ಯತಿ ಧರ್ಮ, ಶಿಷ್ಯ ಸ್ವೀಕಾರ, ಪೀಠ ತ್ಯಾಗ: ಏನಿದು ಶೀರೂರು ಮಠದ ‘ಪಟ್ಟದ ದೇವರ’ ವಿವಾದ?
COVER STORY

ಯತಿ ಧರ್ಮ, ಶಿಷ್ಯ ಸ್ವೀಕಾರ, ಪೀಠ ತ್ಯಾಗ: ಏನಿದು ಶೀರೂರು ಮಠದ ‘ಪಟ್ಟದ ದೇವರ’ ವಿವಾದ?

ಅಪ್ರಿಯ ಸತ್ಯ ಹೇಳಿದ ಕಾರಣಕ್ಕೆ ಶೀರೂರು ಸ್ವಾಮೀಜಿ ‘ಅನುಮಾನಾಸ್ಪದ ಸಾವಿ’ನ ಅಂತ್ಯ ಕಾಣಬೇಕಾಗಿದೆ. ಸತ್ಯವಂತರಿಗಿದು ಕಾಲವಲ್ಲ ಎಂಬುದನ್ನು ಮಠದ ಈ ‘ಅವ್ಯವಸ್ಥೆ’ಯ ಪ್ರಕರಣ ನಿಜವಾಗಿಸಿದೆ.

ಪರ್ಯಾಯ ಪೀಠಾರೋಹಣ ಹಾಗೂ ಪೇಜಾವರ ಮಠದ ವಿಶ್ವೇಶ ತೀರ್ಥರ ಕೆಲವು ಹೇಳಿಕೆಗಳ ಕಾರಣಕ್ಕೆ ದೊಡ್ಡ ಸುದ್ದಿಯಾಗುತ್ತಿದ್ದ ಉಡುಪಿ ಈಗ ಶೀರೂರು ಮಠದ ಲಕ್ಷ್ಮೀವರ ತೀರ್ಥರ ಅಸಹಜ ಸಾವಿನ ಕಾರಣಕ್ಕೆ ಸುದ್ದಿ ಕೇಂದ್ರಕ್ಕೆ ಬಂದಿದೆ. ಶೀರೂರು ಸ್ವಾಮೀಜಿಯ ಅಸಹಜ ಸಾವು ಹಲವು ಪ್ರಶ್ನೆಗಳನ್ನು ಸಾರ್ವಜನಿಕವಾಗಿ ಎತ್ತಿರುವುದಕ್ಕೆ ಕಾರಣಗಳೂ ಇವೆ.

“ಅಷ್ಟ ಮಠಗಳ ಸ್ವಾಮೀಜಿಗಳೆಲ್ಲರಿಗೂ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ” ಎಂದು ಶೀರೂರು ಸ್ವಾಮೀಜಿ ಹೇಳಿದ್ದ ವಿಡಿಯೋ ವೈರಲ್‌ ಆದ ಬಳಿಕ ಉಳಿದ ಮಠಗಳೊಂದಿಗೆ ಸ್ವಾಮೀಜಿ ಸಂಬಂಧ ಅಷ್ಟಕ್ಕಷ್ಟೇ ಎಂಬಂತಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಪುತ್ತಿಗೆ ಮಠವೊಂದನ್ನು ಬಿಟ್ಟರೆ ಉಳಿದೆಲ್ಲ ಮಠಾದೀಶರೂ ಶೀರೂರು ಸ್ವಾಮೀಜಿಗೆ ವಿರುದ್ಧವಾಗಿಯೇ ನಿಂತಿದ್ದರು.

ಶೀರೂರು ಮಠದ ಸ್ವಾಮೀಜಿ ತಮ್ಮ ಅನಾರೋಗ್ಯದ ಕಾರಣಕ್ಕೆ ಮಠದ ಪಟ್ಟದ ದೇವರನ್ನು (ವಿಠಲ ಮೂರ್ತಿ) ಉಡುಪಿಯ ಕೃಷ್ಣ ದೇವಸ್ಥಾನಕ್ಕೆ ಒಪ್ಪಿಸಿದ್ದರು. ಪಟ್ಟದ ದೇವರನ್ನು ಕೃಷ್ಣ ದೇವಸ್ಥಾನದಿಂದ ತಮಗೆ ವಾಪಸ್‌ ಕೊಡುತ್ತಿಲ್ಲ ಎಂಬ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲನ್ನೂ ಏರಿದ್ದರು. ಸಣ್ಣ ಮಟ್ಟದಲ್ಲಿ ಆರಂಭವಾದ ಈ ಪಟ್ಟದ ದೇವರ ವಿವಾದವೇ ಮುಂದೆ ದೊಡ್ಡದಾಗುತ್ತಾ ಹೋಯಿತು.

