ಲಕ್ಷ್ಮೀವರ ತೀರ್ಥರ ‘ಅಸಹಜ ಸಾವು’: ಉಡುಪಿ ರಥಬೀದಿಯಲ್ಲಿ ಹುಟ್ಟಿದ ಅನುಮಾನಗಳ ಸುತ್ತ...
COVER STORY

ಲಕ್ಷ್ಮೀವರ ತೀರ್ಥರ ‘ಅಸಹಜ ಸಾವು’: ಉಡುಪಿ ರಥಬೀದಿಯಲ್ಲಿ ಹುಟ್ಟಿದ ಅನುಮಾನಗಳ ಸುತ್ತ...

ಲಕ್ಷ್ಮೀವರ ತೀರ್ಥರ ಸಾವಿನ ಸುದ್ದಿ ಅಷ್ಟಮಠಗಳಿರುವ ಉಡುಪಿಯ ರಥಬೀದಿಯಲ್ಲಿ ದಟ್ಟ ಅನುಮಾನಗಳನ್ನು ಹುಟ್ಟುಹಾಕಿದೆ. ಉಡುಪಿಯ ಕೃಷ್ಣ ದೇವಸ್ಥಾನವನ್ನು ‘ಪರ್ಯಾಯ’ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಬಂದ ಅಷ್ಟಮಠಗಳ ನಡುವಿನ ಕಲಹ ಗೌಪ್ಯವಾಗೇನೂ ಇರಲಿಲ್ಲ.

ಅಷ್ಟಮಠಗಳ ಪೈಕಿ ಒಂದಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಗುರುವಾರ ಬೆಳಗ್ಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬೆನ್ನಿಗೇ ಸಾವು ಅಸಹಜ ಎಂಬ ಅನುಮಾನ ವ್ಯಕ್ತವಾಗಿದೆ.

ಲಕ್ಷ್ಮೀವರ ತೀರ್ಥರು ಮಂಗಳವಾರ ಶೀರೂರಿನ ತಮ್ಮ ಮೂಲ ಮಠದಲ್ಲಿ ಆಹಾರ ಸೇವಿಸಿದ ನಂತರ ಅಸ್ವಸ್ಥರಾಗಿದ್ದರು. ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಂದ ಜುಲೈ 18 ರಂದು ರಾತ್ರಿ 1.05 ಕ್ಕೆ ಕೆಎಂಸಿಗೆ ದಾಖಲಿಸಲಾಗಿತ್ತು. “ಆಸ್ಪತ್ರೆಗೆ ದಾಖಲಾಗುವ ಹೊತ್ತಿಗೆ ತೀವ್ರ ಅಸ್ವಸ್ಥರಾಗಿದ್ದರು. ಅವರನ್ನು ವೈದ್ಯಕೀಯ ಪರೀಕ್ಷೆಗಳಿಗೆ ಒಳಪಡಿಲಾಗಿತ್ತು. ರಕ್ತ ಪರೀಕ್ಷೆಯಲ್ಲಿ ಅವರ ದೇಹದಲ್ಲಿ ವಿಷದ ಅಂಶಗಳು ಕಂಡುಬಂದಿದ್ದವು. ಸಂಪೂರ್ಣ ವರದಿಗಾಗಿ ಎದುರು ನೋಡುತ್ತಿದ್ದೆವು. ಹೀಗಿರುವಾಗಲೇ ಅವರು ಗುರುವಾರ ಬೆಳಗ್ಗೆ 8.30ಕ್ಕೆ ಬಹುಅಂಗಾಂಗ ವೈಫಲ್ಯದಿಂದ ಸಾವನ್ನಪ್ಪಿದರು,’’ ಎಂದು ಲಕ್ಷ್ಮೀವರ ತೀರ್ಥರಿಗೆ ಚಿಕಿತ್ಸೆ ನೀಡುತ್ತಿದ್ದ ಕೆಎಂಸಿಯ ಡಾ. ಅವಿನಾಶ್ ಶೆಟ್ಟಿ ‘ಸಮಾಚಾರ’ಕ್ಕೆ ತಿಳಿಸಿದರು.

ಸದ್ಯ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಈ ಸಂಬಂಧ ಇಲ್ಲೀವರೆಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ. ಶೀರೂರು ಮಠ ಹಿರಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತದೆ.

“ಪ್ರಕರಣವನ್ನು ಅಸಹಜ ಸಾವು ಎಂದು ದಾಖಲಿಸಿಕೊಳ್ಳಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರು ನೋಡುತ್ತಿದ್ದೇವೆ,’’ ಎಂದು ಸ್ಥಳದಲ್ಲಿರುವ ಬ್ರಹ್ಮಾವರ ಠಾಣೆಯ ವೃತ್ತ ನಿರೀಕ್ಷಕರು ತಿಳಿಸಿದರು.

ಉಡುಪಿಯಲ್ಲಿ ಗಾಢ ಅನುಮಾನ:

ಲಕ್ಷ್ಮೀವರ ತೀರ್ಥರ ಸಾವಿನ ಸುದ್ದಿ ಅಷ್ಟಮಠಗಳಿರುವ ಉಡುಪಿಯ ರಥಬೀದಿಯಲ್ಲಿ ದಟ್ಟ ಅನುಮಾನಗಳನ್ನು ಹುಟ್ಟುಹಾಕಿದೆ. ಉಡುಪಿಯ ಕೃಷ್ಣ ದೇವಸ್ಥಾನ ಮತ್ತು ಅದನ್ನು ‘ಪರ್ಯಾಯ’ದ ಹೆಸರಿನಲ್ಲಿ ಪೂಜೆ ಮಾಡಿಕೊಂಡು ಬಂದ ಅಷ್ಟಮಠಗಳ ನಡುವಿನ ಕಲಹ ಗೌಪ್ಯವಾಗೇನೂ ಇರಲಿಲ್ಲ.

Also read: ‘ಬಯಲಿಗೆ ಬಿದ್ದ ಅಷ್ಟಮಠಗಳ ಶೀತಲ ಸಮರ’ ಮತ್ತು ಬೆನ್ನುಮೂಳೆ ನೋಯಿಸಿಕೊಂಡ ಪೇಜಾವರರು!

ಅದರಲ್ಲೂ ಶೀರೂರು ಮಠದ ಲಕ್ಷ್ಮೀವರರ ವಿರುದ್ಧ ಉಳಿದ ಮಠಾಧೀಶರು ಕೆಂಡಕಾರುತ್ತಲೇ ಬಂದಿದ್ದರು. ಇತ್ತೀಚೆಗೆ ಲಕ್ಷ್ಮೀವರ ತೀರ್ಥರು ತಮ್ಮ ಪೂಜಾ ಕೈಂಕರ್ಯಗಳನ್ನು ಬಿಟ್ಟು ಅನಗತ್ಯ ವಿಚಾರಗಳಲ್ಲಿ ತಲೆ ಹಾಕುತ್ತಿದ್ದಾರೆ ಎಂದು ಸ್ವಾಮೀಜಿಗಳು ಸಭೆಯನ್ನೂ ನಡೆಸಿದ್ದರು. ಅದರಲ್ಲಿ ಸ್ಥಳೀಯ ಶಾಸಕ ರಘುಪತಿ ಭಟ್ ಕೂಡ ಪಾಲ್ಗೊಂಡಿದ್ದು ಸ್ಥಳೀಯ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

ಈ ಹಿಂದೆ ಶೀರೂರು ಮಠದ ಲಕ್ಷ್ಮೀವರ ತೀರ್ಥರು “ನನಗೆ ಮಕ್ಕಳಿದ್ದಾರೆ. ಅಷ್ಟೆ ಅಲ್ಲ ಅಷ್ಟಮಠದ ಎಲ್ಲಾ ಮಠಾಧೀಶರಿಗೂ ಮಕ್ಕಳಿದ್ದಾರೆ,’’ ಎಂದು ಹೇಳಿದ್ದರು. ಅವರ ಈ ಖಾಸಗಿ ಮಾತುಕತೆ ಬಹಿರಂಗವಾದ ನಂತರ ಉಡುಪಿಯ ರಥಬೀದಿಯಲ್ಲಿ ವಿವಾದವೊಂದು ಹುಟ್ಟಿಕೊಂಡಿತ್ತು.

ಈ ಘಟನೆ ನಂತರ ಅಷ್ಟಮಠಗಳ ನಡುವಿನ ಶೀಲತ ಸಮರ ಆಗಾಗ್ಗೆ ಹೊರಬೀಳುತ್ತಲೇ ಬಂದಿತ್ತು. ಆದರೆ ಅದೀಗ ಲಕ್ಷ್ಮೀವರ ತೀರ್ಥರ ಅಸಹಜ ಸಾವಿನ ಮೂಲಕ ಹೊಸ ಹಂತವನ್ನು ತಲುಪಿರುವ ಅನುಮಾನಗಳಿವೆ.

“ಈ ಸಾವು ಅಸಹಜ ಇರಬಹುದು. ಈ ಬಗ್ಗೆ ತನಿಖೆ ನಡೆದರೆ ಸತ್ಯಾಂಶ ಹೊರಬೀಳಬಹುದು. ಆದರೆ, ರಾಜ್ಯ ಸರಕಾರ ಆಗಲೀ, ಕೇಂದ್ರ ಸರಕಾರ ಆಗಲೀ ತನಿಖೆ ನಡೆಸಿದರೆ ಸತ್ಯ ಮುಚ್ಚಿ ಹೋಗುತ್ತದೆ ಎಂಬುದು ಉಡುಪಿ ರಥಬೀದಿಯ ಚಿಕ್ಕಮಕ್ಕಳಿಗೂ ಗೊತ್ತು. ಹೀಗಾಗಿ ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆದರೆ ಮಾತ್ರವೇ ಸತ್ಯ ಗೊತ್ತಾಗಬಹುದು. ಇಲ್ಲವಾದರೆ ಇದೂ ಕೂಡ ಮುಚ್ಚಿ ಹೋಗುತ್ತದೆ,’’ ಎನ್ನುತ್ತಾರೆ ಉಡುಪಿ ಮೂಲದ ಮಾನವ ಹಕ್ಕು ಹೋರಾಟಗಾರ ಶ್ರೀರಾಮ್ ದಿವಾಣ.

ಉಡುಪಿಯ ಕೃಷ್ಣ ದೇವಸ್ಥಾನದ ಆವರಣದಲ್ಲಿ ಅಷ್ಟಮಠಗಳಿವೆ. ಫಲಿಮಾರು, ಅದಮಾರು, ಕೃಷ್ಣಾಪುರ, ಪುತ್ತಿಗೆ, ಶೀರೂರು, ಸೋದೆ, ಪೇಜಾವರ, ಕಾಣಿಯೂರು ಮಠಗಳು ಇಲ್ಲಿ ಪ್ರತ್ಯೇಕ ಕಚೇರಿಗಳನ್ನು ಹೊಂದಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ಪರ್ಯಾಯದ ಹೆಸರಿನಲ್ಲಿ ಈ ಮಠಗಳು ಸರತಿಯಲ್ಲಿ ಕೃಷ್ಣನ ಪೂಜೆಯ ಭಾಗ್ಯವನ್ನು ಪಡೆದುಕೊಳ್ಳುತ್ತವೆ. ಪರ್ಯಾಯದ ಹೆಸರಿನಲ್ಲಿ ಪೂಜೆಗೆ ನೇಮಕಗೊಳ್ಳುವ ಮಠದ ಸ್ವಾಮೀಜಿಗಳನ್ನು ಹೊರತುಪಡಿಸಿದರೆ, ಉಳಿದ ಮಠಾಧೀಶರು ತಮ್ಮ ಮೂಲ ಮಠದಲ್ಲಿ ನೆಲೆಗೊಳ್ಳುತ್ತಾರೆ. ಸರಿಯಾಗಿ 16 ವರ್ಷಗಳಿಗೊಮ್ಮೆ ಪರ್ಯಾಯದ ಹೆಸರಿನಲ್ಲಿ ಈ ಮಠಗಳು ಉಡುಪಿ ಕೃಷ್ಣ ದೇವಸ್ಥಾನವನ್ನು ಸುಪರ್ದಿಗೆ ಪಡೆದುಕೊಳ್ಳುತ್ತವೆ.

“ಉಡುಪಿ ಕೃಷ್ಣ ದೇವಸ್ಥಾನದಲ್ಲಿ ಅಷ್ಟಮಠಗಳ ಕುಟುಂಬಸ್ಥರೇ ತುಂಬಿಕೊಂಡಿದ್ದಾರೆ. ಹಣಕಾಸಿನ ಅವ್ಯವಹಾರವೂ ನಡೆಯುತ್ತಿದೆ. ಅವುಗಳನ್ನು ದಾಖಲೆ ಸಮೇತ ಬಯಲು ಮಾಡುತ್ತೇನೆ’ ಎಂದು ಲಕ್ಷ್ಮೀವರ ತೀರ್ಥರು ಹಿಂದೊಮ್ಮೆ ಹೇಳಿಕೆ ನೀಡಿದ್ದರು. ಇತ್ತೀಚೆಗೆ ಅವರು ತಮ್ಮ ಬದಲಿಗೆ ಶಿಷ್ಯರೊಬ್ಬರನ್ನು ಮಠಾಧೀಶರಾಗಿ ಶೀರೂರು ಮಠಕ್ಕೆ ಆಯ್ಕೆ ಮಾಡಲಿದ್ದಾರೆ ಎಂಬ ಸುದ್ದಿಯೂ ಹೊರಬಿದ್ದಿತ್ತು.

ಹೀಗೆ, ಅಷ್ಟಮಠಗಳ ಅಪಸವ್ಯಗಳನ್ನು ಸಾರ್ವಜನಿಕ ಚರ್ಚೆಗೆ ಎಳೆದು ತಂದ ಶೀರೂರು ಮಠದ ಲಕ್ಷ್ಮೀವರ ತೀರ್ಥರ ಸಾವು ಸಹಜವಾಗಿಯೇ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಸಮಯದಲ್ಲಿ ನ್ಯಾಯಯುತ ತನಿಖೆ ನಡೆಯಬೇಕಿದೆ. ಆದರೆ ರಾಜ್ಯ ಸರಕಾರ ಅಥವಾ ಸ್ಥಳೀಯ ಪೊಲೀಸರಿಂದ ಅಂತಹದೊಂದು ತನಿಖೆ ನಡೆಯಬಹುದು ಎಂಬ ಆಶಯ ಮಾತ್ರ ಯಾರಿಗೂ ಇಲ್ಲ.