‘ಅಂತರ್‌ನಂಬಿಕೆ’ಗಳ ನಡುವಿನ  ಸಂಬಂಧ: ಕರ್ನಾಟಕ ಹೈಕೋರ್ಟ್‌ನ ಹೊಸ ದೃಷ್ಟಿಕೋನ!
COVER STORY

‘ಅಂತರ್‌ನಂಬಿಕೆ’ಗಳ ನಡುವಿನ ಸಂಬಂಧ: ಕರ್ನಾಟಕ ಹೈಕೋರ್ಟ್‌ನ ಹೊಸ ದೃಷ್ಟಿಕೋನ!

ಇವತ್ತು ದೇಶದಲ್ಲಿ ಹೆಚ್ಚುತ್ತಿರುವ ಧಾರ್ಮಿಕ ಅಸಹಿಷ್ಣತೆಯ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ನೀಡಿದ ಈ ತೀರ್ಪು ಮಹತ್ವ ಪಡೆದುಕೊಂಡಿದೆ. ಪ್ರೀತಿ, ವೈವಾಹಿಕ ಸಂಬಂಧಗಳು ಧರ್ಮ ಮೀರಿದ ಬೆಸುಗೆ ಎಂದು ಪೊಲೀಸ್ ಇಲಾಖೆಗೆ ಕಿವಿಮಾತು ಹೇಳಿದೆ.

ಶಿವಮೊಗ್ಗ ಜಿಲ್ಲೆ ಗಾಜನೂರಿನ ತಿಮ್ಕಾಪುರ ಗ್ರಾಮದ ಸುಮ ಅಲಿಯಾಸ್ ಸುಮಯ್ಯಾ ಪ್ರಕರಣದಲ್ಲಿ ಹೈಕೋರ್ಟ್‌ ಸೋಮವಾರ ನೀಡಿದ ತೀರ್ಪು ಗಮನಸೆಳೆಯುವಂತಿದೆ.

ಭಿನ್ನ ಧರ್ಮಗಳ ನಡುವಿನ ವಯಸ್ಕರರು ಪರಸ್ಪರ ಇಷ್ಟಪಟ್ಟು ಮದುವೆಯಾಗುವುದು ‘ಸಾಮಾಜಿಕ ಅಪರಾಧ’ ಎಂದು ಪರಿಗಣಿಸುತ್ತಿರುವ ಈ ದಿನಗಳಲ್ಲಿ, ಅಂತಹ ಸಂಬಂಧಗಳನ್ನು ಹೊಸ ಆಯಾಮದ ಅರ್ಥದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ನೋಡಿದೆ. ವಿಶೇಷ ಎಂದರೆ, 6 ಪುಟಗಳ ತನ್ನ ಆದೇಶದಲ್ಲಿ ಎಲ್ಲಿಯೂ ಧರ್ಮದ ನೆಲೆಯಲ್ಲಿ ಬುಡಕಟ್ಟು ಸಮುದಾಯದ ಯುವತಿ ಹಾಗೂ ಮುಸ್ಲಿಂ ಯುವಕನ ನಡುವಿನ ಪ್ರೀತಿ ಹಾಗೂ ವೈವಾಹಿಕ ಸಂಬಂಧವನ್ನು ನೋಡಲು ಹೋಗೇ ಇಲ್ಲ. ಬದಲಿಗೆ ಇದೊಂದು ‘ಅಂತರ್‌ನಂಬಿಕೆ’ಗಳ ನಡುವಿನ ಸಂಬಂಧ ಎಂದು ನ್ಯಾಯಮೂರ್ತಿಗಳಾದ ರಾಘವೇಂದ್ರ ಚೌಹಾಣ್ ಮತ್ತು ಎಚ್. ಟಿ. ನರೇಂದ್ರ ಪ್ರಸಾದ್ ವ್ಯಾಖ್ಯಾನಿಸಿದ್ದಾರೆ.

ಉತ್ತರ ಪ್ರದೇಶದ ಗಾಝೀಯಾಬಾದ್ ನ್ಯಾಯಾಲಯದ ಆವರಣದಲ್ಲಿ ಮಂಗಳವಾರ ಇಂತಹದ್ದೇ ಪ್ರಕರಣದಲ್ಲಿ ನ್ಯಾಯ ಕೋರಿ ಬಂದವರ ಮೇಲೆ ಹಲ್ಲೆ ನಡೆದಿದೆ. ಎರಡು ಭಿನ್ನ ಧರ್ಮಗಳ ಯುವಕ- ಯುವತಿ ಮದುವೆಗೆ ವಿರೋಧ ವ್ಯಕ್ತವಾದ ಕಾರಣ ನ್ಯಾಯಾಲಯಕ್ಕೆ ಬಂದಿದ್ದರು. ಅಲ್ಲಿಯೇ ಮದುವೆಯಾಗಲು ತೀರ್ಮಾನಿಸಿದ್ದರು. ಆದರೆ ಈ ಸಮಯದಲ್ಲಿ ಅವರ ಮೇಲೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.