“ಶೀರೂರು ಸ್ವಾಮೀಜಿ ತಾವೇ ಹೇಳಿಕೊಂಡಿರುವಂತೆ ಬ್ರಹ್ಮಚರ್ಯ ಪಾಲಿಸಿಲ್ಲ. ಹೀಗಾಗಿ ಅವರು ಯತಿಯಲ್ಲ. ಯತಿಯಲ್ಲದವರು ಮಠದ ಪೀಠಾಧೀಶರಾಗಿ ಉಳಿಯುವುದು ಸರಿಯಲ್ಲ. ಅವರು ಶಿಷ್ಯ ಸ್ವೀಕಾರ ಮಾಡಿ ಪೀಠ ತ್ಯಾಗ ಮಾಡಬೇಕು. ಯತಿಯಲ್ಲದವರಿಂದ ಪಟ್ಟದ ದೇವರು ಪೂಜೆಗೊಳ್ಳುವಂತಿಲ್ಲ. ಹೀಗಾಗಿ ಪಟ್ಟದ ದೇವರನ್ನು ಶೀರೂರು ಸ್ವಾಮೀಜಿ ವಾಪಸ್‌ ಕೇಳಬಾರದು” ಎಂಬುದು ಪುತ್ತಿಗೆ ಮಠವೊಂದನ್ನು ಬಿಟ್ಟು ಉಳಿದ ಮಠಗಳ ವಾದವಾಗಿತ್ತು.

“ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ತಾವೂ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದ ಸ್ವಾಮೀಜಿ ಆ ಸಂದರ್ಭದಲ್ಲಿ ಹೆಚ್ಚು ಓಡಾಟ ಮಾಡಿ ನಿತ್ರಾಣರಾಗಿ ಆಸ್ಪತ್ರೆ ಸೇರಿದ್ದರು. ನಿತ್ಯವೂ ಯತಿಗಳಿಂದ ಮಾತ್ರ ಪೂಜೆಗೊಳ್ಳಬೇಕಾದ ಮಠದ ಪಟ್ಟದ ದೇವರ ವಿಗ್ರಹಗಳನ್ನು ಅನಾರೋಗ್ಯದ ಕಾರಣಕ್ಕೆ ಕೃಷ್ಣ ದೇವಸ್ಥಾನಕ್ಕೆ ಒಪ್ಪಿಸಿದ್ದರು. ಆದರೆ, ಅವರು ಆರೋಗ್ಯ ಸುಧಾರಣೆಯಾಗಿ ಮತ್ತೆ ಮಠಕ್ಕೆ ಬಂದಾಗ ಪರ್ಯಾಯದಲ್ಲಿರುವ ಫಲಿಮಾರು ಮಠಾಧೀಶರು ಪಟ್ಟದ ದೇವರನ್ನು ವಾಪಸ್‌ ಕೊಡಲು ಹಿಂದೇಟು ಹಾಕಿದ್ದರು. ಈ ಕಾರಣಕ್ಕೆ ಶೀರೂರು ಸ್ವಾಮೀಜಿ ಉಡುಪಿ ನ್ಯಾಯಾಲಯದಲ್ಲಿ ಕೇವಿಯಟ್‌ ಅರ್ಜಿ ಸಲ್ಲಿಸಿದ್ದರು” ಎನ್ನುತ್ತಾರೆ ಶೀರೂರು ಸ್ವಾಮೀಜಿ ಪರ ವಕೀಲ ರವಿಕಿರಣ್‌ ಮುರುಡೇಶ್ವರ.

