samachara
www.samachara.com
‘ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ’ ಹುಚ್ಚಾಟ, ದೇಶದಲ್ಲಿ ‘ಕರೆನ್ಸಿ ಅಧ್ವಾನ’
COVER STORY

‘ರಿಸರ್ವ್‌ ಬ್ಯಾಂಕ್ ಆಫ್ ಇಂಡಿಯಾ’ ಹುಚ್ಚಾಟ, ದೇಶದಲ್ಲಿ ‘ಕರೆನ್ಸಿ ಅಧ್ವಾನ’

ಭಿನ್ನ ಗಾತ್ರದ ನೋಟಿನೊಂದಿಗೆ ಜನರನ್ನು ಗೊಂದಲಕ್ಕೆ ದೂಡುವ ತನ್ನ ಹಳೇ ಚಾಳಿಯನ್ನು ಆರ್‌ಬಿಐ ಮುಂದುವರಿಸಿದೆ. ಜತೆಗೆ ಬ್ಯಾಂಕ್‌ಗಳಿಗೆ ತಾಂತ್ರಿಕ ಅಡಚಣೆ ಉಂಟು ಮಾಡುವ ಪ್ರಕ್ರಿಯೆಯೂ ಇದಾಗಿದೆ. 

ಹೊಸ 100 ರೂಪಾಯಿಯ ನೋಟನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸದ್ಯದಲ್ಲೇ ಚಲಾವಣೆಗೆ ಬಿಡಲಿದೆ. ಮಹಾತ್ಮಾ ಗಾಂಧಿ ಸರಣಿಯ ನೋಟು ಇದಾಗಿದ್ದು ‘ರಾಣಿ ಕಿ ವಾವ್’ ಎಂದು ಹೆಸರಿಡಲಾಗಿದೆ. ಎಂದಿನಂತೆ ಈ ನೋಟಿನ ಗಾತ್ರವನ್ನೂ ಹಳೆಯ 100 ರೂಪಾಯಿ ನೋಟಿನ ಗಾತ್ರಕ್ಕಿಂತ ಭಿನ್ನವಾಗಿಡಲಾಗಿದೆ. ಹಳೆಯ ನೋಟು 73ಮಿಮೀ*157ಮಿಮೀ ಗಾತ್ರದಲ್ಲಿದ್ದರೆ, ಹೊಸ ನೋಟು 66ಮಿಮೀ*142ಮಿಮೀ ಇದೆ. ಈ ಮೂಲಕ ಭಿನ್ನ ಗಾತ್ರದೊಂದಿಗೆ ಜನರನ್ನು ಗೊಂದಲಕ್ಕೆ ದೂಡುವ ತನ್ನ ಹಳೇ ಚಾಳಿಯನ್ನು ಆರ್‌ಬಿಐ ಮುಂದುವರಿಸಿದೆ. ಜತೆಗೆ ಬ್ಯಾಂಕ್‌ಗಳಿಗೆ ತಾಂತ್ರಿಕ ಅಡಚಣೆ ಉಂಟು ಮಾಡುವ ಪ್ರಕ್ರಿಯೆಯೂ ಇದಾಗಿದೆ.

ಅಲ್ಲಿಂದ ಇಲ್ಲೀವರೆಗೆ:

ಜನರನ್ನು ಅನಾಣ್ಯೀಕರಣದ ಮೂಲಕ ಜೀವ ಹಿಂಡಿತ್ತು ಆರ್‌ಬಿಐ. ಅನಾಣ್ಯೀಕರಣದ ಜತೆ ಜತೆಗೇ ರಿಸರ್ವ್‌ ಬ್ಯಾಂಕ್‌ನ ಹುಚ್ಚಾಟವೂ ಆರಂಭವಾಗಿತ್ತು. ಮೊದಲ ಹೆಜ್ಜೆಯಾಗಿ 200, 500ರ ನೋಟುಗಳ ಬದಲು ನೇರ 2,000 ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ಬಿಟ್ಟಿತ್ತು ಆರ್‌ಬಿಐ. ಈ ಮೂಲಕ ಜನರಿಗೆ ಚಿಲ್ಲರೆ ಸಿಗದಂತೆ ಮಾಡಿ, ಪಿಂಕ್ ನೋಟು ಕೇವಲ ಸೆಲ್ಫಿಗಳಲ್ಲಿ ರಾರಾಜಿಸತೊಡಗಿತ್ತು. ಅಷ್ಟಕ್ಕೇ ಸೀಮಿತವಾಗದೆ ಗಾತ್ರವನ್ನು ಬದಲಿಸಿ ಬ್ಯಾಂಕುಗಳ ಎಟಿಎಂ ಮೆಷೀನ್‌ಗಳಿಗೆ ತಾಂತ್ರಿಕ ತೊಂದರೆಯನ್ನು ತಂದಿಕ್ಕಿತ್ತು. ಈ ಹೊಸ ಪೀಕಲಾಟದಿಂದ ಹೊರಬರಲು ಇಡೀ ದೇಶದ ಎಟಿಎಂಗಳಿಗೆ ಹಲವು ದಿನಗಳೇ ಬೇಕಾಗಿ ಬಂತು.

ಇದಾದ ನಂತರ ಚಲಾವಣೆಗೆ ಬಂದ 500, 200, 50 ಮತ್ತು 10 ರೂಪಾಯಿ ಮುಖಬೆಲೆಯ ನೋಟುಗಳು ಬೇರೆ ಬೇರೆ ಬಣ್ಣದಲ್ಲಿ ಬಂದವು. ಜೊತೆಗೆ ಗಾತ್ರವೂ ಬದಲಾಯಿತು. ಇದು ಜನರನ್ನು ಗೊಂದಲದಲ್ಲಿ ಕೆಡವಲು ಆರಂಭಿಸಿತು.

ಸಾಮಾನ್ಯವಾಗಿ ಜನರು ಒಂದು ವಿನ್ಯಾಸ, ಬಣ್ಣ, ಗಾತ್ರಕ್ಕೆ ಹೊಂದಿಕೊಂಡಿರುತ್ತಾರೆ. ಅದರ ಆಧಾರದ ಮೇಲೆ ಇದು ಇದೇ ನೋಟು ಎಂಬ ಪೂರ್ವ ನಿರ್ಧಾರ ಅವರ ತಲೆಯಲ್ಲಿ ಮೊಳೆತಿರುತ್ತದೆ. ಯಾವುದೇ ವಸ್ತುವನ್ನು ದೀರ್ಘ ಕಾಲ ಬಳಸಿದಾಗ ಬರುವ ನೈಸರ್ಗಿಕ ಅಭ್ಯಾಸವದು. ಆದರೆ ಈ ಹೊಸ ನೋಟುಗಳ ಚಿತ್ರ-ವಿಚಿತ್ರ ಬಣ್ಣ, ಗಾತ್ರದಿಂದಾಗಿ ಜನರ ಈ ಅಭ್ಯಾಸಕ್ಕೆ ಪೆಟ್ಟು ನೀಡಿತು. ಇದರಿಂದ ತಪ್ಪಾಗಿ ನೋಟುಗಳನ್ನು ಕೊಡುವ, ತೆಗೆದುಕೊಳ್ಳುವ ಸಮಸ್ಯೆಗಳು ಒಂದಷ್ಟು ದಿನ ಉಂಟಾದವು.

ಸ್ವಲ್ಪ ಕಣ್ಣು ಮಸುಕಾಗಿದ್ದವರಿಗೆ, ದೃಷ್ಟಿ ದೋಷ ಇದ್ದವರಿಗೆ ಇದು ಮತ್ತೂ ಪ್ರಯಾಸದಾಯಕವಾಯಿತು.

ಅಲ್ಲದೆ 2000 ರೂಪಾಯಿ ಮುಖಬೆಲೆಯ ನೋಟುಗಳಲ್ಲಾದಂತೆ ಇಲ್ಲೂ ಬ್ಯಾಂಕುಗಳು ಎಟಿಎಂಗಳನ್ನು ಮಾರ್ಪಾಟು ಮಾಡಬೇಕಾದ ತೊಂದರೆ ಅನುಭವಿಸಿದವು.

