samachara
www.samachara.com
ಮುರ್ಕಿ ಗ್ರಾಮ
ಮುರ್ಕಿ ಗ್ರಾಮ|ಚಿತ್ರ ಕೃಪೆ: ಲೈವ್‌ಮಿಂಟ್‌
COVER STORY

ವಾಟ್ಸಾಪ್‌ ವದಂತಿ, ಮೆರೆದ ಕ್ರೌರ್ಯ, ಪಡೆದ ಬಲಿಗೆ ತಾಂಡದಲ್ಲೀಗ ಪಶ್ಚಾತಾಪ...

ಕೆಲವು ದಿನಗಳ ಹಿಂದೆ ಜಗತ್ತಿನಾದ್ಯಂತ ಕೆಟ್ಟ ಕಾರಣಕ್ಕೆ ಸುದ್ದಿಯಾದ ಊರು ಭಟ್ಕೂಲ್. ಬೀದರ್ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿರುವ ಈ ತಾಂಡಾದ ಜನ ವಾಟ್ಸಾಪ್ ಗ್ರೂಪ್‌ನಲ್ಲಿ ಹಬ್ಬಿಸಿದ ವದಂತಿಯೊಂದು ವ್ಯಕ್ತಿಯೊಬ್ಬನನ್ನು ಬಲಿ ಪಡೆದಿತ್ತು.

Team Samachara

ಭಟ್ಕೂಲ್‌ನಲ್ಲಿ ಇಳಿದಾಗ ಹೊತ್ತು ಏರುತ್ತಿತ್ತು. ಸುತ್ತ ಮುತ್ತ ಕಾಡು, ಅದರ ನಡುವೆ ಹಾಸಿದಂತೆ ಬೆಳೆದು ನಿಂತ ಹಸಿರು ಹುಲ್ಲು. ಸುತ್ತ ಮುತ್ತಲಿನ ಬೇಸಾಯದ ಗದ್ದೆಗಳಲ್ಲಿ ಸೋಯಾ ಬೀನ್‌ ಸಸಿಗಳು ತಣ್ಣಗೆ ಬೀಸುತ್ತಿದ್ದ ಗಾಳಿಗೆ ಬಳುಕುತ್ತಾ ಎದ್ದು ನಿಂತಿದ್ದವು. ಆಕಾಶದ ತುಂಬಾ ಕರಿ ಮೋಡಗಳು ಅತ್ತಿಂದಿತ್ತ ಚಲಿಸುತ್ತಿದ್ದವು. ಅವುಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಕಿರಣಗಳು ತೂರಿ ಬಂದು ಸೂರ್ಯನ ಇರುವಿಕೆಯನ್ನು ಹೇಳುತ್ತಿದ್ದವು. ಭಟ್ಕೂಲ್‌ ನೋಡಲು ಮರುಭೂಮಿಯಂತೆ ಕಾಣಿಸುತ್ತಿತ್ತು. ಮೂವರು ವ್ಯಕ್ತಿಗಳು, ಒಂದಷ್ಟು ಮಹಿಳೆಯರು, ಮತ್ತೊಂದಷ್ಟು ಮಕ್ಕಳು ತಮ್ಮ ನೆಲದಲ್ಲಿ ಇಳಿದ ಅಪರಿಚಿತರತ್ತ ಕುತೂಹಲದ ದೃಷ್ಟಿ ಬಿರುತ್ತಾ ನಿಂತಿದ್ದರು. ಅದಕ್ಕೆ ಕಾರಣವೂ ಇದೆ.

