samachara
www.samachara.com
‘ಮೂರು ಕುದುರೆ, ಒಂದು ಚುನಾವಣೆ’: ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು?
COVER STORY

‘ಮೂರು ಕುದುರೆ, ಒಂದು ಚುನಾವಣೆ’: ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು?

ಒಂದು ಕಡೆ ಇಮ್ರಾನ್ ಖಾನ್, ಇನ್ನೊಂದು ಕಡೆ ಶೆಹಬಾಜ್ ಷರೀಫ್. ಇವರ ನಡುವೆ ಇನ್ನೂ 29ರ ಯುವಕ ಬಿಲಾವಲ್  ಭುಟ್ಟೋ ಝರ್ದಾರಿ ಪಾಕಿಸ್ತಾನದ ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದಾರೆ.

ಪಾಕಿಸ್ತಾನದ ಸಾರ್ವತ್ರಿಕ ಚುನಾವಣೆಗೆ ಮೈದಾನ ಸಜ್ಜಾಗಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ನಿರ್ಗಮನ, ಬಂಧನ, ಜೈಲು.. ಹೀಗೆ ದೇಶದ ಚುನಾವಣೆಗೆ ಮುನ್ನ ಭರ್ಜರಿ ಪ್ರಹಸನಗಳು ನಡೆದಿವೆ. ಇದೆಲ್ಲದರ ಆಚೆಗೆ ಭೀಕರ ಬಾಂಬ್ ದಾಳಿಗಳು ರಕ್ತ ಹರಿಸಿವೆ, ಮಾಧ್ಯಮಗಳ ಮೇಲಿನ ನಿಯಂತ್ರಣ ಟೀಕೆಗೆ ಕಾರಣವಾಗಿದೆ, ದೇಶದ ಸೇನೆಯ ಹಸ್ತಕ್ಷೇಪ ಚರ್ಚೆಗೆ ಗುರಿಯಾಗಿದೆ. ಇವೆಲ್ಲದರ ಒಟ್ಟು ಸ್ವರೂಪ ಎಂಬಂತೆ ಪಾಕಿಸ್ತಾನದ ಚುನಾವಣೆ ಈ ಬಾರಿ ಹಿಂದೆಂದಿಗಿಂತಲೂ ರೋಚಕ ಮತ್ತು ರಸವತ್ತಾಗಿದೆ.

ಇಮ್ರಾನ್‌ ಖಾನ್ , ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ)

ಪಾಕಿಸ್ತಾನದಲ್ಲಿ ಇದೇ ಬುಧವಾರ (ಜುಲೈ 25) ಚುನಾವಣೆ ನಡೆಯಲಿದ್ದು ಪ್ರಚಾರ ಅಂತಿಮ ಹಂತಕ್ಕೆ ಬಂದು ನಿಂತಿದೆ. ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಮತ್ತು ಷರೀಫ್ ಸಹೋದರ ಶಹಬಾಜ್ ಷರೀಫ್ ನಡುವೆ ಪ್ರಧಾನಿ ಸ್ಥಾನಕ್ಕಾಗಿ ಭಾರೀ ಪೈಪೋಟಿ ಇದೆ. ಇವರ ನಡುವೆ 29ರ ಯುವಕ ಬಿಲಾವಲ್‌ ಬುಟ್ಟೋ ಝರ್ದಾರಿ ನಿರೀಕ್ಷೆ ಮೀರಿ ಬೆಂಬಲ ಪಡೆಯುತ್ತಿದ್ದು ಕೌಟುಂಬಿಕ ಹಿನ್ನೆಲೆಯ ಪಕ್ಷವನ್ನು ಮರಳಿ ಸ್ಥಾಪಿಸುವ ಉತ್ಸಾಹದಲ್ಲಿದ್ದಾರೆ. ಒಂದೊಮ್ಮೆ ಅತಂತ್ರ ಫಲಿತಾಂಶ ಬಂದಲ್ಲಿ ತಮಗೆ ಲಾಭವಾಗಬಹುದು ಎಂಬ ಲೆಕ್ಕಾಚಾರವೂ ಅವರ ಹಿಂದಿದೆ. ಹೀಗೆ ಈ ಮೂವರೂ ‘ಪ್ರಧಾನಿ ರೇಸ್’ ಜಗತ್ತಿನ ಗಮನ ಸೆಳೆದಿದೆ.

