ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!
COVER STORY

ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!

ಕಾವೇರಿ ವಿಷಯವಾಗಿ ಸಂಸತ್‌ನಲ್ಲಿ ಮಾತನಾಡಲು ಸಂಸದರಿಗೆ ದುಬಾರಿ ಉಡುಗೊರೆ ಕೊಡಲಾಗಿದೆಯೇ? ಡಿ.ಕೆ. ಶಿವಕುಮಾರ್ ಉಡುಗೊರೆ ವಿವಾದದ ಹಿಂದೆ ಇಂಥದ್ದೊಂದು ಪ್ರಶ್ನೆ ಎದ್ದಿದೆ.

ಹಿಂದೆಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಪುಸ್ತಕ ಹಂಚುವ ಹಾಗೂ ಸರಕಾರಿ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಹಣ್ಣು, ಹಾಲು, ಬ್ರೆಡ್‌ ಹಂಚುವ ಮೂಲಕ ಸುದ್ದಿಯಲ್ಲಿರುತ್ತಿದ್ದ ರಾಜಕಾರಣಿಗಳು ಈಗ ದುಬಾರಿ ಉಡುಗೊರೆಯನ್ನು ದುಬಾರಿ ಜನರಿಗೇ ಹಂಚುವ ಮೂಲಕ ಸುದ್ದಿಯಾಗುತ್ತಿದ್ದಾರೆ.

ಸಚಿವ ಡಿ.ಕೆ. ಶಿವಕುಮಾರ್‌ ಸಂಸದರಿಗೆ 89 ಸಾವಿರ ರೂಪಾಯಿ ಮೌಲ್ಯದ ಐಫೋನ್‌ ಮತ್ತು 9 ಸಾವಿರ ರೂಪಾಯಿ ಮೌಲ್ಯದ ಮೋಚಿ ಲೆದರ್‌ ಬ್ಯಾಗ್‌ ಅನ್ನು ಉಡುಗೊರೆಯಾಗಿ ನೀಡಿರುವುದು ವಿವಾದ ಹುಟ್ಟುಹಾಕಿದೆ. ತಮ್ಮ ಸ್ವಂತ ಹಣದಿಂದ ಈ ಉಡುಗೊರೆ ಕೊಟ್ಟಿರುವುದಾಗಿ ಹೇಳಿರುವ ಶಿವಕುಮಾರ್‌ ಕಳೆದ ವರ್ಷವೂ ಸಂಸದರಿಗೆ ಸೆಲ್‌ಫೋನ್‌ ಉಡುಗೊರೆ ಕೊಟ್ಟಿದ್ದಾಗಿ ಹೇಳಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಬಗ್ಗೆ ಟ್ವೀಟ್‌ ಮಾಡಿ, “ಕುಮಾರಸ್ವಾಮಿ ಅವರೆ, ಕಾವೇರಿ ವಿಷಯವಾಗಿ ಚರ್ಚಿಸಲು ಎಲ್ಲಾ ಸಂಸದರನ್ನು ಮನವೊಲಿಸಿದ್ದಕ್ಕೆ ಧನ್ಯವಾದಗಳು. ಆದರ ಜತೆಗೆ ದುಬಾರಿ ಉಡುಗೊರೆ ಕಳಿಸಿರುವುದೇಕೆ?” ಎಂದು ಪ್ರಶ್ನಿಸಿದ್ದಾರೆ.

ಸಂಸತ್‌ನಲ್ಲಿ ಕಾವೇರಿ ವಿಷಯವಾಗಿ ರಾಜ್ಯದ ಪರ ಸಂಸದರು ಮಾತನಾಡಲು ಈ ದುಬಾರಿ ಉಡುಗೊರೆಗಳನ್ನು ಕೊಡಲಾಗಿದೆಯೇ ಎಂಬ ಪ್ರಶ್ನೆಯೂ ಈಗ ಮೂಡಿದೆ. ವಿವಾದ ದೊಡ್ಡದಾಗುವ ಮುನ್ನವೇ ಸಚಿವ ಡಿ.ಕೆ. ಶಿವಕುಮಾರ್‌ ಸರಕಾರದ ಹಣದಿಂದಲ್ಲ, ತನ್ನ ಸ್ವಂತ ಹಣದಿಂದ ಉಡುಗೊರೆ ಕೊಟ್ಟಿದ್ದಾಗಿ ಹೇಳಿದ್ದಾರೆ. ಹಾಗಾದರೆ ಸಂಸದರ ಕಾವೇರಿ ಚರ್ಚೆಗೆ ಈ ದುಬಾರಿ ಉಡುಗೊರೆ ಕೊಡಲಾಗಿದೆಯೇ? ಹಣ ಯಾರದ್ದೇ ಆಗಿರಲಿ ಗಂಭೀರ ವಿಷಯದ ಬಗ್ಗೆ ಸಂಸದರು ಚರ್ಚೆ ನಡೆಸಲು ಉಡುಗೊರೆ ಕೊಡುವುದು ಎಷ್ಟು ಸರಿ ಎಂಬುದು ಪ್ರಶ್ನಾರ್ಹ.