ಕೃಷ್ಣ ಮಠದ ಮೂಲ ದೇವರ ಜತೆಗೆ  ಪಟ್ಟದ ದೇವರುಗಳ ವಿಗ್ರಹಗಳು. 
ಕೃಷ್ಣ ಮಠದ ಮೂಲ ದೇವರ ಜತೆಗೆ ಪಟ್ಟದ ದೇವರುಗಳ ವಿಗ್ರಹಗಳು. 

“ಅಷ್ಟ ಮಠದ ಸ್ವಾಮೀಜಿಗಳೆಲ್ಲರಿಗೂ ಮಕ್ಕಳಿದ್ದಾರೆ ಎಂಬ ಹೇಳಿಕೆಯಿಂದಾಗಿ ಉಳಿದ ಮಠಗಳ ಸ್ವಾಮೀಜಿಗಳು ಶೀರೂರು ಸ್ವಾಮೀಜಿ ಮೇಲೆ ಸಿಟ್ಟಾಗಿದ್ದರು. ಪಟ್ಟದ ದೇವರ ವಿಗ್ರಹವನ್ನು ವಾಪಸ್‌ ಕೊಡದಿರಲು ಇದೂ ಒಂದು ತಾಂತ್ರಿಕ ಕಾರಣವಾಗಿತ್ತು. ಶಿಷ್ಯ ಸ್ವೀಕಾರ, ಪೀಠ ತ್ಯಾಗ ಹಾಗೂ ಪಟ್ಟದ ದೇವರನ್ನು ವಾಪಸ್‌ ಕೇಳಬಾರದೆಂಬುದು ಉಳಿದ ಆರು ಮಠಗಳ ವಾದವಾಗಿತ್ತು. ಆದರೆ, ಶೀರೂರು ಸ್ವಾಮೀಜಿ ಇದಕ್ಕೆ ಒಪ್ಪಲು ಸಿದ್ಧರಿರಲಿಲ್ಲ” ಎಂಬುದು ರವಿಕಿರಣ್‌ ಅವರ ಮಾತು.

“ಪಟ್ಟದ ದೇವರ ವಿಚಾರವಾಗಿ ನ್ಯಾಯಾಲಯ ತಮ್ಮ ವಿಚಾರಣೆಯ ಹೊರತಾಗಿ ಯಾವುದೇ ನ್ಯಾಯ ತೀರ್ಮಾನ ಮಾಡಬಾರದು ಎಂಬ ಉದ್ದೇಶದಿಂದ ಇದೇ ತಿಂಗಳ 4ನೇ ತಾರೀಖು ಕೇವಿಯಟ್‌ ಅರ್ಜಿ ಸಲ್ಲಿಸಿದ್ದರು. ಬಳಿಕ ಶೀರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠದವರೂ ಕೇವಿಯಟ್‌ ಅರ್ಜಿ ಹಾಕಿದ್ದರು. ಪಟ್ಟದ ದೇವರ ವಿಗ್ರಹವನ್ನು ವಾಪಸ್‌ ಪಡೆಯಬೇಕೆಂಬ ವಿಚಾರದಲ್ಲಿ ಶೀರೂರು ಸ್ವಾಮೀಜಿ ಬಹಳ ಚಿಂತಿತರಾಗಿದ್ದರು” ಎನ್ನುತ್ತಾರೆ ಅವರು.

“ಶೀರೂರು ಸ್ವಾಮೀಜಿ ಜತೆಗೆ ಉತ್ತಮ ಸಂಬಂಧ ಹೊಂದಿದ್ದ ಪುತ್ತಿಗೆ ಮಠವನ್ನು ಹೊರತು ಪಡಿಸಿ ಉಳಿದ 6 ಮಠಗಳನ್ನು ಕೇವಿಯಟ್‌ನಲ್ಲಿ ಪ್ರತಿವಾದಿಗಳನ್ನಾಗಿ ಮಾಡಲಾಗಿತ್ತು. ಎಲ್ಲಾ 6 ಮಠಗಳ ಮೇಲೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಬದಲು ಪಟ್ಟದ ದೇವರನ್ನು ವಾಪಸ್‌ ಕೊಡಲು ಹಿಂದೇಟು ಹಾಕುತ್ತಿರುವ ಪರ್ಯಾಯ ಫಲಿಮಾರು ಮಠದ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಲು ನಿರ್ಧರಿಸಲಾಗಿತ್ತು. ನಿನ್ನೆ (ಜುಲೈ 18) ಈ ಮೊಕದ್ದಮೆ ದಾಖಲಿಸಲು ತೀರ್ಮಾನಿಸಿದ್ದೆವು. ಆ ನಡುವೆ ಸ್ವಾಮೀಜಿ ಆಸ್ಪತ್ರೆಗೆ ದಾಖಲಾದರು. ಹೀಗಾಗಿ ಮೊಕದ್ದಮೆ ದಾಖಲಿಸಲು ಆಗಲಿಲ್ಲ. ಸ್ವಾಮೀಜಿ ನಿಧನದಿಂದ ಈಗ ಕೇವಿಯಟ್‌ ಕೂಡಾ ಮುಗಿಯುತ್ತದೆ” ಎಂದು ಅವರು ವಿವರಿಸಿದರು.

ಪರ್ಯಾಯ ಪಲಿಮಾರು ಮಠದ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡಲು ನಿರ್ಧರಿಸಿದ್ದ ಬೆನ್ನಲ್ಲೇ ಶೀರೂರು ಸ್ವಾಮೀಜಿ ಅಸಜಹ ಸಾವಾಗಿದೆ. ಸರಕಾರ ಇದೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿ ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು.
-ರವಿಕಿರಣ್‌ ಮುರುಡೇಶ್ವರ, ಶೀರೂರು ಸ್ವಾಮೀಜಿ ಪರ ವಕೀಲ

“ಶೀರೂರು ಮಠಕ್ಕೆ ಸ್ವಾಮೀಜಿ ಯಾರನ್ನೂ ಉತ್ತರಾಧಿಕಾರಿಯಾಗಿ ನೇಮಿಸಿರಲಿಲ್ಲ. ಈಗ ಸ್ವಾಮೀಜಿ ನಿಧನದ ನಂತರ ಶೀರೂರು ಮಠಕ್ಕೆ ಪೀಠಾಧೀಶರನ್ನು ನೇಮಿಸುವ ಜವಾಬ್ದಾರಿ ದ್ವಂದ್ವ ಮಠವಾದ ಸೋದೆ ಮಠದ್ದು. ಸೋದೆ ಮಠದ ಪೀಠಾಧೀಶರು ಯಾರನ್ನು ನೇಮಿಸುತ್ತಾರೋ ಅವರು ಮುಂದಿನ ದಿನಗಳಲ್ಲಿ ಶೀರೂರು ಮಠಕ್ಕೆ ಸ್ವಾಮೀಜಿಯಾಗುತ್ತಾರೆ” ಎನ್ನುತ್ತಾರೆ ಅವರು.

ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂಬ ಹೇಳಿಕೆಯೊಂದಿಗೆ ಯತಿಧರ್ಮ ಉಲ್ಲಂಘಿಸಿದ ಸಾಂಪ್ರದಾಯಿಕ ಆರೋಪಕ್ಕೆ ಗುರಿಯಾದ ಶೀರೂರು ಸ್ವಾಮೀಜಿ 6 ಮಠಗಳ ಪಾಲಿಗೆ ರೆಬಲ್‌ ಆಗಿದ್ದರು. ಪಟ್ಟದ ದೇವರನ್ನು ಹಿಂದಿರುಗಿಸದ ಕಾರಣಕ್ಕೆ ಶೀರೂರು ಸ್ವಾಮೀಜಿಯೊಳಗೆ ಹುಟ್ಟಿಕೊಂಡ ಸಿಟ್ಟು ಅಷ್ಟ ಮಠಗಳ ಗುಟ್ಟನ್ನೆಲ್ಲಾ ಬಯಲು ಮಾಡಿತ್ತು. ಈ ಬಗ್ಗೆ ದೊಡ್ಡ ಪ್ರಮಾಣದ ಮಾಧ್ವ ಭಕ್ತ ಸಮೂಹವೇ ಶೀರೂರರ ಮೇಲೆ ಸಿಟ್ಟಾಗಿತ್ತು ಎನ್ನುತ್ತಾರೆ ಉಡುಪಿ ಮಠಗಳನ್ನು ಹತ್ತಿರದಿಂದ ಕಂಡಿರುವ ಸ್ಥಳೀಯ ಪತ್ರಕರ್ತರೊಬ್ಬರು.

“ಶೀರೂರು ಸ್ವಾಮೀಜಿಗೆ ಕೊನೆಗೂ ಪಟ್ಟದ ದೇವರು ಸಿಗಲೇ ಇಲ್ಲ. ಅವರ ನೇರ ನಿಷ್ಠುರತೆಯೇ ಅವರಿಗೆ ಮುಳುವಾಯಿತು. ವಾರದ ಹಿಂದೆ ಅವರ ಜತೆಗೆ ನಾನು ಓಡಾಡಿದ್ದೆ. ಈಗ ಅವರು ಸಾವನ್ನಪ್ಪಿರುವುದು ನನಗೂ ಒಂದು ರೀತಿಯ ಭೀತಿ ಹುಟ್ಟಿಸಿದೆ” ಎನ್ನುವ ಅವರು “ನನ್ನ ಹೆಸರನ್ನು ಬಹಿರಂಗ ಪಡಿಸಬೇಡಿ” ಎಂಬ ಷರತ್ತಿನ ಜತೆಗೆ ಉಡುಪಿ ಮಠಗಳ ಒಳಗನ್ನು ಬಿಚ್ಚಿಡಲು ಒಪ್ಪಿಕೊಂಡರು.

“ಬ್ರಹ್ಮಚರ್ಯ ಹಾಗೂ ಯತಿಧರ್ಮ ಪಾಲಿಸಿಲ್ಲ ಎಂಬ ಕಾರಣಕ್ಕೆ ಅವರಿಗೆ ಪಟ್ಟದ ದೇವರನ್ನು ಕೊಡಲು ಕೃಷ್ಣ ಮಠ ಹಿಂದೇಟು ಹಾಕುತ್ತಾ ಬಂದಿತ್ತು. ಪಟ್ಟದ ದೇವರನ್ನು ಕೊಡದಿದ್ದರೆ ಇಡೀ ಅಷ್ಟ ಮಠಗಳ ಅನಾಚಾರವನ್ನು ದಾಖಲೆ ಸಹಿತ ಬಯಲು ಮಾಡುತ್ತೇನೆ ಎಂದು ಇತ್ತೀಚೆಗೆ ಸ್ವಾಮೀಜಿ ಹೇಳಿದ್ದರು. ಇದೇ ಕಾರಣಕ್ಕೆ ಅವರಿಗೆ ವಿಷ ಹಾಕಿರಬಹುದು. ಆದರೆ, ವಿಷ ಹಾಕಿದವರು ಯಾರು ಎಂಬುದು ಈಗ ನಿಗೂಢ” ಎನ್ನುತ್ತಾರೆ ಅವರು.

ಉಡುಪಿಯ ಮಠಗಳಲ್ಲಿ ಅಧ್ಯಾತ್ಮ ಇಲ್ಲ. ಇಲ್ಲಿರುವುದು ಹಣ ಮತ್ತು ಜಾತಿ ರಾಜಕಾರಣ ಮಾತ್ರ ಎಂದು ಸ್ವಾಮೀಜಿ ಹೇಳಿದ್ದರು. ಅಷ್ಟ ಮಠಗಳ ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ. ನನಗೂ ಮಕ್ಕಳಿದ್ದಾರೆ. ಬೇಕಿದ್ದರೆ ನಾನು ಹೇಳುವವರ ಡಿಎನ್‌ಎ ಪರೀಕ್ಷೆ ಮಾಡಿಸಿ ನಿಜ ಬಯಲಾಗುತ್ತದೆ ಎಂದು ಸ್ವಾಮೀಜಿ ಹೇಳಿದ್ದು ಉಳಿದ ಮಠಗಳ ಸ್ವಾಮೀಜಿಗಳಿಗೆ ಸಹಿಸಲಾಗಿರಲಿಲ್ಲ. ಸ್ವಾಮೀಜಿಗಳ ಮಕ್ಕಳ ವಿಚಾರವಷ್ಟೇ ಅಲ್ಲ ಸ್ವಾಮೀಜಿಗಳ ಹಣಕಾಸಿನ ವ್ಯವಹಾರದ ಬಗ್ಗೆಯೂ ಶೀರೂರು ಸ್ವಾಮೀಜಿ ಮಾತನಾಡಿದ್ದರು.

ಪಟ್ಟದ ದೇವರು ವಿಠಲ ಹಾಗೂ ಶ್ರೀದೇವಿ, ಭೂದೇವಿಯರ ವಿಗ್ರಹಗಳು
ಪಟ್ಟದ ದೇವರು ವಿಠಲ ಹಾಗೂ ಶ್ರೀದೇವಿ, ಭೂದೇವಿಯರ ವಿಗ್ರಹಗಳು

“ಪರ್ಯಾಯ ವಹಿಸಿಕೊಳ್ಳುವ ಸ್ವಾಮೀಜಿಗಳ ತಟ್ಟೆ ಕಾಸು ಎಲ್ಲಿಗೆ ಹೋಗುತ್ತದೆ, ಸ್ವಾಮೀಜಿಗಳ ವ್ಯವಹಾರ ಜಾಲ ಎಲ್ಲೆಲ್ಲಿದೆ ಎಂಬುದರ ಬಗ್ಗೆ ಶೀರೂರು ಸ್ವಾಮೀಜಿ ತಮ್ಮ ಆಪ್ತ ಜತೆಗೆ ಮಾತನಾಡುತ್ತಿದ್ದರು. ಮಠಗಳಿಗೆ ಹೊರಗಿನವರು ಸ್ವಾಮೀಜಿಗಳಾಗುವುದಿಲ್ಲ. ಮಠದ ಸ್ವಾಮೀಜಿಗಳಲ್ಲಿ ವಂಶಪಾರಂಪರ್ಯ ನಡೆಯುತ್ತಿದೆ ಎಂದು ಸ್ವಾಮೀಜಿ ಹೇಳುತ್ತಿದ್ದರು. ಹೀಗಾಗಿ ಈ ಸ್ವಾಮೀಜಿ ಬಾಯಿ ಮುಚ್ಚಿಸುವುದು ಉಳಿದ ಸ್ವಾಮೀಜಿಗಳಿಗೆ ಅನಿವಾರ್ಯವಾಗಿತ್ತು. ಆದರೆ, ಇದಕ್ಕೆ ನಾಂದಿ ಹಾಡಿದವರು ಯಾರು ಎಂಬುದಷ್ಟೇ ಈಗ ತನಿಖೆಯಿಂದ ಬಯಲಾಗಬೇಕಿದೆ” ಎಂಬುದು ಅವರ ಒತ್ತಾಯ.

“ಅಷ್ಟ ಮಠಗಳ ಸ್ವಾಮೀಜಿಗಳು ಬೇರೆ ಬೇರೆ ಊರುಗಳಲ್ಲಿ ಜಮೀನು ಮಾಡಿಕೊಂಡಿದ್ದಾರೆ. ಮುಂಬೈ, ಚೆನ್ನೈಗಳಲ್ಲಿ ಆಪ್ತ ಸಂಬಂಧಿಕರ ಹೆಸರಿನಲ್ಲಿ ಸ್ವಾಮೀಜಿಗಳು ಹೋಟೆಲ್‌ ಉದ್ಯಮ ನಡೆಸುತ್ತಿದ್ದಾರೆ. ಸ್ವಾಮೀಜಿಗಳು ಬೇನಾಮಿ ಹೆಸರಿನಲ್ಲಿ ಬಸ್‌ ಸರ್ವೀಸ್‌ ನಡೆಸುತ್ತಿದ್ದಾರೆ. ಆದರೆ, ಎಲ್ಲೂ ತಮ್ಮ ಹೆಸರು ಹೊರಗೆ ಬರದಂತೆ ನೋಡಿಕೊಂಡಿದ್ದಾರೆ” ಎಂಬ ವಿಚಾರಗಳನ್ನು ತಮ್ಮ ಆಪ್ತರೊಂದಿಗೆ ಹೇಳಿಕೊಂಡಿದ್ದ ಶೀರೂರು ಸ್ವಾಮೀಜಿ ಈ ಅವ್ಯವಹಾರಗಳನ್ನೆಲ್ಲಾ ಬಹಿರಂಗಪಡಿಸುವುದಾಗಿ ಹೇಳುತ್ತಿದ್ದರು. ಇದು ಉಳಿದ ಮಠಗಳಿಗೆ ಮಡಿಲ ಕೆಂಡವಾಗಿತ್ತು.