ಈ ಭಟ್ಕೂಲ್‌ ಲಂಬಾಣಿಗಳ ತಾಂಡ. ಬೀದರ್‌ ಜಿಲ್ಲೆಯ ಔರಾದ್‌ ತಾಲೂಕಿನಲ್ಲಿ ಬರುವ ಮುರ್ಕಿ ಎಂಬ ಸಣ್ಣ ಗ್ರಾಮದಲ್ಲಿ ಈ ತಾಂಡವಿದೆ. ಇಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿ ಮಹಾರಾಷ್ಟ್ರ ಗಡಿ ಬರುತ್ತದೆ. ತಾಂಡಾದಲ್ಲಿ ಲಂಬಾಣಿಗಳ ಸುಮಾರು 30-35 ಕುಟುಂಬಗಳು ವಾಸಿಸುತ್ತವೆ. ಜುಲೈ 13ರ ಶುಕ್ರವಾರ ಇಲ್ಲಿನ ಜನರು ಹಬ್ಬಿಸಿದ ಮಕ್ಕಳ ಕಳ್ಳರ ಬಗೆಗಿನ ವದಂತಿ ವ್ಯಕ್ತಿಯೊಬ್ಬರನ್ನು ಬಲಿ ಪಡೆದಿದೆ. ಅಲ್ಲಿಂದ ನಂತರ ಗ್ರಾಮಕ್ಕೆ ಹೊಸಬರು ಬಂದರೆ ಇಲ್ಲಿನ ಜನರು ಹೀಗೆ ಬಿಟ್ಟ ಕಣ್ಣು ಬಿಟ್ಟು ನೋಡುತ್ತಾರೆ.

“ಉಳಿದ ಕಡೆಗಿಂತ ಈ ತಾಂಡಾದ ಜನರಲ್ಲೊಂದು ಗುಣವಿದೆ. ನಾವು ಪೊಲೀಸರನ್ನು ಕಂಡರೆ ಓಡಲು ಆರಂಭಿಸುತ್ತೇವೆ. ಆತ ಯಾಕೆ ಬಂದ ಎಂದು ನಂತರ ವಿಚಾರಿಸುತ್ತೇವೆ,” ಎನ್ನುತ್ತಾರೆ ಮಾಸಲು ಬಟ್ಟೆ ತೊಟ್ಟ ಸುಮಾರು 50 ವರ್ಷ ಪ್ರಾಯದ ವಿಶೇಷ ಚೇತನ ವ್ಯಕ್ತಿ ರಾವನ್‌ ಕೇಶವ್. ಲಂಬಾಣಿಗಳು ಅಥವಾ ಬಂಜಾರಾಗಳು ಎಂದು ಗುರುತಿಸಿಕೊಂಡ ಸಮುದಾಯಕ್ಕೆ ಸೇರಿದವರು ಇವರು. ಇವರ ಮೂಲ ರಾಜಸ್ಥಾನ. ಆದರೆ ನೂರಾರು ವರ್ಷ ಕೆಳಗೆ ವಲಸೆ ಬಂದು ಇದೀಗ ಕರ್ನಾಟಕದವರೇ ಆಗಿ ಹೋಗಿದ್ದಾರೆ. ರಾಜ್ಯದ ಹಲವು ಕಡೆ ಇವರ ತಾಂಡಾಗಳಿವೆ.

ಇದೇ ತಾಂಡಾದ ಜನರು ಕೆಲವು ದಿನದ ಹಿಂದೆ ವಾಟ್ಸಾಪ್‌ನಲ್ಲಿ ತಪ್ಪು ಮಾಹಿತಿ ಹಂಚಿ ವ್ಯಕ್ತಿಯೊಬ್ಬರ ಕೊಲೆಗೆ ಕಾರಣವಾದ ಆರೋಪವನ್ನು ಹೊತ್ತಿದ್ದಾರೆ. ಮಕ್ಕಳ ಕಳ್ಳರು ಇದ್ದಾರೆ ಎಂದು ಇವರು ಹರಡಿದ ಮಾಹಿತಿ ಹೈದರಾಬಾದ್ ಮೂಲದ ಅಕ್ಸೆಂಚರ್‌ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಮೊಹಮ್ಮದ್‌ ಅಜಂ ಉಸ್ಮನಾಬಾದ್ ಎನ್ನುವವರನ್ನು ಬಲಿ ಪಡೆದಿತ್ತು. ಅವರ ಮೂವರು ಸ್ನೇಹಿತರು ಈ ಘಟನೆಯಲ್ಲಿ ಗಾಯಗೊಂಡಿದ್ದರು. ತಾಂಡಾದ ಪಕ್ಕದಲ್ಲಿರುವ ಮುರ್ಕಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತಾದರೂ, ಅದಕ್ಕೆ ಇದೇ ತಾಂಡಾದ ಜನರು ನೀಡಿದ್ದ ಮಾಹಿತಿ ಕಾರಣವಾಗಿತ್ತು.

ಆಗಿದ್ದೇನು?