ಅಂದಹಾಗೆ ಸಂಸದರು ಐಫೋನ್ ಕೊಳ್ಳಲಾಗದಷ್ಟು ಅಸಹಾಯಕರೇನಲ್ಲ. ಹಾಗೆಯೇ ಬಹುತೇಕ ಸಂಸದರು ಈಗಾಗಲೇ ಐಫೋನ್‌ ಬಳಸುತ್ತಿದ್ದಾರೆ. ಡಿ.ಕೆ. ಶಿವಕುಮಾರ್‌ ನೀಡುವ ಉಡುಗೊರೆಯ ಐಫೋನ್‌ ಮೂಲಕ ಆಧುನಿಕ ತಂತ್ರಜ್ಞಾನ ತಿಳಿದುಕೊಳ್ಳಬೇಕಾದ ಸ್ಥಿತಿಯಲ್ಲೇನೂ ಸಂಸದರು ಇಲ್ಲ. ಅಲ್ಲದೆ, ಡಿ.ಕೆ. ಶಿವಕುಮಾರ್‌ ಯಾವ ಸಂಭ್ರಮಕ್ಕಾಗಿ ಈ ಉಡುಗೊರೆಗಳನ್ನು ಕೊಟ್ಟಿದ್ದಾರೆ ಎಂಬುದೂ ಸ್ಪಷ್ಟವಿಲ್ಲ.

ತಿಂಗಳಿಗೆ ಲಕ್ಷಾಂತರ ರೂಪಾಯಿ ಜನರ ತೆರಿಗೆ ಹಣವನ್ನು ಓಡಾಟ, ಕಚೇರಿ ವೆಚ್ಚಕ್ಕಾಗಿಯೇ ಬಳಸಿಕೊಳ್ಳುತ್ತಿರುವ ಸಂಸದರಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS) ಪ್ರತಿ ವರ್ಷಕ್ಕೆ 5 ಕೋಟಿ ರೂಪಾಯಿ ಮೀಸಲಿರುತ್ತದೆ. ಆದರೆ, ಬಹುತೇಕ ಸಂಸದರು ಈ ನಿಧಿಯನ್ನೂ ಪೂರ್ತಿಯಾಗಿ ಬಳಕೆ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮುಗಿಸುವ ಬದ್ಧತೆ ತೋರುತ್ತಿಲ್ಲ.

ಸಂಬಳ, ಕಚೇರಿ ವೆಚ್ಚ, ತಮ್ಮ ಸಹಾಯಕ ಸಿಬ್ಬಂದಿ ವೇತನ, ಪ್ರಯಾಣ ಭತ್ಯೆ, ದಿನ ಭತ್ಯೆಗಳೆಲ್ಲಾ ಸೇರಿ ಪ್ರತಿ ಸಂಸದರು ಪ್ರತಿ ತಿಂಗಳಿಗೆ ಖರ್ಚು ಮಾಡುವ ಸರಾಸರಿ ಹಣ 4 ಲಕ್ಷದಿಂದ 5 ಲಕ್ಷ ರೂಪಾಯಿ ಮೀರುತ್ತದೆ. ಹೀಗಿರುವಾಗ ಸಂಸದರಿಗೆ ದುಬಾರಿ ಉಡುಗೊರೆ ನೀಡಿ ಓಲೈಕೆ ಮಾಡುವ ಕೆಲಸಕ್ಕೆ ಡಿ.ಕೆ. ಶಿವಕುಮಾರ್ ಮುಂದಾಗಿದ್ದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ.

ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳುತ್ತಿರುವ ‘ವೆಚ್ಚಕ್ಕೆ ಕಡಿವಾಣ’ ಒಂದು ಕಡೆಯಾದರೆ, ಮತ್ತೊಂದು ಕಡೆ ವೇತನ ಬಾಕಿಗಾಗಿ ಪಾಲಿಕೆ ಎದುರು ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ. ವೇತನ ಸಿಗದ ಕಾರಣಕ್ಕೆ ಪೌರಕಾರ್ಮಿಕರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೂ ಇನ್ನೂ ಹಸಿಯಾಗಿದೆ. ರೈತರ ಸಾಲಮನ್ನಾದ ಹೊರೆಯನ್ನು ತಮ್ಮ ಮೇಲೆ ಹೇರಿದ ಬಗ್ಗೆ ರಾಜ್ಯದ ಮಧ್ಯಮ ವರ್ಗ ಸರಕಾರದ ಮೇಲೆ ಸಿಟ್ಟಾಗಿದೆ. ಇಂತಹ ಹೊತ್ತಿನಲ್ಲಿ ಡಿ.ಕೆ. ಶಿವಕುಮಾರ್‌ ಸಂಸದರಿಗೆ ದುಬಾರಿ ಉಡುಗೊರೆ ನೀಡುವ ಮೂಲಕ ಸದ್ಯದ ರಾಜಕಾರಣದ ಸ್ಥಿತಿ ಎಂಥದ್ದು ಎಂಬುದನ್ನು ತಾವೇ ಬಹಿರಂಗಗೊಳಿಸಿದ್ದಾರೆ.

ಈ ಹೊತ್ತಿನ ರಾಜಕೀಯ ವ್ಯವಸ್ಥೆ ನಾವು ಊಹಿಸಲು ಸಾಧ್ಯವಾಗದಷ್ಟು ದೂರಕ್ಕೆ ಹೋಗಿದೆ. ರಾಜಕೀಯದಲ್ಲಿ ಸರಳತೆ, ಸಜ್ಜನಿಕೆ ನಿರೀಕ್ಷೆಯನ್ನೂ ಮಾಡಬಾರದು ಎಂಬಂಥ ಸ್ಥಿತಿ ಇದೆ. ನನ್ನ ದುಡ್ಡು, ನನಗೆ ಬೇಕಾದವರಿಗೆ ಉಡುಗೊರೆ ಕೊಡುತ್ತೇನೆ ಎನ್ನುವವರನ್ನು ಯಾರೇನು ಮಾಡಲು ಸಾಧ್ಯ? ಇಂದಿನ ರಾಜಕೀಯದ ಬಗ್ಗೆ ಮಾತನಾಡುವುದೇ ವ್ಯರ್ಥ.
- ಕೃಷ್ಣ, ವಿಧಾನಸಭೆಯ ಮಾಜಿ ಸಭಾಪತಿ

ದುಬಾರಿ ಉಡುಗೊರೆಯ ಬಗ್ಗೆ ಬಿಜೆಪಿಯ ಕೆಲವು ಸಂಸದರು ವಿರೋಧಿಸಿರುವುದು ಬಿಟ್ಟರೆ ಬಹುತೇಕ ಸಂಸದರು ಈ ಬಗ್ಗೆ ಚಕಾರ ಎತ್ತಿಲ್ಲ. ಉಡುಗೊರೆಯ ಬಗ್ಗೆ ಹಲವು ಸಂಸದರು ಮೌನ ಮುರಿದಿಲ್ಲ. ಹಲವು ಸಂಸದರು ಪ್ರತಿಕ್ರಿಯೆಗೆ ಲಭ್ಯವಾಗಿಲ್ಲ. ಪ್ರತಿಕ್ರಿಯೆ ಕೊಟ್ಟಿರುವ ಬಿಜೆಪಿಯ ಕೆಲ ಸಂಸದರು ಡಿ.ಕೆ. ಶಿವಕುಮಾರ್‌ ನಡೆಯನ್ನು ವಿರೋಧಿಸಿದರೆ ಕಾಂಗ್ರೆಸ್‌ನ ಕೆಲ ಸಂಸದರು ಉಡುಗೊರೆಯ ಸಮರ್ಥನೆಗೆ ನಿಂತಿದ್ದಾರೆ.

ಸಂಸದರ ತಿಂಗಳ ಖರ್ಚಿನ ಲೆಕ್ಕ ನೋಡಿದರೆ ಇವರಿಗೆ ದುಬಾರಿ ಉಡುಗೊರೆ ಕೊಟ್ಟಿರುವುದು ಸರಿ ಎಂದು ಯಾರೂ ಒಪ್ಪಲು ಸಾಧ್ಯವಿಲ್ಲ. ಸಂಸದರ ಖರ್ಚು ವೆಚ್ಚ, ಅಭಿವೃದ್ಧಿ ನಿಧಿಯ ಲೆಕ್ಕಾಚಾರಗಳು, ಕಾರ್ಯಸಾಧನೆಯ ಪ್ರಮಾಣವನ್ನು ನೋಡಿದರೆ ದೇಶದಲ್ಲಿ ‘ಅಭಿವೃದ್ಧಿ’ ಎಂಬುದು ಆಗುತ್ತಿರುವುದು ಎಲ್ಲಿ ಎಂಬುದು ನಿಮಗೇ ಗೊತ್ತಾಗುತ್ತದೆ.

