ಗ್ರಾಮ ಸ್ವರಾಜ್ಯ ಮತ್ತು ಮಹಿಳಾ ಸಬಲೀಕರಣ; ಇದು ಜಾರ್ಖಂಡ್‌ನ ‘ಅಭಿವೃದ್ಧಿ’ ಮಾದರಿ
COVER STORY

ಗ್ರಾಮ ಸ್ವರಾಜ್ಯ ಮತ್ತು ಮಹಿಳಾ ಸಬಲೀಕರಣ; ಇದು ಜಾರ್ಖಂಡ್‌ನ ‘ಅಭಿವೃದ್ಧಿ’ ಮಾದರಿ

ಜಾರ್ಖಂಡ್‌ನಲ್ಲೀಗ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳ್ಳುತ್ತಿದೆ. ಇದು ಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಮಹಿಳೆಯರ ಅಭಿವೃದ್ಧಿಯನ್ನು ಗ್ರಾಮ ಸ್ವಾರಾಜ್ಯದ ಮೂಲ ಮಂತ್ರವನ್ನಾಗಿ ಸ್ವೀಕರಿಸಲಾಗಿದೆ.

ಈಗಲೂ ಕೂಡ ದೇಶದ ಹಲವಾರು ರಾಜ್ಯಗಳು ಸರಾಸರಿ ಅಭಿವೃದ್ಧಿ ದರದಿಂದ ಹಿಂದೆ ಉಳಿದಿವೆ. ಯೋಜಿತ ಜಿಡಿಪಿ ಗುರಿಯನ್ನು ಮುಟ್ಟಲು ಈ ರಾಜ್ಯಗಳಿಂದ ಸಾಧ್ಯವಾಗಿಲ್ಲ. ಈ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್‌ ಕೂಡ ಒಂದು. ರಾಜ್ಯದ ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಸಮುದಾಯಗಳಿಗೆ ಬಡತನ ಶಾಪವಾಗಿ ಪರಿಣಮಿಸಿದೆ. ಬಿಹಾರದಿಂದ 2000ದಲ್ಲಿ ಹೊರಬಂದ ಜಾರ್ಖಂಡ್‌ ಪ್ರದೇಶ ಹೊಸ ರಾಜ್ಯವಾಗಿ ಉದಯವಾದ ಕಾಲದಿಂದಲೂ ಕೂಡ ಸರಕಾರಗಳು ಸುಭದ್ರವಾಗಿರದೇ, ಅಭಿವೃದ್ಧಿಯ ಸೂಚನೆಗಳನ್ನೇ ಇಲ್ಲವಾಗಿಸಿವೆ. ಅಗಾಧವಾದ ಪ್ರಾಕೃತಿಕ ಸಂಪತ್ತನ್ನು ಹೊಂದಿದ್ದರೂ ಕೂಡ ನಿರುದ್ಯೋಗ ತಾಂಡವವಾಡುತ್ತಿದೆ.

