samachara
www.samachara.com
1989ರಲ್ಲಿ ಬೋಫೋರ್ಸ್, 2019ರಲ್ಲಿ ರಫೇಲ್; ರಾಜೀವ್ ಗಾಂಧಿಯಂತೆ ಮಕಾಡೆ ಮಲಗ್ತಾರಾ ಮೋದಿ?
COVER STORY

1989ರಲ್ಲಿ ಬೋಫೋರ್ಸ್, 2019ರಲ್ಲಿ ರಫೇಲ್; ರಾಜೀವ್ ಗಾಂಧಿಯಂತೆ ಮಕಾಡೆ ಮಲಗ್ತಾರಾ ಮೋದಿ?

ಅದು1989ರ ಚುನಾವಣೆ. 1984ರಲ್ಲಿ 404 ಸೀಟು ಗೆದ್ದು ಅಧಿಕಾರ ಹಿಡಿದಿದ್ದ ರಾಜೀವ್‌ ಗಾಂಧಿ ಸರಕಾರವನ್ನು ‘ಬೋಫೋರ್ಸ್‌ ಹಗರಣ’ ಮಕಾಡೆ ಮಲಗಿಸಿತ್ತು. ಇದೀಗ ಸರಿಯಾಗಿ 40 ವರ್ಷಗಳ ನಂತರ 2019ರಲ್ಲಿ ‘ರಫೇಲ್‌’ ಸದ್ದು ಕೇಳಿ ಬರುತ್ತಿದೆ.

ಎನ್. ಸಚ್ಚಿದಾನಂದ

ಎನ್. ಸಚ್ಚಿದಾನಂದ

ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಕಳೆದ ಹಲವು ದಿನಗಳಿಂದ ನಡೆಯುತ್ತಿರುವ ‘ರಫೇಲ್‌ ಡೀಲ್’ ಆರೋಪ ಪ್ರತ್ಯಾರೋಪಗಳು ನಿಲ್ಲುವಂತೆ ಕಾಣಿಸುತ್ತಿಲ್ಲ. ಈ ಬಾರಿ ಕಾಂಗ್ರೆಸ್ ತನ್ನ ಕಡೆಯಿಂದ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿಯವರನ್ನು ಫೀಲ್ಡಿಗೆ ಇಳಿಸಿದೆ. ಮತ್ತು ಈ ಪ್ರಧಾನಿ ನರೇಂದ್ರ ಮೋದಿಗೆ ಈ ಹಗರಣದ ಕಳಂಕ ಮೆತ್ತಲು ಯೋಜನೆ ರೂಪಿಸಿದಂತೆ ಮೇಲ್ಮಟ್ಟಕ್ಕೆ ಕಾಣಿಸುತ್ತಿದೆ.

ಶುಕ್ರವಾರ ಅವಿಶ್ವಾಸ ನಿರ್ಣಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹರಿಹಾಯ್ದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ‘ಫ್ರಾನ್ಸ್‌ ಜತೆಗಿನ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ಹಗರಣ ನಡೆದಿದೆ. ಉದ್ಯಮಿಯೊಬ್ಬರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಫ್ರಾನ್ಸ್‌ ಸರಕಾರದೊಂದಿಗೆ ಮೋದಿ ಸರಕಾರ ಹೆಚ್ಚಿನ ಮೊತ್ತಕ್ಕೆ 36 ಯುದ್ಧ ವಿಮಾನ ಖರೀದಿಸಲು ಹೊರಟಿದೆ’ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೆ, ವಿಮಾನ ಖರೀದಿ ಮೊತ್ತವನ್ನು ಬಹಿರಂಗಗೊಳಿಸಲು ಯಾವ ಅಡ್ಡಿಯೂ ಇಲ್ಲ. ಈ ಬಗ್ಗೆ ಎರಡೂ ದೇಶಗಳ ನಡುವೆ ಯಾವ ಒಪ್ಪಂದವೂ ನಡೆದಿಲ್ಲ ಎಂದು ಸ್ವತಃ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುಯೆಲ್‌ ಮ್ಯಾಕ್ರನ್‌ ನನಗೆ ಹೇಳಿದ್ದಾರೆ,” ಎಂದಿದ್ದರು.

