samachara
www.samachara.com
‘ಶಿವಸೇನೆ- ಬಿಜೆಪಿ’: ವಿಚ್ಛೇದನ ಹಂತಕ್ಕೆ ಬಂದು ನಿಂತ ಸುದೀರ್ಘ ದಾಂಪತ್ಯದ ಸುತ್ತ... 
COVER STORY

‘ಶಿವಸೇನೆ- ಬಿಜೆಪಿ’: ವಿಚ್ಛೇದನ ಹಂತಕ್ಕೆ ಬಂದು ನಿಂತ ಸುದೀರ್ಘ ದಾಂಪತ್ಯದ ಸುತ್ತ... 

“ನಾನು ಜನಸಾಮಾನ್ಯರ ಕನಸುಗಳ ಸಾಕಾರಕ್ಕೆ ಹೋರಾಡುತ್ತೇನೆಯೇ ವಿನಾ ಮೋದಿ ಕನಸುಗಳಿಗಾಗಿ ಅಲ್ಲ. ನನಗೂ ಬೇಟೆಯಾಡುವ ಹಂಬಲವಿದೆ. ಆದರೆ ಇದಕ್ಕಾಗಿ ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಡುವುದಿಲ್ಲ” - ಉದ್ಧವ್ ಠಾಕ್ರೆ

ಶಿವಸೇನೆ ಮತ್ತು ಬಿಜೆಪಿ ಸಂಬಂಧ ದೇಶದ ರಾಜಕೀಯ ಇತಿಹಾಸದಲ್ಲಿ ಕಾಣಿಸಿಕೊಂಡು ಸುದೀರ್ಘ ಸಂಬಂಧಗಳಲ್ಲಿ ಒಂದು. ಸುಮಾರು 25 ವರ್ಷಗಳ ದಾಂಪತ್ಯದ ನಂತರ 2014ರಲ್ಲಿ ಈ ಸಂಬಂಧದಲ್ಲಿ ಮೊದಲ ಬಾರಿಗೆ ವಿರಸ ಕಾಣಿಸಿಕೊಂಡಿತ್ತು. ಇದೀಗ ಡಿವೋರ್ಸ್‌ ಹೊಸ್ತಿಲಲ್ಲಿ ಬಂದು ನಿಂತಿದೆ. ಇದೇ ದಾರಿಯಲ್ಲಿ ಮುಂದುವರಿದರೆ ವಿಚ್ಛೇದನ ಪಡೆದು 2019ರಲ್ಲಿ ಇಬ್ಬರೂ ಪ್ರತ್ಯೇಕವಾಗಿ ಚುನಾವಣಾ ಅಖಾಡಕ್ಕೆ ಇಳಿಯುವ ದಿನಗಳು ದೂರವಿಲ್ಲ.

ಶಿವಸೇನೆ ಇವತ್ತು ಇಂಥಹದ್ದೊಂದು ತೀರ್ಮಾನಕ್ಕೆ ಬರಲು ಬಹುಶಃ ಅದು ಬೆಳೆದು ಬಂದ ದಾರಿಯೂ ಕಾರಣವಾಗಿರಬಹುದು. 1960ರ ಸುಮಾರಿಗೆ ‘ಮಾರ್ಮಿಕ್‌’ ಎಂಬ ಪತ್ರಿಕೆಯಲ್ಲಿ ಕಾರ್ಟೂನ್‌ ಬರೆಯುತ್ತಿದ್ದ ಬಾಳಾ ಠಾಕ್ರೆ ಅವುಗಳ ಮೂಲಕ ಚಿಂತನೆಯೊಂದನ್ನು ಬಿತ್ತುತ್ತಿದ್ದರು. ಅದು ವಲಸೆ ನೀತಿಯ ವಿರುದ್ಧವಾದ ಚಿಂತನೆಯಾಗಿತ್ತು. ಮುಂಬೈ ಎಂಬ ಮಹಾನಗರಕ್ಕೆ ಬರುವ ವಲಸಿಗರು ಮಣ್ಣಿನ ಮಕ್ಕಳಾದ ಮರಾಠಿಗರ ಉದ್ಯೋಗವನ್ನು ಕಸಿದುಕೊಳ್ಳುತ್ತಿದ್ದಾರೆ ಎಂಬುದು ಅವರ ವಾದವಾಗಿತ್ತು. ಅದೇ ನೆಲೆಯಲ್ಲಿ 19 ಜೂನ್ 1966ರಲ್ಲಿ ಹುಟ್ಟಿಕೊಂಡ ಪಕ್ಷ ಶಿವಸೇನೆ. ವಲಸೆ ವಿರೋಧಿ ನೀತಿ, ಆ ಮೂಲಕ ಮರಾಠಿ ಜನರ ಸಂಕಟಗಳಿಗೆ ಧ್ವನಿಯಾಗುವುದು ಪಕ್ಷದ ಆರಂಭಿಕ ನೀತಿಯಾಗಿತ್ತು.

