samachara
www.samachara.com
‘ಉಚಿತ ಬಸ್‌ ಪಾಸ್‌’: ಜನಪ್ರಿಯ ಘೋಷಣೆ ನಡುವೆ ಸಾರಿಗೆ ಸಂಸ್ಥೆಗಳಿಗೆ ಹಳೇ ಬಾಕಿಯದ್ದೇ ಚಿಂತೆ
COVER STORY

‘ಉಚಿತ ಬಸ್‌ ಪಾಸ್‌’: ಜನಪ್ರಿಯ ಘೋಷಣೆ ನಡುವೆ ಸಾರಿಗೆ ಸಂಸ್ಥೆಗಳಿಗೆ ಹಳೇ ಬಾಕಿಯದ್ದೇ ಚಿಂತೆ

ಸರಕಾರ 4 ಸಾರಿಗೆ ಸಂಸ್ಥೆಗಳಿಗೆ ಪಾವತಿ ಮಾಡಬೇಕಿರುವ ಹಳೆ ಬಾಕಿ 1945.62 ಕೋಟಿ ರೂಪಾಯಿ. ಹೀಗಿರುವಾಗಲೇ ಹೊಸದಾಗಿ ಉಚಿತ ಬಸ್‌ ಪಾಸ್‌ ಘೋಷಣೆಗೆ ಮುಂದಾಗಿದ್ದಾರೆ ಸಿಎಂ ಕುಮಾರಸ್ವಾಮಿ. 

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಿಂದ ಆರಂಭವಾಗಿ ಸರಕಾರ ರಚನೆಯಾದ ಎರಡು ತಿಂಗಳ ನಂತರವೂ ಕರ್ನಾಟಕದಲ್ಲಿ ಉಚಿತ ಬಸ್‌ಪಾಸ್‌ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಸರಿ ಸುಮಾರು 20 ಲಕ್ಷ ಜನರಿಗೆ ಸಂಬಂಧಿಸಿದ ವಿಚಾರ ಇದಾಗಿರುವುದರಿಂದ ಪ್ರತಿಭಟನೆ, ಅದರ ಹಿಂದಿನ ರಾಜಕೀಯ ಲೆಕ್ಕಾಚಾರಗಳು ಬಸ್‌ ಪಾಸ್‌ ಸುತ್ತ ಸಹಜವಾಗಿಯೇ ಗಿರಕಿ ಹೊಡೆಯುತ್ತಿವೆ.

ಹಾಗೆ ನೋಡಿದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರಕಾರದ ಬಜೆಟ್‌ನಲ್ಲೇ ಉಚಿತ ಬಸ್‌ ಪಾಸ್‌ ಘೋಷಣೆ ಮಾಡಿದ್ದರು. ಆದರೆ ಮುಂದೆ ಬಂದ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಈ ಬಗ್ಗೆ ಮೀನಾಮೇಷ ಎಣಿಸಿದ್ದು ಇದರ ಸುತ್ತ ಚರ್ಚೆ ಗರಿಗೆದರಲು ಕಾರಣವಾಗಿತ್ತು.

ಆರಂಭದಲ್ಲಿ ಬಸ್‌ಪಾಸ್‌ ಉಚಿತವಾಗಿ ನೀಡಲು ಹಿಂದೇಟು ಹಾಕಿದ ಕುಮಾರಸ್ವಾಮಿ ಇದೀಗ ಕೆಲವು ಷರತ್ತುಗಳ ಜತೆ ಉಚಿತವಾಗಿ ನೀಡಲು ಮುಂದಾಗಿದ್ದಾರೆ. ಸೋಮವಾರ ಚನ್ನಪಟ್ಟಣದಲ್ಲಿ ಅಭಿನಂದನಾ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು ‘ಸರ್ಕಾರಿ ಶಾಲೆಗೆ ತೆರಳುವ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಬಸ್‌ ನೀಡಲಾಗುವುದು ಹಾಗೂ ಆ ಕುರಿತು ನಾಳೆ (ಮಂಗಳವಾರ) ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ ಸರಕಾರಿ ಶಾಲೆ ಮಕ್ಕಳಿಗೆ ಮಾತ್ರ ಉಚಿತ ಬಸ್‌ ಪಾಸ್‌ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಡಲಾಗುತ್ತಿದೆ. 50 ಸಾವಿರ 1 ಲಕ್ಷ ರೂಪಾಯಿವರೆಗೆ ಖಾಸಗಿ ಶಾಲೆಗೆ ಡೊನೇಷನ್ ನೀಡಿದವರಿಗೆ ಸಾವಿರ ರೂಪಾಯಿ ಆಜುಬಾಜಿನಲ್ಲಿರುವ ‘ರಿಯಾಯಿತಿ ದರ’ದ ಬಸ್‌ ಪಾಸ್‌ ಪಡೆದುಕೊಳ್ಳುವ ಶಕ್ತಿ ಯಾಕಿಲ್ಲ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ. ಜತೆಗೆ ಸರಕಾರಿ ಶಾಲೆ ಬೇಡದವರಿಗೆ ಸರಕಾರಿ ಬಸ್‌ ಪಾಸ್‌ ಯಾಕೆ ಬೇಕು ಎಂಬ ನೈಜ ತರ್ಕವನ್ನೂ ಮುಂದಿಡುತ್ತಿದ್ದಾರೆ.