‘ಮೂರು ಕುದುರೆ, ಒಂದು ಚುನಾವಣೆ’: ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು?

ವಿಶಿಷ್ಟ ಕಾರಣಗಳಿಗಾಗಿ ಜಗತ್ತಿನಾದ್ಯಂತ ಮನ್ನಣೆ ಹೊಂದಿರುವ ರಾಜಕಾರಣಿ ಇಮ್ರಾನ್‌ ಖಾನ್. ಪಾಕಿಸ್ತಾನದ ಕ್ರಿಕೆಟ್‌ ಕಂಡ ಅತ್ಯುತ್ತಮ ಆಲ್‌ರೌಂಡರ್. 1980ರಲ್ಲಿ ಬಹುತೇಕ ಪಾಕಿಸ್ತಾನ ಕ್ರಿಕೆಟ್‌ನ ಕ್ರೀಸ್ ಆಕ್ರಮಿಸಿಕೊಳ್ಳುತ್ತಿದ್ದ ಖಾನ್ 1992ರಲ್ಲಿ ದೇಶ ಮೊದಲ ವಿಶ್ವಕಪ್‌ ಎತ್ತಿ ಹಿಡಿಯಲು ಕಾರಣೀಭೂತರಾಗಿದ್ದರು. ಕ್ರೀಡೆಗಷ್ಟೇ ಅಲ್ಲದೆ ಅವರ ಆಲ್‌ರೌಂಡರ್ ವ್ಯಕ್ತಿತ್ವ ರಾಜಕಾರಣದಲ್ಲೂ ಮುಂದುವರಿದಿದೆ. ತಮ್ಮ ಕ್ರಿಕೆಟ್‌ ಇಮೇಜನ್ನು ಮುಂದಿಟ್ಟುಕೊಂಡೇ ರಾಜಕಾರಣಕ್ಕಿಳಿದ ಖಾನ್ ಒಂದಲ್ಲ ಒಂದು ದಿನ ದೇಶದ ಚುಕ್ಕಾಣಿ ಹಿಡಿಯಬೇಕು ಎಂದು ಹೊರಟವರು. ಹಲವು ವರ್ಷಗಳ ಸುದೀರ್ಘ ಹೋರಾಟದ ನಂತರ ಹಂತ ಹಂತವಾಗಿ ಮೇಲಕ್ಕೆ ಬಂದು ಇದೀಗ ಫೈನಲ್ ಹಣಾಹಣಿಯಲ್ಲಿ ನಿಂತಿದ್ದಾರೆ.

ಅವರ ಪಕ್ಷ ‘ಪಾಕಿಸ್ತಾನಜಿ ತೆಹ್ರೀಕ್ ಇ ಇನ್ಸಾಫ್’; ಇದೊಂದು ಮಧ್ಯ ಬಲಪಂಥೀಯ ಪಕ್ಷ ಎನ್ನುತ್ತಾರೆ ಪಾಕಿಸ್ತಾನದ ಖ್ಯಾತ ಅಂಕಣಕಾರ ಮತ್ತು ರಾಜಕೀಯ ವಿಶ್ಲೇಷಕ ಮೊಷರಫ್ ಝೈದಿ. ಹಾಗೆ ನೋಡಿದರೆ ಖಾನ್ ಪಕ್ಷಕ್ಕೆ ಇಂಥಹದ್ದೇ ಎಂಬ ಸ್ಪಷ್ಟ ಸಿದ್ಧಾಂತಗಳಿಲ್ಲ ಎನ್ನುತ್ತಾರೆ ಅವರು.