ಪಕ್ಷದ ಈ ನಿಲುವು ನಿರುದ್ಯೋಗಿ ಮರಾಠಿ ಯುವ ಜನತೆಯ ಆಕರ್ಷಣೆಗೆ ಒಳಗಾಯಿತು. ಅವತ್ತಿಗೆ ಮುಂಬೈ ಮಹಾನಗರವನ್ನು ಆಕ್ರಮಿಸಿಕೊಂಡಿದ್ದ ದಕ್ಷಿಣ ಭಾರತೀಯರ ರೆಸ್ಟೋರೆಂಟ್‌ಗಳು, ಅಂಗಡಿಗಳ ಮೇಲೆ ಶಿವಸೇನೆ ಕಾರ್ಯಕರ್ತರು ದಾಳಿ ಆರಂಭಿಸಿದ್ದರು. ದಾಳಿ ನಂತರ ಮರಾಠಿಗರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದರು. ಆದರೆ ಬರಬರುತ್ತಾ 1970ರ ವೇಳೆಗೆ ಈ ಸಿದ್ಧಾಂತ ಸವಕಲಾಯಿತು.

ಆಗ ಪಕ್ಷದ ಹೆಗ್ಗುರುತಿನ ಜಾಗಕ್ಕೆ ಬಂದು ಕೂತಿದ್ದೇ ಹಿಂದುತ್ವ. ಇದು ಪಕ್ಷಕ್ಕೆ ಹೊಸ ಆಯಾಮವನ್ನು ನೀಡಿತು. ಬಾಳಾ ಠಾಕ್ರೆಯ ಚಹರೆಯೂ ಬದಲಾಯಿತು. ಕೇಸರಿ ದಿರಿಸು ಮೇಲೊಂದು ರುದ್ರಾಕ್ಷಿ ಸರ ಅವರ ಪೋಷಾಕಿನಲ್ಲಿ ಸೇರಿಕೊಂಡಿತು. ಹಿಂದುತ್ವದ ಏಣಿ ಏರಿ ಪಕ್ಷವೂ ಬಲುಬೇಗ ಬೆಳವಣಿಗೆಯನ್ನು ಕಂಡಿತು.

1989ರ ಹೊತ್ತಿಗೆ ಶಿವಸೇನೆ ಪಕ್ಷವೊಂದರ ಜತೆ ಮೈತ್ರಿ ಮಾಡಿಕೊಳ್ಳುವ ಹಂತಕ್ಕೆ ಬಂದು ನಿಂತಿತು. ಅವತ್ತಿಗೆ ರಾಮ ಮತ್ತು ರಾಮಮಂದಿರ ಜಪ ಮಾಡುತ್ತಿದ್ದ ಬಿಜೆಪಿಯಲ್ಲಿ ಶಿವಸೇನೆ ಹೊಸ ಮಿತ್ರನೊಬ್ಬನನ್ನು ಕಂಡುಕೊಂಡಿತು. 1989ರ ಚುನಾವಣೆಯಲ್ಲಿ ಒಟ್ಟಾಗಿ ಇಬ್ಬರೂ ಅಖಾಡಕ್ಕೆ ಇಳಿದರು. 1995ರಿಂದ 99ರವರೆಗೆ ಮಹಾರಾಷ್ಟ್ರದಲ್ಲಿ ಸರಕಾರವನ್ನೂ ಜತೆಯಾಗಿ ನಡೆಸಿದರು.

ಆದರೆ 2014ರ ಹೊತ್ತಿಗೆ ಬಾಳಾ ಠಾಕ್ರೆ ಇರಲಿಲ್ಲ. ಅವರ ಜಾಗದಲ್ಲಿ ಪುತ್ರ ಉದ್ಧವ್ ಠಾಕ್ರೆ ಬಂದು ಕುಳಿತಿದ್ದರು. ಈ ಸಂದರ್ಭದಲ್ಲಿ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಘೋಷಣೆಯಾಯಿತು. ಆಗ ಎರಡೂ ಪಕ್ಷಗಳ ನಡುವೆ ಮೊದಲ ಬಾರಿಗೆ ಸೀಟು ಹಂಚಿಕೆಗೆ ಸಂಬಂದಿಸಿದಂತೆ ವಿರಸ ತಲೆದೋರಿತು. ಪರಿಣಾಮ ವ್ಯತ್ಯಾಸವೇ ತಿಳಿಯದಷ್ಟು ಬೆರೆತು ಹೋಗಿದ್ದ ಪಕ್ಷಗಳು 25 ವರ್ಷಗಳ ತರುವಾಯ ಪ್ರತ್ಯೇಕವಾಗಿ ಸ್ಪರ್ಧಿಸಿದವು. ಕೊನೆಗೆ ಸರಕಾರ ರಚನೆ ಸಂದರ್ಭ ಬಂದಾಗ ಶಿವಸೇನೆ ಹೊರಗಿನಿಂದ ಬಿಜೆಪಿ ಸರಕಾರಕ್ಕೆ ಬೆಂಬಲ ನೀಡಿತು.

