samachara
www.samachara.com
ಸಕ್ರೆಬೈಲ್ ಆನೆಬಿಡಾರದಲ್ಲಿ ಹುಟ್ಟಿದ ಅಂತರ್‌ ಧರ್ಮೀಯ ಪ್ರೀತಿಗೆ ಹೈಕೋರ್ಟ್‌ ಶ್ರೀರಕ್ಷೆ
COVER STORY

ಸಕ್ರೆಬೈಲ್ ಆನೆಬಿಡಾರದಲ್ಲಿ ಹುಟ್ಟಿದ ಅಂತರ್‌ ಧರ್ಮೀಯ ಪ್ರೀತಿಗೆ ಹೈಕೋರ್ಟ್‌ ಶ್ರೀರಕ್ಷೆ

ವಯಸ್ಕಳಾದ ಸುಮ ಸ್ವಇಚ್ಚೆಯಿಂದ ಮದುವೆಯಾಗಿದ್ದಾಗಿ ಪೊಲೀಸರಿಗೆ ಹಾಗೂ ಪೋಷಕರಿಗೆ ತಿಳಿಸಿದರು. ಕೊನೆಗೆ, ಸುಮ ತಂದೆ ಮಗಳ ಇಚ್ಚೆಯಂತೆ ನಡೆದ ಮದುವೆಯನ್ನು ಒಪ್ಪಿಕೊಂಡರು. ಆದರೆ ಶಿವಮೊಗ್ಗ ತುಂಗಾನಗರ ಪೊಲೀಸರು ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ.

‘ಸೋ ಕಾಲ್ಡ್’ ಲವ್ ಜಿಹಾದ್ ಪ್ರಕರಣವೊಂದನ್ನು ಹುಟ್ಟುಹಾಕಲು ಹೊರಟ ಶಿವಮೊಗ್ಗ ತುಂಗಾನಗರ ಪೊಲೀಸರಿಗೆ ರಾಜ್ಯ ಹೈಕೋರ್ಟ್ ಸೋಮವಾರ ತಪರಾಕಿ ನೀಡಿತು.

ಬುಡಕಟ್ಟು ಸಮುದಾಯದ ಯುವತಿ, ಮುಸ್ಲಿಂ ಯುವಕನ ಜತೆ ಆದ ಮದುವೆಯನ್ನು ಅನೂರ್ಜಿತಗೊಳಿಸಲು ಹೋದ ಪೊಲೀಸರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿದೆ. ಜತೆಗೆ, ದಂಪತಿಗಳಿಗೆ ಕಾನೂನುಬದ್ಧ ರಕ್ಷಣೆ ನೀಡುವಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಸೂಚಿಸಿದೆ. ಈ ಮೂಲಕ ‘ಲವ್ ಜಿಹಾದ್’ ಹೆಸರಿನಲ್ಲಿ ಸೆನ್ಸೇಶನಲ್ ಪ್ರಕರಣವೊಂದನ್ನು ಹುಟ್ಟುಹಾಕಲು ಹೊರಟ ಮಲೆನಾಡಿನ ಪೊಲೀಸರಿಗೆ ಹಿನ್ನಡೆಯಾಗಿದೆ.

ಏನಿದು ಪ್ರಕರಣ?:

ಶಿವಮೊಗ್ಗದ ಗಾಜನೂರು ಬಳಿ ಇರುವ ಸಕ್ರೆಬೈಲ್ ಆನೆ ಬಿಡಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಕಳೆದ ಆರು ವರ್ಷಗಳಿಂದ ಕೆಲಸ ಮಾಡುತ್ತಿದ್ದವರು 24 ವರ್ಷದ ರೆಹಮಾನ್ ಪಾಶ. ಹಿಂದೆ ಒಂದು ವರ್ಷಗಳ ಕಾಲ ಬಂಡೀಪುರದಲ್ಲಿ ಕೆಲಸ ಮಾಡಿದ್ದ ಮೈಸೂರು ಮೂಲದ ಪಾಶ, ಸಕ್ರೆಬೈಲಿಗೆ ವರ್ಗಾವಣೆಗೊಂಡಿದ್ದರು. ಅಲ್ಲಿ ಕಾವಡಿಯಾಗಿ ಆನೆಗಳ ತರಬೇತಿ ನೀಡುವ ಕೆಲಸ ಮಾಡಿಕೊಂಡಿದ್ದರು.