ಈಗ ಜಾರ್ಖಂಡ್‌ನ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಸ್ವ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದು, ರಾಜ್ಯವನ್ನು ನಿಧಾನವಾಗಿ ಸುಸ್ಥಿರ ಅಭಿವೃದ್ಧಿಯೆಡೆಗೆ ಕೊಂಡೊಯ್ಯುತ್ತಿವೆ. ಮುಖ್ಯವಾಗಿ ಪರಿಶಿಷ್ಟ ವರ್ಗ ಮತ್ತು ಬುಡಕಟ್ಟು ಜನರು ಬದಲಾವಣೆಯನ್ನು ಕಾಣುತ್ತಿದ್ದಾರೆ. ರಾಜ್ಯ ಸರಕಾರ ಬಡ ವರ್ಗಕ್ಕೆ ಸ್ವ ಉದ್ಯೋಗದ ದಾರಿ ಮಾಡಿಕೊಡುತ್ತಿದ್ದು, ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಹಳ್ಳಿಗಳಲ್ಲಿ ಅಭಿವೃದ್ಧಿಯಲ್ಲಿ ಹೊಸ ಹೊಸ ಪ್ರಯೋಗಗಳು ಕಾಣಿಸುತ್ತಿವೆ. ‘ವಿಲೇಜ್‌ ಸ್ವರಾಜ್‌ ಆಂದೋಲನ’ದ ಮೂಲಕ ಸರಕಾರ ಹಲವಾರು ಯೋಜನೆಗಳನ್ನು ಪರಿಚಯಿಸುತ್ತಿದ್ದು, ಹಳ್ಳಿಗರ ಅಭಿವೃದ್ಧಿಗೆ ಮುಂದಾಗಿದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ರಾಜ್ಯದ 21 ಜಿಲ್ಲೆಗಳಲ್ಲಿನ 252 ಪರಿಶಿಷ್ಟ ಜಾತಿ ಜನರು ಹೆಚ್ಚಾಗಿರುವ ಹಳ್ಳಿಗಳನ್ನು ಗುರುತಿಸಿದ್ದು, ಈ ಹಳ್ಳಿಗಳ ಜನರನ್ನು ಕೇಂದ್ರ ಸರಕಾರದ 7 ಪ್ರಮುಖ ಯೋಜನೆಗಳ ಫಲಾನುಭವಿಗಳನ್ನಾಗಿ ಮಾಡಲಾಗಿದೆ. ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿಗಳ ಗುರಿಗಳನ್ನು (Sustainable Development Goals -SDGs) 2030ರ ಒಳಗೆ ತಲುಪುವ ಸಲುವಾಗಿ ಬಡತನ ನಿರ್ಮೂಲನೆ ಮತ್ತು ನಿರುದ್ಯೋಗ ನಿವಾರಣೆಗೆ ಸಂಬಂಧಪಟ್ಟ ಯೋಜನೆಗಳನ್ನು ಜಾರಿಗೆ ತರುವತ್ತ ಸರಕಾರ ಹೆಜ್ಜೆ ಇಟ್ಟಿದೆ.

ವಿಶ್ವಸಂಸ್ಥೆಯೂ ಕೂಡ ಜಾಗತಿಕ ಸುಸ್ಥಿರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ಅದಕ್ಕಾಗಿ ಕೆಲವು ಗುರಿಗಳನ್ನು ಹಾಕಿಕೊಂಡಿದೆ. ಸುಸ್ಥಿರ ಅಭಿವೃದ್ಧಿ ಗುರಿ ಸಂಖ್ಯೆ 1, ಎಲ್ಲಾ ರೂಪದ ಬಡತನಕ್ಕೆ ಕೊನೆಹಾಡಬೇಕು ಎಂದು ಹೇಳುತ್ತದೆ. ಗುರಿ ಸಂಖ್ಯೆ 1.1 ಹೇಳುವಂತೆ, ಎಲ್ಲಾ ರಾಜ್ಯಗಳಲ್ಲಿನ ಕಡುಬಡತನವನ್ನು 2030ರ ಒಳಗೆ ಇಲ್ಲವಾಗಿಸಬೇಕು. ದಿನವೊಂದಕ್ಕೆ 1.25 ಅಮೆರಿಕನ್‌ ಡಾಲರ್‌ಗಿಂತಲೂ ಕಡಿಮೆ ಆದಾಯ ಹೊಂದಿರುವ ಜನರನ್ನು ಕಡು ಬಡವರು ಎಂದು ಕರೆಯಲಾಗಿದೆ. ಗುರಿ ಸಂಖ್ಯೆ 1.2 ಹೇಳುವಂತೆ, 2030ರ ಒಳಗೆ ಬಡತನದೊಳಗೆ ನರಳುತ್ತಿರುವ ಎಲ್ಲಾ ವಯಸ್ಸಿನ ಪುರುಷ, ಮಹಿಳೆ ಮತ್ತು ಮಕ್ಕಳ ಸಂಖ್ಯೆಯನ್ನು ಈಗಿರುವುದಕ್ಕಿಂತ ಅರ್ಧದಷ್ಟು ಕಡಿಮೆ ಮಾಡಬೇಕು.

ವಿಶ್ವ ಸಂಸ್ಥೆಗಳ ಈ ಗುರಿಯತ್ತ ಓಡುತ್ತಿರುವ ಜಾರ್ಖಂಡ್‌ ಸರಕಾರ, ರಾಜ್ಯದ ಜನಸಂಖ್ಯೆಯ ಅರ್ಧ ಭಾಗವಾದ ಮಹಿಳೆಯರ ಕುರಿತು ಹೆಚ್ಚಿನ ಆಸಕ್ತಿಯನ್ನು ವಹಿಸಿಕೊಂಡಿದೆ. ಸ್ವ ಸಹಾಯ ಸಂಘಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರಿಗೆ ಸ್ವ ಉದ್ಯೋಗ ದೊರಕಿಸಿ ಸ್ವಾವಲಂಭಿಗಳನ್ನಾಗಿಸುವತ್ತ ಶ್ರಮಿಸುತ್ತಿದೆ. ಬಡ ಮಹಿಳೆಯರಿಗೆ ಶಿಕ್ಷಣ ಒದಗಿಸಿ, ಉದ್ಯೋಗ ನೀಡುತ್ತಿದೆ. ಈವರೆಗೂ ರಾಜ್ಯದ 24 ಜಿಲ್ಲೆಗಳಲ್ಲಿ 1,33,000 ಸ್ವ ಸಹಾಯ ಸಂಘಗಳು ರಚನೆಯಾಗಿದ್ದು, ಎಲ್ಲಾ ಸಂಘಗಳೂ ಕೂಡ ಜೀವನೋಪಾಯಕ್ಕಾಗಿ ನೀಡುವ ಚಿಕ್ಕ ಪ್ರಮಾಣದ ಸಾಲದ ಯೋಜನೆಯೊಂದಿಗೆ ಸಮೀಕರಣಗೊಂಡಿವೆ. ಸ್ಥಳೀಯ ಭಾಷೆಯಲ್ಲಿ ಈ ಸ್ವ ಸಹಾಯ ಸಂಘಗಳನ್ನು ಚಂಪಾ ಬಹಾ ಸ್ವ ಸಹಾಯ ಸಂಘ, ಗುಲಾಬ್‌ ಸ್ವ ಸಹಾಯ ಸಂಘ ತೋಬಾ ಬಹಾ ಸ್ವ ಸಹಾಯ ಸಂಘ ಮತ್ತು ಅಖಿಲ್‌ ಮಶಾಲ್‌ ಸ್ವ ಸಹಾಯ ಸಂಘಗಳೆಂದು ಕರೆಯಲಾಗುತ್ತದೆ.

ಸಾಂದರ್ಭಿಕ ಚಿತ್ರ.
ಸಾಂದರ್ಭಿಕ ಚಿತ್ರ.

ಒಟ್ಟು 2,723 ಪಂಚಾಯಿತಿಗಳ ಅಡಿಯಲ್ಲಿ ಬರುವ 15,836 ಹಳ್ಳಿಗಳಲ್ಲಿನ ಮಹಿಳೆಯರು ಹೊಸ ಶಿಕ್ಷಣಕ್ಕೆ ತೆರೆದುಕೊಂಡಿದ್ದಾರೆ. ಮೇಕೆ ಸಾಕಾಣಿಕೆ, ಹಂದಿ ಸಾಕಾಣಿಕೆ, ಮೀನು ಸಾಕಾಣಿಕೆ, ವ್ಯವಸಾಯಗಳ ಹೊಸ ವಿಧಾನಗಳನ್ನು ಕಲಿಯುತ್ತಿದ್ದಾರೆ.

ಇಂತಹದ್ದೇ ಒಂದು ಗುಂಪಿನ ಸದಸ್ಯೆಯಾಗಿರುವ ಸೊನಿ ಹೆಂಬ್ರಮ್‌ ಹೇಳುವಂತೆ, ಮಹಿಳೆಯರು ಈಗ ಸಾಂಪ್ರದಾಯಿಕ ಕೃಷಿಯನ್ನು ಬಿಟ್ಟು ಹೊಸ ಮತ್ತು ಆಧುನಿಕ ಕೃಷಿ ಪದ್ಧತಿಯತ್ತ ತಿರುಗಿದ್ದಾರೆ. ಬೆಳೆ ಬೆಳೆಯಲು ಈ ಮಹಿಳೆಯರು ಯೂರಿಯಾ ಅಥವಾ ಪಾಸ್ಪರಸ್‌ ಗೊಬ್ಬರವನ್ನು ಬಳಸುತ್ತಿಲ್ಲ. ಗುಂಪಿನಲ್ಲಿನ ಮಹಿಳೆಯರು ತಮ್ಮ ನಡುವೆ ತಾವೇ ವ್ಯವಹಾರ ನಡೆಸುತ್ತಾರೆ. ಗುಂಪಿನ ಹಣದಲ್ಲಿ ಸಾಲ ಪಡೆದು ಸ್ವಂತ ಉದ್ದಿಮೆಯನ್ನು ಸ್ಥಾಪಿಸಿದ್ದಾರೆ. ನಂತರ ಸಾಲದ ಹಣವನ್ನು ತೀರಿಸುತ್ತಾರೆ. ಹೊಲಿಗೆ ಯಂತ್ರ, ಅಗರಬತ್ತಿ ಉತ್ಪಾದನೆ ಮತ್ತು ಕಡಿಮೆ ಬಂಡವಾಳದ ಅಂಗಡಿಗಳ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಂಡಿದ್ದಾರೆ.

ದುಮ್ಕಾ ಜಿಲ್ಲೆಯ ಚೋರ್ಕಡಾ ಪಂಚಾಯಿತಿ ವ್ಯಾಪ್ತಿಯ ರಾಣಿ ಜಾನ್ಸಿ ಸ್ವ ಸಹಾಯ ಸಂಘದ ಅಧ್ಯಕ್ಷೆ ನಿಶಾ ದೇವಿ ಹೇಳುವಂತೆ, ಅವರ ಹಳ್ಳಿಯಲ್ಲಿ ಒಟ್ಟು 8 ಸ್ವ ಸಹಾಯ ಸಂಘಗಳಿವೆ. ಎಲ್ಲಾ ಸಂಘಗಳನ್ನು ಒಟ್ಟುಗೂಡಿಸಿ ಒಕ್ಕೂಟವನ್ನು ರಚಿಸಿಕೊಳ್ಳಲಾಗಿದೆ. ಗುಂಪಿನ ಸದಸ್ಯರಾಗಿರುವ 300 ಮಹಿಳೆಯರು ಅಗರಬತ್ತಿ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಕೆಲವು ಮಹಿಳೆಯರು ಸೋಲಾರ್‌ ಲ್ಯಾಂಪ್‌ಗಳ ಮಾರಾಟ ಮಾಡುತ್ತಿದ್ದಾರೆ. ಈಗ ಸರಕಾರ ಸಣ್ಣ ಮತ್ತು ಗುಡಿ ಕೈಗಾರಿಕೆಗಳಗೆ ಪ್ರೋತ್ಸಾಹ ನೀಡುತ್ತಿದೆ. ಈ ಪ್ರೋತ್ಸಾಹದಿಂದಾಗಿ ಹಲವಾರು ಗ್ರಾಮಗಳಲ್ಲಿನ ಮಹಿಳೆಯರು ಹವಾಯ್‌ ಚಪ್ಪಲಿಯ ಉತ್ಪಾದನೆಯನ್ನು ಪ್ರಾರಂಭಿಸಿದ್ದಾರೆ.

ಗ್ರಾಮ ಸ್ವರಾಜ್ಯ ಮತ್ತು ಮಹಿಳಾ ಸಬಲೀಕರಣ; ಇದು ಜಾರ್ಖಂಡ್‌ನ ‘ಅಭಿವೃದ್ಧಿ’ ಮಾದರಿ

ಸ್ವ ಸಹಾಯ ಸಂಘಗಳು ಮಹಿಳೆಯರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದಲ್ಲದೇ, ಸ್ವ ಉದ್ಯಮಕ್ಕೆ ಬೇಕಾದ ತರಬೇತಿಯನ್ನೂ ಕೂಡ ನೀಡುತ್ತಿವೆ. ಈ ತರಬೇತಿಗಳು ಮಹಿಳೆಯಲ್ಲಿ ಆತ್ಮ ವಿಶ್ವಾಸವನ್ನು ಹೆಚ್ಚಿಸಿವೆ. ಕೆಲವು ಯೋಜನೆಗಳು ಮಹಿಳೆಯರ ಆದಾಯವನ್ನು ಹೆಚ್ಚಿಸುವುದಕ್ಕಷ್ಟೇ ಅಲ್ಲದೇ ಮಹಿಳೆಯರ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದಕ್ಕೂ ಕೂಡ ಪ್ರಾಮುಖ್ಯತೆ ನೀಡಿವೆ. ಈ ಮುಂಚೆ ಸೂಲಗಿತ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿತಾ ಅರೋರ್‌, ಈಗ ಸ್ವಂತ ಆಟೋ ರಿಕ್ಷಾವನ್ನು ಓಡಿಸಿ ಹೆಚ್ಚಿನ ಆದಾಯ ಪಡೆಯುತ್ತಿದ್ದಾರೆ. ಸ್ವ ಸಹಾಯ ಸಂಘಗಳ ಸಾಧನೆಗೆ ಇದು ಚಿಕ್ಕ ಉದಾಹರಣೆ.

ಮಹಿಳೆಯರು ಉಳುಮೆ ಮಾಡುವುದಕ್ಕೂ ಮುಂಚೆ ಮಣ್ಣಿನ ಪರೀಕ್ಷೆ ಮಾಡಿಸುತ್ತಾರೆ. ಮಣ್ಣಿನ ಸಾರಕ್ಕೆ ಸೂಕ್ತವೆನಿಸುವ ಬೆಳೆ ಬೆಳೆಯುತ್ತಾರೆ. ಪಶು ಸಂಗೋಪನೆ ಹಾಗೂ ಕೋಳಿ ಸಾಕಾಣಿಕೆಯನ್ನು ಉಪ ಕಸುಬಾಗಿ ನಡೆಸುತ್ತಿದ್ದಾರೆ. ಹಲವಾರು ಬಡುಕಟ್ಟು ಕುಟುಂಬಗಳು ಈ ವಿಧಾನದಿಂದಲೇ ಹೆಚ್ಚಿನ ಲಾಭ ಕಾಣುತ್ತಿದ್ದಾರೆ. ಈಗ ಸರಕಾರವೇ ರೈತರಿಂದ ಹುಣಸೆ ಹಣ್ಣು, ಮಾವು ಸೇರಿದಂತೆ ಇತ್ಯಾದಿ ಬೆಳೆಗಳನ್ನು ನೇರವಾಗಿ ಕೊಳ್ಳುತ್ತಿದೆ. ಇದರಿಂದಲೂ ಕೂಡ ರೈತರು ಹೆಚ್ಚಿನ ಹಣವನ್ನು ಕಾಣುವಂತಾಗಿದೆ.

ರಾಜ್ಯದ ಎಲ್ಲಾ ಹಳ್ಳಿಗಳಲ್ಲಿ ಗ್ರಾಮಾಭಿವೃದ್ಧಿ ಸಮಿತಿಗಳು ನಿರ್ಮಾಣಗೊಂಡಿವೆ. ತಮ್ಮ ಹಳ್ಳಿ 2030ರ ವೇಳೆಗೆ ಯಾವ ತೆರನಾದ ಅಭಿವೃದ್ಧಿಯನ್ನು ಹೊಂದಿರಬೇಕು ಎಂದು ಸಮಿತಿಗಳೇ ಯೋಜನೆಗಳನ್ನು ಸಿದ್ಧಪಡಿಸಿವೆ. ಈ ಸಮಿತಿಗಳ ಕಾರ್ಯಕ್ಕೆ ಅಗತ್ಯವಾದ ಹಣವನ್ನು ಈ ಮಹಿಳಾ ಸ್ವ ಸಹಾಯ ಸಂಘಗಳೇ ಒದಗಿಸುತ್ತವೆ.

ಗ್ರಾಮ ಸ್ವರಾಜ್ಯ ಮತ್ತು ಮಹಿಳಾ ಸಬಲೀಕರಣ; ಇದು ಜಾರ್ಖಂಡ್‌ನ ‘ಅಭಿವೃದ್ಧಿ’ ಮಾದರಿ

ಜಾರ್ಖಂಡ್‌ ಸರಕಾರ 16 ವರ್ಷಗಳ ನಂತರ ಇದೇ ಮೊದಲ ಬಾರಿಗೆ ಉದ್ಯೋಗದ ಅವಕಾಶಗಳನ್ನು ನೀಡುತ್ತಿದೆ. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿದೆ. ಅಗತ್ಯವಾಗಿರುವ ಅಭಿವೃದ್ಧಿಯ ಅವಕಾಶಗಳನ್ನು ಒದಗಿಸುತ್ತಿದೆ. ರಾಜ್ಯದ ಪ್ರತಿಯೊಬ್ಬ ಮಹಿಳೆಯ ಅಭಿವೃದ್ಧಿಯನ್ನು ತನ್ನ ಗುರಿಯಾಗಿಸಿಕೊಂಡಿರುವ ಸರಕಾರ, ರಾಜ್ಯವನ್ನು ಬಡತನದಿಂದ ಕೊಂಚ ಕೊಂಚವಾಗಿ ಮೇಲೆತ್ತುತ್ತಿದೆ.

ಒಟ್ಟಾರೆಯಾಗಿ ಜಾರ್ಖಂಡ್‌ನಲ್ಲೀಗ ಗ್ರಾಮ ಸ್ವರಾಜ್ಯದ ಕನಸು ಸಾಕಾರಗೊಳ್ಳುವತ್ತ ಹೆಜ್ಜೆ ಇಟ್ಟಿದೆ. ಜನತೆಗೆ ಹೊಸ ಭರವಸೆಯನ್ನು ಮೂಡಿಸಿದೆ. ಮಹಿಳೆಯರ ಅಭಿವೃದ್ಧಿಯನ್ನು ಗ್ರಾಮ ಸ್ವಾರಾಜ್ಯದ ಮೂಲ ಮಂತ್ರವನ್ನಾಗಿ ಸ್ವೀಕರಿಸಲಾಗಿದೆ. ನಗರ, ಶ್ರೀಮಂತ ವರ್ಗಗಳು ಅಭಿವೃದ್ಧಿಯ ಕೇಂದ್ರಗಳಾಗಿರದೇ, ಕೇಂದ್ರ ಸ್ಥಾನದಲ್ಲಿ ಹಿಂದುಳಿದ ಹಳ್ಳಿಗಳ ಬಡ ಮಹಿಳೆಯರು ನಿಂತಿದ್ದಾರೆ. ಅಭಿವೃದ್ಧಿಯ ಪಥ ಮೇಲ್ಮುಖವಾಗಿ ಸಾಗುತ್ತಿದೆ. ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ಈ ‘ಶಾಂತ ಕ್ರಾಂತಿ’ಯ ಅಭಿವೃದ್ಧಿ ಮಾದರಿಯನ್ನು ಉಳಿದ ರಾಜ್ಯಗಳೂ ಅಳವಡಿಸಿಕೊಳ್ಳುವ ಮನಸ್ಸು ಮಾಡಬೇಕಿದೆ.

ಮಾಹಿತಿ ಮೂಲ: ‘ಎಎನ್‌ಐ’