ಬಹುತೇಕ ಸಂಸದರು ಪ್ರಯಾಣ ಭತ್ಯೆ ಹಾಗೂ ದಿನ ಭತ್ಯೆಯ ಹೆಸರಿನಲ್ಲಿ ತಿಂಗಳಿಗೆ ಕನಿಷ್ಠ 1 ಲಕ್ಷದಿಂದ 4 ಲಕ್ಷ ರೂಪಾಯಿ ಪಡೆಯುತ್ತಿದ್ದಾರೆ. ಇದರ ಜತೆಗೆ ಸಂಬಳ, ಕಚೇರಿ ನಿರ್ವಹಣೆ ವೆಚ್ಚ ಹಾಗೂ ಆಪ್ತ ಸಹಾಯಕರ ವೇತನಗಳೆಲ್ಲಾ ಸೇರಿ ತಿಂಗಳಿಗೆ ಸರಿಸುಮಾರು 5 ಲಕ್ಷ ರೂಪಾಯಿ ಒಬ್ಬ ಸಂಸದರಿಗೆ ಖರ್ಚಾಗುತ್ತದೆ.

ಕೆಲವೇ ಕೆಲವು ಸಂಸದರು ರೈಲು ಪ್ರಯಾಣ ಮಾಡುವುದು ಬಿಟ್ಟರೆ ಬಹುತೇಕರ ಪ್ರಯಾಣ ವಿಮಾನದಲ್ಲೇ. ಸಂಸದರ ವಿಮಾನ ಭತ್ಯೆಯೇ ಕೋಟಿಗಳಷ್ಟಿದೆ. ರಾಜ್ಯದ ಒಟ್ಟು 40 ಸಂಸದರ ತಿಂಗಳ ಖರ್ಚೇ 2 ಕೋಟಿ ರೂಪಾಯಿ ದಾಟುತ್ತದೆ. ರಾಜ್ಯದಿಂದ ಆರಿಸಿ ಹೋದ ಒಟ್ಟು ಸಂಸದರ ಐದು ವರ್ಷದ ಖರ್ಚು ಅಂದಾಜು 120 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು!

ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!
ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!
ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!

16ನೇ ಲೋಕಸಭೆಯ ಸಂಸದರಿಗೆ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (MPLADS) ರಾಜ್ಯದ ಸಂಸದರಿಗೆ ಈವರೆಗೆ ಬಿಡುಗಡೆಯಾಗಿರುವ ಹಣ 417.50 ಕೋಟಿ ರೂಪಾಯಿ. ಇದರಲ್ಲಿ 89.67 ಕೋಟಿ ರೂಪಾಯಿ ಹಣ ಖರ್ಚಾಗದೇ ಉಳಿದಿದೆ.

16ನೇ ಲೋಕಸಭೆಯ ಅವಧಿ ಮುಗಿಯಲು ಇನ್ನು ಹತ್ತು ತಿಂಗಳಷ್ಟೇ ಬಾಕಿ ಇದೆ. ಈ ಹೊತ್ತಿನಲ್ಲಿ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ರಾಜ್ಯದ ಸಂಸದರ ಈವರೆಗಿನ ಒಟ್ಟು ಕಾರ್ಯಸಾಧನೆ ಶೇಕಡ 81.47.

ಬಿಡುಗಡೆಯಾದ ಹಣ ಹಾಗೂ ಜಾರಿಯಾದ ಕಾಮಗಾರಿಗಳ ಶೇಕಡಾವಾರು ಲೆಕ್ಕಾಚಾರ ನೋಡಿದರೆ ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ ಈ ನಿಧಿಯ ಶೇಕಡ 108.91 ಕಾರ್ಯಸಾಧನೆ ಮಾಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಶೇಕಡ 102.281, ಹಾವೇರಿ ಸಂಸದ ಶಿವಕುಮಾರ್ ಉದಾಸಿ ಶೇಕಡ 102.36 ಕಾರ್ಯಸಾಧನೆ ಮಾಡಿದ್ದಾರೆ. MPLADS ಅಡಿಯಲ್ಲಿ ಬಿಡುಗಡೆಯಾದ ಹಣದಲ್ಲಿ ಶೇಕಡ 100 ಗುರಿ ಮೀರಿದವರು ಈ ಮೂರು ಮಂದಿ ಸಂಸದರು ಮಾತ್ರ.

