samachara
www.samachara.com
ಏನಿದು, ಸಿಎಂ ಮುಂದೆ ಅಜೀಂ ಪ್ರೇಮ್‌ಜಿ ಪ್ರಸ್ತಾಪಿಸಿದ ‘ಶೂನ್ಯ ಬಂಡವಾಳ ಕೃಷಿ’?  
COVER STORY

ಏನಿದು, ಸಿಎಂ ಮುಂದೆ ಅಜೀಂ ಪ್ರೇಮ್‌ಜಿ ಪ್ರಸ್ತಾಪಿಸಿದ ‘ಶೂನ್ಯ ಬಂಡವಾಳ ಕೃಷಿ’?  

ಇಷ್ಟು ದಿನ ಇಸ್ರೇಲ್‌ ಕೃಷಿ ಮಾದರಿಯನ್ನಷ್ಟೇ ಪ್ರಸ್ತಾಪಿಸುತ್ತಿದ್ದ ಸಿಎಂ ಕುಮಾರಸ್ವಾಮಿ ಮುಂದೆ ಉದ್ಯಮಿ ಅಜೀಂ ಪ್ರೇಮ್‌ಜಿ ‘ನೈಸರ್ಗಿಕ ಕೃಷಿ’ ಪದ್ಧತಿಯನ್ನು ಮುಂದಿಟ್ಟಿದ್ದಾರೆ. ಏನದರ ವಿಶೇಷತೆ? ಮಾಹಿತಿ ಇಲ್ಲಿದೆ. 

ದೀಪಕ್ ಕುಮಾರ್ ಹೊನ್ನಾಲೆ

ದೀಪಕ್ ಕುಮಾರ್ ಹೊನ್ನಾಲೆ

Summary

ಜುಲೈ 24ರಂದು ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ಹಾಗೂ ಸಿಎಂ ಕುಮಾರಸ್ವಾಮಿ ವಿಧಾನಸೌಧದಲ್ಲಿ ಭೇಟಿಯಾಗಿದ್ದಾರೆ. ಇಬ್ಬರ ನಡುವೆ ಬೆಂಗಳೂರು ನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವೂ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಅದೇ ವೇಳೆ ಈಗಾಗಲೇ ಆಂಧ್ರ ಪ್ರದೇಶದಲ್ಲಿ ಆಚರಣೆ ತಂದಿರುವ ‘ಶೂನ್ಯ ಬಂಡವಾಳ ಕೃಷಿ’ ಪದ್ಧತಿಯ ಪ್ರಸ್ತಾಪವಾಗಿದೆ. ಇಷ್ಟಕ್ಕೂ ಐಟಿ ಉದ್ಯಮಿಯೊಬ್ಬರು ಮುಂದಿಟ್ಟಿರುವ ‘ಶೂನ್ಯ ಬಂಡವಾಳ ಕೃಷಿ’ಯಲ್ಲಿ ಅಂತಹದ್ದೇನಿದೆ?

ಏನಿದು ಶೂನ್ಯ ಬಂಡವಾಳ ಕೃಷಿ?:

ಶೂನ್ಯ ಬಂಡವಾಳ ಕೃಷಿ ಎಂದರೆ ಮತ್ತೇನಿಲ್ಲ, ದುಡ್ಡು ಖರ್ಚು ಮಾಡದೇ ಬೆಳೆ ಬೆಳೆಯುವುದಷ್ಟೇ. ಬಿತ್ತನೆ ಬೀಜ, ಕೀಟ ನಾಶಕ ಎಂದು, ಸಬ್ಸಿಡಿಯಲ್ಲಿ ದೊರೆಯುವ ರಸಗೊಬ್ಬರದ ಮೂಟೆಗಳಿಗಾಗಿ ಸರತಿಯಲ್ಲಿ ಕಾದು ನಿಂತು ಹಣ ಖರ್ಚು ಮಾಡಿ ಬೆಳೆ ಬೆಳಯುವುದರ ಬದಲು ಕೊಟ್ಟಿಗೆಯಲ್ಲಿನ ಆಕಳದ ಸಗಣಿ, ಗಂಜಲ, ಬದುವಿನ ಮಣ್ಣು, ಬೆಲ್ಲ, ದ್ವಿದಳ ಧಾನ್ಯಗಳನ್ನು ಬಳಸಿ ಬೆಳೆ ಬೆಳೆಯುವುದೇ ನೈಸರ್ಗಿಕ ಕೃಷಿ.