ದೇಶದಲ್ಲಿ ಪರಿಸ್ಥಿತಿ ಹೀಗಿರುವಾಗ, ಹೆಬಿಯಸ್ ಕಾರ್ಪಸ್‌ ಅರ್ಜಿ ರೂಪದಲ್ಲಿ ತನ್ನ ಮುಂದೆ ಬಂದ ಪ್ರಕರಣದಲ್ಲಿ ವಿಭಾಗೀಯ ಪೀಠ ಕೇವಲ ಆದೇಶ ಅಷ್ಟೆ ಅಲ್ಲ, ಅವರವರ ಇಚ್ಚೆಗೆ ತಕ್ಕಹಾಗೆ ವಯಸ್ಕರರು ಈ ದೇಶದಲ್ಲಿ ವೈವಾಹಿಕ ಸಂಬಂಧ ಹೊಂದಿರುವುದು ಸಂವಿಧಾನ ಬದ್ಧ ಹಕ್ಕು ಎಂಬುದನ್ನು ಎತ್ತಿ ಹಿಡಿದಿದೆ. ಜತೆಗೆ, ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಹೊಣೆಗಾರಿಕೆ, ತಪ್ಪಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದೆ.

ಹೈಕೋರ್ಟ್‌ ಆದೇಶದ ಪ್ರತಿ. ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೀಡಿದ ಸೂಚನೆಗಳು ಹೀಗಿವೆ. 
ಹೈಕೋರ್ಟ್‌ ಆದೇಶದ ಪ್ರತಿ. ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನೀಡಿದ ಸೂಚನೆಗಳು ಹೀಗಿವೆ. 

Also read: ಸಕ್ರೆಬೈಲ್ ಆನೆಬಿಡಾರದಲ್ಲಿ ಹುಟ್ಟಿದ ಅಂತರ್‌ ಧರ್ಮೀಯ ಪ್ರೀತಿಗೆ ಹೈಕೋರ್ಟ್‌ ಶ್ರೀರಕ್ಷೆ

ಶಿವಮೊಗ್ಗ ಸಕ್ರೆಬೈಲು ಆನೆ ಬಿಡಾರದಲ್ಲಿ ಕಾವಾಡಿಯಾಗಿ ಕೆಲಸ ಮಾಡುತ್ತಿದ್ದ ರೆಹಮಾನ್ ಪಾಶ ಎಂಬುವವರು ತನ್ನ ಪತ್ನಿ ಕಾಣೆಯಾಗಿದ್ದಾರೆ ಎಂದು ಶುಕ್ರವಾರ ಹೈಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆಗೆ ಸೋಮವಾರ ಎತ್ತಿಕೊಂಡ ವಿಭಾಗೀಯ ಪೀಠ ಬೆಳಗ್ಗೆಯೇ ಸುಮ ಅಲಿಯಾಸ್ ಸುಮಯಾರಿಗೆ ಆಲೋಚನೆ ಮಾಡಲು ಸಮಯ ನೀಡಿತ್ತು. ಸಂಜೆ ನಾಲ್ಕು ಗಂಟೆಗೆ ಚೇಂಬರ್‌ನಲ್ಲಿ ಸುಮರ ಹೇಳಿಕೆ ದಾಖಲಿಸಿಕೊಂಡಿತು. ನಂತರ ನೀಡಿದ ತೀರ್ಪಿನಲ್ಲಿ ‘ವೈವಾಹಿಕ ಸಂಬಂಧ’ವನ್ನು ಗೌರವಿಸಿ ಮತ್ತು ರಕ್ಷಿಸಿ ಎಂದು ಪೊಲೀಸರಿಗೆ ಸೂಚಿಸಿತು.

ಆದೇಶದ ಪೂರ್ಣ ಪ್ರತಿಯಲ್ಲಿ ಇಲ್ಲಿ ಪಡೆದುಕೊಳ್ಳಬಹುದು.

WPHC72-18-23-07-2018.pdf
download