2014ರ ನಂತರ ಶಿವಸೇನೆಯ ನಿಲುವುಗಳು ಬದಲಾದವು. ಕೇಂದ್ರ ಸರಕಾರದ ವೈಫಲ್ಯ, ಪ್ರಧಾನಿ ನರೇಂದ್ರ ಮೋದಿ ನಡೆಗಳನ್ನು ಟೀಕಿಸುವುದಕ್ಕೆ ಪಕ್ಷ ಶುರುವಿಟ್ಟುಕೊಂಡಿತು. ಮುಖ್ಯವಾಗಿ ಬಿಜೆಪಿಯಿಂದ ಭ್ರಮನಿರಸನವಾಗಿದೆ ಎಂದು ಶಿವಸೇನೆ ಹೇಳುತ್ತಾ ಬಂತು. ಅದಕ್ಕೆ ಕಾರಣವೂ ಇತ್ತು; ಶಿವಸೇನೆ ಮರಾಠಿಗಳ ಅಂದಿನ ಅಗತ್ಯವನ್ನು ಇಟ್ಟುಕೊಂಡು ಹುಟ್ಟಿಕೊಂಡ ಪಕ್ಷವಾದ್ದರಿಂದ ಜನವಿರೋಧಿ ನೀತಿಯನ್ನು ನಿರ್ಲಕ್ಷಿಸುವುದು ಸಾಧ್ಯವಿರಲಿಲ್ಲ.

ಇದೇ ಕಾರಣಕ್ಕೆ ಉದ್ಧವ್‌ ಠಾಕ್ರೆ ‘ನಮಗೆ ಓರ್ವ ಸ್ನೇಹಿತ ಮಾತ್ರವಲ್ಲ ಜನ ಸಾಗರದ ಬೆಂಬಲವೇ ಇದೆ’ ಎಂದಿದ್ದರು. ಜನರಿಂದ ಹುಟ್ಟಿಕೊಂಡ ಪಕ್ಷವೊಂದು ತಳೆದ ಸೂಕ್ತ ನಿಲುವು ಅದು.

ಅವಿಶ್ವಾಸ ನಿರ್ಣಯ ಹೆಚ್ಚಿಸಿದ ಮುನಿಸು

ಇವೆಲ್ಲದರ ನಡುವೆ ಜುಲೈ 20ರ ಅವಿಶ್ವಾಸ ನಿರ್ಣಯ ಬಂತು. ಇದರಲ್ಲಿ ಶಿವಸೇನೆ ತನ್ನ ಜತೆಗೆ ನಿಲ್ಲಲಿದೆ ಎಂದು ಬಿಜೆಪಿ ಅಂದುಕೊಂಡಿತ್ತು. ಆರಂಭದಲ್ಲಿ ಶಿವಸೇನೆಯು ಬಿಜೆಪಿ ಪರ ನಿಲ್ಲುವಂತೆ ವಿಪ್‌ ಜಾರಿ ಮಾಡಿತ್ತು. ಆದರೆ ನಂತರ ಹಿಂತೆಗೆದುಕೊಂಡು ಅವಿಶ್ವಾಸ ನಿರ್ಣಯದಿಂದ ದೂರವೇ ಉಳಿಯಿತು.

