samachara
www.samachara.com
ಸಾಂದರ್ಭಿಕ ಚಿತ್ರ.
COVER STORY

‘ಮಾಬ್ ಲಿಂಚಿಂಗ್’: ಬೇಕಿರುವುದು ಹೊಸ ಕಾನೂನಲ್ಲ; ಮಾನವೀಯ ತಿಳಿವಳಿಕೆ...

ಭಾರತದ ಸಂವಿಧಾನ ಇಂದು ತ್ರಿವರ್ಣ ಧ್ವಜ, ಲಾಂಛನಗಳಂತೆ ದೇಶದ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿದೆಯೇ ಹೊರತು ಜನಗಳ ಮನಸ್ಸಿಗೆ ಇಳಿದಿಲ್ಲ. ಆದ್ದರಿಂದಾಗಿ ಕಾನೂನುಗಳು ತುಕ್ಕು ಹಿಡಿದ ಕತ್ತಿಗಳಾಗಿವೆ. 

ಸಾಮಾಜಿಕ ಜಾಲತಾಣಗಳ ಸಿಕ್ಕಿರುವ ಸ್ವಾತಂತ್ರ್ಯ, ವದಂತಿಗಳಿಗೆ ಸಿಕ್ಕಿರುವ ವೇದಿಕೆ ಹಾಗೂ ಇವುಗಳಿಂದ ನಡೆಯುತ್ತಿರುವ ಅಮಾಯಕರ ಬಲಿಗಳಿಗೆ ಕಡಿವಾಣ ಹೇಗೆ? ಇದು ಸಾಮಾಜಿಕ ಜಾಲತಾಣಗಳನ್ನು ಮುನ್ನಡೆಸುವ ಸಂಸ್ಥೆಗಳು, ಸರಕಾರ ಹಾಗೂ ನ್ಯಾಯಾಲಯಗಳನ್ನು ಇವತ್ತು ಕಾಡುತ್ತಿರುವ ಪ್ರಶ್ನೆ.

ಕಾನೂನಿನಲ್ಲಿಯೇ ಬದಲಾವಣೆ ತರುವ ಮೂಲಕ ಅಥವಾ ಹೊಸ ಕಾನೂನೊಂದನ್ನು ರೂಪಿಸುವ ಮೂಲಕ ವದಂತಿಗಳಿಗೆ ಸಮೂಹ ಸನ್ನಿ ರೀತಿಯಲ್ಲಿ ಪ್ರತಿಕ್ರಿಯಿಸುವ ಜನರಿಗೆ ಕಡಿವಾಣ ಹಾಕಲು ಸಾಧ್ಯವಾ? ಹಾಗಂದುಕೊಂಡತಿದೆ ಕೇಂದ್ರ ಸರಕಾರ. ಅಮಾಯಕರ ಮೇಲಿನ ಹಲ್ಲೆ ತಡೆಗೆ ಭಾರತೀಯ ದಂಡ ಸಂಹಿತೆಯಲ್ಲಿ ಬದಲಾವಣೆಗಳನ್ನು ತರಬಹುದೇ ಎಂದು ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಕೇಂದ್ರ ಸರಕಾರದ ಹಿರಿಯ ಅಧಿಕಾರಿಗಳೊಬ್ಬರು ತಿಳಿಸಿದ್ದಾರೆ. ಜನಸಮೂಹ ನಡೆಸುವ ಹತ್ಯೆಯನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಲಾಗುವುದು ಎಂದು ಸುದ್ದಿ ಮಾಧ್ಯಮಗಳಿಗೆ ಹೇಳಿದ್ದಾರೆ. ಜುಲೈ 17ರಂದು ಸುಪ್ರಿಂ ಕೋರ್ಟ್ ಕೂಡ ಹೊಸ ಕಾನೂನನ್ನು ತರುವ ಬಗ್ಗೆ ಮಾತನಾಡಿತ್ತು.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
ಟ್ರಿಬುನ್‌ ಇಂಡಿಯಾ