ಸಿದ್ಧಾಂತ ಇದೆಯೋ ಇಲ್ಲವೋ 65 ವರ್ಷದ ಖಾನ್ ಮಾತ್ರ 1990ರಿಂದ ರಾಜಕಾರಣದಲ್ಲಿದ್ದಾರೆ. ಹೀಗಿದ್ದೂ ಯಾವತ್ತೂ ಇಷ್ಟು ಮುಂಚೂಣಿಯ ಹೋರಾಟದಲ್ಲಿ ಕಾಣಿಸಿಕೊಂಡವರಲ್ಲ. ಆದರೆ ಈ ಬಾರಿ ಅದೃಷ್ಟ ಅವರ ಪರವಾಗಿ ಇದ್ದಂತೆ ಕಾಣಿಸುತ್ತಿದೆ. ಹೇಗಾದರೂ ಮಾಡಿ ಈ ಬಾರಿ ಪ್ರಧಾನಿ ಹುದ್ದೆಗೆ ಏರಲೇ ಬೇಕು ಎಂಬ ದೃಢ ನಿರ್ಧಾರದಲ್ಲಿ ಅವರು ಮುನ್ನುಗ್ಗುತ್ತಿದ್ದಾರೆ. ಅವರು ಇಷ್ಟೊಂದು ಪ್ರಬಲ ಹುರಿಯಾಳಾಗಲು ದೇಶದ ಮಧ್ಯವರ್ಗದ ಜನರಲ್ಲಿ ಈ ಹಿಂದಿನ ಸರಕಾರಗಳ ಬಗೆಗಿರುವ ಸಿಟ್ಟು ಮತ್ತು ಹತಾಷೆ ಪ್ರಮುಖ ಕಾರಣ ಎನ್ನುತ್ತಾರೆ ಝೈದಿ. ಅವರ ಪ್ರಕಾರ ದೇಶವನ್ನು ಸರಿಸುಮಾರು ಅರ್ಧದಷ್ಟು ಅವಧಿಗೆ ಆಳಿದ, ಉಳಿದ ಸಮಯದಲ್ಲಿ ಪರೋಕ್ಷ ನಿಯಂತ್ರಣ ಇಟ್ಟುಕೊಂಡಿದ್ದ ಪಾಕಿಸ್ತಾನದ ಮಿಲಿಟರಿಯ ಕೃಪಾಕಟಾಕ್ಷವೂ ಖಾನ್ ಮೇಲಿದೆ.

ಹಾಗಂಥ ಅಲ್ಲಿಯ ಸೇನೆಯ ಬಗ್ಗೆ ಎಲ್ಲರಲ್ಲೂ ಒಂದೇ ಅಭಿಪ್ರಾಯವಿಲ್ಲ. ಸೇನೆ ಬಗೆಗಿನ ನಿಲುವಿನಲ್ಲಿ ದೇಶದ ಜನರು ಎರಡು ಹೋಳಾಗಿದ್ದಾರೆ ಎನ್ನುತ್ತಾರೆ ಪಾಕಿಸ್ತಾನದ ಮಾಜಿ ಅಮೆರಿಕಾ ರಾಯಭಾರಿ ಮತ್ತು ಪತ್ರಕರ್ತ ಹುಸೇನ್ ಹಖ್ಖಾನಿ. ದೇಶವನ್ನು ಮಿಲಿಟರಿ ಆಳಲು ಯೋಗ್ಯವಾದುದು ಎಂಬ ಅಭಿಪ್ರಾಯ ಒಂದು ಪಂಗಡದಲ್ಲಿದ್ದರೆ, ಅವರಿಗೇನು ಹಕ್ಕು ಎಂದು ಇನ್ನೊಂದು ಪಂಗಡ ಕೇಳುತ್ತಿದೆ. ಪಾಕಿಸ್ತಾನದ ಸೇನೆಯೇ ನವಾಜ್ ಷರೀಫ್ ಅವರನ್ನು ಜೈಲಿಗೆ ಕಳುಹಿಸಿದೆ ಎಂಬ ಅಭಿಪ್ರಾಯಗಳು ಜನರಲ್ಲಿರುವಾಗಲೇ, ಇದೇ ಸೇನೆಯಿಂದ ಒಂದಷ್ಟು ಲಾಭಗಳನ್ನು ಖಾನ್ ಪಡೆದುಕೊಂಡಿದ್ದಾರೆ ಎನ್ನುವುದು ಹಖ್ಖಾನಿ ಅಂದಾಜು.