ಇವರ ಬಿಡಾರದ ಪಕ್ಕದಲ್ಲಿ ಬುಡಕಟ್ಟು ಸಮುದಾಯಕ್ಕೆ ಸೇರಿದ 19 ವರ್ಷದ ಸುಮ ಕೂಡ ಇದ್ದರು. ಇಬ್ಬರ ನಡುವೆ ಧರ್ಮ ಮೀರಿದ ಪ್ರೀತಿ ಬೆಳೆದಿದ್ದು 2017ರಲ್ಲಿ. ನಂತರ ಇಬ್ಬರು ಮದುವೆಯಾಗಲು ತೀರ್ಮಾನ ತೆಗೆದುಕೊಂಡಿದ್ದರು. ಇದಕ್ಕೆ ಸುಮ ಮನೆ ಕಡೆಯಿಂದ ವಿರೋಧ ವ್ಯಕ್ತವಾಯಿತು. ಬೇರೆ ಹುಡುಗನನ್ನು ಹುಡುಕುವ ಪ್ರಕ್ರಿಯೆ ಆರಂಭಿಸಿದರು. ಇದರಿಂದ ಸುಮ ಮನೆ ಬಿಟ್ಟು ಬಂದು ಪಾಶ ಜತೆ ವಿವಾಹವಾಗಲು ತೀರ್ಮಾನ ಮಾಡಿದರು. 2018ರ ಜೂನ್ ತಿಂಗಳಿನಲ್ಲಿ ಮೈಸೂರಿನಲ್ಲಿ ಇಬ್ಬರು ನಿಖಾ ಮಾಡಿಕೊಂಡರು. ಈ ಸಮಯದಲ್ಲಿ ಸುಮ ಸ್ವಯಂ ಪ್ರೇರಣೆಯಿಂದ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡರು ಕೂಡ.

ಜೋಡಿ ಹಕ್ಕಿಗಳು: ರೆಹಮಾನ್ ಪಾಶ ಹಾಗೂ ಸುಮ. 
ಜೋಡಿ ಹಕ್ಕಿಗಳು: ರೆಹಮಾನ್ ಪಾಶ ಹಾಗೂ ಸುಮ. 

ಇದಾಗಿ ಸುಮಾರು 20 ದಿನಗಳ ಕಾಲ ನವದಂಪತಿ ಮೈಸೂರಿನ ಶಾಂತಿನಗರದಲ್ಲಿ ನೆಲೆಸಿದ್ದರು. ಜುಲೈ, 11ರಂದು ಮಧ್ಯರಾತ್ರಿ ಮೈಸೂರಿನ ಉಯದಗಿರಿ ಪೊಲೀಸರು ಪಾಶ ಜತೆಗಿದ್ದ ಸುಮರನ್ನು ವಶಕ್ಕೆ ಪಡೆದರು. ಮಾರನೇ ದಿನ ಪಾಶ ಪೊಲೀಸ್‌ ಠಾಣೆಗೆ ಹೋದಾಗ ಶಿವಮೊಗ್ಗದ ತುಂಗಾನಗರ ಪೊಲೀಸರು, ಸುಮ ತಂದೆ ರಾಜು ಹಾಗೂ ಸಂಬಂಧಿಕರೂ ಠಾಣೆಯಲ್ಲಿದ್ದರು.

ಈ ಸಮಯದಲ್ಲಿ ವಯಸ್ಕಳಾದ ಸುಮ ಸ್ವಇಚ್ಚೆಯಿಂದ ಮದುವೆಯಾಗಿದ್ದಾಗಿ ಪೊಲೀಸರಿಗೆ ಹಾಗೂ ಪೋಷಕರಿಗೆ ತಿಳಿಸಿದರು. ಕೊನೆಗೆ, ಸುಮ ತಂದೆ ಮಗಳ ಇಚ್ಚೆಯಂತೆ ನಡೆದ ಮದುವೆಯನ್ನು ಒಪ್ಪಿಕೊಂಡರು. ಆದರೆ ಶಿವಮೊಗ್ಗದ ತುಂಗಾನಗರ ಪೊಲೀಸರು ಇದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ಮೈಸೂರಿನಿಂದ ಸುಮಳನ್ನು ಕರೆದುಕೊಂಡು ಶಿವಮೊಗ್ಗಕ್ಕೆ ಬಂದ ಪೊಲೀಸರು ಮೂರು ದಿನಗಳ ಕಾಲ ಕಸ್ಟಡಿಯಲ್ಲಿಯೇ ಇಟ್ಟುಕೊಂಡರು. “ಈ ಸಮಯದಲ್ಲಿ ನನಗೆ ಹೆದರಿಸಿದ ಪೊಲೀಸರು ಮದುವೆಯನ್ನು ಮುರಿದುಕೊಳ್ಳುವಂತೆ ಹೇಳಿದರು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಕೆ ಹಾಕಿದರು,’’ ಎನ್ನುತ್ತಾರೆ ಸುಮ.

ತುಂಗಾನಗರ ಪೊಲೀಸ್ ಠಾಣೆಯಿಂದ ಸುರಭಿ ಉಜ್ವಲಾ ಸ್ಟೇಟ್ ಹೋಮ್‌ಗೆ ಸುಮಳನ್ನು ಪೊಲೀಸರು ಸ್ಥಳಾಂತರಿಸಿದರು. ಅಲ್ಲಿ ಒಂದು ದಿನ ಇಟ್ಟುಕೊಂಡ ಸಿಬ್ಬಂದಿಗಳು ಸುಮಳನ್ನು ಮನೆಯವರ ಜತೆ ಕಳುಹಿಸಿಕೊಟ್ಟರು. ಈ ಸಮಯದಲ್ಲಿ ಪಾಶಾಗೆ ಪತ್ನಿ ಎಲ್ಲಿದ್ದಾಳೆ ಎಂಬ ಮಾಹಿತಿಯನ್ನೂ ನೀಡಲಿಲ್ಲ. ಅತ್ತ ಸಕ್ರೆಬೈಲಿಗೆ ಹೋದರೆ, ಅಲ್ಲಿಯೂ ಸುಮ ಆಗಲೀ, ಮನೆಯವರಾಗಲೀ ಇರಲಿಲ್ಲ. ಕೊನೆಗೆ, ವಕೀಲರಾದ ಜೆ. ಡಿ. ಕಾಶೀನಾಥ್, ರಮೇಶಪ್ಪ ಎನ್. ಜಿ ಹೈಕೋರ್ಟ್‌ನಲ್ಲಿ ರೆಹಮಾನ್ ಪಾಶ ಪರವಾಗಿ ಸುಮ ನಾಪತ್ತೆಯಾಗಿದ್ದಾರೆ ಎಂದು ಹೆಬಿಯಸ್ ಕಾರ್ಪಸ್‌ ಅರ್ಜಿ ಸಲ್ಲಿಸಿದರು.