ನಮ್ಮಲ್ಲಿ ಯಾವುದೇ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗಳಾದಾಗ ‘ಹೊಸ ಕಾನೂನು ತನ್ನಿ’ ಎಂಬ ಬೇಡಿಕೆ ಸಹಜವಾಗಿಯೇ ಬರುತ್ತದೆ. 2012ರಲ್ಲಿ ನಿರ್ಭಯ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದಾಗ, ಆಕೆಯ ಹೆಸರಿನಲ್ಲಿಯೇ ಕಾನೂನು ರಚನೆಯಾಯಿತು. ಆದರೆ ಈ ಕಾನೂನುಗಳು ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರಗಳನ್ನು ಮಟ್ಟ ಹಾಕಿದವಾ? ಹೀಗಾಗಿಯೇ, ಹೊಸ ಕಾನೂನುಗಳನ್ನು ತರುವುದು ಮುಖ್ಯವಲ್ಲ, ಅವುಗಳ ಪಾಲನೆ ಹೇಗೆ ಎಂಬುದು ಮುಖ್ಯವಾಗುತ್ತದೆ.

ಜನ ಸಮೂಹಗಳ ನಡೆಸುತ್ತಿರುವ ಹತ್ಯೆಗಳು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರುವಂತದ್ದಲ್ಲ. ಉಳಿಗಮಾನ್ಯ ಮನಸ್ಥಿತಿಗಳ ಕಾರಣದಿಂದಾಗಿ ಈ ಹತ್ಯೆಗಳು ನಡೆಯುತ್ತಿವೆ. ಕಾನೂನನ್ನು ತರುವ ಮೂಲಕ ಈ ಮನಸ್ಥತಿಗಳನ್ನು ಬಲಾಯಿಸಿಲು ಸಾಧ್ಯವಿಲ್ಲ. ಈವರೆಗೆ ಬಂದ ಕಾನೂನುಗಳೇ ಇದಕ್ಕೆ ಸಾಕ್ಷಿ.
ಡಾ. ವಾಸು, ಕರ್ನಾಟಕ ಜನಶಕ್ತಿ ಸಂಘಟನೆ.

ಭಾರತದ ಸಂವಿಧಾನ ಹಲವಾರು ಕಾನೂನು ಕಟ್ಟಳೆಗಳನ್ನು ಹೊಂದಿರುವ ದೊಡ್ಡ ಪುಸ್ತಕ. ವರ್ಷಗಳು ಕಳೆದಂತೆ ಹಲವಾರು ಕಾನೂನುಗಳನ್ನು ಸೇರಿಸಿಕೊಳ್ಳತ್ತ ದೊಡ್ಡದಾಗುತ್ತ ಸಾಗುತ್ತಿದೆ. ಸಂವಿಧಾನವೇನೋ ದೊಡ್ಡದಾಗುತ್ತಿದೆ, ಆದರೆ ಅದರೊಳಗೆ ಇರುವ, ಹೊಸದಾಗಿ ತಂದ ಕಾನೂನುಗಳನ್ನು ಪಾಲಿಸುವವರಷ್ಟು ಮಂದಿ ಎನ್ನುವುದಕ್ಕೆ ಉತ್ತರವಿಲ್ಲ.

ಭಾರತೀಯರು ಧರ್ಮದ ಹೆಸರಿನ ಹಾಕಿಕೊಟ್ಟಿರುವ ಅಲಿಖಿತ ಕಾನೂನುಗಳನ್ನು ನಂಬುವ ಪ್ರಮಾಣದಲ್ಲಿ ಅರ್ಧದಷ್ಟಾದರೂ ಕಾನೂನುಗಳನ್ನು ನಂಬಿದ್ದರೆ ಬಹುಪಾಲು ಹಿಂಸಾಚಾರ ನಡೆಯುತ್ತಲೇ ಇರಲಿಲ್ಲ. ಭಾರತದ ಸಂವಿಧಾನ ಇಂದು ತ್ರಿವರ್ಣ ಧ್ವಜ, ಲಾಂಛನಗಳಂತೆ ದೇಶದ ಘನತೆಯನ್ನು ಎತ್ತಿಹಿಡಿಯುವ ಸಾಧನವಾಗಿದೆಯಷ್ಟೇ ಹೊರತು ಜನಗಳ ಮನಸ್ಸಿಗೆ ಇಳಿದಿಲ್ಲ. ಆದ್ದರಿಂದಾಗಿಯೇ ಕಾನೂನುಗಳು ಎರಡಲಗಿನ ಕತ್ತಿಗಳಾಗಿದ್ದರೂ ಕೂಡ ಮೊಂಡು ಹಿಡಿದಿವೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.
ಒನ್‌ ಇಂಡಿಯಾ