ಇಲ್ಲಿ ರಸಗೊಬ್ಬರಗಳು ಬೇಕಿಲ್ಲ, ಎರೆಹುಳುಗಳನ್ನು ಸಾಯಿಸುವ ಕೀಟನಾಶಕಗಳ ಅಗತ್ಯವಿಲ್ಲ. ಪಂಚಗವ್ಯ, ತಿಪ್ಪೆ ಗೊಬ್ಬರ, ಇತ್ಯಾದಿಗಳ ಅನಿವಾರ್ಯವೂ ಇಲ್ಲ. ಕೊಟ್ಟಿಗೆಯಲ್ಲಿ ಒಂದು ದೇಸೀ ಆಕಳು ಇದ್ದರೆ ಸಾಕು, 30 ಎಕರೆಯಲ್ಲಿ ನೈಸರ್ಗಿಕ ಕೃಷಿ ಮಾಡಬಹುದು ಎನ್ನುತ್ತಾರೆ ಈಗಾಗಲೇ ನೈಸರ್ಗಿಕ ಕೃಷಿಯಲ್ಲಿ ಯಶಸ್ಸು ಕಂಡಿರುವವರು. ಕೀಟದ ಸಮಸ್ಯೆಗಳನ್ನು ತಡೆಯಲು ಮನೆಯಲ್ಲಿಯೇ ಕೀಟನಾಶಕಗಳನ್ನು ತಯಾರಿಸಿಕೊಳ್ಳಬಹುದು. ಇದಕ್ಕಾಗಿ ಅಗತ್ಯವಿರುವ ಔಷಧೀಯ ಸಸ್ಯಗಳನ್ನು ತೋಟದಲ್ಲಿಯೇ ಬೆಳೆಯಬಹುದು. ಉಳುಮೆಯ ಅಗತ್ಯವೂ ಕೂಡ ಕಡಿಮೆ. ಕೇವಲ ಅಲ್ಪಾವಧಿಯ ಬೆಳೆಗಳಿಗಷ್ಟೇ ಉಳುಮೆ ಮಾಡುವ ಅಗತ್ಯವಿದೆ. ಹೀಗಾಗಿಯೇ ಈ ಪದ್ಧತಿಯನ್ನು ಶೂನ್ಯ ಬಂಡವಾಳ ಕೃಷಿ ಎಂದು ಕರೆಯಲಾಗಿದೆ.

ಆದರೆ ನೈಸರ್ಗಿಕ ಕೃಷಿಗೆ ದೇಸಿ ಆಕಳು ಅತ್ಯಗತ್ಯ. ಇದಿರದಿದ್ದರೆ ನೈಸರ್ಗಿಕ ಕೃಷಿಯೇ ಸಾಧ್ಯವಿಲ್ಲ. ದೇಸಿ ಆಕಳಿನ ಸಗಣಿಯಲ್ಲಿ ಹೇರಳವಾದ ಜೀವಾಣುಗಳಿವೆ ಎನ್ನಲಾಗಿದೆ. ಅದರ ಗಂಜಲದಲ್ಲಿ ಸಾಗರದಷ್ಟು ಪೋಷಕಾಂಶಗಳಿವೆ. ಒಂದು ಗ್ರಾಂ ಸಗಣಿಯಿಂದ ಕೋಟ್ಯಾಂತರ ಜೀವಾಣುಗಳನ್ನು ಪಡೆಯಬಹುದು ಎನ್ನಲಾಗುತ್ತದೆ. ಕೇವಲ 10 ಕೇಜಿ ಸಗಣಿಯಲ್ಲಿ ಒಂದು ಏಕರೆ ಪ್ರದೇಶಕ್ಕಾಗುವಷ್ಟು ಪೋಷಕಾಂಶ ದೊರೆಯುತ್ತದೆ. ಒಂದು ದೇಸಿ ಹಸು ದಿನವೊಂದಕ್ಕೆ ಸುಮಾರು 10 ಕೇಜಿ ಸಾಗಣಿ ಹಾಕುತ್ತದೆ, 30 ಎಕರೆಯಲ್ಲಿ ಕೃಷಿ ಮಾಡಲು ಇಷ್ಟು ಸಗಣಿ ಸಾಕು.

ನೈಸರ್ಗಿಕ ಕೃಷಿಯ 4 ಚಕ್ರಗಳು:

ಜೀವಾಮೃತ ತಯಾರಿಕೆಯಲ್ಲಿ ತೊಡಗಿರುವ ಕೃಷಿಕರು. (ಸಾಂದರ್ಭಿಕ ಚಿತ್ರ)
ಜೀವಾಮೃತ ತಯಾರಿಕೆಯಲ್ಲಿ ತೊಡಗಿರುವ ಕೃಷಿಕರು. (ಸಾಂದರ್ಭಿಕ ಚಿತ್ರ)
/ಗೂಗಲ್. 

ನೈಸರ್ಗಿಕ ಕೃಷಿಕರು ಈ ಕೃಷಿಗೆ ಅಗತ್ಯ ಹಂತಗಳನ್ನು ಚಕ್ರಗಳು ಎಂದು ಕರೆದಿದ್ದಾರೆ. ಮೊದಲನೆಯ ಚಕ್ರ ‘ಬಿಜಾಮೃತ’. ಬಿತ್ತನೆ ಬೀಜಗಳಲ್ಲಿ ಇರಬಹುದಾದ ಶಿಲೀಂಧ್ರ, ಬ್ಯಾಕ್ಟೀರಿಯಾ ಅಥವಾ ಅವುಗಳ ತತ್ತಿಗಳು ಪೈರಿನ ಉತ್ತಮ ಬೆಳವಣಿಗೆಗೆ ಅಡ್ಡಿಯಾಗುತ್ತವೆ. ಆದ್ದರಿಂದ ಅವುಗಳನ್ನು ಪ್ರಾರಂಭದ ಹಂತದಲ್ಲಿಯೇ ಇಲ್ಲವಾಗಿಸಲು ‘ಬೀಜಾಮೃತ’ವನ್ನು ಬಳಸಲಾಗುತ್ತದೆ. 100 ಕೆಜಿ ಬಿತ್ತನೆ ಬೀಜಕ್ಕೆ 5 ಕೆಜಿ ದೇಸಿ ಆಕಳದ ಸಗಣಿ, 5 ಲೀಟರ್‌ ಗಂಜಲ, 50 ಗ್ರಾಂ ಸುಣ್ಣ ಮತ್ತು 20 ಲೀಟರ್‌ ನೀರು ಬೆರಸಿ ಸಿದ್ಧಪಡಿಸುವ ದ್ರಾವಣವೇ ‘ಜೀವಾಮೃತ’. ಬಿತ್ತನೆಯ ಹಿಂದಿನ ದಿನ ರಾತ್ರಿಯೇ ಈ ದ್ರಾವಣವನ್ನು ಸಿದ್ಧಪಡಿಸಿಕೊಳ್ಳಲಾಗುತ್ತದೆ. ಬಿತ್ತನೆಗೆ ಮುಂಚೆ ಬೀಜಗಳನ್ನು ಈ ದ್ರಾವಣದಲ್ಲಿ ಅದ್ದಲಾಗುತ್ತದೆ. ನಾಟಿ ಮಾಡುವ ಸಸಿಗಳಾದರೆ ಅದರ ಬೇರನ್ನು ಬೀಜಾಮೃತದಲ್ಲಿ ಅದ್ದಲಾಗುತ್ತದೆ. ಈ ಬೀಜಾಮೃತದಲ್ಲಿ ಟೈಕೋಡ್ರಾಮಾ ಎಂಬ ಜೀವಾಣುವಿದ್ದು, ಬೀಜಗಳ ರಕ್ಷಣೆ ಮಾಡುತ್ತದೆ.

