samachara
www.samachara.com
ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು: ಬಜೆಟ್‌ನಲ್ಲಿ ನಿಜಕ್ಕೂ ಸಿಕ್ಕಿದ್ದೆಷ್ಟು? 
COVER STORY

ಮತ್ತೆ ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ರಾಜ್ಯದ ಕೂಗು: ಬಜೆಟ್‌ನಲ್ಲಿ ನಿಜಕ್ಕೂ ಸಿಕ್ಕಿದ್ದೆಷ್ಟು? 

ಈ ಬಾರಿಯ ಬಜೆಟ್‌ನಲ್ಲಾದ ತಾರತಮ್ಯ ಮತ್ತು ದಶಕಗಳ ಕಾಲದಿಂದ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸುತ್ತಾ ಬರುತ್ತಿರುವುದನ್ನು ವಿರೋಧಿಸಿ, ಹಲವಾರು ಸಂಘಟನೆಗಳು ಉತ್ತರ ಕರ್ನಾಟಕ ಬಂದ್‌ಗೆ ಕರೆನೀಡಿವೆ. ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟಿವೆ.

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಮತ್ತೆ ಗಟ್ಟಿಯಾಗಿದೆ. ಹಲವಾರು ರೈತ ಸಂಘಟನೆ, ವಿದ್ಯಾರ್ಥಿ ಸಂಘಟನೆಗಳು ಒಟ್ಟಾಗಿ ಸೇರಿ ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಭಾಗದ 13 ಜಿಲ್ಲೆಗಳಲ್ಲಿ ಬಂದ್‌ ಆಚರಿಸಲು ನಿರ್ಧರಿಸಿವೆ.

ಬುಧವಾರ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಘಟನೆಗಳು ಬಂದ್ ಆಚರಿಸುವುದ ಕುರಿತು ಸುದ್ದಿ ಮಾಧ್ಯಮಗಳಿಗೆ ತಿಳಿಸಿವೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಮ್ಮ ವಾರ್ಷಿಕ ಬಜೆಟ್‌ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಎಸಗಿರುವ ತಾರತಮ್ಯವನ್ನು ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದ್ದು, ಇದಕ್ಕೆ ಕೆಲವು ಬಿಜೆಪಿ ಮತ್ತು ಕಾಂಗ್ರೆಸ್‌ ನಾಯಕರ ಬೆಂಬಲವೂ ಇದೆ ಎನ್ನಲಾಗಿದೆ.

ಆಗಸ್ಟ್‌ 2ರಂದು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಹೋರಾಟ ಸಮಿತಿ, ಬೆಳಗಾವಿಯ ಸುವರ್ಣ ಸೌಧದ ಬಳಿ ಮೆರವಣಿಗೆ ನಡೆಸಲು ತೀರ್ಮಾನಿಸಿದ್ದು, ಮೆರವಣಿಗೆಯ ನಂತರ ಹಲವು ಉತ್ತರ ಕರ್ನಾಟಕದ ನಾಯಕರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ನಾಯಕ ಸೋಮಶೇಖರ್‌ ಕೋಟಂಬಾರಿ, “7 ದಶಕಗಳಿಂದಲೂ ಕೂಡ ಉತ್ತರ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ. ಎಲ್ಲಾ ಪಕ್ಷಗಳೂ ಕೂಡ ಉತ್ತರ ಕರ್ನಾಟಕ ಭಾಗವನ್ನು ಕಡೆಗಣಿಸಿ, ಈ ಪ್ರದೇಶವನ್ನು ಅಭಿವೃದ್ಧಿಯಿಂದ ಹಿಂದೆ ಇಟ್ಟಿವೆ. ಅಗಾಧವಾದ ನೈಸರ್ಗಿಕ ಸಂಪನ್ಮೂಲಗಳಿದ್ದರೂ ಕೂಡ ನಿರುದ್ಯೋಗ ಕಾಡುತ್ತಿದೆ. ಸರಕಾರಗಳು ನಂಜುಂಡಪ್ಪ ಸಮಿತಿ ನೀಡಿದ ಶಿಫಾರಸ್ಸುಗಳನ್ನುಅಲಕ್ಷಿಸಿದ್ದು, ಈ ಭಾಗದ ಜನ ಬಡತನದಿಂದ ನರಳುವಂತಾಗಿದೆ,” ಎಂದು ತಿಳಿಸಿದ್ದಾರೆ.

“ಉತ್ತರ ಕರ್ನಾಟಕಕ್ಕೆ ಆಗುತ್ತಿದ್ದ ತಾರತಮ್ಯವನ್ನು ತಡೆಗಟ್ಟಲು 2006ರಲ್ಲಿ ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಲಾಯಿತು. ಆದರೆ ಇದರಿಂದ ಯಾವ ಪ್ರಯೋಜನವೂ ಆಗಿಲ್ಲ. ಬಿಳಿ ಆನೆಯಂತಾಗಿರುವ ಸುವರ್ಣ ಸೌಧದಲ್ಲಿ ಸರಕಾರಿ ಕಚೇರಿಗಳೇ ಇಲ್ಲ,” ಎಂದು ಸೋಮಶೇಕರ್‌ ಕೋಟಂಬಾರಿ ದೂರಿದ್ದಾರೆ.

ಬೂದಿ ಮುಚ್ಚಿದ ಕೆಂಡದಂತಿದ್ದ ಉತ್ತರ ಕರ್ನಾಟಕ ಜನರ ಕೋಪವನ್ನು ಕೆರಳುವಂತೆ ಮಾಡಿರುವುದು ಜುಲೈ ತಿಂಗಳ ಪ್ರಾರಂಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ ಬಜೆಟ್‌. ಈ ಬಾರಿಯೂ ಕೂಡ ಉತ್ತರ ಕರ್ನಾಟಕ ಭಾಗ ಅವಗಣನೆಗೆ ಒಳಪಟ್ಟಿದ್ದು, ನಮ್ಮ ಅಭಿವೃದ್ಧಿಗಾಗಿ ನಮಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಹೋರಾಟಗಾರರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Also read: ಉತ್ತರ ಕರ್ನಾಟಕಕ್ಕೆ ಬಜೆಟ್ ತಾರತಮ್ಯ; ಮತ್ತೆ ಧ್ವನಿಸಿದ ಪ್ರತ್ಯೇಕ ರಾಜ್ಯದ ಕೂಗು

ಸಮ್ಮಿಶ್ರ ಸರಕಾರ 2018-19ನೇ ಸಾಲಿನ ವಾರ್ಷಿಕ ಬಜೆಟ್‌ ಮಂಡನೆ ಮಾಡಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ ಉತ್ತರ ಕರ್ನಾಟಕ ಭಾಗದ ಮೇಲೆ ಹೆಚ್ಚಿನ ಗಮನ ಹರಿಸಿಲ್ಲ ಎನ್ನುವುದು ಮೇಲ್ನೋಟಕ್ಕೇ ಕಾಣಿಸುತ್ತದೆ. ರಾಜ್ಯಾದ್ಯಂತ ಅನ್ವಯವಾಗುವ ಯೋಜನೆಗಳನ್ನು ಬಿಟ್ಟರೆ ಬಾಂಬೆ ಕರ್ನಾಟಕ ಮತ್ತು ಹೈದರಾಬಾದ್‌ ಕರ್ನಾಟಕದ 13 ಜಿಲ್ಲೆಗಳಿಗೆ ಪ್ರತ್ಯೆಕವಾಗಿ ಸಿಕ್ಕಿರುವ ಅನುದಾನಗಳ ಮೊತ್ತ ಹಳೇ ಮೈಸೂರು ಭಾಗಕ್ಕೆ ಹೋಲಿಸಿದರೆ ತೀರಾ ಕಡಿಮೆ ಇತ್ತು.

