samachara
www.samachara.com
ಪ್ರಧಾನಿ ಮೋದಿಯ ‘ಆ ಒಂದು ಅಪ್ಪುಗೆ’ ಇಮ್ರಾನ್‌ ಖಾನ್‌ ಗೆಲುವಿಗೆ ಪ್ರಮುಖ ಕಾರಣವಾಯಿತು!
COVER STORY

ಪ್ರಧಾನಿ ಮೋದಿಯ ‘ಆ ಒಂದು ಅಪ್ಪುಗೆ’ ಇಮ್ರಾನ್‌ ಖಾನ್‌ ಗೆಲುವಿಗೆ ಪ್ರಮುಖ ಕಾರಣವಾಯಿತು!

ಭಾರತ ವಿರೋಧಿ ಮನಸ್ಥಿತಿಗಳನ್ನು ಬಡಿದೆಬ್ಬಿಸಿ ಇಮ್ರಾನ್‌ ಖಾನ್‌ ಗೆದ್ದು ಬಿಟ್ಟರು. ಮೋದಿಯನ್ನು ವಿರೋಧಿಸುತ್ತಲೇ ಪ್ರಚಾರ ನಡೆಸಿ ಇದೀಗ ಪಾಕಿಸ್ತಾನದ ಪ್ರಧಾನಿಯಾಗಲು ಹೊರಟಿದ್ದಾರೆ.

ಪಾಕಿಸ್ತಾನ ಚುನಾವಣಾ ಪ್ರಕ್ರಿಯೆ ಕೊನೆಗೂ ಮುಕ್ತಾಯ ಕಂಡಿದೆ. ಇಮ್ರಾನ್‌ ಖಾನ್‌ ನೇತೃತ್ವದ ‘ಪಾಕಿಸ್ತಾನ್‌ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)‘ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು ಇತರರ ಸಹಾಯದಿಂದ ಅಧಿಕಾರ ಹಿಡಿಯಲಿದೆ. ಇಡೀ ಚುನಾವಣೆ ನಡೆದು ಬಂದ ಹಾದಿಯನ್ನೊಮ್ಮೆ ಹಿಂತಿರುಗಿ ನೋಡಿದರೆ, ಗೆಲುವಿನ ಅಂಚಿಗೆ ಬಂದು ನಿಂತ ಇಮ್ರಾನ್‌ ಖಾನ್‌ ಹಿಂದೆ ಹಲವು ಕಾರಣಗಳು ಕಾಣಿಸುತ್ತಿವೆ. ಅವುಗಳಲ್ಲಿ ಪ್ರಮುಖವಾದುದು, ಭಾರತದ ‘ಬಲಪಂಥೀಯ’ ಪ್ರಧಾನಿ ನರೇಂದ್ರ ಮೋದಿ!

2018ರ ಸಾರ್ವತ್ರಿಕ ಚುನಾವಣೆ ಪಾಕಿಸ್ತಾನದ ಪಾಲಿಗೆ ಐತಿಹಾಸಿಕವಾದುದು. ಇದಕ್ಕೆ ಹಲವು ಕಾರಣಗಳಿವೆ. ಮೊದಲನೆಯದಾಗಿ ಸೇನೆಯ ಹಸ್ತಕ್ಷೇಪ ಏನೇ ಇರಲಿ, ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಎಂಬುದು ನೆಪಕ್ಕಾದರೂ ಉಳಿದುಕೊಂಡಿತು. ಹಲವು ಬಾರಿ ಸೇನಾ ಆಡಳಿತಕ್ಕೆ ಒಳಪಟ್ಟ ಪಾಕಿಸ್ತಾನದಲ್ಲಿ ಇದೊಂದು ಮಹತ್ವದ ಬೆಳವಣಿಗೆ. ಎರಡನೆಯದ್ದು ಕೇವಲ ಎರಡು ಪಕ್ಷಗಳ ಮೇಲಾಟದ ನಡುವೆ ಹೊಸ ಪಕ್ಷವೊಂದು ಅಧಿಕಾರ ಹಿಡಿಯಿತು. ಅದು ಹೇಗೆ? ಅದು ಹೀಗೆ.

ಈ ಬಾರಿಯ ಚುನಾವಣೆಯ ಕೆಸರೆರಚಾಟದಲ್ಲಿ ಭ್ರಷ್ಟಾಚಾರಿ, ದೇಶ ವಿರೋಧಿ, ಪ್ರಜಾಫ್ರಭುತ್ವ ವಿರೋಧಿ ಎಂಬೆಲ್ಲಾ ಹೇಳಿಕೆಗಳ ಜತೆಗೆ ‘ನರೇಂದ್ರ ಮೋದಿ ಗೆಳೆಯ’, ‘ಭಾರತದ ಕೈಗೊಂಬೆ’ ಎಂಬ ಹೊಸ ವಿರೋಧಿ ಹೇಳಿಕೆಗಳು ಕೇಳಿ ಬಂದವು. ಕಳೆದ 10 ವರ್ಷಗಳಲ್ಲಿ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕೇಳಿ ಬಂದ ಭಾರತ ಮತ್ತು ಮೋದಿ ವಿರೋಧಿ ಮಾತುಗಳಿವು.

ಹಾಗೆ ನೋಡಿದರೆ ಭಾರತ ವಿರೋಧಿ ಮನಸ್ಥಿತಿ ಪಾಕಿಸ್ತಾನದಲ್ಲಿ ಹೊಸದಲ್ಲ. ಆದರೆ 2008ರ ನಂತರ ಪರ್ವೇಜ್ ಮುಷರಫ್ ಆಳ್ವಿಕೆ ಕೊನೆಯಾಗಿ ಪ್ರಜಾಪ್ರಭುತ್ವ ಉಳಿದುಕೊಂಡ ಬಳಿಕ ಪಾಕಿಸ್ತಾನದಲ್ಲಿ ಭಾರತ ವಿರೋಧಿ ಮಾತುಗಳು ಸವಕಲಾಗಿತ್ತು. ಅದರಿಂದ ಮತಗಳು ಬೀಳುತ್ತವೆ ಎಂದು ಯಾರಿಗೂ ಅನಿಸಿರಲಿಲ್ಲ. ಇದೀಗ ಮತ್ತೆ 2018ರ ಚುನಾವಣೆಯಲ್ಲಿ ಈ ಮನಸ್ಥಿತಿಯನ್ನು ಕೆರಳಿಸಿ ಅಧಿಕಾರಕ್ಕೆ ಬಂದಿದ್ದಾರೆ ಇಮ್ರಾನ್‌ ಖಾನ್.

ಭಾರತ ವಿರೋಧಿ ಧ್ವನಿ:

ಹಾಗಂಥ ಇದನ್ನು ಮೊದಲಿಗೆ ಪ್ರಸ್ತಾಪ ಮಾಡಿದವರು ಇಮ್ರಾನ್‌ ಖಾನ್‌ ಅಲ್ಲ. ಬದಲಿಗೆ ಬಿಲಾವಲ್‌ ಭುಟ್ಟೋ ಝರ್ದಾರಿ; 2016ರಲ್ಲಿ. ಅವತ್ತು ಪಾಕಿಸ್ತಾನದಿಂದ ಅಜಾದ್ ಜಮ್ಮು ಮತ್ತು ಕಾಶ್ಮೀರ ಎಂದು ಕರೆಯಲ್ಪಡುವ ಭಾಗದಲ್ಲಿ ಚುನಾವಣೆ ನಡೆಯುತ್ತಿತ್ತು. ಇಲ್ಲಿ ಅಧಿಕಾರದಲ್ಲಿದ್ದ ‘ಪಾಕಿಸ್ತಾನ ಪೀಪಲ್ಸ್‌ ಪಾರ್ಟಿ’ ಮುಖ್ಯಸ್ಥ ಬಿಲಾವಲ್‌ ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ರನ್ನು ಮೋದಿ ಕಾ ಯಾರ್‌ (ಮೋದಿಯ ಮನುಷ್ಯ) ಎಂದು ಕರೆದರು. ಇದು ಹೊಗಳಿಕೆಯಾಗಿರಲಿಲ್ಲ; ಪಾಕಿಸ್ತಾನದ ಪಾಲಿಗೆ ತೆಗಳಿಕೆಯಾಗಿತ್ತು. 2015ರ ಡಿಸೆಂಬರ್‌ನಲ್ಲಿ ಏಕಾಏಕಿ ಲಾಹೋರ್‌ನಲ್ಲಿಳಿದ ಮೋದಿ ನವಾಜ್‌ ಷರೀಫ್ ಮೊಮ್ಮಗಳ ಮದುವೆಗೆ ಹೋಗಿ ಅವರನ್ನು ಅಪ್ಪಿಕೊಂಡು ಬಂದಿದ್ದರು. ಇದನ್ನು ಉಲ್ಲೇಖಿಸಿ ಬಿಲಾವಲ್ ಈ ಮಾತುಗಳನ್ನು ಹೇಳಿದ್ದರು.

ಲಾಹೋರ್: ನವಾಜ್‌ ಷರೀಫ್ ಮೊಮ್ಮಗಳ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಲಾಹೋರ್: ನವಾಜ್‌ ಷರೀಫ್ ಮೊಮ್ಮಗಳ ಮದುವೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ಚಿತ್ರ ಕೃಪೆ: ರೆಡಿಫ್

ಬಿಲಾವಲ್‌ ಅಜ್ಜ ಜುಲ್ಫಿಕರ್‌ ಅಲಿ ಭುಟ್ಟೋ 1960 ಮತ್ತು 70ರ ದಶಕದಲ್ಲೇ ‘ಭಾರತ ಎಂಬ ಗೂಬೆ’ಯನ್ನು ತೋರಿಸಿ ಪಾಕಿಸ್ತಾನದಲ್ಲಿ ಅಧಿಕಾರ ಉಳಿಸಿಕೊಂಡಿದ್ದವರು. ಕಾಶ್ಮೀರ ವಿಚಾರವನ್ನು ಮುಂದಿಟ್ಟುಕೊಂಡೇ ಅವರು ಪಾಕಿಸ್ತಾನದಲ್ಲಿ ಮೆರೆದಾಡಿದ್ದರು. ಆದರೆ ಇದು 60ರ ದಶಕ ಅಲ್ಲವಲ್ಲ; ಬಿಲಾವಲ್‌ ಮಾತುಗಳು 2016ರ ಚುನಾವಣೆಯಲ್ಲಿ ಬಿದ್ದು ಹೋದವು. ಅಜಾದ್‌ ಕಾಶ್ಮೀರದಲ್ಲಿ ಷರೀಫ್ ಪಕ್ಷ ಗೆಲುವು ಸಾಧಿಸಿತು.

ಇದಾದ ಬೆನ್ನಿಗೆ ಬಿಲಾವಲ್‌ ಮೈಕ್‌ ಕೆಳಗಿಟ್ಟರು. ಅದನ್ನು 2018ರ ಚುನಾವಣೆ ಹೊತ್ತಿಗೆ ಕೈಗೆತ್ತಿಕೊಂಡವರು ಇಮ್ರಾನ್‌ ಖಾನ್. ಹಾಗೆ ಪಾಕಿಸ್ತಾನ ಚುನಾವಣೆಯಲ್ಲಿ ಆರಂಭವಾಗಿತ್ತು ಭಾರತ ಮತ್ತು ಮೋದಿ ವಿರೋಧಿ ರಾಜಕೀಯ ಪ್ರಚಾರ.