ಸರಕಾರಗಳಿಗೂ ಕೂಡ ಕಾನೂನು ರಚನೆ ಎನ್ನುವುದು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ದಾರಿಯಾಗಿ ಮಾರ್ಪಟ್ಟಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಭಾರತದಲ್ಲಿ ಚಿಕ್ಕ ಮಕ್ಕಳ ಅತ್ಯಾಚಾರದ ಕುರಿತು ಕಾನೂನನ್ನು ಬಲಪಡಿಸುವಂತೆ ಒತ್ತಾಯಿಸಿ ರಾಷ್ಟ್ರವ್ಯಾಪಿ ಹೋರಾಟಗಳು ನಡೆದವು. ಕೆಲವು ದಿನ ಕಿವಿಮುಚ್ಚಿ ಕುಳಿತಿದ್ದ ಸರಕಾರ ಜನರ ಧ್ವನಿ ಹೆಚ್ಚಾಗುತ್ತಿದ್ದಂತೆಯೇ, ಇದ್ದ ಹಳೆಯ ಕಾನೂನಿನಲ್ಲಿ ಕೆಲವು ಮಾರ್ಪಾಡಗಳನ್ನು ತಂದು ಪ್ರಚಾರ ನೀಡಿತು. ತಿದ್ದುಪಡಿಯಾದ ನಂತರ ಇನ್ನುಮುಂದೆ ಸಮಸ್ಯೆಗಳು ಪರಿಹರಿದವೆಂದೇ ಭಾವಿಸಿದ ಜನ ಸುಮ್ಮನಾದರು.

ಆದರೆ ಇಂದಿಗೂ ಕೂಡ ದಿನನಿತ್ಯ ಮಕ್ಕಳ ಮೇಲಿನ ಅತ್ಯಾಚಾರದ ಪ್ರಕರಣಗಳು ವರದಿಯಾಗುತ್ತಿವೆ. ಕಾನೂನು ತಿದ್ದುಪಡಿಗೂ ಮುಂಚೆ ಮಕ್ಕಳ ಅತ್ಯಾಚಾರದ ವಿರುದ್ಧ ಕೇಳಿಬರುತ್ತಿದ್ದ ಕೂಗು ತಿದ್ದುಪಡಿಯ ನಂತರ ಕ್ಷೀಣವಾಗಿದೆ. ಇದನ್ನು ದಶಕಗಳ ಕಾಲದಿಂದ ನೋಡಿರುವ ಆಳುವ ವರ್ಗ ಜನರ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಕಾನೂನು ತಿದ್ದುಪಡಿಯೇ ಸುಲಭ ಮಾರ್ಗ ಎಂದು ಪರಿಗಣಿಸಿದಂತಿದೆ.

ಹೊಸ ಕಾನೂನು ತರುವುದು ರಾಜಕೀಯ ಹಿತಾಸಕ್ತಿಯಷ್ಟೇ. ಕಳ್ಳತನ, ದರೋಡೆಗಳಿಗೆ ಸಂಬಂಧಪಟ್ಟಂತೆ ಈಗಾಗಲೇ ಕಾನೂನುಗಳಿವೆ. ಹಿಂದೆಯೇ ಇದ್ದ ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿಯನ್ನಷ್ಟೇ ತರಲಾಯಿತು. ಈಗ ಮಕ್ಕಳ ಕಳ್ಳತನ ಸಂಬಂಧಪಟ್ಟಂತೆಯೂ ಹೀಗೆಯೇ ಮಾಡಬೇಕಾಗುತ್ತದೆ. ಕಾಯ್ದೆ, ತಿದ್ದುಪಡಿ ಎನ್ನುವ ಹೆಸರುಗಳು ಜನರಲ್ಲಿ ಭಯ ಹುಟ್ಟಿಸಬಹುದು. ಅದನ್ನೇ ರಾಜಕೀಯ ಲಾಭವನ್ನಾಗಿ ಪರಿವರ್ತಿಸಿಕೊಳ್ಳಲಾಗುತ್ತಿದೆ.
ಪುರುಷೋತ್ತಮ್, ವಕೀಲರು.