ಈ ಹೇಳಿಕೆಯಲ್ಲಿ ಸತ್ಯಾಂಶವೂ ಇದೆ. ಅತ್ತ ಷರೀಫ್ ಜೈಲಿಗೆ ಹೋಗುತ್ತಿದ್ದಂತೆ ಅದರ ಲಾಭವನ್ನು ಸರಿಯಾಗಿ ಗಿಟ್ಟಿಸಿಕೊಂಡರು ಇದೇ ಖಾನ್. ಷರೀಫ್ ವಿಚಾರವನ್ನೇ ಮುಂದಿಟ್ಟುಕೊಂಡು ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಮುನ್ನಡೆಸಿ ಬೇಕಾದ ಪ್ರಚಾರವನ್ನೂ ಪಡೆದುಕೊಂಡರು. ಹಾಗಂಥ ಖಾನ್ ಸಾಚಾನಾ? ಇಲ್ಲ. ಅಧಿಕಾರದಲ್ಲಿ ಇಲ್ಲದೇ ಇದ್ದುದರಿಂದ ಖಾನ್ ಮೇಲೆ ಆರೋಪಗಳಿಲ್ಲ. ಆದರೆ ಅವರ ಸುತ್ತ ಮುತ್ತಲಿರುವವರ ಮೇಲೆ ಗುರುತರ ಭ್ರಷ್ಟಾಚಾರದ ಆರೋಪಗಳಿವೆ. ಇದೂ ಚುನಾವಣೆ ಮೇಲೆ ನಿಸ್ಸಂಶಯವಾಗಿ ತನ್ನದೇ ಆದ ಪರಿಣಾಮಗಳನ್ನು ಬೀರುತ್ತಿದೆ ಎನ್ನುತ್ತಾರೆ ಮಾಜಿ ರಾಯಭಾರಿ.

ಶಹಬಾಜ್ ಷರೀಫ್, ಪಾಕಿಸ್ತಾನ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್)

ಬುಧವಾರದ ಚುನಾವಣೆಯಲ್ಲಿ ಖಾನ್‌ಗೆ ಪ್ರಬಲ ಪೈಪೋಟಿ ನೀಡುತ್ತಿರುವ ನಾಯಕ ಶಹಬಾಜ್ ಷರೀಫ್. ಮಾಜಿ ಪ್ರಧಾನಿ ನವಾಜ್ ಷರೀಫ್ ಸಹೋದರ. ಮೂರು ಅವಧಿಗೆ ಪಾಕಿಸ್ತಾನದ ಅತೀ ದೊಡ್ಡ ಪ್ರಾಂತ್ಯ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದವರು.

‘ಮೂರು ಕುದುರೆ, ಒಂದು ಚುನಾವಣೆ’: ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು?

ಹಾಗೆ ನೋಡಿದರೆ ಶಹಬಾಜ್ ಪಿಎಂಎಲ್-ಎನ್‌ನ ಪ್ರಧಾನಿ ಹುರಿಯಾಳು ಆಗುವ ಸಾಧ್ಯತೆಗಳು ಕಡಿಮೆ ಇದ್ದವು. ಸಹೋದರ ರಾಜಕಾರಣದಲ್ಲಿದ್ದರೂ ನವಾಜ್ ಷರೀಫ್ ತಮ್ಮ ಮಗಳು ಮರಿಯಮ್‌ರನ್ನು ಉತ್ತರಾಧಿಕಾರಿಯಾಗಿ ತರಲು ಹೊರಟಿದ್ದರು. ಆದರೆ ಅವರೂ ಭ್ರಷ್ಟಾಚಾರದಲ್ಲಿ ಸಿಲುಕಿದ್ದರಿಂದ, ಅನಾಯಸವಾಗಿ ಪಕ್ಷದ ಚುಕ್ಕಾಣಿ ಶಹಬಾಜ್ ಕೈಗೆ ಬಂದಿದೆ.

