‘ಮಠದಲ್ಲಿ ಹೆಣ’: ಆಹಾರದಲ್ಲಿ ವಿಷಪ್ರಾಷನಕ್ಕೆ ಇದೆ ನಾನಾ ವಿಧಾನ...
COVER STORY

‘ಮಠದಲ್ಲಿ ಹೆಣ’: ಆಹಾರದಲ್ಲಿ ವಿಷಪ್ರಾಷನಕ್ಕೆ ಇದೆ ನಾನಾ ವಿಧಾನ...

ಶೀರೂರು ಶ್ರೀಗಳ ವಿಚಾರದಲ್ಲಿ ಅವರು ಚಿಕಿತ್ಸೆಗೂ ದಾಖಲಾಗುವ ಮೊದಲು ಅವರಿಗೆ ಬೇಧಿ ಇತ್ತು ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ. ಇದು ವಿಷಾಹಾರದಿಂದ ಸಂಭವಿಸಿದ್ದೇ ಎಂಬುದಕ್ಕೆ ಮರಣೋತ್ತರ ವರದಿಯೇ ಉತ್ತರ ನೀಡಬೇಕಾಗಿದೆ.

ಉಡುಪಿಯ ಅಷ್ಟಮಠಗಳಲ್ಲೊಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನೊಂದಿಗೆ ‘ವಿಷಪ್ರಾಷನ’ ವಿಚಾರ ಸುದ್ದಿಕೇಂದ್ರಕ್ಕೆ ಬಂದಿದೆ. ‘ಸ್ವಾಮೀಜಿ ಸಾವಿನಲ್ಲಿ ವಿಷಪ್ರಾಷನ ನಡೆದಿರುವ ಅನುಮಾನಗಳಿವೆ. ಇದಕ್ಕಾಗಿ ಟಾಕ್ಸಿಲಾಜಿಕಲ್‌ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಮಣಿಪಾಲದ ಕೆಎಂಸಿ ಆಸ್ಪತ್ರೆ ತನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. ಹೀಗಾಗಿ ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವು ಆಕಸ್ಮಿಕವೋ, ಕೊಲೆಯೋ ಎಂಬ ಪ್ರಶ್ನೆ ಇದೇ ಸಂದರ್ಭದಲ್ಲಿ ಉದ್ಭವಿಸಿದೆ.

ಏನಿದು ವಿಷಪ್ರಾಷನ?

ಮನುಷ್ಯನ (ಅಥವಾ ಪ್ರಾಣಿಗಳ) ಅಂಗಾಗಳನ್ನು ರಸಾಯನಿಕ ಪ್ರಕ್ರಿಯೆ ಮೂಲಕ ಹಾಳುಗೆಡಿಸುವ ಪ್ರಕ್ರಿಯೆಯೇ ವಿಷಪ್ರಾಷನ. ಇದರಲ್ಲಿ ಆಕಸ್ಮಿಕವಾಗಿ ಆಹಾರ ವಿಷಾಹಾರವಾಗುವುದೂ ಇದೆ. ಕೆಲವೊಮ್ಮೆ ಬೇಕೆಂದೇ ವಿಷವನ್ನು ಆಹಾರದಲ್ಲಿ ಬೆರೆಸುವುದೂ ಇದೆ.

ಆಕಸ್ಮಿಕವಾಗಿ ಆಹಾರಕ್ಕೆ ಹಲ್ಲಿ ಬಿದ್ದೋ, ಆಹಾರದಲ್ಲಿ ವ್ಯತ್ಯಯವಾಗಿಯೋ ಅಥವಾ ತಪ್ಪಿ ವಿಷದ ಬೀಜ, ವಿಷದ ಅಣಬೆಗಳನ್ನು ಸೇವನೆ ಮಾಡಿಯೋ ಆಹಾರ ವಿಷವಾಗುವ ಸಾಧ್ಯತೆ ಇದೆ. ಬ್ಯಾಕ್ಟೀರಿಯಾ, ವೈರಸ್‌ ಮತ್ತು ಪರಾವಲಂಬಿ ಜೀವಿಗಳಿಂದ ಈ ರೀತಿ ನೈಸರ್ಗಿಕವಾಗಿ ಆಹಾರ ವಿಷವಾಗುತ್ತದೆ. ಸದ್ಯಕ್ಕೆ ಈ ರೀತಿಯ ‘ಆಕಸ್ಮಿಕ’ ಘಟನೆಗಳನ್ನು ಪಕ್ಕಕ್ಕೆ ಎತ್ತಿಡೋಣ.

