samachara
www.samachara.com
ಅಂದು ದಾದ್ರಿ; ಇಂದು ಅಲ್ವಾರ್: ಗೋವಿನ ರಾಜಕಾರಣದ ಚರ್ಚೆಗೆ ನಾಂದಿ ಹಾಡಿದ ರಕ್ಬರ್ ಹತ್ಯೆ
COVER STORY

ಅಂದು ದಾದ್ರಿ; ಇಂದು ಅಲ್ವಾರ್: ಗೋವಿನ ರಾಜಕಾರಣದ ಚರ್ಚೆಗೆ ನಾಂದಿ ಹಾಡಿದ ರಕ್ಬರ್ ಹತ್ಯೆ

ಇಲ್ಲೊಂದು ಹತ್ಯೆ ನಡೆದಿವೆ. ಅದೂ ಹಾಡುಹಗಲೇ ವ್ಯಕ್ತಿಯೊಬ್ಬನನ್ನು ಬಡಿದು ಕೊಲ್ಲಲಾಗಿದೆ. ಅದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ನಂತರ ‘ಕೊಂದವರು ನಾವಲ್ಲ’ ಎಂದು ಗೋರಕ್ಷಕರು ಮತ್ತು ಪೊಲೀಸರು ಜಾರಿಕೊಳ್ಳುತ್ತಿದ್ದಾರೆ.

ಅಂದು ಉತ್ತರ ಪ್ರದೇಶದ ದಾದ್ರಿ; ಇಂದು ರಾಜಸ್ಥಾನದ ಅಲ್ವಾರ್.

ದೇಶದ ಎರಡು ಭಿನ್ನ ರಾಜ್ಯಗಳಲ್ಲಿ ಮೂರು ವರ್ಷಗಳ ಅಂತರದಲ್ಲಿ ನಡೆದ ಪ್ರತ್ಯೇಕ ಘಟನೆಗಳು ಒಂದೇ ಮಾದರಿಯ ಪ್ರತಿಕ್ರಿಯೆಗೆ ಒಳಗಾಗಿವೆ. ದೇಶದಲ್ಲಿ ಮತ್ತೊಮ್ಮೆ ‘ಗೋವಿನ ರಾಜಕೀಯ’ದ ಸುತ್ತ ಸಾಮಾಜಿಕ ಚರ್ಚೆಗಳು ಆರಂಭವಾಗಿವೆ.

ನಾಲ್ಕು ದಿನಗಳ ಹಿಂದೆ ಬಿಜೆಪಿ ಆಡಳಿತವಿರುವ ರಾಜಸ್ಥಾನದ ಅಲ್ವಾರ್‌ ನಗರದಲ್ಲಿ ದನಗಳನ್ನು ಕಾಲ್ನಡಿಗೆಯಲ್ಲಿ ಕರೆದುಕೊಂಡು ಹೋಗುತ್ತಿದ್ದರು ಎಂಬ ಕಾರಣಕ್ಕೆ ಇಬ್ಬರ ಮೇಲೆ ಹಲ್ಲೆ ನಡೆದಿತ್ತು. ಘಟನೆಯಲ್ಲಿ ರಕ್ಬರ್‌ ಅಲಿಯಾಸ್‌ ಅಕ್ಬರ್‌, ಅಸ್ಲಾಂ ಖಾನ್ ಎಂಬಿಬ್ಬರು ಗಾಯಗೊಂಡಿದ್ದರು. ಈ ಸಮಯದಲ್ಲಿ ಸಕಾಲದಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸದೆ ಪೊಲೀಸರು ಕರ್ತವ್ಯ ಲೋಪ ಎಸಗಿದ್ದರು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡ ರಕ್ಬರ್ ಶುಕ್ರವಾರ ಸಾವನ್ನಪ್ಪಿದರು. ಇದು ರಾಷ್ಟಮಟ್ಟದಲ್ಲಿ ಸುದ್ದಿಯಾದ ನಂತರ ಈಗ ಹತ್ಯೆ ಆರೋಪವನ್ನು ಸ್ಥಳೀಯ ಗೋ ರಕ್ಷಕರು ಹಾಗೂ ಪೊಲೀಸರು ಹೊರಿಸಿಕೊಳ್ಳುತ್ತಿದ್ದಾರೆ.

ಹಲ್ಲೆ ನಡೆಸುತ್ತಿದ್ದ ವೇಳೆ, ಗಲಭೆಕೋರರು ತಮ್ಮನ್ನು ತಾವು ‘ಶಾಸಕರ ಜನರು’ ಎಂದು ಹೇಳಿದ್ದಾಗಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ಲಾಂ ಖಾನ್‌ ಸಾಕ್ಷಿ ನುಡಿದಿದ್ದಾರೆ. ಘಟನೆಯ ಹೊಣೆ ಪರೋಕ್ಷವಾಗಿ ತಮ್ಮ ಮೇಲೆ ಬೀಳುತ್ತಿದ್ದಂತೆ, ಸ್ಥಳೀಯ ಬಿಜೆಪಿ ಶಾಸಕ, ಪೊಲೀಸರನ್ನೇ ಆರೋಪಿಗಳನ್ನಾಗಿಸಿದ್ದಾರೆ.