ಎರಡನೆಯ ಚಕ್ರ ಜೀವಾಮೃತ. ಇದನ್ನು ನೈಸರ್ಗಿಕ ಕೃಷಿಯ ಜೀವದ್ರವ್ಯ ಎನ್ನಲಾಗುತ್ತದೆ. 200 ಲೀಟರ್‌ ನೀರಿಗೆ 10 ಕೆಜಿ ದೇಸಿ ಆಕಳದ ಸಗಣಿ ಮತ್ತು 10 ಲೀಟರ್‌ ಗಂಜಲ, 2 ಕೆಜಿ ಕಪ್ಪು ಬೆಲ್ಲ, 2 ಕೆಜಿ ದ್ವಿದಳ ಧಾನ್ಯಗಳ ಹಿಟ್ಟು ಮತ್ತು 2 ಹಿಡಿ ಹೊಲದ ಬದುವಿನ ಮಣ್ಣನ್ನು ಬೆರೆಸಲಾಗುತ್ತದೆ. ರಾಸಾಯನಿಕ ಗೊಬ್ಬರಗಳ ಬದಲಾಗಿ ಈ ಮಿಶ್ರಣವನ್ನು ಬಳಕೆಯಾಗುತ್ತದೆ. ಈ ಮಿಶ್ರಣ ನೆಲದಾಳದಲ್ಲಿ ಸಮಾಧಿ ಸ್ಥಿತಿಯಲ್ಲಿರುವ ದೇಸಿ ಎರೆಹುಳುಗಳನ್ನು ಬಡಿದೆಬ್ಬಿಸುತ್ತದೆ. ತಿಂಗಳಿಗೆ 2 ಬಾರಿಯಂತೆ ಜೀವಾಮೃತವನ್ನು ಸಿಂಪಡಿಸಲಾಗುತ್ತದೆ.

ಮೂರನೆಯ ಚಕ್ರವನ್ನು ‘ಮುಚ್ಚಿಗೆ’. ಹಸಿಗೊಬ್ಬರ ಎಂಬ ಪದವೂ ಬಳಕೆಯಲ್ಲಿದೆ. ಜೀವಾಮೃತ ಪೂರೈಕೆಯಾದ ನಂತರ ಹಿಕ್ಕೆಯ ರೂಪದ ಅನ್ನದ್ರವ್ಯಗಳನ್ನು(Alcoholism) ಎರೆಹುಳುಗಳು ಭೂಮಿಯ ಮೇಲ್ಪದರಕ್ಕೆ ತಂದು ಹಾಕುತ್ತವೆ. ಈ ಅನ್ನದ್ರವ್ಯಗಳಲ್ಲಿ ಕೋಟ್ಯಾಂತರ ಸೂಕ್ಷ ಜೀವಿಗಳು ಕಾರ್ಯ ನಿರ್ವಹಿಸುತ್ತವೆ. ಬೆಳೆಯ ಬೆಳವಣಿಗೆ ಅಗತ್ಯವಾದ ಕಾರಣ ಸೂರ್ಯನ ಬಿಸಿಲಿನಿಂದ ಇವುಗಳ ರಕ್ಷಣೆ ಮಾಡಬೇಕಿರುವುದೂ ಅತ್ಯಗತ್ಯ. ಮಣ್ಣಿನಿಂದ ಅಥವಾ ಕಸಕಡ್ಡಿಗಳನ್ನು ಹಾಕಿ ಇವುಗಳ ರಕ್ಷಣೆ ಮಾಡಲಾಗುತ್ತದೆ.

ನಾಲ್ಕನೇ ಚಕ್ರ ಗಾಳಿಯಾಡುವಿಕೆ. ಮಣ್ಣಿನಲ್ಲಿ ಗಾಳಿಯಾಡುವಂತೆ ರೈತರು ನಿಗಾ ವಹಿಸಬೇಕಿದೆ. ಬೆಳೆಯ ಬೆಳವಣಿಗೆ ಇದು ಅತ್ಯಗತ್ಯ. ಈ ನಾಲ್ಕು ಚಕ್ರಗಳನ್ನು ರೈತರು ಸರಿಯಾಗಿ ನಿಭಾಯಿಸಿದರೆ, ಬಹುಪಾಲು ನೈಸರ್ಗಿಕ ಕೃಷಿ ಮುಕ್ತಾಯವಾದಂತೆ.