ಪುರುಷೋತ್ತಮ್‌ ಹೇಳುವಂತೆ, “ಹೊಸ ಕಾಯ್ದೆ ತರುವ ಅಗತ್ಯವೇ ಇಲ್ಲ. ಇರುವ ಕಾಯ್ದೆಗಳನ್ನೇ ಸರಿಯಾಗಿ ಬಳಸಿಕೊಳ್ಳಬೇಕಿದೆ. ಅಧಿಕಾರಿಗಳು, ಪೊಲೀಸರು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಯಾವ ಕಾಯ್ದೆಯೂ ಅಗತ್ಯವಿಲ್ಲ. ಜನರ ಮನಸ್ಥಿತಿಯನ್ನು ಬದಲಾಯಿಸಿಬೇಕಿದೆ. ಕಾಯ್ದೆಯನ್ನಲ್ಲ.”

ಹಾಗಂತ ಕಾನೂನುಗಳಿಂದ ಯಾವುದೇ ಉಪಯೋಗಗಳಿಲ್ಲ ಎಂದಲ್ಲ. ದೇಶವೊಂದು ಸಾಗಲು ಕಾನೂನುಗಳು ಅತ್ಯಗತ್ಯ. ಆದರೆ ಅವೇ ಅಂತಿಮವಲ್ಲ. ಮಾಂಸ ಸಾಗಿಸುತ್ತಿದ್ದ ಎಂಬ ಅನುಮಾನದಿಂದ, ಚಾಕಲೇಟ್‌ ಹಂಚಿದ ಎಂಬ ಕಾರಣದಿಂದ ಜನರು ಜನರನ್ನೇ ಕೊಲ್ಲುತ್ತಾರೆ ಎಂದರೆ ಅದು ಆಳುವ ವ್ಯವಸ್ಥೆಯಲ್ಲಿನ ವೈಪಲ್ಯವನ್ನು ತೋರಿಸುತ್ತದೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸರಕಾರಗಳ ಸಾಧನೆಗೆ ಉದಾಹರಣೆ ಇಂತಹ ಘಟನೆಗಳು. ಜತೆಗೆ ಇವು ಸಾಮಾಜಿಕ ಮನಸ್ಥಿತಿಯ ಸ್ವರೂಪವೆಂತದ್ದು ಎನ್ನುವುದಕ್ಕೂ ಸ್ಪಷ್ಟವಾಗಿ ತೋರಿಸುತ್ತವೆ.

ಒಂದು ಕಡೆ ಈ ಸಾಮಾಜಿಕ ಮನಸ್ಥಿತಿಗಳನ್ನು ಬದಲಾಯಿಸುತ್ತ, ಮತ್ತೊಂದೆಡೆ ಕಾನೂನು ಸುವ್ಯವಸ್ಥೆಗಳನ್ನು ಕಾಪಾಡುತ್ತ ಸಾಗಿದರಷ್ಟೇ ಸಮಾಜ ಶಾಂತಿಯುತವಾಗಿ ಉಳಿಯಬಲ್ಲದು. ಆದರೆ, ಹರಿಯಾಣದಲ್ಲಿ ಥಳಿತಕ್ಕೆ ಒಳಗಾಯ ಯುವಕನನ್ನು ಸಮೀಪವೇ ಇದ್ದ ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಪೊಲೀಸರು ಮೂರು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಮೊದಲು ಕಾನೂನು ಪಾಲಕ ಇಂತಹ ಮನಸ್ಥಿತಿಯನ್ನು ಬದಲಾಯಿಸಬೇಕಿದೆ. ಇದಕ್ಕೆ ಬೇಕಿರುವುದು ಹೊಸ ಕಾನೂನಲ್ಲ, ಓರಿಯೆಂಟೇಶನ್ ಕ್ಲಾಸ್‌.