ಹೀಗೆ ಅವಿಶ್ವಾಸ ನಿರ್ಣಯ ಎರಡೂ ಪಕ್ಷಗಳ ಬಿರುಕನ್ನು ದೊಡ್ಡದು ಮಾಡಿದೆ. ಮಹಾರಾಷ್ಟ್ರದಲ್ಲಿ ಏಕಾಂಗಿ ಸ್ಪರ್ಧೆಗೆ ಅಣಿಯಾಗುವಂತೆ ಕಾರ್ಯಕರ್ತರಿಗೆ ಅಮಿತ್ ಶಾ ಸೂಚನೆ ನೀಡಿದ್ದಾರೆ. ಇದಕ್ಕೆ ಸೋಮವಾರದ ಶಿವಸೇನೆ ಮುಖವಾಣಿ ‘ಸಾಮ್ನಾ’ದಲ್ಲಿ ಉದ್ಧವ್‌ ಠಾಕ್ರೆ ಪ್ರತ್ಯುತ್ತರ ನೀಡಿದ್ದಾರೆ. “ನಾನು ಜನಸಾಮಾನ್ಯರ ಕನಸುಗಳ ಸಾಕಾರಕ್ಕೆ ಹೋರಾಡುತ್ತೇನೆಯೇ ವಿನಾ ಮೋದಿ ಕನಸುಗಳಿಗಾಗಿ ಅಲ್ಲ. ನಮಗೆ ಓರ್ವ ಸ್ನೇಹಿತ ಮಾತ್ರವಲ್ಲ ಜನ ಸಾಗರದ ಬೆಂಬಲವೇ ಇದೆ. ನನಗೂ ಬೇಟೆಯಾಡುವ ಹಂಬಲವಿದೆ. ಆದರೆ ಇದಕ್ಕಾಗಿ ಇನ್ನೊಬ್ಬರ ಹೆಗಲ ಮೇಲೆ ಬಂದೂಕು ಇಡುವುದಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ಬೇಟೆಯಾಡಲು ಬಂದೂಕೇ ಬೇಕಿಲ್ಲ,” ಎಂದಿದ್ದಾರೆ.

ಈ ಮೂಲಕ ಏಕಾಂಗಿ ಸ್ಪರ್ಧೆಗೆ ನಾವೂ ಸಿದ್ಧ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಪರಿಣಾಮ ಏನಾಗಬಹುದು?:

ಶಿವಸೇನೆ ಮತ್ತು ಬಿಜೆಪಿ ನಡುವೆ ಅಂಥಹ ವ್ಯತ್ಯಾಸವನ್ನು ಜನರೂ ಗುರುತಿಸಿದವರಲ್ಲ, ಅತ್ತ ಬಿಜೆಪಿ ಕಾರ್ಯಕರ್ತರಿಗೂ ಆ ವ್ಯತ್ಯಾಸಗಳು ಹೆಚ್ಚಾಗಿ ಗೊತ್ತಿಲ್ಲ. ಇಂಥಹ ಹೊತ್ತಲ್ಲಿ ಶಿವಸೇನೆ ಜತೆಗೆ ಕಡಿದುಕೊಳ್ಳುತ್ತಿರುವ ಮೈತ್ರಿ ಚುನಾವಣೆ ಸಂದರ್ಭ ತಳಮಟ್ಟದಲ್ಲಿ ಯಾವ ಪರಿಣಾಮಗಳನ್ನು ಬೀರಲಿದೆ ಎಂಬುದು ಕುತೂಹಲ ಹುಟ್ಟುಹಾಕಿದೆ.

ಇವೆಲ್ಲದರ ಜತೆಗೆ ಬಿಜೆಪಿ ವಿರುದ್ಧ ಹರಿಹಾಯುವ ಕೆಲಸವನ್ನೂ ಶಿವಸೇನೆ ನಡೆಸುತ್ತಿದೆ. ಬಿಜೆಪಿ ಹಿಂದೂ ಸಮಾಜಕ್ಕೂ ದ್ರೋಹ ಬಗೆದಿದೆ, ಜನರಿಗೂ ಮೋಸ ಮಾಡಿದೆ ಎಂಬುದನ್ನು ಪಕ್ಷ ಘಂಟಾಘೋಷವಾಗಿ ಹೇಳುತ್ತಿರುವುದು ಕಮಲ ಪಕ್ಷದ ನಾಯಕರಿಗೆ ನುಂಗಲಾರದ ತುತ್ತಾಗಿದೆ.

