ಮಾಯಾವತಿ, ಮಮತಾ ಮತ್ತು ಕಾಂಗ್ರೆಸ್‌: 2019ರಲ್ಲಿ ಮಹಿಳಾ ಮಣಿಗಳ ದರ್ಬಾರ್‌?
COVER STORY

ಮಾಯಾವತಿ, ಮಮತಾ ಮತ್ತು ಕಾಂಗ್ರೆಸ್‌: 2019ರಲ್ಲಿ ಮಹಿಳಾ ಮಣಿಗಳ ದರ್ಬಾರ್‌?

ಮಾಯಾವತಿ + ಮಮತಾ ಬ್ಯಾನರ್ಜಿ +  ಕಾಂಗ್ರೆಸ್ = ಪ್ರಧಾನಿ ಹುದ್ದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಲು ಪಣತೊಟ್ಟಿರುವ ಕಾಂಗ್ರೆಸ್‌ ಈ ಸರಳ ಸೂತ್ರವನ್ನು ಕಂಡುಕೊಂಡಿದೆ.

ಮಾಯಾವತಿ + ಮಮತಾ ಬ್ಯಾನರ್ಜಿ + ಕಾಂಗ್ರೆಸ್ = ಪ್ರಧಾನಿ ಹುದ್ದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಶತಾಯ ಗತಾಯ ಸೋಲಿಸಲು ಪಣತೊಟ್ಟಿರುವ ಕಾಂಗ್ರೆಸ್‌ನ ಈ ಸರಳ ಸೂತ್ರವನ್ನು ಕಂಡುಕೊಂಡಿದೆ. ಅದೀಗ ದೇಶದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದೆ.

ಪ್ರಧಾನಿ ಹುದ್ದೆಯಿಂದ ನರೇಂದ್ರ ಮೋದಿಯನ್ನು ಕೆಳಗಿಳಿಸಲು ಕಸರತ್ತು ನಡೆಸುತ್ತಿರುವ ಕಾಂಗ್ರೆಸ್ ಅದಕ್ಕಾಗಿ ಎಲ್ಲಾ ಆಯ್ಕೆಗಳನ್ನು ಮುಕ್ತವಾಗಿಟ್ಟಿದೆ. ಮುಂದುವರಿದು ‘ಪ್ರಧಾನಿ ಹುದ್ದೆಯನ್ನೂ ಬೇರೆ ಪಕ್ಷದವರಿಗೆ ಬಿಟ್ಟುಕೊಡಲೂ ಸಿದ್ಧ’ ಎಂಬ ಸಂದೇಶವನ್ನು ರವಾನಿಸಿದೆ.

ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಿತ್ರ ಪಕ್ಷಗಳ ಜತೆ ಸೇರಿ ಮೈತ್ರಿಕೂಟ ರಚಿಸುವ ತೀರ್ಮಾನಕ್ಕೆ ಬರಲಾಗಿದ್ದು, ಪಕ್ಷಗಳ ಜತೆಗೆ ಮಾತನಾಡುವ ಹೊಣೆಯನ್ನು ರಾಹುಲ್ ಗಾಂಧಿಯವರಿಗೆ ನೀಡಲಾಗಿತ್ತು. ಜತೆಗೆ ರಾಹುಲ್‌ ಗಾಂಧಿಯೇ ನಮ್ಮ ಪ್ರಧಾನಿ ಅಭ್ಯರ್ಥಿ ಎಂಬ ನಿರ್ಧಾರವನ್ನೂ ತಳೆಯಲಾಗಿತ್ತು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಒಂದು ಹೆಜ್ಜೆ ಹಿಂದಿಟ್ಟಿದ್ದು, ರಾಹುಲ್‌ ಗಾಂಧಿಗಿಂತ ‘ಆರ್‌ಎಸ್‌ಎಸ್‌ ಹೊರತಾದ ವ್ಯಕ್ತಿಗಳನ್ನು ಪ್ರಧಾನಿ ಹುದ್ದೆಯಲ್ಲಿ ಕೂರಿಸುವುದು ನಮ್ಮ ಉದ್ದೇಶ’ ಎಂದು ಸ್ಪಷ್ಟಪಡಿಸಿದೆ.

ಕಾಂಗ್ರೆಸ್ ಪಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿಯೇ ಚುನಾವಣೆಯನ್ನು ಎದುರಿಸಲಿದೆ. ‘ಒಂದೊಮ್ಮೆ ಪಕ್ಷ 200ರ ಸಮೀಪ ಸ್ಥಾನಗಳನ್ನು ಪಡೆದುಕೊಂಡಲ್ಲಿ ನಾವೇ ಮೈತ್ರಿಕೂಟವನ್ನು ಮುನ್ನಡೆಸುತ್ತೇವೆ’ ಎಂದು ಪಕ್ಷ ಹೇಳಿದೆ. 200ರ ಆಜುಬಾಜು ಸ್ಥಾನಗಳು ಬರದಿದ್ದಲ್ಲಿ ಬೇರೆಯವರಿಗೆ ಅವಕಾಶವಿದೆ ಎಂಬುದನ್ನು ಕಾಂಗ್ರೆಸ್ ಪರೋಕ್ಷವಾಗಿ ಹೇಳಿದೆ.

ಯಾರಿಗೆ ಅವಕಾಶ?

ಪ್ರಧಾನಿ ಹುದ್ದೆ ಮೇಲೆ ಕಣ್ಣಿಡಬೇಕಾದರೆ ಯಾವುದೇ ಪಕ್ಷಕ್ಕೂ ‘ಸಂಖ್ಯಾಬಲ’ ಅನಿವಾರ್ಯ. ಆದರೆ ಬಿಜೆಪಿ ಮತ್ತು ಕಾಂಗ್ರೆಸ್ ಬಿಟ್ಟರೆ ಸದ್ಯಕ್ಕೆ ಇಡೀ ದೇಶದಲ್ಲಿ ಬೇರಾವ ಪಕ್ಷಗಳಿಗೂ ಅಸ್ತಿತ್ವ ಇಲ್ಲ. ಜತೆಗೆ ರಾಜ್ಯಗಳಲ್ಲಿರುವ ಸೀಮಿತ ಲೋಕಸಭೆ ಸ್ಥಾನಗಳು ಪ್ರಾದೇಶಿಕ ಪಕ್ಷಗಳ ಪಾಲಿಗೆ ತಡೆಗೋಡೆಯಾಗಿವೆ. ಇದ್ದುದರಲ್ಲಿ ಕೇವಲ 5 ರಾಜ್ಯಗಳಲ್ಲಿ ಮಾತ್ರ 40ರ ಆಸುಪಾಸಿನಲ್ಲಿ ಲೋಕಸಭಾ ಸ್ಥಾನಗಳಿವೆ. ತಮಿಳುನಾಡು, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಉತ್ತರ ಪ್ರದೇಶ ಈ ಸಾಲಿಗೆ ಸೇರುತ್ತವೆ.

ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಒಂದೇ ಪಕ್ಷ 40ರಷ್ಟು ಸ್ಥಾನಗಳನ್ನು ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಜಯಲಲಿತಾ ಇಲ್ಲದ ತಮಿಳುನಾಡೂ ಪಕ್ಷಗಳ ನಡುವೆ ಹರಿದು ಹಂಚಿ ಹೋಗಿದೆ. ಉಳಿದಿರುವುದು ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳ ಮಾತ್ರ.

ಎರಡೂ ರಾಜ್ಯಗಳಲ್ಲಿ ಪ್ರಬಲ ನಾಯಕಿಯರಾಗಿರುವ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿಗೆ ಪ್ರಧಾನಿ ಹುದ್ದೆಗೇರುವ ಅತ್ಯುತ್ತಮ ಅವಕಾಶಗಳಿವೆ. ಇವರಿಬ್ಬರನ್ನೇ ಗುರಿಯಾಗಿಸಿಕೊಂಡು, ‘ಮಹಿಳಾ ಪ್ರಧಾನಿಗಳ ಆಯ್ಕೆಗೆ ಕಾಂಗ್ರೆಸ್ ಮುಕ್ತವಾಗಿದೆಯೇ’ ಎಂದು ಕೇಳಲಾದ ಪ್ರಶ್ನೆಗೆ ಪಕ್ಷದ ಮೂಲಗಳು, ‘ಆರ್‌ಎಸ್‌ಎಸ್‌ ಬೆಂಬಲ ಇಲ್ಲದ ಯಾರೇ ಆದರೂ ನಮಗೆ ಒಪ್ಪಿಗೆ’ ಎಂದು ಸ್ಪಷ್ಟವಾಗಿ ಹೇಳಿವೆ.

ಮಾಯಾವತಿ, ಮಮತಾ ಮತ್ತು ಕಾಂಗ್ರೆಸ್‌: 2019ರಲ್ಲಿ ಮಹಿಳಾ ಮಣಿಗಳ ದರ್ಬಾರ್‌?

ಮಾಯಾವತಿ ಮ್ಯಾಜಿಕ್‌

ಬಹುಜನ ಸಮಾಜವಾದಿ ಪಕ್ಷದ ಮುಖ್ಯಸ್ಥೆ ಮಾಯಾವತಿಗೆ ಪ್ರಧಾನಿ ಹುದ್ದೆ ತೋರಿಸಿ ಉತ್ತರ ಪ್ರದೇಶದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಕಾಂಗ್ರೆಸ್ ಮುಂದಿರುವ ಯೋಜನೆ. ಆದರೆ ಬೆಹೆನ್‌ಜೀ ತನ್ನ ಬೆಲೆ ಅರಿತುಕೊಂಡು ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ. ತಮ್ಮನ್ನು ಯಾರು ಹಗುರವಾಗಿ ತೆಗೆದುಕೊಳ್ಳಬಾರದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ. ‘ಲೋಕಸಭೆ ಚುನಾವಣೆಯಲ್ಲಿ ಗೌರವಯುತ ಸ್ಥಾನಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಿದರೆ ಮಾತ್ರ ವಿಪಕ್ಷಗಳ ಜತೆ ಕೈಜೋಡಿಸುವುದಾಗಿ’ ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಮಧ್ಯ ಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ವಿಧಾನಸಭೆ ಚುನಾವಣೆಗಳಲ್ಲೂ ಸೀಟುಗಳಿಗೆ ಬೇಡಿಕೆ ಇಟ್ಟಿದ್ದಾರೆ. ಸದ್ಯಕ್ಕೆ ಕಾಂಗ್ರೆಸ್ ರಾಜಸ್ಥಾನ ಬಿಟ್ಟು ಉಳಿದೆಡೆ ಮೈತ್ರಿಗೆ ಸಿದ್ಧವಾಗಿದೆ.

80 ಲೋಕಸಭಾ ಸ್ಥಾನಗಳಿರುವ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಜತೆಗಿನ ಮೈತ್ರಿಯಷ್ಟೇ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ನಿಲ್ಲಿಸಲು ಸಾಕಾಗುವುದಿಲ್ಲ ಎಂಬುದು ಕಾಂಗ್ರೆಸ್‌ಗೂ ಗೊತ್ತು. ಈ ಕಾರಣಕ್ಕೆ ಸಮಾಜವಾದಿ ಪಕ್ಷವನ್ನೂ ಮೈತ್ರಿ ಒಳಕ್ಕೆ ಎಳೆದುಕೊಳ್ಳುವ ಅನಿವಾರ್ಯತೆ ಕಾಂಗ್ರೆಸ್‌ಗೆ ಇದೆ. ಹೀಗಿದ್ದೂ ಸಿಂಹಪಾಲನ್ನು ತನಗೆ ಬಿಟ್ಟು ಕೊಡಲೇ ಬೇಕೆಂದು ಮಾಯಾವತಿ ಪಟ್ಟು ಹಿಡಿದಂತೆ ಕಾಣಿಸುತ್ತಿದೆ.

ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಿ ಹೆಚ್ಚಿನ ಸ್ಥಾನಗಳನ್ನು ಗೆದ್ದುಕೊಂಡಲ್ಲಿ 2019ರಲ್ಲಿ ಪ್ರಧಾನಿ ಹುದ್ದೆಗೇರಬಹುದು ಎಂಬುದು ಮಾಯಾವತಿ ಆಲೋಚನೆ. ಕಾಂಗ್ರೆಸ್‌ ಕೂಡ 1984ರ ನಂತರ ಮೊದಲ ಮಹಿಳೆ ಹಾಗೂ ಅದರಲ್ಲೂ ದಲಿತ ಮಹಿಳೆಯೊಬ್ಬರನ್ನು ಚೊಚ್ಚಲ ಬಾರಿಗೆ ಪ್ರಧಾನಿ ಹುದ್ದೆಯಲ್ಲಿ ಕೂರಿಸಲು ತನ್ನ ಅಭ್ಯಂತರವೇನಿಲ್ಲ ಎಂಬುದನ್ನು ಹಿಂಬಾಗಿಲ ಮೂಲಕ ಹೇಳಿಸಿದೆ.

ಮಮತಾ ಬ್ಯಾನರ್ಜಿ ದಾಳ

ಇದೇ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿಯೂ ಸುಮ್ಮನೆ ಕುಳಿತಿಲ್ಲ. ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ‘ಹುತಾತ್ಮರ ದಿನ’ವನ್ನು ಉದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, “ನಾವು ರಾಜ್ಯದಲ್ಲಿ ಎಲ್ಲಾ 42 ಸ್ಥಾನಗಳನ್ನು ಗೆಲ್ಲಲಿದ್ದೇವೆ. ದೇಶವನ್ನು ಉಳಿಸಲು ಬಿಜೆಪಿಯನ್ನು ಒದ್ದೋಡಿಸಲಿದ್ದೇವೆ. ಜನವರಿಯಲ್ಲಿ ಇಲ್ಲಿ ದೊಡ್ಡ ಸಮಾವೇಶ ನಡೆಸಿ ಎಲ್ಲಾ (ವಿಪಕ್ಷ) ನಾಯಕರನ್ನು ಕರೆಯಲಿದ್ದೇವೆ,” ಎಂದು ಹೇಳಿದ್ದಾರೆ. ಸದ್ಯ ಅವರ ಬಳಿ 34 ಸಂಸದರಿದ್ದಾರೆ.

ದೀದಿ ಪ್ರಧಾನಿ ಹುದ್ದೆ ಏರುವುದರ ಬಗ್ಗೆ ಕಾಂಗ್ರೆಸ್‌ಗೂ ಯಾವುದೇ ತಕರಾರುಗಳಿಲ್ಲ. ಮಮತಾ ಬ್ಯಾನರ್ಜಿ ಪ್ರಧಾನಿ ಹುದ್ದೆ ಅಲಂಕರಿಸುವುದನ್ನು ಕಾಂಗ್ರೆಸ್ ಒಪ್ಪಲಿದೆಯೇ ಎಂಬ ಪ್ರಶ್ನೆಗೆ, “ಅವರು ಆರ್‌ಎಸ್‌ಎಸ್‌ ಮನಸ್ಥಿತಿಯವರು’’ ಅಲ್ಲ ಎಂಬ ಉತ್ತರ ಬಂದಿದೆ.

ಕಾಂಗ್ರೆಸ್ ಯಾವುದನ್ನೂ ಬಹಿರಂಗವಾಗಿ ಹೇಳಿಲ್ಲವಾದರೂ, ‘ಮೂಲಗಳ’ ಮೂಲಕ ಎಲ್ಲವನ್ನೂ ಹೇಳಿಸಿದೆ. ಹಾಗೆ ಮೂಲಗಳ ಮೂಲಕ ಹೊರ ಬಂದ ಹೆಸರುಗಳೇ ಮಾಯಾವತಿ ಮತ್ತು ಮಮತಾ ಬ್ಯಾನರ್ಜಿ.