“ಮೋದಿ ಕಾ ಜೊ ಯಾರ್‌ ಹೇ, ಗದ್ಧಾರ್‌ ಹೇ (ಮೋದಿಯ ಗೆಳೆಯರಿದ್ದಾರಲ್ಲ, ಅವರು ಮೋಸಗಾರರು)“ ಎಂದು ಹೋದಲ್ಲಿ ಬಂದಲ್ಲೆಲ್ಲಾ ಇಮ್ರಾನ್ ಖಾನ್‌ ಅಬ್ಬರಿಸಲು ಆರಂಭಿಸಿದರು. ಏಕವಚನದಲ್ಲೇ ಮೋದಿ ವಿರುದ್ಧ ಗರ್ಜಿಸಿ ಜನರ ಚಪ್ಪಾಳೆ ಗಿಟ್ಟಿಸಿಕೊಂಡರು.

ಈ ಅಬ್ಬರ ನೋಡಲಾಗದೆ ಪಾಕಿಸ್ತಾನದ ಸೇನೆ ಪಿಟಿಐ ಪಕ್ಷದ ಪರವಾಗಿದೆ ಎಂದು ನವಾಜ್‌ ಷರೀಫ್ ಆರೋಪಿಸಿದರು. ಇದಕ್ಕೆ ತಿರುಗೇಟು ನೀಡಿದ ಖಾನ್, ‘ಪಿಎಂಎಲ್‌-ನ್‌’ ಗೆಲುವಿಗಾಗಿ ಅಂತರಾಷ್ಟ್ರೀಯ ಹಿತಾಸಕ್ತಿಗಳು ಭಾರತದ ಜತೆ ಸೇರಿ ಕೆಲಸ ಮಾಡುತ್ತಿವೆ ಎಂದು ಬಿಟ್ಟರು.

ವಿಚಿತ್ರವೆಂದರೆ ಇದೇ ಭಾರತ ವಿರೋಧಿ ಮನಸ್ಸುಗಳನ್ನು ಬಡಿದೆಬ್ಬಿಸಿ ಬೆನೆಜೀರ್‌ ಭುಟ್ಟೋ ವಿರುದ್ಧ ಇದೇ ನವಾಜ್‌ ಷರೀಫ್ ಗೆದ್ದಿದ್ದರು. ಆದರೆ ಅದೀಗ ಷರೀಫ್‌ಗೆ ತಿರುಗು ಬಾಣವಾಗಿತ್ತು. ಮತ್ತದು ಅವರಿಗೆ ಉತ್ತರ ಕೊಡದ ಸ್ಥಿತಿಗೆ ದೂಡಿತ್ತು. ಅದಕ್ಕೆ ಕಾರಣವಾಗಿದ್ದು ಲಾಹೋರ್‌ನಲ್ಲಿ ನಡೆದ ಮೋದಿ ಷರೀಫ್ ‘ಹಗ್‌ಪ್ಲೊಮಸಿ’.

ಸಾಮಾಜಿಕ ಜಾಲತಾಣಗಳ ಹಾವಳಿ

ಇಮ್ರಾನ್‌ ಖಾನ್‌ ಪಾಕಿಸ್ತಾನದ ಜನರನ್ನು ಭಾವನಾತ್ಮಕವಾಗಿ ಕೆರಳಿಸಲು ಸಾಮಾಜಿಕ ಜಾಲತಾಣಗಳನ್ನೂ ಪರಿಣಾಮಕಾರಿಯಾಗಿ ಬಳಸಿಕೊಂಡರು. ವಾಟ್ಸಾಪ್‌, ಫೇಸ್‌ಬುಕ್ ಮತ್ತು ಟ್ಟಿಟ್ಟರ್‌ ಮೂಲಕ ಭಾರತ ವಿರೋಧಿ ಹೇಳಿಕೆಗಳನ್ನು, ವಿಡಿಯೋಗಳನ್ನು ಪ್ರತಿ ಮತದಾರನಿಗೂ ತಲುಪುವಂತೆ ನೋಡಿಕೊಂಡಿತು ಇಮ್ರಾನ್‌ ಖಾನ್‌ ಐಟಿ ಸೆಲ್. ಇದರ ವಿರುದ್ಧ ಷರೀಫ್ ಸೋಷಿಯಲ್‌ ಮೀಡಿಯಾ ಟೀಂ, ಪಿಟಿಐಗೆ ಪಾಕಿಸ್ತಾನ ಸೇನೆಯಿಂದ ಸಿಗುತ್ತಿರುವ ಬೆಂಬಲದ ಬಗ್ಗೆ ಪ್ರಚಾರ ನಡೆಸಿತ್ತು.