ಇದಲ್ಲದೆ ಶಿವಸೇನೆ ಬಿಜೆಪಿ ವಿರೋಧಿ ಪಕ್ಷಗಳ ಜತೆ ಒಂದು ಹಂತಕ್ಕೆ ಮಾತನಾಡುವ ಸ್ಥಿತಿಗೆ ಬಂದು ನಿಂತಿದೆ. ಒಂದೊಮ್ಮೆ ಇದು ಮೈತ್ರಿ ಹಂತಕ್ಕೆ ಹೋದರೆ ಬಿಜೆಪಿಗೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಬರೋಬ್ಬರಿ 48 ಲೋಕಸಭಾ ಕ್ಷೇತ್ರಗಳಿರುವ ಮಹಾರಾಷ್ಟ್ರದಲ್ಲಿ 2014ರಲ್ಲಿ ಬಿಜೆಪಿ ಮತ್ತು ಶಿವಸೇನೆ ಕ್ರಮವಾಗಿ 23 ಮತ್ತು 18 ಸ್ಥಾನ ಸೇರಿ 41 ಸ್ಥಾನಗಳನ್ನು ಬಾಚಿಕೊಂಡಿದ್ದವು. ವಿರೋಧಿಗಳ ಜತೆ ಶಿವಸೇನೆ ಹೋದಲ್ಲಿ ಇವುಗಳಲ್ಲಿ ಮುಕ್ಕಾಲು ಪಾಲು ಸೀಟುಗಳು ಬಿಜೆಪಿಯ ಕೈತಪ್ಪಲಿವೆ. ಅದರ ಪರಿಣಾಮ 2019ರ ಲೋಕಸಭೆಯಲ್ಲಿ ಏನಾಗಬಹುದು ಎಂಬುದನ್ನು ಸಹಜವಾಗಿಯೇ ಊಹಿಸಬಹುದಾಗಿದೆ.

ಸಿನಿಮಾ ಸ್ಕೋಪ್:

ಈ ಬಾರಿ ಪ್ರಚಾರಕ್ಕೆ ಶಿವಸೇನೆ ಬೇರೆಯದೇ ಆಯಾಮವನ್ನೂ ನೀಡುತ್ತಿದೆ. ಚುನಾವಣೆಗೆ ಕೆಲವು ದಿನಗಳ ಅಂತರದಲ್ಲಿ 2019ರಲ್ಲಿ ಠಾಕ್ರೆ ಸಿನಿಮಾ ಬಿಡುಗಡೆಯಾಗಲಿದೆ. ಹಿಂದೂ ಹೃದಯ ಸಾಮ್ರಾಟ್‌ ಎಂದು ಕರೆಸಿಕೊಂಡ ಬಾಳಾ ಠಾಕ್ರೆಯ ಜೀವನಾಧಾರಿತ ಕತೆ ಇದು. ಅಪ್ರತಿಮ ನಟ ನವಾಜುದ್ದೀನ್ ಸಿದ್ಧಿಕಿ ಇದರಲ್ಲಿ ಠಾಕ್ರೆ ಪಾತ್ರವನ್ನು ನಿರ್ವಹಿಸಿದ್ದಾರೆ. ಸಮಾಜದಲ್ಲಿ ತುಳಿತಕ್ಕೊಳಗಾದವರಿಗಾದ ಅನ್ಯಾಯದ ವಿರುದ್ಧ ಹೋರಾಡುವ ಬಾಳಾ ಠಾಕ್ರೆ ಪಾತ್ರ ಸಿನಿಮಾದಲ್ಲಿ ಇರಲಿದೆ ಎಂದು ಉದ್ಧವ್‌ ಈಗಾಗಲೇ ಟ್ರೇಲರ್ ಬಿಡುಗಡೆ ಸಂದರ್ಭದಲ್ಲಿ ಹೇಳಿದ್ದಾರೆ. ಚುನಾವಣೆಗೂ ಮುನ್ನ ಬಿಡುಗಡೆಯಾಗಲಿರುವ ಈ ಸಿನಿಮಾ ಜನರ ಮೇಲೆ ಬೀರಲಿರುವ ಪರಿಣಾಮಗಳು ಶಿವಸೇನೆಯ ಫಲಿತಾಂಶವನ್ನೂ ನಿರ್ಧರಿಸಲಿವೆ.

ಒಟ್ಟಾರೆ ಭಿನ್ನ ಪ್ರಚಾರ, ತಾವೇ ನಿಜವಾದ ಹಿಂದೂ ಸಮಾಜದ ಪ್ರತಿನಿಧಿಗಳು ಎಂದು ಬಿಂಬಿಸಿಕೊಳ್ಳುವ ಪರಿ, ಜತೆಗೆ ಜನಸಾಮಾನ್ಯರ ಕಲ್ಯಾಣದ ಆಶಯ ನಮಗೆ ಯಾವತ್ತೂ ಇದೆ ಎಂಬುದನ್ನು ಮನವರಿಕೆ ಮಾಡುತ್ತಲೇ ಶಿವಸೇನೆ ಚುನಾವಣೆಗೆ ಸಜ್ಜಾಗಿದೆ. ಈ ಸೂತ್ರದ ಸೋಲು-ಗೆಲುವು ಶಿವಸೇನೆಯಾಚೆಗೂ ಪರಿಣಾಮ ಬೀರಲಿದೆ.