ಪಾಕಿಸ್ತಾನದ ಚುನಾವಣೆಯಲ್ಲಿ ಶಹಬಾಜ್ ಪಡೆಯುತ್ತಿರುವ ಬೆಂಬಲ ನಿಜಕ್ಕೂ ಹಲವರನ್ನು ಅಚ್ಚರಿಗೆ ದೂಡಿದೆ. ನವಾಜ್ ಷರೀಫ್ ಜೈಲಿಗೆ ಹೋದರೂ ಅವರ ಕುಟುಂಬಕ್ಕೆ ಜನರಿಂದ ಅನುಕಂಪ ದೊರೆಯುತ್ತಿರುವುದು ಶಹಬಾಜ್ ಪಾಲಿಗೆ ಪ್ಲಸ್ ಪಾಯಿಂಟ್.

ಷರೀಫ್ ಕುಟುಂಬದ ಬಗ್ಗೆಯೂ ಪಾಕಿಸ್ತಾನದಲ್ಲಿ ಭಿನ್ನ ಅಭಿಪ್ರಾಯಗಳಿವೆ ಎನ್ನುತ್ತಾರೆ ಹಖ್ಖಾನಿ. ಕೆಲವರು ಈ ಹಗರಣಗಳಲ್ಲಿ ಇಡೀ ಕುಟುಂಬದ ಪಾಲಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ಆರೋಪ ಇದ್ದರೂ ಸರಿಯಾದ ದಾರಿಯಲ್ಲಿ ತನಿಖೆ ನಡೆದಿಲ್ಲ ಎಂದು ನಂಬಿದ್ದಾರೆ. ಉಳಿದವರು, ‘ನಾವು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ; ಅವರು ನಮ್ಮವರು’ ಎಂದುಕೊಂಡಿದ್ದಾರೆ.

ಇವೆಲ್ಲದರ ನಡುವೆ ಶಹಬಾಜ್ ಅತೀ ಹೆಚ್ಚಿನ ಜನಸಂಖ್ಯೆ ಇರುವ ಪಂಜಾಬ್ ಪ್ರಾಂತ್ಯವನ್ನು ಸಮರ್ಥವಾಗಿ ಮುನ್ನಡೆಸಿ ಜನ ಮೆಚ್ಚಗೆ ಗಳಿಸಿದವರು. ಇದು ಚುನಾವಣೆಯಲ್ಲಿ ಅವರಿಗೆ ಲಾಭ ತಂದುಕೊಡಬಹುದು ಎನ್ನುತ್ತಾರೆ ಝೈದಿ. ಉಳಿದೆಲ್ಲಾ ಪ್ರಾಂತ್ಯಗಳಿಗೆ ಹೋಲಿಸಿದರೆ ಪಂಜಾಬ್ ಹೆಚ್ಚಿನ ಮೂಲ ಸೌಕರ್ಯ ಮತ್ತು ಅಭಿವೃದ್ಧಿಯನ್ನು ಕಂಡಿದೆ.