ಹೈದರಾಬಾದ್‌ ಮೂಲದವರಾದ ಮೊಹಮ್ಮದ್‌ ಅಜಂ, ತಲ್ಹಾ ಇಸ್ಮಾಯಿಲ್‌ ಹಾಗೂ ಮೊಹಮ್ಮದ್‌ ಸಲ್ಮಾನ್‌ ತಮ್ಮ ಸ್ನೇಹಿತ ಮೊಹಮ್ಮದ್ ಬಷೀರ್‌ ಹಂದಿಕೇರಾ ಗ್ರಾಮದತ್ತ ಕಾರಿನಲ್ಲಿ ಹೊರಟಿದ್ದರು. ಅಲ್ಲಿ ಬಷೀರ್‌ ಮನೆಯಿತ್ತು. ಅವರು ತಮ್ಮ ಮನೆಗೆ ಗೆಳೆಯರನ್ನು ಆಹ್ವಾನಿಸಿದ್ದರು. ಹಾಗಾಗಿ ಖುದ್ದು ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು.

ಈ ಸಂದರರ್ಭ ಇದೇ ಭಟ್ಕೂಲ್ ತಾಂಡದ ಬಳಿ ಕೆಲ ನಿಮಿಷ ತಮ್ಮ ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿದ್ದ ತಲ್ಹಾ ಇಸ್ಮಾಯಿಲ್‌ ಕತಾರ್‌ನಲ್ಲಿದ್ದವರು. ಅವರು ಅಲ್ಲಿಂದ ಬರುವಾಗ ಒಂದಷ್ಟು ವಿದೇಶಿ ಚಾಕಲೇಟ್‌ಗಳನ್ನು ತಂದಿದ್ದರು. ಅದನ್ನು ಅಲ್ಲಿದ್ದ ಶಾಲಾ ಮಕ್ಕಳಿಗೆ ತಿನ್ನಲು ನೀಡಿದ್ದರು. ಇದನ್ನು ಕಂಡ ಗ್ರಾಮಸ್ಥರು ಮಕ್ಕಳ ಕಳ್ಳರು ಎಂಬ ಗುಮಾನಿಯ ಮೇಲೆ 4 ಜನರನ್ನೂ ಥಳಿಸಲು ಮುಂದಾದರು.

ಆಗ ಆ ಜನರಿಂದ ಬಿಡಿಸಿಕೊಂಡು ನಾಲ್ಕೂ ಜನ ತಮ್ಮ ಕಾರನ್ನೇರಿ ಅಲ್ಲಿಂದ ಹೊರಟರು. ಕಾರು ಹೋದ ದಿಕ್ಕು ನೋಡಿದ್ದ ಜನರು ಮುಂದೆ ಬರುವ ಮುರ್ಕಿ ಗ್ರಾಮದ ಸ್ನೇಹಿತರಿಗೆ ವಿಷಯ ಮುಟ್ಟಿಸಿದರು. ವಾಟ್ಸಾಪಿನಲ್ಲಿ ಹೀಗೆ ವಿಷಯ ಮುಟ್ಟಿಸುವಾಗ ಅದಕ್ಕೆ ಮಸಾಲೆ ಬೆರೆಸಿ, ‘ಮಕ್ಕಳ ಕಳ್ಳರು ಬಂದಿದ್ದಾರೆ. ಅವರ ಬಳಿ ಆಯುಧಗಳಿವೆ. ಅವರು ಅಪಾಯಕಾರಿಗಳು. ಈಗಷ್ಟೇ ಸ್ಥಳ ಬಿಟ್ಟಿದ್ದಾರೆ’ ಎಂಬ ಮಾಹಿತಿಯನ್ನು ಸೇರಿಸಿದ್ದರು. ಅದಕ್ಕೆ ಪೂರಕ ಸಾಕ್ಷ್ಯಗಳಾಗಿ ವಿಡಿಯೋಗಳನ್ನೂ ವಾಟ್ಸಾಪ್‌ ಗ್ರೂಪ್‌ಗಳಲ್ಲಿ ಹಾಕಿದ್ದರು.