ಪ್ರಕರಣವನ್ನು ಸೋಮವಾರ ವಿಚಾರಣೆಗೆ ಎತ್ತಿಕೊಂಡ ನ್ಯಾ. ರಾಘವೇಂದ್ರ ಚೌಹಾಣ್ ಮತ್ತು ನ್ಯಾ. ಎಚ್. ಟಿ. ನರೇಂದ್ರ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿತು. ಯಾವುದೇ ನಿಯಮಾವಳಿಗಳನ್ನು ಪಾಲಿಸದ ಪೊಲೀಸರ ನಡೆಯನ್ನು ಅಕ್ರಮ ಅಪಹರಣಕ್ಕೆ ಹೋಲಿಸಿತು. ಪ್ರಕರಣದಲ್ಲಿ ನಡೆದುಕೊಂಡ ಧಾಟಿಯನ್ನು ‘ಪೊಲೀಸ್‌ ಗಿರಿ’ ಎಂದು ಕಟುಮಾತುಗಳಲ್ಲಿ ಖಂಡಿಸಿ, ತೆರದ ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ ಛೀಮಾರಿ ಹಾಕಿತು.

“ಈ ದೇಶದಲ್ಲಿ ಲಕ್ಷಾಂತರ ಭಿಕ್ಷುಕರಿದ್ದಾರೆ. ಅವರು ಬಂದು ರಕ್ಷಣೆ ಕೋರಿದರೆ ನೀವು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ವಾಸ್ತವ್ಯ ಕಲ್ಪಿಸುತ್ತೀರಾ? ಇವನ್ನು ಮಾಡದ ನೀವು, ಒಬ್ಬಳು 19 ವರ್ಷದ ಯುವತಿಯ ಹಾಗೂ ಆಕೆಯ ಮನೆಯವರ ಇಚ್ಚೆಯಿಂದ ಒಪ್ಪಿ ಮದುವೆಯಾದ ಮೇಲೂ ಸ್ಟೇಟ್‌ ಹೋಮ್‌ಗೆ ಯಾಕೆ ಕಳುಹಿಸಿದಿರಿ?’’ ಎಂದು ಕೇಳಿತು.

ಸದ್ಯ ದಂಪತಿಗೆ ಪೊಲೀಸರಿಂದ ಬಿಡುಗಡೆ ನೀಡಲಾಗಿದೆ. ಧರ್ಮ ಮೀರಿ ಪ್ರೀತಿಸಿದ ಜೋಡಿ, ನ್ಯಾಯಾಲಯದ ಮಧ್ಯಪ್ರವೇಶದಿಂದಾಗಿ ಹೊಸ ಬದುಕು ಕಟ್ಟಿಕೊಳ್ಳಲು ಮತ್ತೆ ಆನೆ ಬಿಡಾರದೆಡೆಗೆ ಹೊರಟಿದೆ.

“ನಾನೊಂದು ಆನೆ ಮರಿಯನ್ನು ಸಾಕಿದ್ದೆ. ಅದು ಅನಾರೋಗ್ಯದಿಂದ ಸತ್ತು ಹೋಗಿತ್ತು. ಈ ಸಮಯದಲ್ಲಿ ಪೊಲೀಸರು ಪತ್ನಿಯನ್ನೂ ದೂರಮಾಡಿದ್ದರು. ಅತ್ತ ಆನೆ ಮರಿಯೂ ಇಲ್ಲದೆ, ಪತ್ನಿಯೂ ಇಲ್ಲದೆ ಬದುಕು ದಿಕ್ಕು ತೋಚದಂತಾಗಿತ್ತು. ಆದರೆ ನ್ಯಾಯಾಲಯ ನನ್ನ ಕಷ್ಟವನ್ನು ಅರ್ಥಮಾಡಿಕೊಂಡಿತು. ನಮ್ಮ ಪ್ರೀತಿಯನ್ನು ಉಳಿಸಿತು,’’ ಎಂದು ನ್ಯಾಯಾಲಯದಿಂದ ಹೊರಬಂದ ರೆಹಮಾನ್ ಪಾಶ ಕಣ್ತುಂಬಿಕೊಂಡರು.