಾಯದ ನಂಬಿಕೆ. ಚಂದ್ರ ಅಣ್ಣ ಹಾಗೂ ಸೂರ್ಯ ತಂಗಿ. ಜಗತ್ತಿ ಹುಟ್ಟಿದ ಸಂಧರ್ಭದಲ್ಲಿ ‘ಮಲಿನಾ’ ಹೆಸರಿನ ತಂಗಿ ಮುನಿಸಿಕೊಂಡು ಅಣ್ಣ ಅನ್ನಿಂಗನ್‌ನಿಂದ ದೂರವಿದ್ದಾಳೆ. ಪದೇ ಪದೇ ಅನ್ನಿಂಗನ್‌ ತಂಗಿ ಮಲಿನಾಳನ್ನು ಸಮಾಧಾನ ಪಡಿಸಲು ಬರುತ್ತಾನೆ. ಆದರೆ ಮಲಿನಾ ಕೆಲಹೊತ್ತಿನಲ್ಲೇ ಮತ್ತೆ ಮುನಿಸಿಕೊಂಡು ದೂರ ಹೋಗುತ್ತಾಳೆ. ಇದೇ ಗ್ರಹಣ.

ಇವಷ್ಟೇ ಅಲ್ಲ, ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಇನ್ನು ವಿಭಿನ್ನವೆನಿಸುವ ಕತೆಗಳು ಗ್ರಹಣದ ಸುತ್ತ ಸೃಷ್ಟಿಯಾಗಿವೆ. ಚೀನೀಯರ ಪ್ರಕಾರ ಡ್ರ್ಯಾಗನ್‌ ಸೂರ್ಯ ಚಂದ್ರರನ್ನು ನುಂಗುವುದೇ ಗ್ರಹಣ. ವಿಯೆಟ್ನಾಂ ಜನರು ಕಪ್ಪೆ ಅಕಾಶಕಾಯಗಳನ್ನು ನುಂಗುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಅಮೆರಿಕಾದ ಮೂಲ ಜನರ ಪ್ರಕಾರ ಸೂರ್ಯ ಚಂದ್ರರನ್ನು ನುಂಗುವುದು ಕರಡಿ, ಯುಗೋಸ್ಲೋವಿಯಾ ಜನರ ಪ್ರಕಾರ ತೋಳ ಹಾಗೂ ಸೈಬೀರಿಯಾ ಜನ ಹೇಳುವಂತೆ ರಕ್ತ ಪಿಶಾಚಿಯೊಂದು ಸೂರ್ಯ ಚಂದ್ರರನ್ನು ಕಬಳಿಸುವ ಪ್ರಯತ್ನ ಮಾಡುತ್ತದೆ.

ಸೂರ್ಯನನ್ನು ನುಂಗುತ್ತಿರುವ ಡ್ರ್ಯಾಗನ್‌.
ಸೂರ್ಯನನ್ನು ನುಂಗುತ್ತಿರುವ ಡ್ರ್ಯಾಗನ್‌.
/beautifultheology.com 

ಜಗತ್ತಿನ ಹಲವಾರು ಜನಸಮುದಾಯಗಳಲ್ಲಿ ಸೂರ್ಯ ಚಂದ್ರ ಗಂಡ ಹೆಂಡತಿಯರು ಎಂಬ ನಂಬಿಕೆ ಇದೆ. ಗಂಡ ಹೆಂಡತಿ ತಮ್ಮ ಗೃಹಕಾರ್ಯಗಳಲ್ಲಿ ನಿರತರಾಗುವುದೇ ಗ್ರಹಣ ಎನ್ನಲಾಗುತ್ತದೆ. ಉತ್ತರ ಅಮೆರಿಕಾದ ಬುಡಕಟ್ಟು ಜನರ ಪ್ರಕಾರ ಸೂರ್ಯ ಚಂದ್ರರು ಸಂಭೋಗ ಕ್ರಿಯೆಯಲ್ಲಿ ತೊಡಗಿದ ಗ್ರಹಣ ಸಂಭವಿಸುತ್ತದೆ.

ಈ ಎಲ್ಲಾ ನಂಬಿಕೆಗಳಿಗಿಂತ ವಿಭಿನ್ನ ಎನಿಸುವುದು ಇಟಲಿಯನ್ನರ ಪುರಾಣದ ಕತೆ. ಇಟಲಿ ಪುರಾಣಗಳ ಪ್ರಕಾರ ದೇವರು ಹೂವಿನ ಗಿಡಗಳನ್ನು ನೆಡುವ ಸಮಯದಲ್ಲಿ ಗ್ರಹಣ ಸಂಭವಿಸುತ್ತದೆ.

ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ ಸೂರ್ಯ ಅಥವಾ ಚಂದ್ರ ಗ್ರಹಣಗಳ ಕುರಿತಾಗಿ ಕತೆಗಳು ವಿಭಿನ್ನವಾಗಿದ್ದರೂ ಕೂಡ ಮೂಢನಂಬಿಕೆಗಳು ಮಾತ್ರ ಒಂದಕ್ಕೊಂದು ಸಮೀಪವೆನಿಸುತ್ತವೆ.

ಭಾರತದಲ್ಲಿ ಗ್ರಹಣದ ವೇಳೆ ಉಪವಾಸ ನಡೆಸುವಂತೆ ಜಗತ್ತಿನ ಅನೇಕ ಭಾಗದ ಜನರು ಉಪವಾಸ ಮಾಡುತ್ತಾರೆ. ಭಾರತೀಯರು ಗ್ರಹಣವನ್ನು ಕೆಡಕು ಎಂದು ಭಾವಿಸಿರುವಂತೆ ಜಗತ್ತಿನ ಹಲವಾರು ಸಂಸ್ಕೃತಿಗಳು ಗ್ರಹಣ ಹಾನಿಕಾರಕ ಎಂದು ನಂಬಿವೆ. ಗ್ರಹಣಗಳು ಸಾವು, ನೋವು, ಅಶಾಂತಿಗಳನ್ನು ಹೊತ್ತುತರುತ್ತವೆ ಎಂದು ಭಾವಿಸಿವೆ.

ಈ ಭಾವನೆಗಳು 21ನೇ ಶತಮಾನದಲ್ಲೂ ಕೂಡ ಬದಲಾಗಿಲ್ಲ. ವಿಜ್ಞಾನ ಲೋಕ ಗ್ರಹಣಕ್ಕೆ ಕಾರಣವೇನು ಎಂದು ರಸವತ್ತಾಗಿ ಬಿಡಿಸಿಟ್ಟರೂ ಕೂಡ ಜನ ಪುರಾಣಗಳನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಇದರಿಂದಾಗಿಯೇ ಭಾರತದಲ್ಲಿ ಗ್ರಹಣಗಳು ಜ್ಯೋತಿಷಿ, ಅರ್ಚಕ ವರ್ಗಗಳಿಗೆ ದುಡ್ಡಿನ ಮೂಲವಾದರೆ, ಮಾಧ್ಯಮಗಳಿಗೆ ಟಿಆರ್‌ಪಿ ತಂದುಕೊಡುವ ದಾರಿಯಾಗಿ ರೂಪುಗೊಂಡಿವೆ. ಮುಂದೊಂದು ದಿನ ಇವರುಗಳ ಕಟ್ಟುತ್ತಿರುವ ಕಾಲ್ಪನಿಕ ಕತೆಗಳನ್ನೂ ಕೂಡ ಭವಿಷ್ಯ ಜನಾಂಗ ಆಡಿಕೊಂಡು ನಗುವ ಸಾಧ್ಯತೆ ಇದೆ.