ಇದಕ್ಕೆ ತಕ್ಷಣ ಪ್ರತಿಕ್ರಿಯೆ ನೀಡಿದ್ದ ಫ್ರಾನ್ಸ್‌ ವಿದೇಶಾಂಗ ಇಲಾಖೆ ಈ ಬಗ್ಗೆ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತ್ತು. 2008ರ ಡೀಲ್‌ನಲ್ಲಿ ವರ್ಗೀಕೃತ ಮಾಹಿತಿ ಬಗ್ಗೆ ಒಪ್ಪಂದ ನಡೆದಿದೆ. “ಇದು ಭಾರತ ಅಥವಾ ಫ್ರಾನ್ಸ್ ರಕ್ಷಣಾ ಉಪಕರಣಗಳ ಭದ್ರತೆ ಮತ್ತು ಕಾರ್ಯಾಚರಣೆ ಸಾಮರ್ಥ್ಯದ ಮೇಲೆ ಪರಿಣಾಮ ಬೀರಲಿದೆ,” ಎಂದು ಹೇಳಿತ್ತು. "ಈ ನಿಬಂಧನೆಗಳು ಸ್ವಾಭಾವಿಕವಾಗಿ 2016 ರ ಸೆಪ್ಟೆಂಬರ್ 23 ರಂದು ಅಂತ್ಯಗೊಳ್ಳುವ 36 ರಫೇಲ್ ವಿಮಾನ ಮತ್ತು ಅದರ ಶಸ್ತ್ರಾಸ್ತ್ರಗಳನ್ನು ಸ್ವಾಧೀನಪಡಿಸಿಕೊಳ್ಳುವ IGA (ಅಂತರ ಸರ್ಕಾರ ಒಪ್ಪಂದ) ಗೆ ಅನ್ವಯಿಸುತ್ತವೆ" ಎಂದು ಫ್ರೆಂಚ್ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದರು. ಆದರೆ ಒಪ್ಪಂದದ ವ್ಯಾಪ್ತಿಗೆ ಖರೀದಿ ಬೆಲೆ ಬರುತ್ತದೆಯೇ ಎಂಬುದನ್ನು ಫ್ರಾನ್ಸ್‌ ಸ್ಪಷ್ಟಪಡಿಸಿರಲಿಲ್ಲ.

ಇದಾದ ಬೆನ್ನಿಗೆ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಲ್ಲಿ ಮಾತನಾಡಿದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, “ರಾಹುಲ್ ಗಾಂಧಿ ಹೇಳಿದ್ದೆಲ್ಲಾ ಸುಳ್ಳು ಮತ್ತು ಇದಕ್ಕೆ ಯಾವುದೇ ಆಧಾರವಿಲ್ಲ,” ಎಂದಿದ್ದರು. ‘ಈ ಒಪ್ಪಂದ 2008ರಲ್ಲಿ ನಡೆದಿತ್ತು, ಇದಕ್ಕೆ ಅಂದಿನ ರಕ್ಷಣಾ ಸಚಿವ ಎ.ಕೆ. ಆಂಟನಿ ಸಹಿ ಹಾಕಿದ್ದರು’ ಎಂದು ಹೇಳಿ ಈ ಹೊಣೆಗಾರಿಕೆಯನ್ನು ಕಾಂಗ್ರೆಸ್ ತಲೆಗೆ ದಾಟಿಸಲು ಯತ್ನಿಸಿದ್ದರು. ಭಾರತ-ಫ್ರಾನ್ಸ್‌ ನಡುವೆ ನಡೆದಿರುವುದು ಗೌಪ್ಯತೆಯ ಒಪ್ಪಂದ. ರಾಹುಲ್‌ ಗಾಂಧಿಯವರಿಗೆ ಫ್ರೆಂಚ್‌ ಅಧ್ಯಕ್ಷರು ಏನು ಹೇಳಿದ್ದರು ಅನ್ನುವುದರ ಬಗ್ಗೆ ನಾನು ಹೇಳಲು ಹೋಗುವುದಿಲ್ಲ. ಆದರೆ ಭಾರತದ ಟಿವಿ ವಾಹಿನಿಗಳಿಗೆ ಫ್ರೆಂಚ್‌ ಅಧ್ಯಕ್ಷರು ನೀಡಿದ ಸಂದರ್ಶನಗಳ ಬಗ್ಗೆ ಹೇಳುತ್ತಿದ್ದೇನೆ. ಈ ಸಂದರ್ಶನಗಳಲ್ಲಿ ಫ್ರೆಂಚ್‌ ಅಧ್ಯಕ್ಷರು ರಫೇಲ್‌ ಡೀಲ್‌ನ ವಾಣಿಜ್ಯ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದಿದ್ದರು,” ಎನ್ನುವ ವಿವರಣೆ ನೀಡಿದ್ದರು.