ಉತ್ತರ ಕರ್ನಾಟಕದ ಭಾಗವಾದ ಕೊಪ್ಪಳ, ಗದಗ, ಯಾದಗಿರಿ ಮತ್ತು ಹಾವೇರಿ ಜಿಲ್ಲೆಗಳಲ್ಲಿನ ತಲಾ 5,000 ಹೆಕ್ಟೇರ್‌ ಪ್ರದೇಶದಲ್ಲಿ ಇಸ್ರೇಲ್‌ ಮಾದರಿಯ ನೀರಾವರಿಯನ್ನು ಅಳವಡಿಸಲು ಕುಮಾರಸ್ವಾಮಿ 150 ಕೋಟಿ ಅನುದಾನವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಪಶು ಸಂಗೋಪನೆಗೆ ಸಂಬಂಧಿಸಿದಂತೆ ಧಾರವಾಡ ಮತ್ತು ಕಲಬುರ್ಗಿಗಳಲ್ಲಿ ಘನೀಕೃತ ವೀರ್ಯ ನಳಿಕೆ ವಿತರಣಾ ಕೇಂದ್ರಗಳ ಸ್ಥಾಪನೆಗಾಗಿ 2.25 ಕೋಟಿ ಅನುದಾನ ನೀಡಲಾಗುತ್ತದೆ ಎಂದಿದ್ದರು. ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ ಸ್ಥಾಪನೆಗೆ 3 ಕೋಟಿ ಅನುದಾನ ನೀಡುವುದಾಗಿ ಘೋಷಿಸಲಾಗಿತ್ತು. ಬೆಳಗಾವಿ, ಕಲ್ಬುರ್ಗಿಗಳಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಕೊಪ್ಪಳದಲ್ಲಿ 450 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆಯ ಪ್ರಸ್ತಾಪ ಮಾಡಲಾಗಿದೆ.

ಹೈದರಾಬಾದ್‌ ಕರ್ನಾಟಕದ ಕಲಂ 371(ಜೆ) ವ್ಯಾಪ್ತಿಗೆ ಬರುವ ಕಲಬುರ್ಗಿ ನಗರದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ತೆರೆಯಲಾಗುತ್ತದೆ. ಕಲಬುರ್ಗಿಯನ್ನು ಭಾರತದ ‘ಸೋಲಾರ್‌ ಜಿಲ್ಲೆ’ಯನ್ನಾಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದ್ದು, ಸೋಲಾರ್‌ ಪ್ಯಾನಲ್‌, ಇನ್ವರ್ಟರ್‌, ಕೆಪ್ಯಾಸಿಟರ್‌ ಇತ್ಯಾದಿಗಳನ್ನು ಕಲಬುರ್ಗಿಯಲ್ಲೇ ಉತ್ಪಾದಿಸಲು ನಿರ್ಧರಿಸಲಾಗಿದೆ. ಚೀನಾದ ಆಟಿಕೆಗಳಿಗೆ ಸವಾಲೊಡ್ಡಲು ಕೊಪ್ಪಳದಲ್ಲಿ ಆಟಿಕೆಗಳ ತಯಾರಿಕಾ ಕೇಂದ್ರಗಳನ್ನು ಹುಟ್ಟುಹಾಕಲು ತೀರ್ಮಾನಿಸಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ವಸ್ತ್ರ ಉದ್ಯಮ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ಮುಂದಿನ 4 ವರ್ಷಗಳಲ್ಲಿ ಬೀದರ್‌ ಜಿಲ್ಲೆಯಲ್ಲಿ ಕೃಷಿ ಸಂಬಂಧಿತ ಉಪಕರಣಗಳನ್ನು ತಯಾರಿಸಲು ಮುಂದೆ ಬರುವ ಉದ್ದಿಮೆದಾರರಿಗೆ 2,000 ಕೋಟಿ ರೂಪಾಯಿಗಳ ಬಂಡವಾಳ ಹೂಡಲು ರಾಜ್ಯ ಸರಕಾರ ನಿರ್ಧರಿಸಿದೆ.

ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಆಲಮಟ್ಟಿ ಜಲಾಶಯದಲ್ಲಿ ಹೆಚ್ಚುವರಿ ನೀರು ಸಂಗ್ರಹಣೆಗೆ ಅಗತ್ಯ ಕ್ರಮ ಕೈಗೊಳ್ಳುವುದರ ಜತೆಗೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಹಿರೇಕೋಡಿ, ನಾಗರಾಳ, ನೇಜ ಇತ್ಯಾದಿ ಗ್ರಾಮಗಳಲ್ಲಿ ಏತನೀರಾವರಿಗಾಗಿ 100 ಕೋಟಿ ಅನುದಾನ ಮೀಸಲಿಡುವುದಾಗಿ ಕುಮಾರಸ್ವಾಮಿಯವರ ವಾರ್ಷಿಕ ಆಯವ್ಯಯ ತಿಳಿಸುತ್ತದೆ. ಬಜೆಟ್‌ ಪ್ರತಿಯಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳ ಕುರಿತಾದ ಪ್ರಸ್ತಾಪ ಇವುರುದು ಇಷ್ಟು ಮಾತ್ರ. ಈ ಕಾರಣಕ್ಕಾಗಿಯೇ ಉತ್ತರ ಕನ್ನಡಿಗರು ಸರಕಾರದ ಮೇಲೆ ಮುನಿಸಿಕೊಂಡಿದ್ದಾರೆ.

ಬಜೆಟ್‌ ಕುರಿತು ಪ್ರಸ್ತಾಪಿಸಿರುವ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಸವರಾಜ ಕರಿಗಾರ್‌, “ಪ್ರಮುಖ ನೀರಾವರಿ ಯೋಜನೆಗಳೆಲ್ಲಾ ದಕ್ಷಿಣ ಕರ್ನಾಟಕದಲ್ಲಿ ಅನುಷ್ಠಾನಗೊಳ್ಳುತ್ತಿವೆ. ಉತ್ತರ ಕರ್ನಾಟಕದವರು ಮಹದಾಯಿ ನೀರಿಗಾಗಿ ಹೋರಾಡುತ್ತಿದ್ದಾರೆ. ಕೃಷ್ಣಾ ನದಿಯ ನೀರನ್ನೂ ಕೂಡ ಬಳಕೆಗೆ ಸಿಗುತ್ತಿಲ್ಲ. ಎಲ್ಲಾ ಅಭಿವೃದ್ಧಿ ಕಾರ್ಯಗಳು ಮೈಸೂರು, ಬೆಂಗಳೂರು, ಮಂಡ್ಯ, ಹಾಸನ, ರಾಮನಗರ ಇತ್ಯಾದಿ ಜೆಲ್ಲೆಗಳಿಗಷ್ಟೇ ದೊರೆಯುತ್ತಿದೆ,” ಎಂದು ಆರೋಪಿಸಿದ್ದಾರೆ.

ಹಿಂದೆ ಕರ್ನಾಟಕ ಏಕೀರಣಗೊಳ್ಳಲು ಶ್ರಮಿಸಿದ ಈ ಭಾಗದ ಜನರೇ ಈಗ ನಮಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಹೋರಾಟಕ್ಕಿಳಿದಿದ್ದಾರೆ. ಮುಂದಿನ ದಿನಗಳಲ್ಲಿ ತೆಲಂಗಾಣದ ಹೋರಾಟವನ್ನು ಮೀರಿಸುವ ಉಗ್ರ ಪ್ರತಿಭಟನೆಗೆ ಮುಂದಾಗುವುದಾಗಿ ಎಚ್ಚರಿಕೆ ನೀಡುತ್ತಿದ್ದಾರೆ. ಈಗಲಾದರೂ ಆಡಳಿತ ಸರಕಾರಗಳು ಇತ್ತ ಗಮನ ಹರಿಸಬೇಕಿದೆ. ಇಲ್ಲವಾದರೆ ಕರ್ನಾಟಕದ ವಿಭಜನ ಕೂಗು ಇನ್ನಷ್ಟು ಜೋರಾಗುವ ಸಾಧ್ಯತೆಗಳಿವೆ.