ಹಾಗಂಥ ಅವರಲ್ಲಿ ಕೊರತೆ ಇಲ್ಲ ಎಂದಲ್ಲ. ಉತ್ತಮ ಆಡಳಿತರಗಾರನಾದರೂ ಶಹಬಾಜ್ ರಾಜಕೀಯವಾಗಿ ಗಟ್ಟಿ ಆಳಲ್ಲ ಎನ್ನುತ್ತಾರೆ ಝೈದಿ. ಖಾನ್‌ಗೆ ಇರುವಷ್ಟು ಜನಪ್ರಿಯತೆ, ರಾಜಕೀಯ ಪ್ರಸಿದ್ಧಿ ಶಹಬಾಜ್‌ಗೆ ಇಲ್ಲ. ಚಾಣಾಕ್ಷ ರಾಜಕೀಯ ನಡೆಗಳನ್ನು ಇಡುವ ಜಾಣ್ಮೆಯೂ ಅವರಿಗಿಲ್ಲ ಎನ್ನುತ್ತಾರೆ ಝೈದಿ. ಹೀಗಿದ್ದೂ ಅಣ್ಣ ನವಾಜ್ ಷರೀಫ್ ಅವರೇ ಒಂದಷ್ಟು ತಂತ್ರವನ್ನು ಹೆಣೆದಿದ್ದಾರೆ. ಅದರಲ್ಲಿ ಲಂಡನ್‌ನಿಂದ ಪಾಕಿಸ್ತಾನಕ್ಕೆ ಬಂದು ಶಿಕ್ಷೆ ಅನುಭವಿಸಿರುವುದೂ ಒಂದು. ಈ ನಡೆಯ ಮೂಲಕ ಷರೀಫ್ ‘ತಮ್ಮ ಕುಟುಂಬ ವಿಚಾರಣೆಯನ್ನು ಎದುರಿಸಿದೆ. ದೇಶ ಬಿಟ್ಟು ಓಡಿ ಹೋಗಿಲ್ಲ’ ಎಂಬ ಅಭಿಪ್ರಾಯವನ್ನು ಜನರಲ್ಲಿ ಬಿತ್ತಿದ್ದಾರೆ. ಚುನಾವಣೆಯಲ್ಲಿ ಇದು ಸಹಾಯಕ್ಕೆ ಬರುವ ಸಾಧ್ಯತೆ ಇದೆ.

ಇದೆಲ್ಲದರ ಆಚೆಗೆ ಭ್ರಷ್ಟಾಚಾರ ಎನ್ನುವುದು ಷರೀಫ್ ಪಾಲಿಗೆ ಹಿನ್ನೆಡೆಯಾಗಿರುವುದು ನಿಜ ಎನ್ನುತ್ತಾರೆ ಝೈದಿ. ಇದಕ್ಕೆ ಅವರು ಷರೀಫ್ ಕರ್ಮಭೂಮಿ ಪಂಜಾಬ್‌ನಲ್ಲೇ ಪಿಟಿಐ ಪ್ರಬಲವಾಗಿರುವುದನ್ನು ಉದಾಹರಣೆಯಾಗಿ ನೀಡುತ್ತಾರೆ.

ಬಿಲಾವಲ್ ಭುಟ್ಟೋ ಝರ್ದಾರಿ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ)

ಒಂದು ಕಡೆ ಖಾನ್, ಇನ್ನೊಂದು ಕಡೆ ಷರೀಫ್. ಇವರ ನಡುವೆ ಇನ್ನೂ 29ರ ಯುವಕ ಬಿಲಾವಲ್. ಪಾಕಿಸ್ತಾನದ ಮೊದಲ ಮಹಿಳಾ ಪ್ರಧಾನಿ ಬೆನೆಜೀರ್ ಭುಟ್ಟೋ ಮತ್ತು ಮಾಜಿ ಅಧ್ಯಕ್ಷ ಅಸೀಫ್ ಅಲಿ ಝರ್ದಾರಿಯ ಪುತ್ರ. ಕೌಟುಂಬಿಕ ಹಿನ್ನೆಲೆ ಗಟ್ಟಿಯಾಗಿದ್ರೂ ಜಗಜಟ್ಟಿಗಳ ಮಧ್ಯೆ ಬಿಲಾವಲ್ ಸದ್ಯ ಅಪ್ಪಚ್ಚಿಯಾಗಿದ್ದಾರೆ.

