ಮತ್ತೆ ಅಸ್ತಿತ್ವಕ್ಕೆ ಬಂತು ‘ಕಾಂಗ್ರೆಸ್ ವರ್ಕಿಂಗ್ ಕಮಿಟಿ’; ಸೋಕಾಲ್ಡ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಎಂಟ್ರಿ
COVER STORY

ಮತ್ತೆ ಅಸ್ತಿತ್ವಕ್ಕೆ ಬಂತು ‘ಕಾಂಗ್ರೆಸ್ ವರ್ಕಿಂಗ್ ಕಮಿಟಿ’; ಸೋಕಾಲ್ಡ್‌ ಹೈಕಮಾಂಡ್‌ಗೆ ಸಿದ್ದರಾಮಯ್ಯ ಎಂಟ್ರಿ

ಕರ್ನಾಟಕ ಕಾಂಗ್ರೆಸ್‌ನ ಹಿರಿತಲೆಗಳನ್ನು ಹಿಂದಿಕ್ಕಿ ಮುಖ್ಯಮಂತ್ರಿ ಗಾದಿಗೆ ಏರಿದ್ದವರು ಚಾಣಾಕ್ಷ ಸಿದ್ದರಾಮಯ್ಯ. ಅವರೀಗ ದೆಹಲಿ ರಾಜಕಾರಣದಲ್ಲಿ ಯಾವ ಪಟ್ಟುಗಳನ್ನು ಹಾಕಲಿದ್ದಾರೆ ಎಂಬುದಕ್ಕೆ ಬರಲಿರುವ ದಿನಗಳು ಸಾಕ್ಷಿಯಾಗಲಿವೆ.

ದೇಶದ ಪುರಾತನ ಪಕ್ಷ ಕಾಂಗ್ರೆಸ್‌ನ ‘ವರ್ಕಿಂಗ್ ಕಮಿಟಿ’ಯನ್ನು ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ರಚನೆ ಮಾಡಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಆಗು ಹೋಗುಗಳನ್ನು ನೋಡಿಕೊಳ್ಳುವ ಸೋಕಾಲ್ಡ್‌ ‘ಹೈಕಮಾಂಡ್’ ಇದು. ಮೊದಲ ಬಾರಿಗೆ ಈ ಸಮಿತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಥಾನ ಪಡೆದಿದ್ದಾರೆ. ಈ ಮೂಲಕ ಅಧಿಕೃತವಾಗಿ ರಾಷ್ಟ್ರ ರಾಜಕಾರಣಕ್ಕೆ ಅವರು ಪ್ರವೇಶ ಪಡೆದಿದ್ದಾರೆ.

ಕಾಂಗ್ರೆಸ್ ವರ್ಕಿಂಗ್ ಕಮಿಟಿ

ಸ್ವಾತಂತ್ರ್ಯ ಪೂರ್ವದಲ್ಲೇ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷದಲ್ಲಿ ಹಿಂದಿನಿಂದಲೂ ‘ವರ್ಕಿಂಗ್ ಕಮಿಟಿ’ ಅಸ್ತಿತ್ವದಲ್ಲಿದೆ. ಆರಂಭದ ದಿನಗಳಲ್ಲಿ ವರ್ಕಿಂಗ್ ಕಮಿಟಿ ಮತ್ತು ಪಕ್ಷದ ಅಧ್ಯಕ್ಷರು ಬೇರೆ ಬೇರೆಯಾಗಿರುತ್ತಿದ್ದರು. ಈ ಸಂದರ್ಭಗಳಲ್ಲಿ ಪಕ್ಷದ ಎಲ್ಲಾ ಆಗು ಹೋಗುಗಳನ್ನು ನಿಯಂತ್ರಿಸುತ್ತಿದ್ದ ವರ್ಕಿಂಗ್ ಕಮಿಟಿ ಅಧ್ಯಕ್ಷರಿಗೆ ಪಕ್ಷದ ಅಧ್ಯಕ್ಷರಿಗಿಂತ ಹೆಚ್ಚಿನ ಮನ್ನಣೆಯಿತ್ತು; ಮತ್ತು ಅಷ್ಟೇ ಚಟುವಟಿಕೆಯಿಂದಲೂ ಇರುತ್ತಿದ್ದರು. 1967ರಲ್ಲಿ ಈ ಪರಿಸ್ಥಿತಿ ಬದಲಾಯಿತು.

ಅಂದು ಮೊದಲ ಬಾರಿಗೆ ಕಾಂಗ್ರೆಸ್ ಇಬ್ಭಾಗವಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಗುಂಪು ಮತ್ತು ಪ್ರಾದೇಶಿಕವಾಗಿ ಪ್ರಬಲ ನಾಯಕರಾಗಿದ್ದ ಕಾಮರಾಜ್, ಪ್ರಫುಲ್ಲ ಚಂದ್ರ ಸೇನ್, ಅಜೊಯ್ ಮುಖರ್ಜಿ ಮತ್ತು ಮೊರಾರ್ಜಿ ದೇಸಾಯಿ ನಡುವೆ ಪಕ್ಷ ಒಡೆದು ಹೋಯಿತು. ಈ ಸಂದರ್ಭದಲ್ಲಿ ವರ್ಕಿಂಗ್ ಕಮಿಟಿಯ ಶಕ್ತಿ ಕ್ಷೀಣಿಸಿತ್ತು. ಇದಕ್ಕೆ ಮತ್ತೆ ಶಕ್ತಿ ಬಂದಿದ್ದು 1971ರಲ್ಲಿ.

ಇಂದಿರಾ ಗಾಂಧಿ 1971ರಲ್ಲಿ ಬಾಂಗ್ಲಾ ವಿಮೋಚನಾ ಯುದ್ಧದ ನಂತರ ಪ್ರಬಲ ನಾಯಕಿಯಾಗಿ ಹೊರಹೊಮ್ಮಿದರು. ಈ ಸಂದರ್ಭದಲ್ಲಿ ಆಕೆ ಪಕ್ಷದ ರಾಜ್ಯ ಘಟಕಗಳ ಮಧ್ಯೆ ಹಂಚಿ ಹೋಗಿದ್ದ ಅಧಿಕಾರವನ್ನು ಮತ್ತೆ ಕೇಂದ್ರೀಕರಿಸಿದರು. ಹೀಗೆ ವರ್ಕಿಂಗ್ ಕಮಿಟಿ ತನ್ನ ಗತಕಾಲದ ವೈಭವಕ್ಕೆ ಮರಳಿತು.

ಗಮನಿಸಬೇಕಾದ ಅಂಶವೊಂದು ಇದೇ ಸಂದರ್ಭದಲ್ಲಿ ನಡೆದು ಹೋಯಿತು. ಅದೇನೆಂದರೆ 1971ರ ನಂತರ ಪಕ್ಷದ ಅಧ್ಯಕ್ಷರೇ ಹೆಚ್ಚಿನ ಸಂದರ್ಭದಲ್ಲಿ ಈ ಸಮಿತಿಯ ಅಧ್ಯಕ್ಷರಾಗಲು ಆರಂಭಿಸಿದರು. ಈ ಎಲ್ಲಾ ಬೆಳವಣಿಗೆಗಳ ನಂತರ ಕಾಂಗ್ರೆಸ್‌ನ ನೀತಿ ನಿರೂಪಣೆಯಲ್ಲಿ ವರ್ಕಿಂಗ್ ಕಮಿಟಿಯ ಕೈ ಮೇಲಾಯಿತು. ಜತೆಗೆ ‘ಹೈಕಮಾಂಡ್’ ಎಂಬ ಅಡ್ಡ ಹೆಸರು ತಗಲಿಕೊಂಡಿತು.

2017 ಡಿಸೆಂಬರ್ 16 ರಂದು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ರಾಹುಲ್ ಗಾಂಧಿ ವರ್ಕಿಂಗ್ ಕಮಿಟಿಯನ್ನು ವಜಾಗೊಳಿಸಿ ಹೊಸದಾಗಿ ಸ್ಟೀರಿಂಗ್ ಕಮಿಟಿಯನ್ನು ರಚಿಸಿದ್ದರು. ಇದೀಗ ಮತ್ತೆ. “ರಾಹುಲ್ ಗಾಂಧಿಯವರು ವರ್ಕಿಂಗ್ ಕಮಿಟಿಯನ್ನು ಮಂಗಳವಾರ ರಚನೆ ಮಾಡಿದ್ದಾರೆ. ಹಳೆಯ ಸ್ಟೀರಿಂಗ್ ಕಮಿಟಿಯ ಜಾಗದಲ್ಲಿ ಇದು ಕೆಲಸ ಮಾಡಲಿದೆ. ಇನ್ನು ಮುಂದೆ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ತೀರ್ಮಾನಗಳನ್ನು ಇದೇ ವರ್ಕಿಂಗ್ ಕಮಿಟಿ ತೆಗೆದುಕೊಳ್ಳಲಿದೆ,” ಎಂಬುದಾಗಿ ಕಾಂಗ್ರೆಸ್ ನಾಯಕ ಬ್ರಿಜೇಶ್ ಕಾಳಪ್ಪ ಮಾಹಿತಿ ನೀಡಿದರು.

ಹಳೆ ಬೇರು, ಹೊಸ ಚಿಗುರು:

ರಾಹುಲ್ ಗಾಂಧಿ ತಾವು ರಚಿಸಿದ ನೂತನ 23 ಸದಸ್ಯರ ವರ್ಕಿಂಗ್ ಕಮಿಟಿಯಲ್ಲಿ ಹಲವು ಹೊಸಬರಿಗೆ ಅವಕಾಶ ಕಲ್ಪಿಸಿದ್ದಾರೆ. ಜತೆಗೆ ಹಳೆ ಹುಲಿಗಳನ್ನು ಕೈಬಿಟ್ಟಿದ್ದಾರೆ. ದಿಗ್ವಿಜಯ್‌ ಸಿಂಗ್, ಜನಾರ್ದನ್ ದ್ವಿವೇದಿ, ಸುಶೀಲ್ ಕುಮಾರ್‌ ಶಿಂಧೆ, ಆಸ್ಕರ್ ಫೆರ್ನಾಂಡಿಸ್, ಬಿ.ಕೆ. ಹರಿಪ್ರಸಾದ್, ಎಂ. ವೀರಪ್ಪ ಮೊಯ್ಲಿ ಅವರಂಥಹ ಹಿರಿಯರಿಗೆ ಸಮಿತಿಯಲ್ಲಿ ಸ್ಥಾನ ನೀಡಿಲ್ಲ. ಇದರ ಜತೆಗೆ ಕಾಂಗ್ರೆಸ್ ಮುಖ್ಯಮಂತ್ರಿಗಳಾದ ಕ್ಯಾಪ್ಟನ್ ಅಮರಿಂದರ್ ಸಿಂಗ್, ವಿ. ನಾರಾಯಣ ಸ್ವಾಮಿ, ಮಿಜೋರಾಂನ ಲಾಲ್ ತನ್ಹವ್ಲ ಅವರಿಗೂ ಸಮಿತಿಯ ಸದಸ್ಯತ್ವ ನೀಡಿಲ್ಲ.

ಆದರೆ ತರುಣ್ ಗೊಗೋಯಿ, ಕುಮಾರಿ ಶೆಲ್ಜಾ, ರಘುವೀರ್‌ ಮೀನಾ, ತಾಮ್ರಧ್ವಜ್ ಸಾಹು, ಗಾಖಂಗಂ ಗಂಗ್ಮಾಯಿ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೊದಲ ಬಾರಿಗೆ ವರ್ಕಿಂಗ್ ಕಮಿಟಿ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.

ಇದೇ ಭಾನುವಾರ (ಜುಲೈ 22) ದಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಮೊದಲ ಸಭೆ ನಡೆಯಲಿದೆ. ಎಲ್ಲಾ ರಾಜ್ಯಗಳ ಪ್ರದೇಶ ಕಾಂಗ್ರೆಸ್ ಸಮಿತಿಗಳ ಅಧ್ಯಕ್ಷರು, ಶಾಸಕಾಂಗ ಸಭೆಯ ನಾಯಕರನ್ನು ಈ ಸಭೆಗೆ ಆಹ್ವಾನಿಸಲಾಗಿದೆ. ವರ್ಕಿಂಗ್ ಕಮಿಟಿ ರಚನೆಯ ಜತೆಗೆ 18 ನಾಯಕರನ್ನು ಸಭೆಗೆ ಶಾಶ್ವತ ಆಹ್ವಾನಿತರನ್ನಾಗಿ ಆಯ್ಕೆ ಮಾಡಲಾಗಿದೆ. ಇದರಲ್ಲಿ ಪಿ. ಚಿದಂಬರಂ, ಜ್ಯೋತಿರಾದಿತ್ಯ ಸಿಂಧ್ಯಾ ಸ್ಥಾನ ಪಡೆದಿದ್ದಾರೆ. ಕೆ.ಎಚ್. ಮುನಿಯಪ್ಪ ಸೇರಿ ಇನ್ನೂ 10 ಜನರಿಗೆ ಸಭೆಗೆ ವಿಶೇಷ ಆಹ್ವಾನ ನೀಡಲಾಗಿದೆ.

ರಾಷ್ಟ್ರ ರಾಜಕಾರಣ ಸಿದ್ದರಾಮಯ್ಯ

ಜುಲೈ 22, 2006ರಲ್ಲಿ ಕಾಂಗ್ರೆಸ್ ಪಕ್ಷ ಸೇರಿದ ಸಿದ್ದರಾಮಯ್ಯ ಸರಿಯಾಗಿ 12 ವರ್ಷದ ನಂತರ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದಾರೆ.

2006ರಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಸೇರಿದಾಗ ಪಕ್ಷದ ಬಿಳಿ ತಲೆಯ ಹುಲಿಗಳ ಮಧ್ಯೆ ಪ್ರಬಲ ನಾಯಕರಾಗಿ ಹೊರಹೊಮ್ಮುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ. ಆದರೆ ಎಲ್ಲರ ನಿರೀಕ್ಷೆಯನ್ನು ಮೀರಿ ಕರ್ನಾಟಕದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲೂ ಪ್ರಬಲ ನಾಯಕರಾಗಿ ಹೊರಹೊಮ್ಮಿದರು. ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಹಿನ್ನೆಲೆಯಲ್ಲಿ ಇದೇ ಪ್ರಬಲ ನಾಯಕರೀಗ ಕೆಲಸವಿಲ್ಲದೆ ಕುಳಿತಿದ್ದಾರೆ. ಶಾಸಕಾಂಗ ಪಕ್ಷದ ನಾಯಕ, ಸಮನ್ವಯ ಸಮಿತಿಯ ಅಧ್ಯಕ್ಷರಂಥ ಹುದ್ದೆಯನ್ನು ಸಿದ್ದರಾಮಯ್ಯನವರಿಗೆ ನೀಡಲಾಗಿದೆ. ಆದರೆ ಇವೆಲ್ಲಾ ಅಷ್ಟೇನೂ ಗುರುತರ ಜವಾಬ್ದಾರಿ ಇಲ್ಲದ ಹುದ್ದೆಗಳು. ಹೀಗಾಗಿ ಅವರು ರಾಷ್ಟ್ರ ರಾಜಕಾರಣಕ್ಕೆ ನೆಗೆಯಲಿದ್ದಾರೆ ಎಂಬ ಮಾತುಗಳು ಬಹಳ ಹಿಂದಿನಿಂದಲೇ ಕೇಳಿ ಬಂದಿದ್ದವು.

ಆದರೆ ‘ತಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದಿಲ್ಲ’ ಎಂದು ಹೇಳಿಕೊಂಡು ಬಂದಿದ್ದರು ಸಿದ್ದರಾಮಯ್ಯ. ಅದೇ ಮಾಜಿ ಸಿಎಂ ಈಗ ಕಾಂಗ್ರೆಸ್ ಹೈಕಮಾಂಡ್‌ನ ಮನೆ ತಲುಪಿದ್ದಾರೆ. ಅವರ ರಾಷ್ಟ್ರ ರಾಜಕಾರಣದ ಪ್ರವೇಶ ಸಹಜವಾಗಿಯೇ ಕುತೂಹಲ ಹುಟ್ಟಿಸಿದೆ. ಕರ್ನಾಟಕ ಕಾಂಗ್ರೆಸ್‌ನ ಹಿರಿತಲೆಗಳನ್ನು ಹಿಂದಿಕ್ಕಿ ಮುಖ್ಯಮಂತ್ರಿ ಗಾದಿಗೆ ಏರಿದ್ದವರು ಚಾಣಾಕ್ಷ ಸಿದ್ದರಾಮಯ್ಯ. ಅವರೀಗ ದೆಹಲಿ ರಾಜಕಾರಣದಲ್ಲಿ ಯಾವ ಪಟ್ಟುಗಳನ್ನು ಹಾಕಲಿದ್ದಾರೆ ಎಂಬುದಕ್ಕೆ ಬರಲಿರುವ ದಿನಗಳು ಸಾಕ್ಷಿಯಾಗಲಿವೆ.