ಕೊಲೆ ಮಾಡುವ ಉದ್ದೇಶದಿಂದ ನಡೆಯುವ ವಿಷಪ್ರಾಷನಗಳ ಬಗ್ಗೆ ನೋಡುವುದಾದರೆ ಈ ಬಗೆಗೆ ನೂರಾರು ದಾರಿಗಳು ಇದೆ ಎನ್ನುತ್ತಾರೆ ತಜ್ಞರು. ಇತಿಹಾಸದ ತುಂಬಾ ವಿಷಪ್ರಾಷನದ ಮೂಲಕ ಕೊಲೆಗಳು ನಡೆಯುತ್ತಾ ಬಂದಿವೆ. ಕಾಲದಿಂದ ಕಾಲಕ್ಕೆ ಈ ಪ್ರಕ್ರಿಯೆಯಲ್ಲಿ ಬದಲಾವಣೆಗಳೂ ನಡೆದಿವೆ.

ಇಲ್ಲಿ ಮುಖ್ಯವಾಗಿ ‘ವೇನಮ್’ ವಿಷ ಮತ್ತು ‘ಟಾಕ್ಸಿಕ್’ ವಿಷಗಳು ಬರುತ್ತವೆ. ಪ್ರಾಣಿಗಳಲ್ಲಿರುವ ವಿಷಗಳನ್ನ ವೇನಮ್ ಎನ್ನುತ್ತಾರೆ. ಮೀನು, ಹಾವು ಸೇರಿದಂತೆ ಹಲವು ಪ್ರಾಣಿಗಳಲ್ಲಿ ತಮ್ಮ ಮೇಲೆ ದಾಳಿ ಮಾಡುವ ವೈರಿಗಳ ಮೇಲೆ ವಿಷ ಕಾರುವ, ಆ ಮೂಲಕ ಪ್ರಾಣ ರಕ್ಷಣೆ ಮಾಡಿಕೊಳ್ಳುವ ನೈಸರ್ಗಿಕ ವ್ಯವಸ್ಥೆಯನ್ನು ಹೊಂದಿರುತ್ತವೆ. ಇದೇ ವಿಷ ಆಹಾರದ ಮೂಲಕ ಹೊಟ್ಟೆಗೆ ಹೋಗಿ ಸಾವಿಗೆ ಕಾರಣವಾಗಬಹುದು.

ಇನ್ನು ರಸಾಯನಿಕಗಳನ್ನು ಆಹಾರದಲ್ಲಿ ಬಳಸಿ ಕೊಲೆ ಮಾಡುವುದಕ್ಕೆ ಟಾಕ್ಸಿಕ್ ಎನ್ನುತ್ತಾರೆ. ಟಾಕ್ಸಿಕ್‌ನಲ್ಲಿ ನೂರಾರು ವಿಧಾನಗಳಿವೆ. ತರಹೇವಾರಿ ರಸಾಯನಿಕಗಳು, ವಿಷಗಳು ಅಸ್ತಿತ್ವದಲ್ಲಿದ್ದು ಇವುಗಳನ್ನು ಕೊಲೆಗೆ ಬಳಸಬಹುದಾಗಿದೆ.

