samachara
www.samachara.com
‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?
COVER STORY

‘ಇನ್ ಡೀಟೆಲ್’: 21ನೇ ಶತಮಾನದ ಮೆಘಾ ಡೀಲ್; ಏನಿದು ರಫೇಲ್‌?

ಇತ್ತೀಚಿನ ದಿನಗಳಲ್ಲಿ ದೇಶದ ಹಗರಣಗಳ ಸಾಲಿನಲ್ಲಿ ಬಹುಚರ್ಚೆಗೆ ಒಳಗಾಗಿರುವುದು ರಫೇಲ್ ಯುದ್ಧವಿಮಾನ ಖರೀದಿ ಡೀಲ್. ಹೆಚ್ಚೂಕಡಿಮೆ ಬೋಫೋರ್ಸ್‌ ಹಗರಣವನ್ನು ನೆನಪಿಸುತ್ತಿರುವ ಪ್ರಕರಣದ ಸಂಪೂರ್ಣ ಮಾಹಿತಿ ಇಲ್ಲಿದೆ. 

“ಭಾರತದಲ್ಲಿ 2014ರಿಂದ ಇಲ್ಲಿಯವರೆಗೆ ನಾಲ್ವರು ರಕ್ಷಾ ಮಂತ್ರಿಗಳಾಗಿದ್ದಾರೆ. ಆದರೆ, ರಫೇಲ್‌ ಒಪ್ಪಂದದ ಒಳಗುಟ್ಟು ತಿಳಿದಿರುವುದು ಮೋದಿ ಒಬ್ಬರಿಗೆ ಮಾತ್ರ. ಆದರೆ, ಅವರು ಮಾತನಾಡುವುದಿಲ್ಲ”

- ಇದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ರಫೇಲ್‌ ಒಪ್ಪಂದದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಡಿರುವ ವ್ಯಂಗ್ಯ ಭರಿತ ಆರೋಪದ ಟ್ವೀಟ್‌.

ಕಳೆದ ವರ್ಷದಿಂದ ರಫೇಲ್‌ ಒಪ್ಪಂದದ ಬಗ್ಗೆ ಮಾತನಾಡುತ್ತಿರುವ ರಾಹುಲ್ ಗಾಂಧಿ ಈ ವಿಚಾರವಾಗಿ ಮತ್ತೆ ಮತ್ತೆ ಮೋದಿ ಅವರನ್ನು ಕುಟುಕುತ್ತಿದ್ದಾರೆ. ಆದರೆ, ಮೋದಿ ರಫೇಲ್‌ ಒಪ್ಪಂದದ ಬಗ್ಗೆ ಮಾತನಾಡುವ ಗೋಜಿಗೇ ಹೋಗುತ್ತಿಲ್ಲ.

ರಫೇಲ್‌ ಯುದ್ಧ ವಿಮಾನಗಳ ಖರೀದಿಗಾಗಿ ಭಾರತ ಸರಕಾರ ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್ ಕಂಪೆನಿ ಜತೆಗೆ ಮೊದಲ ಒಪ್ಪಂದ ಮಾಡಿಕೊಂಡಿದ್ದು 2012ರಲ್ಲಿ. ಭಾರತದಲ್ಲಿ ಈ ವಿಮಾನಗಳ ತಯಾರಿಕಾ ಘಟಕಕ್ಕೆ ಗುದ್ದಲಿ ಪೂಜೆ ಮಾಡಿದ್ದು 9 ತಿಂಗಳ ಹಿಂದಷ್ಟೇ.

‘ಡಸಾಲ್ಟ್‌ ರಿಲಯನ್ಸ್‌ ಏರೋಸ್ಪೇಸ್‌ ಲಿಮಿಟೆಡ್‌’ ಎಂಬ ಹೊಸ ಹೆಸರಿನ ಕಂಪೆನಿಯ ತಯಾರಿಕಾ ಘಟಕಕ್ಕೆ ಮಹಾರಾಷ್ಟ್ರದ ನಾಗಪುರದ ಮಿಹಾನ್‌ ವಿಶೇಷ ಆರ್ಥಿಕ ವಲಯದ (ಎಸ್‌ಇಜೆಡ್‌) ಧೀರೂಬಾಯ್‌ ಅಂಬಾನಿ ಏರೋಸ್ಪೇಸ್‌ ಪಾರ್ಕ್‌ನ ಜಾಗದಲ್ಲಿ 2017ರ ಅಕ್ಟೋಬರ್‌ 27ರಂದು ಡಸಾಲ್ಟ್‌ ಏವಿಯೇಷನ್‌ ಕಂಪೆನಿ ಅಧ್ಯಕ್ಷ ಎರಿಕ್‌ ಟ್ರಪೀರ್‌ ಮತ್ತು 2,67,000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವ ರಿಲಯನ್ಸ್‌ ಸಮೂಹದ ಅಧ್ಯಕ್ಷ ಅನಿಲ್‌ ಅಂಬಾನಿ ಶಿಲಾನ್ಯಾಸ ನೆರವೇರಿಸಿದ್ದಾರೆ.

ರಫೇಲ್‌ ಒಪ್ಪಂದದ ಹಿಂದೆ:

ಭಾರತೀಯ ಸೇನೆಗೆ ಎರಡು ಎಂಜಿನ್‌ಗಳ 126 ಯುದ್ಧ ವಿಮಾನಗಳ ಖರೀದಿಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2007ರ ಆಗಸ್ಟ್‌ ತಿಂಗಳಲ್ಲಿ ಜಾಗತಿಕ ಟೆಂಡರ್‌ ಕರೆದಿತ್ತು. ಲಖೀದ್‌ ಮಾರ್ಟಿನ್‌ (ಎಫ್‌-16), ಡಸಾಲ್ಟ್‌ (ರಫೇಲ್‌), ಬೋಯಿಂಗ್‌ (ಎಫ್‌/ಎ-18), ರಷ್ಯನ್‌ ಏರ್‌ಕ್ರಾಫ್ಟ್‌ ಕಾರ್ಪೊರೇಷನ್‌ (ಮಿಗ್‌-35), ಸ್ವೀಡನ್‌ನ ಸಾಬ್‌ (ಗ್ರಿಫನ್‌), ಯೂರೊ ಫೈಟರ್‌ (ತೈಫೂನ್‌) ಸೇರಿದಂತೆ ಜಾಗತಿಕ ಮಟ್ಟದ ಹಲವು ವಿಮಾನ ತಯಾರಿಕಾ ಕಂಪೆನಿಗಳು ಈ ಟೆಂಡರ್‌ ಬಿಡ್‌ ಮಾಡಿದ್ದವು. ಕೊನೆಗೆ ಡಸಾಲ್ಟ್‌ ಕಂಪೆನಿ ಈ ಟೆಂಡರ್‌ ತನ್ನದಾಗಿಸಿಕೊಂಡಿತ್ತು.

ಹಲವು ಸುತ್ತಿನ ಮಾತುಕತೆಗಳ ಬಳಿಕ 2012ರಲ್ಲಿ ಭಾರತ ಸರಕಾರ ಮತ್ತು ಡಸಾಲ್ಟ್‌ ಕಂಪೆನಿ ರಫೇಲ್‌ ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿದ್ದವು. 2012ರ ಬೆಲೆಯ ಪ್ರಕಾರ 126 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ 54,000 ಕೋಟಿ ರೂಪಾಯಿ ಅಂತಿಮವಾಗಿ ನಿಗದಿ ಮಾಡಲಾಗಿತ್ತು. 126 ವಿಮಾನಗಳ ಪೈಕಿ 18 ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಿರುವ ಸ್ಥಿತಿಯಲ್ಲಿ ಭಾರತಕ್ಕೆ ಕೊಡಲು ಡಸಾಲ್ಟ್‌ ಒಪ್ಪಿತ್ತು.

ಉಳಿದ 108 ವಿಮಾನಗಳನ್ನು ಡಸಾಲ್ಟ್‌ ಒದಗಿಸುವ ತಂತ್ರಜ್ಞಾನದೊಂದಿಗೆ ಭಾರತದ ಎಚ್‌ಎಎಲ್‌ನಲ್ಲಿ ತಯಾರಿಸಬೇಕಿತ್ತು. ಒಪ್ಪಂದದ ಪ್ರಕಾರ ಭಾರತದಲ್ಲಿ ಈ ಯುದ್ಧ ವಿಮಾನಗಳ ತಯಾರಿಕೆಗೆ ಭಾರತದಲ್ಲಿ ತಗುಲುವ ಖರ್ಚಿನ ಅರ್ಧದಷ್ಟನ್ನು ಡಸಾಲ್ಟ್‌ ಹೂಡಿಕೆ ಮಾಡಬೇಕಿತ್ತು. ಯುದ್ಧ ವಿಮಾನಗಳ ತಯಾರಿಕೆಗೆ ಸಂಬಂಧಿಸಿದಂತೆ ಎಚ್‌ಎಎಲ್‌ ಮತ್ತು ಡಸಾಲ್ಟ್‌ ಏವಿಯೇಷನ್‌ ಕಂಪೆನಿ ನಡುವೆ 2014ರ ಮಾರ್ಚ್‌ 13ರಂದು ಒಪ್ಪಂದವಾಗಿತ್ತು.

ಮೋದಿ ಸರಕಾರದಿಂದ ಹಳೆಯ ಒಪ್ಪಂದ ರದ್ದು:

2014ರಲ್ಲಿ ಲೋಕಸಭಾ ಚುನಾವಣೆ ನಡೆದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಈ ಒಪ್ಪಂದ ತಲೆ ಕೆಳಗಾಯಿತು. ಪ್ರಧಾನಿಯಾಗಿ ಮೊದಲ ಬಾರಿಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಮೋದಿ, 2015ರ ಏಪ್ರಿಲ್‌ 10ರಂದು 36 ರಫೇಲ್‌ ಯುದ್ಧ ವಿಮಾನಗಳನ್ನು ಹಾರಾಟಕ್ಕೆ ಸಿದ್ಧವಿರುವ ಸ್ಥಿತಿಯಲ್ಲೇ ಭಾರತ ಖರೀದಿಸಲಿದೆ ಎಂಬ ಘೋಷಣೆ ಮಾಡಿದ್ದರು. ಮೋದಿ ಅವರ ಅಂದಿನ ಫ್ರಾನ್ಸ್‌ ಭೇಟಿಯ ಜತೆಗೆ ಹಾಗೂ ಡಸಾಲ್ಟ್‌ ಜತೆಗಿನ ಒಪ್ಪಂದದ ವೇಳೆ ರಿಲಯನ್ಸ್‌ ಗ್ರೂಪ್‌ನ ಅಧ್ಯಕ್ಷ ಅನಿಲ್‌ ಅಂಬಾನಿ ಇದ್ದಿದ್ದು ಹಲವರ ಹುಬ್ಬೇರುವಂತೆ ಮಾಡಿತ್ತು. ಆ ಅವಧಿಯಲ್ಲಿ ದೇಶದ ರಕ್ಷಣಾ ಸಚಿವರಾಗಿದ್ದವರು ಮನೋಹರ್‌ ಪರಿಕ್ಕರ್‌.

ಅನಿಲ್‌ ಅಂಬಾನಿಗೆ ಮೋದಿ ಅಪ್ಪುಗೆ
ಅನಿಲ್‌ ಅಂಬಾನಿಗೆ ಮೋದಿ ಅಪ್ಪುಗೆ
- ಸಂಗ್ರಹ ಚಿತ್ರ

ಮೋದಿ ಅವರ ಈ ಘೋಷಣೆಯನ್ನು ಸಮರ್ಥಿಸಿಕೊಂಡಿದ್ದ ಪರಿಕ್ಕರ್‌, “126 ಯುದ್ಧ ವಿಮಾನಗಳ ಖರೀದಿ ಆರ್ಥಿಕ ಹೊರೆಯಾಗಲಿದೆ. ಅಲ್ಲದೆ ಅಷ್ಟು ವಿಮಾನಗಳ ಅಗತ್ಯವೂ ಇಲ್ಲ. ಎಲ್ಲಾ ಖರ್ಚುಗಳು ಸೇರಿ ಪ್ರತಿ ರಫೇಲ್‌ ಯುದ್ಧ ವಿಮಾನಕ್ಕೆ 715 ಕೋಟಿ ರೂಪಾಯಿ ಬೆಲೆಯಾಗುತ್ತದೆ” ಎಂದು ಪರಿಕ್ಕರ್‌ ಹೇಳಿದ್ದರು. ಆದರೆ, ಯುಪಿಎ ಅವಧಿಯಲ್ಲಿ ಪ್ರತಿ ವಿಮಾನಕ್ಕೆ 428 ಕೋಟಿ ರೂಪಾಯಿ ಬೆಲೆಯಂತೆ ಖರೀದಿಸುವ ಒಪ್ಪಂದವಾಗಿತ್ತು.

ಇಷ್ಟೆಲ್ಲಾ ಆಗುವ ವೇಳೆಗೆ 2015ರ ಜುಲೈನಲ್ಲಿ ಡಸಾಲ್ಟ್‌ ಜತೆಗಿನ ಯುಪಿಎ ಅವಧಿಯ ಒಪ್ಪಂದವನ್ನು ರದ್ದು ಮಾಡಲಾಗಿತ್ತು. 2016ರ ಸೆಪ್ಟೆಂಬರ್‌ 23ರಂದು 58,000 ಕೋಟಿ ರೂಪಾಯಿಯ 36 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಡಸಾಲ್ಟ್‌ ಕಂಪೆನಿ ಜತೆಗೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಸಹಿ ಹಾಕಿತ್ತು. ಯುಪಿಎ ಅವಧಿಯಲ್ಲಿ 126 ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ 54,000 ಕೋಟಿ ರೂಪಾಯಿಯ ಒಪ್ಪಂದವಾಗಿದ್ದರೆ, ಎನ್‌ಡಿಎ ಅವಧಿಯಲ್ಲಿ 36 ವಿಮಾನಗಳ ಖರೀದಿಗೆ 58,000 ಕೋಟಿ ರೂಪಾಯಿಯ ಹೊಸ ಒಪ್ಪಂದ ಮಾಡಿಕೊಳ್ಳಲಾಗಿತ್ತು!

2012ರ ಒಪ್ಪಂದ ರದ್ದಾದ ನಂತರ ಎಚ್‌ಎಎಲ್‌ ಜತೆಗಿನ ಸಂಬಂಧಕ್ಕೂ ಎಳ್ಳುನೀರು ಬಿಡಲಾಗಿತ್ತು. ಭಾರತದಲ್ಲಿ ರಫೇಲ್‌ ಯುದ್ಧ ವಿಮಾನಗಳ ತಯಾರಿಕೆ ಹಾಗೂ ನಿರ್ವಹಣೆಗಾಗಿ ಡಸಾಲ್ಟ್‌ ಏವಿಯೇಷನ್ಸ್‌ ಕಂಪೆನಿಯು ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಜತೆಗೆ ಒಪ್ಪಂದ ಮಾಡಿಕೊಂಡಿತ್ತು. ಹಾರಾಟಕ್ಕೆ ಸಿದ್ಧವಿರುದ್ಧ ಸ್ಥಿತಿಯಲ್ಲಿ ವಿಮಾನಗಳ ಖರೀದಿ ಎಂದು ಮೋದಿ ಘೋಷಣೆ ಮಾಡಿದ್ದರೂ ಡಸಾಲ್ಟ್‌ – ರಿಲಯನ್ಸ್‌ ಸಹಭಾಗಿತ್ವದಲ್ಲಿ ಭಾರತದಲ್ಲೇ ರಫೇಲ್‌ ವಿಮಾನಗಳ ತಯಾರಿಕೆಯ ಒಪ್ಪಂದವಾಗಿತ್ತು.

ಡೀಲ್‌ಗೆ ‘ಮೇಕ್‌ ಇನ್‌ ಇಂಡಿಯಾ’ ಸಾಥ್‌:

‘ಮೇಕ್‌ ಇನ್‌ ಇಂಡಿಯಾ’ ಯೋಜನೆಯಡಿ ಭಾರತದಲ್ಲಿ ರಫೇಲ್‌ ತಯಾರಿಕೆಗಾಗಿ ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಡಸಾಲ್ಟ್‌ ಜತೆಗೆ 30,000 ಕೋಟಿ ರೂಪಾಯಿ ಒಪ್ಪಂದಕ್ಕೆ 2017ರ ಫೆಬ್ರುವರಿ 16ರಂದು ಸಹಿ ಹಾಕಿತ್ತು. ಅಂದಹಾಗೆ ಈ ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ ಎಂಬ ಅನಿಲ್‌ ಅಂಬಾನಿಯ ರಕ್ಷಣಾ ಕಂಪೆನಿ ಹುಟ್ಟಿದ್ದು ಮೋದಿ ಫ್ರಾನ್ಸ್‌ನಲ್ಲಿ 36 ರಫೇಲ್‌ ವಿಮಾನ ಖರೀದಿಯ ಘೋಷಣೆ ಮಾಡುವ ಕೇವಲ 13 ದಿನಗಳ ಮುಂಚೆಯಷ್ಟೇ.

ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ 2015ರ ಮಾರ್ಚ್‌ 28ರಂದು ಅಸ್ತಿತ್ವಕ್ಕೆ ಬಂದಿದ್ದರೆ, ಮೋದಿ ಫ್ರಾನ್ಸ್‌ನಲ್ಲಿ ರಫೇಲ್‌ ಖರೀದಿಯ ಹೊಸ ಘೋಷಣೆ ಮಾಡಿದ್ದು 2015ರ ಏಪ್ರಿಲ್‌ 10ರಂದು. ಹಳೆಯ ಒಪ್ಪಂದ ರದ್ದು ಮಾಡಿ, ಕಡಿಮೆ ವಿಮಾನಗಳಿಗೆ ಹೆಚ್ಚಿನ ಬೆಲೆ ತೆರುತ್ತಿರುವುದರ ಹಿಂದೆ ಅನಿಲ್‌ ಅಂಬಾನಿ ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶವಿದೆ ಎಂಬುದು ಸದ್ಯದ ಆರೋಪ.

ಯುಪಿಎ ಅವಧಿಯ ಒಪ್ಪಂದದ ಪ್ರಕಾರ ಒಂದು ರಫೇಲ್‌ ವಿಮಾನಕ್ಕೆ 428 ಕೋಟಿ ರೂಪಾಯಿ ಬೆಲೆಯಾದರೆ, ಹೊಸ ಒಪ್ಪಂದದ ಪ್ರಕಾರ ಪ್ರತಿ ವಿಮಾನದ ಬೆಲೆ 1600 ಕೋಟಿ ರೂಪಾಯಿ. ಅಲ್ಲದೆ ಅನಿಲ್ ಅಂಬಾನಿ ಕಂಪೆನಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಈ ಯೋಜನೆಯಿಂದ ಎಚ್‌ಎಎಲ್‌ ಅನ್ನೂ ದೂರ ಇಡಲಾಯಿತು ಎಂದು ಕಾಂಗ್ರೆಸ್‌ ಆರೋಪಿಸುತ್ತಿದೆ. ಈ ನಡುವೆ ರಫೇಲ್‌ ವಿಮಾನದ ಬೆಲೆ ಹಿಂದಿನ ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹೇಳಿದ್ದ 715 ಕೋಟಿ ರೂಪಾಯಿಯನ್ನೂ ಮೀರಿ ದುಪ್ಪಟ್ಟಾಗಿದೆ. (1,600 ಕೋಟಿ ರೂಪಾಯಿ)

ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ಅನಿಲ್‌ ಅಂಬಾನಿಯ ರಿಲಯನ್ಸ್‌ ಸಮೂಹ, ‘ಡಸಾಲ್ಟ್‌ ಜತೆಗಿನ ಒಪ್ಪಂದದಲ್ಲಿ ಸರಕಾರದ ಹಸ್ತಕ್ಷೇಪ ಇಲ್ಲ’ ಎಂದಿದೆ. ಯುದ್ಧ ವಿಮಾನಗಳ ತಯಾರಿಕೆಯಲ್ಲಿ ಹಲವು ದಶಕಗಳ ಅನುಭವವಿರುವ ಎಚ್‌ಎಎಲ್‌ ಬಿಟ್ಟು ವಿಮಾನ ತಯಾರಿಕೆಯ ಅನುಭವವೇ ಇಲ್ಲದ, ಕೇವಲ 5 ಲಕ್ಷ ರೂಪಾಯಿ ಮೂಲ ಬಂಡವಾಳದೊಂದಿಗೆ ಅಸ್ತಿತ್ವಕ್ಕೆ ಬಂದ ರಿಲಯನ್ಸ್‌ ಡಿಫೆನ್ಸ್‌ ಲಿಮಿಟೆಡ್‌ಗೆ ಡಸಾಲ್ಟ್‌ ಕಂಪೆನಿಯ ವಿಮಾನ ತಯಾರಿಕಾ ಒಪ್ಪಂದ ಕುದುರಿದ ಬಗ್ಗೆ ರಿಲಯನ್ಸ್‌ ಸಮೂಹ ಮತ್ತು ಕೇಂದ್ರ ಸರಕಾರ ಮೌನವಾಗಿವೆ.

ಕಾಂಗ್ರೆಸ್‌ ಎತ್ತಿರುವ ಪ್ರಶ್ನೆಗಳು:

  • 2012ರ ಅವಧಿಯ ಡಸಾಲ್ಟ್‌ ಕಂಪೆನಿ ಜತೆಗಿನ ಒಪ್ಪಂದವನ್ನು ರದ್ದು ಮಾಡಿದ್ದೇಕೆ?
  • ಡಸಾಲ್ಟ್‌ ಜತೆಗೆ ಕೇವಲ 36 ರಫೇಲ್‌ ಯುದ್ಧ ವಿಮಾನಗಳ ಖರೀದಿಯ ಹೊಸ ಒಪ್ಪಂದ ಮಾಡಿಕೊಂಡಿದ್ದೇಕೆ?
  • ಹೆಚ್ಚಿನ ಬೆಲೆ ತೆತ್ತು ಕಡಿಮೆ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಕಾರಣವೇನು?
  • ರಫೇಲ್‌ ತಯಾರಿಕೆಯನ್ನು ಎಚ್‌ಎಎಲ್‌ಗೆ ಏಕೆ ವಹಿಸಲಿಲ್ಲ?
  • 45,000 ಕೋಟಿ ರೂಪಾಯಿ ಸಾಲ ಇರುವ ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಸಮೂಹ ಡಸಾಲ್ಟ್‌ ಜತೆಗೆ ಒಪ್ಪಂದ ಮಾಡಿಕೊಳ್ಳಲು ಅನುಮತಿ ನೀಡಿದ್ದೇಕೆ?

ಈ ಪ್ರಶ್ನೆಗಳಿಗೆ ಉತ್ತರ ಹೇಳುವಂತೆ ಪಟ್ಟು ಹಿಡಿದಿರುವ ಕಾಂಗ್ರೆಸ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದೆ. ಕಾಂಗ್ರೆಸ್‌ನ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಸದ್ಯ ವಿದೇಶ ಪ್ರವಾಸದಲ್ಲಿದ್ದು, ರುವಾಂಡದಲ್ಲಿನ ಗ್ರಾಮಸ್ಥರಿಗೆ ಗೋದಾನ ಮಾಡುತ್ತಿದ್ದಾರೆ. ಇತ್ತ ಉತ್ತರಕ್ಕಾಗಿ ಎನ್‌ಡಿಎ ಸರಕಾರದ ಮೇಲೆ ಒತ್ತಡ ತರುತ್ತಿರುವ ಕಾಂಗ್ರೆಸ್ ಕೂಡಾ ಸದನದೊಳಗೆ ಸತ್ಯ ಬಯಲು ಮಾಡುವ ಮನಸ್ಸು ಮಾಡುತ್ತಿಲ್ಲ.