ಇವೆಲ್ಲದರ ನಡುವೆ ಆಸಕ್ತಿಕರ ಅಂಕಿ ಅಂಶವೊಂದು ಹೊರಬಿದ್ದಿದೆ. ಈಗ ಉಚಿತ ಬಸ್‌ ಪಾಸ್‌ ನೀಡುವುದಕ್ಕೂ ಮುನ್ನ ಈ ಹಿಂದಿನ ಉಚಿತ ಪಾಸ್‌ಗಳ ಹಣವೇ ಇನ್ನೂ ಸರಕಾರದಿಂದ ಸಾರಿಗೆ ಸಂಸ್ಥೆಗಳಿಗೆ ಪಾವತಿಯಾಗದೇ ಇರುವುದು ದಾಖಲೆಗಳಿಂದ ಬಹಿರಂಗಗೊಂಡಿದೆ. ಇದು ಉಚಿತ ಬಸ್‌ ಪಾಸ್ ಸುತ್ತ ನಡೆಯುತ್ತಿರುವ ಚರ್ಚೆಗೆ ಹೊಸ ಆಯಾಮವನ್ನು ನೀಡುತ್ತಿದೆ.

ಕರ್ನಾಟಕ ರಾಜ್ಯದ ನಾಲ್ಕು ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಮತ್ತು ಬಿಎಂಟಿಸಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿಗಳಿಗೆ ಬಸ್‌ ಪಾಸನ್ನು ನೀಡುತ್ತಿವೆ. ಈ ಎಲ್ಲಾ ರಿಯಾಯಿತಿ ದರದ ಪಾಸುಗಳಲ್ಲಿ ಸರಕಾರದ ಪಾಲು ಶೇಕಡಾ 50, ವಿದ್ಯಾರ್ಥಿಗಳ ಪಾಲು ಶೇಕಡಾ 25 ಮತ್ತು ಸಂಸ್ಥೆಯ ಪಾಲು ಶೇಕಡಾ 25. ‘7 ತರಗತಿವರೆಗೆ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡಲಾಗುತ್ತಿದೆ. ಇದರ ಜತೆಗೆ 7ನೇ ತರಗತಿಗಿಂತ ಹೆಚ್ಚಿನ ಶಿಕ್ಷಣ ಪಡೆಯುವ ಎಸ್‌ಸಿ ಮತ್ತು ಎಸ್‌ಟಿ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ನೀಡಲಾಗುತ್ತಿದೆ. ಇದಲ್ಲದೆ 8 ರಿಂದ 10 ತರಗತಿವರೆಗಿನ ವಿದ್ಯಾರ್ಥಿನಿಯರಿಗೂ ಉಚಿತ ಬಸ್‌ ಪಾಸ್‌ ಇದೆ. ಈ ಎಲ್ಲಾ ಪಾಸ್‌ಗಳ ವಿದ್ಯಾರ್ಥಿಗಳ ಪಾಲಿನ ಶೇಕಡಾ 25ರಷ್ಟು ಹಣವನ್ನು ಸರಕಾರ ಭರಿಸುತ್ತದೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಲತಾ.