ಆದರೆ ಇಮ್ರಾನ್‌ ಖಾನ್‌ ತಂಡ ಸುಮ್ಮನೆ ಕೂರಲಿಲ್ಲ. 1999ರ ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ನವಾಜ್‌ ಷರೀಫ್ ನಡೆದುಕೊಂಡ ರೀತಿ, ಮಿಲಿಟರಿ ಸರ್ವಾಧಿಕಾರಿ ಜಿಯಾ ಉಲ್‌ ಹಕ್ ಜತೆಗಿನ ಅವರ ಸಂಬಂಧ, ಬೆನೆಜೀರ್‌ ಭೂಟ್ಟೊ ಮತ್ತು ಆಕೆಯ ತಾಯಿ ನುಸ್ರತ್‌ ಭುಟ್ಟೋ ಬಗ್ಗೆ ಷರೀಫ್ ನೀಡಿದ ‘ಸೆಕ್ಸಿ’ ಹೇಳಿಕೆಗಳ ಬಗ್ಗೆ ಮಸಾಲೆ ಅರೆದು ಪ್ರಚಾರ ನಡೆಸಿತು. ಷರೀಫ್ ಹಿಂದೆ ಭಾರತದ ಶಕ್ತಿಗಳಿವೆ ಎಂಬ ವಿಡಿಯೋಗಳನ್ನು ವೈರಲ್‌ ಮಾಡಲಾಯಿತು. ಇದು ಪಾಕಿಸ್ತಾನ ಸೇನೆ ಮತ್ತು ಭಾರತೀಯ ಸೇನೆ ನಡುವಿನ ಚುನಾವಣೆ ಎಂದು ಬಿಂಬಿಸುವಲ್ಲಿ ಖಾನ್‌ ಯಶಸ್ವಿಯಾದರು.

ವಿಶೇಷವೆಂದರೆ ಖಾನ್‌ ಮಾತ್ರವಲ್ಲ ಷರೀಫ್‌ ತಮ್ಮ ಶೆಹಬಾಜ್‌ ಷರೀಫ್ ಕೂಡ ಪಾಕಿಸ್ತಾನದ ಹೆಸರನ್ನು ಚುನಾವಣೆ ಪ್ರಚಾರದ ವೇಳೆ ಪ್ರಸ್ತಾಪಿಸಿದರು. ನಾನೇದರೂ ಅಧಿಕಾರಕ್ಕೆ ಬಂದರೆ ಚೀನಾದ ಸಹಾಯದೊಂದಿಗೆ ಪಾಕಿಸ್ತಾನದ ಆರ್ಥಿಕತೆಯನ್ನು ಭಾರತದ ಆರ್ಥಿಕತೆಗಿಂತ ದೊಡ್ಡದಾಗಿ ಬೆಳೆಸುತ್ತೇನೆ ಎಂದರು. ಆದರೆ ಖಾನ್‌ ತಂಡದ ಮಸಾಲೆ, ದೇಶಭಕ್ತಿಯ ಸೋಗಿನ ಕಥೆಗಳ ಮುಂದೆ ಇದನ್ನು ಕೇಳಲು ಅಲ್ಲಿ ಯಾರೂ ಇರಲಿಲ್ಲ.