ಇನ್ನಿತರೆ ಎಲ್ಲಾ ಕೃಷಿ ಪದ್ಧತಿಯ ಮಾದರಿಗಳಿಗೆ ಹೋಲಿಸಿಕೊಂಡರೆ ನೈಸರ್ಗಿಕ ಕೃಷಿ ಪದ್ಧತಿ ಸುಲಭವೆನಿಸುತ್ತದೆ. ಖರ್ಚೂ ಇಲ್ಲದೇ ಹೆಚ್ಚಿನ ಇಳುವರಿಯನ್ನು ಪಡೆಯಬಹುದುದಾದ ಈ ಪದ್ಧತಿಯತ್ತ ರಾಜ್ಯದ ಮುಖ್ಯಮಂತ್ರಿಗಳು ಗಮನ ಹರಿಸಿರುವುದು ಸಂತೋಷದಾಯಕವೇ. ಇಸ್ರೇಲ್‌ ಮಾದರಿಯ ಕೃಷಿಗೆ ನೀಡಿರುವಷ್ಟು ಗಮನವನ್ನು ಸ್ಥಳೀಯವಾದ ನೈಸರ್ಗಿಕ ಕೃಷಿಯತ್ತಲೂ ನೀಡಿದರೆ ಮುಂದಿನ ದಿನಗಳಲ್ಲಿ ರೈತರು ಸಾಲಮನ್ನಾ ಎಂದು ಬೀದಿಗೆ ಬರುವುದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದಂತಾಗಬಹುದು.

ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಉದ್ಯಮಿ ಅಜೀಂ ಪ್ರೇಮ್‌ಜಿ. 
ವಿಧಾನಸೌಧದಲ್ಲಿ ಸಿಎಂ ಕುಮಾರಸ್ವಾಮಿ ಹಾಗೂ ಉದ್ಯಮಿ ಅಜೀಂ ಪ್ರೇಮ್‌ಜಿ. 
/ಜಿ. ಮೋಹನ್

ಯಶಸ್ವಿ ಮಾದರಿಯೊಂದು ಇಲ್ಲಿದೆ:

ಸರಕಾರಿ ಸಂಸ್ಥೆಯೊಂದು ಶೂನ್ಯ ಬಂಡವಾಳ ಕೃಷಿಗೆ ದೊಡ್ಡ ಮಟ್ಟದಲ್ಲಿ ವೇದಿಕೆ ಸಜ್ಜುಪಡಿಸುತ್ತಿರುವುದು ಆಂಧ್ರ ಪ್ರದೇಶದಲ್ಲಿ ಮಾತ್ರ. ಆಂಧ್ರ ಪ್ರದೇಶ ಸರಕಾರ ಬಡತನವನ್ನು ಹೋಗಲಾಡಿಸುವ ಸಲುವಾಗಿ 2000ದಲ್ಲಿ ಸೊಸೈಟಿ ಫಾರ್‌ ಎಲಿಮಿನೇಷನ್‌ ಆಫ್‌ ರೂರಲ್‌ ಪಾವರ್ಟಿ’ (ಎಸ್‌ಇಆರ್‌ಪಿ) ಎಂಬ ಸ್ವಾಯತ್ತ ಸಂಸ್ಥೆಯನ್ನು ಸ್ಥಾಪಿಸಿತ್ತು. ಗ್ರಾಮೀಣ ಭಾಗದ ಬಡತನವನ್ನು ನಿವಾರಿಸಲು ನಿಂತ ಈ ಸಂಸ್ಥೆ, ಗ್ರಾಮೀಣ ಅಭಿವೃದ್ಧಿ ಎಂದರೆ ಕೃಷಿಯ ಅಭಿವೃದ್ಧಿ ಎಂಬ ಅಂಶವನ್ನು ಮನಗಂಡಿತು. ಬಳಕೆಯಲ್ಲಿದ್ದ ಆಧುನಿಕ ಕೃಷಿ ಪದ್ಧತಿಯಲ್ಲೇ ಮುಂದುವರಿದರೆ ರೈತರಿಗೆ ಏನೂ ದೊರೆಯುವುದಲ್ಲ ಎನ್ನುವುದನ್ನು ಅರಿತ ಸಂಸ್ಥೆ ಮೊದಲ ಬಾರಿಗೆ 2016ರಲ್ಲಿ ‘ನೈಸರ್ಗಿಕ ಕೃಷಿ’ಗೆ ಮುಂದಾಗಿತ್ತು.

ಅಜೀಂ ಪ್ರೇಮ್‌ಜಿ ಫಿಲಾಂಥ್ರೋಪಿಕ್ ಇನಿಷಿಯೇಟಿವ್ಸ್ ಸಂಸ್ಥೆ ಮತ್ತು ಕೇಂದ್ರ ಸರಕಾರ ಯೋಜನೆಗಳ ಅಡಿಯಲ್ಲಿ ಹಣ ಪಡೆದು 704 ಗ್ರಾಮಗಳ 48,565 ಕೃಷಿಕರನ್ನು ಒಳಗೊಳ್ಳಸಿಕೊಂಡ ಎಸ್‌ಇಆರ್‌ಪಿ, ಪ್ರಾಯೋಗಿಕ ನೈಸರ್ಗಿಕ ಕೃಷಿಯನ್ನು ಆರಂಭಿಸಿತ್ತು. 10,000 ರೈತರು ಸಂಪೂರ್ಣವಾಗಿ ನೈಸರ್ಗಿಕ ಕೃಷಿಗೆ ಮುಂದಾದರೆ ಉಳಿದವರು ಸ್ವಲ್ಪ ಪ್ರಮಾಣದ ಭೂಮಿಯಲ್ಲಿ ನೈಸರ್ಗಿಕ ಕೃಷಿಯ ಪ್ರಯೋಗ ನಡೆಸಿದ್ದರು.

ನೈಸರ್ಗಿಕ ಕೃಷಿಯಲ್ಲಿ ಬೆಳೆದ ಬೆಳೆಗಳು ಹೆಚ್ಚಿನ ಇಳುವರಿ ನೀಡಿದ್ದವಲ್ಲದೇ, ಪ್ರಾಕೃತಿಕ ವಿಕೋಪಗಳನ್ನೆಲ್ಲಾ ಎದುರಿಸಿ ನಿಂತಿದ್ದವು. ಈ ಸಮಯದಲ್ಲಿಯೇ ಬತ್ತದ ಗದ್ದೆಗಳಲ್ಲಿ 285 ರೀತಿಯ ನೈಸರ್ಗಿಕ ಕೃಷಿ ಸಂಬಂಧಿತ ಸಂಶೋಧನೆಗಳೂ ನಡೆದವು. ಸಂಶೋಧನೆಯ ವರದಿ ಹೇಳುವಂತೆ ನೈಸರ್ಗಿಕವಲ್ಲದ ಕೃಷಿ ಪದ್ಧತಿಯಲ್ಲಿ 1 ಹೆಕ್ಟೇರ್‌ ಪ್ರದೇಶದಲ್ಲಿ 5,816 ಕೆಜಿ ಬತ್ತ ಬೆಳೆದಿದ್ದರೆ, ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಹೆಕ್ಟೇರ್‌ಗೆ 6,417 ಕೆಜಿ ಇಳುವರಿ ದೊರೆತಿತ್ತು.

ನಂತರದಲ್ಲಿ ಹಂತ ಹಂತವಾಗಿ ನೈಸರ್ಗಿಕ ಕೃಷಿಯತ್ತ ತಿರುಗುತ್ತರುವ ಆಂಧ್ರ ಪ್ರದೇಶ, 2024ರ ವೇಳೆಗೆ ದೇಶದ ಮೊದಲ ‘ನೈಸರ್ಗಿಕ ಕೃಷಿ ರಾಜ್ಯ’ವಾಗುವತ್ತ ಹೆಜ್ಜೆ ಇಟ್ಟಿದೆ. ರಾಜ್ಯದಲ್ಲಿ 60 ಲಕ್ಷ ರೈತರು ಒಟ್ಟು 80 ಲಕ್ಷ ಎಕರೆಗಳಷ್ಟು ಭೂಮಿಯಲ್ಲಿ ಕೃಷಿ ನಡೆಸುತ್ತಿದ್ದು, ಈ ಎಲ್ಲಾ ಭೂಮಿಯನ್ನು ನೈಸರ್ಗಿಕ ಕೃಷಿಗೆ ಅಳವಡಿಸುವ ಯೋಜನೆ ಆಂಧ್ರ ಪ್ರದೇಶ ಸರಕಾರದ ಮುಂದಿದೆ.

ಹಾಗೆ ನೋಡುವುದಾದರೆ ಕರ್ನಾಟಕದ ಬಹುತೇಕ ಹಳ್ಳಿಗಳಲ್ಲೂ ಕೂಡ ನೈಸರ್ಗಿಕ ಕೃಷಿ ನಡೆಸುತ್ತಿರುವ ರೈತರಿದ್ದಾರೆ. ಅವರಿಗೆ ಸರಕಾರ ಪ್ರೋತ್ಸಾಹ ನೀಡಿದರೆ ಗಮನಾರ್ಹ ಪ್ರಗತಿಯನ್ನು ನಿರೀಕ್ಷಿಸಬಹುದಾಗಿದೆ.