ಸರಕಾರ ಬಾಕಿ ಉಳಿಸಿಕೊಂಡಿರುವ ಒಟ್ಟು ಹಣ 1945.62 ಕೋಟಿ ರೂಪಾಯಿ
ಸರಕಾರ ಬಾಕಿ ಉಳಿಸಿಕೊಂಡಿರುವ ಒಟ್ಟು ಹಣ 1945.62 ಕೋಟಿ ರೂಪಾಯಿ

ದಾಖಲೆಗಳ ಪ್ರಕಾರ, ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕೂ ಸಾರಿಗೆ ಸಂಸ್ಥೆಗಳು ಒಟ್ಟಾಗಿ 65.26 ಲಕ್ಷ ಬಸ್‌ ಪಾಸ್‌ಗಳನ್ನು ವಿತರಿಸಿವೆ. ಇದರಲ್ಲಿ ಸರಕಾರ ತನ್ನ ಪಾಲಿನ 811.63 ಕೋಟಿ ರೂಪಾಯಿಗಳನ್ನು ಬಾಕಿ ಉಳಿಸಿಕೊಂಡಿದೆ. ಇದಲ್ಲದೆ ಹಾಲಿ ಅಸ್ತಿತ್ವದಲ್ಲಿರುವ ವಿದ್ಯಾರ್ಥಿಗಳ ಉಚಿತ ಬಸ್‌ ಪಾಲಿನಲ್ಲೂ 1134 ಕೋಟಿ ರೂಪಾಯಿ ಖೋತಾ ಉಂಟಾಗಿದೆ. “ಇದು ಸರಕಾರದ ಉಚಿತ ಬಸ್‌ ಪಾಸ್‌ ಘೋಷಣೆಗಳ ಹಣ. ಇದನ್ನು ಸರಕಾರವೇ ನಮಗೆ ಭರಿಸಬೇಕು" ಎನ್ನುತ್ತಾರೆ ಮುಖ್ಯ ಸಂಚಾರಿ ವ್ಯವಸ್ಥಾಪಕ (ವಾಣಿಜ್ಯ)ರಾದ ರಾಜೇಶ್. ಹೀಗೆ ಕಳೆದ 4 ವರ್ಷಗಳಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳಿಗೆ ಒಟ್ಟಾಗಿ 1945.62 ಕೋಟಿ ರೂಪಾಯಿ ನಷ್ಟವಾಗಿದೆ.

ಅತ್ತ ಹಳೆ ಬಾಕಿ, ಇತ್ತ ಹೊಸ ಘೋಷಣೆ:

ಅತ್ತ ಸರಕಾರ ಸಾರ್ವಜನಿಕರ ಹಣದಲ್ಲಿ ಕಾರ್ಯಚರಿಸುವ ಸಾರಿಗೆ ಸಂಸ್ಥೆಗಳಿಗೆ ದೊಡ್ಡ ಮೊತ್ತದ ಹಣವನ್ನು ಬಾಕಿ ಉಳಿಸಿಕೊಂಡಿದೆ. ಇದರ ಜತೆಗೆ ಇದೀಗ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತ ಬಾಸ್‌ ಪಾಸ್‌ ನೀಡಲು ಹೊರಟಿದೆ. ಅಂದರೆ ಹಿಂದಿಗಿಂತಲೂ ಹೆಚ್ಚು ಹಣವನ್ನು ಸರಕಾರ ಸಾರಿಗೆ ಸಂಸ್ಥೆಗಳಿಗೆ ನೀಡಬೇಕು.

2017-18ರ ಲೆಕ್ಕವನ್ನೇ ತೆಗೆದುಕೊಳ್ಳುವುದಾದರೆ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡಲು ತನ್ನ ಪಾಲು ಮತ್ತು ವಿದ್ಯಾರ್ಥಿಗಳ ಪಾಲು ಸೇರಿ ಕನಿಷ್ಠ 1,000 ಸಾವಿರ ಕೋಟಿ ರೂಪಾಯಿಗಳನ್ನು ಸರಕಾರ ನೀಡಬೇಕಾಗುತ್ತದೆ. 2017-18ರಲ್ಲಿ ಕೇವಲ 552.24 ಕೋಟಿ ರೂಪಾಯಿ ಕೊಟ್ಟಿರುವ ರಾಜ್ಯ ಸರಕಾರ ಇದೀಗ ದುಪ್ಪಟ್ಟು ಹಣವನ್ನು ಎತ್ತಿಡಬೇಕಾಗಿದೆ. ಸಾಲಮನ್ನಾದಲ್ಲಿ ಬೊಕ್ಕಸ ಖಾಲಿಯಾಗಿರುವಾಗ ಈ ಹಣವನ್ನು ಸರಕಾರ ತುಂಬುವಷ್ಟು ಶಕ್ತಿಯುತವಾಗಿದೆಯೇ ಎಂಬುದು ಸದ್ಯದ ಪ್ರಶ್ನೆ. ಇವೆಲ್ಲದರ ಜತೆಗೆ ಹಳೆ ಬಾಕಿ 1945.62 ಕೋಟಿ ರೂಪಾಯಿಯನ್ನು ಪಾವತಿಸುವ ಹೊಣೆ ಸರಕಾರದ ಮೇಲಿದೆ. ಪಾವತಿಸದಿದ್ದರೆ ಮತ್ತೆ ಆ ಹಣವೂ ಪೈಸೆ ಲೆಕ್ಕದಲ್ಲಿ ಜನರ ತಲೆಗೇ ಬರುತ್ತದೆ ಎಂಬುದನ್ನು ಬಿಡಿಸ ಹೇಳಬೇಕಾಗಿಲ್ಲ.