ಹಾಸನ ಸಂಸದ ಎಚ್.ಡಿ. ದೇವೇಗೌಡ ಶೇಕಡ 95.49ರಷ್ಟು ಕಾರ್ಯಸಾಧನೆ ಮಾಡಿದ್ದರೆ, ಉತ್ತರ ಕನ್ನಡದ ಸಂಸದ ಅನಂತ ಕುಮಾರ್ ಹೆಗಡೆ ಅವರ ಕಾರ್ಯಸಾಧನೆ ಶೇಕಡ 62.73ರಷ್ಟು. ಅನಂತ ಕುಮಾರ್‌ ಹೆಗಡೆ ಖರ್ಚು ಮಾಡದ ಹಣ 4.92 ಕೋಟಿ ರೂಪಾಯಿ.

MPLADS ಅಡಿಯಲ್ಲಿ ಹೆಚ್ಚು ಹಣ ಬಿಡುಗಡೆಯಾಗಿರುವುದು ಸಂಸದ ಧ್ರುವನಾರಾಯಣ ಅವರ ಕ್ಷೇತ್ರ ಚಾಮರಾಜನಗರ ಕ್ಷೇತ್ರಕ್ಕೆ. ಬಿಡುಗಡೆಯಾಗಿರುವ 20 ಕೋಟಿ ರೂಪಾಯಿ ಹಣದಲ್ಲಿ 17.56 ಕೋಟಿ ರೂಪಾಯಿಯ ಕೆಲಸ ನಡೆದಿದೆ.

16ನೇ ಲೋಕಸಭಾ ಅವಧಿಯಲ್ಲಿ MPLADS ಅಡಿ ಈವರೆಗೆ ಪೂರ್ಣಗೊಂಡಿರುವ ಒಟ್ಟು ಕೆಲಸಗಳು:

ಡಿಕೆಶಿ, ಐಫೋನ್ ಗಿಫ್ಟ್‌, ಕಾವೇರಿ ಮತ್ತು ಸಂಸದರ ‘ನಿಜವಾದ ಕಾರ್ಯಸಾಧನೆ’!

ಕೆಲವು ಸಂಸದರನ್ನು ಹೊರತುಪಡಿಸಿದರೆ ತಿಂಗಳಿಗೆ ಲಕ್ಷ ಲಕ್ಷ ಖರ್ಚು ತೋರಿಸುವ ಸಂಸದರ ಕಾರ್ಯಸಾಧನೆಗಳು ಹೇಳಿಕೊಳ್ಳುವಂತೇನೂ ಇಲ್ಲ. ತಮ್ಮ ಕ್ಷೇತ್ರಕ್ಕಾಗಿಯೇ ಮೀಸಲಿರುವ ಹಣವನ್ನೂ ಪೂರ್ತಿಯಾಗಿ ವಿನಿಯೋಗಿಸಿಕೊಳ್ಳುವಲ್ಲಿ ಬಹುತೇಕ ಸಂಸದರು ಹಿಂದೆ ಉಳಿದಿದ್ದಾರೆ. ಇಂತಹ ಸಂಸದರಿಗೆ ಉಡುಗೊರೆಯಾಗಿ ಡಿ.ಕೆ.ಶಿವಕುಮಾರ್‌ ಲಕ್ಷದ ದುಬಾರಿ ಉಡುಗೊರೆ ನೀಡಿರುವುದು ಯಾವ ಪುರುಷಾರ್ಥಕ್ಕೋ ಗೊತ್ತಿಲ್ಲ. ಆದರೆ, ಸಂಸತ್‌ನಲ್ಲಿ ಚರ್ಚೆ ನಡೆಸಲೂ ದುಬಾರಿ ಉಡುಗೊರೆ ಕೊಡುವ ಸಂಪ್ರದಾಯವೊಂದು ಅಧಿಕೃತವಾಗಿಯೇ ಜಾರಿಯಾಗುತ್ತಿರುವುದು ಸುಳ್ಳಲ್ಲ.

ರಾಜ್ಯದ ಸಂಸದರ ಪ್ರದೇಶಾಭಿವೃದ್ಧಿ ಯೋಜನೆಯ ಬಗ್ಗೆ ಇನ್ನೂ ಹೆಚ್ಚು ತಿಳಿಯುವ ಆಸಕ್ತಿ ಇದ್ದರೆ ಈ ಲಿಂಕ್‌ಗಳನ್ನು ಕ್ಲಿಕ್‌ ಮಾಡಿ:

https://www.mplads.gov.in/MPLADS/UploadedFiles/HTML/16ls/lsstat10.htm

https://www.mplads.gov.in/MPLADS/UploadedFiles/HTML/16ls/lsanst10.htm