ಹಳ್ಳಿಗಳಲ್ಲಿ ಬಳಸುವ ಇಲಿ ಪಾಷಾಣ, ಕ್ರಿಮಿನಾಶಕಗಳು ಕೂಡ ವಿಷಗಳೇ ಆಗಿವೆ. ಆದರೆ ‘ಈ ರೀತಿಯ ಪದಾರ್ಥಗಳನ್ನು ಆಹಾರದಲ್ಲಿ ಬಳಸಿದರೆ ತಿಳಿಯುತ್ತದೆ. ಇದನ್ನು ಯಾರು ಸೇವಿಸಲು ಸಾಧ್ಯ ಎಂದು ಪ್ರಶ್ನಿಸುತ್ತಾರೆ’ ವಿಧಿ ವಿಜ್ಞಾನ ಪ್ರಯೋಗಾಲಯದ ಮಾಜಿ ಅಧಿಕಾರಿ ರವೀಂದ್ರ.

ಇದಲ್ಲದೆ ಸುಧಾರಿತ ವಿಷಗಳನ್ನು ಹೈಪ್ರೊಫೈಲ್ ಕೊಲೆಗಳಲ್ಲಿ ಬಳಸಿದ ಉದಾಹರಣೆಗಳು ಜಗತ್ತಿನಲ್ಲಿವೆ. ಇದೇ ರೀತಿಯ ಯಾವುದಾದರೂ ವಿಷ ಶೀರೂರು ಶ್ರೀಗಳ ಕೊಲೆಯಲ್ಲಿ ಬಳಕೆಯಾಗಿರಬಹುದೇ ಎಂಬ ಅನುಮಾಗಳು ಜನರ ತಲೆಯಲ್ಲಿವೆ. ಆದರೆ, “ಟಿವಿಗಳಲ್ಲಿ ನೀಡುತ್ತಿರುವ ಮಾಹಿತಿಗಳನ್ನು ನೋಡಿದಾಗ ಇದು ನೈಸರ್ಗಿಕವಾಗಿ ಆಹಾರ ವಿಷಾಹಾರವಾದಂತೆ ಕಾಣಿಸುತ್ತದೆ,” ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ರವೀಂದ್ರ.

ಆಹಾರದಲ್ಲಿ ವಿಷ ಬೆರೆತಾಗ ಮನುಷ್ಯನಲ್ಲಿ ಹಲವು ಪ್ರಕ್ರಿಯೆಗಳು ನಡೆಯುತ್ತವೆ. ವಿಷದಿಂದ ವಿಷಕ್ಕೆ ಇದು ವ್ಯತ್ಯಸವಾಗುತ್ತದೆಯಾದರೂ ಬೇಧಿ, ವಾಂತಿ, ತೀವ್ರ ಜ್ವರ, ಸುಸ್ತು, ತೀವ್ರ ತಲೆನೋವು, ರಕ್ತವಾಂತಿಯಮಂಥ ಲಕ್ಷಣಗಳು ಸಾಮಾನ್ಯವಾಗಿ ಕಂಡು ಬರುತ್ತವೆ.

ಶೀರೂರು ಶ್ರೀಗಳ ವಿಚಾರದಲ್ಲಿ ಅವರು ಚಿಕಿತ್ಸೆಗೂ ದಾಖಲಾಗುವ ಮೊದಲು ಅವರಿಗೆ ಬೇಧಿ ಇತ್ತು ಎಂದು ಕೆಎಂಸಿ ವೈದ್ಯರು ಹೇಳಿದ್ದಾರೆ. ಇದು ವಿಷಾಹಾರದಿಂದ ಸಂಭವಿಸಿದ್ದೇ ಎಂಬುದಕ್ಕೆ ಮರಣೋತ್ತರ ವರದಿಯೇ ಉತ್ತರ ನೀಡಬೇಕಾಗಿದೆ. ಈಗಾಗಲೇ ಟಾಕ್ಸಿಲಾಜಿಕಲ್ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಎದುರು ನೋಡಲಾಗುತ್ತಿದೆ. ಅಲ್ಲೀವರೆಗೂ ಈ ಪ್ರಕರಣದಲ್ಲಿ ಆಹಾರವೇ ವಿಷವಾಯಿತಾ, ಇಲ್ಲ ವಿಷ ಬೆರೆಸಿದ ಆಹಾರ ಸೇವಿಸಲಾಯಿತಾ ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ.