ರಾಜ್ಯಸಭೆಯಲ್ಲಿ ಮೋದಿ ಸರಕಾರದ ‘ಗೋಯಲ್‌ ಗಾನ’!
COVER STORY

ರಾಜ್ಯಸಭೆಯಲ್ಲಿ ಮೋದಿ ಸರಕಾರದ ‘ಗೋಯಲ್‌ ಗಾನ’!

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಠೇವಣಿ ಶೇ. 50ರಷ್ಟು ಹೆಚ್ಚಾಗಿದೆ ಎಂಬ ವರದಿಗಳು ಸುಳ್ಳು ಎಂದಿರುವ ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌, ಈ ಠೇವಣಿ ಶೇಕಡ 80ರಷ್ಟು ಕುಸಿತ ಕಂಡಿದೆ ಎಂದಿದ್ದಾರೆ.

ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಇರಿಸುವ ಕಪ್ಪು ಹಣ 2017ರಲ್ಲಿ ಶೇಕಡ 50ರಷ್ಟು ಹೆಚ್ಚಾಗಿದೆ ಎಂಬ ವರದಿಗಳನ್ನು ಅಲ್ಲಗಳೆದಿರುವ ಕೇಂದ್ರ ಹಣಕಾಸು ಸಚಿವ ಪಿಯೂಷ್‌ ಗೋಯಲ್‌, ಠೇವಣಿ ಹಿಂದಿನ ವರ್ಷಗಳಿಂತ ಕುಸಿತ ಕಂಡಿದೆ ಎಂದಿದ್ದಾರೆ.

ನರೇಂದ್ರ ಮೋದಿ ನೇತೃತ್ವದ ಸರಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರು ಕಪ್ಪು ಹಣ ಠೇವಣಿ ಇಡುವ ಪ್ರಮಾಣ ಕುಸಿದಿದೆ ಎಂದು ಗೋಯಲ್‌ ಹೇಳಿದ್ದಾರೆ.

ರಾಜ್ಯಸಭೆಯಲ್ಲಿ ಮಂಗಳವಾರ ಮಾತನಾಡಿದ ಗೋಯಲ್‌, “ಕೇಂದ್ರದಲ್ಲಿ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ 2014ರಿಂದ 2017ರ ಕೊನೆಯವರೆಗಿನ ಅವಧಿಯಲ್ಲಿ ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಭಾರತೀಯರು ಕಪ್ಪು ಹಣ ಇಡುವ ಪ್ರಮಾಣ ಶೇಕಡ 80ಕ್ಕೆ ಕುಸಿದಿದೆ” ಎಂದಿದ್ದಾರೆ.

ಭಾರತೀಯರು ಸ್ವಿಸ್‌ ಬ್ಯಾಂಕ್‌ನಲ್ಲಿ ಕಪ್ಪು ಹಣ ಇರಿಸುವುದು ಹೆಚ್ಚಾಗಿದೆ ಎಂಬ ವರದಿಗಳು ತಪ್ಪು ಎಂದಿರುವ ಗೋಯಲ್‌, “ಸ್ವಿಸ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಭಾರತೀಯರು ಕಪ್ಪು ಹಣ ಇರಿಸುವ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಾಧ್ಯಮಗಳಲ್ಲಿ ವರದಿಯಾಗಿರುವುದು ಅಂಕಿಅಂಶಗಳ ತಪ್ಪು ಮಾಹಿತಿ,” ಎಂದಿದ್ದಾರೆ.

‘2017ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ ಶೇಕಡ 50ರಷ್ಟು ಹೆಚ್ಚಾಗಿದೆ ಎಂಬುದು ಸ್ವಿಸ್ ನ್ಯಾಷನಲ್‌ ಬ್ಯಾಂಕ್ನ ವಾರ್ಷಿಕ ವರದಿಯಿಂದ ತಿಳಿದುಬಂದಿದೆ’ ಎಂಬ ಪಿಟಿಐ ಸುದ್ದಿಸಂಸ್ಥೆಯ ವರದಿಯನ್ನು ಈ ವರ್ಷದ ಜೂನ್‌ 28ರಂದು ದೇಶದ ಎಲ್ಲಾ ಪ್ರಮುಖ ಮಾಧ್ಯಮಗಳೂ ಪ್ರಕಟಿಸಿದ್ದವು.

“ಸ್ವಿಸ್‌ ಬ್ಯಾಂಕ್‌ನಲ್ಲಿ ಭಾರತೀಯರ ಠೇವಣಿ 2011ರಲ್ಲಿ 12%, 2013ರಲ್ಲಿ 43% ಮತ್ತು 2017ರಲ್ಲಿ 50.2% ಹೆಚ್ಚಳವಾಗಿದೆ. ಈ ಠೇವಣಿ ಪ್ರಮಾಣ 2004ರಲ್ಲಿ 56% ಹೆಚ್ಚಾಗಿತ್ತು” ಎಂದು ಪಿಟಿಐ ವರದಿ ಹೇಳಿತ್ತು.