ಘಟನೆಗೆ ಯಾರು ಹೊಣೆ?:

ಶುಕ್ರವಾರ 32 ವರ್ಷದ ರಕ್ಬರ್‌ ಹಾಗೂ 20 ವರ್ಷದ ಅಸ್ಲಾಂ ಖಾನ್ ದನವೊಂದನ್ನು ಕಾಲ್ನಡಿಗೆಯಲ್ಲಿ ನಡೆಸಿಕೊಂಡು ಅಲ್ವಾರ್‌ನ ನಗರ ರಸ್ತೆಯಲ್ಲಿ ಹೊರಟಿದ್ದರು. ಅಲ್ಲಿನ ರಾಮ್‌ಗರ್‌ ಪೊಲೀಸ್‌ ಠಾಣೆ ವ್ಯಾಪ್ತಿಗೆ ಬರುವ ಲಾಲ್ವಂಡಿಯಲ್ಲಿ ಗ್ರಾಮಸ್ಥರು ಅವರನ್ನು ತಡೆದು ನಿಲ್ಲಿಸಿದ್ದರು. “ನಮ್ಮನ್ನು ಕಂಡ ತಕ್ಷಣ ಹೆದರಿಸಲು ಗುಂಡು ಹಾರಿಸಿದರು. ರಕ್ಬರ್‌ ಕೈಯಲ್ಲಿದ್ದ ಬಾರು ಕೋಲು ಎಸೆದು ಓಡಲು ಆರಂಭಿಸಿದರು. ನಾನು ಅಲ್ಲೇ ಇದ್ದ ಪೊದೆ-ಗದ್ದೆಗಳಲ್ಲಿ ಅಡಗಿಕೊಂಡೆ. ರಕ್ಬರ್‌ಗೆ ಏನಾಯ್ತು ಎಂಬುದು ನನಗೆ ತಿಳಿಯಲಿಲ್ಲ,” ಎಂದು ಘಟನೆಯನ್ನು ತೀವ್ರ ಹಲ್ಲೆಯ ನಂತರವೂ ಬದುಕುಳಿದಿರುವ ಅಸ್ಲಾಂ ಖಾನ್ ವಿವರಿಸುತ್ತಾರೆ.

ಘಟನೆ ಸಂಬಂಧ ಧರ್ಮೇಂದ್ರ, ಪರಮ್ಜೀತ್‌, ನರೇಶ್, ಸುರೇಶ್ ಮತ್ತು ವಿಜಯ್ ಎಂಬುವವರ ಮೇಲೆ ದೂರು ದಾಖಲಿಸಲಾಗಿದೆ. ಇವರು ಹಲ್ಲೆ ನಡೆಸುತ್ತಿದ್ದ ವೇಳೆ ತಾವು ಸ್ಥಳೀಯ ಶಾಸಕರ ಕಡೆಯವರು, ಪೊಲೀಸರು ಏನು ಮಾಡಲು ಸಾಧ್ಯವಿಲ್ಲ ಎಂದು ಹೇಳಿಕೊಂಡಿದ್ದರು ಎಂಬ ಅಸ್ಲಾಂ ಹೇಳಿಕೆ ದಾಖಲಾಗಿದೆ.

ಘಟನೆ ನಡೆದ ದಿನ ಪೊಲೀಸರು ನಡೆದುಕೊಂಡ ಕ್ರಮದ ಬಗ್ಗೆಯೂ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ. ಮಧ್ಯ ರಾತ್ರಿ 1 ಗಂಟೆಗೆ ನಡೆದ ಘಟನಾ ಸ್ಥಳಕ್ಕೆ ಪೊಲೀಸರು ಮುಂಚಿತವಾಗಿ ತಲುಪಿದರೂ, ಬೆಳಗ್ಗಿನ ಜಾವ 4 ಗಂಟೆವರೆಗೆ ಗಾಯಗೊಂಡ ರಕ್ಬರ್ ಹಾಗೂ ಅಸ್ಲಾಂರನ್ನು ಆಸ್ಪತ್ರೆಗೆ ಸೇರಿಸಿರಲಿಲ್ಲ. ಇಂತಹ ಅಮಾನವೀಯ ಖಾಕಿ ನಡೆಯ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ.