ವಿವಾದದ ಮೂಲ ರಫೇಲ್ ಯುದ್ಧ ವಿಮಾನ. 
ವಿವಾದದ ಮೂಲ ರಫೇಲ್ ಯುದ್ಧ ವಿಮಾನ. 
ಚಿತ್ರ ಕೃಪೆ: ಏವಿಯೇಷನ್ಎವಿ

ಆಂಟನಿ ಪುರ ಪ್ರವೇಶ

ಇದೀಗ ಕಾಂಗ್ರೆಸ್ ಪರವಾಗಿ 2008ರಲ್ಲಿ ಒಪ್ಪಂದಕ್ಕೆ ಸ್ವತಃ ಸಹಿ ಹಾಕಿದ ದೇಶದ ಮಾಜಿ ರಕ್ಷಣಾ ಸಚಿವ ಎ.ಕೆ. ಆಂಟನಿ ಮೈದಾನಕ್ಕಿಳಿದಿದ್ದಾರೆ. ಮತ್ತು ಬಿಜೆಪಿ ನಾಯಕರ ಆರೋಪಗಳಿಗೆ ತಿರುಗೇಟು ನೀಡಲು ಆರಂಭಿಸಿದ್ದಾರೆ. ಈ ಮೂಲಕ ದಿನನಿತ್ಯದ ಕೆಸರೆರಚಾಟಗಳಿಂದ ದೂರವೇ ಉಳಿಯುವ, ರಾಜಕಾರಣಿಗಳ ಪೈಕಿ ವಿಶಿಷ್ಟವಾಗಿ ಗುರುತಿಸಿಕೊಳ್ಳುವ ಎ.ಕೆ. ಆಂಟನಿ ಅವರನ್ನು ಕಾಂಗ್ರೆಸ್ ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯಲು ಹೊರಟಂತೆ ಕಾಣಿಸುತ್ತಿದೆ.

ಇಂದು ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವರ ಹೇಳಿಕೆ ವಿರುದ್ಧ ಹರಿಹಾಯ್ದಿರುವ ಆಂಟನಿ, ರಫೇಲ್ ಯುದ್ಧ ವಿಮಾನಗಳ ಬೆಲೆ ಬಹಿರಂಗಪಡಿಸಲು ಗೌಪ್ಯತೆ ಒಪ್ಪಂದ ಅಡ್ಡಿಯಾಗಿದೆ ಎಂಬ ಸರಕಾರದ ಹೇಳಿಕೆ ಸಂಪೂರ್ಣ ಸುಳ್ಳು ಎಂದಿದ್ದಾರೆ. ಜತೆಗೆ ಪ್ರತಿ ವಿಮಾನದ ಬೆಲೆಯನ್ನು ಬಹಿರಂಗಪಡಿಸಲೇಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಒಪ್ಪಂದದ ಬಗ್ಗೆ ಸಿಎಜಿ (ಅಡಿಟರ್‌ ಆಂಡ್‌ ಕಮ್‌ಟ್ರೋಲರ್‌ ಜನರಲ್‌) ಮತ್ತು ಪಬ್ಲಿಕ್ ಅಕೌಂಟ್ಸ್‌ ಕಮಿಟಿ ಪರಿಶೀಲನೆ ನಡೆಸಲಿರುವುದರಿಂದ ಸರಕಾರ ಯುದ್ಧ ವಿಮಾನದ ಬೆಲೆಯನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದಾಗಿಯೂ ಅವರು ವಿವರಿಸಿದ್ದಾರೆ. ಇದಲ್ಲದೆ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದ ಕಾಂಗ್ರೆಸ್ ಹಿರಿಯ ನಾಯಕ ಆನಂದ್‌ ಶರ್ಮಾ, ರಫೇಲ್ ವಿಮಾನದ ಬೆಲೆಯನ್ನು ಬಹಿರಂಗಪಡಿಸಲು ಫ್ರಾನ್ಸ್‌ ಸರಕಾರಕ್ಕೆ ಯಾವುದೇ ಅಡ್ಡಿ ಇಲ್ಲ. ಇದನ್ನು ಪ್ರಾನ್ಸ್‌ ಅಧ್ಯಕ್ಷರೇ ರಾಹುಲ್‌ ಗಾಂಧಿಯವರಿಗೆ ಹೇಳಿದ್ದಾರೆ ಎಂದು ಮತ್ತೊಮ್ಮೆ ಪುನರುಚ್ಛರಿಸಿದ್ದಾರೆ.

ಅಂದು ಬೋಫೊರ್ಸ್‌, ಇಂದು ರಫೇಲ್‌:

ಭಾನುವಾರ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲೂ ರಾಹುಲ್ ಗಾಂಧಿ ಮತ್ತೆ ರಫೇಲ್ ಡೀಲ್‌ ಬಗ್ಗೆ ಮಾತುಗಳನ್ನಾಡಿದ್ದರು. ಈ ಮೂಲಕ ಚುನಾವಣೆಯಲ್ಲೂ ಇದೇ ವಿಚಾರವನ್ನು ಜನರ ಮುಂದಿಡುವ ಪರೋಕ್ಷ ಸೂಚನೆ ನೀಡಿದ್ದರು. ಇದೀಗ ಕಾಂಗ್ರೆಸ್ ಮತ್ತಷ್ಟು ಗಟ್ಟಿಯಾಗಿ ಈ ವಿಚಾರವನ್ನು ಚುನಾವಣಾ ವರ್ಷದಲ್ಲಿ ಪ್ರಸ್ತಾಪಿಸುತ್ತಿದ್ದು, ಇದೇ ವಿಚಾರ ಮುಂದಿಟ್ಟುಕೊಂಡು ಬಿಜೆಪಿಯನ್ನು ಹಣಿಯಲು ಸಿದ್ಧತೆ ಮಾಡಿಕೊಂಡಂತೆ ಕಾಣಿಸುತ್ತಿದೆ.

ಹಾಗೆ ನೋಡಿದರೆ ರಕ್ಷಣಾ ಹಗರಣದ ವಿಚಾರವನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಆಡಳಿತ ಪಕ್ಷಕ್ಕೆ ಸೋಲುಣಿಸಿದ ಉದಾಹರಣೆ 1989ರಲ್ಲೇ ಸಿಗುತ್ತದೆ.

1989ರ ಚುನಾವಣೆಯಲ್ಲಿ ಬೋಫೋರ್ಸ್‌ ಮಿಲಿಟರಿ ಟ್ಯಾಂಕರ್‌ಗಳ ಖರೀದಿಯಲ್ಲಿ ಹಗರಣ ನಡೆದಿದೆ ಎಂಬುದು ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಪರಿಣಾಮ 1984ರಲ್ಲಿ 404 ಸೀಟು ಗೆದ್ದು ಅಧಿಕಾರ ಹಿಡಿದಿದ್ದ ರಾಜೀವ್‌ ಗಾಂಧಿ 89ರಲ್ಲಿ ಮಕಾಡೆ ಮಲಗಿದ್ದರು. ಸರಿಯಾಗಿ 40 ವರ್ಷಗಳ ನಂತರ ಈಗ 2019ರ ಚುನಾವಣೆ ಬಂದಿದೆ. ಇಟಲಿಯ ಬೋಫೋರ್ಸ್ ಜಾಗದಲ್ಲಿ ಫ್ರಾನ್ಸ್‌ನ 'ರಫೇಲ್‌’ ಹೆಸರು ಕೇಳಿ ಬರುತ್ತಿದೆ. ರಾಜೀವ್ ಗಾಂಧಿಯವರ ಜಾಗದಲ್ಲಿ 40 ವರ್ಷಗಳ ನಂತರ 2014ರಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ನಿಂತಿದ್ದಾರೆ. ಮೋದಿ 2019ರ ರಾಜೀವ್ ಗಾಂಧಿಯಾಗಲಿದ್ದಾರಾ? ಉತ್ತರ ಜನರು ಮತ್ತು ವಿರೋಧ ಪಕ್ಷ ಕಾಂಗ್ರೆಸ್ ಕೈಯಲ್ಲಿದೆ.