ಈ ಮಾಹಿತಿ ಪಡೆದ ಮುರ್ಕಿ ಜನರು ತಮ್ಮ ಊರಿಗೆ ಕಾರು ಬರುತ್ತದೆ ಎಂಬುದನ್ನು ಅರಿತು ಮರವೊಂದನ್ನು ಬೀಳಿಸಿ ರಸ್ತೆಗೆ ತಡೆಯೊಡ್ಡಿ, ಹೊಂಚು ಹಾಕಿ ಕಾಯುತ್ತಾ ಕುಳಿತಿದ್ದರು. ಕಾರು ಬರುತ್ತಿದ್ದಂತೆ ತಡೆದು ನಿಲ್ಲಿಸಿ, ಅದರಲ್ಲಿದ್ದ ಮೊಹಮ್ಮದ್‌ ಅಝಾಮ್‌ರನ್ನು ಕಾರಿನಿಂದ ಹೊರಗೆಳೆದು ಕಲ್ಲುಗಳಿಂದ ಹೊಡೆದಿದ್ದಾರೆ. ಕಲ್ಲಿನ ಹೊಡೆತಕ್ಕೆ ಜರ್ಝರಿತಗೊಂಡ ಅಝಾಮ್‌ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರಿಗೂ ಗಾಯವಾಗಿದ್ದು, ಕಾರನ್ನೂ ಕೂಡ 10 ಅಡಿ ಆಳದ ತಗ್ಗು ಪ್ರದೇಶಕ್ಕೆ ನೂಕಿದ್ದಾರೆ.

ಕಂದಕಕ್ಕೆ ಉರುಳಿದ ಕಾರು. 
ಕಂದಕಕ್ಕೆ ಉರುಳಿದ ಕಾರು. 

ತಾಂಡಾದಿಂದ ಮೂರು ಕಿಲೋಮೀಟರ್‌ ದೂರದಲ್ಲಿ ಈ ಘಟನೆ ನಡೆದಿದೆ. “ಈ ಘಟನೆ ನಂತರ ನಮ್ಮ ಊರಿಗೆ ಕಳಂಕವೊಂದು ಅಂಟಿಕೊಂಡಿತು,” ಎಂದು ಬೇಸರದಿಂದಲೇ ಹೇಳುತ್ತಾರೆ ಮಹದೇವ್ ಹನುಮಡಗಿ. ಘಟನೆ ನಡೆದ ಸ್ಥಳಕ್ಕಿಂತ ಸ್ವಲ್ಪ ದೂರದಲ್ಲೇ ಅವರ ಗೂಡಂಗಡಿ ಗಾತ್ರದ ಹೋಟೆಲ್ ಇದೆ. ಅವತ್ತು ಸುಮಾರು ಒಂದು ಗಂಟೆ ಇಲ್ಲಿ ಎಲ್ಲಾ ಪ್ರಹಸನ ನಡೆಯಿತು ಎನ್ನುತ್ತಾರೆ ಅವರು.

ಘಟನೆ ನಡೆದಿದ್ದು ತಿಳಿಯುತ್ತಲೇ ಸ್ಥಳಕ್ಕೆ ನಾಲ್ವರು ಪೊಲೀಸರು ಬಂದರು. ಅವರು ಹೊಡೆಯಬೇಡಿ ಎಂದು ಅಲ್ಲಿದ್ದವರಲ್ಲಿ ಬೇಡಿಕೊಳ್ಳುತ್ತಿದ್ದರು. ನಂತರ “ಕೆಲವೇ ಹೊತ್ತಿನಲ್ಲಿ ಸ್ಥಳಕ್ಕೆ ಆಗಮಿಸಿದ ಮತ್ತಷ್ಟು ಪೊಲೀಸರು ಹರಸಾಹಸ ಪಟ್ಟು ಜನರನ್ನು ತಡೆದು ನಿಲ್ಲಿಸಿದ್ದರು. ಜನರನ್ನು ತಡೆಯುವ ವೇಳೆ 10 ಜನ ಪೊಲೀಸರಿಗೂ ಕೂಡ ಗಾಯಗಳಾಗಿತ್ತು,” ಎಂಬುದಾಗಿ ಘಟನೆಗೆ ಸಾಕ್ಷಿಯಾದ ಪೊಲೀಸ್‌ ಅಧಿಕಾರಿ ದಿಲೀಪ್‌ ಸಾಗರ್‌ ವಿವರಣೆ ನೀಡಿದ್ದರು.

ಇದೀಗ ಘಟನೆ ನಂತರ, “ನಾವು ಕನಿಷ್ಠ 20 ವಾಟ್ಸಾಪ್‌ ಗ್ರೂಪ್‌ಗಳನ್ನು ಡಿಲೀಟ್‌ ಮಾಡಿದ್ದೇವೆ,” ಎನ್ನುತ್ತಾರೆ ಬೀದರ್‌ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ. ದೇವರಾಜ್. ಘಟನೆಗೆ ಸಂಬಂಧಿಸಿದಂತೆ 28 ಜನರನ್ನು ಬಂಧಿಸಲಾಗಿದೆ ಎಂಬ ಮಾಹಿತಿಯನ್ನು ಅವರು ನೀಡುತ್ತಾರೆ.

ನಡೆದ ಘಟನೆಗಳೆಲ್ಲಾ ನಡೆದಾಗಿದೆ. ಇದೀಗ ಮುರ್ಕಿ ಮತ್ತು ತಾಂಡಾದ ಜನರಿಗೆ ತಮ್ಮ ತಪ್ಪಿನ ಅರಿವಾಗಿದೆ. ಆ ಕುರಿತು ಅವರಲ್ಲೊಂದು ಬೇಸರ, ದುಗುಡ ಮನೆ ಮಾಡಿದೆ. “ಮಾಡಬಾರದ ಅಪರಾಧ ಮಾಡಿದ ಬಗ್ಗೆ ನಮ್ಮ ಗ್ರಾಮದ ಜನರಿಗೆ ಪಶ್ಚಾತ್ತಾಪವಿದೆ,” ಎನ್ನುತ್ತಾರೆ ಹನುಮಡಗಿ.

ಬೀದರ್‌ನಿಂದ ಮುಂಬೈವರೆಗೆ:

ಆದರೆ ಈ ಮಕ್ಕಳ ಕಳ್ಳರ ವದಂತಿ ಮತ್ತು ವಾಟ್ಸಾಪ್‌ ಲೀಲೆಗಳು ತಾಂಡಾ ಮತ್ತು ಮುರ್ಕಿಗೆ ಮಾತ್ರವೇ ಸೀಮಿತವಾಗಿಲ್ಲ. ದೇಶದಾದ್ಯಂತ ಇದೇ ರೀತಿಯ ಹಲವು ಘಟನೆಗಳು ನಡೆದಿವೆ. ಮುಂಬೈನಲ್ಲಿಯೂ ಹಲವರನ್ನು ಇದೇ ವದಂತಿಯ ಮೇಲೆ ಕೊಲ್ಲಲಾಗಿತ್ತು ಇವತ್ತು ದೇಶದಲ್ಲಿ 20 ಕೋಟಿ ಜನರು ವಾಟ್ಸಾಪ್‌ ಬಳಸುತ್ತಿದ್ದು, ಇಲ್ಲಿ ಸಿಗುವ ಚೌಕಟ್ಟು ರಹಿತ ಸ್ವಾತಂತ್ರ್ಯವೇ ಇದಕ್ಕೆ ಕಾರಣ ಇದ್ದಿರಲೂಬಹುದು.

ಇದೇ ಕಾರಣಕ್ಕೆ ವಾಟ್ಸಾಪ್‌ ಕಳೆದ ಶುಕ್ರವಾರ 5ಕ್ಕಿಂತ ಹೆಚ್ಚು ಚಾಟ್‌ಗಳಿಗೆ ಸಂದೇಶವನ್ನು ಫಾರ್ವರ್ಡ್‌ ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಸುಳ್ಳು ಸುದ್ದಿಗಳ ಹಬ್ಬುವಿಕೆಯನ್ನು ತಡೆಗಟ್ಟಲು ಈ ಕ್ರಮ ಕೈಗೊಂಡಿರುವುದಾಗಿ ವಾಟ್ಸಾಪ್‌ ಹೇಳಿದೆ. ಇದರಿಂದಲಾದರೂ ಈ ವದಂತಿಗಳಿಗೆ ಕಡಿವಾಣ ಬೀಳಲಿದೆಯಾ? ಸದ್ಯಕ್ಕೆ ಹೇಳುವುದು ಕಷ್ಟ.

ಕೃಪೆ: ಲೈವ್‌ಮಿಂಟ್‌