‘ಮೂರು ಕುದುರೆ, ಒಂದು ಚುನಾವಣೆ’: ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು?
ಚಿತ್ರ ಕೃಪೆ: ರೈಸಿಂಗ್ ಇಂಡಿಯಾ

ಮೈದಾನದಲ್ಲಿ ಯಾರು ಎಷ್ಟೇ ಪೈಪೋಟಿ ನೀಡಿದರೂ ಭುಟ್ಟೋ ಕುಟುಂಬದ ಬುಟ್ಟಿಯಲ್ಲಿ ಒಂದಷ್ಟು ಮತಗಳು ಇದ್ದೇ ಇದೆ. ಪ್ರಮುಖವಾಗಿ ಕುಟುಂಬದ ಕರ್ಮಭೂಮಿ ಸಿಂಧ್ ಪ್ರಾಂತ್ಯದಲ್ಲಿ ಇವತ್ತಿಗೂ ಭುಟ್ಟೋ ಹೆಸರು ಹೇಳಿದರೆ ಒಂದಷ್ಟು ಮತಗಳು ಬಿದ್ದೇ ಬೀಳುತ್ತದೆ. ಈ ಮತಗಳ ಜತೆಗೆ ಇನ್ನೊಂದಷ್ಟು ಜನರ ಬೆಂಬಲ ಗಿಟ್ಟಿಸಿಕೊಂಡು ಪಕ್ಷಕ್ಕೆ ಪುನರ್ಜನ್ಮ ನೀಡಬೇಕು ಎಂಬ ಹಂಬಲದಲ್ಲಿ ಭುಟ್ಟೋ ಕಣಕ್ಕಿಳಿದಿದ್ದಾರೆ.

ಹಾಗಂಥ ಅಧಿಕಾರಕ್ಕೇರುವ ದಾರಿಯಲ್ಲಿ ಭುಟ್ಟೋ ಇಲ್ಲ. ಒಂದು ಕಾಲದಲ್ಲಿ ಅವರ ಪಿಪಿಪಿ ಪಕ್ಷ ಪ್ರಬಲವಾಗಿತ್ತು. ಆದರೆ 2007ರಲ್ಲಿ ಬೆನೆಜೀರ್ ಭುಟ್ಟೋ ಸಾವಿನ ನಂತರ ಮತ್ತು ಝರ್ದಾರಿಯ ಅಧಿಕಾರದ ಅವಧಿಯಲ್ಲಿ ದೊಡ್ಡ ಮಟ್ಟಕ್ಕೆ ಸೊರಗಿತು. ಹೀಗಿರುವಾಗ ಕೆಡವಿದ ಕಟ್ಟಡವನ್ನು ಕಟ್ಟಿ ನಿಲ್ಲಿಸಲು ಬಿಲಾವಲ್ ಹೊರಟಿದ್ದಾರೆ.

“ಬಿಲಾವಲ್‌ಗೆ ಪಕ್ಷ ಕಟ್ಟಿ ನಿಲ್ಲಿಸುವ ಧಾವಂತ ಇಲ್ಲ. ಅವರಿಗೆ ಇದೊಂದೇ ಚುನಾವಣೆಯಲ್ಲ; ಇನ್ನೂ ಚುನಾವಣೆಗಳಿವೆ,” ಎನ್ನುತ್ತಾರೆ ಭುಟ್ಟೋ ಕುಟುಂಬದ ನಿಕಟವರ್ತಿ ಹಖ್ಖಾನಿ. ಬಿಲಾವಲ್ ಅವರಲ್ಲಿ ರಾಜಕೀಯ ಪ್ರಬುದ್ಧತೆ ಇದೆ. ಇದು ಪಕ್ಷದ ಪ್ರಣಾಳಿಕೆಯಲ್ಲೂ ವ್ಯಕ್ತವಾಗಿದೆ ಎನ್ನುತ್ತಾರೆ ಹಖ್ಖಾನಿ. “ಆತ ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿಲ್ಲ. ಪ್ರಣಾಳಿಕೆಯಲ್ಲಿ ಪಾಕಿಸ್ತಾನಕ್ಕೆ ನಿಜವಾಗಿ ಏನು ಬೇಕು ಎಂಬುದರ ಚಿತ್ರಣ ಇದೆ,” ಎನ್ನುವ ಅವರು, ಬಿಲಾವಲ್ ಇನ್ನೂ ಯುವಕನಾಗಿದ್ದು, ಈಗಲೇ ಅಧಿಕಾರಕ್ಕೇರಬೇಕು ಎಂದು ಆತುರಕ್ಕೆ ಬೀಳುತ್ತಿಲ್ಲ. ಸದ್ಯಕ್ಕೆ ತಮ್ಮ ತಾಯಿಗಿದ್ದ ಬೆಂಬಲಿಗರನ್ನು ಎಳೆದು ತರುತ್ತಿದ್ದು ನಿಧಾನಕ್ಕೆ ಪಕ್ಷವನ್ನು ಬೆಳೆಸಲು ಹೊರಟಿದ್ದಾರೆ.