ಮೆಟ್ರೋಗೆ ಯಾಕಿಲ್ಲ ಹೊರೆ?

ಒಂದು ಕಡೆ ಸಾರಿಗೆ ಸಂಸ್ಥೆಗಳು ಬಸ್‌ ಪಾಸ್‌ ವಿಚಾರದಲ್ಲಿ ತಮ್ಮ ಪಾಲಿನ ಶೇಕಡಾ 25 ಹಣವನ್ನು ನೀಡಿಯೂ ಸರಕಾರದ ಬಾಕಿ ಹಣದ ಭಾರವನ್ನು ಹೊರಬೇಕಿದೆ. ಅಲ್ಲದೆ ಹಿರಿಯ ನಾಗರಿಕರಿಗೆ, ವಿಶೇಷ ಚೇತನರಿಗೆ ಉಚಿತ ಅಥವಾ ರಿಯಾಯಿತಿಯ ಸೇವೆಗಳನ್ನು ಇದೇ ಸಾರಿಗೆ ಸಂಸ್ಥೆಗಳು ನೀಡಬೇಕಾಗಿದೆ. ಜನರ ದೃಷ್ಟಿಯಿಂದ ಇವೆಲ್ಲಾ ಉತ್ತಮ ಕೆಲಸಗಳಾದರೂ ಇದಕ್ಕೆ ಪ್ರತಿಫಲವಾಗಿ ಸರಕಾರದಿಂದ ಪ್ರತೀ ವರ್ಷ ಅನುದಾನ ರೂಪದಲ್ಲಿ ಸಿಗುವುದು ಬಿಡಿಗಾಸು ಮಾತ್ರ.

ಆದರೆ, ಇನ್ನೊಂದು ಕಡೆ ಸರಕಾರ ಮೆಟ್ರೋದಂತ ಐದು ಲಕ್ಷದಷ್ಟು ಜನರು ಪ್ರಯಾಣಿಸುವ ಸಾರಿಗೆ ವ್ಯವಸ್ಥೆಗೆ ಸಾವಿರಾರು ಕೋಟಿ ರೂಪಾಯಿ ಸುರಿಯುತ್ತದೆ. ಹೀಗಿದ್ದೂ ಯಾವ ಉಚಿತ ಸೇವೆಯನ್ನೂ ಈ ಸಂಸ್ಥೆ ನೀಡುವುದಿಲ್ಲ. ಜನರ ಕಷ್ಟಗಳಿಗೆ ಜತೆಯಾಗಿ ನಿಂತ ಸಂಸ್ಥೆಗಳ ಕಣ್ಣಿಗೆ ಸರಕಾರ ಸುಣ್ಣ ಬಳಿದು ಬೆಣ್ಣೆಯನ್ನು ಮೆಟ್ರೋಗೆ ನೀಡುತ್ತಿರುವುದ ಎಷ್ಟು ಸರಿ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ.

ಸರಕಾರ ಉಚಿತ ಬಸ್‌ ಪಾಸ್‌ ನೀಡಲಿ ಎಂಬುದು ಹೆಚ್ಚಿನ ಎಲ್ಲಾ ಜನರ ಆಶಯ. ಗ್ರಾಮೀಣ, ಬಡ ಕುಟುಂಬದಿಂದ ಬರುವ ಎಷ್ಟೋ ಜನರಿಗೆ ಅದರ ಉಪಯೋಗ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಉಚಿತಗಳ ಹೆಸರಿನಲ್ಲಿ, ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ರಾಜ್ಯದ ಪ್ರತಿಷ್ಠಿತ, ಜತೆಗೆ ಅಷ್ಟೇ ಅತ್ಯುತ್ತಮ ಸಾರಿಗೆ ಸಂಸ್ಥೆಗಳ ಸ್ವರೂಪ ಹಾಳಾಗದಿರಲಿ ಎಂಬುದಷ್ಟೇ ಈ ಹೊತ್ತಿನ ಆಶಯ.