ಭಾರತ ವಿರೋಧಿ ಮನಸ್ಥಿತಿಗಳನ್ನು ಬಡಿದೆಬ್ಬಿಸಿ ಇಮ್ರಾನ್‌ ಖಾನ್‌ ಗೆದ್ದು ಬಿಟ್ಟರು. ಮೋದಿಯನ್ನು ವಿರೋಧಿಸುತ್ತಲೇ ಪ್ರಚಾರ ನಡೆಸಿ ಇದೀಗ ಪಾಕಿಸ್ತಾನದ ಪ್ರಧಾನಿಯಾಗಲು ಹೊರಟಿದ್ದಾರೆ.

ದೀರ್ಘಕಾಲದ ಪರಿಣಾಮಗಳು:

ಪ್ರಧಾನಿಯಾಗುವುದು ಖಚಿತವಾಗುತ್ತಿದ್ದಂತೆ ಇಮ್ರಾನ್‌ ಖಾನ್‌ ಯೂಟರ್ನ್‌ ಹೊಡೆದು ಭಾರತದ ಜತೆ ಶಾಂತಿ ಮಾತುಕತೆ ಪ್ರಸ್ತಾಪ ಮುಂದಿಟ್ಟಿದ್ದಾರೆ. ಆದರೆ ಅದು ಅಷ್ಟು ಸುಲಭವಲ್ಲ. ಇಲ್ಲಿಯವರೆಗೆ ಭಾರತದ ವಿರೋಧಿ ಮನಸ್ಥಿತಿಯನ್ನು ಜನರ ಮನಸ್ಸಲ್ಲಿ ಭಿತ್ತಿ ಈಗ ಶಾಂತಿಯ ಬೆಳೆ ತೆಗೆಯಲು ಸಾಧ್ಯವಿಲ್ಲ.

ಪಾಕಿಸ್ತಾನದ ಪರಿಸ್ಥಿತಿ ಹೀಗಿದ್ದರೆ ಭಾರತದ ಪರಿಸ್ಥಿತಿಯೂ ಭಿನ್ನವಾಗಿಲ್ಲ. 2014ರ ಲೋಕಸಭೆ ಚುನಾವಣೆಗೂ ಮುನ್ನ ಇದೇ ರೀತಿ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನದ ವಿರುದ್ಧ ಅಬ್ಬರಿಸುತ್ತಿದ್ದರು. ಇವೆಲ್ಲದರ ಪರಿಣಾಮ ಮೋದಿ ಸರಕಾರ ಬಂದ ಮೇಲೆ ಪಾಕಿಸ್ತಾನ ಜತೆಗಿನ ಸಂಬಂಧ ಮತ್ತಷ್ಟು ವಿಷಮವಾಯಿತು. ಹಿಂದೆಂದಿಗಿಂತಲೂ ಹೆಚ್ಚು ಸೈನಿಕರು ಸಾವನ್ನಪ್ಪಿದರು. ಇದೀಗ ಅದೇ ಮನಸ್ಥಿತಿಯ ವ್ಯಕ್ತಿ ಸೋ ಕಾಲ್ಡ್‌ ವೈರಿ ದೇಶದಲ್ಲೂ ಬಂದು ಕುಳಿತಿದ್ದಾರೆ. ಸದ್ಯ ಪರಸ್ಪರ ಶಾಂತಿ ಮಾತುಕತೆಯ ರಾಜತಾಂತ್ರಿಕ ಹೇಳಿಕೆ ಹೊರಬಿದ್ದಿದೆಯಾದರೂ, ಎರಡೂ ಬದಿಯಲ್ಲಿ ಆಳುವವರಿಗೆ ಅದು ಬೇಕಾಗಿಲ್ಲ. ಯಾಕೆಂದರೆ ಶಾಂತಿಗಿಂತ ಅಶಾಂತಿಯ ಉಗ್ರ ಭಾಷಣಗಳೇ ರಾಜಕೀಯ ಲಾಭ ತಂದುಕೊಟ್ಟಾಗಿದೆ.