‘ಡಾಟಾ ಕ್ರಾಂತಿ’: ವಾಟ್ಸ್‌ಆಪ್ ಸುತ್ತ ಒಂದಿಷ್ಟು ಕುತೂಹಲಕಾರಿ ಅಂಶಗಳು
COVER STORY

‘ಡಾಟಾ ಕ್ರಾಂತಿ’: ವಾಟ್ಸ್‌ಆಪ್ ಸುತ್ತ ಒಂದಿಷ್ಟು ಕುತೂಹಲಕಾರಿ ಅಂಶಗಳು

ಕೆಲವು ತಿಂಗಳಲ್ಲಿ ಭಾರತದಾದ್ಯಂತ ವರದಿಯಾಗುತ್ತಿರುವ ಅಮಾಯಕರ ಹತ್ಯೆಗೆ ವಾಟ್ಸ್ಆಪ್‌ ವದಂತಿಗಳು ಮುಖ್ಯಕಾರಣವಾಗಿ ಪರಿಣಮಿಸಿವೆ. ಆದರೆ ವಾಟ್ಸ್‌ಆಪ್‌ ಕೋಟ್ಯಾಂತರ ಜನರ ಕೈಸೇರಲು ಕಾರಣವಾಗಿರುವುದು ದೇಶದಲ್ಲಿ ನಡೆಯುತ್ತಿರುವ ಡಾಟಾ ಕ್ರಾಂತಿ.

ಕಳೆದ ಕೆಲವು ತಿಂಗಳ ಅವಧಿಯಲ್ಲಿ ಭಾರತದಾದ್ಯಂತ ಹಲವಾರು ಮಂದಿ ವಾಟ್ಸ್‌ಆಪ್‌ ವದಂತಿಗಳಿಗೆ ಬಲಿಯಾಗಿದ್ದಾರೆ. ಮಕ್ಕಳ ಕಳ್ಳರು, ಗೋ ಹಂತಕರು ಎಂಬ ಅನುಮಾನಕ್ಕೆ ನೂರಾರು ಜನ ಸಾರ್ವಜನಿಕರಿಂದ ಥಳಿತಕ್ಕೆ ಒಳಗಾಗಿದ್ದಾರೆ. ಮಕ್ಕಳ ಕಳ್ಳರು ಎನ್ನುವುದು ಸುಳ್ಳು ಸುದ್ದಿಯಷ್ಟೇ ಎಂದು ಪೊಲೀಸ್‌ ಅಧಿಕಾರಿಗಳು, ರಾಜ್ಯ ಸರಕಾರಗಳು, ಕೇಂದ್ರ ಸರಕಾರ ಅಷ್ಟೇ ಅಲ್ಲದೇ ಸುಪ್ರಿಂ ಕೋರ್ಟ್ ಕೂಡ ಸ್ಪಷ್ಟನೆ ಕೊಟ್ಟಿದ್ದರೂ ಸಹ ಜನ ಆಗಂತುಕರನ್ನು ಅನುಮಾನದಿಂದ ನೋಡುವುದನ್ನು ಬಿಟ್ಟಿಲ್ಲ. ವದಂತಿಗಳ ಕಾರಣದಿಂದಾಗಿ ಅಮಾಯಕರ ಮೇಲೆ ನಡೆಯುತ್ತಿರುವ ಹಲ್ಲೆಗಳು ಇಲ್ಲಿಗೇ ನಿಲ್ಲುತ್ತವೆ ಎನ್ನುವ ಸೂಚನೆಯೂ ಕೂಡ ಸಿಗುತ್ತಿಲ್ಲ.

ಕಳೆದ ವಾರವಷ್ಟೇ ಬೀದರ್‌ ಜಿಲ್ಲೆಯಲ್ಲಿ ಹೈದರಾಬಾದ್‌ ಮೂಲದ ಟೆಕ್ಕಿಯೊಬ್ಬನ್ನು ಕಲ್ಲುಗಳಿಂದ ಹೊಡೆದು ಕೊಲೆ ಮಾಡಲಾಯಿತು. ವಿದೇಶದಲ್ಲಿ ಟೆಕ್ಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ತೆಲ್ಹಾ ಇಸ್ಮಾಯಿಲ್‌ ಎಂಬ ವ್ಯಕ್ತಿ ಬೀದರ್‌ ಸಮೀಪದಲ್ಲಿ ಹಳ್ಳಿಯೊಂದರಲ್ಲಿ ಕಾರು ನಿಲ್ಲಿಸಿ ಮಕ್ಕಳಿಗೆ ಚಾಕಲೇಟ್‌ ಹಂಚಿದ್ದೇ ಆತನಿಗೆ ಮತ್ತು ಆತನ ಸ್ನೇಹಿತರಿಗೆ ಕಂಟಕವಾಗಿ ಪರಿಣಮಿಸಿತ್ತು. ಬೀದರ್‌ ಜಿಲ್ಲೆಯಲ್ಲಿ ವಾಸವಾಗಿದ್ದ ಮಿತ್ರನೊಬ್ಬನ ಮನೆಗೆ ಊಟಕ್ಕೆಂದು ತೆರಳಿದ್ದ 4 ಜನ ಸ್ನೇಹಿತರ ಪೈಕಿ ಒಬ್ಬಾತ ಜನರ ಹೊಡೆತದಿಂದ ಸತ್ತರೆ ಉಳಿದ ಮೂರು ಮಂದಿ ಆಸ್ಪತ್ರೆಯ ಪಾಲಾದರು. ಆವರ ಕಾರು ಬಳಕೆಗೆ ಬಾರದಂತೆ ನಜ್ಜುಗುಜ್ಜಾಯಿತು. ಈ ದುರಂತಕ್ಕೆ ಕಾರಣವಾಗಿದ್ದು ವಾಟ್ಸ್‌ಆಪ್‌ ವಿಡಿಯೋ ಮತ್ತು ಸಂದೇಶ.

ಇಂತಹದ್ದೇ ಸಂದೇಶಗಳನ್ನು ಓದಿ ಆಗಂತುಕರ ಬಗ್ಗೆ ಸಂದೇಹ ಪಟ್ಟ ಮಹಾರಾಷ್ಟ್ರದ ಧೂಳೆ ಜಿಲ್ಲೆಯ ಜನರು ಐವರನ್ನು ಭರ್ಬರವಾಗಿ ಹತ್ಯೆಗೈದಿದ್ದರು. ತ್ರಿಪುರದಲ್ಲಿ ವ್ಯಕ್ತಿಯೊಬ್ಬ ಹೀಗೇ ಸಾವನ್ನಪ್ಪಿದ್ದ. ತಮಿಳುನಾಡಿನಲ್ಲಿ 65ರ ಪ್ರಾಯದ ಬಿಕ್ಷುಕಿ ರುಕ್ಮಿಣಿಯನ್ನು ಜನ ಹೊಡೆದು ಸಾಯಿಸಿದ್ದರು. ಬೆಂಗಳೂರಿನ ಜನನಿಬಿಡ ಪ್ರದೇಶವಾದ ಚಾಮರಾಜಪೇಟೆಯಲ್ಲಿ ಹೊರರಾಜ್ಯದಿಂದ ಹೊಟ್ಟೆ ಪೊರೆಯಲೆಂದು ಬಂದಿದ್ದ ಯುವಕ ಕಾಲೂರಾಮ್‌ ಸ್ಥಳೀಯರ ಸಂದೇಹಕ್ಕೆ ಒಳಗಾಗಿ ಅಮಾನುಷವಾಗಿ ಕೊಲ್ಲಲ್ಪಟ್ಟಿದ್ದ. ಇದೆಲ್ಲವೂ ಆಗಿದ್ದು ವಾಟ್ಸ್‌ಆಪ್‌ ಸಂದೇಶಗಳಿಂದಲೇ.

ಭಾರತದ ಜನತೆ ಗುಂಪು ಗುಂಪಾಗಿ ನಡೆಸುತ್ತಿರುವ ಈ ಹತ್ಯೆಗಳು ಜನಸಮೂಹದ ಮನಸ್ಥಿತಿಯ ಪರಿಣಾಮವೇ ಹೊರತು ಇದರ ಸಂಪೂರ್ಣ ಹೊಣೆಯನ್ನು ವಾಟ್ಸ್‌ಆಪ್‌ ಮೇಲೆ ಹೊರಿಸಲಾಗುವುದಿಲ್ಲ ಎಂಬ ವಾದಗಳಿವೆ. ಆದರೆ ಜನರ ಮನಸ್ಥಿತಿಯನ್ನು ಹೀಗೆ ಬದಲಾಯಿಸಿ, ವಂದತಿಗಳನ್ನು ಸಮೂಹ ಸನ್ನಿಯಾಗಿ ಪರಿವರ್ತಿಸಿ ಹಲವಾರು ಜನರ ಹತ್ಯೆಗೆ ಮೂಲವಾಗಿರುವುದು ವಾಟ್ಸ್‌ಆಪ್‌ ಸಂದೇಶಗಳೇ ಎನ್ನುವುದನ್ನು ಅಲ್ಲಗೆಳೆಯಲಾಗದು.

Also read: ‘ಡೌಟೇ ಬೇಡ, ಜನ ಮರಳು’: ವಾಟ್ಸ್‌ಆಪ್‌ ವದಂತಿಗೆ ರಾಜ್ಯದಲ್ಲಿ ಮತ್ತೊಂದು ಬಲಿ

ವಾಟ್ಸ್‌ಆಪ್‌ ಭಾರತದ ಬಹುಜನರು ಬಳಸುತ್ತಿರುವ ಮೆಸೇಜಿಂಗ್‌ ಆಪ್‌. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕೋಟ್ಯಾಂತರ ಜನರ ಮೊಬೈಲ್‌ಗಳಲ್ಲಿ ವಾಟ್ಸ್‌ಆಪ್‌ ಇದೆ. ಪ್ರತಿನಿತ್ಯ ಕೋಟ್ಯಾಂತರ ಸಂದೇಶಗಳು ಮೊಬೈಲಿನಿಂದ ಮೊಬೈಲಿಗೆ ಹರಿದಾಡುತ್ತಿವೆ. ಈ ಸಂದೇಶಗಳಲ್ಲಿ ಸುಳ್ಳು ಸುದ್ದಿಗಳ ಪ್ರಮಾಣವೂ ಕೂಡ ಗಣನೀಯವಾಗಿದೆ. ನಮ್ಮ ನಮ್ಮ ಕಾಂಟ್ಯಾಕ್ಟ್‌ಗಳಿಂದ, ನಾವಿರುವ ಗ್ರೂಪ್‌ಗಳಿಂದ ಪ್ರತಿನಿತ್ಯ ದೊರೆಯುವ ಮೇಸೇಜ್‌ಗಳನ್ನು ಪರಿಶೀಲಿಸಿದರೆ ಅದರಲ್ಲಿ ಸುಳ್ಳು ಸುದ್ದಿಗಳ ಸಂಖ್ಯೆಯೆಷ್ಟು ಎನ್ನುವುದನ್ನು ನಾವೇ ಕಂಡುಹಿಡಿಯಬಹುದು.

ಭಾರತದ ಬಹುಭಾಷೆಗಳ ದೇಶವಾದರೂ ಕೂಡ ಈ ಸುಳ್ಳು ಸಂದೇಶಗಳು ಅವರವರ ಭಾಷೆಯಲ್ಲಿಯೇ ಸುಲಭವಾಗಿ ಬಹುಕೋಟಿ ಭಾರತೀಯರನ್ನು ತಲುಪುತ್ತಿವೆ. ಇತರೆ ಭಾಷೆಗಳಿಗೆ ವಾಟ್ಸ್‌ಆಪ್‌ ಸಂದೇಶಗಳ ಅನುವಾದವೂ ಕೂಡ ಸರಾಗವಾಗಿ ನಡೆಯುತ್ತಿದೆ. ಲಿಪಿ ಇರುವ, ಇಲ್ಲದಿರುವ ಭಾಷೆಗಳ ಜನರೂ ಕೂಡ ಸುಲಭ ಸಾಧ್ಯವಾಗಿ ಸುಳ್ಳು ಸಂದೇಶಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇಡೀ ಭಾರತದಲ್ಲಿ ಹಾಸು ಹೊಕ್ಕಾಗಿರುವ ವಾಟ್ಸ್‌ಆಪ್‌ಅನ್ನು ಬಳಸುತ್ತಿರುವ ಭಾರತೀಯರೆಷ್ಟು ಎನ್ನುವುದರ ಬಗ್ಗೆ ಲೋಕನೀತಿ-ಸಿಎಸ್‌ಡಿಎಸ್‌ (ಸೆಂಟರ್‌ ಫಾರ್‌ ದಿ ಸ್ಟಡಿ ಆಫ್ ಡೆವಲಪ್ಪಿಂಗ್‌ ಸೊಸೈಟೀಸ್‌) ಸಮೀಕ್ಷೆ ನಡೆಸಿದೆ. ಮೂಡ್‌ ಆಫ್‌ ದಿ ನೇಷನ್‌(MOTN) ಹೆಸರಿನಲ್ಲಿ ಗಮನಾರ್ಹ ಅಂಕಿ ಅಂಶಗಳನ್ನು ಸಮೀಕ್ಷೆ ನೀಡಿದೆ.

ಲೋಕನೀತಿ 2017ರ ಮಧ್ಯ ಭಾಗದಲ್ಲಿ ನಡೆಸಿದ್ದ ಎಂಓಟಿಎನ್‌ ಸಮೀಕ್ಷೆ ಪ್ರಕಾರ ಭಾರತದಲ್ಲಿ ಪ್ರತಿ ನಿತ್ಯ ಶೇ.14ರಷ್ಟು ಮಂದಿ ವಾಟ್ಸ್‌ಆಪ್‌ ಬಳಸುತ್ತಿದ್ದರು. ಒಂದೇ ವರ್ಷದಲ್ಲಿ ಈ ಶೇಕಡವಾರು ಸಂಖ್ಯೆ 24ಕ್ಕೆ ಏರಿದೆ ಎಂದು ಎಮ್‌ಓಟಿಎನ್‌ನ ಇತ್ತೀಚಿನ ಸಮೀಕ್ಷೆಯ ಅಂಕಿ ಅಂಶಗಳು ತಿಳಿಸುತ್ತವೆ. ಇದಕ್ಕೆ ಕಾರಣವಾಗಿರುವುದು ಅಗ್ಗವಾಗಿ ದೊರೆಯುತ್ತಿರುವ ಇಂಟರ್‌ನೆಟ್‌ ಡಾಟಾ.

ಕಳೆದ ಒಂದು ವರ್ಷದ ಅಂತರದಲ್ಲಿ ದೇಶದಲ್ಲಿ ಹೆಚ್ಚಿರುವ ಅಂರ್ಜಾಲ ಸೇವೆಯ ಬಳಕೆ. 
ಕಳೆದ ಒಂದು ವರ್ಷದ ಅಂತರದಲ್ಲಿ ದೇಶದಲ್ಲಿ ಹೆಚ್ಚಿರುವ ಅಂರ್ಜಾಲ ಸೇವೆಯ ಬಳಕೆ. 
ಕೃಪೆ: ಲೈವ್‌ ಮಿಂಟ್. 

ಕಳೆದ ವರ್ಷ ಭಾರತದಲ್ಲಿ ಮೊಬೈಲ್‌ ಹೊಂದಿದ್ದವರ ಪೈಕಿ ಶೇ. 21ರಷ್ಟು ಮಂದಿ ಮೊಬೈಲ್‌ನಲ್ಲಿ ಅಂತರ್ಜಾಲ ಬಳಕೆ ಮಾಡುತ್ತಿದ್ದರು. ಒಂದೇ ವರ್ಷಕ್ಕೆ ಈ ಸಂಖ್ಯೆ ಶೇ.31ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಮೊಬೈಲ್‌ ಇದ್ದರೂ ಕೂಡ ಇಂಟರ್‌ನೆಟ್‌ ಬಳಸದವರ ಸಂಖ್ಯೆ ಶೇ.53ರಷ್ಟಿತ್ತು. ಈ ವರ್ಷ ಈ ಸಂಖ್ಯೆ ಶೇ.45ಕ್ಕೆ ಇಳಿದಿದೆ. ಒಂದು ವರ್ಷದ ಅವಧಿಯಲ್ಲಿ ಮೊಬೈಲ್‌ ಬಳಸುವವರ ಸಂಖ್ಯೆ ಕೂಡ ಶೇ.2ರಷ್ಟು ಏರಿಕೆಯಾಗಿದೆ. ಈಗ ದೇಶದಲ್ಲಿ ಒಟ್ಟಾರೆ ಶೇ. 76ರಷ್ಟು ಮಂದಿ ಮೊಬೈಲ್‌ ಬಳಸುತ್ತಿದ್ದಾರೆ.

ಮೊಬೈಲ್‌ ಬಳಸುವವರಲ್ಲಿ ಅತಿಹೆಚ್ಚು ಜನ ವಾಟ್ಸ್‌ಆಪ್‌ ಹೊಂದಿರುವವರು ನಗರ ಭಾಗಗಳ ಜನರು. ಹಳ್ಳಿಗಳಲ್ಲಿ ವಾಟ್ಸ್‌ಆಪ್‌ನ ಸದ್ದು ಸ್ವಲ್ಪ ಕಡಿಮೆ ಇದೆ.

ಭಾರತದ ಹಳ್ಳಿ ಮತ್ತು ನಗರಗಳ ನಡುವೆ ವಾಟ್ಸ್‌ಆಪ್ ಬಳಸುವವರ ವ್ಯತ್ಯಾಸ. 
ಭಾರತದ ಹಳ್ಳಿ ಮತ್ತು ನಗರಗಳ ನಡುವೆ ವಾಟ್ಸ್‌ಆಪ್ ಬಳಸುವವರ ವ್ಯತ್ಯಾಸ. 
ಕೃಪೆ: ಲೈವ್‌ ಮಿಂಟ್. 

2017ರಲ್ಲಿ ಹಳ್ಳಿಗಳಲ್ಲಿನ ಜನರಲ್ಲಿ ಶೇ.10ರಷ್ಟು ಮಂದಿ ವಾಟ್ಸ್ಆಪ್‌ಅನ್ನು ಪ್ರತಿನಿತ್ಯ ಉಪಯೋಗಿಸುತ್ತಿದ್ದರು. 2018ರಲ್ಲಿ ಈ ಸಂಖ್ಯೆ ಎರಡು ಪಟ್ಟಾಗಿದೆ. ಪ್ರತಿನಿತ್ಯ ಶೆ.20ರಷ್ಟು ಹಳ್ಳಿಗರು ವಾಟ್ಸ್‌ಆಪ್‌ ಸಂದೇಶಗಳನ್ನು ನೋಡುತ್ತಾರೆ. ನಗರ ಭಾಗಗಳಲ್ಲಿ ಕಳೆದ ವರ್ಷವೇ ಶೇ.22ರಷ್ಟು ಮಂದಿ ವಾಟ್ಸ್ಆಪ್‌ಅನ್ನು ಪ್ರತಿನಿತ್ಯ ಬಳಸುತ್ತಿದ್ದರು. ಈ ವರ್ಷ ಶೇ.38ರಷ್ಟು ಜನರು ಪ್ರತಿದಿನ ವಾಟ್ಸ್‌ಆಪ್‌ ಲೋಕದಲ್ಲಿ ವಿಹರಿಸುತ್ತಾರೆ.

ಭಾರತದಲ್ಲಿ ಹೆಚ್ಚಾಗಿ ವಾಟ್ಸ್ಆಪ್‌ ಬಳಕೆ ಮಾಡುತ್ತಿರುವವರು ಮೇಲ್ವರ್ಗದ ಜನ. ಮಧ್ಯಮ ವರ್ಗದ ಜನ ಮಧ್ಯದಲ್ಲೇ ಇದ್ದಾರೆ. ಬಡತನದಲ್ಲಿ ನರಳುತ್ತಿರುವವರ ಪೈಕಿ ವಾಟ್ಸ್‌ಆಪ್‌ ಲೋಕಕ್ಕೆ ಕಾಲಿಟ್ಟಿರುವವರ ಸಂಖ್ಯೆ ಕಡಿಮೆ.

ವಾರ್ಟ್‌ಆಪ್ ಬಳಸುವವರ ಸಂಖ್ಯೆ ವರ್ಗವಾರು. 
ವಾರ್ಟ್‌ಆಪ್ ಬಳಸುವವರ ಸಂಖ್ಯೆ ವರ್ಗವಾರು. 
ಕೃಪೆ: ಲೈವ್‌ಮಿಂಟ್. 

ಕಳೆದ ವರ್ಷ ಶೇ. 29ರಷ್ಟು ಮಂದಿ ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಜನ ವಾಟ್ಸ್ಆಪ್‌ ಬಳಸುತ್ತಿದ್ದರು. ಮಧ್ಯಮ ವರ್ಗದ ಶೇ.15ರಷ್ಟು ಜನರ ಬಳಿ ವಾಟ್ಸ್ಆಪ್‌ ಇತ್ತು. ಕಡಿಮೆ ಆದಾಯ ಗಳಿಸುವ ಶೇ.6ರಷ್ಟು ಮಂದಿ ವಾಟ್ಸ್ಆಪ್ ಬಳಕೆದಾರರಾಗಿದ್ದರು. ಬಡವರ್ಗದಲ್ಲಿ ವಾಟ್ಸ್‌ಆಪ್‌ ಇದ್ದದ್ದು ಶೇ.8ರಷ್ಟು ಜನರ ಬಳಿಯಷ್ಟೇ.

ಆದರೆ ಒಂದು ವರ್ಷ ಕಳೆಯುವ ಹೊತ್ತಿಗೆ ವಾಟ್ಸ್‌ಆಪ್‌ ಎಲ್ಲಾ ವರ್ಗದ ಬಳಕೆದಾರರನ್ನು ಕೂಡ ಹೆಚ್ಚಿಸಿಕೊಂಡಿದೆ. ಬಡವರ್ಗದ ಶೇ.14ರಷ್ಟು ಜನ ಈಗ ವಾಟ್ಸ್‌ಆಪ್‌ ಬಳಕೆದಾರರು. ಕಡಿಮೆ ಆದಾಯ ಹೊಂದಿರುವ ಶೇ.24ರಷ್ಟು ಮಂದಿಯ ಬಳಿ ವಾಟ್ಸ್‌ಆಪ್‌ ಇದೆ. ಮಧ್ಯಮ ವರ್ಗದ ಶೇ.34ರಷ್ಟು ಜನ ಪ್ರತಿನಿತ್ಯ ವಾಟ್ಸ್‌ಆಪ್‌ ಸಂದೇಶಗಳನ್ನು ಓದುತ್ತಾರೆ. ಮೇಲ್ಮಧ್ಯಮ ಮತ್ತು ಶ್ರೀಮಂತ ವರ್ಗಗಳ ಶೇ.45ರಷ್ಟು ಜನರು ವಾಟ್ಸ್‌ಆಪ್‌ ಪ್ರಿಯರಾಗಿದ್ದಾರೆ. ಈ ಅಂಕಿ ಅಂಶಗಳನ್ನು ನೋಡಿದರೆ ಒಂದು ವರ್ಷದ ಅವಧಿಯಲ್ಲಿ ಎಲ್ಲ ವರ್ಗಗಳಿಗಿಂತ ಹೆಚ್ಚಾಗಿ ಕಡಿಮೆ ಆದಾಯ ಇರುವ ವರ್ಗಕ್ಕೆ ವಾಟ್ಸ್‌ಆಪ್‌ ಹೆಚ್ಚು ತಲುಪಿದೆ.

ಇನ್ನು ವಯಸ್ಸಿನ ಅಧಾರದ ಮೇಲೆ ಹೆಚ್ಚಾಗಿ ವಾಟ್ಸ್‌ಆಪ್‌ ವ್ಯಾಮೋಹಿಗಳಾಗುತ್ತಿರುವುದು ದೇಶದ ಯುವಜನರು. ವೃದ್ಧರಿಗೆ ವಾಟ್ಸ್‌ಆಪ್‌ ಹುಚ್ಚು ಹತ್ತಿರುವುದು ಕಡಿಮೆ.

ವಯಸ್ಸಿನ ಆಧಾರದ ಮೇಲೆ ವಾಟ್ಸ್‌ಆಪ್‌ ಬಳಕೆದಾರರ ಸಂಖ್ಯೆ. 
ವಯಸ್ಸಿನ ಆಧಾರದ ಮೇಲೆ ವಾಟ್ಸ್‌ಆಪ್‌ ಬಳಕೆದಾರರ ಸಂಖ್ಯೆ. 
ಕೃಪೆ: ಲೈವ್‌ ಮಿಂಟ್. 

2017ರ ಮಧ್ಯ ಭಾಗದಲ್ಲಿ 18-25 ವಯಸ್ಸಿನ ಶೇ.30 ಮಂದಿ ವಾಟ್ಸ್‌ಆಪ್‌ಅನ್ನು ಬಳಸುತ್ತಿದ್ದರು. 26-35 ವಯಸ್ಸಿನ ಶೇ.21 ಜನರ ಬಳಿ ವಾಟ್ಸ್‌ಆಪ್‌ ಇತ್ತು. 36-55 ವಯಸ್ಸಿನ ಶೇ.10 ಜನ ಮತ್ತು 56 ವರ್ಷ ಮೇಲ್ಪಟ್ಟ ಶೇ.3ರಷ್ಟು ಜನ ಮಾತ್ರ ವಾಟ್ಸ್ಆಪ್‌ ಬಳಕೆ ಮಾಡುತ್ತಿದ್ದರು. ಆದರೆ ದೇಶದಲ್ಲಿ ಉಂಟಾಗಿರುವ ಇಂಟರ್‌ನೆಟ್‌ ಕ್ರಾಂತಿ ಎಲ್ಲಾ ವಯಸ್ಸಿನವರಲ್ಲಿ ವಾಟ್ಸ್ಆಪ್‌ ಹುಚ್ಚು ಹಬ್ಬಿಸಿದೆ. ಈ ಹುಚ್ಚಿಗೆ ಹೆಚ್ಚಾಗಿ ಒಳಗಾಗಿರುವವರು ಯುವಜನರೇ.

ಒಂದೇ ವರ್ಷದಲ್ಲಿ ದೇಶದಲ್ಲಿ ವಾಟ್ಸ್ಆಪ್‌ ಉಪಯೋಗಿಸುವ 18-25 ವಯಸ್ಸಿನ ನವ ಯುವಜನರ ಸಂಖ್ಯೆ ಶೇ.49ಕ್ಕೆ ಏರಿಕೆಯಾಗಿದೆ. 26-35 ವಯಸ್ಸಿನವರಲ್ಲಿ ಈಗ ಶೇ.35ರಷ್ಟು ಜನ ವಾಟ್ಸ್‌ಆಪ್‌ ಬಳಕೆದಾರರಾಗಿದ್ದಾರೆ. 36-55 ವಯಸ್ಸಿನ ಶೇ.17ರಷ್ಟು ಮಂದಿ ಮತ್ತು 56ರ ಮೇಲ್ಪಟ್ಟ ಶೇ.7ರಷ್ಟು ಮಂದಿ ಪ್ರತಿನಿತ್ಯ ವಾಟ್ಸ್ಆಪ್‌ ಬಳಕೆ ಮಾಡುತ್ತಿದ್ದಾರೆ.

ಹೆಚ್ಚು ಹೆಚ್ಚು ಜನರ ಕೈಗೆ ತಲುಪಿರುವುದರಿಂದ ವಾಟ್ಸ್‌ಆಪ್‌ ರಾಜಕೀಯ ಪಕ್ಷಗಳಿಗೂ ಕೂಡ ದೊಡ್ಡ ಪ್ರಚಾರ ಸಾಧನವಾಗಿ ಮಾರ್ಪಟ್ಟಿದೆ. ಈ ಹಿಂದೆ ಚುನಾವಣಾ ಅಭ್ಯರ್ಥಿಗಳು ಎಸ್‌ಎಂಎಸ್‌ಗಳ ಮೂಲಕ ಅಥವಾ ರೆಕಾರ್ಡೆಡ್‌ ಸಂದೇಶಗಳ ಮೂಲಕ ಜನರನ್ನು ಸಂಪರ್ಕಿಸುತ್ತಿದ್ದರು. 2014ರ ರಾಷ್ಟ್ರೀಯ ಚುನಾವಣಾ ಅಧ್ಯಯನದ ಪ್ರಕಾರ ಶೇ.20ರಷ್ಟು ದೇಶದ ಮತದಾರರಿಗೆ ಚುನಾವಣಾ ಅಭ್ಯರ್ಥಿಗಳ ಎಸ್‌ಎಂಎಸ್‌ ಅಥವಾ ಪೋನ್‌ ಕಾಲ್‌ಗಳು ಬಂದಿದ್ದವು.

ಆದರೆ 2017ರ ಹೊತ್ತಿಗೆ 6ರಲ್ಲಿ ಒಬ್ಬ ವಾಟ್ಸ್‌ಆಪ್‌ ಬಳಕೆದಾರ, ರಾಜಕೀಯ ನಾಯಕರ ಅಥವಾ ಪಕ್ಷದ ಗುಂಪುಗಳಲ್ಲಿ ಸದಸ್ಯನಾಗಿದ್ದಾನೆ. 2018ಕ್ಕೆ ಈ ಸಂಖ್ಯೆ ಖಂಡಿತವಾಗಿಯೂ ಜಾಸ್ತಿಯಾಗಿದೆ.

ವಾಟ್ಸ್‌ಆಪ್‌ ಬಳಕೆ ಹೆಚ್ಚಾಗಿದ್ದರೂ ಕೂಡ ವಾಟ್ಸ್‌ಆಪ್‌ನಲ್ಲಿ ದೊರೆಯುವ ಸುದ್ದಿಗಳ ಬಗ್ಗೆ ಬಹುಪಾಲು ಜನರಿಗೆ ನಂಬಿಕೆಯಿಲ್ಲ. ಸುದ್ದಿ ವಾಹಿನಿ, ಪತ್ರಿಕೆಗಳಿಗೆ ಹೋಲಿಸಿಕೊಂಡರೆ ವಾಟ್ಸ್‌ಆಪ್‌ ಕಡಿಮೆ ವಿಶ್ವಾಸಾರ್ಹತೆಯನ್ನು ಹೊಂದಿದೆ.

ಸುದ್ದಿಗಳ ವಿಶ್ವಾಸಾರ್ಹತೆಯ ಪರಿಶೀಲನೆಗೆ ಈ ಅಂಕಿಅಂಶಗಳು ಅನುಕೂಲ. 
ಸುದ್ದಿಗಳ ವಿಶ್ವಾಸಾರ್ಹತೆಯ ಪರಿಶೀಲನೆಗೆ ಈ ಅಂಕಿಅಂಶಗಳು ಅನುಕೂಲ. 
ಕೃಪೆ: ಲೈವ್‌ ಮಿಂಟ್. 

ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ, ದಿನ ಪ್ರತ್ರಿಕೆಗಳನ್ನು ಓದುವವರ ಪೈಕಿ ಶೇ. 55ರಷ್ಟು ಮಂದಿ ಅದರಲ್ಲಿನ ಸುದ್ದಿಗಳನ್ನು ನಂಬಿದರೆ, ಸುದ್ದಿ ವಾಹಿನಿ ನೋಡುವವರ ಪೈಕಿ ಶೇ.50 ಮಂದಿ ಅಲ್ಲಿ ದೊರೆಯುವ ಮಾಹಿತಿ ವಿಶ್ವಾಸಾರ್ಹ ಎಂದಿದ್ದಾರೆ. ಆದರೆ ವಾಟ್ಸ್ಆಪ್‌ಗೆ ಬಂದರೆ ಅದರಲ್ಲಿ ದೊರೆಯುವ ಸುದ್ದಿಗಳನ್ನು ನಂಬುವವರು ಶೇ.29ರಷ್ಟು ಮಂದಿಯಷ್ಟೇ. ಶೇ.60ರಷ್ಟು ಜನ ವಾಟ್ಸ್‌ಆಪ್‌ ಸುದ್ದಿಗಳಿಗೆ ವಿಶ್ವಾಸ ವ್ಯಕ್ತಪಡಿಸುವುದಿಲ್ಲ. ಅದ್ಯಾಗೂ ಕೂಡ ಜನ ವದಂತಿಗಳನ್ನು ನಂಬಿ ಅಮಾಯಕರ ಜೀವ ತೆಗೆಯುತ್ತಿರುವುದು ಕಣ್ಣ ಮುಂದಿನ ಸತ್ಯ.

ಸದ್ಯ ದೇಶದಲ್ಲಿ ನಡೆಯುತ್ತಿರುವ ಡಾಟಾ ಕ್ರಾಂತಿಯಿಂದಾಗಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಜನರು ಸಾಮಾಜಿಕ ಜಾಲತಾಣಗಳಿಗೆ ಕಾಲಿಡಲಿದ್ದಾರೆ. ಆಗ ಸುಳ್ಳು ಸುದ್ದಿಗಳು ಮತ್ತಷ್ಟು ಹೆಚ್ಚು ಜನರನ್ನು ತಲುಪಲಿವೆ. ವದಂತಿಗಳನ್ನು ತಡೆಯಲು ಸರಕಾರ, ವಾಟ್ಸ್‌ಆಪ್‌ ಸೇರಿದಂತೆ ಅನೇಕ ಸಾಮಾಜಿಕ ಜಾಲತಾಣಗಳು ಪ್ರಯತ್ನ ಮಾಡುತ್ತಿವೆಯಾದರೂ ದೊಡ್ಡ ಮಟ್ಟದ ಪರಿಣಾಮವೇನು ಕಾಣುತ್ತಿಲ್ಲ.

ಮುಂದಾದರೂ ಇವರೆಲ್ಲಾ ಸೇರಿ ಪ್ರಜೆಗಳ ಸ್ವಾತಂತ್ರ ಮತ್ತು ಖಾಸಗಿತನಕ್ಕೆ ದಕ್ಕೆ ತರದೆ, ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವುದು ಈ ಕಾಲಘಟ್ಟದ ಸವಾಲುಗಳಲ್ಲೊಂದು ಎಂಬುದರಲ್ಲಿ ಯಾವ ಅನುಮಾನವೂ ಬೇಕಿಲ್ಲ.

ಮಾಹಿತಿ ಮೂಲ: ‘ಲೈವ್‌ ಮಿಂಟ್‌’