ಇದರಿಂದ ತಪ್ಪಿಸಿಕೊಳ್ಳಲು ಘಟನೆಗೆ ಕಾರಣರಾದ ಅಧಿಕಾರಿ ಹಾಗೂ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ. ಜತೆಗೆ, ಹಲ್ಲೆ ನಡೆಸಿದ ಪೈಕಿ ಮೂವರು ‘ಗೋ ರಕ್ಷಕ’ರನ್ನು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಶಾಸಕ ಹಾಗೂ ಹಿಂದೂ ಸಂಘಟನೆಗಳು ಪೊಲೀಸರ ವಿರುದ್ಧ ತಿರುಗಿ ಬೀಳಲು ಇದು ಕಾರಣವಾಗಿದೆ.

ಪೊಲೀಸರ ನಡೆಯನ್ನು ಪ್ರಶ್ನಿಸಿರುವ ರಾಮಗರ್‌ ಶಾಸಕ ಗ್ಯಾನ್‌ ದೇವ್‌ ಅಹುಜಾ, ಪ್ರಕರಣದ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಪ್ರಕರಣದಲ್ಲಿ ಸುಖಾ ಸುಮ್ಮನೆ ಗೋ ರಕ್ಷಕರನ್ನು ಸಿಲುಕಿಸಲಾಗುತ್ತಿದೆ ಎಂಬ ಹೇಳಿಕೆಯನ್ನು ಅವರು ನೀಡಿದ್ದಾರೆ.

ಅತ್ತ ಅಸ್ಲಾಂ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಹುಜಾ, "ಯಾರಾದರೂ ಹೀಗೆ ಹೇಳಲು ಸಾಧ್ಯವೇ? ಭ್ರಷ್ಟ ಐಪಿಎಸ್ ಅಧಿಕಾರಿಗಳಾದ (ಸಹಾಯಕ ಎಸ್ಪಿ) ಅನಿಲ್ ಬೆನಿವಾಲ್ ಮತ್ತು (ಮಾಜಿ ಅಲ್ವಾರ್ ಎಸ್ಪಿ) ರಾಹುಲ್ ಪ್ರಕಾಶ್ ಅವರುಗಳು ಅಸ್ಲಾಂ ತಲೆಯಲ್ಲಿ ಈ ರೀತಿ ತುಂಬಿದ್ದಾರೆ. ಅವರ ಈ ವರ್ತನೆ ಮತ್ತು ಮೂರ್ಖತನದಿಂದಾಗಿ ಪೊಲೀಸರೇ ಸಿಕ್ಕಿ ಹಾಕಿಕೊಂಡಿದ್ದಾರೆ. ಆ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರೇ ಹೊಡೆದಿದ್ದಾರೆ. ಒಂದೊಮ್ಮೆ ಅವರು ಗಂಭೀರವಾಗಿ ಗಾಯಗೊಂಡಿದ್ದರೆ ಪೊಲೀಸರು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಿಲ್ಲ ಏಕೆ? ಅವರು 4 ಗಂಟೆ ತನಕ ಅವರೊಂದಿಗೆ ಏನು ಮಾಡಿದರು? ನಾನು ರಾಹುಲ್ ಪ್ರಕಾಶ್ ವಿರುದ್ಧ ಕ್ರಮಕ್ಕೆ ಆಗ್ರಹಿಸುತ್ತೇನೆ," ಎಂದಿದ್ದಾರೆ.

"ಕಳೆದ 25 ವರ್ಷಗಳಿಂದ ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಮತ್ತು ಇಂಥಹ ವಿಷಯ ಎಂದಿಗೂ ಸಂಭವಿಸಿಲ್ಲ. ನಾನು ದನ ಸಾಗಣೆ ಮಾಡುವವರನ್ನು ಯಾವತ್ತೂ ಹೊಡೆಯಬೇಡಿ, ಪೊಲೀಸರಿಗೆ ಒಪ್ಪಿಸಿ ಎಂದು ಹೇಳುತ್ತಲೇ ಬಂದಿದ್ದೇನೆ. ಆದ್ದರಿಂದ 3-4 ಏಟು ಹೊಡೆದ ನಂತರ, ಅವರು ಪೊಲೀಸರಿಗೆ ಹಸ್ತಾಂತರಿಸುತ್ತಿದ್ದರು. ಸಾವಿರಾರು ಹಸುಗಳು, ಎಮ್ಮೆಗಳು ಮತ್ತು ಎತ್ತುಗಳನ್ನು ಸ್ವತಃ ನಾನೇ ರಕ್ಷಿಸಿದ್ದೇನೆ," ಎಂಬ ವಿವರಣೆ ನೀಡಿದ್ದಾರೆ.

ಶಾಸಕರ ಹೇಳಿಕೆಗೆ ವಿರೋಧ:

ಇನ್ನು ಅಕ್ಬರ್‌ ಸಹೋದರ ಶಮೀಮ್‌ ಶಾಸಕರ ಹೇಳಿಕೆಯನ್ನು ತಳ್ಳಿ ಹಾಕಿದ್ದಾರೆ. “ಗೋ ರಕ್ಷಕರು ಅಕ್ಬರ್‌ ಮೇಲೆ ಸಂಪೂರ್ಣ ಹಲ್ಲೆ ಮಾಡಿ ನಂತರ ಪೊಲೀಸರನ್ನು ಕರೆದು ಅವರಿಗೆ ಒಪ್ಪಿಸಿದ್ದಾರೆ. ಪ್ರಕರಣವನ್ನು ದುರ್ಬಲಗೊಳಿಸಲು ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ,” ಎಂದು ಅವರು ಕಿಡಿಕಾರಿದ್ದಾರೆ.

ತಮ್ಮ ಕುಟುಂಬಕ್ಕೆ ಹರ್ಯಾಣ ಮತ್ತು ರಾಜಸ್ಥಾನ ಸರಕಾರ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿಯೂ ಹೇಳಿದೆ ಎಂದವರು ಮಾಹಿತಿ ನೀಡಿದ್ದಾರೆ.

ಪ್ರಕರಣದಲ್ಲಿ ತಪ್ಪಾಗಿದೆ ಎಂದು ರಾಜಸ್ಥಾನ ಪೊಲೀಸ್ ಇಲಾಖೆ ಒಪ್ಪಿಕೊಂಡಿದೆ. ಹಿರಿಯ ಪೊಲೀಸ್‌ ಅಧಿಕಾರಿ ಆರ್‌.ಎನ್‌.ಎಸ್‌. ರೆಡ್ಡಿ , "ಹಲ್ಲೆಗೊಳಗಾದವರನ್ನು ತಕ್ಷಣ ಆಸ್ಪತ್ರೆಗೆ ತೆಗೆದುಕೊಂಡು ಹೋಗುವ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಪೊಲೀಸರಿಂದ ತಪ್ಪು ನಡೆದಿದೆ,’’ ಎಂದು ಮಾಧ್ಯಮಗಳ ಮುಂದೆ ಒಪ್ಪಿಕೊಂಡಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಒಪಿ ಗಲ್ಹೋತ್ರಾ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.

ಘಟನೆಯ ವಿಡಿಯೋ ಒಂದು ವೈರಲ್‌ ಆಗಿದ್ದು ಇದರಲ್ಲಿ ಅಮಾನತ್ತುಗೊಂಡ ಘಟನಾ ಸ್ಥಳದಲ್ಲಿದ್ದ ಎಎಸ್‌ಐ ಮೋಹನ್‌ ಸಿಂಗ್, "ಇದು ನನ್ನದೇ ತಪ್ಪು. ನನಗೆ ಶಿಕ್ಷೆ ನೀಡಿ ಅಥವಾ ನನ್ನ ತಪ್ಪನ್ನು ಕ್ಷಮಿಸಿ,” ಅಂತ ಕೇಳಿಕೊಂಡಿದ್ದಾರೆ.

ಗಾಯಗೊಂಡ ಸಂತ್ರಸ್ತರನ್ನು ಆಸ್ಪತ್ರೆಗೆ ಸೇರಿಸುವಲ್ಲಿ ತೋರಿದ ವಿಳಂಬ ಆತನ ಜೀವವನ್ನೇ ಬಲಿ ಪಡೆದಿದೆ ಎಂಬುದನ್ನು ಪೊಲೀಸರೇ ಒಪ್ಪಿಕೊಂಡಿದ್ದಾರೆ. ಆದರೆ, ಗೋ ರಕ್ಷಕರು ಹಲ್ಲೆಯನ್ನೇ ಮಾಡಿಲ್ಲ. ಇದು ಪೊಲೀಸರೇ ಮಾಡಿದ್ದು ಎಂದು ವಾದಿಸುತ್ತಿದ್ದಾರೆ. ಘಟನೆ ನಂತರ ಮಡಿದ ಕುಟುಂಬಕ್ಕೆ ಸಾಂತ್ವಾನಗಳು ಹರಿದು ಬರುತ್ತಿದೆ. ಗೋವಿನ ಸುತ್ತ ಮತ್ತೊಂದು ಸುತ್ತಿನ ಚರ್ಚೆಗೆ ಇದೊಂದು ಸಾವು ಕಾರಣವಾಗಿದೆ. ಮೂರು ವರ್ಷಗಳ ಹಿಂದೆ ನಡೆದ ದಾದ್ರಿ ಘಟನೆಯನ್ನು ಇದು ನೆನಪು ಮಾಡಿಕೊಡುತ್ತಿದೆ.