10 ರೂಪಾಯಿ ನಾಣ್ಯ ಗೊಂದಲ:

ಮುದ್ರಣದ ಸಂದರ್ಭದಲ್ಲಿ ಕನಿಷ್ಠ ಸಾಮಾನ್ಯ ಪ್ರಜ್ಞೆ ಕಳೆದುಕೊಂಡರೆ ಏನಾಗುತ್ತದೆ ಎಂಬುದಕ್ಕೆ ಆರ್‌ಬಿಐನ ಈ ಹುಚ್ಚಾಟಗಳು ಉದಾಹರಣೆಯಂತಿದ್ದವು. ಅದಕ್ಕೆ ಶಿಖರಪ್ರಾಯದಂತೆ ಇದ್ದದ್ದು 10 ರೂಪಾಯಿ ನಾಣ್ಯದ ಗೊಂದಲ.

‘ದೇಶದಲ್ಲಿ 10 ರೂಪಾಯಿಯ ನಕಲಿ ನಾಣ್ಯಗಳು ಓಡಾಡುತ್ತಿವೆ’ ಎಂಬ ದೊಡ್ಡ ಮಟ್ಟದ ಗಾಳಿ ಸುದ್ದಿಯೊಂದು ಅನಾಣ್ಯೀಕರಣದ ನಂತರ ದೇಶದಲ್ಲಿ ಓಡಾಡಲು ಆರಂಭಿಸಿತು. ಈ ಸಂದರ್ಭದಲ್ಲಿ ಜನರಿಗೆ ತಪ್ಪು ಮಾಹಿತಿ ನೀಡುವಲ್ಲಿ ಪೊಲೀಸ್ ಇಲಾಖೆ, ಸರಕಾರಿ ಸಂಸ್ಥೆಗಳ ಪಾತ್ರವೂ ಇತ್ತು. ಇವುಗಳ ಒಟ್ಟು ಪರಿಣಾಮ ಎಂಬಂತೆ ದೇಶದಲ್ಲೇ 10 ರೂಪಾಯಿ ನಾಣ್ಯ ಚಲಾವಣೆ ನಿಂತು ಹೋಯಿತು.

ಈ ಗೊಂದಲದ ಮೂಲ ಹುಡುಕಿಕೊಂಡು ಹೊರಟರೆ ಅದು ಮತ್ತೆ ಆರ್‌ಬಿಐ ಮನೆ ಬಾಗಿಲಿಗೆ ಬಂದು ನಿಂತಿತು. ನಂತರ ಪ್ರತಿಕ್ರಿಯೆ ನೀಡಿದ್ದ ಬ್ಯಾಂಕ್ ದೇಶದಲ್ಲಿ ಬರೋಬ್ಬರಿ ಒಂದಲ್ಲ ಎರಡಲ್ಲ 14 ಬಗೆಯ 10 ರೂಪಾಯಿ ನಾಣ್ಯಗಳು ಚಲಾವಣೆಯಲ್ಲಿವೆ ಎಂದು ಹೇಳಿತು. ಯಾರಿಗಾದರೂ ಈ 14 ನಾಣ್ಯಗಳ ವಿನ್ಯಾಸವನ್ನು ನೆನಪಿಟ್ಟುಕೊಳ್ಳುವುದು ಅಸಾಧ್ಯದ ಮಾತೇ ಸರಿ. ಹೀಗಿರುವಾಗ ಗೊಂದಲ ಹುಟ್ಟಿಕೊಳ್ಳುವುದು ಸಹಜವೇ.

1 ಮತ್ತು 2 ರೂ. ಸಮಸ್ಯೆ:

ಇದೇ ರೀತಿ 1 ರೂಪಾಯಿ ಮತ್ತು 2 ರೂಪಾಯಿ ನಾಣ್ಯದ ವಿನ್ಯಾಸವನ್ನೂ ಬದಲಾಯಿಸಲಾಯಿತು. ಹೊಸ ಒಂದು ರೂಪಾಯಿಯ ಗಾತ್ರವನ್ನು ಸಣ್ಣದು ಮಾಡಿ, ಹೊಸ 2 ರೂಪಾಯಿಯ ಗಾತ್ರವನ್ನು ಹಳೆಯ 1 ರೂಪಾಯಿಯ ಗಾತ್ರಕ್ಕೆ ಇಳಿಸಲಾಯಿತು. ಇದರಿಂದ 2 ರೂಪಾಯಿ ನಾಣ್ಯ ಹಾಕಿ ತೂಕ ನೋಡುವ ಯಂತ್ರಗಳಲ್ಲೆಲ್ಲಾ ಸಮಸ್ಯೆ ಆರಂಭವಾಯಿತು. ಕೊನೆಗೆ ಗಾತ್ರದ ಆಧಾರದ ಮೇಲೆ ಕಾರ್ಯ ನಿರ್ವಹಿಸುವ ಈ ಯಂತ್ರಗಳನ್ನು ಹೊಸ 2 ರೂ. ಗಾತ್ರಕ್ಕೆ ಹೊಂದಿಕೆ ಮಾಡಲಾಯಿತು. ಆಗ ಮತ್ತೊಂದು ಸಮಸ್ಯೆ ಆರಂಭವಾಯಿತು.

ಹೊಸ 2 ರೂ. ಗಾತ್ರ ಮತ್ತು ಹಳೆ 1 ರೂ. ಗಾತ್ರ ಒಂದೇ ಆಗಿ, ಯಂತ್ರಗಳು 1 ರೂ ನಾಣ್ಯದಲ್ಲಿಯೂ ಕಾರ್ಯ ನಿರ್ವಹಿಸಲು ಆರಂಭಿಸಿದವು. ಇದರಿಂದ ಅಂಗಡಿ ಮಾಲೀಕರು ನಷ್ಟ ಅನುಭವಿಸಬೇಕಾಯಿತು. ಮತ್ತು ಈ ನಷ್ಟ ಇನ್ನೂ ಮುಂದುವರಿದಿದೆ.

ಇದೀಗ ಮತ್ತೆ 100 ರೂಪಾಯಿ ನೋಟು ಬಂದಿದೆ. ಆರ್‌ಬಿಐ ಹಳೆ ಚಾಳಿ ಇಲ್ಲೂ ಮುಂದುವರಿದಿದೆ. ಮತ್ತೆ ಎಟಿಎಂಗಳನ್ನು ಇವುಗಳಿಗೆ ಹೊಂದಾಣಿಕೆ ಮಾಡಬೇಕಾದ ಅನಿವಾರ್ಯತೆ ಬ್ಯಾಂಕ್‌ಗಳಿಗೆ ಎದುರಾದರೆ, ಜನರು ಮತ್ತೆ ಗೊಂದಲ ಅನುಭವಿಸಲಿದ್ದಾರೆ.

ಅರ್ಥ ಕ್ರಾಂತಿ ಹೆಸರಿನಲ್ಲಿ ದೇಶದಲ್ಲಿ ಪರೋಕ್ಷ ಆರ್ಥಿಕ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ ಸರಕಾರ, ಅದರ ತಾಳಕ್ಕೆ ತಕ್ಕ ಹಾಗೆ ಕುಣಿದ ರಿಸರ್ವ್‌ ಬ್ಯಾಂಕ್‌ ಸಮಸ್ಯೆಗಳನ್ನು ಪರಿಹರಿಸುವ ಮಾರ್ಗದಲ್ಲಿ ಆಲೋಚನೆ ಮಾಡುತ್ತಿಲ್ಲ. ಅದಕ್ಕೆ ಉದಾಹರಣೆ ದಿನಕ್ಕೊಂದು ಹೊಸ ವಿನ್ಯಾಸದ, ಬಣ್ಣದ ನೋಟುಗಳು. ಹೀಗಾಗಿ, ಎಲ್ಲಾ ಬಣ್ಣದ ನೋಟುಗಳು ಚಲಾವಣೆಗೆ ಬರುತ್ತಿವೆ, ಕಪ್ಪು ಹಣವೊಂದನ್ನು ಹೊರತುಪಡಿಸಿ ಎಂಬ ತಮಾಷೆಯೂ ಹುಟ್ಟಿಕೊಂಡಿದೆ. ಇದೊಂದು ರೀತಿ ದೇಶದ ಅರ್ಥ ವ್ಯವಸ್ಥೆ ಇವತ್ತು ಎದುರಿಸುತ್ತಿರುವ ಸೀರಿಯಸ್ ಕಾಮಿಡಿ.