ಸ್ವತಃ ಮಧ್ವಾಚಾರ್ಯರು ಪೂಜಿಸಿಕೊಟ್ಟದ್ದು ಎನ್ನಲಾಗುವ ಪಟ್ಟದ ದೇವರನ್ನು ಕೃಷ್ಣ ಮಠ ವಾಪಸ್‌ ಕೊಡದ ಬಗ್ಗೆ ಸ್ವಾಮೀಜಿ ಚಿಂತಿತರಾಗಿದ್ದರು. ಒಂದು ವೇಳೆ ಪಟ್ಟದ ದೇವರನ್ನು ವಾಪಸ್‌ ಕೊಟ್ಟಿದ್ದರೆ ಸ್ವಾಮೀಜಿ ಈ ವಿವಾದದ ಮಾತುಗಳನ್ನು ಬಿಟ್ಟು ಸುಮ್ಮನಿರುತ್ತಿದ್ದರೋ ಏನೋ. ಇತ್ತೀಚೆಗಂತೂ ಪಟ್ಟದ ದೇವರ ಬಗ್ಗೆ ಅವರು ತುಂಬಾ ಭಾವನಾತ್ಮಕವಾಗಿದ್ದರು. ಆದರೆ, ಶೀರೂರು ಸ್ವಾಮೀಜಿಯನ್ನು ಮಠದಿಂದ ಹೊರ ಹಾಕಬೇಕೆಂಬ ಬಗ್ಗೆ ಪುತ್ತಿಗೆ ಮಠ ಒಂದುಳಿದು ಉಳಿದ 6 ಮಠಗಳು ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದ್ದವು ಎಂಬ ಆರೋಪವೂ ಇದೆ.

ಲಿಂಗಾಯತ ಮಠಗಳಲ್ಲಿ ಎಷ್ಟೇ ಜಾತಿ, ಅನಾಚಾರಗಳು ಇವೆ ಎಂದು ಹೇಳಿದರೂ ಅವು ತಕ್ಕಮಟ್ಟಿಗೆ ಉಚಿತ ಶಿಕ್ಷಣ, ಅನ್ನ ದಾಸೋಹವನ್ನಾದರೂ ಮಾಡುತ್ತವೆ. ಆದರೆ, “ಉಡುಪಿ ಮಠಗಳು ಮಾಡುತ್ತಿರುವುದು ಕೇವಲ ಹಣಕಾಸಿನ ವ್ಯವಹಾರ ಹಾಗೂ ಜಾತೀಯತೆಯನ್ನು ಬಲಿಷ್ಠಗೊಳಿಸುವ ಕೆಲಸ” ಎಂದು ಶೀರೂರು ಸ್ವಾಮೀಜಿ ಹೇಳುತ್ತಿದ್ದರು. ಈ ವಿಚಾರವಾಗಿ ಮಾತನಾಡಿದ್ದ ಹಾಗೂ ನಿಷ್ಠುರವಾಗಿದ್ದ ಶೀರೂರು ಸ್ವಾಮೀಜಿಯನ್ನು ಕೊನೆಗೂ ಮಠದ ವ್ಯವಸ್ಥೆಯೇ ಮುಗಿಸಿಹಾಕಿದೆ.

ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ ಎಂಬ ಹೇಳಿಕೆಯ ಕಾರಣಕ್ಕೆ ಉಳಿದ ಮಠಗಳಿಂದ ಹೆಚ್ಚೂ ಕಡಿಮೆ ಬಹಿಷ್ಕಾರಕ್ಕೆ ಒಳಗಾಗಿದ್ದವರು ಶೀರೂರು ಸ್ವಾಮೀಜಿ. ಸಂಗೀತ, ಯಕ್ಷಗಾನದಲ್ಲಿ ಹೊಸತನಕ್ಕೆ ಪ್ರೋತ್ಸಾಹ ನೀಡುತ್ತಿದ್ದ, ಖುದ್ದು ಸಂಗೀತಗಾರರೂ ಆಗಿದ್ದ ಶೀರೂರು ಸ್ವಾಮೀಜಿ ಮಠದ ವ್ಯವಸ್ಥೆಯೊಳಗೆ ಸಲ್ಲದೇ ಹೋಗಿದ್ದು ದುರಂತ.