ಸಂಸತ್‌ನ ಮಳೆಗಾಲದ ಅಧಿವೇಶನದ 5ನೇ ದಿನ ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಗೋಯಲ್‌, “ಸ್ವಿಸ್‌ ಬ್ಯಾಂಕ್‌ಗೆ ಜಮೆಯಾಗುವ ಭಾರತೀಯರ ಠೇವಣಿ ಪ್ರಮಾಣ ಕಡಿಮೆಯಾಗಿದೆ. ಇದು ಕಪ್ಪು ಹಣದ ನಿಯಂತ್ರಣದ ಮೋದಿ ಸರಕಾರದ ಸಾಧನೆ” ಎಂದು ಬಣ್ಣಿಸಿದ್ದಾರೆ.

ಬ್ಯಾಂಕ್‌ ವ್ಯವಹಾರಗಳ ಮಾಹಿತಿ ವಿನಿಮಯ ಸಂಬಂಧ ಭಾರತ ಮತ್ತು ಸ್ವಿಟ್ಜರ್‌ಲೆಂಡ್‌ ಸರಕಾರಗಳು 2017ರ ಡಿಸೆಂಬರ್‌ 21ರಂದು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದದಂತೆ ಬ್ಯಾಂಕ್‌ ವ್ಯವಹಾರಗಳ ಮಾಹಿತಿಯನ್ನು ಎರಡೂ ದೇಶಗಳು ಪ್ರತಿ ವರ್ಷ ವಿನಿಮಯ ಮಾಡಿಕೊಳ್ಳಲಿವೆ. ಈ ವರ್ಷದ ಜನವರಿ 1ರಂದು ಮಾಹಿತಿ ವಿನಿಮಯ ಮಾಡಿಕೊಂಡಿರುವ ಎರಡೂ ದೇಶಗಳು 2019ರಿಂದ ವಾರ್ಷಿಕವಾಗಿ ವಹಿವಾಟಿನ ಮಾಹಿತಿ ವಿನಿಮಯ ಮಾಡಿಕೊಳ್ಳಲಿವೆ.

ಸ್ವಿಸ್ ಬ್ಯಾಂಕ್ ಠೇವಣಿ ಎಂದರೇನು?:

ಕಪ್ಪು ಹಣವನ್ನು ಭದ್ರವಾಗಿರಿಸಲು ಸ್ವಿಟ್ಜರ್‌ಲೆಂಡ್‌ನ ಬ್ಯಾಂಕ್‌ಗಳು ಸುರಕ್ಷಿತ ಎಂಬುದು ಹಿಂದಿನಿಂದಲೂ ಜನಜನಿತ. ಸ್ವಿಟ್ಜರ್‌ಲೆಂಡ್‌ನ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸುವ ಖಾತೆದಾರರು ಮತ್ತು ವಹಿವಾಟಿನ ಮಾಹಿತಿಯನ್ನು ಗೌಪ್ಯವಾಗಿರಿಸಲಾಗುತ್ತಿತ್ತು. ಇದರಿಂದಾಗಿ ಸ್ವಿಸ್‌ ಬ್ಯಾಂಕ್ ಕಾಳಧನಿಕರ ಸ್ವರ್ಗ ಎನಿಸಿತ್ತು.

ಭಾರತದ ಬ್ಯಾಂಕ್‌ಗಳಲ್ಲಿ ಖಾತೆಯಲ್ಲಿ ಹಣ ಇದ್ದರೆ ಬ್ಯಾಂಕ್‌ ಅದಕ್ಕೆ ಬಡ್ಡಿ ರೂಪದಲ್ಲಿ ಖಾತೆದಾರರಿಗೆ ಹಣ ನೀಡುತ್ತದೆ. ಆದರೆ, ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿ ಹಣ ಇಡಲು ಖಾತೆದಾರರೇ ಬ್ಯಾಂಕ್‌ಗೆ ಹಣ ಸಂದಾಯ ಮಾಡಬೇಕಾಗುತ್ತದೆ. ಸ್ವಿಸ್‌ ಬ್ಯಾಂಕ್‌ನಲ್ಲಿ ಠೇವಣಿಯಾಗುವುದು ಬಹುತೇಕ ಕಪ್ಪು ಹಣವೇ.

ಕಪ್ಪು ಹಣದ ಮೇಲೆ ಕಡಿವಾಣ ಹಾಕುವ ಕ್ರಮವಾಗಿ ಭಾರತ ಸರಕಾರ ಕಳೆದ ವರ್ಷ ಸ್ವಿಟ್ಜರ್‌ಲೆಂಡ್ ಸರಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಭಾರತದ ವಹಿವಾಟಿನ ಮಾಹಿತಿಯನ್ನು ಸ್ವಿಸ್ ಬ್ಯಾಂಕ್‌ ಹಂಚಿಕೊಳ್ಳುತ್ತಿದೆ. ಒಟ್ಟಾರೆ ದೇಶದ ಠೇವಣಿಯ ಮಾಹಿತಿ ನೀಡಿದರೂ ಖಾತೆದಾರರ ಮಾಹಿತಿಯನ್ನು ಬಿಟ್ಟುಕೊಡಲು ಸ್ವಿಸ್‌ ಬ್ಯಾಂಕ್‌ ಒಪ್ಪಿಲ್ಲ.