ತಮ್ಮ ಪೋಷಕರ ಬೆಂಬಲಿಗರನ್ನು ಪಕ್ಷಕ್ಕೆ ಎಳೆದು ತಂದರೂ ಬಿಲಾವಲ್ ತಂದೆ ಮತ್ತು ತಾಯಿ ಇಬ್ಬರ ನೆರಳಿನಿಂದಲೂ ದೂರ ನಿಂತಿದ್ದಾರೆ. ತಮ್ಮದೇ ಆದ ಇಮೇಜನ್ನು ಬಿಲಾವಲ್ ಹೊಂದಿದ್ದಾರೆ ಎನ್ನುತ್ತಾರೆ ಹಖ್ಖಾನಿ. ಪಕ್ಷವನ್ನು ಔನತ್ಯಕ್ಕೆ ಎಳೆದೊಯ್ಯುವ ಶಕ್ತಿ ತನಗಿದೆ ಎಂಬುದನ್ನು ನಿರೂಪಿಸುತ್ತಲೇ, ತಾವೊಬ್ಬ ಪ್ರಬುದ್ಧ ಎಂಬುದನ್ನು ಅವರು ಹಲವು ಬಾರಿ ತೋರಿಸಿಕೊಟ್ಟಿದ್ದಾರೆ ಎನ್ನುವುದು ಹಖ್ಖಾನಿ ಅಭಿಪ್ರಾಯ.

ಇಷ್ಟೆಲ್ಲಾ ಇದ್ದರೂ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲಾ ನಿರೀಕ್ಷೆಗಳನ್ನು ಮೀರಿ ಬಿಲಾವಲ್ ಗೆಲ್ಲಲಿದ್ದಾರೆ ಎಂಬ ಯಾವ ಆಶಯಗಳೂ ಇಲ್ಲ. ಆದರೆ ಅವರು ಕಿಂಗ್ ಮೇಕರ್ ಆಗುವ ಎಲ್ಲಾ ಸಾಧ್ಯತೆಗಳಿವೆ ಎನ್ನುತ್ತಾರೆ ಪಾಕಿಸ್ತಾನದ ರಾಜಕೀಯ ಪಂಡಿತರು.

ಕರ್ನಾಟಕದಲ್ಲಾದಂತೆ ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭವಾಗಲೂಬಹುದು. ಒಂದೊಮ್ಮೆ ಅತಂತ್ರ ಫಲಿತಾಂಶ ಬಂದಲ್ಲಿ ಬಿಲಾವಲ್ ಎರಡೂ ಪಕ್ಷಗಳಿಂದ ದೂರ ಉಳಿಯಲು ಬಯಸಬಹುದು. ಆದರೆ ತಂದೆ ಝರ್ದಾರಿ ಎರಡೂ ಪಕ್ಷಗಳ ಮುಂದೆ ತಮ್ಮ ಬೇಡಿಕೆ ಮಂಡಿಸಿ ಮೈತ್ರಿಗೆ ಮುಂದಾಗಬಹುದು ಎಂದು ಅಂದಾಜಿಸುತ್ತಾರೆ ಹಖ್ಖಾನಿ.

ಹಾಗಾದರೆ ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು? ಬುಧವಾರದ ಚುನಾವಣೆ ಇದಕ್ಕೆ ಉತ್ತರ ನೀಡಲಿದೆ.

ಚಿತ್ರ: ಸಿಎನ್ಎನ್